Home Blog Page 13

ಭಾರತ್ ಜೋಡೋ ಯುವ ಸಂಘಕ್ಕೆ ಸರ್ಕಾರಿ ಹಣ ಬೇಡ: ಛಲವಾದಿ ನಾರಾಯಣಸ್ವಾಮಿ ಆಗ್ರಹ!

ಬೆಂಗಳೂರು: ಭಾರತ್ ಜೋಡೋ ಯುವ ಸಂಘಕ್ಕೆ ಸರ್ಕಾರದಿಂದ ಹಣ ನೀಡಬಾರದು ಎಂದು ಪರಿಷತ್ ವಿಪಕ್ಷ ನಾಯಕ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಬೊಕ್ಕಸದಿಂದ ಯಾವುದೇ ಅನುದಾನ ನೀಡಬಾರದು ಎಂದು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆಯ ಕುರಿತು ಕೂಡ ಟೀಕೆ ವ್ಯಕ್ತಪಡಿಸಿದ ಅವರು, ಇಲಾಖೆಯ ನೇಮಕಾತಿ ಮತ್ತು ನಿರ್ವಹಣೆ ವಿಚಾರದಲ್ಲಿಯೂ ಪ್ರಶ್ನೆಗಳನ್ನು ಎತ್ತಿದರು.

ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನವನ್ನು ಟೀಕಿಸಿದ ಅವರು, ಗೃಹಲಕ್ಷ್ಮೀ ಯೋಜನೆಯ ಬಾಕಿ ಪಾವತಿ, ಇಲಾಖೆಗಳ ಆಡಳಿತ ವೈಫಲ್ಯ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಅವರು, ಆಡಳಿತದಲ್ಲಿ ಸಮನ್ವಯ ಇಲ್ಲದೆ ಗೊಂದಲ ಉಂಟಾಗಿದೆ. ವಿವಿಧ ಇಲಾಖೆಗಳ ಬದಲಾವಣೆಗಳು ಹಾಗೂ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

2,800 ಎಕರೆ ಭೂಸ್ವಾಧೀನ ವಿರೋಧಿಸಿ ರೈತರ ಬೃಹತ್ ಬೈಕ್ ರ‍್ಯಾಲಿ! ಜಿಲ್ಲಾಧಿಕಾರಿಗಳ ಮನವೊಲಿಕೆ ಬಳಿಕ ಪ್ರೊಟೆಸ್ಟ್ ವಾಪಸ್!

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಸುಮಾರು 2,800 ಎಕರೆ ಜಮೀನನ್ನು ಕೆಐಎಡಿಬಿ ಭೂಸ್ವಾಧೀನ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿ ರೈತರು ಬೃಹತ್ ಬೈಕ್ ರ‍್ಯಾಲಿ ನಡೆಸಿದರು.

ಕಳೆದ 81 ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ರೈತರು ಇಂದು ಬೆಂಗಳೂರಿನ ವಿಧಾನಸೌಧದತ್ತ ಬೈಕ್ ರ‍್ಯಾಲಿ ಮೂಲಕ ಹೊರಟಿದ್ದರು. ಸಾವಿರಾರು ರೈತರು ಈ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಸಂಭಾವ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಚಿಕ್ಕಬಳ್ಳಾಪುರ ಪೊಲೀಸರು 500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದ್ದರು. ಆದರೆ ಅಣಕನೂರು ಬಳಿ ಬೈಕ್ ರ‍್ಯಾಲಿಯನ್ನು ಪೊಲೀಸರು ತಡೆದರು. ಇದರಿಂದ ರೈತರು ರಸ್ತೆ ಮಧ್ಯದಲ್ಲೇ ಕುಳಿತು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ ಪ್ರಭು ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದರು. ಬಳಿಕ ಎರಡು ವಾರಗಳೊಳಗೆ ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಈ ಭರವಸೆಯ ಬಳಿಕ ರೈತರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಮುಖ್ಯಮಂತ್ರಿ ಸೂಚನೆ ಬೆನ್ನಲ್ಲೇ ಸರ್ಕಾರಿ ನೌಕರರ ಹಾಜರಾತಿಗೆ ಹೊಸ ನಿಯಮ ಜಾರಿ!

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿದ್ದು, ಈ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈ ಆದೇಶವನ್ನು ಜಾರಿಗೆ ತಂದಿದ್ದಾರೆ. ಎಲ್ಲಾ ಸರ್ಕಾರಿ ನೌಕರರು ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಹಾಜರಾತಿ ದಾಖಲಿಸಲು ‘ಕರ್ತವ್ಯ ಆ್ಯಪ್’ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿಗೆ ಬಂದ ತಕ್ಷಣ ‘Check In’ ಮತ್ತು ಕೆಲಸ ಮುಗಿದ ಬಳಿಕ ‘Check Out’ ಮಾಡಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.

ಇ-ಆಡಳಿತ ಇಲಾಖೆಯು AI ತಂತ್ರಜ್ಞಾನ ಬಳಸಿ ಜಿಲ್ಲಾವಾರು ಹಾಗೂ ಇಲಾಖಾವಾರು ಹಾಜರಾತಿ ಮಾಹಿತಿಯನ್ನು ಪ್ರತಿದಿನ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸುವ ವ್ಯವಸ್ಥೆ ರೂಪಿಸಿದೆ. ಇಲಾಖಾ ಮುಖ್ಯಸ್ಥರು ತಮ್ಮ ಲಾಗಿನ್ ಮೂಲಕ ‘ಕರ್ತವ್ಯ ಡ್ಯಾಶ್‌ಬೋರ್ಡ್’ನಲ್ಲಿ ಹಾಜರಾತಿ ಪರಿಶೀಲನೆ ಮಾಡಬೇಕಾಗುತ್ತದೆ.

ಕಚೇರಿ ಕರ್ತವ್ಯದ ನಿಮಿತ್ತ ಹೊರಗೆ ತೆರಳುವ ಅಧಿಕಾರಿಗಳು ‘OOD’ ಆಯ್ಕೆಯನ್ನು ಬಳಸಿಕೊಂಡು ವಿವರಗಳನ್ನು ದಾಖಲಿಸಬೇಕು. ಇದನ್ನು ಸಂಬಂಧಿಸಿದ ಮೇಲಾಧಿಕಾರಿಗಳು ದೃಢೀಕರಿಸುವ ವ್ಯವಸ್ಥೆಯೂ ಇದೆ.

ಅಣ್ಣನ ಕಣ್ಮುಂದೆಯೇ ತಮ್ಮನ ಬಲಿ..! ಸಿಡಿಲು ಬಡಿದು 19 ವರ್ಷದ ಯುವಕ ದಾರುಣ ಸಾವು

ಗದಗ: ಜಿಲ್ಲೆಯ ಹಲವೆಡೆ ಶುಕ್ರವಾರ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೂರು ಗ್ರಾಮದಲ್ಲಿ ಸಿಡಿಲು ಬಡಿದು 19 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ.

ಮೃತ ಯುವಕನನ್ನು ಪ್ರಶಾಂತ್ ಹುಡೇದ ಎಂದು ಗುರುತಿಸಲಾಗಿದೆ.

ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಇಬ್ಬರು ಸಹೋದರರು ತೆರಳಿದ್ದ ವೇಳೆ ಏಕಾಏಕಿ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿದೆ. ಈ ವೇಳೆ ಸುಮಾರು 60 ಮೀಟರ್ ದೂರದಲ್ಲಿದ್ದ ತಮ್ಮ ಪ್ರಶಾಂತ್‌ಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಣ್ಣನ ಕಣ್ಮುಂದೆಯೇ ತಮ್ಮ ಮೃತಪಟ್ಟ ದೃಶ್ಯ ಕಂಡು ಆತ ಬೆಚ್ಚಿಬಿದ್ದಿದ್ದು, ಬಳಿಕ ತಮ್ಮನ ಶವವನ್ನು ಹೊತ್ತುಕೊಂಡೇ ಊರಿಗೆ ಕರೆತಂದ ಘಟನೆ ಗ್ರಾಮಸ್ಥರ ಮನಕಲಕುವಂತಿತ್ತು.

ಘಟನೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊಟ್ಟೆ ಗ್ಯಾಸ್ ಸಮಸ್ಯೆಗೆ ಆಹಾರ ಮಾತ್ರವಲ್ಲ, ಈ ಕೆಟ್ಟ ಅಭ್ಯಾಸಗಳೂ ಕಾರಣ!

ಇತ್ತೀಚಿನ ದಿನಗಳಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಸಾಮಾನ್ಯವಾಗುತ್ತಿದ್ದು, ಇದಕ್ಕೆ ಕೇವಲ ಆಹಾರ ಪದ್ಧತಿ ಮಾತ್ರವಲ್ಲದೆ ದೈನಂದಿನ ಜೀವನಶೈಲಿಯ ಕೆಲವು ಕೆಟ್ಟ ಅಭ್ಯಾಸಗಳೂ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಎರಡು ಊಟಗಳ ನಡುವೆ ಹೆಚ್ಚು ಅಂತರ ಇಡುವುದು ಹಾಗೂ ಆತುರಾತುರವಾಗಿ ಆಹಾರ ಸೇವಿಸುವುದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಗ್ಯಾಸ್, ಉಬ್ಬರ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಜಂಕ್ ಫುಡ್, ಮೈದಾ ಪದಾರ್ಥಗಳು, ಅತಿಯಾದ ಎಣ್ಣೆ ಮತ್ತು ಮಸಾಲೆಯುಕ್ತ ಆಹಾರಗಳ ಸೇವನೆಯೂ ಹೊಟ್ಟೆ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಕರುಳಿನಲ್ಲಿರುವ ಉತ್ತಮ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳ ಸಮತೋಲನ ಹದಗೆಡುವುದರಿಂದ ಜೀರ್ಣಕ್ರಿಯೆ ದುರ್ಬಲಗೊಂಡು ಗ್ಯಾಸ್ಟ್ರಿಕ್ ಸಮಸ್ಯೆಗಳು ಹೆಚ್ಚಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಪದೇಪದೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುವುದರ ಜೊತೆಗೆ ನಿರಂತರ ಹೊಟ್ಟೆನೋವು, ತೀವ್ರ ಹೊಟ್ಟೆ ಉಬ್ಬರ, ತೂಕ ಇಳಿಕೆಯಾಗುವುದು, ವಾಂತಿ ಅಥವಾ ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜೀರ್ಣಕ್ರಿಯೆ ಸುಧಾರಿಸಲು ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಆಹಾರವನ್ನು ಚೆನ್ನಾಗಿ ಜಗಿದು ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಹಾಗೂ ಹಣ್ಣು, ತರಕಾರಿ ಮತ್ತು ನಾರಿನಾಂಶಯುಕ್ತ ಆಹಾರಗಳನ್ನು ಸೇವಿಸುವುದು ಮುಖ್ಯವಾಗಿದೆ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಅನುಸರಿಸುವುದರಿಂದ ಗ್ಯಾಸ್ ಹಾಗೂ ಹೊಟ್ಟೆ ಉಬ್ಬರದ ಸಮಸ್ಯೆಯಿಂದ ದೂರವಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ; 8 ಕೆಜಿ ಫೈಬ್ರಾಯ್ಡ್ ಗಡ್ಡೆ ಯಶಸ್ವಿ ತೆರವು!

ಉಡುಪಿ: ಉಡುಪಿ ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ತಂಡ ಅಪರೂಪದ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ 44 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 8 ಕೆಜಿ ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಹೊರತೆಗೆದಿದೆ.

ಕಳೆದ ಒಂದು ವರ್ಷದಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ. ಬಳಿಕ ಉಡುಪಿ ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಸಮಗ್ರ ತಪಾಸಣೆ ನಡೆಸಿದ್ದಾರೆ.

ಪರಿಶೀಲನೆ ವೇಳೆ ಮಹಿಳೆಯ ಹೊಟ್ಟೆ ಗರ್ಭಿಣಿಯರ ಹೊಟ್ಟೆಯಂತೆ ಅಸಹಜವಾಗಿ ಉಬ್ಬಿಕೊಂಡಿರುವುದು ವೈದ್ಯರ ಗಮನಕ್ಕೆ ಬಂದಿದೆ. ತಕ್ಷಣ ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಿದಾಗ ಗರ್ಭಕೋಶದಲ್ಲಿ ಬೃಹತ್ ಗಾತ್ರದ ಫೈಬ್ರಾಯ್ಡ್ ಗಡ್ಡೆ ಇರುವುದು ಪತ್ತೆಯಾಗಿದೆ.

ಪ್ರಕರಣದ ಗಂಭೀರತೆಯನ್ನು ಅರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು, ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಕೈಗೊಳ್ಳಲಾಗಿದೆ. ಸ್ತ್ರೀರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ. ಕವಿತಾ ಹಾಗೂ ಡಾ. ಅಮೃತಾಂಶ್ ನೇತೃತ್ವದ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 8 ಕೆಜಿ ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಹೊರತೆಗೆದಿದೆ.

ಶಸ್ತ್ರಚಿಕಿತ್ಸೆಯಲ್ಲಿ ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ ಹಾಗೂ ಡಾ. ರಾಜಗೋಪಾಲ್ ಭಂಡಾರಿ ಸಹಕರಿಸಿದ್ದು, ಶುಶ್ರೂಷಾಧಿಕಾರಿ ರಕ್ಷಿತಾ ಮತ್ತು ಓಟಿ ಸಹಾಯಕಿ ಸಂಗೀತಾ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರ ಈ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಸರ್ಕಾರಿ ಆರೋಗ್ಯ ಸೇವೆಗಳ ಮೇಲಿನ ಜನರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಮುನಿಯಪ್ಪ ಸಿಟ್ಟಿಗೆ ಹೈಕಮಾಂಡ್ ಎಂಟ್ರಿ: ರಾಹುಲ್ ಭರವಸೆ ಬಳಿಕ ‘ಐ ಆ್ಯಮ್ ಹ್ಯಾಪಿ’ ಎಂದ ಸಚಿವ

ಬೆಂಗಳೂರು: ಸಚಿವರ ಖಾತೆ ಹಂಚಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಎದ್ದಿರುವ ನಡುವೆಯೇ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನ ಶಮನಗೊಳಿಸಲು ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿದ್ದಕ್ಕೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದ ಮುನಿಯಪ್ಪ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಅಸಮಾಧಾನವನ್ನು ವಿವರಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವರ ಖಾತೆ ಹಂಚಿಕೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈತಪ್ಪಿದ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವ ಬೆಳವಣಿಗೆಯ ಜೊತೆಗೆ ಮುನಿಯಪ್ಪ ಅವರ ಅಸಮಾಧಾನವೂ ಹೈಕಮಾಂಡ್ ಗಮನಕ್ಕೆ ಬಂದಿದೆ.

ಬಳಿಕ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾದ ಮುನಿಯಪ್ಪ, ಖಾತೆ ಹಂಚಿಕೆ ಕುರಿತ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ. ಈ ವೇಳೆ ಉಂಟಾಗಿರುವ ಗೊಂದಲವನ್ನು ಸರಿಪಡಿಸುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿಯಪ್ಪ, “ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ನಾನು ಸಂತೃಪ್ತನಾಗಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದರು. ಹೀಗಾಗಿ ರಾಜೀನಾಮೆ ಕುರಿತ ಚರ್ಚೆಗಳಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

ಇದಕ್ಕೂ ಮೊದಲು ಮಾತನಾಡಿದ್ದ ಮುನಿಯಪ್ಪ, ತಾವು ಎಂಟು ಬಾರಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ಹಿರಿಯ ನಾಯಕನಾಗಿದ್ದು, ಸೀನಿಯಾರಿಟಿ ಮತ್ತು ಅನುಭವಕ್ಕೆ ತಕ್ಕಂತೆ ಖಾತೆ ಹಂಚಿಕೆ ಆಗಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನೀಡುವಂತೆ ಮನವಿ ಮಾಡಿದ್ದರೂ ಅದನ್ನು ಪರಿಗಣಿಸಲಾಗಿಲ್ಲ ಎಂದು ಅವರು ಬೇಸರ ಹೊರಹಾಕಿದ್ದರು.

ಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ. ಪಕ್ಷದ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ಧರಾಗಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಿರಿಯರಿದ್ದಾರೆ ಮತ್ತು ಸಮರ್ಥರಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸಲಿದ್ದಾರೆ ಎಂದು ಹೇಳಿದರು.

ರಾಮಲಿಂಗಾರೆಡ್ಡಿ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಗಳಿಗೆ ಬೆಲೆ ಇರುತ್ತದೆ. ಪಕ್ಷದ ಹಿರಿಯರು ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು. ಬೆಳಗಾವಿ ರಾಜಕಾರಣ ನಿಮ್ಮ ಸಚಿವ ಸ್ಥಾನಕ್ಕೆ ಅಡ್ಡಿಯಾಗ್ತಿದೆಯಾ ಎಂಬ ಪ್ರಶ್ನೆಗೆ,

ಖಂಡಿತವಾಗಿಯೂ ಅಂತಹದ್ದೇನೂ ಇಲ್ಲ. 2023ರಲ್ಲಿಯೇ ಆ ಕುರಿತು ಎಲ್ಲ ತೀರ್ಮಾನ ಆಗಿದೆ. ಎಲ್ಲ ಸಮಾಧಾನದಿಂದ ಮುಂದೆ ಹೋಗ್ತಾ ಇದ್ದೇವೆ. ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು ಇನ್ನೂ ಎರಡು ಸಚಿವ ಸ್ಥಾನ ನೀಡಬೇಕೆಂದು ಬೇಡಿಕೆ ಇಟ್ಟಿದ್ದೇವೆ. ಬೆಳಗಾವಿ ಮೂರು ಜಿಲ್ಲೆಗಳಿಗೆ ಸಮನಾಗುವಷ್ಟು ದೊಡ್ಡದಿದೆ. ಹಾಗಾಗಿ ನಾವು ಹೆಚ್ಚುವರಿ ಸಚಿವ ಸ್ಥಾನ ಕೇಳಿದ್ದೇವೆ ಎಂದರು.‌

ಸರ್ಕಾರಿ ಕಚೇರಿಗಳಲ್ಲಿ AI ಆಧಾರಿತ ಹಾಜರಾತಿ ಕಡ್ಡಾಯ; ಬೆಳಗ್ಗೆ 10 ಗಂಟೆಯೊಳಗೆ ಹಾಜರಾಗಲು ಸರ್ಕಾರ ಆದೇಶ

ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಆಡಳಿತವನ್ನು ಮತ್ತಷ್ಟು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಗೆ ಪರ್ಯಾಯವಾಗಿ ಕೃತಕ ಬುದ್ಧಿಮತ್ತೆ (AI) ಹಾಗೂ ಜಿಪಿಎಸ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧಿಕೃತ ಆದೇಶ ಹೊರಡಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಜಾರಿಗೊಳಿಸಲಾಗಿದೆ.

ಆದೇಶದ ಪ್ರಕಾರ, ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಹಾಜರಾತಿ ದಾಖಲಿಸಲು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ‘ಕರ್ತವ್ಯ’ ಆ್ಯಪ್ ಅನ್ನು ಬಳಸುವುದು ಕಡ್ಡಾಯವಾಗಲಿದೆ.

ಜೂನ್ 4ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ನೌಕರರ ಸಮಯಪಾಲನೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಸ್ಪಷ್ಟ ಸೂಚನೆ ನೀಡಿದ್ದರು. ಅದರಂತೆ, ಈಗಾಗಲೇ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS)ಯಲ್ಲಿ ದಾಖಲಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿವರಗಳನ್ನು ‘ಕರ್ತವ್ಯ’ ಆ್ಯಪ್‌ಗೆ ಸಂಯೋಜಿಸಲಾಗಿದೆ.

ಆದರೆ, ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಆ್ಯಪ್ ಅನ್ನು ನಿಯಮಿತವಾಗಿ ಬಳಸುತ್ತಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಸರ್ಕಾರದ ಪ್ರಮುಖ ನಿರ್ದೇಶನಗಳು

  • ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10 ಗಂಟೆಗೆ ‘ಕರ್ತವ್ಯ’ ಆ್ಯಪ್‌ನಲ್ಲಿ Check-In ಮಾಡಬೇಕು.
  • ಕಚೇರಿಯಿಂದ ನಿರ್ಗಮಿಸುವ ವೇಳೆ ಕಡ್ಡಾಯವಾಗಿ Check-Out ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
  • ಇ-ಆಡಳಿತ ಇಲಾಖೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು AI ಆಧಾರಿತ ವ್ಯವಸ್ಥೆಯ ಮೂಲಕ ಸಂಬಂಧಿತ ಇಲಾಖೆಗಳ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸಲಿದೆ.
  • ಹಾಜರಾತಿ ಮೇಲ್ವಿಚಾರಣೆ ಹಾಗೂ ವರದಿ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ನಿರ್ವಹಿಸಲಾಗುತ್ತದೆ.

ಈಗಾಗಲೇ ಶಿಕ್ಷಣ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಆಧಾರಿತ ಆ್ಯಪ್ ಮೂಲಕ ಹಾಜರಾತಿ ನಿರ್ವಹಣೆ ಜಾರಿಯಲ್ಲಿದ್ದು, ಇದೀಗ ಇದೇ ವ್ಯವಸ್ಥೆಯನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೂ ವಿಸ್ತರಿಸಲಾಗಿದೆ.

ಸರ್ಕಾರದ ಈ ಹೊಸ ಕ್ರಮದಿಂದ ಸರ್ಕಾರಿ ಕಚೇರಿಗಳಲ್ಲಿ ಸಮಯಪಾಲನೆ, ಕಾರ್ಯಕ್ಷಮತೆ ಹಾಗೂ ಆಡಳಿತಾತ್ಮಕ ಪಾರದರ್ಶಕತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.

ಮುಳ್ಳಿನ ಹಾಸಿಗೆಯಲ್ಲಿ ಮಲಗಿರುವಂತಿದೆ ಡಿಕೆಶಿ ಪರಿಸ್ಥಿತಿ: ಸಿಎಂ ಆಡಳಿತದ ಬಗ್ಗೆ ಡಿ.ವಿ. ಸದಾನಂದ ಗೌಡ ವ್ಯಂಗ್ಯ

ದಕ್ಷಿಣ ಕನ್ನಡ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತದ ಆರಂಭಿಕ ಹಂತ ಸವಾಲುಗಳಿಂದ ಕೂಡಿದ್ದು, ಪ್ರಸ್ತುತ ಅವರು ಮುಳ್ಳಿನ ಹಾಸಿಗೆಯಲ್ಲಿ ಮಲಗಿರುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಪುತ್ತೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರ, ಗುಂಪುಗಾರಿಕೆ, ಅಭಿವೃದ್ಧಿ ಕುಂಠಿತ ಹಾಗೂ ವಿವಿಧ ರೀತಿಯ ರಾಜಕೀಯ ಸವಾಲುಗಳನ್ನು ಕಂಡಿದ್ದೇವೆ ಎಂದು ಹೇಳಿದರು.

“ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅವಧಿ ಸುಗಮವಾಗಿರುತ್ತದೆ ಎಂಬ ಭಾವನೆ ನನಗಿಲ್ಲ. ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವುದು ಸರ್ಕಾರದ ಒಳಗಿನ ಅಸಮಾಧಾನವನ್ನು ತೋರಿಸುತ್ತದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಮುಖ್ಯಮಂತ್ರಿ ಮುಳ್ಳಿನ ಹಾಸಿಗೆಯಲ್ಲಿ ಮಲಗಿರುವಂತಿದೆ. ತಮ್ಮ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲು ಅವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಸದಾನಂದ ಗೌಡ ಹೇಳಿದರು.

ಇದೇ ವೇಳೆ, ಒಕ್ಕಲಿಗ ಸಮುದಾಯದ ವ್ಯಕ್ತಿಯೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿರುವುದು ಹೆಮ್ಮೆಯ ವಿಷಯವಾದರೂ, ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಅವರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವುದು ಸುಲಭದ ಕೆಲಸವಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾವು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಸ್ಪರ್ಧೆಯ ರಾಜಕಾರಣದಲ್ಲಿಲ್ಲ. ರಾಜಕೀಯ ಜೀವನದ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಇದೆ. ರಾಜ್ಯಸಭೆ ಚುನಾವಣೆಯಲ್ಲಿ ನನ್ನ ಹೆಸರು ಚರ್ಚೆಗೆ ಬಂದಿರುವುದು ಸಂತೋಷದ ವಿಷಯ. ಆದರೆ ಯಾವುದೇ ರೀತಿಯ ಲಾಬಿ ಮಾಡುವ ಪ್ರಶ್ನೆಯೇ ಇಲ್ಲ. ಪಕ್ಷದ ರಾಷ್ಟ್ರೀಯ ನಾಯಕತ್ವ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಕುರಿತು ಅಂತಿಮ ನಿರ್ಧಾರವನ್ನು ಪಕ್ಷದ ಕೇಂದ್ರ ನಾಯಕತ್ವವೇ ಕೈಗೊಳ್ಳಲಿದೆ ಎಂದು ತಿಳಿಸಿದರು.

error: Content is protected !!