Home Blog Page 152

ಮಣ್ಣಿನೊಳಗಿಂದ ಹೊರಬರುತ್ತಿದೆ ಲಕ್ಕುಂಡಿಯ ಮಹಿಮೆ: ಶಿಲ್ಪಗಳೇ ಹೇಳುತ್ತಿವೆ ಸಾವಿರ ವರ್ಷದ ಕಥೆ!

0

ಗದಗ: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ಪ್ರಾಚೀನ ಅವಶೇಷಗಳು ಪತ್ತೆಯಾಗುತ್ತಿವೆ.

ಲಕ್ಕುಂಡಿ ಕೋಟೆಯ ವೀರಭದ್ರೇಶ್ವರ ದೇವಸ್ಥಾನದ ಸಮೀಪ ಉತ್ಖನನ ಕಾರ್ಯ ನಡೆಯುತ್ತಿದ್ದು, ಈ ವೇಳೆ ಶಿವಲಿಂಗದ ಪಾನಿ ಪೀಠ, ಶಿವಲಿಂಗ ಮೂರ್ತಿ ಹಾಗೂ ಕಲ್ಲಿನಲ್ಲಿ ಕೆತ್ತಿದ ನಾಗರ ಹಾವು ಶಿಲ್ಪ ಪತ್ತೆಯಾಗಿದೆ.

ಇದರೊಂದಿಗೆ ಕೊಡಲಿ ಆಕಾರದ ಪ್ರಾಚ್ಯವಸ್ತುವೂ ಉತ್ಖನನದಲ್ಲಿ ಸಿಕ್ಕಿರುವುದು ಪುರಾತತ್ವ ವಲಯದಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ.

ನಿನ್ನೆ ಸಾಯಂಕಾಲ ಉತ್ಖನನ ವೇಳೆ ಪುರಾತನ ಕಾಲದ ಲೋಹದ ಗಂಟೆ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಇದು ಹಿತ್ತಾಳೆಯಿಂದ ತಯಾರಿಸಿದ ಪುರಾತನ ಗಂಟೆಯಾಗಿರಬಹುದು ಎಂದು ಶಂಕಿಸಲಾಗಿದೆ.

ಸುಮಾರು 35 ಕಾರ್ಮಿಕರು ಅತ್ಯಂತ ಸೂಕ್ಷ್ಮವಾಗಿ ಉತ್ಖನನ ಕಾರ್ಯ ನಡೆಸುತ್ತಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯಾಚರಣೆ ಮುಂದುವರಿದಿದೆ. ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಉತ್ಖನನ ನಡೆಯುತ್ತಿದೆ. ಉತ್ಖನನ ನಡೆಯುತ್ತಿರುವ ಪಕ್ಕದ ಕೋಟೆ ಗೋಡೆಯಲ್ಲಿಯೇ ಅನೇಕ ಪ್ರಾಚ್ಯವಸ್ತುಗಳು ಹುದುಗಿಕೊಂಡಿರುವುದು ಕಂಡುಬಂದಿದ್ದು, ಲಕ್ಕುಂಡಿಯ ಶಿಲ್ಪಕಲೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತಿದೆ. ಒಂದೊಂದು ಶಿಲೆಯೂ ಪುರಾತನ ಕಾಲದ ಕಲಾ ವೈಭವವನ್ನು ಸಾರುತ್ತಿದೆ.

ಈ ಅಪರೂಪದ ಶಿಲ್ಪಕಲೆಗಳು ರಾಜ್ಯದಾದ್ಯಂತ ಜನರಲ್ಲಿ ಕುತೂಹಲ ಹೆಚ್ಚಿಸಿವೆ. ಚಿನ್ನದ ಶ್ರೀಮಂತಿಕೆಯಿಂದ ಮಾತ್ರವಲ್ಲ, ಕಲೆಯ ಶ್ರೀಮಂತಿಕೆಯಿಂದಲೂ ಲಕ್ಕುಂಡಿ ಅಪರೂಪದ ನಾಡು ಎನ್ನುವುದನ್ನು ಈ ಉತ್ಖನನ ಸಾರಿ ಸಾರಿ ಸಾಬೀತು ಮಾಡುತ್ತಿದೆ.

ದಾವಣಗೆರೆ ಕಿರು ಮೃಗಾಲಯದಲ್ಲಿ ನಾಲ್ಕು ಚುಕ್ಕೆ ಜಿಂಕೆಗಳ ಸಾವು!

0

ದಾವಣಗೆರೆ: ದಾವಣಗೆರೆಯ ಆನಗೋಡ ಬಳಿ ಇರುವ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸಾವನ್ನಪ್ಪಿವೆ.

ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗದಿಂದ ಜಿಂಕೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಜನವರಿ 16ರಂದು ಮೊದಲ ಚುಕ್ಕೆ ಜಿಂಕೆ ಸಾವನ್ನಪ್ಪಿದ್ದು, ಮರುದಿನ ಇನ್ನೆರಡು ಜಿಂಕೆಗಳು ಮೃತಪಟ್ಟಿವೆ. ಇದುವರೆಗೆ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳ ಸಾವು ಸಂಭವಿಸಿದೆ. ಘಟನೆಯ ಹಿನ್ನೆಲೆ ಮೃಗಾಲಯದಲ್ಲಿ ಕಟ್ಟುನಿಟ್ಟಿನ ಜೈವಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಉಳಿದ ಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರ ಪ್ರವೇಶ ಹಾಗೂ ವೀಕ್ಷಣೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ. ಪ್ರಸ್ತುತ ಮೃಗಾಲಯದಲ್ಲಿ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳು ಸೇರಿದಂತೆ ಒಟ್ಟು 170 ಚುಕ್ಕೆ ಜಿಂಕೆಗಳು ಇವೆ. ಉಳಿದ ಜಿಂಕೆಗಳ ಆರೋಗ್ಯದ ಮೇಲೆ ನಿಕಟ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

12 ವರ್ಷ, ಒಂದೇ ವೇದಿಕೆ: ಬಿಗ್ ಬಾಸ್ ಫಿನಾಲೆಯಲ್ಲಿ ಸುದೀಪ್ ಭಾವನಾತ್ಮಕ ಸಂದೇಶ

ಕನ್ನಡದ ಬಿಗ್ ಬಾಸ್ ಶೋ ಆರಂಭವಾದಾಗಿನಿಂದಲೂ ನಿರಂತರವಾಗಿ ನಿರೂಪಣೆ ಮಾಡುತ್ತಿರುವ ಏಕೈಕ ವ್ಯಕ್ತಿ ಕಿಚ್ಚ ಸುದೀಪ್. ಇದೀಗ ಅವರು 12ನೇ ಸೀಸನ್ ಅನ್ನು ಸಹ ಯಶಸ್ವಿಯಾಗಿ ಮುಗಿಸಿದ್ದಾರೆ.

ಫಿನಾಲೆ ವೇದಿಕೆಯಲ್ಲಿ ಬಿಗ್ ಬಾಸ್ ಸುದೀಪ್‌ಗೆ ವಿಶೇಷ ಧನ್ಯವಾದ ಸಲ್ಲಿಸಿದೆ.
“ಈ ಶೋಗೆ ಜೀವ ತುಂಬಿದವರು ನೀವು. 12 ವರ್ಷಗಳ ಕಾಲ ನಿರಂತರವಾಗಿ ಶೋ ನಡೆಸಿರುವುದು ದಾಖಲೆ. ನೀವು ಈ ವೇದಿಕೆಗೆ ಮಾರ್ಗದರ್ಶಕರಾಗಿದ್ದೀರಿ” ಎಂದು ಬಿಗ್ ಬಾಸ್ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, “ನಾನು ಈ ಶೋ ನಿರಂತರವಾಗಿ ನಡೆಸಲು ಕಾರಣ ಸ್ಪರ್ಧಿಗಳು ನೀಡುವ ಗೌರವ. ಪ್ರೀತಿ ಇಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ. ನೀವು ನೀಡುವ ಪ್ರೀತಿ ನನಗೆ ಶಕ್ತಿ” ಎಂದರು.

ತಮ್ಮ ಕೆಲಸದ ಬದ್ಧತೆ ಬಗ್ಗೆ ಮಾತನಾಡಿದ ಅವರು, “ರಾತ್ರಿ 3:30ಕ್ಕೆ ಮನೆಗೆ ಬಂದರೂ ಕೂಡ ನಾನು ಈ ಕೆಲಸವನ್ನು ಕೈಬಿಡಲು ಸಾಧ್ಯವಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಅಷ್ಟು ಜನ ಒಳಗೆ ಕುಳಿತಿದ್ದಾರೆ” ಎಂದು ಹೇಳಿದರು.

“ಈ ವೇದಿಕೆ ಬಹಳ ಶುದ್ಧವಾದದ್ದು. ಇಲ್ಲಿ ಭಾಗವಹಿಸಿದ ಅನೇಕರು ಜೀವನದಲ್ಲಿ ಮುಂದುವರೆದಿದ್ದಾರೆ. ಈ ವೇದಿಕೆಯ ಪ್ರಾಮಾಣಿಕತೆಯೇ ನನ್ನನ್ನು ಇಲ್ಲಿ ನಿಲ್ಲಿಸಿದೆ” ಎಂದು ಹೇಳಿದರು.

ಇದಲ್ಲದೆ, ತಮ್ಮ ತಂಡದ ಪಾತ್ರವನ್ನು ಒಪ್ಪಿಕೊಂಡು, ನಿರ್ದೇಶಕ ಪ್ರಕಾಶ್ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದರು. ಸುದೀಪ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

 

ಮಗನನ್ನು ಶಾಲೆಗೆ ಬಿಡಲು ಹೋಗ್ತಿದ್ದಾಗ ದುರಂತ; ಕಾಲೇಜು ಬಸ್ ಡಿಕ್ಕಿ ಹೊಡೆದು ತಾಯಿ-ಮಗ ಸಾವು

0

ಬೆಂಗಳೂರು:- ಬೆಂಗಳೂರಿನ ವಿವೇಕನಗರ ಮುಖ್ಯ ರಸ್ತೆಯಲ್ಲಿ ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿಯಾಗಿ ತಾಯಿ, ಮಗ ಸಾವನ್ನಪ್ಪಿರುವ ಘಟನೆ ಜರುಗಿದೆ.

ತಾಯಿ ಸಂಗೀತಾ (37), ಮಗ ಪಾರ್ಥ (8) ಮೃತ ದುರ್ದೈವಿಗಳು. ಇವರು ಆಂಧ್ರ ಮೂಲದವರು. ಸಂಗೀತಾ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡ್ತಿದ್ದರು. ಇಬ್ಬರು ಮಕ್ಕಳಿದ್ದು, ಅದೇ ಶಾಲೆಗೆ ಸೇರಿಸಿದ್ದರು. ಪತಿ ಪ್ರಸಾದ್ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇಂದು ಬೆಳಿಗ್ಗೆ 6:30ರ ಸುಮಾರಿಗೆ ಮಗನೊಂದಿಗೆ ಶಾಲೆಗೆ ಕೆಲಸಕ್ಕೆ ತೆರಳ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ಖಾಸಗಿ ಕಾಲೇಜಿನ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ತಾಯಿ-ಮಗ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಶೋಕ ನಗರ ಪೊಲೀಸ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೋರಿಂಗ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಬಿಗ್‌ ಬಾಸ್‌ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಸಿಕ್ಕ ಹಣವೆಷ್ಟು?

ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಗೊಂಡಿದ್ದು, 113 ದಿನಗಳ ಕಾಲ ನಡೆದ ಈ ಶೋನಲ್ಲಿ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಕೋಟ್ಯಂತರ ವೋಟುಗಳೊಂದಿಗೆ ಗೆಲುವು ಸಾಧಿಸಿದ ಗಿಲ್ಲಿ, ಈ ಸೀಸನ್‌ನ ಜನಪ್ರಿಯ ಸ್ಪರ್ಧಿಯಾಗಿದ್ದರು. ರನ್ನರ್ ಅಪ್ ಆಗಿ ಹೊರಹೊಮ್ಮಿದವರು ರಕ್ಷಿತಾ ಶೆಟ್ಟಿ.

ರಕ್ಷಿತಾ ಶೆಟ್ಟಿಯ ಬಿಗ್ ಬಾಸ್ ಪಯಣ ಈ ಸೀಸನ್‌ನ ಪ್ರಮುಖ ಹೈಲೈಟ್ ಆಗಿದೆ. ಅವರು ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನವೇ ಹೊರಹಾಕಲ್ಪಟ್ಟಿದ್ದರು. ಆದರೆ ಒಂದು ವಾರದ ಬಳಿಕ ಮರು ಎಂಟ್ರಿ ಪಡೆದು, ಯಾವುದೇ ಸಿನಿಮಾ ಅಥವಾ ಸ್ಟಾರ್ ಬ್ಯಾಕ್‌ಗ್ರೌಂಡ್ ಇಲ್ಲದೆ ಫಿನಾಲೆ ವರೆಗೆ ತಲುಪಿದ್ದು ಗಮನಾರ್ಹ ಸಾಧನೆ.

ಫಿನಾಲೆ ವೇಳೆ ಕಿಚ್ಚ ಸುದೀಪ್ ಅವರು ರಕ್ಷಿತಾ ಬಳಿ, “50 ಲಕ್ಷ ಗೆದ್ದರೆ ಏನು ಮಾಡುತ್ತೀರಾ?” ಎಂದು ಪ್ರಶ್ನಿಸಿದರು. ಇದಕ್ಕೆ ರಕ್ಷಿತಾ, “20 ಹಸು ಖರೀದಿ ಮಾಡುತ್ತೇನೆ, ಒಂದು ಹಸುವಿಗೆ 1 ಲಕ್ಷ ರೂಪಾಯಿ” ಎಂದು ಉತ್ತರಿಸಿದ್ದರು. ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆದಿತ್ತು.

ಆದರೆ ರನ್ನರ್ ಅಪ್ ಆಗಿದ್ದರಿಂದ ರಕ್ಷಿತಾಗೆ 50 ಲಕ್ಷ ಸಿಗಲಿಲ್ಲ. ಆದರೂ ಸಹ ಅವರಿಗೆ ಮಹತ್ವದ ಬಹುಮಾನ ದೊರೆತಿದೆ.
ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದ್ದು, ಟಿಎ ಶರವಣ ಅವರು ವೇದಿಕೆಗೆ ಬಂದು ಚೆಕ್ ಹಸ್ತಾಂತರಿಸಿದರು.
ಇದಕ್ಕೆ ಜೊತೆಗೆ ಜಾರ್ ಅಪ್ಲಿಕೇಶನ್ ವತಿಯಿಂದ 5 ಲಕ್ಷ ರೂಪಾಯಿ ನಗದು ಬಹುಮಾನವೂ ನೀಡಲಾಯಿತು.

ಒಟ್ಟು 25 ಲಕ್ಷ ರೂಪಾಯಿ ಬಹುಮಾನ ಪಡೆದ ರಕ್ಷಿತಾಗೆ, ಮಧ್ಯಮ ವರ್ಗದ ಕುಟುಂಬದಿಂದ ಬಂದ ವ್ಯಕ್ತಿಯಾಗಿ ಇದು ದೊಡ್ಡ ಬೆಂಬಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಗ್ ಬಾಸ್ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿಯ ಪಯಣ ಕೇವಲ ಆಟವಲ್ಲ, ಅದು ಹೋರಾಟ, ಸಹನೆ ಮತ್ತು ಸಾಧನೆಯ ಕಥೆಯಾಗಿ ಉಳಿದಿದೆ.

ಮಗನ ಮಾರ್ಕ್ಸ್‌ಕಾರ್ಡ್ ತರಲು ಶಾಲೆಗೆ ಹೋದ ತಂದೆ ಕುಸಿದು ಬಿದ್ದು ಸಾವು!

0

ಅಸ್ಸಾಂ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ಅಸ್ಸಾಂನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.

ಯುಕೆಜಿಯಲ್ಲಿ ಓದುತ್ತಿದ್ದ ಮಗನ ಮಾರ್ಕ್ಸ್‌ಕಾರ್ಡ್ ಪಡೆಯಲು ಶಾಲೆಗೆ ತೆರಳಿದ್ದ ತಂದೆ, ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ದೀಪಂಕರ್ ಬೋರ್ಡೊಲೊಯ್ (35) ಎಂದು ಗುರುತಿಸಲಾಗಿದೆ. ಅವರು ಅಸ್ಸಾಂನ ಜೋರ್ಹತ್ ಜಿಲ್ಲೆಯ ಸ್ಯಾಮ್‌ಫೋರ್ಡ್ ಶಾಲೆಗೆ ಜನವರಿ 15ರಂದು ಮಗನ ಫಲಿತಾಂಶದ ಮಾರ್ಕ್ಸ್‌ಕಾರ್ಡ್ ತರಲು ತೆರಳಿದ್ದರು. ಕೆಲಸಕ್ಕೆ ಒಂದು ದಿನ ರಜೆ ಹಾಕಿ ಶಾಲೆಗೆ ಬಂದಿದ್ದ ಅವರು, ಮಾರ್ಕ್ಸ್‌ಕಾರ್ಡ್ ಪಡೆದು ಶಾಲೆಯಿಂದ ಹೊರಬರುವಾಗ ಕುಸಿದು ಬಿದ್ದರು.

ಸ್ಥಳದಲ್ಲಿದ್ದ ಶಾಲಾ ಸಿಬ್ಬಂದಿ ಹಾಗೂ ಪೋಷಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯ ಬಳಿಕ ಶಾಲಾ ಆವರಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ದೀಪಂಕರ್ ಬೋರ್ಡೊಲೊಯ್ ಅವರು ಅಸ್ಸಾಂ ಸರ್ಕಾರದ ಟಿಯೋಕ್ ವಿಭಾಗದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ ಗೃಹಿಣಿ. ಕುಟುಂಬದವರ ಪ್ರಕಾರ, ಅವರಿಗೆ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎನ್ನಲಾಗಿದೆ.

“ಗಿಲ್ಲಿಗೆ ಬಂಪರ್ ಮಳೆ: 50 ಲಕ್ಷ ಕ್ಯಾಶ್, ಕಾರು, ಸುದೀಪ್ ಗಿಫ್ಟ್ – ಬಿಗ್ ಬಾಸ್ ಟ್ರೋಫಿಯಲ್ಲೂ ಕನ್ನಡದ ಹೆಮ್ಮೆ!”

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕೊನೆಗೂ ಗ್ರ್ಯಾಂಡ್ ಫಿನಾಲೆಯೊಂದಿಗೆ ತೆರೆ ಬಿದ್ದಿದೆ. ಈ ಬಾರಿ ದಾಖಲೆ ಮತಗಳೊಂದಿಗೆ ಗಿಲ್ಲಿ ನಟ ವಿನ್ನರ್ ಆಗಿ ಹೊರಹೊಮ್ಮಿದ್ದು, ಕೋಟಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಫೈನಲ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ವಿನ್ನರ್ ಬಹುಮಾನಗಳನ್ನು ಘೋಷಿಸಿದರು. ಗಿಲ್ಲಿ ನಟನಿಗೆ ಟ್ರೋಫಿಯ ಜೊತೆಗೆ 50 ಲಕ್ಷ ರೂ. ನಗದು, ಮಾರುತಿ ಸುಜುಕಿ ಕಂಪನಿಯಿಂದ ಒಂದು ಕಾರು ಹಾಗೂ ಸುದೀಪ್ ಅವರಿಂದ ವೈಯಕ್ತಿಕವಾಗಿ 10 ಲಕ್ಷ ರೂ. ವಿಶೇಷ ಬಹುಮಾನ ಲಭಿಸಿದೆ. ಈ ಮೂಲಕ ಗಿಲ್ಲಿಗೆ ಲಕ್ಕಿ ಬಂಪರ್ ಸಿಕ್ಕಂತಾಗಿದೆ.

ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ವಿವಿಧ ಪ್ರಾಯೋಜಕರಿಂದ ಒಟ್ಟು 25 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ.
ಮೂರನೇ ಸ್ಥಾನ ಪಡೆದ ಅಶ್ವಿನಿ ಗೌಡಗೆ 12 ಲಕ್ಷ ರೂ. ಬಹುಮಾನ ಲಭಿಸಿದೆ.

ಈ ಬಾರಿ ನೀಡಲಾದ ಬಿಗ್ ಬಾಸ್ ಟ್ರೋಫಿಯೂ ವಿಭಿನ್ನವಾಗಿದೆ. ಟ್ರೋಫಿಯಲ್ಲಿ ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಂಸ್ಕೃತಿಯ ಪ್ರತೀಕಗಳನ್ನು ಕೆತ್ತಲಾಗಿದೆ. ಆನೆ, ಅರಮನೆ, ದರ್ಪಣ ಸುಂದರಿ, ಮೇಲ್ಭಾಗದಲ್ಲಿರುವ ಬಿಗ್ ಬಾಸ್ ಕಣ್ಣು ಹಾಗೂ ಒಳಭಾಗದಲ್ಲಿರುವ ಕನ್ನಡ ಸಂಖ್ಯೆಗಳ ಕ್ಲಾಕ್ ವಿನ್ಯಾಸ – ಟ್ರೋಫಿಗೆ ವಿಶೇಷ ಗೌರವ ತಂದಿದೆ. ಇದು ಕನ್ನಡತನವನ್ನು ರಾಷ್ಟ್ರಮಟ್ಟಕ್ಕೆ ತೋರಿಸುವ ಪ್ರಯತ್ನವೆಂದು ಮೆಚ್ಚುಗೆ ವ್ಯಕ್ತವಾಗಿದೆ.

ಈ ಸೀಸನ್ ಮೂಲಕ ಬಿಗ್ ಬಾಸ್ ಕೇವಲ ರಿಯಾಲಿಟಿ ಶೋ ಅಲ್ಲ, ಕನ್ನಡಿಗರ ಭಾವನೆಗಳ ಹಬ್ಬ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂ. ಲಂಚ ಹಗರಣ ನಡೆದಿದೆ; ಆರ್. ಅಶೋಕ್ ಗಂಭೀರ ಆರೋಪ

0

ಬೆಂಗಳೂರು: ಕರ್ನಾಟಕ ಅಬಕಾರಿ ಇಲಾಖೆಯಲ್ಲಿ 2,500 ಕೋಟಿ ರೂ. ಲಂಚ ಹಗರಣ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಈ ಹಗರಣಕ್ಕೆ ನೈತಿಕ ಹೊಣೆ ಹೊತ್ತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಪರವಾನಗಿಗಳನ್ನು ಹರಾಜು ಮಾಡಲಾಗುತ್ತಿದ್ದು, ಇದರಿಂದ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಇತ್ತೀಚೆಗೆ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ 25 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿರುವುದು ಇದಕ್ಕೆ ಸಾಕ್ಷಿ ಎಂದರು.

ಈ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆಗಾರರು ಎಂದು ಹೇಳಿದ ಅಶೋಕ್, ತಿಮ್ಮಾಪುರ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿಯನ್ನೇ ಹೊಣೆಗಾರರನ್ನಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಡಮಾಲ್ ಡಿಮಿಲ್ ಡಕ್ಕ… ಗಿಲ್ಲಿ ಗೆದ್ದಾಯ್ತು ಪಕ್ಕಾ!’ – ಬಿಗ್ ಬಾಸ್ ಟ್ರೋಫಿ ಎತ್ತಿದ ಕರುನಾಡದ ಮನೆಮಗ

ಬೆಂಗಳೂರು/ಮಂಡ್ಯ: ಮಳವಳ್ಳಿಯ ಹಳ್ಳಿಹೈದ… ಇಂದು ಇಡೀ ಕರುನಾಡದ ಹೆಮ್ಮೆ. ಗಿಲ್ಲಿ ನಟ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ದೊಡ್ಮನೆ ದೊರೆಯಾಗಿದ್ದಾರೆ. ಎಲ್ಲೆಲ್ಲೂ ಒಂದೇ ಸೌಂಡ್ – “ಗಿಲ್ಲಿ… ಗಿಲ್ಲಿ… ಗಿಲ್ಲಿ!”

ಬಿಗ್ ಬಾಸ್ ಆರಂಭವಾದ ದಿನದಿಂದಲೇ ಜನ ಮನಸ್ಸಿನಲ್ಲಿ ಒಂದು ಮಾತು ಓಡುತ್ತಿತ್ತು – “ಈ ಸೀಸನ್ ವಿನ್ನರ್ ಗಿಲ್ಲಿಯೇ.” ಗಲ್ಲಿ ಗಲ್ಲಿಯಲ್ಲೂ ಗಿಲ್ಲಿಯ ಹವಾ, ಸೋಷಿಯಲ್ ಮೀಡಿಯಾದಲ್ಲೂ ಗಿಲ್ಲಿಯ ಕ್ರೇಜ್. ಕೊನೆಗೂ ಜನರ ನಿರೀಕ್ಷೆ ನಿಜವಾಗಿದೆ.

ಗಿಲ್ಲಿಯ ಗೆಲುವಿನ ಹಿಂದಿನ ದೊಡ್ಡ ಕಾರಣ ಅವರ ವ್ಯಕ್ತಿತ್ವ. ಸಿಲ್ಲಿ ಜೋಕ್ಸ್ ಇಲ್ಲ, ಅಶ್ಲೀಲತೆ ಇಲ್ಲ, ಡಬಲ್ ಮೀನಿಂಗ್ ಇಲ್ಲ – ಶುದ್ಧ ಫ್ಯಾಮಿಲಿ ಕಾಮಿಡಿ. ಮಕ್ಕಳು, ಹಿರಿಯರು, ಮಹಿಳೆಯರು ಎಲ್ಲರೂ ಒಟ್ಟಿಗೆ ಕೂತು ನಗುವಂತೆ ಮಾಡಿದ ಅಪರೂಪದ ಸ್ಪರ್ಧಿ ಗಿಲ್ಲಿ.

ಗಿಲ್ಲಿ ವಿನ್ನರ್ ಆಗ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮದ ಸಿಡಿಲು. ಪಟಾಕಿ, ನೃತ್ಯ, ಶಿಳ್ಳೆ, ಚಪ್ಪಾಳೆ – ಎಲ್ಲೆಲ್ಲೂ ಹಬ್ಬದ ವಾತಾವರಣ. ಹುಟ್ಟೂರು ದಡದಪುರ ಗ್ರಾಮದಲ್ಲಿ ಕಟೌಟ್‌ಗಳು ರಾರಾಜಿಸಿದವು. ಗ್ರಾಮಸ್ಥರು “ನಮ್ಮ ಗಿಲ್ಲಿ ನಮ್ಮ ಹೆಮ್ಮೆ” ಎಂದು ಘೋಷಿಸಿದರು.

ಗಿಲ್ಲಿಗೆ ಭವ್ಯ ಸ್ವಾಗತಕ್ಕೆ ಊರು ಸಜ್ಜಾಗಿದೆ. ಮದ್ದೂರಿನಿಂದ ದಡದಪುರವರೆಗೆ ಎತ್ತಿನಗಾಡಿ ಮೆರವಣಿಗೆ, ವಿಶೇಷ ಸಂಭ್ರಮ, ಸಿಡಿ ಹಬ್ಬ – ಎಲ್ಲವೂ ಗಿಲ್ಲಿಗಾಗಿ. ಈ ಬಾರಿ ಬಿಗ್ ಬಾಸ್ ಕ್ರೇಜ್ ಹೆಚ್ಚಾಗಲು ಪ್ರಮುಖ ಕಾರಣವೇ ಗಿಲ್ಲಿ ಎನ್ನುವುದರಲ್ಲಿ ಎರಡು ಮಾತಿಲ್ಲ.

“ಡಮಾಲ್ ಡಿಮಿಲ್ ಡಕ್ಕ… ಗಿಲ್ಲಿ ಗೆಲ್ಲೋದು ಪಕ್ಕಾ” ಎಂದು ಗಿಲ್ಲಿ ಹೇಳುತ್ತಿದ್ದ ಮಾತು ಇದೀಗ ನಿಜವಾಗಿದೆ. ಅತೀ ಹೆಚ್ಚು ಮತಗಳೊಂದಿಗೆ ಗಿಲ್ಲಿ ಟ್ರೋಫಿ ಎತ್ತಿದ್ದಾರೆ.

ಗಿಲ್ಲಿಗೆ ದೊರೆತ ಬಹುಮಾನಗಳು:
🏆 ನಗದು ಬಹುಮಾನ – ₹50 ಲಕ್ಷ
🚗 ಮಾರುತಿ ಸುಜುಕಿ ಕಾರು
🎁 ಕಿಚ್ಚ ಸುದೀಪ್ ಕಡೆಯಿಂದ ವಿಶೇಷವಾಗಿ ₹10 ಲಕ್ಷ

ರನ್ನರ್ ಅಪ್ ಬಹುಮಾನ:
▪️ ರಕ್ಷಿತಾ ಶೆಟ್ಟಿ – ₹20 ಲಕ್ಷ
▪️ ಅಶ್ವಿನಿ ಗೌಡ – ₹14 ಲಕ್ಷ
▪️ ಕಾವ್ಯಾ – ₹10 ಲಕ್ಷ
▪️ ಮ್ಯೂಟೆಂಟ್ ರಘು – ₹3.5 ಲಕ್ಷ

ಒಟ್ಟಾರೆ, ಈ ಬಾರಿ ಬಿಗ್ ಬಾಸ್ ಗೆದ್ದದ್ದು ಒಬ್ಬ ಸ್ಪರ್ಧಿ ಮಾತ್ರವಲ್ಲ… ಗೆದ್ದದ್ದು ಜನರ ಮನಸ್ಸು, ಗೆದ್ದದ್ದು ಸರಳತೆ, ಗೆದ್ದದ್ದು ವ್ಯಕ್ತಿತ್ವ.

ಬಂದಿರೋ 50 ಲಕ್ಷದಲ್ಲಿ ಜಮೀನು ತಗೊಂಡು ಕೃಷಿ ಮಾಡ್ತೀನಿ: ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದರೂ, ಗಿಲ್ಲಿ ನಟ ಕ್ರೇಜ್ ಮಾತ್ರ ಇನ್ನೂ ಜೋರಾಗಿದೆ. ವಿನ್ನರ್ ಆಗಿ ಹೊರಬಂದ ನಂತರ ಗಿಲ್ಲಿ ನಟ ಮಾತನಾಡಿದ ಪ್ರತಿಯೊಂದು ಮಾತು ಅಭಿಮಾನಿಗಳ ಮನಸ್ಸಿಗೆ ನೇರವಾಗಿ ತಾಕುತ್ತಿದೆ.

“ನಿಜ ಹೇಳ್ಬೇಕಂದ್ರೆ… ಇನ್ನೂ ನಂಬೋಕೆ ಆಗ್ತಿಲ್ಲ. ಇದು ನಿಜನಾ, ಸುಳ್ಳಾ ಅನ್ನೋದೇ ಗೊತ್ತಾಗ್ತಿಲ್ಲ. ಪದೇ ಪದೇ ಮೈಕ್ ಇದ್ಯಾ ಅಂತ ನೋಡ್ಕೊಳ್ತಿದ್ದೀನಿ” ಎಂದು ಗಿಲ್ಲಿ ನಟ ಭಾವುಕರಾಗಿ ಹೇಳಿದ್ದಾರೆ.

ತಮಗೆ ದೊರೆತ 50 ಲಕ್ಷ ಬಹುಮಾನ ಕುರಿತು ಮಾತನಾಡಿದ ಅವರು, “ಬಂದಿರೋ ಹಣದಲ್ಲಿ ಯಾವುದಾದ್ರೂ ಜಮೀನು ತಗೋಂಡು ವ್ಯವಸಾಯ ಮಾಡಬೇಕು ಅನ್ನೋ ಆಸೆ ಇದೆ” ಎಂದು ಸರಳ ಕನಸನ್ನು ವ್ಯಕ್ತಪಡಿಸಿದರು.

‘ನಾನ್ ದೊಡ್ಡಮ್ಮ… ದೊಡ್ಡಮ್ಮ ದ್ವಾಸೆ ಕೊಡು…’ ಡೈಲಾಗ್ ಹೇಗೆ ವೈರಲ್ ಆಯ್ತು ಅನ್ನೋದಕ್ಕೂ ಗಿಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. “ಆ ಹಾಡು ನಾನು ಸ್ಕೂಲ್‌ಗೆ ಹೋಗುವಾಗ ಕಲಿತದ್ದು. ಮನೆಲಿ ಸುಮ್ನೆ ಹೇಳ್ತಿದ್ದೆ. ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತೆ ಅಂತ ಅಂದ್ಕೊಂಡೇ ಇರಲಿಲ್ಲ. ಮಕ್ಕಳಿಗೆ ತುಂಬಾ ಇಷ್ಟ ಆಗಿದೆ ಅನ್ನೋದು ಹೊರಗೆ ಬಂದ್ಮೇಲೆ ಗೊತ್ತಾಯ್ತು” ಎಂದಿದ್ದಾರೆ.

ಕಾವ್ಯಾ ಜೊತೆ ಸಂಬಂಧ, ಮದುವೆ ಗಾಸಿಪ್ ಕುರಿತು ಕ್ಲ್ಯಾರಿಟಿ ಕೊಟ್ಟ ಗಿಲ್ಲಿ, “ನಾವು ಜಂಟಿಯಾಗಿ ಎಂಟ್ರಿ ಕೊಟ್ಟಿದ್ವಿ ಅಷ್ಟೇ. ಮದುವೆ ಮಾತು ಏನೂ ಇಲ್ಲ. ಫೈನಲ್‌ನಲ್ಲಿ ಆರು ಜನ ಇದ್ದಾಗ ಎಷ್ಟು ಟೆನ್ಷನ್ ಇತ್ತು ಅಂದ್ರೆ ಹೇಳೋಕೂ ಆಗಲ್ಲ. ಯಾರಾದರೂ ನನ್ನ ಪಕ್ಕ ನಿಲ್ಲಬಹುದು ಅನ್ನೋ ಭಾವನೆ ಇತ್ತು, ಆದರೆ ಏನಾಗುತ್ತೆ ಅನ್ನೋದು ಊಹೆ ಮಾಡೋಕೂ ಆಗ್ತಿರಲಿಲ್ಲ” ಎಂದರು.

ಬಿಗ್ ಬಾಸ್ ಮನೆಯಲ್ಲಿ ಚಡ್ಡಿ-ಬನಿಯನ್‌ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಾರಣ ತಿಳಿಸಿದ ಗಿಲ್ಲಿ, “ಶರ್ಟ್-ಪ್ಯಾಂಟ್ ಹಾಕಿಕೊಂಡ್ರೆ ಕಂಫರ್ಟ್ ಇರಲಿಲ್ಲ. ನನಗೆ ಚಡ್ಡಿ-ಬನಿಯನ್‌ನೇ ನ್ಯಾಚುರಲ್” ಎಂದು ನಗುಚಾಟದೊಂದಿಗೆ ಹೇಳಿದರು.

ಸಿನಿಮಾ ಜೀವನದ ಕುರಿತು ಮಾತನಾಡಿದ ಗಿಲ್ಲಿ, “ಡೆವಿಲ್ ಸಿನಿಮಾದಲ್ಲಿ ನನ್ನ ನೋಡಿ ಜನ ಇಷ್ಟಪಟ್ಟಿದ್ದಾರೆ ಅನ್ನೋದು ಖುಷಿ ಕೊಟ್ಟಿದೆ. ದರ್ಶನ್ ಅಣ್ಣ ಜೊತೆ ಮೊದಲ ಸಿನಿಮಾ ಮಾಡಿದ್ದು ನನ್ನ ಜೀವನದ ದೊಡ್ಡ ಗೌರವ. ಮುಂದೆ ಹೀಗೇ ಸಿನಿಮಾಗಳಲ್ಲಿ ಮುಂದುವರಿಯಬೇಕು” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

error: Content is protected !!