Home Blog Page 13

IPL 2026: ಸ್ಟಬ್ ಔಟ್ ಬಳಿಕ ಡೆಲ್ಲಿ ಆಲೌಟ್ : ಚೆನ್ನೈ ವಿರುದ್ಧ ಸೋಲಿಗೆ ಅಂಪೈರ್ ನಿರ್ಣಯ ಕಾರಣವಾಯ್ತಾ?

0

ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.

ಆದರೆ ಈ ಪಂದ್ಯದ ಅಂತಿಮ ಹಂತದಲ್ಲಿ ವಿವಾದವೊಂದು ಉದ್ಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಟ್ರಿಸ್ಟನ್ ಸ್ಟಬ್ ಬ್ಯಾಟಿಂಗ್ ವೇಳೆ ಗ್ಲೌಸ್ ಬದಲಾಯಿಸಲು ಅಂಪೈರ್ ಬಳಿ ಮನವಿ ಮಾಡಿದ್ದರು. ಆದರೆ ಅಂಪೈರ್ ಅದಕ್ಕೆ ಅನುಮತಿ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ಈ ನಿರ್ಧಾರವೇ ಪಂದ್ಯದ ತಿರುವಿಗೆ ಕಾರಣವಾಯಿತೇ ಎಂಬ ಪ್ರಶ್ನೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಿಎಸ್‌ಕೆ ನೀಡಿದ್ದ 213 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಡೆಲ್ಲಿ ತಂಡಕ್ಕೆ ಟ್ರಿಸ್ಟನ್ ಸ್ಟಬ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಭರವಸೆ ನೀಡಿದ್ದರು. ಕೊನೆಯ ಹಂತದಲ್ಲಿ ಗೆಲುವಿಗೆ 10 ಎಸೆತಗಳಲ್ಲಿ 29 ರನ್‌ಗಳ ಅಗತ್ಯವಿದ್ದಾಗ ಈ ಘಟನೆ ನಡೆದಿದೆ.

ಸ್ಟಬ್ 38 ಎಸೆತಗಳಲ್ಲಿ 60 ರನ್‌ (4 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದ ಬಳಿಕ ಡೆಲ್ಲಿ ಬ್ಯಾಟಿಂಗ್ ಕುಸಿತ ಕಂಡು 189 ರನ್‌ಗಳಿಗೆ ಆಲೌಟ್ ಆಯಿತು.

ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಹಾಗೂ ಪರವಾಗಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಪಂದ್ಯ ಫಲಿತಾಂಶದ ಮೇಲೆ ಇದರ ಪರಿಣಾಮದ ಬಗ್ಗೆ ಚರ್ಚೆ ಮುಂದುವರಿದಿದೆ.

ಹುಲಿಕಲ್ ಘಾಟ್‌ನಲ್ಲಿ ಮತ್ತೊಮ್ಮೆ ಭೂಕುಸಿತ – ತೀರ್ಥಹಳ್ಳಿ–ಕುಂದಾಪುರ ರಸ್ತೆ ಸಂಪೂರ್ಣ ಬಂದ್

ಶಿವಮೊಗ್ಗ: ಹುಲಿಕಲ್ ಘಾಟಿಯಲ್ಲಿ ಸುಮಾರು 5 ಅಡಿ ಅಗಲದವರೆಗೆ ಮತ್ತೊಮ್ಮೆ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ–ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಆದೇಶ ಹೊರಡಿಸಿದ್ದು, ಕಾಂಕ್ರೀಟ್ ರಸ್ತೆಯಲ್ಲೂ ಬಿರುಕುಗಳು ಕಂಡುಬಂದಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಘಾಟ್‌ನ ಹೇರ್‌ಪಿನ್ ತಿರುವಿನಲ್ಲಿ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ಮಾರ್ಗವನ್ನು ಬಳಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪರ್ಯಾಯ ಮಾರ್ಗಗಳಲ್ಲಿ ಸಂಚಾರ ಮಾಡಲು ಸೂಚಿಸಲಾಗಿದೆ.

ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ತೆರಳುವ ವಾಹನಗಳು ತೀರ್ಥಹಳ್ಳಿ–ರಾವೆ–ಕಾನುಗೋಡು–ನಗರ–ಕೊಲ್ಲೂರು ಮಾರ್ಗವಾಗಿ ಸಂಚರಿಸಬೇಕು ಎಂದು ಸೂಚಿಸಲಾಗಿದೆ. ಇನ್ನೊಂದು ಮಾರ್ಗವಾಗಿ ತೀರ್ಥಹಳ್ಳಿ–ಯಡೂರು–ಮಾಸ್ತಿಕಟ್ಟೆ–ಕಾನುಗೋಡು–ನಗರ–ಕೊಲ್ಲೂರು ಮಾರ್ಗವನ್ನು ಬಳಸಬಹುದು.

ಶಿವಮೊಗ್ಗ ಮತ್ತು ಸಾಗರ ಭಾಗದಿಂದ ಹೋಗುವವರು ಶಿವಮೊಗ್ಗ–ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಭಟ್ಕಳ–ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ತೆರಳಲು ಸೂಚಿಸಲಾಗಿದೆ.

ಇತ್ತೀಚೆಗಷ್ಟೇ ಇದೇ ಘಾಟ್‌ನಲ್ಲಿ ನಡೆದ ಭೂಕುಸಿತ ದುರಂತದಲ್ಲಿ ಮೂವರು ಕಾರ್ಮಿಕರು ಸಾವಿಗೀಡಾಗಿದ್ದು, ಈ ಘಟನೆ ಇನ್ನೂ ಜನಮನದಿಂದ ಮಾಸಿಲ್ಲ. ಈಗ ಮತ್ತೊಮ್ಮೆ ಭೂಕುಸಿತ ಸಂಭವಿಸಿರುವುದು ಆತಂಕ ಹೆಚ್ಚಿಸಿದೆ.

ಹಾಸನದಲ್ಲಿ ಮತ್ತೊಂದು ದುರ್ಘಟನೆ: ಕಾಡಾನೆ ದಾಳಿಗೆ ರೈತ ಸಾವು!

ಹಾಸನ: ರಾಜ್ಯದಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಮುಂದುವರಿದಿರುವ ನಡುವೆ, ಹಾಸನ ಜಿಲ್ಲೆಯಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ.

ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದ ರೈತ ರಾಜಶೆಟ್ಟಿ (56) ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

ಮಾಹಿತಿ ಪ್ರಕಾರ, ಬೆಳಗ್ಗೆ ತೋಟಕ್ಕೆ ತೆರಳಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಸೊಂಡಿಲಿನಿಂದ ಎತ್ತಿ ಬಿಸಾಡಿ ತುಳಿದು ಅವರನ್ನು ಸ್ಥಳದಲ್ಲೇ ಕೊಂದಿದೆ.

ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಗೋಲ್ಡ್ ಪ್ರಿಯರ ಗಮನಕ್ಕೆ: ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ!? ಇಷ್ಟು ಕಮ್ಮಿನಾ!?

0

ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ಅಸ್ಥಿರ ಸ್ಥಿತಿಯಲ್ಲಿ ಮುಂದುವರಿದಿದ್ದು, ಅತ್ತಿಂದಿತ್ತ ಏರಿಳಿತ ಕಾಣುತ್ತಿದೆ.

ಕಳೆದ ಎರಡು ವಾರಗಳಿಂದ ಚಿನ್ನದ ದರದಲ್ಲಿ ನಿರಂತರವಾಗಿ ಏರಿಳಿತವಾಗುತ್ತಿದ್ದು, ಕಳೆದ 10 ದಿನಗಳಲ್ಲಿ ಪ್ರತಿ ಗ್ರಾಂಗೆ ಸುಮಾರು ₹355 ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇದೇ ರೀತಿಯ ಅಲ್ಪ ಏರಿಳಿತಗಳು ಮುಂದುವರಿದಿವೆ.

ಇದೇ ವೇಳೆ ಬೆಳ್ಳಿ ಬೆಲೆಯಲ್ಲಿಯೂ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದ್ದು, ಕಳೆದ 10 ದಿನಗಳಲ್ಲಿ ಸುಮಾರು ₹10 ರಷ್ಟು ಹೆಚ್ಚಳವಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಹೂಡಿಕೆದಾರರ ಅಸ್ಥಿರ ಮನೋಭಾವದಿಂದ ಚಿನ್ನ–ಬೆಳ್ಳಿ ದರಗಳಲ್ಲಿ ಈ ರೀತಿಯ ಏರಿಳಿತಗಳು ಕಂಡುಬರುತ್ತಿವೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 12ಕ್ಕೆ):

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,463 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಬೀದಿ ನಾಯಿಗಳ ಕ್ರೌರ್ಯ ಆರೋಪ: ಡಿಆರ್‌ಡಿಒ ಸಂಕೀರ್ಣ ವಿರುದ್ಧ ತೀವ್ರ ಪ್ರತಿಭಟನೆ- ಕಣ್ಣೀರಿಟ್ಟ ನಟಿ ರಮ್ಯಾ ದಿವ್ಯ ಸ್ಪಂದನಾ

ಬೆಂಗಳೂರು: ಕಗ್ಗದಾಸಪುರದಲ್ಲಿ ನಡೆದ ಬೀದಿ ನಾಯಿಗಳ ಮೇಲಿನ ಕ್ರೌರ್ಯದ ಆರೋಪ ಗಂಭೀರ ವಿವಾದಕ್ಕೆ ಕಾರಣವಾಗಿದೆ. ಡಿಆರ್‌ಡಿಒ ಸಂಕೀರ್ಣದಲ್ಲಿ ನಾಯಿಗಳನ್ನು ಚೀಲಗಳಲ್ಲಿ ಕಟ್ಟಿ ಸಾಗಿಸಿದ ಘಟನೆ ಪ್ರಾಣಿ ಹಕ್ಕುಗಳ ಉಲ್ಲಂಘನೆಯಾಗಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಈ ಘಟನೆ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಟಿ ರಮ್ಯಾ ದಿವ್ಯ ಸ್ಪಂದನ ಸೇರಿದಂತೆ ಹಲವು ಶ್ವಾನ ಪ್ರಿಯರು ಭಾಗವಹಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಮಾತನಾಡುವ ವೇಳೆ ರಮ್ಯಾ ಭಾವುಕರಾಗಿ ಕಣ್ಣೀರು ಹಾಕಿದರು.

“ಇಂತಹ ಅಮಾನವೀಯ ಘಟನೆಗಳು ಸಹಿಸಲಾಗದು. ನಾಪತ್ತೆಯಾಗಿರುವ ನಾಯಿಗಳ ಬಗ್ಗೆ ತಕ್ಷಣ ಸ್ಪಷ್ಟತೆ ನೀಡಬೇಕು,” ಎಂದು ಅವರು ಆಗ್ರಹಿಸಿದರು.

ಸುಮಾರು 20ಕ್ಕೂ ಹೆಚ್ಚು ನಾಯಿಗಳು ಕಾಣೆಯಾಗಿರುವುದಾಗಿ ವರದಿಯಾಗಿದೆ. ಅನಿಮಲ್ ಬರ್ಥ್ ಕಂಟ್ರೋಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ಸಿ.ವಿ. ರಾಮನ್ ನಗರ ಅನಿಮಲ್ ಸ್ಕ್ವಾಡ್ ಮತ್ತು ಪ್ರಿಯಾ ಚೆಟ್ಟಿ ರಾಜಗೋಪಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರಕರಣ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವಿಷಯ ಈಗ ಕರ್ನಾಟಕ ಹೈಕೋರ್ಟ್‌ನ ವಿಚಾರಣೆಯಲ್ಲಿದೆ. ಮುಂದಿನ ವಿಚಾರಣೆ ಏಪ್ರಿಲ್ 16ರಂದು ನಡೆಯಲಿದೆ.

ಗದಗದಲ್ಲಿ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಸನ್-2 ಆರಂಭ: 20 ತಂಡಗಳ ಪೈಪೋಟಿ!

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಗಮನಸೆಳೆದ ‘ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್’ ಮೊದಲ ಸೀಸನ್ ಯಶಸ್ಸಿನ ಬಳಿಕ ಇದೀಗ ಸೀಸನ್-2 ಭರ್ಜರಿಯಾಗಿ ಆರಂಭಗೊಳ್ಳುತ್ತಿದೆ.

ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಏಪ್ರಿಲ್ 12ರಿಂದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದ್ದು, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭಕ್ಕೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ವಿಶೇಷವಾಗಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರಾದ ಸುನಿಲ್ ಜೋಶಿ, ಸುಜಿತ್ ಸೋಮಶೇಖರ್ ಮತ್ತು ಈರಣ್ಣ ಸವಡಿ ಭಾಗವಹಿಸಲಿದ್ದಾರೆ.

ಈ ಬಾರಿ ಲೀಗ್‌ನಲ್ಲಿ 20 ತಂಡಗಳು ಸ್ಪರ್ಧಿಸುತ್ತಿದ್ದು, ಒಟ್ಟು 456 ಆಟಗಾರರು ನೋಂದಾಯಿತರಾಗಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ 320 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತಿ ತಂಡದಲ್ಲಿ ಕನಿಷ್ಠ 5 ಗ್ರಾಮೀಣ ಆಟಗಾರರನ್ನು ಸೇರಿಸಲಾಗಿದೆ.

ಮಾರ್ಚ್ 22 ಮತ್ತು 23ರಂದು ನಡೆದ ಹರಾಜಿನಲ್ಲಿ ಆಟಗಾರರು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಎಡ್ವರ್ಡ್ 44 ಸಾವಿರ ರೂ., ಶಂಕರ 42 ಸಾವಿರ ರೂ., ಯುವರಾಜ್ 36 ಸಾವಿರ ರೂ., ವೈಭವ್ ಮತ್ತು ಫಯಾಜ್ ತಲಾ 34 ಸಾವಿರ ರೂ.ಗೆ ಬಿಡ್ ಆಗಿದ್ದಾರೆ.

ಪ್ರಥಮ ಬಹುಮಾನ 2 ಲಕ್ಷ ರೂ., ದ್ವಿತೀಯ 1.5 ಲಕ್ಷ ರೂ. ಘೋಷಿಸಲಾಗಿದೆ. ಜೊತೆಗೆ ಟೂರ್ನಿಯ ಶ್ರೇಷ್ಠ ಆಟಗಾರನಿಗೆ 25 ಸಾವಿರ ರೂ., ಅತ್ಯುತ್ತಮ ಬ್ಯಾಟ್ಸಮನ್ ಮತ್ತು ಬಾಲರ್‌ಗೆ ತಲಾ 10 ಸಾವಿರ ರೂ. ಸೇರಿದಂತೆ ಅನೇಕ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.

ಒಟ್ಟು 18 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಅತ್ಯುತ್ತಮ ಬೆಳಕು ವ್ಯವಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಹಾಗೂ ಥರ್ಡ್ ಅಂಪೈರ್ ವ್ಯವಸ್ಥೆ ಸಹ ಇರಲಿದೆ.

ಸುದ್ದಿಗೋಷ್ಠಿಯಲ್ಲಿ ಸಿದ್ಧಲಿಂಗೇಶ್ವರ ಪಾಟೀಲ, ಅಶೋಕ ಮಂದಾಲಿ, ಉಮರಫಾರೂಕ್ ಹುಬ್ಬಳ್ಳಿ, ಸರ್ಫರಾಜ್ ಶೇಖ್, ಅಹ್ಮದ ಖಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲ್ಲಂಗಡಿ ಮಾರುತ್ತಾ ಕನಸು ಬೆನ್ನಟ್ಟುತ್ತಿರುವ ವಿದ್ಯಾರ್ಥಿ: ಪಿಯುಸಿಯಲ್ಲಿ 85% ಸಾಧನೆ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಧಿಸುವ ಮನಸ್ಸಿದ್ದರೆ ಬಡತನವೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ದೊಡ್ಡೂರ ತಾಂಡಾದ ಅನಿಲ ಲಮಾಣಿ ಜೀವಂತ ಉದಾಹರಣೆಯಾಗಿದ್ದಾನೆ.

ಹಾದಿಬೀದಿಯಲ್ಲಿ ಕಲ್ಲಂಗಡಿ ಹಣ್ಣು ಮಾರುವ ತಂದೆ ಹಾಗೂ ಕೂಲಿ ಕೆಲಸ ಮಾಡುವ ತಾಯಿಯ ಪುತ್ರನಾದ ಅನಿಲ, ಪಿಯುಸಿ ಪರೀಕ್ಷೆಯಲ್ಲಿ ಶೇ.85 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾನೆ. ಮುಳಗುಂದದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಓದಿದ್ದ ಅನಿಲ ಉತ್ತಮ ಫಲಿತಾಂಶ ಗಳಿಸಿದ್ದಾನೆ.

ಆದರೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಆತಂಕ ಎದುರಾಗಿದೆ. ದೊಡ್ಡ ಕಾಲೇಜುಗಳಲ್ಲಿ ಓದಲು ಬೇಕಾದ ಹೆಚ್ಚಿನ ಶುಲ್ಕವನ್ನು ಭರಿಸಲು ಕುಟುಂಬದ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿಲ್ಲ.

ಪರೀಕ್ಷೆ ಮುಗಿದ ಕೂಡಲೇ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಲ್ಲಂಗಡಿ ಹಣ್ಣು ಮಾರಾಟದಲ್ಲಿ ತೊಡಗಿಕೊಂಡಿರುವ ಅನಿಲ, ಬಿಸಿಲಿನಲ್ಲೂ ದುಡಿಯುತ್ತಲೇ ತನ್ನ ಶಿಕ್ಷಣದ ಕನಸನ್ನು ಮುಂದುವರಿಸುತ್ತಿದ್ದಾನೆ.

ಅನಿಲನ ತಮ್ಮ 10ನೇ ತರಗತಿಯಲ್ಲಿ ಓದುತ್ತಿದ್ದು, ತಂಗಿ ಅಂಗವಿಕಲೆಯಾಗಿದ್ದಾಳೆ. ಈ ನಡುವೆಯೂ ಮಗನನ್ನು ಓದಿಸಲು ಶಕ್ತಿಮೀರಿದ ಪ್ರಯತ್ನ ಮಾಡುವುದಾಗಿ ತಂದೆ ಮಲ್ಲೇಶಪ್ಪ ಹಾಗೂ ತಾಯಿ ತಿಳಿಸಿದ್ದಾರೆ.

ಅನಿಲ ಮಾತನಾಡಿ, “ನಾನು ಶೇ.85 ಅಂಕ ಪಡೆದಿದ್ದೇನೆ. ಆದರೆ ಸ್ಪರ್ಧೆ ಹೆಚ್ಚು ಇರುವುದರಿಂದ ಇದು ಸಾಕಾಗುವುದಿಲ್ಲ ಎನ್ನಿಸುತ್ತದೆ. ಕಲ್ಲಂಗಡಿ ಮಾರುತ್ತಲೇ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದೇನೆ. ಅವಕಾಶ ಸಿಕ್ಕರೆ ವೈದ್ಯಕೀಯ ಶಿಕ್ಷಣ ಪಡೆಯಲು ಇಷ್ಟ, ಇಲ್ಲದಿದ್ದರೆ ಪೊಲೀಸ್ ಇಲಾಖೆಗೆ ಸೇರುವ ಆಸೆ ಇದೆ. ಯಾವುದೇ ಪರಿಸ್ಥಿತಿಯಲ್ಲೂ ಓದನ್ನು ಮುಂದುವರಿಸುತ್ತೇನೆ” ಎಂದು ಹೇಳಿದ್ದಾನೆ.

ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ: ಪತ್ನಿ ಸೌಮ್ಯ ಶೆಟ್ಟಿ ಅರೆಸ್ಟ್

0

ಉಡುಪಿ: ಪ್ರೀತಿಸಿ ಮದುವೆಯಾದ ಸಂಬಂಧ ಕೇವಲ ಒಂದು ತಿಂಗಳಲ್ಲಿ ದುರಂತ ಅಂತ್ಯ ಕಂಡಿರುವ ಶಾಕಿಂಗ್ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ಸೌಮ್ಯ ಶೆಟ್ಟಿಯ ಪಾತ್ರ ಗಂಭೀರ ಅನುಮಾನಕ್ಕೆ ಕಾರಣವಾಗಿದ್ದು, ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 17ರಂದು ನಡೆದ ಮದುವೆಯ ಬಳಿಕ, ಸುದೀಪ್ ಪತ್ನಿಯ ಮನೆಯಲ್ಲಿ ವಾಸವಾಗಿದ್ದರು. ಆದರೆ ವೈವಾಹಿಕ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಮಾರ್ಚ್ 17ರಂದು ತಾಯಿಯೊಂದಿಗೆ ತೆರಳುತ್ತಿದ್ದ ವೇಳೆ, ಸೌಮ್ಯ ಶೆಟ್ಟಿ ಕಾರಿಗೆ ಅಡ್ಡಗಟ್ಟಿ ನಿಂದನೆ ಮತ್ತು ಬೆದರಿಕೆ ಹಾಕಿದ್ದಾಳೆಂದು ಆರೋಪಿಸಲಾಗಿದೆ. ಈ ಘಟನೆ ಸುದೀಪ್ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಿತ್ತು ಎಂದು ಕುಟುಂಬ ಹೇಳಿದೆ.

ಇದಾದ ಬಳಿಕ, ಮಾರ್ಚ್ 22ರಂದು ವಿಷ ಸೇವಿಸಿದ ಸುದೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಮಾರ್ಚ್ 29ರಂದು ಅವರು ಸಾವನ್ನಪ್ಪಿದರು. ಈ ನಡುವೆ, ಸೌಮ್ಯ ಶೆಟ್ಟಿ ಸಂಬಂಧಿಕರಿಗೆ ಕರೆಮಾಡಿ ಘಟನೆ ತಿಳಿಸಿದ್ದಳು.

ಮೃತನ ತಂದೆ ದಾಮೋದರ ಶೆಟ್ಟಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿ, ಸೌಮ್ಯ ಶೆಟ್ಟಿಯ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮಾನಸಿಕ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳು ಗಂಭೀರವಾಗಿ ಪರಿಗಣಿಸಲ್ಪಟ್ಟಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಏಪ್ರಿಲ್ 20 ಕ್ಕೆ ಯುವೋತ್ಸವ- ಉದ್ಯೋಗ ಮೇಳ 2026 ಆಯೋಜನೆ: ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್

ಬೆಂಗಳೂರು: ಬಸವ ಜಯಂತಿಯ ಅಂಗವಾಗಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಫೌಂಡೇಶನ್ ಸಹಯೋಗದಲ್ಲಿ ಯುವೋತ್ಸವ- ಉದ್ಯೋಗ ಮೇಳ 2026 ಅನ್ನು ಮಲ್ಲೇಶ್ವರಂನ ಎಸ್‍ಎಚ್‍ವಿಎನ್‍ಎಂ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಶಾಸಕರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ತಿಳಿಸಿದರು.

ಮಲ್ಲೇಶ್ವರಂನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂಬ ತತ್ವವನ್ನು ಜಗತ್ತಿಗೆ ನೀಡಿದ ಭಕ್ತಿ ಭಂಡಾರಿ ಬಸವಣ್ಣನವರನ್ನು ನಾವು ಪೂಜಿಸುತ್ತೇವೆ, ಆರಾಧಿಸುತ್ತೇವೆ. ಆದ್ದರಿಂದ ಅವರ ಜಯಂತಿಯ ಅಂಗವಾಗಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಉದ್ಯೋಗಮೇಳವನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ.

ಇದರಿಂದ ಸಾಕಷ್ಟು ಉದ್ಯೋಗಾಕಾಂಕ್ಷಿಗಳಿಗೆ ಸಹಾಯವಾಗಿದೆ. ಈ ಬಾರಿ ಬೆಳಗ್ಗೆ 8.30 ರಿಂದ ಸಂಜೆ 4.30 ಉದ್ಯೋಗ ಮೇಳ ಆಯೋಜನೆ ಮಾಡಿದ್ದೇವೆ. ಸರ್ವರಿಗೂ ಉದ್ಯೋಗ ಎಂಬ ಧ್ಯೇಯವಾಕ್ಯದಲ್ಲಿ ಈ ಉದ್ಯೋಗಮೇಳವು ನಡೆಯಲಿದೆ. ಭಾರತ್ ಕರಿಯರ್ ಕನೆಕ್ಟ್ ಈ ಮೇಳಕ್ಕೆ ಕೈ ಜೋಡಿಸಿದೆ ಎಂದರು.
ಯುವ ಸಬಲೀಕರಣಕ್ಕೆ ಸಹಾಯವಾಗಬಲ್ಲ ವೃತ್ತಿ ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ತರಬೇತಿ, ಉದ್ಯೋಗಮೇಳ, ಉದ್ಯಮಶೀಲತಾ ಅಭಿವೃದ್ಧಿ ಮತ್ತು ಆರ್ಥಿಕ ಸೇರ್ಪಡೆ ಇವುಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು.

ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಾದ ನೇರಸಂವಾದ, ನೇಮಕಾತಿ, ವೃತ್ತಿ ಅನ್ವೇಷಣೆಗೆ ಸಾಮಾನ್ಯ ವೇದಿಕೆಯನ್ನು ಈ ಮೇಳ ಒದಗಿಸಲಿದೆ. ಐಟಿ, ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯ, ಚಿಲ್ಲರೆ ವ್ಯಾಪಾರ, ಲಾಜಿಸ್ಟಿಕ್ ಮತ್ತು ಸೇವಾ ಕ್ಷೇತ್ರಗಳ ಸುಮಾರು 100 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದರು.

ಈ ಮೇಳ ಸುಮಾರು 5000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿಗೆ ವೇದಿಕೆ ಒದಗಿಸಲಿದೆ. ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ವಿದ್ಯಾರ್ಹತೆ ಇರುವವರು, ಸದ್ಯ ಈ ಕೋರ್ಸ್ ಮಾಡುತ್ತಿರುವವರು ಭಾಗವಹಿಸಬಹುದು. ಕನಿಷ್ಠ ಸಾವಿರ ಆಕಾಂಕ್ಷಿಗಳಿಗೆ ಕೌಶಲ್ಯ ಅಭಿವೃದ್ಧಿ, ಕೌಶಲ್ಯ ಉನ್ನತೀಕರಣ, ಪ್ರಶಿಕ್ಷಣ, ಸ್ವಯಂ ಉದ್ಯೋಗ, ಉದ್ಯಮಶೀಲತೆ, ಜೀವನೋಪಾಯ ಮತ್ತು ಇತರ ಕ್ಷೇತ್ರಗಳಲ್ಲಿ ಯುವಕರಿಗೆ ಅನುಕೂಲ ಒದಗಿಸುವುದು ಈ ಮೇಳದ ಮುಖ್ಯ ಉದ್ದೇಶ ಎಂದರು.

ಈ ಮೇಳದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದವರು ಮಾತ್ರವಲ್ಲದೇ ಎಲ್ಲಾ ಕಡೆಯವರು ಭಾಗವಹಿಸಬಹುದು. ಉದ್ಯೋಗಾಕಾಂಕ್ಷಿಗಳಿಗೆ ಉಟೋಪಚಾರ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುವುದು. ಅಂಗವಿಕಲರಿಗೂ ಉದ್ಯೋಗ ಅವಕಾಶದ ಮಾಹಿತಿ ನೀಡಲಾಗುವುದು ಎಂದರು.

ಕೇವಲ ಓದಿದರೆ ಸಾಲದು, ಏನನ್ನೂ ಓದಬೇಕು, ಯಾಕೆ ಓದಬೇಕು ಮುಂತಾದವುಗಳ ಬಗ್ಗೆ ಕರಿಯರ್ ಕೌನ್ಸೆಲಿಂಗ್ ಮಾಡಲಾಗುವುದು. ಕೇವಲ ಓದಿದರೆ ಸಾಲದು. ಜ್ಞಾನ ಮತ್ತು ಬದುಕಿಗಾಗಿ ಓದಬೇಕು. ಪದವಿ ಇದ್ದರೂ ಕೌಶಲ್ಯ ಇಲ್ಲದಿದ್ದರೆ ಪ್ರಯೋಜನವಿಲ್ಲ. ಈ ಬಗ್ಗೆ ಅರಿವು ನೀಡಲಾಗುವುದು. ಉದ್ಯಮಿಯಾಗ ಬಯಸುವವರಿಗೂ ಈ ಮೇಳದಲ್ಲಿ ತಿಳಿವಳಿಕೆ ನೀಡಲಾಗುವುದು ಎಂದರು.

ಹಾವೇರಿ: ಕೆರೆಯಲ್ಲಿ ಹೂಳು ತೆಗೆಯುವಾಗ ಸಿಕ್ಕಿತು ಬಸವಣ್ಣ ಮೂರ್ತಿ!

ಹಾವೇರಿ: ಕೆರೆಯಲ್ಲಿ ಹೂಳು ತೆಗೆಯುವ ವೇಳೆ ಪುರಾತನ ಕಾಲದ ಬಸವಣ್ಣ ಮೂರ್ತಿ ಪತ್ತೆಯಾದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಮೀಪದ ಬಾಳೆ ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ನಡೆಯುತ್ತಿದ್ದಾಗ ಸುಮಾರು 3 ಅಡಿ ಎತ್ತರದ ಬಸವಣ್ಣ ಮೂರ್ತಿ ಪತ್ತೆಯಾಗಿದೆ. ಮೂರ್ತಿ ಪತ್ತೆಯಾದ ತಕ್ಷಣ ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಾರೆ.

ಪತ್ತೆಯಾದ ಮೂರ್ತಿಯನ್ನು ಗ್ರಾಮದಲ್ಲಿರುವ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಇದರೊಂದಿಗೆ, ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯವನ್ನು ಮುಂದುವರಿಸಲಾಗಿದ್ದು, ಇನ್ನೂ ಪುರಾತನ ಮೂರ್ತಿಗಳು ಅಥವಾ ವಸ್ತುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯಿದೆ.

error: Content is protected !!