Home Blog Page 15

ಮಂಗಳೂರಿಗೆ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತು ತಂದ ಖಾರ್ಗೋ ಹಡಗು!

ಮಂಗಳೂರು: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ದೇಶದ ಮೇಲೂ ಬಿದ್ದಿದ್ದು, ಕಮರ್ಷಿಯಲ್ ಹಾಗೂ ಗೃಹ ಬಳಕೆಯ ಸಿಲಿಂಡರ್ ಅಭಾವ ತಲೆದೋರಿದೆ.

ಈ ಮಧ್ಯೆಯೇ ನವಮಂಗಳೂರು ಬಂದರಿಗೆ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಖಾರ್ಗೋ ಹಡಗು ಆಗಮಿಸಿದೆ. ಇರಾನ್ ಹಾಗೂ ಇಸ್ರೇಲ್ ಯುದ್ಧ ಶುರುವಾದ ಬಳಿಕ ರಾಜ್ಯಕ್ಕೆ ಆಗಮಿಸಿದ ಮೊದಲ ಹಡಗು ಇದಾಗಿದೆ. ಅಮೆರಿಕದ ಟೆಕ್ಸಾಸ್‍ನಿಂದ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಪಿಕ್ಸಿಸ್ ಪಯನೀರ್ ಎಂಬ ಹಡಗು ಮಂಗಳೂರಿನ ನವಮಂಗಳೂರು ಬಂದರಿಗೆ ಆಗಮಿಸಿದೆ.

ಏಜೀಸ್ ಕಂಪನಿಗೆ ಎಲ್‍ಪಿಜಿಯನ್ನು ಈ ಹಡಗು ತಂದಿದೆ. ಮಾ.14 ರಂದು ಅಮೇರಿಕದಿಂದ ಪಿಕ್ಸಿಸ್ ಪಯಿನೀರ್ ಕಾರ್ಗೋ ಹಡಗು ಹೊರಟಿತ್ತು. ಇಂದು ಮಂಗಳೂರಿಗೆ ತಲುಪಿದ್ದು, ರಾಜ್ಯದಲ್ಲಿ ತಲೆದೂರಿರುವ ಸಿಲಿಂಡರ್ ಅಭಾವ ಪರಿಹಾರ ಆಗುವ ನಿರೀಕ್ಷೆ ಇದೆ.

ಇನ್ನೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಕೊರತೆಯಿಂದ ಹೋಟೆಲ್‌ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಸಿಲಿಂಡರ್‌ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಹಲವು ಹೋಟೆಲ್‌ಗಳು ಆಹಾರ ಪದಾರ್ಥಗಳ ದರ ಹೆಚ್ಚಿಸಿದ್ದು, ಗ್ರಾಹಕರಿಗೂ ಬಿಸಿ ತಟ್ಟಿದಂತಾಗಿದೆ.

ಮಾರಕಾಸ್ತ್ರಗಳಿಂದ ಯುವಕನ ಬರ್ಬರ ಕೊಲೆ! ಕೃತ್ಯಕ್ಕೆ ಹಳೆಯ ದ್ವೇಷ ಕಾರಣವೇ?

ಬೆಂಗಳೂರು: ನಗರದ ರಾಮಮೂರ್ತಿನಗರ ಪ್ರದೇಶದಲ್ಲಿ ಭೀಕರ ಘಟನೆ ನಡೆದಿದೆ.

ಇಂದು ಮುಂಜಾನೆ ಸುಮಾರು 5 ಗಂಟೆಗೆ ಟಿ.ಸಿ. ಪಾಳ್ಯ ಮುಖ್ಯರಸ್ತೆಯಲ್ಲಿ 25 ವರ್ಷದ ಯುವಕ ಕಿರಣ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಘಟನೆ ತಕ್ಷಣ ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ವರದಿ ಪ್ರಕಾರ, ಕಿರಣ್ ವಿರುದ್ಧ ಕೆ.ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಹಳೆಯ ದ್ವೇಷವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಮುನ್ನರಾತ್ರಿ ಕೂಡ ಕಿರಣ್ ಕುಡಿದು ಗಲಾಟೆ ಮಾಡಿದ್ದು, ತಡರಾತ್ರಿವರೆಗೆ ವಾಗ್ವಾದ ನಡೆದ ನಂತರ ಮುಂಜಾನೆ ಈ ದಾಳಿ ನಡೆದಿರುವ ಸಾಧ್ಯತೆ ಇದೆ.

ಸ್ಥಳೀಯ ನಿವಾಸಿ ಗೋಪಾಲ್ ಮಾತನಾಡಿ, ಕಿರಣ್ ತನ್ನ ತಾಯಿಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿಸಿದ್ದಾರೆ. ಒಟ್ಟಾರೆ, ಈ ಕೊಲೆ ಪ್ರಕರಣ ನಗರದಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಚುರುಕುಗೊಂಡಿದ್ದಾರೆ.

ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದ ಲ್ಯಾಂಬೋರ್ಗಿನಿ ಕಾರ್ ಡ್ರಿಫ್ಟಿಂಗ್!? ಪೊಲೀಸರಿಂದ ನೋಟಿಸ್!

ಬೆಂಗಳೂರು: ನಗರದ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣದ ಸಂಬಂಧ ಲ್ಯಾಂಬೊರ್ಗಿನಿ ಕಾರನ್ನು ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರು ಡ್ರಿಫ್ಟಿಂಗ್ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೋಲಿಸರು, ರಿಕ್ಕಿ ರೈಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಕಾರಿನ ದಾಖಲೆಗಳು ಯಾರ ಹೆಸರಿನಲ್ಲಿವೆ ಎಂಬುದನ್ನು ಪರಿಶೀಲಿಸಲು ಆರ್‌ಟಿಒಗೆ ಪತ್ರ ಸಹ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪೊಲೀಸರು ಸಂಗ್ರಹಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಕಾರ್ ಡ್ರಿಫ್ಟಿಂಗ್ ವಿಡಿಯೋ ವೈರಲ್ ಆಗಿದ್ದು, ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಎರಡು–ಮೂರು ಬಾರಿ ಈ ರೀತಿಯ ಘಟನೆ ನಡೆದಿರುವುದಾಗಿ ದಾಖಲಾಗಿದೆ.

ನಾಯಿಗೆ ನೀಡುವ ಫುಡ್‌ ಪ್ಯಾಕೇಟ್‌ನಲ್ಲಿಟ್ಟು ಡ್ರಗ್ಸ್ ಸಾಗಾಟ: ಮೂವರು ಅರೆಸ್ಟ್, 9 ಕೋಟಿ ಮೌಲ್ಯದ ಮಾದಕವಸ್ತು ಸೀಜ್!

ಬೆಂಗಳೂರು: ಡಿಆರ್‌ಐ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 9 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಾಯಿಗೆ ನೀಡುವ ಫುಡ್‌ ಪ್ಯಾಕೇಟ್‌ನಲ್ಲಿಟ್ಟು ದೆಹಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ವೇಳೆ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಈ ವೇಳೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಆರೋಪಿ ಹಾಗೂ ಆತನ ಸಂಪರ್ಕದಲ್ಲಿದ್ದ ಮತ್ತಿಬ್ಬರನ್ನೂ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಬೆಂಗಳೂರಿನ ಮನೆಯಲ್ಲಿ 40 ಡೆಬಿಟ್ ಕಾರ್ಡ್, 70 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಅಲ್ಲದೇ ಮತ್ತಷ್ಟು ತನಿಖೆ ಚುರುಕುಗೊಳಿಸಿದ್ದಾರೆ.

ಕಾಗವಾಡದಲ್ಲಿ ಭಾರೀ ಅಗ್ನಿ ಅವಘಡ: 12ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮ!

ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ 12ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲಾಗಿದೆ.

ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಶಂಕೆ ಇದೆ. ಅಗ್ನಿ ಅವಘಡದಲ್ಲಿ ರಸಗೊಬ್ಬರ ಅಂಗಡಿ ಹೋಟೆಲ್, ಫೋಟೋ ಸ್ಟೋಡಿಯೋ, ಐಎಸ್‌ಕ್ರೀಂ ಅಂಗಡಿ, ನೀರಾವರಿ ಸಂಘ, ಕಚೇರಿ ಸೇರಿದಂತೆ ಹಲವು ವ್ಯಾಪಾರ ಮಳಿಗೆಗಳು ಬೆಂಕಿಗಾಹುತಿಯಾಗಿವೆ. ಕೆಲವು ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ.

ಘಟನೆ ಬೆನ್ನಲ್ಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ರಂಗೇರಿದ ಬೈ ಎಲೆಕ್ಷನ್ ಕಾವು: ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ‘ಕೈ’ ಅಭ್ಯರ್ಥಿಗಳ ಹೆಸರು ಘೋಷಣೆ!

ಬೆಂಗಳೂರು: ಸಾಕಷ್ಟು ಲೆಕ್ಕಾಚಾರ ಮತ್ತು ನಾಯಕರ ಸಲಹೆಗಳನ್ನು ಅವಲಂಬಿಸಿ ಕಾಂಗ್ರೆಸ್ ಪಕ್ಷ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ.

ಬಾಗಲಕೋಟೆಯಿಂದ ಉಮೇಶ್ ಮೇಟಿ ಮತ್ತು ದಾವಣಗೆರೆ ದಕ್ಷಿಣದಿಂದ ಶಾಮನೂರು ಕುಟುಂಬದ ಸಮರ್ಥ್ ಅಭ್ಯರ್ಥಿಗಳಾಗಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್​​ಗಾಗಿ ತೀವ್ರ ಪೈಪೋಟಿ ನಡೆದಿದ್ದು, ಈಗ ಬಿಜೆಪಿಯ ಎದುರು ಸ್ಪರ್ಧೆ ಕಠಿಣವಾಗಲಿದೆ.

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ್ ವಿರುದ್ಧ ಉಮೇಶ್ ಮೇಟಿ ಸ್ಪರ್ಧೆ ನಡೆಸಲಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಸ್ಪರ್ಧೆಗೆ ನಿಂತಿದ್ದಾರೆ.

ಒಟ್ಟಾರೆ ನಾಯಕರ ನಡುವಿನ ತೀವ್ರ ಜಿದ್ದಾ ಜಿದ್ದಿನ ಸ್ಪರ್ಧೆಯ ನಡುವೆ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್​​ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ.

ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅದಾಗಲೇ ಘೋಷಿಸಿದ್ದರೂ, ಕಾಂಗ್ರೆಸ್​​ ಮಾತ್ರ ಸಾಕಷ್ಟು ಅಳೆದು ತೂಗಿ ಕ್ಯಾಂಡಿಡೇಟ್​​ಗಳನ್ನು ಫೈನಲ್​​ ಮಾಡಿದೆ. ಏಪ್ರಿಲ್ 9ರಂದು ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಭೀಕರ ಅಪಘಾತ: ಕಾಶಿಗೆಂದು ಹೊರಟಿದ್ದ ಮೂವರು ಮಹಿಳೆಯರು ಸಾವು! ಘಟನೆ ಹೇಗಾಯ್ತು?

ದೇವನಹಳ್ಳಿ: ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜಯಮ್ಮ (60), ಯಶೋದಮ್ಮ (60), ಗಂಗಾ (38) ಮೃತರು. ಘಟನೆಯಲ್ಲಿ ಟಿಟಿ ವಾಹನ ಚಾಲಕ ಸೇರಿದಂತೆ 8 ಮಂದಿ ಗಾಯಗೊಂಡಿದ್ದು, ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಗಾಯಗೊಂಡ ಕೆಂಪಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನೆ ಹಿನ್ನೆಲೆ:

ಶಕ್ತಿ ಸಂಘಟನೆಯ ಮೂಲಕ 12 ಜನರ ತಂಡ 15 ದಿನಗಳ ಪ್ರವಾಸಕ್ಕೆ ತಿಪಟೂರಿನಿಂದ ಹೊರಟಿತ್ತು. ಇಂದು ಬೆಳಗ್ಗೆ 6 ಗಂಟೆಯ ಪ್ಲೈಟ್ ನಲ್ಲಿ ಕಾಶಿಗೆ ಟಿಕೆಟ್ ಬುಕ್ ಮಾಡಿತ್ತು. ಹೀಗಾಗಿ ತಿಪಟೂರಿನಿಂದ ಕೆಂಪೇಗೌಡ ಏರ್ಪೋರ್ಟ್​​ಗೆ ಟಿಟಿ ವಾಹನದ ಮೂಲಕ ರಾತ್ರಿ 10 ಗಂಟೆ ಸುಮಾರಿಗೆ ಹೊರಟಿದ್ದರು. ಏರ್​​ಪೋರ್ಟ್​​ನ ಟರ್ಮಿನಲ್​​ ದಾರಿಯ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಗೂಗಲ್ ಮ್ಯಾಪ್ ಹಾಕಿಕೊಂಡು ಟಿಟಿ ಚಾಲಕ ವಾಹನ ಚಾಲನೆ ಮಾಡುತ್ತಿದ್ದ. ಅಪಘಾತ ನಡೆದ ಸ್ಥಳಕ್ಕೂ ಹಿಂದೆಯೇ ಸರ್ವೀಸ್​​ ರಸ್ತೆಗೆ ಮೊದಲ ಟರ್ನಿಂಗ್ ಇತ್ತು. ಆದರೆ ಅದು ಗೊತ್ತಾಗದೆ ಮುಂದೆ ಪಾಸ್ ಆಗಿದ್ದ ಟಿಟಿ ವಾಹನ ಮುಂದಿನ ಟರ್ನಿಂಗ್​​ನಲ್ಲಿ ಯೂಟರ್ನ್​​ ಪಡೆಯುವ ವೇಳೆ ಲಾರಿ ಟಿಟಿಗೆ ಡಿಕ್ಕಿಯಾಗಿದೆ.

ಅಪಘಾತದ ರಭಸಕ್ಕೆ ಟಿಟಿಯ ಎಡಭಾಗ ಸಂಪೂರ್ಣ ಜಖಂ ಆಗಿದ್ದು, ಸಿಂಗಲ್ ಸೀಟ್ಗಳಲ್ಲಿ ಕುಳಿತಿದ್ದ ಮೂವರು ಮಹಿಳೆಯರ ದುರ್ಮರಣ ಹೊಂದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಭೀಕರ ಅಪಘಾತ: ನಿಂತಿದ್ದ ಈಚರ್ ವಾಹನಕ್ಕೆ ಗೂಡ್ಸ್ ಆಟೋ ಡಿಕ್ಕಿ- ಮೂವರು ಸಾವು

ಬೆಂಗಳೂರು: ಬೆಂಗಳೂರಿನ ಕೆ.ಆರ್​​.ಪುರಂ ಸಂಚಾರ ಠಾಣಾ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಭೀಕರ ಅಪಘಾತ ಸಂಭವಿಸಿದೆ.

ನಿಂತಿದ್ದ ಈಚರ್​ ವಾಹನಕ್ಕೆ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಮಣಿಕಂಠ, ಸುರೇಶ್, ಶ್ರೀನಿವಾಸ್ ಮೃತರು. ಇವರುಗಳು ವೈಟ್ ಫೀಲ್ಡ್ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ತುಂಬಿಸಿಕೊಂಡು ಬರ್ತಿದ್ದ ಕ್ಯಾಂಟರ್ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಟೈರ್ ಬ್ಲ್ಯಾಸ್ಟ್​​​ ಆಗಿ ನಿಂತಿತ್ತು. ರಸ್ತೆ ಬದಿ ಕ್ಯಾಂಟರ್ ನಿಲ್ಲಿಸಿ ಚಾಲಕ ಟೈರ್ ಚೇಂಜ್ ಮಾಡುತ್ತಿದ್ದ. ಇದೇ ವೇಳೆ ನಿಂತಿದ್ದ ಕ್ಯಾಂಟರ್​​​ಗೆ ಹಿಂದೆಯಿಂದ ಗೂಡ್ಸ್ ಆಟೋ ಡಿಕ್ಕಿಯಾಗಿದೆ. ಪರಿಣಾಮ ದುರಂತ ಸಂಭವಿಸಿದೆ.

ಸ್ಥಳಕ್ಕೆ ಡಿಸಿಪಿ ನೇಮಗೌಡ ಮತ್ತು ಕೆ.ಆರ್.ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನಿರ್ಬಂಧದ ನಡುವೆಯೂ ಅಂಜನಾದ್ರಿ ಬೆಟ್ಟ ಏರಿದ ಪುನೀತ್ ಕೆರೆಹಳ್ಳಿ: ಪೊಲೀಸರೊಂದಿಗೆ ವಾಗ್ವಾದ

0

ಕೊಪ್ಪಳ: ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ವಿಧಿಸಿದ್ದ ಪ್ರವೇಶ ನಿರ್ಬಂಧಕ್ಕೂ ಸವಾಲು ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಶ್ರೀರಾಮ ಸೇನೆಯ ಕಾರ್ಯಕರ್ತ ಪುನೀತ್ ಕೆರಹಳ್ಳಿ, ನಿಷೇಧವನ್ನು ಲೆಕ್ಕಿಸದೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಮಾರ್ಚ್ 21ರಿಂದ 23ರವರೆಗೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರಹಳ್ಳಿಗೆ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಆದೇಶ ಹೊರಡಿಸಿದ್ದರು. ಶಿವಾಜಿ ಜಯಂತೋತ್ಸವದ ಹಿನ್ನೆಲೆಯಲ್ಲಿ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವ ಸಾಧ್ಯತೆ ಇದ್ದುದರಿಂದ ಈ ಕ್ರಮ ಕೈಗೊಳ್ಳಲಾಗಿತ್ತು.

ಆದರೆ ಈ ಆದೇಶವನ್ನು ಪ್ರಶ್ನಿಸಿದ ಕೆರಹಳ್ಳಿ, ಅಂಜನಾದ್ರಿ ಬೆಟ್ಟಕ್ಕೆ ತೆರಳಿ, ನೋಟಿಸ್ ನೀಡಲು ಬಂದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. “ಇದು ನಕಲಿ ನೋಟಿಸ್” ಎಂದು ಹೇಳಿ, ದರ್ಶನ ಮಾಡುವುದಾಗಿ ಹಠ ಹಿಡಿದರು. ಪರಿಸ್ಥಿತಿ ತೀವ್ರಗೊಂಡಿದ್ದರೂ, ಕೊನೆಗೆ ಪೊಲೀಸರ ಸಮ್ಮುಖದಲ್ಲೇ ಅವರು ಬೆಟ್ಟ ಏರಿದ್ದಾರೆ.

ಕನಕಗಿರಿಯಲ್ಲಿ ನಡೆದ ಹಿಂದಿನ ಕಾರ್ಯಕ್ರಮದಲ್ಲಿ ನೀಡಿದ ಪ್ರಚೋದನಾತ್ಮಕ ಭಾಷಣದಿಂದಲೇ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ಹಿನ್ನೆಲೆ ಈ ಬಾರಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಕಠಿಣ ನಿರ್ಬಂಧ ವಿಧಿಸಿತ್ತು.

ಈ ಘಟನೆ ಕಾನೂನು ಜಾರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎಬ್ಬಿಸುವುದರ ಜೊತೆಗೆ, ಸಾರ್ವಜನಿಕ ಶಾಂತಿ ಕಾಪಾಡುವಲ್ಲಿ ಆಡಳಿತದ ಸವಾಲುಗಳನ್ನೂ ಮತ್ತೆ ಬೆಳಕಿಗೆ ತಂದಿದೆ.

ಹೂ ಬೆಳೆಗಾರರ ಕಣ್ಣೀರು: ಅಕಾಲಿಕ ಮಳೆಯಿಂದ ಕೈ ಸುಟ್ಟುಕೊಂಡ ರೈತರು

0

ಗದಗ: ಯುಗಾದಿ ಹಬ್ಬದ ಹೂವಿನ ಸುವಾಸನೆ ಬದಲು ಈ ಬಾರಿ ಗದಗ ಜಿಲ್ಲೆಯ ರೈತರ ಮನೆಯಲ್ಲಿ ದುಃಖದ ವಾಸನೆ ಹರಡಿದೆ. ಅಕಾಲಿಕ ಮಳೆ ಹೂ ಬೆಳೆಗಾರರ ಬದುಕಿನ ಮೇಲೆ ಭಾರೀ ಪ್ರಹಾರ ಬೀರಿದೆ.

ಲಕ್ಕುಂಡಿ, ಕಣವಿ, ಹೊಸೂರು, ದಂಬಳ, ಕಡಕೋಳ ಹಾಗೂ ಕಪ್ಪತ್ತಗುಡ್ಡ ಪಾದಭಾಗದ ಗ್ರಾಮಗಳಲ್ಲಿ ವರ್ಷಪೂರ್ತಿ ಹೂ ಬೆಳೆಸುತ್ತಿದ್ದ ರೈತರು, ಈ ಬಾರಿ ಯುಗಾದಿಗೆ ದೊಡ್ಡ ಕನಸು ಕಂಡಿದ್ದರು. ಕಳೆದ ದೀಪಾವಳಿಯಲ್ಲಿ ಉತ್ತಮ ಲಾಭ ಕಂಡಿದ್ದ ಅವರು, ಮತ್ತೆ ಅದೇ ಯಶಸ್ಸಿನ ನಿರೀಕ್ಷೆಯಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಚಂಡು ಹೂ, ಸೇವಂತಿಗೆ ಮತ್ತು ಮಲ್ಲಿಗೆ ಬೆಳೆದಿದ್ದರು.

ಪಕ್ಕದ ಜಿಲ್ಲೆಗಳಿಂದ ದೊಡ್ಡ ಆರ್ಡರ್‌ಗಳೂ ಬಂದಿದ್ದವು. ಆದರೆ ನಾಲ್ಕು ದಿನಗಳ ಹಿಂದೆ ಸುರಿದ ಮಳೆ ಎಲ್ಲ ನಿರೀಕ್ಷೆಗಳನ್ನೂ ನೆಲಕಚ್ಚಿಸಿದೆ. ತೇವಾಂಶದಿಂದ ಹೂಗಳು ಕೊಳೆತು, ಮಾರಾಟಕ್ಕೇ ಬಾರದ ಸ್ಥಿತಿ ನಿರ್ಮಾಣವಾಗಿದೆ.

ಒಮ್ಮೆ 300 ರೂ.ಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಈಗ 150 ರೂ.ಗೂ ಸಿಗದ ಸ್ಥಿತಿ. ಯುಗಾದಿ ವೇಳೆಯಲ್ಲಿ 500–700 ರೂ. ತಲುಪುತ್ತಿದ್ದ ಬೆಲೆ ಈ ಬಾರಿ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಚಂಡು ಹೂ ಬೆಲೆ ಕೂಡ 350ರಿಂದ 100ಕ್ಕೆ ಕುಸಿದಿದೆ.

ಗುಣಮಟ್ಟ ಕುಸಿತ, ಬೆಲೆ ಪತನ—ಇದರ ಮಧ್ಯೆ ರೈತರು ಹೂಗಳನ್ನು ಕಸವಾಗಿಸುವ ಪರಿಸ್ಥಿತಿಯಲ್ಲಿದ್ದಾರೆ. ಹಬ್ಬದ ಸಮಯದಲ್ಲೇ ಅನ್ನದಾತನ ಕೈ ಖಾಲಿಯಾಗಿರುವುದು ದುಃಖದ ಸಂಗತಿ.

ಇನ್ನೊಂದೆಡೆ, ರಾಜ್ಯಾದ್ಯಂತ ಸುರಿದ ಆಲಿಕಲ್ಲು ಮಳೆ ರೈತರ ಸಂಕಷ್ಟವನ್ನು ಇನ್ನಷ್ಟು ಗಂಭೀರಗೊಳಿಸಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು 56,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಹೇಳಿ, ಸರ್ಕಾರ ತಕ್ಷಣ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಉತ್ತರ ಕರ್ನಾಟಕದಿಂದ ದಕ್ಷಿಣ ಭಾಗದವರೆಗೆ ಜೋಳ, ಕಡಲೆ, ಗೋಧಿ, ಮೆಕ್ಕೆಜೋಳ, ಮಾವು, ಹಲಸು, ಕಲ್ಲಂಗಡಿ ಸೇರಿದಂತೆ ಅನೇಕ ಬೆಳೆಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆ, ರೈತರಿಗೆ ತಕ್ಷಣ ವಿಶೇಷ ಪ್ಯಾಕೇಜ್ ಘೋಷಿಸುವ ಅಗತ್ಯ ತುರ್ತು ಎಂದು ಒತ್ತಡ ಹೆಚ್ಚಾಗಿದೆ.

error: Content is protected !!