Home Blog Page 147

ಅಪರಿಚಿತರೊಂದಿಗೆ ಮಾತಾಡಲ್ಲ ಎಂದಿದ್ದಕೆ ಬಾಲಕಿ ಮೇಲೆ ಆಸಿಡ್ ಎರಚಿದ್ದ ಫೋಟೋಗ್ರಾಫರ್ ಅರೆಸ್ಟ್!

0

ಜೈಪುರ:- ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಅಪರಿಚಿತರೊಂದಿಗೆ ಮಾತನಾಡಲ್ಲ ಎಂದಿದ್ದಕ್ಕೆ ಬಾಲಕಿ ಮೇಲೆ ಆಸಿಡ್ ದಾಳಿ ಮಾಡಿದ್ದ ಫೋಟೋಗ್ರಾಫರ್ ನನ್ನು ಅರೆಸ್ಟ್ ಮಾಡಲಾಗಿದೆ.

19 ವರ್ಷದ ಓಂಪ್ರಕಾಶ್ ಅಲಿಯಾಸ್ ಜಾನಿ ಕೃತ್ಯ ಎಸಗಿದ ಫೋಟೋಗ್ರಾಫರ್. ಓಂಪ್ರಕಾಶ್ ಮದುವೆಯೊಂದರಲ್ಲಿ ಫೋಟೋಗ್ರಾಫರ್ ಆಗಿ ಹೋಗಿದ್ದ ವೇಳೆ ಬಾಲಕಿಯನ್ನು ನೋಡಿದ್ದಾನೆ. ಬಳಿಕ ಆಕೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಬಾಲಕಿ ತಾನು ಅಪರಿಚಿತರೊಂದಿಗೆ ಮಾತನಾಡುವುದಿಲ್ಲ ಎಂದು ಆತನಿಗೆ ಬೈದಿದ್ದಾಳೆ. ಇದರಿಂದ ಕೋಪಗೊಂಡ ಫೋಟೋಗ್ರಾಫರ್ ಆಕೆಯ ಮೇಲೆ ಆಸಿಡ್ ದಾಳಿ ಮಾಡಲು ಮುಂದಾಗಿದ್ದಾನೆ.

ಘಟನೆಯ ಬಳಿಕ ಬಾಲಕಿ ಶ್ರೀ ಗಂಗಾನಗರ ಜಿಲ್ಲೆಯ ಸುಭಾಷ್ ಪಾರ್ಕ್ ಪ್ರದೇಶದಲ್ಲಿ ತನ್ನ ಶಾಲೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಓಂಪ್ರಕಾಶ್ ಬೈಕ್‌ನಲ್ಲಿ ತೆರಳಿ ಆಕೆಯ ಮೇಲೆ ಆಸಿಡ್ ಬಾಟಲಿ ಎಸೆದಿದ್ದಾನೆ. ಇದರ ಪರಿಣಾಮ ಬಾಲಕಿಯ ಬಟ್ಟೆ ಮತ್ತು ಬೆರಳಿಗೆ ಸುಟ್ಟ ಗಾಯಗಳಾಗಿದೆ. ಇನ್ನು ಆರೋಪಿ ಓಂಪ್ರಕಾಶ್ ಪೊಲೀಸರ ಕೈಗೆ ಸಿಕ್ಕಿ ಬೀಳಬಾರದೆಂದು ತಾನು ಬಂದಿದ್ದ ಬೈಕಿನ ನಂಬರ್ ಪ್ಲೇಟ್ ಅನ್ನು ಬಟ್ಟೆಯಿಂದ ಮರೆಮಾಚಿದ್ದು, ಮುಖವನ್ನು ಬಟ್ಟೆ ಮತ್ತು ಹೆಲ್ಮೆಟ್‌ನಿಂದ ಮುಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಆಸಿಡ್ ದಾಳಿಯ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ನಡೆದು ಮೂರು ದಿನಗಳ ಬಳಿಕ ಆರೋಪಿಯ ಜಾಡು ಹಿಡಿದು ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

SSLC ಪ್ರಶ್ನೆಪತ್ರಿಕೆ ಲೀಕ್ ಬೆನ್ನಲ್ಲೇ ಎಚ್ಚೆತ್ತ ಶಿಕ್ಷಣ ಇಲಾಖೆ; ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ!

0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಹೊಸ ಮಾರ್ಗಸೂಚಿಗಳಂತೆ, ಎರಡನೇ ಪೂರ್ವಸಿದ್ಧತಾ ಪರೀಕ್ಷೆಗಳು ಜನವರಿ 27ರಿಂದ ಫೆಬ್ರವರಿ 2ರವರೆಗೆ ನಡೆಯಲಿದ್ದು, ಪರೀಕ್ಷೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಯಿಂದಲೇ ಶಾಲೆಗೆ ಹಾಜರಾಗಬೇಕಾಗುತ್ತದೆ. ಪ್ರಶ್ನೆಪತ್ರಿಕೆಗಳನ್ನು ಶಾಲೆಯ ಲಾಗಿನ್ ಮೂಲಕ ಬೆಳಿಗ್ಗೆ 9.30ಕ್ಕೆ ಡೌನ್‌ಲೋಡ್ ಮಾಡಿ, 10 ಗಂಟೆಯೊಳಗೆ ಮುದ್ರಿಸಬೇಕು. ಬೆಳಿಗ್ಗೆ 10.50ಕ್ಕೂ ಮೊದಲು ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಹಾಲ್‌ಗೆ ಕಳುಹಿಸಬಾರದು ಎಂದು ಸೂಚಿಸಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಮುಖ್ಯಶಿಕ್ಷಕ, ನೋಡಲ್ ಶಿಕ್ಷಕ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ವಾರ ಗಣಿತ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ಲೀಕ್ ಆಗಿದ್ದು, ಕೆಲವು ಶಾಲೆಗಳೇ ಪ್ರಶ್ನೆಪತ್ರಿಕೆಗಳನ್ನು ಮೂರು ಗಂಟೆಗಳ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಹಂಚಿದ್ದವು. ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್’ ಹೆಸರಿನಲ್ಲಿ ಹಲವು ಖಾತೆಗಳ ಮೂಲಕ ಪ್ರಶ್ನೆಪತ್ರಿಕೆ ಮಾರಾಟ ಯತ್ನ ನಡೆದಿರುವುದು ಕೂಡ ಬೆಳಕಿಗೆ ಬಂದಿದೆ.

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಡಿಜಿಪಿ ರಾಮಚಂದ್ರರಾವ್‌ಗೆ ನೋಟಿಸ್!

0

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್ ಅವರಿಗೆ ನೋಟಿಸ್ ಜಾರಿಯಾಗಿದೆ.

ರಾಸಲೀಲೆ ಪ್ರಕರಣದ ಬೆನ್ನಲ್ಲೇ ಇದೀಗ ರನ್ಯಾ ರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್‌ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರಿ ವಾಹನ ದುರ್ಬಳಕೆ ಆರೋಪದಲ್ಲಿ ರಾಮಚಂದ್ರರಾವ್ ವಿರುದ್ಧ ಚಾರ್ಜ್ ಮೆಮೊ ನೀಡಲಾಗಿತ್ತು. ಡಿಜಿಪಿ ರಾಮಚಂದ್ರರಾವ್ ಅವರ ಪುತ್ರಿ ರನ್ಯಾ ರಾವ್ ಸರ್ಕಾರಿ ವಾಹನವನ್ನು ಅನಧಿಕೃತವಾಗಿ ಬಳಸಿದ್ದಾರೆನ್ನುವ ಆರೋಪ ಕೇಳಿಬಂದಿತ್ತು.

ಇನ್ನೂ, ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿ ಇಲಾಖಾ ತನಿಖೆಗೆ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಐಜಿಪಿಯಾಗಿದ್ದ ಅವಧಿಯಲ್ಲಿ ಕಚೇರಿಯಲ್ಲಿ ಸಮವಸ್ತ್ರದಲ್ಲಿಯೇ ರಾಸಲೀಲೆ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಡಿಆರ್‌ಐ ಅಧಿಕಾರಿಗಳು ರಾಮಚಂದ್ರರಾವ್ ಅವರಿಗೆ ನೋಟಿಸ್ ನೀಡಿ ಮ್ಯಾರಥಾನ್ ವಿಚಾರಣೆ ನಡೆಸಿದ್ದರು.

ವಿಚಾರಣೆಯಲ್ಲಿ ರನ್ಯಾ ರಾವ್ ಹಾಗೂ ರಾಮಚಂದ್ರರಾವ್ ನಡುವಿನ ಸಂಬಂಧ, ಚಿನ್ನ ಸಾಗಾಟಕ್ಕೆ ಸಹಾಯ ಮಾಡಲಾಗಿತ್ತೇ?, ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಂಡಿದ್ದಾರೇ?, ಹಾಗೂ ಕಳೆದ ಎರಡು ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ತೆರಳಿ ಬಂದಿರುವ ವಿಚಾರಗಳ ಕುರಿತು ಸವಿವರವಾಗಿ ಪ್ರಶ್ನಿಸಲಾಗಿದೆ.

ಮನೆಯೊಳಗೇ ಚಾಲುಕ್ಯರ ಕಾಲದ ದೇವಸ್ಥಾನ ಪತ್ತೆ! ಲಕ್ಕುಂಡಿಯಲ್ಲಿ ಇತಿಹಾಸದ ಅಚ್ಚರಿ ಅನಾವರಣ!

0

ಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿರುವ ಮನೆ ನೋಡಿದರೆ ಸಾಮಾನ್ಯ ಮನೆ, ಆದರೆ ಒಳಗೆ ಪ್ರವೇಶಿಸಿದರೆ ಚಾಲುಕ್ಯರ ಕಾಲದ ಪುರಾತನ ದೇವಸ್ಥಾನ ಕಾಣಿಸುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಲಕ್ಕುಂಡಿ ಗ್ರಾಮದ ಚೌಕಿಮಠ ಕುಟುಂಬದ ಮನೆಯ ಸಂಕೀರ್ಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನಗಳು ಇರುವುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಇದು ಚಾಲುಕ್ಯರ ಕಾಲಕ್ಕೆ ಸೇರಿದ ದೇವಸ್ಥಾನ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮನೆಯೊಳಗೆ ಸುಮಾರು ಹತ್ತು ಅಡಿ ಮಟ್ಟಿಗೆ ದೇವಸ್ಥಾನ ಮುಚ್ಚಿಹೋಗಿದ್ದು, ಅದರ ಐತಿಹಾಸಿಕ ಮಹತ್ವ ಇದೀಗ ಸರ್ಕಾರದ ಗಮನ ಸೆಳೆದಿದೆ. ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚೌಕಿಮಠ ಕುಟುಂಬದ ಶೇಖರಯ್ಯ ಚೌಕಿಮಠ ಅವರು ಪ್ರತಿಕ್ರಿಯಿಸಿ, “ಸರ್ಕಾರ ಸೂಕ್ತ ಪರಿಹಾರ ನೀಡಿದರೆ ದೇವಸ್ಥಾನವನ್ನು ಬಿಟ್ಟು ಕೊಡಲು ನಾವು ಸಿದ್ಧ” ಎಂದು ತಿಳಿಸಿದ್ದಾರೆ.

ಈ ಆವರಣದಲ್ಲಿ ಶರಣಯ್ಯ ಚೌಕಿಮಠ, ಶೇಖರಯ್ಯ ಚೌಕಿಮಠ, ಬಸವ್ವ ಈರಯ್ಯ ಚೌಕಿಮಠ, ಕೊಟ್ರಯ್ಯ ಚೌಕಿಮಠ, ಈರಮ್ಮ ಶಂಕ್ರಯ್ಯ ಚೌಕಿಮಠ ಕುಟುಂಬಗಳು ವಾಸವಿದ್ದು, ಎಲ್ಲರೂ ಬಡ ಕುಟುಂಬಗಳಾಗಿದ್ದಾರೆ. ಸರ್ಕಾರ ಪರಿಹಾರ ನೀಡಿದಲ್ಲಿ ಸಹಕಾರ ನೀಡುವುದಾಗಿ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.

ನಾಳೆ ಶಿವಕುಮಾರ ಶ್ರೀಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭಾಗಿ

0

ತುಮಕೂರು: “ನಡೆಯುವ ದೇವರು” ಎಂದೇ ಜನಮನದಲ್ಲಿ ನೆಲೆಸಿರುವ ಸಿದ್ದಗಂಗಾ ಶ್ರೀ ಶಿವಕುಮಾರ ಮಹಾಯೋಗಿಗಳ ಲಿಂಗೈಕ್ಯಕ್ಕೆ ನಾಳೆ 7 ವರ್ಷ. ಆದರೆ ಅವರ ಸೇವೆ, ತ್ಯಾಗ ಮತ್ತು ಮಾನವೀಯತೆ ಇಂದು ಕೂಡ ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದೆ.

ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಭವ್ಯ ಪುಣ್ಯ ಸಂಸ್ಮರಣೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ವಿಶೇಷವೆಂದರೆ, ಈ ಪವಿತ್ರ ಕಾರ್ಯಕ್ರಮಕ್ಕೆ ದೇಶದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸ್ವತಃ ಆಗಮಿಸಿ ಗೌರವ ಸಲ್ಲಿಸಲಿದ್ದಾರೆ.

ಬೆಳಗ್ಗೆ 10:50ಕ್ಕೆ ಮಠಕ್ಕೆ ಆಗಮಿಸುವ ಉಪರಾಷ್ಟ್ರಪತಿಗಳು, ಮೊದಲು ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಿ, ನಂತರ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ವಿ. ಸೋಮಣ್ಣ ಸಹ ಉಪಸ್ಥಿತರಿರಲಿದ್ದಾರೆ.

ಬೆಳಗ್ಗೆ 5 ಗಂಟೆಯಿಂದಲೇ ಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಮಂತ್ರಘೋಷಗಳೊಂದಿಗೆ ಗದ್ದಿಗೆ ಪೂಜೆ, ರುದ್ರಾಕ್ಷಿ ಮಂಟಪದಲ್ಲಿ ಪುತ್ಥಳಿ ಮೆರವಣಿಗೆ ಸೇರಿದಂತೆ ಭಕ್ತಿಭಾವದಿಂದ ಕೂಡಿದ ವಿಧಿವಿಧಾನಗಳು ನಡೆಯಲಿವೆ.

ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಸದ್ಗುರು ಮಧುಸೂದನ ಸಾಯಿ ಹಾಗೂ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಘನತೆ ನೀಡಲಿದ್ದಾರೆ.

ಸಿನಿಮಾ ಶೈಲಿಯಲ್ಲಿ ರೇಡ್; ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್!

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಒಂದೊಂದೇ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.

ಇತ್ತೀಚೆಗೆ ಮಂಗಳೂರು ಸಿಸಿಬಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 4 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಉಗಾಂಡ ಮೂಲದ ಮಹಿಳೆಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈ ಕಾರ್ಯಾಚರಣೆ ಬೆನ್ನಲ್ಲೇ ಇದೀಗ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿ ಬಳಿ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸುಮಾರು 106 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ಸುಮಾರು 53 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಿವಾಸಿಗಳಾದ ಅಬ್ದುಲ್ ಸಾದಿಕ್ (37) ಮತ್ತು ರಫೀಕ್ ಪಿ. (37) ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೂ ಮೊದಲು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೇರಳ ಮೂಲದ ಜೂಡ್ ಮಾಥ್ಯೂ (20) ಎಂಬ ಯುವಕನನ್ನು ಕದ್ರಿ ಪೊಲೀಸರು ಬಂಧಿಸಿದ್ದರು. ಎರ್ನಾಕುಲಂ ಜಿಲ್ಲೆಯ ನಿವಾಸಿಯಾಗಿರುವ ಆತ ಬೈಕ್‌ನಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ವೇಳೆ ಪದವು ಗ್ರಾಮದ ಕೈಲಾಸ ಕಾಲೋನಿ ಬಳಿ ದಾಳಿ ನಡೆಸಿ ಬೈಕ್ ಹಾಗೂ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಸೀಜ್ ಮಾಡಲಾದ ವಸ್ತುಗಳ ಮೌಲ್ಯ ಸುಮಾರು 70 ಸಾವಿರ ರೂ. ಎಂದು ತಿಳಿದುಬಂದಿದೆ.

ಇದಲ್ಲದೆ, ಇತ್ತೀಚೆಗೆ ಜಿಲ್ಲೆಯ ಆರು ಪೆಡ್ಲರ್‌ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆ ಜಲಿಯಾ ಝಲ್ವಾಂಗೋ ಅವರನ್ನು ಮಂಗಳೂರು ಸಿಸಿಬಿ ಪೊಲೀಸರು ಜಿಗಣಿ ಬಳಿ ಬಂಧಿಸಿದ್ದರು. ಆಕೆಯ ಬಳಿ 4 ಕೋಟಿ ರೂ. ಮೌಲ್ಯದ MDMA ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ರಾಜ್ಯಾದ್ಯಂತ ಗಮನ ಸೆಳೆದಿತ್ತು.

ಅಪಘಾತಕ್ಕೆ ಒಳಗಾದ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿ ಕಾರು: ಸ್ವತಃ ಸಹಾಯಕ್ಕೆ ಧಾವಿಸಿದ ನಟ

ಮುಂಬೈನಲ್ಲಿ ಸೋಮವಾರ ರಾತ್ರಿ ನಡೆದ ಅಪಘಾತದಲ್ಲಿ ಮರ್ಸಿಡೀಸ್ ಕಾರು ಆಟೋಗೆ ಡಿಕ್ಕಿ ಹೊಡೆದು, ನಂತರ ಇನೋವಾ ಕಾರಿಗೆ ಢಿಕ್ಕಿ ಹೊಡೆದಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಉರುಳಿ ಬಿದ್ದಿದೆ.

ವಿದೇಶ ಪ್ರವಾಸ ಮುಗಿಸಿ ಪತ್ನಿ ಟ್ವಿಂಕಲ್ ಖನ್ನಾ ಜೊತೆ ಅಕ್ಷಯ್ ಕುಮಾರ್ ಮುಂಬೈಗೆ ವಾಪಸ್ ಆಗಿದ್ದರು. ಏರ್‌ಪೋರ್ಟ್‌ನಿಂದ ಜುಹು ನಿವಾಸಕ್ಕೆ ತೆರಳುವ ವೇಳೆ ವೇಗವಾಗಿ ಬಂದ ಮರ್ಸಿಡಿಸ್ ಕಾರೊಂದು ಮೊದಲು ಆಟೋಗೆ ಡಿಕ್ಕಿ ಹೊಡೆದು, ನಂತರ ನೇರವಾಗಿ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿಯ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣವಾಗಿ ಪಲ್ಟಿ!

ಇದಷ್ಟೇ ಅಲ್ಲ, ಆ ಕಾರು ಅಕ್ಷಯ್ ಪ್ರಯಾಣಿಸುತ್ತಿದ್ದ ವಾಹನಕ್ಕೂ ತಾಕಿದೆ ಎನ್ನಲಾಗಿದೆ. ಸ್ಥಳದಲ್ಲಿ ಭಾರಿ ಗೊಂದಲ ಉಂಟಾಗಿ ಜನರು ಲೈವ್ ವೀಡಿಯೊ ರೆಕಾರ್ಡ್ ಮಾಡಲು ಆರಂಭಿಸಿದರು. ಕೆಲವೇ ಕ್ಷಣದಲ್ಲಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಘಟನೆ ನಡೆದ ತಕ್ಷಣ ಅಕ್ಷಯ್ ಕುಮಾರ್ ಸ್ವತಃ ಕಾರಿನಿಂದ ಇಳಿದು ಗಾಯಾಳುಗಳಿಗೆ ಸಹಾಯ ಮಾಡಿದ್ದು ವಿಶೇಷ. ಆಟೋ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ಮರ್ಸಿಡಿಸ್ ಚಾಲಕನ ನಿರ್ಲಕ್ಷ್ಯವೇ ಕಾರಣವೇ? ಅಥವಾ ಇನ್ನೇನಾದರೂ ಕಾರಣ ಇದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಸದ್ಯಕ್ಕೆ ಅಕ್ಷಯ್ ಕುಮಾರ್ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಈ ಘಟನೆ ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬಾಲಕಿಯನ್ನು ಕಾಮಿಸಿ ನಿರಂತರ ಕಿರುಕುಳ; ಕಾಮುಕ ಪೂಜಾರಿ ಕೊಂದ ಸಂತ್ರಸ್ತೆ ತಮ್ಮ!

0

ಬೆಳಗಾವಿ:- ಬಾಲಕಿಯೊಬ್ಬಳನ್ನು ಕಾಮಿಸಿ ನಿರಂತರವಾಗಿ ಕಾಡುತ್ತಿದ್ದ ಪೂಜಾರಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಜರುಗಿದೆ.

ರಾಜಾಪುರ ಗ್ರಾಮದ ನಿವಾಸಿ ಮಂಜುನಾಥ ಸುಭಾಷ್ ಎಣ್ಣಿ (23) ಕೊಲೆಯಾದ ವ್ಯಕ್ತಿ. ಮಂಜುನಾಥ ಕಳೆದ ಹಲವು ವರ್ಷಗಳಿಂದ ಅಪ್ರಾಪ್ತ ಯುವತಿಯನ್ನು ಹಿಂಬಾಲಿಸುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಯುವತಿಯ 17 ವರ್ಷದ ತಮ್ಮ ಹಲವು ಬಾರಿ ‘ಅಕ್ಕನ ಉಸಾಬರಿಗೆ ಬರಬೇಡ’ ಎಂದು ಎಚ್ಚರಿಕೆ ನೀಡಿದ್ದ. ಆದರೆ ಎಚ್ಚರಿಕೆಯನ್ನೂ ಲೆಕ್ಕಿಸದೆ ಮಂಜುನಾಥ ಯುವತಿಯನ್ನು ಕಾಡುತ್ತಿದ್ದ ಎನ್ನಲಾಗಿದೆ.

ಮಂಜುನಾಥ ಎಣ್ಣಿ ರಾಜಾಪುರ ಗ್ರಾಮದ ಚೂನಮ್ಮ ದೇವಿಯ ದೇವಸ್ಥಾನದ ಪೂಜಾರಿಯಾಗಿದ್ದ. ಬುಧವಾರ ಬೆಳಿಗ್ಗೆ ದೇವಾಲಯಕ್ಕೆ ಪೂಜೆ ಮಾಡಲು ಬಂದಿದ್ದ ವೇಳೆ, ದೇವಸ್ಥಾನದಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಅಪ್ರಾಪ್ತ ಬಾಲಕ, ಹಾರೆಯಿಂದ ಮಂಜುನಾಥನ ಮೇಲೆ ದಾಳಿ ನಡೆಸಿದ್ದಾನೆ. ಬೆನ್ನಿಗೆ ಬಲವಾಗಿ ಹಾರೆಯಿಂದ ಹೊಡೆದ ಪರಿಣಾಮ ಮಂಜುನಾಥ ಗಂಭೀರವಾಗಿ ಗಾಯಗೊಂಡು, ತೀವ್ರ ರಕ್ತಸ್ರಾವದಿಂದ ದೇವಸ್ಥಾನ ಆವರಣದಲ್ಲೇ ಪ್ರಾಣಬಿಟ್ಟಿದ್ದಾನೆ.

ಘಟನೆಗೆ ಸಂಬಂಧಿಸಿ ಘಟಪ್ರಭಾ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ದೊರೆತ ಮಾಹಿತಿ ಆಧರಿಸಿ ಆರೋಪಿಯಾಗಿರುವ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ಕ್ವಾಟ್ರಸ್‌ನಲ್ಲೇ ಶಾಸಕಿ ಮನೆಗೆ ಬೆದರಿಕೆ! ‘ಯಾರಿಗೂ ಹೆದರುವುದಿಲ್ಲ’ – ಮರಳು ಮಾಫಿಯಾಗೆ ಖಡಕ್ ಎಚ್ಚರಿಕೆ

0

ರಾಯಚೂರು: ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತುತ್ತಿರುವುದಕ್ಕೆ ಅಕ್ರಮ ಮರಳು ದಂಧೆಕೋರರು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ, ಅಕ್ರಮ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವದುರ್ಗ ತಾಲೂಕಿನಲ್ಲಿ ಯಾವುದೇ ಟೆಂಡರ್ ಇಲ್ಲದೇ ಲಾರಿಗಳ ಮೂಲಕ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದೆ ಎಂದು ಆರೋಪಿಸಿದರು.

ಟ್ರ್ಯಾಕ್ಟರ್ ಮೂಲಕ ಮರಳು ಸಾಗಣೆ ಮಾಡುವವರ ಪರವಾಗಿ ನಾನು ನಿಲ್ಲುತ್ತೇನೆ. ಆದರೆ ಲಾರಿ ಮಾಲೀಕರು ಟ್ರ್ಯಾಕ್ಟರ್ ಚಾಲಕರ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಕರೆಮ್ಮ ನಾಯಕ್ ಹೇಳಿದ್ದಾರೆ.

ಲಾರಿ ಮೂಲಕ ಅಕ್ರಮ ಮರಳುಗಾರಿಕೆ ನಡೆಸುವ ಶ್ರೀನಿವಾಸ ನಾಯಕ್ ಸೇರಿದಂತೆ ಕೆಲವರು ಪೊಲೀಸ್ ಕ್ವಾಟ್ರಸ್‌ನಲ್ಲಿರುವ ನನ್ನ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಇದು ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಶ್ರೀನಿವಾಸ ನಾಯಕ್, ರವಿ, ವಿರೇಶ್ ಗೌಡ, ಅಮರೇಶ್, ವಾಸು, ಹನುಮಂತ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಅಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳಲು ಹೆದರುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಷಯವನ್ನು ಸಿಎಂ ಮತ್ತು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಅಧಿವೇಶನದಲ್ಲಿ ಅಕ್ರಮ ಮರಳು ಸಾಗಣೆ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತೇನೆ. ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಕರೆಮ್ಮ ನಾಯಕ್ ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಬಿಗ್ ಶಾಕ್; ಪಿಯುಸಿ ಮಕ್ಕಳಿಗೆ ಇನ್ಮುಂದೆ ರಜೆ ಇಲ್ಲ!

0

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸ್ಟಡಿ ಹಾಲಿಡೇ ವ್ಯವಸ್ಥೆಯನ್ನು ರದ್ದುಪಡಿಸಿ ಹೊಸ ಮಾರ್ಗಸೂಚಿ ಜಾರಿಗೊಳಿಸಿದೆ.

ಪಿಯು ಫಲಿತಾಂಶದಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬರದ ಹಿನ್ನೆಲೆ, ಇನ್ನು ಮುಂದೆ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಫೆಬ್ರವರಿ 26ರವರೆಗೆ ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಉಪನ್ಯಾಸಕರ ನೇತೃತ್ವದಲ್ಲಿ ಗ್ರೂಪ್ ಸ್ಟಡಿ, ಪಠ್ಯ ಪುನರವಲೋಕನ, ಅನುಮಾನ ನಿವಾರಣೆ ಹಾಗೂ ಪ್ರಶ್ನೋತ್ತರ ಚರ್ಚೆಗಳ ಮೂಲಕ ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಸಿದ್ಧಪಡಿಸಲು ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ.

ಜೊತೆಗೆ ಉಪನ್ಯಾಸಕರು ಕೂಡ ಪರೀಕ್ಷೆ ಮುಗಿಯುವವರೆಗೂ ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು ಎಂದು ಇಲಾಖೆ ಆದೇಶಿಸಿದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಾಣಲಿದೆ ಎಂಬ ವಿಶ್ವಾಸವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ.

error: Content is protected !!