Home Blog Page 153

ಮೈಸೂರು| ಲಾಂಗ್, ಮಚ್ಚುಗಳೊಂದಿಗೆ ಉದಯಗಿರಿಯಲ್ಲಿ ಮಾರಾಮಾರಿ!

0

ಮೈಸೂರು: ಕಳೆದ ವರ್ಷ ಗಲಭೆಯಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಆತಂಕಕಾರಿ ಘಟನೆ ನಡೆದಿದೆ.

ಅಬುಜರ್ ಮಸೀದಿ ಸಮೀಪದ ಪಾರ್ಕಿನಲ್ಲಿ ಕ್ರಿಕೆಟ್ ಆಟದ ವಿಚಾರವಾಗಿ ಉದಯಗಿರಿಯ ಶಕಿಬುಲ್ ರೆಹಮಾನ್ ಅಲಿಯಾಸ್ ಟಿಪ್ಪು, ಇಮ್ರಾನ್, ಆಸೀಫ್, ಅಜಾಂ ಹಾಗೂ ಅಜೀಜ್ ನಡುವೆ ಮಾರಾಮಾರಿ ನಡೆದಿದೆ. ಮಾರಾಮಾರಿ ವೇಳೆ ಲಾಂಗ್ ಮತ್ತು ಮಚ್ಚುಗಳನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ಓಡಾಡಿದ ಘಟನೆ ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗಿದೆ.

ಭಾನುವಾರ ನಡೆದ ಈ ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮರಾಗಳಲ್ಲಿ ದಾಖಲಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

BBK 12; ವಿನ್ನರ್ ಗಿಲ್ಲಿ ನಟರಾಜ್‌ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನೆ!

0

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್‌ 12ರ ವಿನ್ನರ್‌ ಗಿಲ್ಲಿ ನಟರಾಜ್ ಅವರಿಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸ್‌ (ಟ್ವಿಟರ್‌)ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, “ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು.

ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನ ಗೆದ್ದಿರುವ ಗಿಲ್ಲಿಗೆ ಇನ್ನಷ್ಟು ಕೀರ್ತಿ ಮತ್ತು ಯಶಸ್ಸು ದೊರೆಯಲಿ ಎಂದು ಅವರು ಶುಭ ಹಾರೈಸಿದ್ದಾರೆ. ಜೊತೆಗೆ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್‌ಅಪ್‌ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನೂ ಬಿಗ್ ಬಾಸ್ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟರಾಜ್‌ ವಿಜೇತರಾಗಿದ್ದು, ರಕ್ಷಿತಾ ಶೆಟ್ಟಿ ರನ್ನರ್‌ಅಪ್‌ ಹಾಗೂ ಅಶ್ವಿನಿ ಗೌಡ ಎರಡನೇ ರನ್ನರ್‌ಅಪ್‌ ಆಗಿದ್ದಾರೆ. ವಿನ್ನರ್‌ ಆಗಿರುವ ಗಿಲ್ಲಿಗೆ 50 ಲಕ್ಷ ರೂ. ನಗದು ಬಹುಮಾನ, ಕಾರು ಹಾಗೂ ನಟ ಕಿಚ್ಚ ಸುದೀಪ್‌ ಅವರ ಕಡೆಯಿಂದ 10 ಲಕ್ಷ ರೂ. ಬಹುಮಾನ ದೊರೆತಿದೆ. ಗಿಲ್ಲಿ ನಟರಾಜ್‌ ಗೆಲುವಿನ ಸುದ್ದಿ ಹೊರಬೀಳುತ್ತಿದ್ದಂತೆಯೇ ತವರೂರಾದ ಮಳವಳ್ಳಿಯಲ್ಲಿ ಸಂಭ್ರಮಾಚರಣೆ ಜೋರಾಗಿದ್ದು, ಅಭಿಮಾನಿಗಳು ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಗಿಲ್ಲಿ ನಟನಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಲಕ್ಕುಂಡಿಯಲ್ಲಿ ಮತ್ತೆ 8 ತಾಣಗಳು ರಾಜ್ಯ ಸಂರಕ್ಷಿತ ಸ್ಮಾರಕಗಳಾಗಿ ಘೋಷಣೆ; ಸಚಿವ ಎಚ್.ಕೆ. ಪಾಟೀಲ್!

0

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದ ಈಗಾಗಲೇ ಘೋಷಿತ 16 ರಾಜ್ಯ ಸಂರಕ್ಷಿತ ಸ್ಮಾರಕಗಳ ಜೊತೆಗೆ, ಇನ್ನೂ 8 ದೇವಸ್ಥಾನ ಹಾಗೂ ಬಾವಿಗಳನ್ನು ಫೆಬ್ರವರಿ ಅಂತ್ಯದೊಳಗೆ ಸಂರಕ್ಷಿತ ಸ್ಮಾರಕಗಳಾಗಿ ಘೋಷಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉನ್ನತ ಮಟ್ಟದ ಸಲಹಾ ಸಮಿತಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಲಕ್ಕುಂಡಿಯ ಇನ್ನೂ 20 ದೇವಸ್ಥಾನ ಮತ್ತು ಬಾವಿಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿಸುವ ಕುರಿತು ಒಂದು ತಿಂಗಳೊಳಗೆ ಸಮಗ್ರ ಪ್ರಸ್ತಾವನೆ ಸಲ್ಲಿಸುವಂತೆ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಲಾಗಿದೆ. ಇದರಿಂದ ಲಕ್ಕುಂಡಿಯ ಒಟ್ಟು 44 ತಾಣಗಳು ಸರ್ಕಾರದ ನೇರ ಉಸ್ತುವಾರಿಗೆ ಬರಲಿದ್ದು, ರಕ್ಷಣೆಯೊಂದಿಗೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದರು.

10 ಕೋಟಿ ರೂ. ಅನುದಾನ:
ಲಕ್ಕುಂಡಿಯ ಆಯ್ದ 5 ದೇವಸ್ಥಾನಗಳು ಹಾಗೂ 1 ಪ್ರಾಚೀನ ಬಾವಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫೆಬ್ರವರಿಯಲ್ಲಿ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗುವುದು ಎಂದು ತಿಳಿಸಿದರು. ಮಣ್ಣಿನಡಿಯಲ್ಲಿ ಮರೆಮಾಚಿರುವ ದೇವಸ್ಥಾನಗಳನ್ನು ಗುರುತಿಸಿ ಮಾರ್ಚ್ ಒಳಗೆ ವಿಶೇಷ ಉತ್ಖನನ ಕಾರ್ಯ ನಡೆಸಲಾಗುವುದು. ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯವಿದ್ದು, ಅಗತ್ಯವಿದ್ದಲ್ಲಿ ಪರಿಹಾರ ನೀಡಿ ಅಥವಾ ಮನವೊಲಿಸಿ ತಾಣಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ಹೇಳಿದರು. ಬಯಲು ವಸ್ತು ಸಂಗ್ರಹಾಲಯಕ್ಕೆ 165 ಲಕ್ಷ ರೂ.
ಲಕ್ಕುಂಡಿಯ ಕಲಾ ವೈಭವದ ಅಧ್ಯಯನಕ್ಕಾಗಿ ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ 165 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಗಣರಾಜ್ಯೋತ್ಸವದೊಳಗೆ ಜಮೀನು ನೋಂದಣಿ ಪೂರ್ಣಗೊಳಿಸಿ, ಟೆಂಡರ್ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಬಂಗಾರದ ನಿಧಿ ಹಸ್ತಾಂತರಿಸಿದವರಿಗೆ ಸನ್ಮಾನ:
ಇತ್ತೀಚೆಗೆ ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಅವರಿಗೆ ಉದ್ಯೋಗ ಮತ್ತು ಮನೆ ನೀಡಲು ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಂಡಿದೆ. ಸಂಬಂಧಿತ ಆದೇಶ ಪತ್ರಗಳನ್ನು ಗಣರಾಜ್ಯೋತ್ಸವದಂದು ಹಸ್ತಾಂತರಿಸಲಾಗುವುದು. ನಿಧಿಯ ಕಾಲಘಟ್ಟ ನಿರ್ಧಾರಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಿ, ಅದರ ವರದಿ ಆಧರಿಸಿ ಪ್ರೋತ್ಸಾಹ ಧನ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸಲಹಾ ಸಮಿತಿಯ ಸದಸ್ಯ ಸಿದ್ದು ಪಾಟೀಲ, ಅ ದ ಕಟ್ಟಿಮನಿ, ಶ್ರೀಧರ, ಪುರಾತತ್ವ ಇಲಾಖೆ ಆಯುಕ್ತ ದೇವರಾಜ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಡಾ. ಶರಣು‌ ಗೊಗೇರಿ, ಲಕ್ಕುಂಡಿ ಗ್ರಾ ಪಂ ಅಧ್ಯಕ್ಷ ಕೆಂಚಪ್ಪ ಪೂಜಾರ, ಅಧಿಕಾರಿಗಳಾದ ಗಂಗಪ್ಪ ಎಂ, ವಸಂತ ಮಡ್ಲೂರ, ಕೊಟ್ರೇಶ್ ವಿಭೂತಿ, ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ತೇಜಶ್ವರ, ಮಲ್ಲಯ್ಯ ಕೆ, ಅಮೀರ್ ನಾಯ್ಕ, ಸೇರಿದಂತೆ ಇತರರು ಇದ್ದರು.

DK Shivakumar; ಪ್ರತಿಯೊಂದಕ್ಕೂ ಸಮಯವೇ ಉತ್ತರಿಸುತ್ತದೆ: ಡಿಸಿಎಂ ಡಿ.ಕೆ. ಶಿವಕುಮಾರ್

0

ದೆಹಲಿ: “ಒಂದೇ ವಾಕ್ಯದಲ್ಲಿ ಹೇಳಬೇಕಾದರೆ, ಸಮಯವೇ ಪ್ರತಿಯೊಂದಕ್ಕೂ ಉತ್ತರ ನೀಡುತ್ತದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ದೆಹಲಿಯ ಕರ್ನಾಟಕ ಭವನದ ಬಳಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ಕುರಿತು ಕೇಳಿದ ಪ್ರಶ್ನೆಗೆ, “ನಾನು ಅದನ್ನು ಬಹಿರಂಗಗೊಳಿಸುವ ಅಗತ್ಯವೇನು? ನಾವು ಇಲ್ಲಿಗೆ ಬರುವುದೇ ಸರ್ಕಾರದ ಕೆಲಸ, ಪಕ್ಷದ ಕೆಲಸ ಮತ್ತು ನಮ್ಮ ರಾಜಕೀಯಕ್ಕಾಗಿ” ಎಂದು ಪ್ರತಿಕ್ರಿಯಿಸಿದರು.

ತಾವು ದೆಹಲಿಯಲ್ಲಿ ಇದ್ದರೆಂದರೆ ಹೈಕಮಾಂಡ್ ಭೇಟಿ ಚರ್ಚೆಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂಬ ಮಾತುಗಳ ಬಗ್ಗೆ ಕೇಳಿದಾಗ, “ನಾವು ರಾಜಕಾರಣಿಗಳು. ರಾಜಕಾರಣಿಗಳು ಮಾಡಬೇಕಾದ ರಾಜಕಾರಣವನ್ನು ಎಲ್ಲರೂ ಮಾಡುತ್ತಾರೆ. ಇದರಲ್ಲಿ ತಪ್ಪೇನಿಲ್ಲ. ನಮಗೆ ಅಗತ್ಯವಿರುವವರನ್ನು ಭೇಟಿ ಮಾಡುತ್ತೇವೆ. ಇದನ್ನು ಮಾಧ್ಯಮಗಳು ಏಕೆ ದೊಡ್ಡ ವಿಷಯವಾಗಿಸುತ್ತವೆ?” ಎಂದು ಪ್ರಶ್ನಿಸಿದರು.

MNREGA ಉಳಿವಿಗಾಗಿ ಹೋರಾಟ ಅನಿವಾರ್ಯ: ಸಿಎಂ ಸಿದ್ದರಾಮಯ್ಯ!

0

ಮೈಸೂರು: ವಿಬಿಜಿ ಗ್ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸಿ MNREGA ಯೋಜನೆಯನ್ನು ಪುನಃ ಜಾರಿಗೊಳಿಸುವವರೆಗೆ ಹೋರಾಟ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಟಿ.ನರಸೀಪುರ ತಾಲ್ಲೂಕಿನ ಕುಪ್ಯಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

2005ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ MNREGA ಕಾಯ್ದೆ ಜಾರಿಯಾಗಿದ್ದು, ಇದು ಜನರಿಗೆ ಕೆಲಸದ ಹಕ್ಕು ನೀಡಿದ ಐತಿಹಾಸಿಕ ಕಾಯ್ದೆಯಾಗಿದೆ. ಆದರೆ ಈಗ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ದುರ್ಬಲಗೊಳಿಸಿ ಬಡವರು, ಮಹಿಳೆಯರು ಹಾಗೂ ಕಾರ್ಮಿಕರಿಗೆ ಕೆಲಸ ಸಿಗದಂತೆ ಮಾಡುತ್ತಿದೆ ಎಂದು ಆರೋಪಿಸಿದರು. MNREGA ಬದಲಿಗೆ ವಿಬಿಜಿ ಗ್ರಾಮ್ ಜಿ ಎಂಬ ಹೊಸ ಕಾಯ್ದೆಯನ್ನು ತರಲಾಗಿದ್ದು, ಇದರಿಂದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ವಿಬಿಜಿ ಗ್ರಾಮ್ ಜಿ ಕಾಯ್ದೆ ರದ್ದಾಗಬೇಕು. MNREGA ಮುಂದುವರಿಯಲೇಬೇಕು. ಇದಕ್ಕಾಗಿ ಜನ ಚಳುವಳಿಗೆ ಸಿದ್ಧರಾಗಬೇಕು ಎಂದು ಸಿಎಂ ಹೇಳಿದರು.

MNREGA ದಲಿತರು, ಮಹಿಳೆಯರು ಹಾಗೂ ಕಾರ್ಮಿಕರಿಗೆ ಉದ್ಯೋಗ ನೀಡುವ ಸಂವಿಧಾನಾತ್ಮಕ ಹಕ್ಕು. ಈ ಹಕ್ಕನ್ನು ಯಾವುದೇ ಕಾರಣಕ್ಕೂ ಕಿತ್ತುಕೊಳ್ಳಬಾರದು ಎಂದು ಒತ್ತಾಯಿಸಿದರು.

ಭೀಕರ ದುರಂತ; ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು!

0

ಶಿವಮೊಗ್ಗ:- ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್​ನ ಭದ್ರಾ ನಾಲೆಯಲ್ಲಿ ಕಾಲುಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲಾದ ಘಟನೆ ಜರುಗಿದೆ.

ಮೃತರನ್ನು ನೀಲಾ ಬಾಯಿ(50), ಮಗ ರವಿ(23), ಮಗಳು ಶ್ವೇತಾ(24) ಮತ್ತು ಅಳಿಯ ಪರಶುರಾಮ(28) ಎಂದು ಗುರುತಿಸಲಾಗಿದೆ. ಮಾರಿ ಹಬ್ಬಕ್ಕೆಂದು ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್​​ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದಾರೆ. ಒಬ್ಬರು ಕಾಲು ಜಾರಿ ಭದ್ರಾ ನಾಲೆಗೆ ಬಿದ್ದಿದ್ದು, ಅವರನ್ನ ರಕ್ಷಿಸಲು ಹೋಗಿ ನಾಲ್ವರೂ ನೀರುಪಾಲಾಗಿದ್ದಾರೆ.

ಸದ್ಯ ಶವಗಳಿಗಾಗಿ ಹೊಳೆಹೊನ್ನೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ನಡೆದಿದೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗಿಲ್ಲಿ ನಟ ಬಿಗ್​ ಬಾಸ್​ ಟ್ರೋಫಿ ಗೆದ್ದರೆ 20 ಲಕ್ಷ ರೂಪಾಯಿ ಕೊಡ್ತೀನಿ; ಪರಿಷತ್ ಶಾಸಕ ಶರವಣ ಘೋಷಣೆ!

0

‘ಬಿಗ್ ಬಾಸ್ ಕನ್ನಡ ಸೀಸನ್ 12’ ಗ್ರ್ಯಾಂಡ್ ಫಿನಾಲೆ ಈಗಾಗಲೇ ಆರಂಭವಾಗಿದ್ದು.,ಇನ್ನೇನು ಕೆಲವೇ ಕ್ಷಣಗಳಲ್ಲಿ ವಿನ್ನರ್ ಘೋಷಣೆ ಆಗಲಿದೆ.

ಈ ನಡುವೆ ಗಿಲ್ಲಿ ಅವರೇ ಈ ಸೀಸನ್ ವಿನ್ನರ್ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ನಡುವೆ ಜೆಡಿಎಸ್‌ ಎಂಎಲ್‌ಸಿ ಟಿ.ಎ. ಶರವಣ ಮಹತ್ವದ ಘೋಷಣೆ ಮಾಡಿದ್ದಾರೆ. ಗಿಲ್ಲಿ ಬಿಗ್ ಬಾಸ್ ವಿನ್ನರ್ ಆದರೆ ತಮ್ಮ ಕಡೆಯಿಂದ ಬರೋಬ್ಬರಿ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ.

“ರೈತನ ಮಗ ಗಿಲ್ಲಿ ಈ ಬಾರಿ ಗೆಲ್ಲಲೇಬೇಕು. ಗಿಲ್ಲಿಯೇ ಈ ಸೀಸನ್‌ನ ವಿನ್ನರ್ ಆಗುತ್ತಾರೆ ಎಂಬ ವಿಶ್ವಾಸ ನನಗಿದೆ. ನಾನೂ ಪ್ರತಿದಿನ ಬಿಗ್ ಬಾಸ್ ನೋಡುತ್ತೇನೆ. ರನ್ನರ್‌ಅಪ್ ಸ್ಥಾನಕ್ಕೆ ರಕ್ಷಿತಾ ಅಥವಾ ಅಶ್ವಿನಿ ಬರಬಹುದು” ಎಂದು ಶರವಣ ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ಹವಾ ಜೋರಾಗಿದ್ದು, ವಿನ್ನರ್ ಬಗ್ಗೆ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.

ಕಾರಿನಲ್ಲಿ ಕುಳಿತು ರಾಜಾರೋಷವಾಗಿ ಗನ್ ತೋರಿಸಿದ ವ್ಯಕ್ತಿ! ದೂರು ದಾಖಲು

0

ಬೆಂಗಳೂರು: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನೊಳಗೆ ಕುಳಿತು ವ್ಯಕ್ತಿಯೊಬ್ಬ ಗನ್ ಪ್ರದರ್ಶಿಸಿದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ತಾಳಕೆರೆ ಹ್ಯಾಂಡ್ ಪೋಸ್ಟ್ ಬಳಿ ನಡೆದ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸ್ವಯಂಪ್ರೇರಿತವಾಗಿ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯಲ್ಲಿ ವ್ಯಕ್ತಿ ಪ್ರದರ್ಶಿಸಿದ ಗನ್ ಅಸಲಿಯೇ ಅಥವಾ ನಕಲಿಯೇ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಗನ್ ಪ್ರದರ್ಶನ ಮಾಡಿದ ಹಿನ್ನೆಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ: ಲಕ್ನೋದಲ್ಲಿ ತುರ್ತು ಭೂಸ್ಪರ್ಶ

0

ಲಕ್ನೋ: ದೆಹಲಿಯಿಂದ ಬಾಗ್ಡೋಗ್ರಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಮೇಲೆ ಬರೆದ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದ್ದು, ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.

ಇಂಡಿಗೋ ವಿಮಾನ 6E-6650 ದೆಹಲಿಯಿಂದ ಬಾಗ್ಡೋಗ್ರಾಗೆ ಹಾರಾಟ ನಡೆಸುತ್ತಿತ್ತು. ಹಾರಾಟದ ವೇಳೆ ವಿಮಾನದ ಶೌಚಾಲಯದಲ್ಲಿರುವ ಟಿಶ್ಯೂ ಪೇಪರ್ ಮೇಲೆ “ವಿಮಾನದಲ್ಲಿ ಬಾಂಬ್ ಇದೆ” ಎಂದು ಬರೆದಿರುವುದು ಸಿಬ್ಬಂದಿಗೆ ಗಮನಕ್ಕೆ ಬಂದಿದೆ.

ತಕ್ಷಣವೇ ಪೈಲಟ್‌ಗಳು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ಮಾಹಿತಿ ನೀಡಿದ್ದು, ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದರು. ಬೆಳಿಗ್ಗೆ 8:46ರ ಸುಮಾರಿಗೆ ಎಟಿಸಿಗೆ ಬಾಂಬ್ ಬೆದರಿಕೆ ಕುರಿತ ಸಂದೇಶ ರವಾನೆಯಾಗಿದ್ದು, ವಿಮಾನವು ಬೆಳಿಗ್ಗೆ 9:17ಕ್ಕೆ ಸುರಕ್ಷಿತವಾಗಿ ಲಕ್ನೋದಲ್ಲಿ ಇಳಿಯಿತು.

ಈ ಘಟನೆಯ ಕುರಿತು ಸಂಬಂಧಿಸಿದ ಭದ್ರತಾ ಮತ್ತು ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಸಂಪೂರ್ಣ ಭದ್ರತಾ ತಪಾಸಣೆಗೆ ಇಂಡಿಗೋ ಏರ್‌ಲೈನ್ಸ್ ಸಹಕರಿಸುತ್ತಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಆಗಿರುವ ಅನಾನುಕೂಲತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪ್ರಯಾಣಿಕರಿಗೆ ಉಪಾಹಾರ ಒದಗಿಸಲಾಗಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ ಎಂದು ಇಂಡಿಗೋ ಏರ್‌ಲೈನ್ಸ್ ಸ್ಪಷ್ಟಪಡಿಸಿದೆ.

ಲಕ್ಕುಂಡಿಯಲ್ಲಿ ಚಿನ್ನ, ಬೆಳ್ಳಿ ಅನ್ವೇಷಣೆ ನಮ್ಮ ಉದ್ದೇಶವಲ್ಲ- ಇತಿಹಾಸದ ಅನ್ವೇಷಣೆ ಮುಖ್ಯ: ಎ ದೇವರಾಜು

0

ಗದಗ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ಉತ್ಖನನ ಸ್ಥಳಕ್ಕೆ ಪುರಾತತ್ವ ಇಲಾಖೆ ಮೈಸೂರು, ಹಂಪಿ ಹಾಗೂ ಧಾರವಾಡ ವಲಯದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಮಾತನಾಡಿದ ಪುರಾತತ್ವ ಇಲಾಖೆ ಮೈಸೂರು ವಲಯ ಆಯುಕ್ತ ಎ. ದೇವರಾಜು, ಉತ್ಖನನ ಕಾರ್ಯ ಪೂರ್ವನಿಗದಿತವಾಗಿದ್ದು, ಮೇ 15ರಂದು ಅನುಮತಿ ದೊರೆತಿತ್ತು. ಜೂನ್ 3ರಂದು ಮುಖ್ಯಮಂತ್ರಿ ಭೂಮಿ ಪೂಜೆ ನೆರವೇರಿಸಿದ್ದರು. ಮಳೆಗಾಲದ ಕಾರಣ ಆ ವೇಳೆ ಉತ್ಖನನ ಕಾರ್ಯ ಆರಂಭವಾಗಿರಲಿಲ್ಲ. ಕಳೆದ ಮೂರು ದಿನಗಳಿಂದ ಉತ್ಖನನ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.

ದೇವಾಲಯ ಹಾಗೂ ಮುಂದಿನ ಕೊಳದ ನಡುವೆ ಸಂಪರ್ಕವಿದ್ದ ಮಾಹಿತಿ ಲಭ್ಯವಾಗಿದೆ. ಇಲ್ಲಿ ಸಾಕಷ್ಟು ಚಿನ್ನ ಸಿಗಬಹುದು ಎಂದು ಕೆಲವರು ಹೇಳುತ್ತಿದ್ದರೂ, ಚಿನ್ನ ಅಥವಾ ಬೆಳ್ಳಿ ಅನ್ವೇಷಣೆ ನಮ್ಮ ಉದ್ದೇಶವಲ್ಲ. ಇತಿಹಾಸದ ಕುರುಹುಗಳ ಅನ್ವೇಷಣೆಯೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದರು. ನಿಧಿ ಸಿಕ್ಕಿರುವುದು ಕೇವಲ ಆಕಸ್ಮಿಕವಾಗಿದ್ದು, ನಿಧಿ ಹುಡುಕಾಟ ನಡೆಯುತ್ತಿಲ್ಲ. ಇದು ಶಿಲ್ಪಕಲೆ ಮತ್ತು ಪುರಾತತ್ವ ಅವಶೇಷಗಳ ಹುಡುಕಾಟವಾಗಿದೆ ಎಂದು ಹೇಳಿದರು.

ಲಕ್ಕುಂಡಿಯಲ್ಲಿ ಹಿಂದೆ ಟಂಕಸಾಲೆ ಇತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅದಕ್ಕೆ ದಾಖಲೆ ರೂಪದಲ್ಲಿ ಮುತ್ತು, ರತ್ನ, ಹವಳ ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ. ಇದರಿಂದ ಇಲ್ಲಿ ಟಂಕಸಾಲೆ ಇತ್ತು ಎಂಬುದು ನಿರೂಪಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೇನು ಪತ್ತೆಯಾಗಬಹುದು ಎಂಬ ಕುತೂಹಲವಿದೆ ಎಂದು ತಿಳಿಸಿದರು.

ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದ್ದು, ತಾಂತ್ರಿಕ ಸಮಿತಿಯನ್ನು ರಚಿಸಿ ಪತ್ತೆಯಾದ ಅವಶೇಷಗಳ ಕಾಲಘಟ್ಟವನ್ನು ನಿರ್ಧರಿಸಲಾಗುತ್ತದೆ. ಜೊತೆಗೆ ಸಂಬಂಧಿತ ಕುಟುಂಬಗಳಿಗೆ ಪರಿಹಾರ ನಿಗದಿ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಯುಕ್ತ ಎ. ದೇವರಾಜು ತಿಳಿಸಿದ್ದಾರೆ.

error: Content is protected !!