Home Blog Page 13

ನಗರಸಭೆಯ ಕಡತಗಳ ಜಾಲಾಡಿದ ಲೋಕಾಯುಕ್ತ

0

ವಿಜಯಸಾಕ್ಷಿ ಸುದ್ದಿ, ಗದಗ: ಲಂಚದ ಬೇಡಿಕೆ, ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯದ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರಸಭೆ ಕಚೇರಿ ಮೇಲೆ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ವಿವಿಧ ವಿಭಾಗಗಳ ದಾಖಲೆಗಳನ್ನು ಸುದೀರ್ಘವಾಗಿ ಪರಿಶೀಲಿಸಿದರು.

ಗದಗ ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐವರು ಸಿಪಿಐಗಳು ಸೇರಿದಂತೆ ಗದಗ ಮತ್ತು ಧಾರವಾಡ ಜಿಲ್ಲೆಗಳ 15ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಬೆಳಗ್ಗೆಯೇ ಏಳಕ್ಕೂ ಹೆಚ್ಚು ವಾಹನಗಳಲ್ಲಿ ನಗರಸಭೆ ಕಚೇರಿಗೆ ಆಗಮಿಸಿದ ಅಧಿಕಾರಿಗಳು ಏಕಕಾಲದಲ್ಲಿ ವಿವಿಧ ವಿಭಾಗಗಳಿಗೆ ತೆರಳಿ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದರು.

ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ವಿಲೇವಾರಿ, ಪ್ರಗತಿ ಹಾಗೂ ಅನುಮೋದನೆಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿದರು. ಸಂಜೆಯವರೆಗೂ ಮುಂದುವರಿದ ಕಾರ್ಯಾಚರಣೆಯಲ್ಲಿ ಹಲವು ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು, ವಿವಿಧ ವಿಭಾಗಗಳಲ್ಲಿ ಕಂಡುಬಂದಿರುವ ಲೋಪದೋಷಗಳ ಕುರಿತು ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳಿಂದ ದಾಖಲೆ ಹಾಗೂ ವಿವರಣೆ ಪಡೆದುಕೊಂಡರು.

ದಾಳಿಯ ಆರಂಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ಆಗಮಿಸಿದ್ದರಿಂದ ನಗರಸಭೆ ಕಚೇರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿ ಗೊಂದಲ ಉಂಟಾದರೂ, ಯಾವುದೇ ಆತಂಕ ಬೇಡ, ಅಗತ್ಯ ದಾಖಲೆಗಳನ್ನು ಮಾತ್ರ ಒದಗಿಸುವಂತೆ ಅಧಿಕಾರಿಗಳು ಸೂಚಿಸಿ ಪರಿಶೀಲನೆ ಮುಂದುವರಿಸಿದರು.

ಗದಗ-ಬೆಟಗೇರಿ ನಗರಸಭೆಯಲ್ಲಿ ಹಲವು ವರ್ಷಗಳಿಂದ ಭ್ರಷ್ಟಾಚಾರ, ಲಂಚದ ಬೇಡಿಕೆ ಹಾಗೂ ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳ ಕಾರ್ಯವೈಖರಿ ಕುರಿತು ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿರುವುದು ಮಹತ್ವ ಪಡೆದಿದೆ.

ದಿನವಿಡೀ ನಡೆದ ಲೋಕಾಯುಕ್ತ ಕಾರ್ಯಾಚರಣೆ ಅವಳಿ ನಗರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಪರಿಶೀಲನೆಯಲ್ಲಿ ಸಂಗ್ರಹಿಸಿದ ದಾಖಲೆಗಳ ಆಧಾರದ ಮೇಲೆ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರತ್ತ ಸಾರ್ವಜನಿಕರ ಚಿತ್ತ ನೆಟ್ಟಿದೆ.

ಲೋಕಾಯುಕ್ತ ಪರಿಶೀಲನೆ ನಡೆದ ವಿಭಾಗಗಳು

  • ಬೀದಿದೀಪ ನಿರ್ವಹಣೆ
  • ಕುಡಿಯುವ ನೀರು ಪೂರೈಕೆ
  • ಟ್ಯಾಂಕರ್ ಮೂಲಕ ನೀರು ವಿತರಣೆ
  • ಲೋಕೋಪಯೋಗಿ ವಿಭಾಗ
  • ತೆರಿಗೆ ವಿಭಾಗ
  • ಸಾರ್ವಜನಿಕ ಅರ್ಜಿಗಳ ವಿಲೇವಾರಿ
  • ಇತರೆ ಆಡಳಿತ ವಿಭಾಗಗಳ ದಾಖಲೆಗಳು

ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, 2025ನೇ ಸಾಲಿನ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ನೇತೃತ್ವದಲ್ಲಿ ತಿಮ್ಮಾಪುರ, ಹರ್ಲಾಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಲಾಶಯಗಳು, ಕೆರೆಗಳು ಹಾಗೂ ಕೊಳವೆಬಾವಿಗಳು ಬತ್ತಿವೆ. ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು, ರಾಜ್ಯ ಸರ್ಕಾರ ತಕ್ಷಣ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈರುಳ್ಳಿ, ಮೆಣಸಿನಕಾಯಿ, ಸೂರ್ಯಕಾಂತಿ, ಜೋಳ, ಹೆಸರು, ಕಡಲೆ ಹಾಗೂ ಗೋಧಿ ಬೆಳೆಗಳಿಗೆ ವಿಮೆ ಮಾಡಿಸಿರುವ ರೈತರಿಗೆ ಬೆಳೆ ನಷ್ಟವಾದರೂ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟ ವಿಮಾ ಕಂಪನಿಗಳ ಮೇಲೆ ಒತ್ತಡ ಹೇರಿ ಬಾಕಿ ವಿಮಾ ಹಣವನ್ನು ರೈತರ ಖಾತೆಗೆ ತಕ್ಷಣ ಜಮಾ ಮಾಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಅಲ್ಲದೆ ಎಸ್‌ಬಿಐ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದಿರುವ ಅಲ್ಪಾವಧಿ ಮತ್ತು ಮಧ್ಯಮಾವಧಿ ಬೆಳೆ ಸಾಲವನ್ನು 2018ರ ಮಾದರಿಯಲ್ಲಿ ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ ಮಾತನಾಡಿ, ತಿಮ್ಮಾಪುರ ಭಾಗದಲ್ಲಿ ಹೆಸರು, ಜೋಳ ಹಾಗೂ ಸೂರ್ಯಕಾಂತಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ತಕ್ಷಣ ಪರಿಹಾರ ನೀಡದಿದ್ದರೆ ರೈತರು ಬದುಕು ನಡೆಸುವುದು ಕಷ್ಟವಾಗಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಅಂದಪ್ಪ ಕೂಳೂರು, ಶರಣಪ್ಪ ಜೋಗಿನ, ಹನುಮಂತ ಭೀಮನೂರು, ಶೇಖಪ್ಪ ಘಂಟೆ, ಹನುಮಪ್ಪ ತಳವಾರ, ಶಿವಕುಮಾರ ಯತ್ನಟ್ಟಿ, ಶೇಖಪ್ಪ ಗಾಜಿ, ಕಪತ್ತಪ್ಪ ಸೋಂಪೂರ, ಬಸಪ್ಪ ಬನ್ನಿಮರದ, ಯಲ್ಲಪ್ಪ ಗಂಗರಾತ್ರಿ, ಮಾರುತಿ ಬಿಚಗಲ್ಲ, ಭೀಮಪ್ಪ ಆಲೂರು ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

“ಮಳೆ ಇಲ್ಲದೆ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ. ರೈತರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ವಿಮೆ ಹಣ ಬಿಡುಗಡೆ ಹಾಗೂ ಬೆಳೆ ಸಾಲ ಮನ್ನಾ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ.”

– ಯಲ್ಲಪ್ಪ ಎಚ್. ಬಾಬರಿ, ಜಿಲ್ಲಾ ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ಶಿರಹಟ್ಟಿಯಲ್ಲಿ ನಕಲಿ ವೈದ್ಯರಿಗೆ ಶಾಕ್

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗ್ರಾಮೀಣ ಪ್ರದೇಶದ ಅಮಾಯಕ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಪಾಸಣೆ ನಡೆಸಿ ನಕಲಿ ವೈದ್ಯರಿಗೆ ನೋಟಿಸ್ ನೀಡುವುದರ ಜೊತೆಗೆ ದಂಡ ವಿಧಿಸಲಾಗುತ್ತಿದೆ.

ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಷ ದೈಗೊಂಡ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಕುಸಲಾಪೂರ ಗ್ರಾಮಕ್ಕೆ ದಾಳಿ ನಡೆಸಿದ ವೇಳೆ, ನಕಲಿ ವೈದ್ಯ ಆಸ್ಪತ್ರೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಇದೇ ವೇಳೆ ಆದ್ರಳ್ಳಿ ಗ್ರಾಮದಲ್ಲಿ ನಡೆಸಿದ ತಪಾಸಣೆಯಲ್ಲಿ ಅಕ್ರಮವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಿ ₹50 ಸಾವಿರ ದಂಡ ವಿಧಿಸಲಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಕೆಲವರು ತಜ್ಞ ವೈದ್ಯರ ಬಳಿ ಸಹಾಯಕರಾಗಿ ಕೆಲಸ ಮಾಡಿ ಬಳಿಕ ತಾವೇ ವೈದ್ಯರೆಂದು ಬಿಂಬಿಸಿಕೊಂಡು ಗ್ರಾಮೀಣ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಅಗತ್ಯ ವೈದ್ಯಕೀಯ ಪರೀಕ್ಷೆಗಳಿಲ್ಲದೆ ಹೆಚ್ಚಿನ ಪ್ರಮಾಣದ ಔಷಧಿ ಹಾಗೂ ಇಂಜೆಕ್ಷನ್ ನೀಡುತ್ತಿರುವುದು ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನಕಲಿ ವೈದ್ಯರು, ಅಕ್ರಮ ಆಸ್ಪತ್ರೆಗಳು ಹಾಗೂ ನಕಲಿ ಪ್ರಯೋಗಾಲಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.

“ತಾಲೂಕಿನ ವಿವಿಧೆಡೆ ನಿರಂತರ ತಪಾಸಣೆ ನಡೆಸಲಾಗುತ್ತಿದೆ. ಖಚಿತ ಮಾಹಿತಿ ಮೇರೆಗೆ ಕುಸಲಾಪೂರಕ್ಕೆ ಭೇಟಿ ನೀಡಿದಾಗ ನಕಲಿ ವೈದ್ಯ ಆಸ್ಪತ್ರೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಆದ್ರಳ್ಳಿಯಲ್ಲಿ ದಾಳಿ ನಡೆಸಿ ₹50 ಸಾವಿರ ದಂಡ ವಿಧಿಸಲಾಗಿದೆ. ಇಂತಹ ಕಾರ್ಯಾಚರಣೆ ಮುಂದುವರಿಯಲಿದೆ.”

– ಡಾ. ಸುಭಾಷ ದೈಗೊಂಡ, ತಾಲೂಕು ಆರೋಗ್ಯಾಧಿಕಾರಿ

ಗಣತಿ ನಮೂನೆ ಕಡ್ಡಾಯವಾಗಿ ಬಿಎಲ್‌ಒಗೆ ಸಲ್ಲಿಸಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ಮನೆಮನೆಗೆ ವಿತರಿಸಲಾಗಿರುವ ಗಣತಿ ನಮೂನೆಗಳನ್ನು ಮತದಾರರು ನಿಗದಿತ ಅವಧಿಯೊಳಗೆ ಭರ್ತಿ ಮಾಡಿ ಸಂಬಂಧಿಸಿದ ಬಿಎಲ್‌ಒಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಇಲ್ಲದಿದ್ದರೆ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ 1,665 ಮತಗಟ್ಟೆಗಳಲ್ಲಿ ಎಸ್‌ಐಆರ್ ಕಾರ್ಯ ನಡೆಯುತ್ತಿದ್ದು, ಒಟ್ಟು 16,21,961 ಮತದಾರರ ಪೈಕಿ 15,19,544 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಶೇ.93.69ರಷ್ಟು ವಿತರಣೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಇದುವರೆಗೆ 3,33,765 ನಮೂನೆಗಳು ಗಣಕೀಕರಣಗೊಂಡಿದ್ದು, ಶೇ.20.58ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದೆ. ಉಳಿದ ನಮೂನೆಗಳನ್ನು ಮತದಾರರು ಶೀಘ್ರವೇ ಬಿಎಲ್‌ಒಗಳಿಗೆ ಹಿಂದಿರುಗಿಸಬೇಕು ಎಂದು ಮನವಿ ಮಾಡಿದರು.

ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಜುಲೈ 29ರವರೆಗೆ ಮನೆಮನೆಗೆ ಭೇಟಿ, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟ, ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆ ಸಲ್ಲಿಕೆ ಹಾಗೂ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಗೈರು ಹಾಜರಾತಿ, ಶಾಶ್ವತ ವಲಸೆ, ಮರಣ ಹಾಗೂ ದ್ವಿಪ್ರತಿ ಸೇರಿ 57,319 ಮತದಾರರನ್ನು ಗುರುತಿಸಲಾಗಿದ್ದು, ಈ ಕುರಿತು ರಾಜಕೀಯ ಪಕ್ಷಗಳಿಗೂ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಮತದಾರರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ 509 ಬಿಎಲ್‌ಒ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದ್ದು, ಗ್ರಾಮ ಪಂಚಾಯಿತಿ, ಗ್ರಾಮ ಒನ್, ನಾಡ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಮೂನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಬಿಎಲ್‌ಒಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ

ಪತ್ರಿಕಾಗೋಷ್ಠಿಯ ಬಳಿಕ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್., “ಬಿಎಲ್‌ಒಗಳು ಮನೆ ಮನೆಗೆ ತೆರಳಿ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಎಲ್ಲರೂ ಸಹಕರಿಸಬೇಕು.”

— ಸ್ನೇಹಲ್ ಆರ್., ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ

ಮಕ್ಕಳ ಜೀವದ ಜೊತೆ ಚೆಲ್ಲಾಟವೇ?

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಾರ್ಡ್ ನಂ. 1ರ ಕುಷ್ಟಗಿಚಾಳದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯದ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಪುಟಾಣಿ ಮಕ್ಕಳು ಪರದಾಡುವಂತಾಗಿದೆ.

ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ನೀರಿನ ಪೈಪ್ ಒಡೆದು ನೀರು ಕೆರೆಯಂತೆ ನಿಂತಿದ್ದು, ಮಕ್ಕಳು ಹಾಗೂ ಪಾಲಕರು ಅದೇ ನೀರಿನ ಮಧ್ಯೆ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಕಸದ ರಾಶಿ ಬಿದ್ದಿದ್ದು, ಅದರಲ್ಲಿ ನಾಯಿಗಳು ಹಾಗೂ ಹಂದಿಗಳು ಓಡಾಡುತ್ತಿರುವ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಕುಷ್ಟಗಿಚಾಳ, ಸ್ಲ್ಯಾಬ್ ಓಣಿ ಹಾಗೂ ಗಾಂಧಿನಗರ ಭಾಗದ ಸುಮಾರು 15 ರಿಂದ 20 ಮಕ್ಕಳು ಪ್ರತಿದಿನ ಈ ಅಂಗನವಾಡಿಗೆ ಬರುತ್ತಿದ್ದು, ಅಸ್ವಚ್ಛ ವಾತಾವರಣದಲ್ಲೇ ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರು ಹಲವು ಬಾರಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕಾಟಾಚಾರಕ್ಕೆ ಮಣ್ಣು ಹಾಕಿ ಕೈ ತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದು, ತಕ್ಷಣ ನೀರು ತೆರವುಗೊಳಿಸಿ, ಕಸ ವಿಲೇವಾರಿ ಮಾಡಿ, ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಆಗಸ್ಟ್ 6ರಿಂದ ಮುಂಗಾರು ಅಧಿವೇಶನ; ಸಿಎಂ ಡಿಕೆ ಶಿವಕುಮಾರ್ ಘೋಷಣೆ

ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನವನ್ನು ಆಗಸ್ಟ್ 6ರಿಂದ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕೃಷ್ಣಾದಲ್ಲಿ ಮಾತನಾಡಿದ ಅವರು, ದೆಹಲಿಗೆ ಒಂದು ದಿನದ ಭೇಟಿ ನೀಡಿದ ಬಳಿಕ ಕಾಂಗ್ರೆಸ್ ನಾಯಕರು ಚರ್ಚಿಸಿ ಮೂರ್ನಾಲ್ಕು ದಿನಗಳಲ್ಲಿ ಅಧಿವೇಶನದ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ತಿರುಪತಿ ದೇವಸ್ಥಾನದ ಮೊದಲ ಆರತಿ ವಿಚಾರವಾಗಿ ಮಾತನಾಡಿದ ಸಿಎಂ, ತಿರುಪತಿಯಲ್ಲಿ ಮಹಾರಾಜರ ಕಾಲದಿಂದಲೂ ಮೊದಲ ಆರತಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದೆ ಎಂದು ಹೇಳಿದರು.

ಪ್ರಸ್ತುತ ಪ್ರತಿದಿನ ಓರ್ವ ಅಧಿಕಾರಿಗೆ ಮೊದಲ ಆರತಿ ಪಡೆಯುವ ಅವಕಾಶವಿದ್ದು, ಅದರ ಬದಲಾಗಿ ಕರ್ನಾಟಕದಿಂದ ತಿರುಪತಿ ದರ್ಶನಕ್ಕೆ ತೆರಳುವ ಜನಪ್ರತಿನಿಧಿಗಳು, ನ್ಯಾಯಾಧೀಶರು, ಅಧಿಕಾರಿಗಳು, ಸಂಸದರು, ಮೇಯರ್‌ಗಳು ಹಾಗೂ ತಹಶೀಲ್ದಾರ್‌ಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಅವಕಾಶ ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಯಾವುದೇ ಪಕ್ಷದ ಜನಪ್ರತಿನಿಧಿಗಳಾದರೂ ಮಾರ್ಗಸೂಚಿಗಳ ಪ್ರಕಾರ ಅವಕಾಶ ಪಡೆಯಬಹುದು ಎಂದು ಸ್ಪಷ್ಟಪಡಿಸಿದರು.

ತಿರುಪತಿ ಆಡಳಿತ ಮಂಡಳಿಯ ನಿಯಮಗಳಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಮೊದಲ ಆರತಿ ಅವಕಾಶದ ವಿಚಾರದಲ್ಲಿ ಮಾತ್ರ ಕರ್ನಾಟಕದ ಪರವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ನಾಗರಿಕರ ದತ್ತಾಂಶ ಸುರಕ್ಷತೆಗೆ ರಾಜ್ಯ ಸರ್ಕಾರದ ಒತ್ತು

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಕರ್ನಾಟಕ ಸರ್ಕಾರದ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ ‘ರಾಜ್ಯದ ದತ್ತಾಂಶಕ್ಕಾಗಿ ಸೈಬರ್ ಭದ್ರತಾ ಚೌಕಟ್ಟನ್ನು ಬಲಪಡಿಸುವುದು’ ವಿಷಯದ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ಬೆಂಗಳೂರಿನಲ್ಲಿ ನಡೆಯಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಇ-ಆಡಳಿತ ಕೇಂದ್ರ (CeG), ಕರ್ನಾಟಕ ಸೈಬರ್ ಭದ್ರತಾ ಉತ್ಕೃಷ್ಟತಾ ಕೇಂದ್ರ (CySecK) ಹಾಗೂ ರಾಷ್ಟ್ರೀಯ ಇ-ಆಡಳಿತ ವಿಭಾಗದ ಸಹಯೋಗದಲ್ಲಿ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ 30ಕ್ಕೂ ಹೆಚ್ಚು ಇಲಾಖೆಗಳು, ನಿಗಮಗಳು, ಮಂಡಳಿಗಳು ಹಾಗೂ ಸರ್ಕಾರಿ ಸಂಸ್ಥೆಗಳ 80ಕ್ಕೂ ಅಧಿಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಾಗಾರವನ್ನು ಡಿಪಿಎಆರ್ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ (IAS), ಕರ್ನಾಟಕ ಇನ್ನೋವೇಶನ್ ಆಂಡ್ ಟೆಕ್ನಾಲಜಿ ಸೊಸೈಟಿ (KITS) ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ (IAS) ಸೇರಿದಂತೆ ಹಿರಿಯ ಅಧಿಕಾರಿಗಳು ಉದ್ಘಾಟಿಸಿದರು.

ಕಾರ್ಯಾಗಾರದಲ್ಲಿ ‘ಭವಿಷ್ಯಕ್ಕಾಗಿ ಸೈಬರ್ ಸನ್ನದ್ಧ ಕರ್ನಾಟಕ’ ಹಾಗೂ ‘ಇ-ಆಡಳಿತಕ್ಕಾಗಿ ಸೈಬರ್ ಸ್ಥಿತಿಸ್ಥಾಪಕತ್ವ’ ವಿಷಯಗಳ ಕುರಿತು ತಜ್ಞರು ಉಪನ್ಯಾಸ ನೀಡಿದರು. ನಾಗರಿಕರ ದತ್ತಾಂಶ ರಕ್ಷಣೆ, ಸರ್ಕಾರದ ಡಿಜಿಟಲ್ ಮೂಲಸೌಕರ್ಯ ಭದ್ರತೆ ಹಾಗೂ ಸೈಬರ್ ಸ್ಥಿತಿಸ್ಥಾಪಕತ್ವ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು.

ರಾಜ್ಯ ದತ್ತಾಂಶ ಕೇಂದ್ರದ ಸೈಬರ್ ಭದ್ರತೆ, ಕೆಎಸ್‌ವಾನ್ (KSWAN) ಭದ್ರತೆ, ಸೆಕ್ಯುರಿಟಿ ಆಪರೇಷನ್ಸ್ ಸೆಂಟರ್ (SOC), ರಾಜ್ಯ CSIRT, Zero Trust ತತ್ವ, ದತ್ತಾಂಶ ವರ್ಗೀಕರಣ, ಡಿಪಿಡಿಪಿ (DPDP) ಸನ್ನದ್ಧತೆ ಹಾಗೂ ಸೈಬರ್ ಭದ್ರತಾ ಸಾಮರ್ಥ್ಯ ವೃದ್ಧಿ ಸೇರಿದಂತೆ ಆರು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು.

ಕಾರ್ಯಾಗಾರದ ಅಂತ್ಯದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಸೈಬರ್ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ‘ಜಂಟಿ ಕ್ರಿಯಾ ಯೋಜನೆ’ (Joint Action Plan) ಸಿದ್ಧಪಡಿಸಲಾಯಿತು. ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಸನ್ನದ್ಧವಾದ ಡಿಜಿಟಲ್ ಆಡಳಿತ ವ್ಯವಸ್ಥೆ ನಿರ್ಮಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

ಗುತ್ತಿಗೆದಾರರ ಹಿಡಿತದಿಂದ ಉದ್ಯಾನವನಕ್ಕೆ ಮುಕ್ತಿ ನೀಡಿ!

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 11ರ ವಿವೇಕಾನಂದ ನಗರದ ಶ್ರೀ ಶಾರದಾ ಮಾತೆ ಹಾಗೂ ಶ್ರೀ ರಾಮಕೃಷ್ಣ ಪರಮಹಂಸ ಉದ್ಯಾನವನ ಹಲವು ವರ್ಷಗಳಿಂದ ಗುತ್ತಿಗೆದಾರರ ಸಾಮಗ್ರಿಗಳ ಸಂಗ್ರಹ ಕೇಂದ್ರವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಬಳಕೆಗೆ ಉದ್ಯಾನವನ್ನು ಮುಕ್ತಗೊಳಿಸಿ ಅಭಿವೃದ್ಧಿಪಡಿಸುವಂತೆ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ (ರಿ) ವತಿಯಿಂದ ಜಿಲ್ಲಾಧಿಕಾರಿ, ನಗರಸಭೆಯ ಆಡಳಿತಾಧಿಕಾರಿ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಸಮಿತಿಯ ಪದಾಧಿಕಾರಿಗಳು ಮಾತನಾಡಿ, ಸುಮಾರು ಎರಡು ವರ್ಷಗಳ ಹಿಂದೆ ₹10 ಲಕ್ಷ ವೆಚ್ಚದಲ್ಲಿ ಉದ್ಯಾನದಲ್ಲಿ ವಾಕಿಂಗ್ ಪಾಥ್ ನಿರ್ಮಿಸಲಾಗಿದ್ದರೂ, 24×7 ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಗುತ್ತಿಗೆದಾರರು ಕಾಮಗಾರಿ ಸಾಮಗ್ರಿಗಳನ್ನು ಉದ್ಯಾನದಲ್ಲೇ ಸಂಗ್ರಹಿಸಿರುವ ಕಾರಣ ಸಾರ್ವಜನಿಕರಿಗೆ ಅದರ ಉಪಯೋಗವೇ ಇಲ್ಲದಂತಾಗಿದೆ ಎಂದು ದೂರಿದರು.

ಇದರ ಜೊತೆಗೆ ಉದ್ಯಾನದಲ್ಲಿ ಗಿಡಗಂಟಿಗಳು ಬೆಳೆದು ನಿರ್ವಹಣೆ ಇಲ್ಲದೆ ವಾಕಿಂಗ್ ಪಾಥ್ ಹಾಳಾಗುತ್ತಿದ್ದು, ಹಲವು ಬಾರಿ ಮೌಖಿಕ ಹಾಗೂ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಉದ್ಯಾನ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹60 ಲಕ್ಷ ಅನುದಾನವೂ ಮೀಸಲಾಗಿದ್ದು, ಮೊದಲು ಉದ್ಯಾನದಲ್ಲಿರುವ ಗುತ್ತಿಗೆದಾರರ ಸಾಮಗ್ರಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ನಂತರ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಾರ್ಡ್ ಸಂಖ್ಯೆ 11ರ ನಾಗರಿಕರ ಪರವಾಗಿ ಸಮಿತಿಯ ಅಧ್ಯಕ್ಷ ಎ.ಟಿ. ನರೇಗಲ್ಲ ಸೇರಿದಂತೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಹಣವಿಲ್ಲದೆ ಹೈರಾಣಾದ ಗ್ರಾಮ ಪಂಚಾಯಿತಿಗಳು

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮುಂಡರಗಿ ತಾಲೂಕಿನ ಗ್ರಾಮ ಪಂಚಾಯಿತಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗದ ಕಾರಣ ಕುಡಿಯುವ ನೀರು, ಬೀದಿದೀಪ, ರಸ್ತೆ ದುರಸ್ತಿ, ಸ್ವಚ್ಛತೆ ಸೇರಿದಂತೆ ಮೂಲಭೂತ ಸೇವೆಗಳ ನಿರ್ವಹಣೆಯೇ ದುಸ್ತರವಾಗಿದೆ.

2025-26 ಹಾಗೂ 2026-27ನೇ ಸಾಲಿನ ಅನುದಾನ ಇನ್ನೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಪಂಚಾಯಿತಿಗಳು ತೆರಿಗೆ ಸಂಗ್ರಹದ ಹಣದಲ್ಲೇ ಆಡಳಿತ ನಡೆಸುತ್ತಿವೆ. ಒಂದು ವರ್ಷದಿಂದ ಖರೀದಿಸಿದ ಸಾಮಗ್ರಿಗಳ ಬಿಲ್ ಪಾವತಿಸಲು ಸಾಧ್ಯವಾಗದೆ, ಗುತ್ತಿಗೆದಾರರು ಮತ್ತು ಪೂರೈಕೆದಾರರಿಂದ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದೆ.

ಇದರ ಜೊತೆಗೆ ಇ-ಸ್ವತ್ತು ತಂತ್ರಾಂಶದ ನಿರಂತರ ತಾಂತ್ರಿಕ ದೋಷ, ಸಿಬ್ಬಂದಿ ಕೊರತೆ ಹಾಗೂ ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡದಿಂದ ಪಂಚಾಯಿತಿ ಆಡಳಿತ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘವು ತಕ್ಷಣ ಅನುದಾನ ಬಿಡುಗಡೆ, ಖಾಲಿ ಹುದ್ದೆಗಳ ಭರ್ತಿ, ತಾಂತ್ರಿಕ ಸಮಸ್ಯೆಗಳ ನಿವಾರಣೆ ಹಾಗೂ ಸಾರ್ವಜನಿಕ ಸೇವೆ ಸುಗಮಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

“15ನೇ ಹಣಕಾಸು ಆಯೋಗದ ಅನುದಾನ ಬಂದಿಲ್ಲ. ತೆರಿಗೆ ಸಂಗ್ರಹದ ಹಣದಲ್ಲೇ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಸಿಬ್ಬಂದಿ ವೇತನ ನಿರ್ವಹಿಸುತ್ತಿದ್ದೇವೆ. ಅನುದಾನ ಬಿಡುಗಡೆಯಾಗದಿದ್ದರೆ ಗ್ರಾಮಗಳ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಲಿದೆ.”

– ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುಂಡರಗಿ ತಾಲೂಕು

ಶಿಥಿಲ ಸೇದು ಬಾವಿಗೆ ಹೊಸ ಜೀವ: ಗಂಗಾಮಾತೆ ಪೂಜೆಯೊಂದಿಗೆ ಸಂಭ್ರಮಿಸಿದ ಜನತೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜನಸಹಭಾಗಿತ್ವದಿಂದ ಅಸಾಧ್ಯವೂ ಸಾಧ್ಯ ಎಂಬುದನ್ನು ಲಕ್ಷ್ಮೇಶ್ವರ ಪಟ್ಟಣದ 3ನೇ ವಾರ್ಡಿನ ಬೇವಿನಮರದ ಓಣಿಯ ನಿವಾಸಿಗಳು ಸಾಬೀತುಪಡಿಸಿದ್ದಾರೆ. ಹಲವು ವರ್ಷಗಳಿಂದ ಶಿಥಿಲಗೊಂಡಿದ್ದ ಸಾಂಪ್ರದಾಯಿಕ ಸೇದು ಬಾವಿಯನ್ನು ಸ್ಥಳೀಯರು ಶ್ರಮದಾನ ಹಾಗೂ ಸ್ವಂತ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಬಾವಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಕುಸಿದಿದ್ದ ಗೋಡೆ ದುರಸ್ತಿ, ಸುರಕ್ಷತಾ ಕಟ್ಟೆ ನಿರ್ಮಾಣ ಹಾಗೂ ಕಬ್ಬಿಣದ ಗೇಟ್ ಅಳವಡಿಸುವ ಮೂಲಕ ಮತ್ತೆ ಸಾರ್ವಜನಿಕ ಬಳಕೆಗೆ ಸಜ್ಜುಗೊಳಿಸಲಾಗಿದೆ.

ಜೀರ್ಣೋದ್ಧಾರ ಪೂರ್ಣಗೊಂಡ ಬಳಿಕ ಓಣಿಯ ಮಹಿಳೆಯರು ಗಂಗಾಮಾತೆಗೆ ಉಡಿ ತುಂಬಿ ವಿಶೇಷ ಪೂಜೆ ಸಲ್ಲಿಸಿ ಬಾವಿಯ ಪುನರುಜ್ಜೀವನವನ್ನು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಗಣಪತಿ ಬೇವಿನಮರದ, ಹೊನ್ನಪ್ಪ ವಡ್ಡರ, ಶಂಕರ ಬ್ಯಾಡಗಿ, ನಾಗರಾಜ ಕೊಂಗಿ, ಮಂಜುನಾಥ ಬೇವಿನಮರದ, ಗಣೇಶ ನೂಲ್ವಿ, ಮುರಘೇಂದ್ರಸ್ವಾಮಿ ಹಿರೇಮಠ, ಶಿವಣ್ಣ ಪಾಣಿಗಟ್ಟಿ ಸೇರಿದಂತೆ ಸ್ಥಳೀಯ ನಾಗರಿಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

“ಸಾಂಪ್ರದಾಯಿಕ ಜಲಮೂಲಗಳ ಸಂರಕ್ಷಣೆ ಇಂದಿನ ಅಗತ್ಯ. ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ನಾಗರಿಕರೇ ಒಗ್ಗಟ್ಟಿನಿಂದ ಮಾಡಿ ಮಾದರಿಯಾಗಿದ್ದಾರೆ.”

– ಮಂಜುನಾಥ ಮಾಗಡಿ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ