Home Blog Page 14

ಹಸಿರು ಗದಗಕ್ಕೆ ರೋಟರಿಯ ಮಹಾಸಂಕಲ್ಪ!

0

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಸಂರಕ್ಷಣೆ ಸರ್ಕಾರದ ಹೊಣೆ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿಯೂ ಆಗಿದೆ ಎಂಬ ಸಂದೇಶದೊಂದಿಗೆ ರೋಟರಿ ಜಿಲ್ಲಾ 3170 ವತಿಯಿಂದ ಗದಗ ಜಿಲ್ಲೆಯಾದ್ಯಂತ ಬೃಹತ್ ವೃಕ್ಷಾರೋಪಣ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಜುಲೈ 12ರಿಂದ 19ರವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯಲಿರುವ ಈ ಹಸಿರು ಅಭಿಯಾನಕ್ಕೆ ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಐಕೇರ್ ಸೆಂಟರ್ ಆವರಣದಲ್ಲಿ ಸಸಿ ನೆಟ್ಟು, ನೀರೆರೆಯುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಮಾತನಾಡಿ, ಹವಾಮಾನ ವೈಪರೀತ್ಯ, ಅರಣ್ಯ ನಾಶ ಹಾಗೂ ಪರಿಸರ ಅಸಮತೋಲನದಂತಹ ಸವಾಲುಗಳನ್ನು ಎದುರಿಸಲು ವೃಕ್ಷಾರೋಪಣವೇ ಪರಿಣಾಮಕಾರಿ ಮಾರ್ಗವಾಗಿದೆ ಎಂದರು.

ರೋಟರಿ ಕೇವಲ ಸಸಿ ನೆಡುವ ಕಾರ್ಯಕ್ರಮಕ್ಕೆ ಸೀಮಿತವಾಗದೇ, ನೆಟ್ಟ ಗಿಡಗಳ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಿದೆ. ನಿಯಮಿತ ನೀರುಣಿಕೆ, ಬೇಲಿ ಅಳವಡಿಕೆ ಹಾಗೂ ನಿರಂತರ ಮೇಲ್ವಿಚಾರಣೆಯ ಮೂಲಕ ಗಿಡಗಳನ್ನು ಮರಗಳಾಗಿ ಬೆಳೆಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ನಡೆಯಲಿರುವ ಅಭಿಯಾನದಲ್ಲಿ ರೋಟರಾಕ್ಟ್, ಇಂಟರಾಕ್ಟ್ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಪರಿಸರ ಪ್ರೇಮಿಗಳು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ. ಧನೇಶ ದೇಸಾಯಿ, ಡಾ. ರಾಜಶೇಖರ ಬಳ್ಳಾರಿ, ಸುರೇಶ ಕುಂಬಾರ ಹಾಗೂ ಮಂಜುಳಾ ಅಕ್ಕಿ ಮಾತನಾಡಿ, ಪರಿಸರ ಉಳಿಸುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯಾಧಿಕಾರಿ ಎನ್. ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೋಟರಿ ಕೈಗೊಂಡಿರುವ ವೃಕ್ಷಾರೋಪಣ ಅಭಿಯಾನಕ್ಕೆ ಸಮಾಜದ ಎಲ್ಲ ವರ್ಗದವರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಂತೋಷ ಅಕ್ಕಿ ಅತಿಥಿಗಳನ್ನು ಪರಿಚಯಿಸಿದರು. ಬಾಲಕೃಷ್ಣ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ಕಾರ್ಯದರ್ಶಿ ಅಕ್ಷಯ್ ಶೆಟ್ಟಿ ವಂದಿಸಿದರು. ರೋಟರಿ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

“ಗಿಡ ನೆಡುವುದಷ್ಟೇ ಸಾಕಾಗುವುದಿಲ್ಲ. ಅದು ಮರವಾಗಿ ಬೆಳೆಯುವವರೆಗೆ ಅದರ ಸಂರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿಯನ್ನೂ ನಾವು ವಹಿಸಿಕೊಳ್ಳಬೇಕು.”

– ಡಾ. ಪ್ರದೀಪ ಉಗಲಾಟ

ಹಸಿರು ಅಭಿಯಾನದ ಪ್ರಮುಖ ಅಂಶಗಳು

  • ಜುಲೈ 12ರಿಂದ 19ರವರೆಗೆ ಜಿಲ್ಲೆಯಾದ್ಯಂತ ವೃಕ್ಷಾರೋಪಣ
  • ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿ ನೆಟ್ಟು ಪೋಷಿಸಲು ಕರೆ
  • ಗದಗ ಜಿಲ್ಲಾ ಕ್ರೀಡಾಂಗಣ ಎದುರಿನ ಇಂದಿರಾ ರೋಟರಿ ಕ್ಲಬ್‌ನಲ್ಲಿ ‘ಒಬ್ಬರಿಗೊಂದು ಸಸಿ’ ಉಚಿತ ವಿತರಣೆ
  • ನೆಟ್ಟ ಗಿಡಗಳ ಸಂರಕ್ಷಣೆಗೆ ರೋಟರಿಯಿಂದ ನಿರಂತರ ಮೇಲ್ವಿಚಾರಣೆ

ಆದಿ ಶಂಕರಾಚಾರ್ಯರ ಕುರಿತು ವಿವಾದಾತ್ಮಕ ಹೇಳಿಕೆ? ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮವೊಂದರ ವೇಳೆ ಶ್ರೀ ಆದಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆಚಾರ್ಯ ಮಧ್ವರ ಕುರಿತ ಕಥೆ ಹೇಳುವ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವತಿಯರು ಶಂಕರಾಚಾರ್ಯರನ್ನು ಏಕವಚನದಲ್ಲಿ ಉಲ್ಲೇಖಿಸಿದ್ದಾರೆ ಹಾಗೂ ಕೆಲವು ವಿಚಾರಗಳನ್ನು ಆಧಾರರಹಿತವಾಗಿ ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಂಕರಾಚಾರ್ಯರ ಅನುಯಾಯಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬೆಳಗಾವಿಯಿಂದ ಬಂದಿದ್ದ ತಂಡವೊಂದು ಈ ಧಾರ್ಮಿಕ ಕಾರ್ಯಕ್ರಮ ನಡೆಸಿತ್ತು ಎಂದು ಹೇಳಲಾಗುತ್ತಿದೆ.

ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಕೆಲವರು, ಶಂಕರಾಚಾರ್ಯರ ಬಗ್ಗೆ ಮಾತನಾಡುವ ಮುನ್ನ ಅವರ ಜೀವನ ಮತ್ತು ತತ್ವಗಳನ್ನು ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಹೇಳಿಕೆ ನೀಡಿದವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಕಾನೂನು ಕ್ರಮದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಘಟನೆ ಕುರಿತು ಸಂಬಂಧಪಟ್ಟವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

Heart Attack Warning Signs: ಈ ಸಣ್ಣ ಲಕ್ಷಣಗಳು ದೊಡ್ಡ ಅಪಾಯದ ಸೂಚನೆಯಾಗಬಹುದು!

0

ಬದಲಾಗುತ್ತಿರುವ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳಿಂದ ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಅಪಾಯ ಹೆಚ್ಚುತ್ತಿದೆ.

ಆದರೆ ಹೃದಯಾಘಾತದ ಆರಂಭಿಕ ಲಕ್ಷಣಗಳನ್ನು ಹಲವರು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ನಿರ್ಲಕ್ಷಿಸುತ್ತಿರುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಹೃದಯಾಘಾತ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯ ನಡುವೆ ವ್ಯತ್ಯಾಸವಿದ್ದು, ಲಕ್ಷಣಗಳನ್ನು ಸರಿಯಾಗಿ ಗುರುತಿಸುವುದು ಅಗತ್ಯವಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿ ಆಹಾರ ಸೇವನೆಗೆ ಸಂಬಂಧಿಸಿದ್ದಾಗಿರುತ್ತದೆ. ಊಟದ ಬಳಿಕ ಅಥವಾ ದೀರ್ಘಕಾಲ ಆಹಾರ ಸೇವಿಸದಿದ್ದಾಗ ಹೊಟ್ಟೆ ಉಬ್ಬರ, ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.

ಆದರೆ ಹೃದಯಾಘಾತದ ಸಂದರ್ಭದಲ್ಲಿ ಎದೆ ನೋವು ಅಥವಾ ಅಸ್ವಸ್ಥತೆಯ ಜೊತೆಗೆ ತೀವ್ರ ಆಯಾಸ, ಅತಿಯಾದ ಬೆವರು, ಹೃದಯ ಬಡಿತ ಹೆಚ್ಚಳ, ವಾಂತಿ, ಕೈಗಳಲ್ಲಿ ನೋವು ಅಥವಾ ಸೆಳೆತದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇನ್ನು ನಿದ್ರೆಯಲ್ಲಿ ಹಠಾತ್ತನೆ ಎಚ್ಚರಗೊಳ್ಳುವುದು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದನ್ನು ನಿರ್ಲಕ್ಷಿಸಬಾರದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವ ಸಮಸ್ಯೆ ಅಥವಾ ನಿದ್ರೆಯ ಸಮಯದ ಉಸಿರಾಟದ ತೊಂದರೆಯಂತಹ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು.

ಶೌಚಾಲಯದಲ್ಲಿ ಮಲವಿಸರ್ಜನೆ ಮಾಡುವಾಗ ಅತಿಯಾಗಿ ಒತ್ತಡ ಹಾಕುವುದರಿಂದ ಹೃದಯದ ಮೇಲೆ ಒತ್ತಡ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಮಲಬದ್ಧತೆ ಸಮಸ್ಯೆ ಇರುವವರು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮಲಬದ್ಧತೆ ತಡೆಯಲು ಹೆಚ್ಚಿನ ನಾರಿನಾಂಶ ಇರುವ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು ಹಾಗೂ ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮವಾಗಿದೆ.

ಹೃದಯಾಘಾತದ ಯಾವುದೇ ಲಕ್ಷಣಗಳು ಕಂಡುಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ವೈದ್ಯರು ತಿಳಿಸಿದ್ದಾರೆ.

ದಶಕಗಳ ಬಳಿಕ ಕಾಲೇಜು ಚುನಾವಣೆ ನಿರೀಕ್ಷೆ; ಶೈಕ್ಷಣಿಕ ವರ್ಷ ಆರಂಭವಾದರೂ ಎಲೆಕ್ಷನ್ ಇಲ್ಲ!

ಬೆಂಗಳೂರು: ರಾಜ್ಯದಲ್ಲಿ ದಶಕಗಳಿಂದ ಸ್ಥಗಿತಗೊಂಡಿರುವ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಮರು ಆರಂಭಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

2026-27ನೇ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿತ್ತು ಎನ್ನಲಾಗಿದ್ದರೂ, ಶೈಕ್ಷಣಿಕ ವರ್ಷ ಆರಂಭವಾದ ಬಳಿಕವೂ ಈ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟವಾಗಿಲ್ಲ.

ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಈಗಾಗಲೇ ಸಮಿತಿ ರಚಿಸಿ ವರದಿ ಪಡೆದಿದೆ. ಚುನಾವಣೆ ನಡೆಸಬೇಕೇ ಅಥವಾ ಬೇಡವೇ ಎಂಬ ಕುರಿತು ಶಿಕ್ಷಣ ತಜ್ಞರು, ಸಾರ್ವಜನಿಕರು ಹಾಗೂ ಪೋಷಕರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ವಿದ್ಯಾರ್ಥಿ ಸಂಘದ ಚುನಾವಣೆ ಮರು ಆರಂಭವಾಗಲಿದೆ ಎಂಬ ನಿರೀಕ್ಷೆ ವಿದ್ಯಾರ್ಥಿ ವಲಯದಲ್ಲಿತ್ತು. ಆದರೆ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಆರಂಭವಾಗಿದ್ದರೂ ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಇದರಿಂದ ವಿದ್ಯಾರ್ಥಿ ಸಂಘಟನೆಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ.

ವಿದ್ಯಾರ್ಥಿ ಸಂಘದ ಚುನಾವಣೆ ಮೂಲಕ ಕಾಲೇಜು ಹಂತದಲ್ಲಿಯೇ ನಾಯಕತ್ವ ಗುಣ ಬೆಳೆಸಲು ಹಾಗೂ ಭವಿಷ್ಯದ ನಾಯಕರನ್ನು ರೂಪಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಕಾಲೇಜುಗಳಲ್ಲಿನ ಸಮಸ್ಯೆಗಳನ್ನು ಪ್ರಶ್ನಿಸಲು ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಸಿಗಲಿದೆ ಎಂದು ಪದವಿ ವಿದ್ಯಾರ್ಥಿ ನಿತೀನ್ ಅಭಿಪ್ರಾಯಪಟ್ಟಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿನ ಆಡಳಿತಾತ್ಮಕ ಬೆಳವಣಿಗೆಗಳ ನಡುವೆಯೇ ಕಾಲೇಜು ಚುನಾವಣೆ ಯೋಜನೆ ವಿಳಂಬವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸರ್ಕಾರ ಆದಷ್ಟು ಬೇಗ ವಿದ್ಯಾರ್ಥಿ ಸಂಘದ ಚುನಾವಣೆ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡು, ಚುನಾವಣೆಗೆ ಚಾಲನೆ ನೀಡಬೇಕು ಎಂದು ವಿದ್ಯಾರ್ಥಿ ನಾಯಕರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ, ದಶಕಗಳ ಬಳಿಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಮರು ಆರಂಭಿಸುವಂತೆ ಬೇಡಿಕೆ ತೀವ್ರಗೊಂಡಿದ್ದು, ಸರ್ಕಾರ ಈ ಕುರಿತು ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮಹಿಳಾ ಸಂಘದ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ; ಸಾವಿರಾರು ಮಹಿಳೆಯರಿಗೆ ಹಣ ವಾಪಸ್ ಸಿಗದೆ ಸಂಕಷ್ಟ!

ಬಾಗಲಕೋಟೆ: ಮಹಿಳಾ ಸಂಘದ ಹೆಸರಿನಲ್ಲಿ ಸಾವಿರಾರು ಮಹಿಳೆಯರಿಂದ ಹಣ ಸಂಗ್ರಹಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಕೇಳಿಬಂದಿದೆ.

ದುರ್ಗಾದೇವಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ವಿದ್ಯಾ ಹಳ್ಳೂರು ಹಾಗೂ ಕಾರ್ಯದರ್ಶಿ ರಚನಾ ಬಂಟನೂರು ವಿರುದ್ಧ ಹಣ ಕಳೆದುಕೊಂಡ ಮಹಿಳೆಯರು ಆರೋಪ ಮಾಡಿದ್ದಾರೆ.

ದುರ್ಗಾದೇವಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಡಿ ಬೀಳಗಿ ತಾಲೂಕಿನಾದ್ಯಂತ 170ಕ್ಕೂ ಹೆಚ್ಚು ಮಹಿಳಾ ಸಂಘಗಳನ್ನು ಆರಂಭಿಸಲಾಗಿತ್ತು. ವಿವಿಧ ಗ್ರಾಮಗಳ ಸಾವಿರಾರು ಮಹಿಳೆಯರಿಂದ ಪ್ರತಿ ವಾರ 100, 500 ಹಾಗೂ 1,000 ರೂ.ನಂತೆ ಹಣ ಸಂಗ್ರಹಿಸಲಾಗುತ್ತಿತ್ತು ಎನ್ನಲಾಗಿದೆ.

ಮೂರು ವರ್ಷಗಳ ಬಳಿಕ ಹೆಚ್ಚಿನ ಬಡ್ಡಿಯೊಂದಿಗೆ ಹಣ ಹಿಂತಿರುಗಿಸುವುದಾಗಿ ಮಹಿಳೆಯರನ್ನು ನಂಬಿಸಲಾಗಿತ್ತು. ಆದರೆ, ಅವಧಿ ಮುಗಿದರೂ ಹಣ ವಾಪಸ್ ನೀಡಿಲ್ಲ. ಒಂದೊಂದು ಸಂಘಕ್ಕೆ 15ರಿಂದ 20 ಲಕ್ಷ ರೂ.ವರೆಗೆ ವಂಚಿಸಲಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಹಣ ವಾಪಸ್ ಕೇಳಿದ ಮಹಿಳೆಯರಿಗೆ ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆಗಿರುವ ಚೆಕ್‌ಗಳನ್ನು ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಪೊಲೀಸರೊಂದಿಗೆ ಸಂಬಂಧವಿದೆ ಎಂದು ಹೇಳಿ ಬೆದರಿಕೆ ಹಾಕಲಾಗಿದೆ ಎಂದು ನೊಂದ ಮಹಿಳೆಯರು ದೂರಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಮಹಿಳೆಯರು ಬೀಳಗಿಯಲ್ಲಿರುವ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಿ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕಾರ್ಯದರ್ಶಿ ರಚನಾ ಅವರನ್ನು ಕೆಲ ಮಹಿಳೆಯರು ಹಿಡಿದು ಎಳೆದಾಡಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ವಿದ್ಯಾ ಹಳ್ಳೂರು ಹಾಗೂ ರಚನಾ ಬಂಟನೂರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಮಹಿಳೆಯರಿಂದ ಸಂಗ್ರಹಿಸಿದ್ದ ಹಣವನ್ನು ಬೇರೆಡೆ ಹೂಡಿಕೆ ಮಾಡಿರುವುದರಿಂದ ಹಣ ಹಿಂತಿರುಗಿಸಲು ವಿಳಂಬವಾಗಿದೆ. ಆದಷ್ಟು ಬೇಗ ಹಣ ವಾಪಸ್ ನೀಡುವುದಾಗಿ ಇಬ್ಬರು ಹೇಳಿರುವುದಾಗಿ ತಿಳಿದುಬಂದಿದೆ.

ಕೂಲಿ ಕೆಲಸ ಮಾಡಿ ಕಷ್ಟಪಟ್ಟು ಉಳಿಸಿದ ಹಣವನ್ನು ಸಂಘಕ್ಕೆ ಕಟ್ಟಿದ್ದ ಸಾವಿರಾರು ಮಹಿಳೆಯರು ಹಣ ವಾಪಸ್ ಸಿಗದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀಳಗಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಸ್ಥಗಿತಗೊಂಡಿದ್ದ ಮುಪ್ಪಾನೆ–ಹಲ್ಕೆ ಲಾಂಚ್ ಮತ್ತೆ ಸಂಚಾರ ಆರಂಭ

0

ಶಿವಮೊಗ್ಗ: ಮಳೆ ಕೊರತೆಯಿಂದ ಸ್ಥಗಿತಗೊಂಡಿದ್ದ ಸಾಗರ ತಾಲೂಕಿನ ಮುಪ್ಪಾನೆ–ಹಲ್ಕೆ ಲಾಂಚ್ ಸೇವೆ ಮತ್ತೆ ಆರಂಭವಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಇಂದಿನಿಂದ ಸೇವೆ ಪುನರಾರಂಭಿಸಿದೆ.

ಜೂನ್ ಆರಂಭದಲ್ಲಿ ಜಲಾಶಯದ ನೀರಿನ ಮಟ್ಟ ತೀವ್ರವಾಗಿ ಕುಸಿದ ಕಾರಣ ನೀರಿನೊಳಗಿದ್ದ ಮರದ ಕಾಂಡಗಳು ಮೇಲ್ಮೈಗೆ ಕಾಣಿಸಿಕೊಂಡಿದ್ದವು. ಲಾಂಚ್‌ನ ತಳಭಾಗಕ್ಕೆ ಅಡ್ಡಿಯಾಗುವ ಹಾಗೂ ವಾಹನಗಳನ್ನು ಏರಿಳಿಸುವ ಸ್ಥಳದಲ್ಲಿ ಸುರಕ್ಷತಾ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಜೂನ್ 2ರಂದು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಪ್ರಸ್ತುತ ಹಿನ್ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಸುರಕ್ಷಿತ ಸಂಚಾರಕ್ಕೆ ಅವಕಾಶ ದೊರೆತಿದ್ದು, ಲಾಂಚ್ ಸೇವೆಯನ್ನು ಪುನಃ ಆರಂಭಿಸಲಾಗಿದೆ.

ಕರೂರು ಹಾಗೂ ಭಾರಂಗಿ ಹೋಬಳಿಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ಲಾಂಚ್ ಸೇವೆ ತುಮರಿ, ಸಿಗಂದೂರು ಮತ್ತು ಭಾರಂಗಿ ಭಾಗದ ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಮಹತ್ವದ ಅನುಕೂಲ ಕಲ್ಪಿಸುತ್ತಿದ್ದು, ಸೇವೆ ಪುನಾರಂಭಗೊಂಡಿರುವುದು ಸ್ಥಳೀಯರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಜೆಎಂಸಿ ಸರ್ವೆಗೆ ರೈತರ ಪ್ರತಿರೋಧ: ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು ಕಾರಿಗೆ ಮುತ್ತಿಗೆ

0

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಮಂಡಲಹಳ್ಳಿ ಗ್ರಾಮದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಜೆಎಂಸಿ ಸರ್ವೆ ನಡೆಸಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು, ಅಧಿಕಾರಿಗಳ ವಾಹನವನ್ನು ಸುತ್ತುವರಿದು ಪೊರಕೆಯಿಂದ ಹಲ್ಲೆ ನಡೆಸಿದ ಘಟನೆ ಉದ್ವಿಗ್ನತೆಗೆ ಕಾರಣವಾಗಿದೆ.

ಬಿಡದಿ ತಾಲೂಕಿನ ಮಂಡಲಹಳ್ಳಿಯಲ್ಲಿ ಜೆಎಂಸಿ ಸರ್ವೆ ಕೈಗೊಳ್ಳಲು ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ರೈತರು ಹಾಗೂ ರೈತ ಮಹಿಳೆಯರು ಸರ್ವೆಗೆ ಅವಕಾಶ ನಿರಾಕರಿಸಿದರು. ಯಾವುದೇ ಕಾರಣಕ್ಕೂ ಭೂಸರ್ವೆ ನಡೆಯಬಾರದು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಬಲವಂತವಾಗಿ ಮುಂದುವರಿದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಆದರೂ ಅಧಿಕಾರಿಗಳು ಸರ್ವೆಗೆ ಮುಂದಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ರೈತರು ಅಧಿಕಾರಿಗಳ ಕಾರನ್ನು ಸುತ್ತುವರಿದು ತಡೆದರೆ, ರೈತ ಮಹಿಳೆಯರು ಪೊರಕೆಯಿಂದ ವಾಹನ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಆಕ್ರೋಶ ಹೊರಹಾಕಿದರು. ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರೂ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು.

ಘಟನೆಯ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಗಿರೀಶ್ ಹಾಗೂ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿದರು.

ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ಗಂಭೀರ ಅಪರಾಧ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಶ್ರೀನಿವಾಸ ಗೌಡ ಸ್ಪಷ್ಟ ಎಚ್ಚರಿಕೆ ನೀಡಿದರು.

ಜೆಡಿಎಸ್ ಪಕ್ಷದ ಚಿಟಗುಪ್ಪಾ ತಾಲೂಕು ಅಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಬೀದರ್: ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಜನತಾದಳ (ಜಾತ್ಯಾತೀತ) ಪಕ್ಷದ ನೂತನ ತಾಲೂಕು ಅಧ್ಯಕ್ಷರಾಗಿ ಸೈಯದ್ ಫರಮಾನ ಉಲ್ ಹಕ್ ಬುಕಾರಿ ಅವರನ್ನು ನೇಮಕ ಮಾಡಲಾಗಿದೆ. ಮಾಜಿ ಸಚಿವರು ಹಾಗೂ ಜೆಡಿಎಸ್ ಹಿರಿಯ ನಾಯಕ ಬಂಡೆಪ್ಪ ಖಾಶೆಂಪುರ್ ಅವರು ನೇಮಕಾತಿ ಆದೇಶ ಪತ್ರವನ್ನು ವಿತರಿಸಿ ಶುಭ ಹಾರೈಸಿದರು.

ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಬಂಡೆಪ್ಪ ಖಾಶೆಂಪುರ್ ಅವರ ನಿವಾಸದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್ ಅವರು ಹೊರಡಿಸಿದ್ದ ನೇಮಕಾತಿ ಆದೇಶ ಪತ್ರವನ್ನು ಬಂಡೆಪ್ಪ ಖಾಶೆಂಪುರ್ ಅವರು ಸೈಯದ್ ಫರಮಾನ ಉಲ್ ಹಕ್ ಬುಕಾರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಂಡೆಪ್ಪ ಖಾಶೆಂಪುರ್, ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು. ನೂತನ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡಿರುವ ಸೈಯದ್ ಫರಮಾನ ಉಲ್ ಹಕ್ ಬುಕಾರಿ ಅವರು ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಕರೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್ ಅವರು ಹೊರಡಿಸಿರುವ ನೇಮಕಾತಿ ಆದೇಶದಲ್ಲಿ, ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷವನ್ನು ಬೇರುಮಟ್ಟದಿಂದ ಪರಿಣಾಮಕಾರಿಯಾಗಿ ಸಂಘಟಿಸುವ ಉದ್ದೇಶದಿಂದ ಸೈಯದ್ ಫರಮಾನ ಉಲ್ ಹಕ್ ಬುಕಾರಿ ಅವರನ್ನು ಕೂಡಲೇ ಜಾರಿಗೆ ಬರುವಂತೆ ಚಿಟಗುಪ್ಪಾ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ತಾಲೂಕಿನಲ್ಲಿ ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬುವ ವಿಶ್ವಾಸವನ್ನು ವ್ಯಕ್ತಪಡಿಸಿ ಶುಭಾಶಯ ಕೋರಲಾಗಿದೆ.

ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್, ಪಕ್ಷದ ಮುಖಂಡರಾದ ಅಶೋಕ್ ಕೊಡಗೆ, ಸಜ್ಜದ್ ಸಾಹೇಬ್, ಶಾಂತಲಿಂಗ ಸಾವಳಗಿ, ಬಸವರಾಜ್ ಪಾಟೀಲ್ ಹಾರೂರಗೇರಿ, ಸಂತೋಷ್ ರಾಸೂರೆ, ಲಲಿತಾ ಕರಂಜೆ, ಜಾಪೇಡ್ ಕಡ್ಯಾಳ, ಅಬೀದ್ ಅಲಿ, ನಿಜಾಮ್ ಹಕೀಮ್, ಲೈಖ್ ಬಾರೋದ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಲೋಕಸಭೆ ಚುನಾವಣೆ ವೇಳೆ 10 ಕೋಟಿ ರೂ. ಸಂಗ್ರಹ ಆರೋಪ: ಸುಧಾಕರ್ ಪ್ರಕರಣದ ವಿಚಾರಣೆ ನಾಲ್ಕು ವಾರ ಮುಂದೂಡಿಕೆ

ನವದೆಹಲಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಸುಮಾರು ₹10 ಕೋಟಿ ನಗದು ಸಂಗ್ರಹಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಿತು. ಈ ಹಿಂದೆ ಡಾ. ಕೆ. ಸುಧಾಕರ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದ ಸುಪ್ರೀಂ ಕೋರ್ಟ್, ಇದೀಗ ಪ್ರಕರಣದಲ್ಲಿ ನಗದು ವಶಪಡಿಸಿಕೊಂಡ ಚುನಾವಣಾಧಿಕಾರಿಗೂ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿದೆ.

ಕಳೆದ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಗೇಟ್ ಸಮೀಪ ಚುನಾವಣಾಧಿಕಾರಿಗಳು ವಾಹನ ತಪಾಸಣೆ ನಡೆಸಿದ್ದರು. ಈ ವೇಳೆ ಸುಮಾರು ₹10 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು. ಈ ಹಣವನ್ನು ಮತದಾರರಿಗೆ ಹಂಚುವ ಉದ್ದೇಶದಿಂದ ಸಂಗ್ರಹಿಸಲಾಗಿತ್ತು ಎಂಬ ಆರೋಪದಡಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 171E, 171F, 171I ಹಾಗೂ 511ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಈ ಪ್ರಕರಣವನ್ನು ರದ್ದುಪಡಿಸುವಂತೆ ಡಾ. ಕೆ. ಸುಧಾಕರ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿ ಆದೇಶ ನೀಡಿತ್ತು.

ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆ ಮೇಲ್ಮನವಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಸದ್ಯ ಪ್ರಕರಣವನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.

ಮುಂದಿನ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶದ ಮಾನ್ಯತೆ ಹಾಗೂ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಹೈಕೋರ್ಟ್ ಆದೇಶದ ಬಳಿಕ ರೆಗ್ಯುಲರ್ ಬೇಲ್: ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ರಿಲೀಫ್

0

ದಾವಣಗೆರೆ: ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ ಸಂಬಂಧಿಸಿದ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ನಿಯಮಿತ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿದ ಬಳಿಕ ಕಾನೂನು ಪ್ರಕ್ರಿಯೆಯಂತೆ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಅನುಮೋದನೆ ನೀಡಿದೆ.

ಮಠದಲ್ಲಿದ್ದ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಲಾಗಿದ್ದು, ನಂತರ ತನಿಖೆಯ ಹೊಣೆಗಾರಿಕೆಯನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ಪ್ರಕರಣದಲ್ಲಿ ಮುಂಚಿತವಾಗಿ ಪಡೆದಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಸಂತ್ರಸ್ತ ಬಾಲಕನ ತಾಯಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೂನ್ 25ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿ, ಮೂರು ವಾರಗಳೊಳಗೆ ನಿಯಮಿತ ಜಾಮೀನು ಪಡೆಯಲು ಅವಕಾಶ ಕಲ್ಪಿಸಿತ್ತು.

ಈ ಹಿನ್ನೆಲೆಯಲ್ಲಿ ಜೂನ್ 27ರಂದು ವಚನಾನಂದ ಸ್ವಾಮೀಜಿ ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ನಿಯಮಿತ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಆದೇಶ ಹೊರಬಿದ್ದ ಬೆನ್ನಲ್ಲೇ ಸ್ವಾಮೀಜಿಯ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.