Home Blog Page 16

ಮೂರು ದಿನದಲ್ಲಿ ಮನೆ ಹಕ್ಕುಪತ್ರ ನೀಡಿ: ಶಾಸಕ ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಜನತಾ ದರ್ಶನದ ಮಾದರಿಯಲ್ಲಿ ಪ್ರಜಾ ಸೇವಾ ಅಭಿಯಾನವನ್ನೂ ಯಶಸ್ವಿಗೊಳಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗದಗ-ಬೆಟಗೇರಿ ಪಾಲಾ-ಬಾದಾಮಿ ರಸ್ತೆಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ತಾರಾಲಯದ ಆವರಣದಲ್ಲಿ ಶನಿವಾರ ಪ್ರಜಾ ಸೇವಾ ಇಲಾಖೆಯಿಂದ ‘ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿ ಸಹಕಾರ’ ಆಶಯದಡಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾ ಸೇವಾ ಅಭಿಯಾನ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಬಳಿಗೆ ತೆರಳಿ ಸಮಸ್ಯೆ ಆಲಿಸುವುದು, ಅರ್ಜಿ ಸ್ವೀಕರಿಸಿ ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರ ಕಲ್ಪಿಸುವುದು ಅಭಿಯಾನದ ಉದ್ದೇಶ. ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸ್ವೀಕರಿಸಿದ ಅರ್ಜಿಗಳ ವಾಸ್ತವಾಂಶ ಪರಿಶೀಲಿಸಿ ನಿಯಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದರು.

ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಮಧ್ಯಾಹ್ನ 12 ಗಂಟೆಯೊಳಗೆ 205 ಹಾಗೂ ನಂತರ ಸೇರಿದಂತೆ ಒಟ್ಟು 445 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 380 ಅರ್ಜಿಗಳು ಮನೆಗಾಗಿ ಸಲ್ಲಿಕೆಯಾಗಿರುವುದು ಗಮನಾರ್ಹ. ಅರ್ಹ ಕುಟುಂಬಗಳಿಗೆ ವಿವಿಧ ವಸತಿ ಯೋಜನೆಗಳಡಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮನೆಗಾಗಿ ಬಂದ 380 ಅರ್ಜಿಗಳನ್ನು ವಿಳಂಬವಿಲ್ಲದೆ ಪರಿಶೀಲಿಸಿ, ಅರ್ಜಿದಾರರ ಅರ್ಹತೆ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ಮೂರು ದಿನಗಳೊಳಗಾಗಿ ಕಾನೂನುಬದ್ಧವಾಗಿ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದರು.

ಗದಗ ಜಿಲ್ಲೆಯಲ್ಲಿ ಮನೆ ಹಾಗೂ ಹಕ್ಕುಪತ್ರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು. ಮುಂದಿನ ಕ್ರಮಗಳ ಕುರಿತು ಸಾರ್ವಜನಿಕರಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾ ಸೇವಾ ಅಭಿಯಾನ ಕೇವಲ ಅರ್ಜಿ ಸ್ವೀಕರಿಸುವ ಕಾರ್ಯಕ್ರಮವಾಗಬಾರದು. ಅರ್ಹರಿಗೆ ಸರ್ಕಾರದ ಸೇವೆ ತಲುಪುವವರೆಗೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜನರು ಮತ್ತು ಅಧಿಕಾರಿಗಳ ಸಹಕಾರದಿಂದಲೇ ಅಭಿಯಾನ ಯಶಸ್ವಿಯಾಗಲಿದೆ.

— ಡಾ. ಎಚ್.ಕೆ. ಪಾಟೀಲ, ಶಾಸಕ

ಜನತಾ ದರ್ಶನ ಮಾದರಿಯಲ್ಲಿ ಕಾರ್ಯ

ಜಿಲ್ಲೆಯಲ್ಲಿ ನಾಲ್ಕು ಬಾರಿ ನಡೆದ ಜನತಾ ದರ್ಶನಗಳಲ್ಲಿ 2,987ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, ಬಹುತೇಕ ಅರ್ಜಿಗಳು ವಿಲೇವಾರಿಯಾಗಿವೆ. ಸದ್ಯ 147 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ ಎಂದು ಶಾಸಕ ಎಚ್.ಕೆ. ಪಾಟೀಲ ತಿಳಿಸಿದರು. ಇದೇ ಮಾದರಿಯಲ್ಲಿ ಪ್ರಜಾ ಸೇವಾ ಅಭಿಯಾನದಲ್ಲೂ ಅರ್ಜಿಗಳ ವಿಲೇವಾರಿ ಮಾತ್ರವಲ್ಲದೆ, ಅರ್ಜಿದಾರರಿಗೆ ಮಾಹಿತಿ ನೀಡುವ ಹಾಗೂ ಸೇವೆ ದೊರೆಯುವವರೆಗೆ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದರು.

ಬಿಸಿಎನ್ ಶಾಲೆಗೆ ಕ್ರೀಡಾಕೂಟದ ಚಾಂಪಿಯನ್‌ಶಿಪ್

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ಸ್ಪೆಕ್ಟ್ರಂ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಗ್ರೂಪ್ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಎರಡನೇ ಬಾರಿಗೆ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದಾರೆ.

ಸೆ. 10ರಂದು ನಡೆದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದರು. ಶಶಿಧರ ನಂದೆಣ್ಣವರ 100 ಮೀ. ಓಟ, 80 ಮೀ. ಹರ್ಡಲ್ಸ್ ಹಾಗೂ ಉದ್ದ ಜಿಗಿತದಲ್ಲಿ, ವರ್ಷಿತಾ ವಾಲ್ಮೀಕಿ ಎತ್ತರ ಜಿಗಿತ, 80 ಮೀ. ಹರ್ಡಲ್ಸ್ ಹಾಗೂ 200 ಮೀ. ಓಟದಲ್ಲಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದರು.

ಪವಿತ್ರ ಓಂಕಾರಿ 400 ಮೀ. ಓಟ ಹಾಗೂ ಎತ್ತರ ಜಿಗಿತ, ಫಿಜಾ ಕೌಸರ್ ಕಣವಿ 400 ಮೀ. ಓಟ, ಮಣಿಕಂಠ ಬನ್ನಿ ಚಕ್ರ ಎಸೆತ ಹಾಗೂ ಸೈಯದ್ ಮುಸ್ತಾಕೀನ್ 100 ಮೀ. ಓಟದಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಬಾಲಕರ ವಾಲಿಬಾಲ್, ಥ್ರೋಬಾಲ್, ಬಾಲಕಿಯರ ಕಬಡ್ಡಿ ಹಾಗೂ ರಿಲೇ ಸ್ಪರ್ಧೆಗಳಲ್ಲೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಒಟ್ಟಾರೆ 91 ಅಂಕ ಗಳಿಸಿದ ಶಾಲಾ ತಂಡ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದೆ.

ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡೆಯ ಮೂಲಕ ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯ, ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ನಿರ್ದೇಶಕ ಲೋಹಿತ ನೆಲವಗಿ ತಿಳಿಸಿದ್ದಾರೆ.

ಜ್ಞಾನೇಶ್ವರಿ ಪಾರಾಯಣಕ್ಕೆ ರಜತ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಶ್ರಾವಣ ಮಾಸದ ಶ್ರೀ ಜ್ಞಾನೇಶ್ವರಿ ಪಾರಾಯಣದ 25ನೇ ವರ್ಷದ ರಜತ ಮಹೋತ್ಸವ ಶನಿವಾರ ಭಕ್ತಿಭಾವದಿಂದ ನೆರವೇರಿತು.

ಬೆಳಗ್ಗೆ ಕಾಕಡಾ ಆರತಿ, ಜ್ಞಾನೇಶ್ವರಿ ಪಾರಾಯಣ, ಪ್ರವಚನ, ನಾಮಜಪ, ಕೀರ್ತನೆ ಹಾಗೂ ವಿಶೇಷ ಪೂಜೆಗಳು ನಡೆದವು. ಬಳಿಕ ಪಾಂಡುರಂಗನ ಉತ್ಸವ ಮೂರ್ತಿ ಹಾಗೂ ಜ್ಞಾನೇಶ್ವರಿ ಗ್ರಂಥದ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಪಾಂಡುರಂಗನ ಭಜನೆಗೆ ಹೆಜ್ಜೆ ಹಾಕಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪಾಂಡುರಂಗ-ರುಕ್ಮಾಯಿ ವೇಷ ಧರಿಸಿದ್ದ ಮಕ್ಕಳು ಥೇಟ್ ದೇವರನ್ನೇ ಹೋಲುವಂತೆ ಕಂಗೊಳಿಸಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು.

ಪುಂಡಲೀಕರಾವ್ ಮಾತಾಡೆ, ಸರೋಜಮ್ಮ ನವಲೆ, ಕಿರಣ ನವಲೆ, ನಾಗೇಶ ಮಾಳದಕರ, ವಾಸು ಬೋಮಲೆ, ಪ್ರಭು ಬೋಮಲೆ, ರಮೇಶ ನವಲೆ, ಅರುಣ ನವಲೆ, ಸಂತೋಷ ಸರ್ವದೆ, ಸತೀಶ ಮಾಂಡ್ರೆ, ಪ್ರಭಾಕರ ಮಾಂಡ್ರೆ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ, ಭಜನಾ ಮಂಡಳಿಗಳ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಮಕ್ಕಳ ಕಲಿಕೆಗೆ ಪಾಲಕರ ನಿಗಾ ಅಗತ್ಯ: ಕೆ.ಪಿ. ಸಾಲಿಮಠ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಗುವಿನ ಕೈ ಹಿಡಿದು ಶಾಲೆಗೆ ಕಳುಹಿಸುವುದಷ್ಟೇ ಪಾಲಕರ ಜವಾಬ್ದಾರಿಯಲ್ಲ. ಮಕ್ಕಳ ಕನಸುಗಳಿಗೆ ದಾರಿ ತೋರಿಸುವುದು, ನಡವಳಿಕೆ ಮತ್ತು ಅಭ್ಯಾಸ ಗಮನಿಸುವುದು ಹಾಗೂ ಕಲಿಕೆಯ ಹಾದಿಯಲ್ಲಿ ಶಿಕ್ಷಕರೊಂದಿಗೆ ಹೆಜ್ಜೆ ಹಾಕುವುದು ಕೂಡ ಪಾಲಕರ ಕರ್ತವ್ಯ ಎಂದು ಡಯಟ್‌ನ ನಿವೃತ್ತ ಉಪನ್ಯಾಸಕ ಕೆ.ಪಿ. ಸಾಲಿಮಠ ಹೇಳಿದರು.

ಪಟ್ಟಣದ ಶ್ರೀ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾಲಕರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ಕಲಿಕಾ ಪ್ರಗತಿ ಶಾಲೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗುವುದಿಲ್ಲ. ಮನೆಯಲ್ಲಿ ಪಾಲಕರು ನೀಡುವ ಸಮಯ, ಪ್ರೋತ್ಸಾಹ ಹಾಗೂ ಕಲಿಕೆಗೆ ಕಲ್ಪಿಸುವ ವಾತಾವರಣವೂ ಮಹತ್ವದ್ದು. ಪಾಲಕರು ಮಕ್ಕಳ ಗೃಹಪಾಠ, ಗೈರುಹಾಜರಿ, ನಡವಳಿಕೆ ಹಾಗೂ ಕಲಿಕೆಯಲ್ಲಿನ ಏರುಪೇರುಗಳನ್ನು ಗಮನಿಸಿ, ಸಮಸ್ಯೆ ಕಂಡುಬಂದಾಗ ಶಿಕ್ಷಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ನೀಡುತ್ತಿರುವ ಸಹಕಾರ ಶಿಕ್ಷಣದ ಮೇಲಿನ ಸಮಾಜದ ಕಾಳಜಿಗೆ ಸಾಕ್ಷಿಯಾಗಿದೆ. ಶ್ರಾವಣ ಮಾಸದಲ್ಲಿ ದಾನಿಗಳ ಸಹಕಾರದಿಂದ ನಡೆದ ಒಂದು ತಿಂಗಳ ‘ಅಮೃತ ಭೋಜನ’ ಕಾರ್ಯಕ್ರಮವೂ ಇದಕ್ಕೆ ಉದಾಹರಣೆ. ಸಮಾಜದ ಸೌಲಭ್ಯ ಮತ್ತು ಸಹಕಾರವನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ನಿಡಗುಂದಿ, ನರೇಗಲ್ಲ ಹಾಗೂ ಅಬ್ಬಿಗೇರಿ ಕ್ಲಸ್ಟರ್‌ನ 15 ಶಾಲೆಗಳ ಪೈಕಿ ತಮ್ಮ ಶಾಲೆ ಶೇ.100ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ದಾಖಲಿಸಿದ ಏಕೈಕ ಶಾಲೆಯಾಗಿದೆ. ಈ ಸಾಧನೆಯನ್ನು ಮುಂದುವರಿಸಿ ಪ್ರಸಕ್ತ ಸಾಲಿನಲ್ಲೂ ಶೇ.100ರಷ್ಟು ಫಲಿತಾಂಶ ಸಾಧಿಸುವ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಹಾಗೂ ನಿರಂತರ ಪರಿಶ್ರಮದಿಂದ ಅಭ್ಯಾಸ ಮಾಡಿ ಶಾಲೆ ಮತ್ತು ಪಾಲಕರಿಗೆ ಕೀರ್ತಿ ತರಬೇಕು ಎಂದರು.

ಸಭೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಕೆ.ಪಿ. ಸಾಲಿಮಠ ಸಂವಾದ ನಡೆಸಿ, ಮಕ್ಕಳ ಕಲಿಕಾ ಪ್ರಗತಿ, ಗೃಹಪಾಠ, ಗೈರುಹಾಜರಿ ಮತ್ತು ನಡವಳಿಕೆ ಕುರಿತು ಚರ್ಚಿಸಿದರು. 50ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲೆ ಮತ್ತು ಮನೆ ಪರಸ್ಪರ ಕೈಜೋಡಿಸಬೇಕು. ಪಾಲಕರು ಮಕ್ಕಳಿಗೆ ಸಮಯ ನೀಡಿ, ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾಗ ಅವರ ಕಲಿಕೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಪರಿಹರಿಸಲು ಸಾಧ್ಯ.

— ಕೆ.ಪಿ. ಸಾಲಿಮಠ, ನಿವೃತ್ತ ಉಪನ್ಯಾಸಕ, ಡಯಟ್

ಧಾರ್ಮಿಕ ಆಚರಣೆ, ಸತ್ಸಂಗದಿಂದ ಬದುಕಿನಲ್ಲಿ ಸಂಸ್ಕಾರ ಬೆಳೆಸಿ : ಶ್ರೀ ಮುಕ್ತಿಮುನಿ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಸ್ಲಿಮರಿಗೆ ರಂಜಾನ್ ಪವಿತ್ರ ಮಾಸವಾಗಿರುವಂತೆ ಹಿಂದೂಗಳಿಗೂ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದೆ. ಶ್ರಾವಣದಲ್ಲಿ ಧಾರ್ಮಿಕ ಆಚರಣೆ, ಪುರಾಣ ಪ್ರವಚನ ಹಾಗೂ ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದರಿಂದ ಧಾರ್ಮಿಕ ಪ್ರಜ್ಞೆ ಮತ್ತು ಸಂಸ್ಕಾರ ವೃದ್ಧಿಯಾಗುತ್ತದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಆಯೋಜಿಸಿದ್ದ ಪುಟ್ಟರಾಜ ಗವಾಯಿಗಳಿಂದ ರಚಿತ ಶ್ರೀ ವೀರಭದ್ರೇಶ್ವರ ಪುರಾಣದ ಮಂಗಲೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪುರಾಣ ಪ್ರವಚನದ ಉದ್ದೇಶದಿಂದ ಆರಂಭವಾದ ತಾಯಿ ಪಾರ್ವತಿ ಮಕ್ಕಳ ಬಳಗ ಇಂದು ಹೆಮ್ಮರವಾಗಿ ಬೆಳೆದಿದೆ. ಸಂಘ-ಸಂಸ್ಥೆ ಸ್ಥಾಪಿಸುವುದು ಸುಲಭವಾದರೂ ಅವುಗಳನ್ನು ನಿರಂತರವಾಗಿ ಮುನ್ನಡೆಸುವುದು ಕಷ್ಟ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಬಳಗದ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಕ್ತಿಮಂದಿರ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ. ಗುರುಭಕ್ತರಾಗಿರುವ ಅವರು ತಮ್ಮ ಕಚೇರಿಯಲ್ಲಿ ಲಿಂ. ಜಗದ್ಗುರು ಗಂಗಾಧರ ಸ್ವಾಮಿಗಳ ಭಾವಚಿತ್ರ ಇರಿಸಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಮುಕ್ತಿಮಂದಿರ ಸಭಾಭವನ ಉದ್ಘಾಟನೆಗೆ ಅವರು ಆಗಮಿಸುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ ಪ್ರತಿಷ್ಠಿತ ವೀರಗಂಗಾಧರ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರ ದೇಸಾಯಿ ವಹಿಸಿದ್ದರು. ಉಪಾಧ್ಯಕ್ಷೆ ಜಯಲಕ್ಷ್ಮಿ ಗಡ್ಡದೇವರಮಠ, ಕಾರ್ಯದರ್ಶಿ ಜಯಲಕ್ಷ್ಮಿ ಗಡ್ಡದೇವರಮಠ, ರೋಹಿಣಿಬಾಯಿ ಬಹದ್ದೂರ ದೇಸಾಯಿ, ಶಾರಕ್ಕ ಮಹಾಂತಶೆಟ್ಟರ ಹಾಗೂ ಪುರಾಣ ಪ್ರವಚನಕಾರ ಪ್ರಭುಗೌಡ ಯಕ್ಕಿಕೊಪ್ಪ ವೇದಿಕೆಯಲ್ಲಿದ್ದರು.

ಜೆ.ಡಿ. ಲಮಾಣಿ, ರೂಪಾ ನವಲೆ, ಸೋಮಯ್ಯ ವಿರಕ್ತಮಠ, ಜಗದೀಶ ಶಿರಹಟ್ಟಿ, ರಮೇಶ ನವಲೆ, ಪರಮೇಶ ತಡಹಾಳ, ಎಸ್.ಎನ್. ಮಳಲಿ, ಹನುಮಂತಪ್ಪ ಭಜಂತ್ರಿ, ಎ.ಎನ್. ನಾವಿ ಸೇರಿದಂತೆ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ವೈಷ್ಣವಿ ಕ್ಷತ್ರಿ ಪ್ರಾರ್ಥಿಸಿದರು. ಸುಚಿತ್ರ ಜಗದಮನಿ ಹಾಗೂ ಶೀಲಾ ತಳವಾರ ಸ್ವಾಗತಿಸಿದರು. ಎಂ.ಸಿ. ಹಿರೇಮಠ ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಮಗಳು ಕೇವಲ ಆಚರಣೆಗೆ ಸೀಮಿತವಾಗದೆ, ನಮ್ಮ ಬದುಕಿನಲ್ಲಿ ಸದಾಚಾರ, ಶಿಸ್ತು ಮತ್ತು ಸಂಸ್ಕಾರ ಬೆಳೆಸುವಂತಿರಬೇಕು. ಪುರಾಣ ಮತ್ತು ಸತ್ಸಂಗದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಅದರ ನಿಜವಾದ ಫಲ ದೊರೆಯುತ್ತದೆ.

— ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು

ನಾಟ್ಯ ಅಕಾಡೆಮಿಗೆ ದಶಕದ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿ ಹತ್ತು ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ. ಇದರ ಹಿಂದೆ ನಿರಂತರ ಪರಿಶ್ರಮ ಮತ್ತು ಸಾಧನೆಯಿದೆ ಎಂದು ಲೇಖಕಿ ಹಾಗೂ ಮುಂಡರಗಿಯ ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ಹೇಳಿದರು.

ನಗರದ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಅಕಾಡೆಮಿಯ ದಶಕದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿರುವ ಆಸಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಿ ಪಾಲಕರು ಪ್ರೋತ್ಸಾಹಿಸಬೇಕು. ಚಿಕ್ಕ ವಯಸ್ಸಿನಲ್ಲಿ ಕಲಿಸುವ ವಿಷಯಗಳನ್ನು ಮಕ್ಕಳು ಸುಲಭವಾಗಿ ಗ್ರಹಿಸುತ್ತಾರೆ. ಅವರ ಆಸಕ್ತಿಗೆ ಅನುಗುಣವಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಪಾಲಕರು ಸಹಕಾರ ನೀಡಬೇಕು ಎಂದರು.

ಸ್ಪರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಪ್ರಭಾ ದೇಸಾಯಿ ಮಾತನಾಡಿ, ಒಂದು ವಿದ್ಯಾರ್ಥಿಯಿಂದ ಆರಂಭವಾದ ಅಕಾಡೆಮಿಯಲ್ಲಿ ಇಂದು 150ಕ್ಕೂ ಹೆಚ್ಚು ಮಕ್ಕಳು ನೃತ್ಯ ಕಲಿಯುತ್ತಿರುವುದು ಗಮನಾರ್ಹ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು ಎಂದರು.

ಮುಳಗುಂದದ ವೈದ್ಯ ಡಾ. ಎಸ್.ಸಿ. ಚವಡಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ಉಳಿಸುವ ಜವಾಬ್ದಾರಿ ಮಕ್ಕಳ ಮೇಲಿದೆ. ಜಿಲ್ಲೆಯ ವಿವಿಧೆಡೆ ಶಾಖೆಗಳನ್ನು ತೆರೆದು ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿಬಿಐ ನ್ಯೂಸ್ ಸಂಪಾದಕ ವೆಂಕಟೇಶ ಇಮರಾಪುರ ಮಾತನಾಡಿ, ವಿದುಷಿ ರಾಘವಿ ಜ್ಯೋತಿಶ್ರೀ ಅವರು ಹತ್ತು ವರ್ಷಗಳ ಹಿಂದೆ ಒಬ್ಬ ವಿದ್ಯಾರ್ಥಿಯಿಂದ ಆರಂಭಿಸಿದ ಅಕಾಡೆಮಿ ಇಂದು ಗದಗ, ಮುಂಡರಗಿ, ಅಣ್ಣಿಗೇರಿ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ಏಳು ಶಾಖೆಗಳನ್ನು ಹೊಂದಿದೆ ಎಂದು ಹೇಳಿದರು.

ಕಾರ್ಯಾಧ್ಯಕ್ಷ ಫಕೀರಪ್ಪ ಹೆಬಸೂರ ಸೇರಿದಂತೆ ಗಣ್ಯರು ಮಾತನಾಡಿದರು. ಅಕಾಡೆಮಿ ನಿರ್ದೇಶಕಿ ವಿದುಷಿ ರಾಘವಿ ಜ್ಯೋತಿಶ್ರೀ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ನಾಗರತ್ನಾ ಕುಂಬಾರ ನಿರೂಪಿಸಿದರು. ಬಳಿಕ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.

ಮಕ್ಕಳ ಪ್ರತಿಭೆ ಮತ್ತು ಆಸಕ್ತಿಯನ್ನು ಗುರುತಿಸಿ ಸರಿಯಾದ ಪ್ರೋತ್ಸಾಹ ನೀಡಿದರೆ ಅವರು ಕಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ಪಾಲಕರ ಬೆಂಬಲವೇ ಮಕ್ಕಳ ಆತ್ಮವಿಶ್ವಾಸಕ್ಕೆ ದೊಡ್ಡ ಶಕ್ತಿ.

— ವೀಣಾ ಪಾಟೀಲ

ಗಡಿಗೆ ಒಡೆಯಲು ಗೋವಿಂದರ ರೋಚಕ ಸಾಹಸ

0

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಒಕ್ಕಲಗೇರಿ ಓಣಿಯ ಶ್ರೀ ರಾಚೋಟೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಮೊಸರು ಗಡಿಗೆ ಒಡೆಯುವ ರೋಚಕ ಸ್ಪರ್ಧೆ ನೂರಾರು ಜನರ ಗಮನ ಸೆಳೆಯಿತು. ಯುವಕರ ಸಾಹಸ, ತಂಡಸ್ಫೂರ್ತಿ ಹಾಗೂ ಭಕ್ತರ ಹರ್ಷೋದ್ಗಾರದ ನಡುವೆ ನಡೆದ ಸ್ಪರ್ಧೆಯಲ್ಲಿ ಆರ್.ವಾಯ್.ಎಸ್. ಸಂಘ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿತು.

ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದ ಸಾಹಸಮಯ ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದವು. ಪ್ರತಿ ತಂಡದಲ್ಲಿ 13 ಆಟಗಾರರಿದ್ದು, ಒಬ್ಬರ ಮೇಲೊಬ್ಬರು ನಿಂತು ಮಾನವ ಗೋಪುರ ನಿರ್ಮಿಸಿ, ಮೇಲಿದ್ದ ಆಟಗಾರ ಗಡಿಗೆ ಒಡೆಯುವ ದೃಶ್ಯ ರೋಮಾಂಚನ ಮೂಡಿಸಿತು. ಗಂಗಿಮಡಿ ಯುವಕರ ತಂಡ ದ್ವಿತೀಯ ಹಾಗೂ ಖಾನತೋಟದ ಯುವಕರ ತಂಡ ತೃತೀಯ ಸ್ಥಾನ ಗಳಿಸಿತು.

ಶ್ರೀಕೃಷ್ಣನ ಬಾಲಲೀಲೆಯನ್ನು ಸ್ಮರಿಸುವ ಈ ಆಚರಣೆಯು ಧಾರ್ಮಿಕ ಹಾಗೂ ಸಾಮಾಜಿಕ ಮಹತ್ವ ಹೊಂದಿದೆ. ಬಾಲಕೃಷ್ಣನು ಗೆಳೆಯರೊಂದಿಗೆ ಸೇರಿ ಗೋಪಿಕೆಯರ ಮನೆಯಲ್ಲಿ ಎತ್ತರದಲ್ಲಿ ಕಟ್ಟಿದ್ದ ಮೊಸರು, ಬೆಣ್ಣೆ ಮತ್ತು ಹಾಲಿನ ಗಡಿಗೆಗಳನ್ನು ಕದ್ದು ತಿನ್ನುತ್ತಿದ್ದ ಪ್ರಸಂಗವನ್ನು ನೆನಪಿಸುವ ಉದ್ದೇಶದಿಂದ ಯುವಕರು ಮಾನವ ಗೋಪುರ ನಿರ್ಮಿಸಿ ಗಡಿಗೆ ಒಡೆಯುತ್ತಾರೆ.

ನವೀನ ನಾಲ್ವಾಡ ಮಾತನಾಡಿ, ಗಡಿಗೆ ಒಡೆಯುವ ಯುವಕರನ್ನು ‘ಗೋವಿಂದರು’ ಎಂದು ಕರೆಯಲಾಗುತ್ತದೆ. ಒಬ್ಬರ ಮೇಲೊಬ್ಬರು ನಿಂತು ಮಾನವ ಗೋಪುರ ನಿರ್ಮಿಸಿ ಗಡಿಗೆ ಒಡೆಯುವ ಮೂಲಕ ಕೃಷ್ಣನ ಬಾಲಲೀಲೆಯನ್ನು ಸ್ಮರಿಸಲಾಗುತ್ತದೆ. ಆರು ತಂಡಗಳ ಆಟಗಾರರು ಉತ್ಸಾಹದಿಂದ ಪಾಲ್ಗೊಂಡು ಭಕ್ತರನ್ನು ರಂಜಿಸಿದರು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜು ಖಾನಪ್ಪನವರ, ಸಿದ್ದು ಸಂಗನಾಳ, ವೀರಣ್ಣ ಮೇಟಿ, ಮಂಜು ಅಂತರಗೊಂಡ, ಚೇತನ್ ಅಬ್ಬಿಗೇರಿ, ಮಲ್ಲು ಮಹಾಂತಶೆಟ್ಟರ, ಮಂಜುನಾಥ ಕುರ್ತಕೋಟಿ, ಈಶ್ವರ ಹಳ್ಳಿ, ಕಿರಣ್ ಕಮತರ, ಪರಶುರಾಮ ಹಳ್ಳದ, ನರಸಪ್ಪ ತುಕ್ಕಪ್ಪನವರ, ಬಸವರಾಜ ಹುಬ್ಬಳ್ಳಿ, ನಾಗರಾಜ ಮೇಣಸಗಿ, ವೀರೂಪಾಕ್ಷಪ್ಪ ಹೆಬ್ಬಳ್ಳಿ, ಮಹೇಶ ರೋಖಡೆ, ಸುರೇಶ ಹೆಬಸೂರ, ಹೇಮಂತ್ ಗಿಡ್ಡಹನಮಣ್ಣವರ, ಆನಂದ ಗವಲಿ, ಪಂಚಾಕ್ಷರಿ ಅಂಗಡಿ, ಸೋಮು ಮುಳಗುಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಟ್ರೋಪಿ ಜತೆಗೆ ನಗದು ಬಹುಮಾನ

ಪ್ರಥಮ ಸ್ಥಾನ ಪಡೆದ ಆರ್.ವಾಯ್.ಎಸ್. ಸಂಘಕ್ಕೆ ₹10,000 ನಗದು ಹಾಗೂ ಟ್ರೋಪಿ, ದ್ವಿತೀಯ ಸ್ಥಾನ ಪಡೆದ ಗಂಗಿಮಡಿ ಯುವಕರ ತಂಡಕ್ಕೆ ₹5,000 ನಗದು ಹಾಗೂ ಟ್ರೋಪಿ, ತೃತೀಯ ಸ್ಥಾನ ಪಡೆದ ಖಾನತೋಟದ ಯುವಕರ ತಂಡಕ್ಕೆ ₹2,500 ನಗದು ಹಾಗೂ ಟ್ರೋಪಿ ನೀಡಿ ಗೌರವಿಸಲಾಯಿತು.

ಗಡಿಗೆ ಒಡೆಯುವ ಕಾರ್ಯಕ್ರಮ ಶ್ರೀಕೃಷ್ಣನ ಬಾಲಲೀಲೆಯನ್ನು ಸ್ಮರಿಸುವ ಜತೆಗೆ ಯುವಕರಲ್ಲಿನ ಸಾಹಸ, ಒಗ್ಗಟ್ಟು ಮತ್ತು ತಂಡಸ್ಫೂರ್ತಿಯನ್ನು ಅನಾವರಣಗೊಳಿಸುತ್ತದೆ. ಇಂತಹ ಸಾಂಪ್ರದಾಯಿಕ ಆಚರಣೆಗಳು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತವೆ.

— ಶ್ರೀಧರ್ ವಜ್ರಬಂಡಿ

ಮೊಬೈಲ್ ವ್ಯಸನ ಮುಂದಿನ ಪೀಳಿಗೆಗೆ ಅಪಾಯಕಾರಿ: ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಒಂದು ಕಾಲದಲ್ಲಿ ಕುಡಿತದ ಚಟ ಬಿಡಿಸಲು ನಿಮ್ಹಾನ್ಸ್‌ಗೆ ಹೋಗುತ್ತಿದ್ದವರು, ಇಂದು ಮೊಬೈಲ್ ಚಟ ಬಿಡಿಸಲು ಅಲ್ಲಿಗೆ ಹೋಗುವ ಸ್ಥಿತಿ ಬಂದಿದೆ. ಮಕ್ಕಳ ಕೈಗಳು ನಡುಗುತ್ತಿದ್ದು, ನಿದ್ರೆಯಲ್ಲೂ ಮೊಬೈಲ್ ಹುಡುಕುವಂತಾಗಿದೆ. ಇದು ಮುಂದಿನ ಪೀಳಿಗೆಯನ್ನೇ ನುಂಗುವ ಮಾನಸಿಕ ಅಸ್ವಸ್ಥತೆಯ ಸಾಧನವಾಗುತ್ತಿದೆ ಎಂದು ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

ಗದಗಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಶುಕ್ರವಾರ ಆಯೋಜಿಸಿದ್ದ ‘ಜೀವನ ದರ್ಶನ’ 62ನೇ ಮಾಲಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮೊಬೈಲ್ ಬಳಕೆಯಿಂದ ಗಂಡ-ಹೆಂಡತಿ, ತಂದೆ-ತಾಯಿ ಮತ್ತು ಮಕ್ಕಳ ನಡುವೆ ಮಾತುಕತೆ, ಚರ್ಚೆ ಕಡಿಮೆಯಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸದ ಬದಲು ದ್ವೇಷ, ಅಸೂಯೆ, ಮತ್ಸರ ಹೆಚ್ಚುತ್ತಿದೆ. ಆದ್ದರಿಂದ ವಾರದಲ್ಲಿ ಒಂದು ದಿನ ಮೊಬೈಲ್ ಮುಟ್ಟದೇ ಕುಟುಂಬದೊಂದಿಗೆ ಸಮಯ ಕಳೆಯಬೇಕು. ಮೊಬೈಲ್ ಹಿತಮಿತ ಬಳಕೆಯಾಗಬೇಕು ಎಂದರು.

ಶ್ರಾವಣ ಮಾಸದ ಮಹತ್ವ ವಿವರಿಸಿದ ಅವರು, ಆಸೆ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಅಹಂಕಾರದಂತಹ ದುರ್ಗುಣಗಳಿಂದ ದೂರವಿದ್ದು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ದುರ್ಗುಣಗಳಿದ್ದರೆ ಜೀವನ ನರಕ, ಸದ್ಗುಣಗಳಿದ್ದರೆ ಜೀವನವೇ ಸ್ವರ್ಗ. ಇದೇ ನಿಜವಾದ ಜೀವನ ದರ್ಶನ ಎಂದರು.

ನಿವೃತ್ತ ಪ್ರಾಚಾರ್ಯ ಡಾ. ಎಫ್.ಸಿ. ಹೊಸೂರು ಮಾತನಾಡಿ, ಪಾಲಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಸತ್ಯದ ಹಾದಿಯ ತಿಳುವಳಿಕೆ ನೀಡಬೇಕು. ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ಬದಲು ಉತ್ತಮ ಪುಸ್ತಕ ನೀಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎ.ಟಿ. ನರೇಗಲ್ ಸಮಿತಿಯ ಕಾರ್ಯಚಟುವಟಿಕೆ ವಿವರಿಸಿದರು. ಗಣ್ಯರಾದ ಡಾ. ಎಫ್.ಸಿ. ಹೊಸೂರು, ಬಸವರಾಜ ಕಮ್ಮಾರ, ಈರಣ್ಣ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು. ಆರ್.ಆರ್. ಕಾಶಪ್ಪನವರ, ಸುದರ್ಶನ ಹಾನಗಲ್ಲ, ಎಸ್.ಎಸ್. ಪಾಳೇಗಾರ, ಆರ್.ಬಿ. ಅಂದಪ್ಪನವರ, ವ್ಹಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಾಶೀ ವಿಶ್ವನಾಥನ ಪಾಲಕಿ ಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಮೊಬೈಲ್ ನಮ್ಮ ಬದುಕನ್ನು ಸುಲಭಗೊಳಿಸಬೇಕೇ ಹೊರತು, ಬದುಕನ್ನೇ ಮೊಬೈಲ್‌ಗೆ ಒಪ್ಪಿಸುವಂತಾಗಬಾರದು. ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಮೊಬೈಲ್ ಬಳಕೆಗೆ ಮಿತಿ ಹಾಕಲೇಬೇಕು.

— ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು

ಪಠ್ಯದ ಜತೆಗೆ ಸಂಸ್ಕಾರವೂ ಮುಖ್ಯ: ಡಾ. ಮಹೇಶ್ವರ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳು ನಿತ್ಯದ ಪಠ್ಯದ ಜತೆಗೆ ಉತ್ತಮ ಸಂಸ್ಕಾರ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ನಂದಿಪುರ ಪುಣ್ಯಕ್ಷೇತ್ರದ ಡಾ. ಮಹೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ನಂದಿಪುರ ಪುಣ್ಯಕ್ಷೇತ್ರದ ಶ್ರೀ ಗುರು ಚರಂತೇಶ್ವರ ಶಾಲೆಯಲ್ಲಿ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಹಾಗೂ ವಾರದ ಸಭೆಯಲ್ಲಿ ಸಾನ್ನಿಧ್ಯ ವಹಿಸಿ, ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಜ್ಞಾನಕ್ಕೆ ಮಾತ್ರ ಸೀಮಿತವಾಗದೆ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಬೆಳೆಸಿಕೊಳ್ಳಬೇಕು. ಇವು ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತವೆ ಎಂದರು.

ತಾಲೂಕು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ನಾಯ್ಕ ಮಾತನಾಡಿ, ಪ್ರತಿಯೊಬ್ಬ ಮಗುವಿನಲ್ಲೂ ಪ್ರತಿಭೆಯಿದ್ದು, ಶಾಲಾ ಹಂತದಲ್ಲಿಯೇ ಅದನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಸಂಪನ್ಮೂಲ ವ್ಯಕ್ತಿ ಪರಮೇಶ್ವರಯ್ಯ ಸೊಪ್ಪಿಮಠ, ಶಿಕ್ಷಣ ಸಂಯೋಜಕರಾದ ಶಿವಲಿಂಗಸ್ವಾಮಿ, ಗುರುಬಸವರಾಜ, ಮುಖ್ಯಗುರು ವೀರೇಶ ಬಸೆಟ್ಟಿ, ಮುಖಂಡ ಅಲ್ಲಾಭಕ್ಷಿ, ಶಾಲಾ ಆಡಳಿತಾಧಿಕಾರಿ ಕೊಟ್ರದೇವರು, ಪಾಲಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಶ್ರೀಕೃಷ್ಣ ಹಾಗೂ ರಾಧೆಯ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳು ಗಮನ ಸೆಳೆದರು. ಹನುಮಾನ್ ಚಾಲೀಸಾ ಪಠಣ, ನೃತ್ಯ ಹಾಗೂ ಭಾಷಣದ ಮೂಲಕ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿದರು. ರಾಧಾ-ಕೃಷ್ಣ ವೇಷಭೂಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿನಿಯರಾದ ಮಾನಸ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಂಕರಗೌಡ ಸ್ವಾಗತಿಸಿದರು. ಹೆಚ್.ಎಂ. ನಚಿಕೇತ ಸ್ವಾಮಿ ವಂದಿಸಿದರು. ಶಿವಮಣಿ ನಿರ್ವಹಿಸಿದರು. ಕೃಷ್ಣನ ವೇಷಧಾರಿ ಮಹಮ್ಮದ್ ಅಪ್ಜಲ್ ಅವರಿಂದ ನಡೆದ ಬೆಣ್ಣೆ ಗಡಿಗೆ ಒಡೆಯುವ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು.

ಪಠ್ಯಜ್ಞಾನ ವಿದ್ಯಾರ್ಥಿಯ ಬುದ್ಧಿಯನ್ನು ಬೆಳೆಸಿದರೆ, ಸಂಸ್ಕಾರ ಮತ್ತು ಪಠ್ಯೇತರ ಚಟುವಟಿಕೆಗಳು ಅವರ ವ್ಯಕ್ತಿತ್ವವನ್ನು ರೂಪಿಸುತ್ತವೆ. ಎರಡಕ್ಕೂ ಸಮಾನ ಆದ್ಯತೆ ದೊರೆತಾಗಲೇ ಸಮಗ್ರ ಬೆಳವಣಿಗೆ ಸಾಧ್ಯ.

— ಡಾ. ಮಹೇಶ್ವರ ಸ್ವಾಮೀಜಿ

ತೃತೀಯ ಭಾಷೆ ಬದಲಿಗೆ ಎಐ ಅಳವಡಿಕೆ ಆದೇಶ ಹಿಂಪಡೆಯಿರಿ : ಹಿಂದಿ ಶಿಕ್ಷಕರ ಸಂಘ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆ ಬದಲಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಕೃತಕ ಬುದ್ಧಿಮತ್ತೆ (ಎಐ) ವಿಷಯ ಅಳವಡಿಸುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ಗದಗ ಜಿಲ್ಲಾ ಘಟಕ ಆಗ್ರಹಿಸಿದೆ.

ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಬಿಜಾಪೂರ ನೇತೃತ್ವದಲ್ಲಿ ಹಿಂದಿ ಶಿಕ್ಷಕರು ಶುಕ್ರವಾರ ಗದಗ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

2026-27ನೇ ಸಾಲಿನಲ್ಲಿ ತೃತೀಯ ಭಾಷೆಯ ಬದಲಿಗೆ ಎಐ ಅಳವಡಿಸುವುದು ಸೂಕ್ತವಲ್ಲ. ಈ ಕಾರಣದಿಂದ ತೃತೀಯ ಭಾಷೆ ಬೋಧಿಸುತ್ತಿರುವ ಶಿಕ್ಷಕರನ್ನು ಅಗತ್ಯವಿರುವ ಹತ್ತಿರದ ಶಾಲೆಗಳಿಗೆ ನಿಯೋಜಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕರು ಹೊರಡಿಸಿರುವ ಸುತ್ತೋಲೆ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆದೇಶದಿಂದ ಕನ್ನಡ, ಹಿಂದಿ, ಇಂಗ್ಲಿಷ್, ಸಂಸ್ಕೃತ ಸೇರಿದಂತೆ ತೃತೀಯ ಭಾಷಾ ಶಿಕ್ಷಕರ ಸೇವಾ ಭದ್ರತೆ ಹಾಗೂ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಗಲಿದೆ. ತ್ರಿಭಾಷಾ ಸೂತ್ರವನ್ನು ಯಥಾವತ್ತಾಗಿ ಮುಂದುವರಿಸಿ, ತೃತೀಯ ಭಾಷಾ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು.

ತೃತೀಯ ಭಾಷೆಗೆ ಬದಲಾಗಿ ಎಐ ಅಳವಡಿಸುವ ಬದಲು, ಈಗಿರುವ ಕಂಪ್ಯೂಟರ್ ಸಾಕ್ಷರತೆ ಅಥವಾ ನೀತಿ ಶಿಕ್ಷಣದ ವಾರದ ನಾಲ್ಕು ಅವಧಿಗಳನ್ನು ಬಳಸಿಕೊಂಡು ಎಐಗೆ ಹೆಚ್ಚುವರಿ ಅವಧಿ ಕಲ್ಪಿಸಬೇಕು. ಇದರಿಂದ ಭಾಷಾ ಕಲಿಕೆಯ ಜತೆಗೆ ವಿದ್ಯಾರ್ಥಿಗಳಿಗೆ ಎಐ ಶಿಕ್ಷಣವೂ ದೊರೆಯಲಿದೆ ಎಂದು ಸಂಘ ಸಲಹೆ ನೀಡಿದೆ.

ಕಳೆದ 10 ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ತೃತೀಯ ಭಾಷಾ ಶಿಕ್ಷಕರ ನೇಮಕಾತಿ ನಡೆದಿಲ್ಲ. ಈ ಬಾರಿಯ ನೇಮಕಾತಿಯಲ್ಲಿಯೂ ಹಿಂದಿ ಶಿಕ್ಷಕರನ್ನು ಕೈಬಿಡಲಾಗಿದ್ದು, ಸಾವಿರಾರು ಹಿಂದಿ ಬಿ.ಎಡ್. ಪದವೀಧರರಿಗೆ ಅನ್ಯಾಯವಾಗಿದೆ. ವಯೋಮಿತಿ ಮೀರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಹಿಂದಿ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ. ರಾಠೋಡ, ರಾಜ್ಯ ಪ್ರತಿನಿಧಿ ಉಮೇಶ ನಿಪ್ಪಾಣಿಕರ, ನಾಗಯ್ಯ ಹಿರೇಮಠ, ಎಸ್.ಎಸ್. ಪಾಟೀಲ, ಕೆ.ಆರ್. ಬಾಕಳೆ, ಬಿ.ಸಿ. ಜೋಗಿನ, ಎಂ.ಡಿ. ನದಾಫ, ಡಾ.ಸಿ.ಎಂ. ರಫೀ, ಡಾ.ಎಚ್.ಎಂ. ಅತ್ತಾರ, ಎನ್.ಎಂ. ಕಾಗದಗಾರ, ನಾಝಬೀನ್‌ಭಾನು ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಐ ಕಲಿಕೆಗೆ ನಮ್ಮ ವಿರೋಧವಿಲ್ಲ. ಆದರೆ ತೃತೀಯ ಭಾಷೆಯನ್ನೇ ತೆಗೆದುಹಾಕಿ ಎಐ ಅಳವಡಿಸುವ ಕ್ರಮದಿಂದ ಭಾಷಾ ಶಿಕ್ಷಣ ಹಾಗೂ ಶಿಕ್ಷಕರ ಸೇವಾ ಭದ್ರತೆಗೆ ಧಕ್ಕೆಯಾಗಲಿದೆ. ಸರ್ಕಾರ ಪರ್ಯಾಯ ವ್ಯವಸ್ಥೆ ರೂಪಿಸಬೇಕು.

— ಎ.ಎಲ್. ಬಿಜಾಪೂರ, ಜಿಲ್ಲಾಧ್ಯಕ್ಷ, ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ