ಮೈಸೂರು: ಯುವತಿಯೊಬ್ಬಳ ವಿವಾಹಕ್ಕೆ ಕೆಲವೇ ದಿನಗಳು ಬಾಕಿ ಇದ್ದ ವೇಳೆ, ಆಕೆಯ ಹಳೆಯ ಪರಿಚಯವನ್ನು ದುರುಪಯೋಗಪಡಿಸಿಕೊಂಡು ನಿರಂತರ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಟಿ. ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ನಡೆದಿದೆ.
ಶಿವಣ್ಣ, ಅವರ ಪತ್ನಿ ನಾಗರತ್ನ ಹಾಗೂ ಪುತ್ರಿ ರಕ್ಷಿತಾ ಮೃತರು. ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ ಉಲ್ಲಾಸ್ ಗೌಡ ಎಂಬಾತನ ಹೆಸರು ಉಲ್ಲೇಖವಾಗಿದ್ದು, ಆತನ ಕಿರುಕುಳದಿಂದ ಬದುಕಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿರುವುದು ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ರಕ್ಷಿತಾಳ ವಿವಾಹ ಇದೇ ತಿಂಗಳ 23 ಹಾಗೂ 24ರಂದು ನಡೆಯಬೇಕಿತ್ತು. ಆದರೆ, ಉಲ್ಲಾಸ್ ಗೌಡ ಎಂಬಾತ ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಮದುವೆ ನಿಲ್ಲಿಸಲು ಯತ್ನಿಸಿದ್ದ. ಈ ಸಂಬಂಧ ಗ್ರಾಮದಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾಯತಿಯೂ ನಡೆದಿತ್ತು.
ಆದರೂ ಆತ ತನ್ನ ಕೃತ್ಯ ನಿಲ್ಲಿಸದೇ, ರಕ್ಷಿತಾಳೊಂದಿಗೆ ಈ ಹಿಂದೆ ನಡೆದಿದ್ದ ಖಾಸಗಿ ಸಂಭಾಷಣೆಗಳ ಮೆಸೇಜ್‌ಗಳು ಹಾಗೂ ಫೋಟೋಗಳನ್ನು ಆಧಾರವನ್ನಾಗಿ ಮಾಡಿಕೊಂಡು ಆಕೆಗೆ ನಿರಂತರ ಮಾನಸಿಕ ಒತ್ತಡ ಹೇರಿದ್ದ ಎನ್ನಲಾಗಿದೆ. ಅಲ್ಲದೆ, ವಿವಾಹ ನಿಶ್ಚಯವಾಗಿದ್ದ ಯುವಕನಿಗೂ ಆ ಮಾಹಿತಿ ಕಳುಹಿಸಿದ್ದರಿಂದ ಕುಟುಂಬ ಮಾನಸಿಕವಾಗಿ ಕುಸಿದಿತ್ತು.
ತೀವ್ರ ಅವಮಾನ ಮತ್ತು ಒತ್ತಡದಿಂದ ನೊಂದ ಕುಟುಂಬದ ಮೂವರು ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುದ್ದಿ ತಿಳಿಯುತ್ತಿದ್ದಂತೆ ವರುಣಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡೆತ್‌ನೋಟ್ ಆಧರಿಸಿ ತನಿಖೆ ಆರಂಭಿಸಿದ್ದು, ಆರೋಪಿತನ ಪಾತ್ರದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುತ್ತಿದ್ದಾರೆ.



