Home Blog Page 15

2032–33ರ ವೇಳೆಗೆ ಮಹಿಳಾ ಮೀಸಲಾತಿ ಜಾರಿ ಸಾಧ್ಯ: ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನೀಡಿರುವ 33% ಮೀಸಲಾತಿ ಮುಂದಿನ ದಿನಗಳಲ್ಲಿ ಸಂಸದೀಯ ವ್ಯವಸ್ಥೆಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಮಾಹಿತಿಯ ಪ್ರಕಾರ 2032–33ರ ವೇಳೆಗೆ ಮಹಿಳಾ ಮೀಸಲಾತಿ ಸಂಪೂರ್ಣವಾಗಿ ಜಾರಿಗೆ ಬರಬಹುದು ಎಂದು ತಿಳಿಸಿದರು.

33% ಮಹಿಳಾ ಮೀಸಲಾತಿ ಜಾರಿಗೆ ಬಂದರೆ ವಿಧಾನಸಭೆಯಲ್ಲಿ ಸುಮಾರು 75 ಮಹಿಳೆಯರು ಶಾಸಕರಾಗಿ ಆಯ್ಕೆಯಾಗಬಹುದು. ಎಲ್ಲ ಪಕ್ಷಗಳ ಮಹಿಳೆಯರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಹಿಳಾ ಮುಖ್ಯಮಂತ್ರಿಯೂ ಆಗುವ ಅವಕಾಶ ಇದೆ ಎಂದು ಹೇಳಿದರು.

ಇಂದಿನ ದಿನದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರಲು ನರೇಂದ್ರ ಮೋದಿ ಅವರ ಸಂಕಲ್ಪ ಪ್ರಮುಖ ಕಾರಣ. ಇದರ ಕನಸು ಕಂಡವರು ಎಚ್.ಡಿ ದೇವೇಗೌಡ. ಮಹಿಳೆಯರ ಅಭಿವೃದ್ಧಿಗೆ ದೇವೇಗೌಡರು ಹಲವಾರು ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ 70% ಮಹಿಳಾ ಶಿಕ್ಷಕರನ್ನು ನೇಮಕ ಮಾಡಿದವರು ದೇವೇಗೌಡರು ಎಂದು ಕುಮಾರಸ್ವಾಮಿ ಹೇಳಿದರು.

‘ಲವ್ ಮಾಕ್ಟೇಲ್ 3’ ಟ್ರೈಲರ್ ರಿಲೀಸ್:‌ ಗೋವಾದಲ್ಲಿ ಹೊಳೆದ ಐಡಿಯಾ

ಲವ್ ಮಾಕ್ಟೇಲ್ 3 ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಣದ ಹಿಂದೆ ಇರುವ ಆಸಕ್ತಿದಾಯಕ ವಿಚಾರಗಳನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಹಂಚಿಕೊಂಡರು.

ಈ ವೇಳೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, “ಒಂದು ಕ್ಷಣದಲ್ಲಿ ಈ ಸಿನಿಮಾದ ಕಥೆಯ ಐಡಿಯಾ ಹೊಳೆಯಿತು. ನಂತರ ಮನೆಯಲ್ಲಿ ಕಥೆ ಬರೆಯಲು ಆಗಲಿಲ್ಲ. ಮೂರು ದಿನಗಳ ಕಾಲ ಗೋವಾಗೆ ಹೋಗಿ ಅಲ್ಲಿಯೇ ಕಥೆ ಹಾಗೂ ಚಿತ್ರಕಥೆಗೆ ರೂಪುರೇಷೆ ಕೊಟ್ಟು ಮತ್ತೆ ಮರಳಿದ್ದೆ” ಎಂದು ಕಥೆ ಹುಟ್ಟಿದ ಬಗೆಯನ್ನು ವಿವರಿಸಿದರು.

ಇದೇ ವೇಳೆ ಮಾತನಾಡಿದ ಮಿಲನಾ ನಾಗರಾಜ್, “ಈ ಸಿನಿಮಾ ದೊಡ್ಡ ಸಿನಿಮಾಗಳ ಎದುರಲ್ಲೂ ಆತ್ಮವಿಶ್ವಾಸದಿಂದ ತೆರೆಗೆ ಬರಲು ಸಿದ್ಧವಾಗಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂಬ ನಂಬಿಕೆ ನಮಗಿದೆ. ಮೊದಲ ಎರಡು ಭಾಗಗಳಿಗೆ ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಪ್ರೋತ್ಸಾಹವನ್ನು ಈ ಚಿತ್ರಕ್ಕೂ ನೀಡುತ್ತಾರೆ ಎಂಬ ವಿಶ್ವಾಸವಿದೆ” ಎಂದರು.

ಚಿತ್ರದಲ್ಲಿ ನಟಿಸಿರುವ ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೆಚೆಲ್ ಡೇವಿಡ್, ಶ್ವೇತಾ ಪ್ರಸಾದ್ ಸೇರಿದಂತೆ ಹಲವರು ತಮ್ಮ ಪಾತ್ರಗಳ ಬಗ್ಗೆ ವಿವರಿಸಿ, ಈ ಅವಕಾಶ ನೀಡಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಗೆ ಕೃತಜ್ಞತೆ ಸಲ್ಲಿಸಿದರು.

ಕ್ರಿಸ್‌ಮಿ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರೆಚೆಲ್ ಡೇವಿಡ್, ನಯಾರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಸೇರಿದಂತೆ ಹಲವರು ನಟಿಸಿದ್ದಾರೆ.

ಚಿತ್ರಕ್ಕೆ ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಹಾಗೂ ಜೋನಾ ಕಲಾ ನಿರ್ದೇಶನ ನೀಡಿದ್ದಾರೆ.

ದಲಿತ ಸಚಿವರಿಂದಲೇ ದಲಿತರಿಗೆ ಅನ್ಯಾಯ: ಮಹದೇವಪ್ಪ ವಿರುದ್ಧ ಶಿವನಗೌಡ ನಾಯಕ್ ವಾಗ್ದಾಳಿ

0

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಎಸ್‌ಸಿ–ಎಸ್‌ಟಿ ನಾಯಕರ ಬೃಹತ್ ಜನಾಂದೋಲನದಲ್ಲಿ ಮಾಜಿ ಸಚಿವ ಕೆ. ಶಿವನಗೌಡ ನಾಯಕ್ ಅವರು ಸಚಿವ ಎಚ್.ಸಿ ಮಹದೇವಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು, “ದಲಿತ ಸಚಿವನಿಂದಲೇ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು. ನಾವು ಮದಕರಿ ನಾಯಕರ ವಂಶಸ್ಥರು. ಅನ್ಯಾಯದ ವಿರುದ್ಧ ಬೇಟೆಯಾಡುವವರು. ದಲಿತ ಸಚಿವ ಮಹದೇವಪ್ಪ ಅವರಿಂದಲೇ ನಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ತೀವ್ರವಾಗಿ ಮಾತನಾಡಿದ ಅವರು, “ಅವರು ಸಿಕ್ಕರೆ ಕಪಾಳಕ್ಕೆ ಹೊಡೆಯಬೇಕು ಅನಿಸುತ್ತದೆ” ಎಂದು ಹೇಳುವ ಮೂಲಕ ಮಹದೇವಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಹೋರಾಟಕ್ಕೆ ಬರುವವರು ಧೈರ್ಯದಿಂದ ಬರಬೇಕು. “ಮೀಸಲಾತಿ ಪಡೆದುಕೊಂಡು ಧೀರರಾಗಿ ಬರುತ್ತೇವೆ ಅಥವಾ ಶವವಾಗಿ ಬರುತ್ತೇವೆ ಎಂದು ಮನೆಯಲ್ಲಿ ಹೇಳಿಯೇ ಬನ್ನಿ” ಎಂದು ಅವರು ಹೋರಾಟಗಾರರಿಗೆ ಕರೆ ನೀಡಿದರು. ಈ ಹೋರಾಟದಲ್ಲಿ ಏನೇ ಆದರೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕೆ ಬಜೆಟ್ ಸಹಕಾರಿ: ಅನ್ವರ ಶಿರಹಟ್ಟಿ

0

ಗದಗ: ಮಳೆ, ಬಿಸಿಲು, ಛಳಿ ಮತ್ತು ಧೂಳು ಎನ್ನದೆ ಶ್ರಮಪಟ್ಟು ಜೀವನ ಸಾಗಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳು ಕೋವಿಡ್ ಸಂಕಷ್ಟದ ಸಮಯದಲ್ಲೂ ಜನರಿಗೆ ಆಹಾರ ತಲುಪಿಸುವಲ್ಲಿ ಮಹತ್ವದ ತ್ಯಾಗ ಮಾಡಿದ್ದರು. ಇಂತಹ ವ್ಯಾಪಾರಿಗಳ ಅಭಿವೃದ್ಧಿಗೆ ಸಹಾಯಕವಾಗುವ ಬಜೆಟ್ ಅನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವುದು ಸ್ವಾಗತಾರ್ಹವಾಗಿದೆ ಎಂದು ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ಸಂಘದ ನಿರ್ದೇಶಕ ಹಾಗೂ ನೆಟ್ವರ್ಕ್ ಅಸೋಸಿಯೇಟೆಡ್ ಸ್ಟ್ರೀಟ್ ವೆಂಡರ್ಸ್ ಆಫ್ ಕರ್ನಾಟಕದ ಸಂಚಾಲಕ ಅನ್ವರ ಶಿರಹಟ್ಟಿ ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಸಮೀಕ್ಷೆ ನಡೆಸುವುದು, ಗುರುತಿನ ಚೀಟಿ ವಿತರಣೆ, ಮಾರಾಟ ಪರವಾನಗಿ (ಮಾರಾಟ ಪತ್ರ) ನೀಡುವುದು ಹಾಗೂ ಪಟ್ಟಣ ಮಾರಾಟ ಸಮಿತಿಗಳ ರಚನೆಗಾಗಿ ರಾಜ್ಯ ಬಜೆಟ್‌ನಲ್ಲಿ ಏಳು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಸಂತೋಷದ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕ್ರಮವು ರಾಜ್ಯದ ಬೀದಿ ಬದಿ ವ್ಯಾಪಾರಿಗಳ ಸರ್ವಾಂಗೀಣ ಅಭಿವೃದ್ಧಿಗೆ ದಾರಿಯಾಗಲಿದೆ ಎಂದು ಹೇಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಅನ್ವರ ಶಿರಹಟ್ಟಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ತುಮಕೂರು| ವಿದ್ಯುತ್ ಶಾಕ್​​ ತಗುಲಿ ಲೈನ್​​ಮ್ಯಾನ್ ಸಾವು!

ತುಮಕೂರು:- ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸುವಾಗ ಶಾಕ್​ ತಗುಲಿ ಲೈನ್​​ಮ್ಯಾನ್​​ ಮೃತಪಟ್ಟಿರುವ ಘಟನೆ ಜರುಗಿದೆ.

26 ವರ್ಷದ ಕೆ.ಪಿ. ಮನು ಮೃತ ದುರ್ದೈವಿ. ಈತನ ಪತ್ನಿ 9 ತಿಂಗಳ ತುಂಬು ಗರ್ಭಿಣಿ ಎನ್ನಲಾಗಿದೆ. ಟಿಸಿ ಬದಲಾಯಿಸುವ ವೇಳೆ ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದ ಆರೋಪ ಕೇಳಿಬಂದಿದ್ದು, ಲೈನ್​​ಮ್ಯಾನ್​​ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಮತ್ತು ​ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ.

ಘಟನೆ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

‘ಶಿಸ್ತು ಹೆಸರಿನಲ್ಲಿ ಅವಮಾನ’: ವಿದ್ಯಾರ್ಥಿಗಳಿಗೆ ಚಪ್ಪಲಿ ಹಾರ ಹಾಕಿದ ಶಾಲೆ ಮೇಲೆ ತನಿಖೆ

ಅಮರಾವತಿ: ಉಯ್ಯೂರುದಲ್ಲಿರುವ ವಿಜಯಸಾಯಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶಿಸ್ತು ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ. ಶೂ ಧರಿಸದೆ ಬಂದ ಕಾರಣಕ್ಕೆ 10ನೇ ತರಗತಿಯ ವಿದ್ಯಾರ್ಥಿಗಳ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಶಿಕ್ಷೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪದ್ಮರಾಣಿ ಮತ್ತು ದುರ್ಗಾ ಪ್ರಸಾದ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳನ್ನು ಅವಮಾನಿಸಿದ ಶಾಲಾ ಸಿಬ್ಬಂದಿಯನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದು, “ಮಕ್ಕಳು ಶಾಲೆಯ ಶಿಸ್ತು ನಿಯಮ ಉಲ್ಲಂಘಿಸಿದ್ದರಿಂದ ಅವರನ್ನು ಭಯಪಡಿಸಲು ಈ ರೀತಿಯ ಶಿಕ್ಷೆ ನೀಡಲಾಗಿದೆ” ಎಂದು ಹೇಳಿದ್ದಾರೆ.

ಇದಕ್ಕೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಶೂ ಧರಿಸಿ ಬರಲಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಈ ರೀತಿಯಾಗಿ ಅವಮಾನಿಸುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತಿದ್ದು, ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಭಾರತಕ್ಕೆ ಯಾರ ಅನುಮತಿಯೂ ಬೇಡ’: ಅಮೆರಿಕ ಹೇಳಿಕೆಗೆ ಕಮಲ್ ಹಾಸನ್ ತಿರುಗೇಟು

ನವದೆಹಲಿ: ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಇತ್ತೀಚೆಗೆ ಭಾರತಕ್ಕೆ ರಷ್ಯಾ ತೈಲ ಖರೀದಿಸಲು 30 ದಿನಗಳ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದರು. ಇದರಿಂದ ರಾಜಕೀಯ ಚರ್ಚೆ ತೀವ್ರಗೊಂಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಮಲ್ ಹಾಸನ್, “ಭಾರತವು ಸ್ವತಂತ್ರ ರಾಷ್ಟ್ರ. ಇತರ ದೇಶಗಳ ಅನುಮತಿಯ ಮೇಲೆ ನಾವು ಅವಲಂಬಿತರಾಗಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದರ ನಡುವೆಯೇ ಇರಾನ್ಅಮೆರಿಕಇಸ್ರೇಲ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ತೈಲ ಪೂರೈಕೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಲ್ಲೂ ಭಾರತ ಕಡಿಮೆ ಬೆಲೆಗೆ ದೊರೆಯುವ ಯಾವುದೇ ಮೂಲದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ನಿರ್ಧಾರ ಸರಿಯಲ್ಲ: ವಾಟಾಳ್ ನಾಗರಾಜ್

ಮೈಸೂರು: ರಾಜ್ಯ ಸರ್ಕಾರ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಿದೆ. ತಮ್ಮ 17ನೇ ದಾಖಲೆಯ ಬಜೆಟ್ ವೇಳೆ ಸಿಎಂ ಸಿದ್ದರಾಮಯ್ಯ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಈ ನಿರ್ಧಾರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಈ ನಿರ್ಧಾರವನ್ನು ಖಂಡಿಸಿದ್ದಾರೆ. ಮಕ್ಕಳಿಗೆ ಮೊಬೈಲ್ ಬ್ಯಾನ್ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮನೆಯಲ್ಲಿ ಮಕ್ಕಳು ಅವರ ಅಪ್ಪ, ಅಮ್ಮನ ಮೊಬೈಲ್ ಎತ್ತಿಕೊಂಡು ನೋಡುತ್ತಾರೆ. ಅವರನ್ನು ಏನು ಮಾಡಲು ಆಗುತ್ತೆ, ಜೈಲಿಗೆ ಹಾಕುವುದಕ್ಕೆ ಆಗುತ್ತಾ? ಕೊರೊನಾ ಸಂದರ್ಭದಲ್ಲಿ ಆನ್​ಲೈನ್ ಕ್ಲಾಸ್ ಏಕೆ ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಬಜೆಟ್​ನಲ್ಲಿ ಕನ್ನಡ ಶಾಲೆಗಳ ಕಡೆಗಣನೆ ಹಿನ್ನೆಲೆ ಇದನ್ನ ಖಂಡಿಸಿ ಮಾ.12 ರಂದು ಕನ್ನಡ ಶಾಲೆಗಳ ಬಂದ್​ಗೆ ಕರೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಕನ್ನಡ ಶಾಲೆಗಳನ್ನು ಬಂದ್ ಮಾಡುತ್ತೇವೆ. ಮೈಸೂರಿನ ಜಯ ಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತೇವೆ. ಇಂಗ್ಲಿಷ್ ಶಾಲೆಗಳಿಗೆ 3900 ಕೋಟಿ ರೂ ಕೊಟ್ಟಿದ್ದೀರಿ. ಕನ್ನಡ ಶಾಲೆಗಳ ಅಭಿವೃದ್ಧಿಗೆ ನಯಾ ಪೈಸೆ ಘೋಷಣೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಕನ್ನಡವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇಲ್ಲ. ಕನ್ನಡ ಮಾಧ್ಯಮ ಇರುವುದು ಸರ್ಕಾರಿ ಶಾಲೆಗಳಲ್ಲಿ. ಸರ್ಕಾರಿ ಶಾಲೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಕೊಡಬೇಕಿತ್ತು. ಸರ್ಕಾರದ ಧೋರಣೆಯನ್ನು ನಾನು ಖಂಡಿಸುತ್ತೇನೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಮಾ.12 ರಂದು ಎಲ್ಲಾ ಕನ್ನಡ ಶಾಲೆಗಳ ಬಂದ್ ಮಾಡಲು ವಿವಿಧ ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಹೇಳಿದ್ದಾರೆ.

ಬೆಂಗಳೂರು: ಜಿಬಿಎ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟ – 176 ವಾರ್ಡ್‌ ಮಹಿಳಾ ಮೀಸಲು

ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ವೇದಿಕೆ ಸಜ್ಜಾಗಿದೆ. ನಗರಾಭಿವೃದ್ಧಿ ಇಲಾಖೆ ಐದು ನಗರ ಪಾಲಿಕೆಗಳ ವಾರ್ಡ್‌ಗಳ ಮೀಸಲಾತಿ ಪಟ್ಟಿ ಅಧಿಕೃತವಾಗಿ ಪ್ರಕಟಿಸಿದೆ.

ಒಟ್ಟು 369 ವಾರ್ಡ್‌ಗಳು ಇದೆ, ಇದರಲ್ಲಿ ಮಹಿಳೆಯರಿಗೆ 176 ವಾರ್ಡ್‌ಗಳು ಮೀಸಲಾಗಿದೆ. ಪಟ್ಟಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮತ್ತು ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ.

ವಾರ್ಡ್ ಮೀಸಲಾತಿ ವಿವರ:

  • ಸಾಮಾನ್ಯ ವರ್ಗ: 192
  • ಹಿಂದುಳಿದ ವರ್ಗ ‘ಎ’ (BCA): 97
  • ಪರಿಶಿಷ್ಟ ಜಾತಿ (SC): 43
  • ಹಿಂದುಳಿದ ವರ್ಗ ‘ಬಿ’ (BCB): 24
  • ಪರಿಶಿಷ್ಟ ಪಂಗಡ (ST): 7

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ವಾರ್ಡ್‌ ಮೀಸಲಾತಿ:

  1. ಬೆಂಗಳೂರು ನಗರ ಪಾಲಿಕೆ (72 ವಾರ್ಡ್‌ಗಳು)
    • ಮಹಿಳಾ ಮೀಸಲು: 34
    • ಸಾಮಾನ್ಯ: 40
    • BCA: 19
    • SC: 7
    • BCB: 5
    • ST: 1
  2. ಬೆಂಗಳೂರು ಉತ್ತರ ನಗರ ಪಾಲಿಕೆ (72 ವಾರ್ಡ್‌ಗಳು)
    • ಮಹಿಳಾ: 34
    • ಸಾಮಾನ್ಯ: 37
    • BCA: 19
    • SC: 9
    • BCB: 5
    • ST: 2
  3. ಬೆಂಗಳೂರು ಪಶ್ಚಿಮ ನಗರ ಪಾಲಿಕೆ (112 ವಾರ್ಡ್‌ಗಳು)
    • ಮಹಿಳಾ: 55
    • ಸಾಮಾನ್ಯ: 64
    • BCA: 30
    • SC: 9
    • BCB: 7
    • ST: 2
  4. ಬೆಂಗಳೂರು ಪೂರ್ವ ನಗರ ಪಾಲಿಕೆ (50 ವಾರ್ಡ್‌ಗಳು)
    • ಮಹಿಳಾ: 23
    • ಸಾಮಾನ್ಯ: 25
    • BCA: 14
    • SC: 7
    • BCB: 3
    • ST: 1
  5. ಬೆಂಗಳೂರು ಕೇಂದ್ರ ನಗರ ಪಾಲಿಕೆ (63 ವಾರ್ಡ್‌ಗಳು)
    • ಮಹಿಳಾ: 30
    • ಸಾಮಾನ್ಯ: 32
    • BCA: 15
    • SC: 11
    • BCB: 4
    • ST: 1

ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಜಿಬಿಎ/ಬಿಬಿಎಂಪಿ ಚುನಾವಣೆಗೆ ಈಗ ಅಧಿಕೃತ ಮುಹೂರ್ತ ಫಿಕ್ಸ್ ಆದಂತಾಗಿದೆ. ವಾರ್ಡ್ ಮೀಸಲಾತಿ ಪ್ರಕಟಗೊಂಡಿರುವ ಕಾರಣ, ಸ್ಥಳೀಯ ನಾಯಕರು, ಮಾಜಿ ಕಾರ್ಪೊರೇಟರ್‌ಗಳು ಹಾಗೂ ಹೊಸ ಆಕಾಂಕ್ಷಿಗಳು ತಮ್ಮ ವಾರ್ಡ್‌ಗಳಲ್ಲಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲು ಸಿದ್ಧರಾಗಿದ್ದಾರೆ. ಶೀಘ್ರದಲ್ಲಿ ರಾಜ್ಯ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಲಿದೆ.

ಬಿಹಾರ ರಾಜಕೀಯದಲ್ಲಿ ಹೊಸ ಅಧ್ಯಾಯ: ನಿತೀಶ್ ಕುಮಾರ್ ಪುತ್ರ ನಿಶಾಂತ್ ಜೆಡಿಯು ಸೇರ್ಪಡೆ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಭಾನುವಾರ ಅಧಿಕೃತವಾಗಿ ಜನತಾ ದಳ ಯುನೈಟೆಡ್ (ಜೆಡಿಯು) ಪಕ್ಷವನ್ನು ಸೇರ್ಪಡೆಯಾಗಿ ತಮ್ಮ ರಾಜಕೀಯ ಪ್ರವಾಸವನ್ನು ಆರಂಭಿಸಿದ್ದಾರೆ. 50 ವರ್ಷದ ನಿಶಾಂತ್ ಕುಮಾರ್ ರಾಜಕೀಯಕ್ಕೆ ಪ್ರವೇಶ ಮಾಡಿರುವುದು ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ನಿತೀಶ್ ಕುಮಾರ್ ಅವರು ದಶಕಗಳ ಕಾಲ ಬಿಹಾರ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಈಗ ರಾಜ್ಯ ರಾಜಕೀಯದಿಂದ ದೂರ ಸರಿದು ರಾಜ್ಯಸಭೆಗೆ ತೆರಳಲು ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಪುತ್ರನ ರಾಜಕೀಯ ಪ್ರವೇಶ ಗಮನ ಸೆಳೆದಿದೆ.

ಪಕ್ಷ ಸೇರ್ಪಡೆಯ ನಂತರ ಮಾತನಾಡಿದ ನಿಶಾಂತ್ ಕುಮಾರ್, “ನಾನು ಸಕ್ರಿಯ ಸದಸ್ಯನಾಗಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸುತ್ತೇನೆ. ನನ್ನ ತಂದೆ ರಾಜ್ಯಸಭೆಗೆ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಅವರ ಮಾರ್ಗದರ್ಶನದಲ್ಲಿ ಪಕ್ಷ ಹಾಗೂ ಜನರ ವಿಶ್ವಾಸ ಉಳಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

ನಿತೀಶ್ ಕುಮಾರ್ ತಮ್ಮ ರಾಜಕೀಯ ಜೀವನದಲ್ಲಿ ವಂಶಪಾರಂಪರ್ಯ ರಾಜಕಾರಣವನ್ನು ಕಟುವಾಗಿ ವಿರೋಧಿಸುತ್ತಾ ಬಂದವರು. ಆದರೆ ಈಗ ಅವರ ಪುತ್ರ ರಾಜಕೀಯ ಪ್ರವೇಶ ಮಾಡಿರುವುದು ವಿಶೇಷ ಚರ್ಚೆಗೆ ಕಾರಣವಾಗಿದೆ. ಇದೇ ರೀತಿಯಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ನಂತರ ರಾಜಕೀಯಕ್ಕೆ ಪ್ರವೇಶಿಸಿದ್ದರು ಎಂಬುದನ್ನು ವಿಶ್ಲೇಷಕರು ಉಲ್ಲೇಖಿಸುತ್ತಿದ್ದಾರೆ.

error: Content is protected !!