Home Blog Page 160

ಮತ್ತೆ ಹದಗೆಟ್ಟ ಬೆಂಗಳೂರಿನ ವಾಯು ಗುಣಮಟ್ಟ: ರಾಜಧಾನಿ ಗಾಳಿಯಲ್ಲಿ ವಿಷ!?

0

ಬೆಂಗಳೂರು: ಇನ್ನೇನು ಬೆಂಗಳೂರಿನ ವಾಯು ಗುಣಮಟ್ಟ ಸುಧಾರಿಸಿತೆನ್ನುವಷ್ಟರಲ್ಲಿ ಮತ್ತೆ ಕಳಪೆ ಹಂತಕ್ಕೆ ತಲುಪಿದೆ. ಕೆಲ ತಿಂಗಳ ಹಿಂದೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ ಇಂಡೆಕ್ಸ್ (AQI), ಹಂತ ಹಂತವಾಗಿ 130ರ ಆಸುಪಾಸಿಗೆ ಇಳಿದಿತ್ತು. ಆದರೆ ಇಂದಿನ ಅಂಕಿಅಂಶಗಳನ್ನು ನೋಡಿದರೆ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಮತ್ತೆ ವಾಯುಮಾಲಿನ್ಯಕ್ಕೆ ತುತ್ತಾಗಿರುವುದು ಸ್ಪಷ್ಟವಾಗಿದೆ.

ಬೆಂಗಳೂರಿನ ಗಾಳಿಯ ಗುಣಮಟ್ಟ 190ಕ್ಕೆ ತಲುಪಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ. ಇತ್ತೀಚೆಗೆ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದರೂ, ಇನ್ನೂ ವಾಯು ಗುಣಮಟ್ಟ ಅನಾರೋಗ್ಯಕರ ಹಂತದಲ್ಲಿಯೇ ಇದೆ. ಇದೇ ಪರಿಸ್ಥಿತಿ ಮುಂದುವರೆದರೆ, ಬೆಂಗಳೂರಿನ ಸ್ಥಿತಿ ದೆಹಲಿಯಂತಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೂಕ್ಷ್ಮ ಕಣಗಳಿಂದ ಶ್ವಾಸಕೋಶ ಸಮಸ್ಯೆ

ನಗರದಲ್ಲಿ PM2.5 ಮಟ್ಟ 111 ಹಾಗೂ PM10 ಮಟ್ಟ 141ಕ್ಕೆ ಏರಿಕೆಯಾಗಿದೆ. ಈ ಎರಡೂ ಪ್ರಮಾಣಗಳು ಸುರಕ್ಷಿತ ಮಿತಿಯನ್ನು ಮೀರಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮಟ್ಟದಲ್ಲಿವೆ. ವಿಶೇಷವಾಗಿ PM2.5 ಅತಿ ಸೂಕ್ಷ್ಮ ಕಣಗಳು ಶ್ವಾಸಕೋಶದ ಆಳಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆ, ಅಸ್ತಮಾ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ವಾಹನಗಳ ಅತಿಯಾದ ಬಳಕೆ, ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ಧೂಳು, ಕೈಗಾರಿಕಾ ಉತ್ಸರ್ಜನೆ ಹಾಗೂ ಗಾಳಿಯ ಚಲನೆಯ ಕೊರತೆ ವಾಯುಮಾಲಿನ್ಯ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಾಲಿನ್ಯ ಪ್ರಮಾಣ ಇನ್ನಷ್ಟು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

PM10 ಕಣಗಳು ಮಾನವನ ಕೂದಲಿಗಿಂತ ಸುಮಾರು 7 ಪಟ್ಟು ತೆಳುವಾಗಿದ್ದು, PM2.5 ಕಣಗಳು ಕೂದಲಿನ ದಪ್ಪದ ಕೇವಲ ಶೇ.3ರಷ್ಟು ಮಾತ್ರ ಇರುತ್ತವೆ. ಈ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶಕ್ಕೆ ಪ್ರವೇಶಿಸಿ ರಕ್ತದಲ್ಲೂ ಸೇರಬಹುದು. ಇದರಿಂದ ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಹೊರಗೆ ಹೋಗುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಬಳಕೆ, ವಾಹನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ನಗರಕ್ಕೆ ಈಗ ಅನಿವಾರ್ಯವಾಗಿದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ AQI

ಬೆಂಗಳೂರು – 190
ಮಂಗಳೂರು – 164
ಮೈಸೂರು – 96
ಬೆಳಗಾವಿ – 122
ಕಲಬುರಗಿ – 79
ಶಿವಮೊಗ್ಗ – 176
ಬಳ್ಳಾರಿ – 196
ಹುಬ್ಬಳ್ಳಿ – 116
ಉಡುಪಿ – 158
ವಿಜಯಪುರ – 66

ಗಾಳಿಯ ಗುಣಮಟ್ಟದ ಅಳತೆ

ಉತ್ತಮ – 0–50
ಮಧ್ಯಮ – 50–100
ಕಳಪೆ – 100–150
ಅನಾರೋಗ್ಯಕರ – 150–200
ಗಂಭೀರ – 200–300
ಅಪಾಯಕಾರಿ – 300–500+

PUC ಪ್ರಶ್ನೆಪತ್ರಿಕೆ ಲೀಕ್‌ಗೆ ಬ್ರೇಕ್! ಲೀಕ್ ಆದ ಕಾಲೇಜುಗಳಿಗೆ ಬ್ಲಾಕ್ ಲಿಸ್ಟ್, ಮಾನ್ಯತೆ–ಅನುದಾನಕ್ಕೆ ಕತ್ತರಿ

0

ಬೆಂಗಳೂರು: ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿರುವಾಗಲೇ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಘಟನೆ ರಾಜ್ಯಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ, ಜನವರಿ 6ರಂದು ನಡೆದ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದು, ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಆಗಿತ್ತು.

ಈ ಬಗ್ಗೆ ಟಿವಿ9 ಸುದ್ದಿ ಪ್ರಸಾರದ ಬಳಿಕ ಪದವಿ ಪೂರ್ವ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ಮುಂದೆ ಯಾವ ಕಾಲೇಜಿನಿಂದ ಪ್ರಶ್ನೆಪತ್ರಿಕೆ ಲೀಕ್ ಆಗುತ್ತದೋ, ಆ ಕಾಲೇಜನ್ನು ನೇರವಾಗಿ ಬ್ಲಾಕ್ ಲಿಸ್ಟ್‌ಗೆ ಸೇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಕಾಲೇಜುಗಳಾದರೆ ಅನುದಾನ ಕಡಿತ ಹಾಗೂ ಕಪ್ಪುಪಟ್ಟಿಗೆ ಸೇರಿಸುವುದು, ಖಾಸಗಿ ಅನುದಾನರಹಿತ ಕಾಲೇಜುಗಳಾದರೆ ಮಾನ್ಯತೆ ರದ್ದುಪಡಿಸುವ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಇದಲ್ಲದೆ, ಪ್ರಶ್ನೆಪತ್ರಿಕೆ ಲೀಕ್‌ಗೆ ಕಾರಣರಾದ ಪ್ರಾಂಶುಪಾಲರು ಮತ್ತು ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಮತ್ತು ಕಾನೂನು ಕ್ರಮಕ್ಕೂ ಇಲಾಖೆ ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ವೈರಲ್ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದ್ದು, ಪೊಲೀಸ್ ಇಲಾಖೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಲೀಕ್‌ಗೆ ಸಂಬಂಧಿಸಿದ ಖಾತೆಗಳ ವಿವರಗಳನ್ನು ಸಹ ಪೊಲೀಸರಿಗೆ ನೀಡಲಾಗಿದೆ.

8 ವರ್ಷಗಳಿಂದ ಬಾಲಿವುಡ್‌ನಲ್ಲಿ ಅವಕಾಶಗಳೇ ಸಿಗುತ್ತಿಲ್ಲ. ಇದಕ್ಕೆ ಕೋಮುವಾದಿ ಮನಸ್ಥಿತಿಯೂ ಕಾರಣವಾಗಿರಬಹುದು- ಎ.ಆರ್.ರೆಹಮಾನ್

ಬಾಲಿವುಡ್‌ಗೆ ಎವರ್‌ಗ್ರೀನ್ ಸಂಗೀತ ಕೊಟ್ಟ ದಿಗ್ಗಜ, ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಇದೀಗ ಬಾಲಿವುಡ್ ವ್ಯವಸ್ಥೆಯ ವಿರುದ್ಧವೇ ಗಂಭೀರ ಪ್ರಶ್ನೆ ಎತ್ತಿದ್ದಾರೆ. ಬಿಬಿಸಿ ಏಷ್ಯನ್ ನೆಟ್ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ, “ಕಳೆದ 8 ವರ್ಷಗಳಿಂದ ಬಾಲಿವುಡ್‌ನಲ್ಲಿ ನನಗೆ ಅವಕಾಶಗಳೇ ಸಿಗುತ್ತಿಲ್ಲ. ಇದಕ್ಕೆ ಕೋಮುವಾದಿ ಮನಸ್ಥಿತಿಯೂ ಕಾರಣವಾಗಿರಬಹುದು” ಎಂದು ಹೇಳಿರುವುದು ಹೊಸ ವಿವಾದಕ್ಕೆ ಇಂಧನ ಹಾಕಿದೆ.

ನಾನು ಯಾರ ಬಳಿಯೂ ಕೆಲಸಕ್ಕಾಗಿ ಹೋಗಲ್ಲ. ನನ್ನನ್ನು ಹುಡುಕಿ ಬರುವ ಕೆಲಸವನ್ನಷ್ಟೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿರುವ ರೆಹಮಾನ್, 90ರ ದಶಕದಲ್ಲಿ ಇಂತಹ ಪಕ್ಷಪಾತ ಇರಲಿಲ್ಲ ಎಂದು ನೆನಪಿಸಿದ್ದಾರೆ. ಈಗ ಸಂಗೀತ ಕಂಪನಿಗಳು ತಮಗೆ ಅವಕಾಶ ನೀಡದೆ, ಐವರು ಸಂಗೀತ ನಿರ್ದೇಶಕರ ಜೊತೆ ಒಪ್ಪಂದ ಮಾಡಿಕೊಂಡಿರುವುದು ನೋವು ತಂದಿದೆ ಎಂದಿದ್ದಾರೆ.

“ಕಳೆದ 8 ವರ್ಷಗಳಲ್ಲಿ ಅಧಿಕಾರ ಬದಲಾವಣೆ ಆಯ್ತು. ಈಗ ಸೃಜನಶೀಲತೆ ಇಲ್ಲದವರು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದು ಮತೀಯವಾದವೂ ಇರಬಹುದು” ಎಂಬ ರೆಹಮಾನ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ‘ರೋಜಾ’, ‘ಬಾಂಬೆ’, ‘ದಿಲ್ ಸೆ’, ‘ತಾಲ್’ ಮುಂತಾದ ಐತಿಹಾಸಿಕ ಸಿನಿಮಾಗಳಿಗೆ ಸಂಗೀತ ನೀಡಿದರೂ ಕೂಡ, ಇಂದು ಬಾಲಿವುಡ್‌ನಲ್ಲಿ ನಾನು ಇನ್ನೂ ಹೊರಗಿನವನಂತೆ ಕಾಣುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಪರಿಸ್ಥಿತಿ ಇಳಯರಾಜಾ ಅವರಿಗೂ ಎದುರಾಗಿದೆ ಎಂದು ಹೇಳಿದ್ದಾರೆ.

ಇನ್ನೊಂದು ಕಡೆ, ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಮೆಗಾ ಪ್ರಾಜೆಕ್ಟ್ ‘ರಾಮಾಯಣ’ ಸಿನಿಮಾಗೆ ರೆಹಮಾನ್ ಸಂಗೀತ ನೀಡುತ್ತಿರುವುದು ವಿಶೇಷ. “ನಿಮ್ಮ ಹೆಸರು ಮುಸ್ಲಿಂ, ರಾಮಾಯಣಕ್ಕೆ ಮ್ಯೂಸಿಕ್ ಮಾಡಿದರೆ ವಿರೋಧ ಬರಲ್ವಾ?” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೆಹಮಾನ್, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ, ಮಹಾಭಾರತ ಕಥೆಗಳು ನನಗೆ ತುಂಬಾ ಚೆನ್ನಾಗಿ ಗೊತ್ತು. ಅವು ಮಾನವೀಯ ಮೌಲ್ಯಗಳಿಂದ ತುಂಬಿವೆ. ನಾನು ಎಲ್ಲ ಧರ್ಮಗಳ ಒಳ್ಳೇತನವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ಸಕಲೇಶಪುರ | ಮಹಿಳೆಯನ್ನು ಬಲಿ ಪಡೆದಿದ್ದ ಪುಂಡಾನೆ ಕೊನೆಗೂ ಸೆರೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ಮಹಿಳೆ ಶೋಭ ಅವರನ್ನು ಬಲಿ ಪಡೆದಿದ್ದ ಪುಂಡ ಕಾಡಾನೆ ಕೊನೆಗೂ ಸೆರೆ ಸಿಕ್ಕಿದೆ. ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಉಗ್ರ ಕಾರ್ಯಾಚರಣೆಯಲ್ಲಿ ಕಾಡಾನೆಗೆ ಎರಡು ಬಾರಿ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆದರೂ ನಿತ್ರಾಣಗೊಳ್ಳದ ಕಾಡಾನೆ ಸುಮಾರು 12 ಕಿಲೋ ಮೀಟರ್ ದೂರ ಸುತ್ತಾಡಿ ಕೊನೆಗೆ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದ ಕಾಫಿ ತೋಟದಲ್ಲಿ ಕುಸಿದು ಬಿದ್ದಿದೆ.

ಕಾಡಾನೆಯನ್ನು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪುಂಡಾನೆ ಸೆರೆ ಸಿಕ್ಕ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಜನರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಎರಡು ವಾರಗಳ ಹಿಂದೆ ಕೊಡಗು ಭಾಗದಿಂದ ಹಾಸನ ಜಿಲ್ಲೆಗೆ ಪ್ರವೇಶಿಸಿದ್ದ ಈ ಕಾಡಾನೆ ಶೋಭ ಎಂಬ ಮಹಿಳೆಯನ್ನು ಕೊಂದು ಹಾಕಿತ್ತು. ಬಳಿಕ ಜನರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಜನವರಿ 14ರಂದು ಅರಣ್ಯ ಸಚಿವರಿಂದ ಸೆರೆ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು.

ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರಗಳಿಂದ ಧನಂಜಯ, ಸುಗ್ರೀವ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಎಂಬ ಐದು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಕರೆತರಲಾಗಿತ್ತು. ಜ.16ರಂದು ಬೆಳಗ್ಗೆಯೇ ಇಟಿಎಫ್ ಸಿಬ್ಬಂದಿ ಪುಂಡಾನೆಯನ್ನು ಹುಡುಕಾಟ ಆರಂಭಿಸಿದ್ರು. ಮಧ್ಯಾಹ್ನ ಡ್ರೋನ್ ಬಳಸಿ ಚಂದಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಇರುವ ಸ್ಥಳ ಪತ್ತೆ ಮಾಡಲಾಯಿತು.

ಮಧ್ಯಾಹ್ನ 3 ಗಂಟೆಗೆ ಕಾರ್ಯಾಚರಣೆ ಆರಂಭವಾಗಿದ್ದು, 3:45ಕ್ಕೆ ವೈದ್ಯ ರಮೇಶ್ ಮೊದಲ ಅರವಳಿಕೆ ಚುಚ್ಚುಮದ್ದು ನೀಡಿದರು. ನಂತರ ಕಾಡಾನೆ ಕಾಫಿ ತೋಟ, ರೈತರ ಜಮೀನುಗಳಲ್ಲಿ ಓಡಾಡಿತು. ನಿತ್ರಾಣಗೊಳ್ಳದ ಹಿನ್ನೆಲೆ ಮತ್ತೊಮ್ಮೆ ಚುಚ್ಚುಮದ್ದು ನೀಡಲಾಯಿತು. ಎರಡೂ ಡೋಸ್ ಬಳಿಕವೂ ಕಾಡಾನೆ ಎರಡು ಗಂಟೆಗಳ ಕಾಲ ಓಡಾಡಿ ಸಂಜೆ 6:45ರ ಸುಮಾರಿಗೆ ಕುಸಿದು ಬಿದ್ದಿತು.

ಬಿದ್ದ ಬಳಿಕ ಸಾಕಾನೆಗಳ ಸಹಾಯದಿಂದ ಆರೈಕೆ ನೀಡಿ ರಿವರ್ಸಲ್ ಇಂಜೆಕ್ಷನ್ ನೀಡಲಾಯಿತು. ಎಚ್ಚರಗೊಂಡ ನಂತರ ಕುಮ್ಕಿ ಆನೆಗಳು ಸುತ್ತುವರೆದು ನಿಯಂತ್ರಿಸಿ, ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಲಾಯಿತು. ಕತ್ತಲಾದರೂ ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದರಿಂದ ಜನಸಮೂಹ ನಿಯಂತ್ರಣ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು.

ನಾಳೆಯೇ BBK12 ಫಿನಾಲೆ: ಹಳೆಯ ವಿನ್ನರ್‌ಗಳ ಲಿಸ್ಟ್ ಇಲ್ಲಿದೆ ನೋಡಿ, ಈ ಬಾರಿ ಯಾರ ಕೈ ಸೇರಲಿದೆ ಟ್ರೋಫಿ?

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಈ ಬಾರಿ ಟ್ರೋಫಿ ಯಾರ ಕೈ ಸೇರುತ್ತೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಪೀಕ್ ಮಟ್ಟ ತಲುಪಿದೆ. ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ, ರಕ್ಷಿತಾ, ರಘು ಮತ್ತು ಧನುಶ್ — ಈ ಆರು ಮಂದಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ.

ಫಿನಾಲೆ ಹತ್ತಿರ ಬರುತ್ತಿದ್ದಂತೆ, ಹಳೆಯ ಸೀಸನ್‌ಗಳ ವಿನ್ನರ್‌ಗಳ ಚರ್ಚೆ ಮತ್ತೆ ಟ್ರೆಂಡ್ ಆಗಿದೆ. 2013ರಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡ ಮೊದಲ ಸೀಸನ್‌ನಲ್ಲಿ ವಿಜಯ್ ರಾಘವೇಂದ್ರ ವಿನ್ನರ್ ಆಗಿ ಇತಿಹಾಸ ಬರೆಯಿದ್ದರು. ಆ ಶೋ ಈಟಿವಿಯಲ್ಲಿ ಪ್ರಸಾರವಾಗಿ 98 ದಿನ ನಡೆದಿತ್ತು.

2014ರ ಸೀಸನ್ 2ರಲ್ಲಿ ಅಕುಲ್ ಬಾಲಾಜಿ ವಿನ್ನರ್ ಆಗಿ ಹೊರಹೊಮ್ಮಿದರು. 2015ರ ಸೀಸನ್ 3ರಲ್ಲಿ ಶ್ರುತಿ ವಿನ್ನರ್, ಚಂದನ್ ಕುಮಾರ್ ರನ್ನರ್ ಅಪ್ ಆಗಿದ್ದರು. ಸೀಸನ್ 4ರಲ್ಲಿ ಪ್ರಥಮ್ ವಿನ್ನರ್ ಆಗಿ ಭಾರಿ ಕ್ರೇಜ್ ಗಳಿಸಿಕೊಂಡರೆ, ಶೋ 112 ದಿನಗಳ ಕಾಲ ನಡೆದಿತ್ತು.

ಸೀಸನ್ 5ರಲ್ಲಿ ಚಂದನ್ ಶೆಟ್ಟಿ ವಿನ್ನರ್, ಸೀಸನ್ 6ರಲ್ಲಿ ಶಶಿಕುಮಾರ್ ವಿನ್ನರ್, ಸೀಸನ್ 7ರಲ್ಲಿ ಶೈನ್ ಶೆಟ್ಟಿ ವಿನ್ನರ್ ಆಗಿ ದಾಖಲೆ ಬರೆದರು. ಸೀಸನ್ 7 ಅನ್ನು ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯುತ್ತಮ ಸೀಸನ್ ಎಂದು ಅಭಿಮಾನಿಗಳು ಇಂದಿಗೂ ನೆನಪಿಸುತ್ತಾರೆ.

ಸೀಸನ್ 8ರಲ್ಲಿ ಮಂಜು ಪಾವಗಡ ಟ್ರೋಫಿ ಗೆದ್ದರು. ಕೋವಿಡ್ ಕಾರಣದಿಂದ ಶೋ ಮಧ್ಯದಲ್ಲೇ ನಿಂತು ಮತ್ತೆ ಮುಂದುವರೆದದ್ದು ಇದೇ ಮೊದಲ ಬಾರಿ. ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ, ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್, ಸೀಸನ್ 11ರಲ್ಲಿ ಹನುಮಂತ — ಈ ಮೂವರು ತಲಾ ಸೀಸನ್‌ಗಳ ವಿನ್ನರ್ ಆಗಿದ್ದಾರೆ.

ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಒಟ್ಟು 112 ದಿನಗಳ ಪ್ರಯಾಣ ಮುಗಿಸುತ್ತಿದ್ದು, ಜನವರಿ 18ರಂದು ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸ ವಿನ್ನರ್ ಹೆಸರು ಇತಿಹಾಸದಲ್ಲಿ ಸೇರಲಿದೆ.

BBK12 ಫಿನಾಲೆಗೆ ಟ್ವಿಸ್ಟ್: ಸುದೀಪ್ ಇಲ್ಲ, ಫ್ಯಾನ್ಸ್ ಶಾಕ್ – ವಿನ್ನರ್ ಘೋಷಣೆ ಭಾನುವಾರ ಮಾತ್ರ!

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆಗೂ ಮೊದಲುವೇ ಶಾಕ್ ಸಿಕ್ಕಿದೆ. ಜನವರಿ 17 ಹಾಗೂ 18ರಂದು ಎರಡು ದಿನ ನಡೆಯಬೇಕಿದ್ದ ಫಿನಾಲೆ, ಈಗ ಕೇವಲ ಭಾನುವಾರಕ್ಕೆ ಸೀಮಿತವಾಗಿದೆ. ಕಾರಣ – ನಿರೂಪಕ ಕಿಚ್ಚಾ ಸುದೀಪ್ ಇಂದು ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ ಶುರುವಾಗಿದೆ.

ಸುದೀಪ್ ಅವರು ಕೆಲ ಸಂದರ್ಭಗಳಲ್ಲಿ ಎಪಿಸೋಡ್ ಮಿಸ್ ಮಾಡಿಕೊಂಡಿದ್ದರು. ಆದರೆ, ಫಿನಾಲೆ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಇದೇ ಮೊದಲ ಬಾರಿ. ಇದರೊಂದಿಗೆ ಎರಡು ದಿನಗಳ ಫಿನಾಲೆ ಸಂಪ್ರದಾಯಕ್ಕೂ ಈ ಬಾರಿ ಬ್ರೇಕ್ ಬಿದ್ದಿದೆ.

ಈ ಹಿಂದೆ ಸುದೀಪ್ ಗೈರುಗೊಳ್ಳಲು ಕಾರಣ ಸಿಸಿಎಲ್ ಬ್ಯುಸಿ ಶೆಡ್ಯೂಲ್. ಜನವರಿ 16ರಂದು ವಿಶಾಖಪಟ್ಟಣದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ‘ಪಂಜಾಬ್ ದೆ ಶೇರ್’ ವಿರುದ್ಧ ಗೆಲುವು ದಾಖಲಿಸಿದೆ. ಪಂದ್ಯ ಮುಗಿಸಿ ರಾತ್ರಿ ಪ್ರಯಾಣ ಮಾಡಿ ಬೆಳಿಗ್ಗೆ ಶೂಟಿಂಗ್ ನಡೆಸುವುದು ಅಸಾಧ್ಯವಾಗಿದ್ದರಿಂದ, ಸುದೀಪ್ ಒಂದು ದಿನ ಬಿಡುವು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇಂದು ಫಿನಾಲೆ ಬದಲಾಗಿ ಸಾಮಾನ್ಯ ಎಪಿಸೋಡ್ ಪ್ರಸಾರವಾಗಲಿದ್ದು, ವಿಶೇಷ ಡ್ಯಾನ್ಸ್ ಪರ್ಫಾರ್ಮನ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಭಾನುವಾರ ಬೆಳಿಗ್ಗೆ 10 ಗಂಟೆವರೆಗೆ ವೋಟಿಂಗ್ ಅವಕಾಶ ಇರಲಿದ್ದು, ಆ ಬಳಿಕ ಫಿನಾಲೆ ಎಪಿಸೋಡ್‌ನಲ್ಲಿ ಆರು ಫೈನಲಿಸ್ಟ್‌ಗಳ ಪೈಕಿ ನಾಲ್ವರು ಎಲಿಮಿನೇಟ್, ಒಬ್ಬ ವಿನ್ನರ್ ಹಾಗೂ ರನ್ನರ್‌ಅಪ್ ಘೋಷಣೆ ನಡೆಯಲಿದೆ. ಫಿನಾಲೆ ಎಪಿಸೋಡ್ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ತುಮಕೂರಿನಲ್ಲಿ ಹಾಕಿ ಸ್ಟೇಡಿಯಂ, ವಿಶ್ವದರ್ಜೆಯ ಈಜುಕೊಳ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

0

ತುಮಕೂರು:- ತುಮಕೂರಿನಲ್ಲಿ ಹಾಕಿ ಸ್ಟೇಡಿಯಂ ಹಾಗೂ ಈಜುಕೊಳ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ತುಮಕೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟ 2025-2026ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಜಿಲ್ಲೆಯಲ್ಲಿ ಹಾಕಿ ಸ್ಟೇಡಿಯಂ ಹಾಗೂ ವಿಶ್ವದರ್ಜೆಯ ಈಜುಕೊಳ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುವುದು. ಕ್ರೀಡಾಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಹಣ ಮೀಸಲಿಡಲಿದೆ. ತುಮಕೂರಿನ ಯುವಜನತೆ ಈ ಸೌಲಭ್ಯಗಳ ಸದುಪಯೋಗ ಪಡೆದು ವಿಶ್ವಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದರು.

ತುಮಕೂರು ಜಿಲ್ಲೆಯಿಂದ ಉತ್ತಮ ಕ್ರೀಡಾಪಟುಗಳು ಹೊರಬಂದು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಲಿ. ಕ್ರೀಡೆಯಿಂದ ಜೀವನದಲ್ಲಿ ಶಿಸ್ತು, ಸಂಯಮ ಮತ್ತು ಸಮಯಪ್ರಜ್ಞೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದ ಸಿಎಂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳ ರೂವಾರಿಯಾಗಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಬಡ್ಡಿ ಪಟುವಾಗಿದ್ದೆ; ಫುಟ್‌ಬಾಲ್ ಹಾಗೂ ಕ್ರಿಕೆಟ್ ಮೇಲೂ ಆಸಕ್ತಿ ಇತ್ತು. ಇಂದಿಗೂ ಏಕದಿನ, ಟಿ–20 ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳನ್ನು ವೀಕ್ಷಿಸುತ್ತೇನೆ ಎಂದು ಹೇಳಿದರು.

ಕ್ರೀಡೆಯಲ್ಲಿ ಸೋಲು–ಗೆಲುವಿಗಿಂತ ಕ್ರೀಡಾಸ್ಪೂರ್ತಿ ಮುಖ್ಯ ಎಂದು ಒತ್ತಿ ಹೇಳಿದ ಅವರು, ಗುರಿ ಸಾಧಿಸಲು ಕಠಿಣ ಪರಿಶ್ರಮ ಮತ್ತು ಉತ್ತಮ ತರಬೇತಿ ಅಗತ್ಯವೆಂದರು. ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸರ್ಕಾರ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಜಾರಿಗೊಳಿಸಿದೆ. ಪೊಲೀಸ್ ಇಲಾಖೆಯಲ್ಲಿ ಪೇದೆ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರ ಹುದ್ದೆಯವರೆಗೆ ಶೇ.3 ಮೀಸಲಾತಿ ನೀಡಲಾಗುತ್ತಿದೆ. ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್, ಏಷಿಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾದ ಅಥವಾ ಭಾಗವಹಿಸಿದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ವಿವಿಧ ಇಲಾಖೆಗಳಲ್ಲಿಯೂ ಶೇ.2 ಮೀಸಲಾತಿ ಇದೆ. ಜೊತೆಗೆ ಒಲಂಪಿಕ್ಸ್‌ನಲ್ಲಿ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಕ್ರೀಡಾಪಟುಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಹಳ್ಳಿಗೆ ಚಹಾ ಅಂಗಡಿ ಅನಿವಾರ್ಯವೇ?

ಇಂದಿನ ನಮ್ಮ ಬದುಕನ್ನು ಒಮ್ಮೆ ಶಾಂತವಾಗಿ ಗಮನಿಸಿದರೆ, ಚಹಾ ಇಲ್ಲದೆ ಒಂದು ದಿನವೂ ಪೂರ್ಣವಾಗುವುದಿಲ್ಲ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಬೆಳಿಗ್ಗೆ ಕಣ್ಣು ತೆರೆದ ಕೂಡಲೇ ಮೊದಲು ಚಹಾ ಬೇಕು ಎನ್ನುವ ಮಾತು ಮನೆಮನೆಗಳಲ್ಲಿ ಕೇಳಿಬರುತ್ತದೆ. ಕೆಲಸಕ್ಕೆ ಹೊರಡುವ ಮೊದಲು ಒಂದು ಕಪ್ ಚಹಾ, ಮಧ್ಯಾಹ್ನ ಕೆಲಸದ ಒತ್ತಡದಲ್ಲಿ ಮತ್ತೊಂದು ಚಹಾ, ಸಂಜೆ ದಣಿವು ತೀರಿಸಿಕೊಳ್ಳಲು ಮತ್ತೆ ಚಹಾ, ಸ್ನೇಹಿತರು ಬಂದಾಗ ಚಹಾ, ಅತಿಥಿಗಳು ಬಂದಾಗ ಚಹಾ… ಹೀಗೆ ದಿನವಿಡೀ ಚಹಾ ನಮ್ಮ ಬದುಕಿನ ಜೊತೆಗೆ ನಡೆದುಕೊಳ್ಳುತ್ತದೆ. ಬಸ್ ನಿಲ್ದಾಣ, ಆಸ್ಪತ್ರೆ, ಕಚೇರಿ, ಶಾಲೆಯ ಬಳಿ, ಹಳ್ಳಿಯ ಬೀದಿ ಮೂಲೆಗೂ ಒಂದು ಚಹಾ ಅಂಗಡಿ ಇರಲೇಬೇಕು ಎಂಬ ಭಾವನೆ ನಮಗೆ ಸಹಜವಾಗಿದೆ. ಚಹಾ ಇಲ್ಲದ ಜಾಗವೊಂದನ್ನು ಊಹಿಸುವುದೇ ಕಷ್ಟವಾಗಿರುವ ಈ ಕಾಲದಲ್ಲಿ, ಒಂದು ಗ್ರಾಮದಲ್ಲಿ ಹೋಟೆಲ್‌ಗಳೇ ಇಲ್ಲ, ಸಾರ್ವಜನಿಕವಾಗಿ ಚಹಾ ಮಾರಾಟವೂ ಇಲ್ಲ ಎಂದರೆ ಅದು ನಂಬಲಾರದ ಕಥೆಯಂತೆ ತೋರುತ್ತದೆ. ಆದರೆ ಇಂತಹ ಅಸಾಧ್ಯವೆನಿಸುವ ವಾಸ್ತವವೇ ಸವದತ್ತಿ ತಾಲೂಕಿನ ಹಿರೇ ಉಳ್ಳಿಗೇರಿ ಗ್ರಾಮದಲ್ಲಿ ನೋಡಬಹುದು.

ಸವದತ್ತಿ ಪಟ್ಟಣದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿರುವ ಹಿರೇ ಉಳ್ಳಿಗೇರಿ, ಧಾರವಾಡ ಸವದತ್ತಿ ಮುಖ್ಯ ರಸ್ತೆಗೆ ಹತ್ತಿಕೊಂಡೇ ಇರುವ ಗ್ರಾಮ. ರಸ್ತೆ ಸಂಪರ್ಕ ಉತ್ತಮವಾಗಿದೆ, ವಾಹನ ಸಂಚಾರ ನಿರಂತರವಾಗಿದೆ. ಸುತ್ತಮುತ್ತಲ ಹಳ್ಳಿಗಳು, ಪಟ್ಟಣಗಳ ಸಂಪರ್ಕವೂ ಇದೆ. ಇಷ್ಟೆಲ್ಲಾ ಅನುಕೂಲಗಳಿದ್ದರೂ, ಈ ಗ್ರಾಮದಲ್ಲಿ ಮಾತ್ರ ಒಂದೂ ಹೋಟೆಲ್ ಇಲ್ಲ. ಅದರೊಂದಿಗೆ, ಹೋಟೆಲ್ ಇಲ್ಲದ ಕಾರಣ ಮಾತ್ರವಲ್ಲ, ಸಾಮಾಜಿಕ ನಿರ್ಧಾರವಾಗಿ ಗ್ರಾಮದ ವ್ಯಾಪ್ತಿಯಲ್ಲಿ ಎಲ್ಲಿಯೂ ಚಹಾ ಮಾರಾಟ ನಡೆಯುವುದಿಲ್ಲ.

ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಹಿರೇ ಉಳ್ಳಿಗೇರಿ ಜನರು ಮನೆಗಳಲ್ಲಿ ಚಹಾ ಕುಡಿಯುತ್ತಾರೆ. ಅದು ನಿಷೇಧಿತವಲ್ಲ, ಅಪರಾಧವೂ ಅಲ್ಲ. ಆದರೆ ಗ್ರಾಮ ಮಟ್ಟದಲ್ಲಿ ಅಂದರೆ ಸಾರ್ವಜನಿಕವಾಗಿ ಚಹಾ ಅಂಗಡಿ ಅಥವಾ ಹೋಟೆಲ್ ತೆರೆಯುವುದು ಇಲ್ಲಿನ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ಅಂತರವೇ ಹಿರೇ ಉಳ್ಳಿಗೇರಿಯನ್ನು ವಿಭಿನ್ನವಾಗಿಸುತ್ತದೆ.

ಗ್ರಾಮದಲ್ಲಿ ಸುಮಾರು 350ರಿಂದ 400 ಮನೆಗಳು ಇವೆ. ಜನಸಂಖ್ಯೆ ಸುಮಾರು 3 ಸಾವಿರಕ್ಕೂ ಹೆಚ್ಚು. ಇಷ್ಟು ದೊಡ್ಡ ಗ್ರಾಮದಲ್ಲಿ ಸಾಮಾನ್ಯವಾಗಿ ಎರಡು ಮೂರು ಹೋಟೆಲ್‌ಗಳು, ಚಹಾ ಅಂಗಡಿಗಳು, ಉಪಹಾರ ಕೇಂದ್ರಗಳು ಇರುವುದು ಸಹಜ. ಆದರೆ ಹಿರೇ ಉಳ್ಳಿಗೇರಿಯಲ್ಲಿ ಕಿರಾಣಿ ಅಂಗಡಿಗಳಿವೆ, ಡಬ್ಬಿ ಅಂಗಡಿಗಳಿವೆ, ದಿನಸಿ ವಸ್ತುಗಳ ವ್ಯಾಪಾರ ನಡೆಯುತ್ತದೆ, ಆದರೆ ಚಹಾ ಮಾರುವುದಿಲ್ಲ.

ಗ್ರಾಮದ ಹಿರಿಯರನ್ನು ಕೇಳಿದರೆ, ಈ ಸಂಪ್ರದಾಯದ ಬೇರುಗಳು ತುಂಬಾ ಆಳದಲ್ಲಿವೆ ಎಂಬುದು ತಿಳಿಯುತ್ತದೆ. ನಮಗೆ ಬುದ್ಧಿ ಬಂದಾಗಿನಿಂದಲೂ ಈ ಗ್ರಾಮದಲ್ಲಿ ಹೋಟೆಲ್‌ಗಳೇ ಇಲ್ಲ. ನಮ್ಮ ಅಜ್ಜಂದಿರ ಕಾಲದಲ್ಲೂ ಹೀಗೆಯೇ ಇತ್ತು. ಆಗಲೂ ಯಾರೂ ಇಲ್ಲಿ ಚಹಾ ಮಾರಾಟ ಮಾಡಿರಲಿಲ್ಲ ಎಂದು ಅವರು ಹೇಳುತ್ತಾರೆ. ಇದು ಯಾವುದೇ ಲಿಖಿತ ನಿಯಮವಲ್ಲ, ಪಂಚಾಯತ್ ನಿರ್ಣಯವೂ ಅಲ್ಲ. ಇದು ಪೀಳಿಗೆಯಿಂದ ಪೀಳಿಗೆ ಸಾಗಿಬಂದ ಒಂದು ಸಾಂಪ್ರದಾಯವೇ ಎನ್ನಬಹುದು.

ಒಮ್ಮೆ ಯಾರಾದರೂ ಹೊಸದಾಗಿ ಹೋಟೆಲ್ ತೆರೆಯಬೇಕು ಎಂದು ಯೋಚಿಸಿದರೂ, ಅದು ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆ ಇಲ್ಲಿದೆ. ಕಾರಣ, ಗ್ರಾಮಸ್ಥರು ಅಲ್ಲಿ ಹೋಗಿ ಚಹಾ ಕುಡಿಯುವುದೇ ಇಲ್ಲ. ವ್ಯಾಪಾರ ನಡೆಯದ ಜಾಗದಲ್ಲಿ ಹೋಟೆಲ್ ಉಳಿಯುವುದು ಸಾಧ್ಯವಿಲ್ಲ. ಹೀಗಾಗಿ ಈ ಗ್ರಾಮದಲ್ಲಿ ಹೋಟೆಲ್‌ಗಳ ಸ್ಥಾಪನೆಯ ಪ್ರಯತ್ನಗಳೇ ನಡೆದಿಲ್ಲ ಎಂಬ ಮಾತು ಕೇಳಿಬರುತ್ತದೆ.

ಇಂದಿನ ಯುವಜನತೆ ಈ ಸಂಪ್ರದಾಯವನ್ನು ಹೇಗೆ ನೋಡುತ್ತದೆ ಎಂಬುದು ಕೂಡ ಗಮನಾರ್ಹ. ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನ ಎಲ್ಲ ಪದ್ಧತಿಗಳ ಪರಿಚಯ ಇದ್ದರೂ, ಹಿರೇ ಉಳ್ಳಿಗೇರಿಯ ಯುವಕರು ಕೂಡ ಈ ಗ್ರಾಮಪದ್ಧತಿಯನ್ನು ಸಹಜವಾಗಿ ಒಪ್ಪಿಕೊಂಡಿದ್ದಾರೆ. ಹೊರಗಿನ ಊರುಗಳಿಗೆ ಹೋದಾಗ ಚಹಾ ಕುಡಿಯಬಹುದು, ಆದರೆ ತಮ್ಮ ಗ್ರಾಮದಲ್ಲಿ ಸಾರ್ವಜನಿಕವಾಗಿ ಚಹಾ ವ್ಯಾಪಾರ ನಡೆಯಬಾರದು ಎಂಬ ಅಲಿಖಿತ ನಿಯಮವನ್ನು ಅವರು ಪಾಲಿಸುತ್ತಾರೆ.

ಇದರ ಪರಿಣಾಮವಾಗಿ ಗ್ರಾಮದಲ್ಲಿ ಜೀವನಶೈಲಿ ಸ್ವಲ್ಪ ವಿಭಿನ್ನವಾಗಿದೆ. ಬೆಳಿಗ್ಗೆ ಹೊಲಕ್ಕೆ ಹೋಗುವ ಮುನ್ನ ಹಾಲು, ಮಜ್ಜಿಗೆ ಅಥವಾ ನೀರು ಕುಡಿಯುವುದು ಸಾಮಾನ್ಯ. ಸಂಜೆ ವೇಳೆ ಮನೆಗಳಲ್ಲಿ ಚಹಾ ಮಾಡಿಕೊಳ್ಳುತ್ತಾರೆ, ಆದರೆ ಚಹಾ ಕುಡಿಯಲು ಹೊರಗೆ ಹೋಗುವುದು ಎಂಬ ಕಲ್ಪನೆ ಇಲ್ಲ. ಅತಿಥಿಗಳು ಬಂದರೂ, ಮನೆಯೊಳಗೇ ಆತಿಥ್ಯ ನೀಡಲಾಗುತ್ತದೆ. ಹೀಗಾಗಿ ಹೋಟೆಲ್‌ಗಳ ಅವಶ್ಯಕತೆಯೇ ಉಂಟಾಗಿಲ್ಲ.

ಅಬ್ಬಾ, ಇಂತಹ ಗ್ರಾಮವೂ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ ಹಿರೇ ಉಳ್ಳಿಗೇರಿ ನಮಗೆ ಒಂದು ಮಹತ್ವದ ಪಾಠ ಕಲಿಸುತ್ತದೆ. ನಾವು ಅನಿವಾರ್ಯ ಎಂದು ಭಾವಿಸುವ ಅನೇಕ ಅಭ್ಯಾಸಗಳು ವಾಸ್ತವದಲ್ಲಿ ಆಯ್ಕೆಯ ವಿಷಯವಾಗಿವೆ. ಚಹಾ ಇಲ್ಲದೆ ಸಾರ್ವಜನಿಕ ಬದುಕು ಸಾಗಲಾರದು ಎಂಬ ನಮ್ಮ ಕಲ್ಪನೆಯನ್ನು ಈ ಗ್ರಾಮ ಮೌನವಾಗಿ ಪ್ರಶ್ನಿಸುತ್ತದೆ.

ಇಂದು ಜಗತ್ತು ಒಂದೇ ರೀತಿಯ ಸಂಸ್ಕೃತಿಯತ್ತ ಸಾಗುತ್ತಿರುವಾಗ, ಹಿರೇ ಉಳ್ಳಿಗೇರಿಯಂತಹ ಗ್ರಾಮಗಳು ನಮ್ಮ ವೈವಿಧ್ಯತೆಯನ್ನು ನೆನಪಿಸುತ್ತವೆ. ಇದು ಹಿಂದುಳಿದತನದ ಸಂಕೇತವಲ್ಲ; ಬದಲಾಗಿ ತಮ್ಮದೇ ಆದ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕುವ ಆತ್ಮವಿಶ್ವಾಸದ ಉದಾಹರಣೆ. ಹಿರೇ ಉಳ್ಳಿಗೇರಿ ಕೇವಲ ಚಹಾ ಇಲ್ಲದ ಗ್ರಾಮ ಅಲ್ಲ. ಅದು ಹೋಟೆಲ್ ಸಂಸ್ಕೃತಿಗೆ ಹೊರತಾಗಿ ಬದುಕುವ ಒಂದು ಸಮಾಜ, ಮತ್ತು ನಮ್ಮ ದಿನನಿತ್ಯದ ಅಭ್ಯಾಸಗಳ ಬಗ್ಗೆ ಮರುಚಿಂತನೆ ಮಾಡಲು ಪ್ರೇರೇಪಿಸುವ ಒಂದು ಅಪರೂಪದ ಗ್ರಾಮೀಣ ಕಥೆ.

  • ಮನೋಜ ಮಸನಿ
    ಪ್ರಶಿಕ್ಷಣಾರ್ಥಿ,
    ವಾರ್ತಾ ಇಲಾಖೆ ಧಾರವಾಡ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫುಟ್‌ಪಾತ್ ಗಿರಾಕಿಗಳು; ಛಲವಾದಿ ನಾರಾಯಣಸ್ವಾಮಿ

0

ಬೆಂಗಳೂರು:- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫುಟ್‌ಪಾತ್ ಗಿರಾಕಿಗಳು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಫುಟ್‌ಪಾತ್ ಗಿರಾಕಿಗಳು, ಅದಕ್ಕೆ ರಾಹುಲ್ ಗಾಂಧಿ ಫುಟ್‌ಪಾತ್‌ನಲ್ಲಿ ನಿಲ್ಲಿಸಿ ಮಾತಾಡಿಸಿದ್ದಾರೆ. ದಲಿತ ಪರ ಸಂಘಟನೆ, ಮೊದಲ ಟಾರ್ಗೆಟ್ ದಲಿತ, ರೈತರು ಮತ್ತು ಕನ್ನಡ ಪರ‌ ಹೋರಾಟದ ಜೊತೆಗೆ ವಿರೋಧ ಪಕ್ಷದ ಧ್ವನಿ ಹತ್ತಿಕ್ಕಲು ರಾಜ್ಯ ಸರ್ಕಾರ ದ್ವೇಷ ಭಾಷಣ ವಿರೋಧಿ ಕಾಯ್ದೆ ಜಾರಿಗೆ ಮುಂದಾಗಿದೆ. ಇದು ಗೂಂಡಾ ಮತ್ತು ಹಿಟ್ಲರ್ ಸರ್ಕಾರ. ಹೋರಾಟಗಾರರು ಮತ್ತು ವಿರೋದ ಪಕ್ಷಗಳನ್ನು ಹದ್ದುಬಸ್ತಿನಲ್ಲಿ ಇಡುವುದು ಸರ್ಕಾರದ ಮುಖ್ಯ ಉದ್ದೇಶ.

ಈ ಮೂಲಕ ಸಂವಿಧಾನದ ಕಲಂ 19ರಡಿ ನೀಡಿರುವ ವಾಕ್ ಸ್ವಾತಂತ್ರ್ಯಕ್ಕೆ ನೇರವಾಗಿ ಪೆಟ್ಟು ಕೊಡುತ್ತಿರುವ ರಾಜ್ಯ ಸರ್ಕಾರ ಹಿಟ್ಲರ್ ಸರ್ಕಾರದಂತೆ ವರ್ತನೆ ಮಾಡುತ್ತಿದೆ. ವಿರೋಧ ಪಕ್ಷದ ಕಾರ್ಯಕರ್ತರು ಒಂದು ಟ್ವೀಟ್ ಮಾಡಿದರೆ, ಯಾವುದಾದರೂ ಅಭಿಪ್ರಾಯ ಫಾರ್ವರ್ಡ್ ಮಾಡಿದರೂ ಜೈಲಿಗೆ ಹಾಕುತ್ತಿದ್ದಾರೆ. ಆದರೆ, ಅದೇ ತಮ್ಮ ಪಕ್ಷದ ಕಾರ್ಯಕರ್ತರು ‌ಸರ್ಕಾರಿ ಅಧಿಕಾರಿಗಳ ಮೇಲೆ ‌ದೌರ್ಜನ್ಯ, ಗೂಂಡಾಗಿರಿ ಮಾಡಿದರೂ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ‌ ಎಂಬಾತ ಒಬ್ಬ ಮಹಿಳಾ ಅಧಿಕಾರಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಬೀದರ್ ನಲ್ಲಿ ಎಂಎಲ್ಸಿ ಒಬ್ಬ ಬಿಜೆಪಿ ಶಾಸಕನ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲೇ ಹಲ್ಲೆ‌ ಮಾಡಿದ್ದಾನೆ. ಬಳ್ಳಾರಿಯಲ್ಲಿ ನಡೆದಿದ್ದು ಏನು? ಭರತ್ ರೆಡ್ಡಿ ಒಬ್ಬ ಶಾಸಕನಾಗಿ, ಐದು ನಿಮಿಷದಲ್ಲಿ ಜನಾರ್ದನ ರೆಡ್ಡಿ ಮನೆ ಸುಟ್ಟು ಹಾಕುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾನೆ. ಇದನ್ನೆಲ್ಲ ನೋಡಿದರೆ ಇದು ಗೂಂಡಾಗಿರಿ ಸರ್ಕಾರ ಎಂದು ಹೇಳಬಹುದು ಎಂದಿದ್ದಾರೆ.

ಹಿಂದೂ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತೀಯರಾದ ನಾವೆಲ್ಲ ಒಂದೇ ಎಂಬ ಮನೋಭಾವನೆ ಪ್ರತಿಯೊಬ್ಬರ ಅಂತರಾಳದ ಮಾತಾಗಬೇಕು. ಅಂದಾಗ ಮಾತ್ರ ಸುಭದ್ರ-ಸಂಘಟಿತ ಭಾರತ ಕಟ್ಟಲು ಸಾಧ್ಯ. ಅಂತಹ ಅಂತರಾಳವು ಹಿಂದೂ ಸಮ್ಮೇಳನಗಳ ಸಂಘಟನೆಯಿಂದ ಆಗಲಿದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಹಿರೇಮಠದ ಸಭಾಭವನದಲ್ಲಿ ನರೇಗಲ್ಲ ಹೋಬಳಿ ಮಟ್ಟದ ಹಿಂದೂ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಾಷ್ಟಿçÃಯ ಸ್ವಯಂ ಸೇವಕ ಸಂಘ ಸ್ಥಾಪನೆಗೊಂಡು ಕಳೆದ 2025ರ ವಿಜಯದಶಮಿಗೆ ನೂರು ವರ್ಷಗಳು ಗತಿಸಿದ್ದು, ಅದರ ದ್ಯೋತಕವಾಗಿ ಒಂದು ವರ್ಷಗಳ ಪರ್ಯಂತ ಸಾರ್ವಜನಿಕರ ಸಹಯೋಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಈ ನಾಡಿನ ಉದ್ದಗಲಕ್ಕೂ ಹಿಂದೂ ಜಾಗೃತಿ ಮಾಡುತ್ತ ರಾಷ್ಟçಪ್ರೇಮ ಮೂಡಿಸುತ್ತಿರುವುದು ದೇಶದ ಏಕತೆಯನ್ನು ಸಾರುತ್ತಿದೆ ಎಂದರು.

ಭಾರತ ಸನಾತನ ಹಿಂದೂ ಧರ್ಮವನ್ನು ಹೊಂದಿದ್ದು, ಇಲ್ಲಿನ ಕಲೆ-ಸಾಹಿತ್ಯ-ಸಂಸ್ಕೃತಿ, ಆಚಾರ-ವಿಚಾರಗಳು ವೈಶಿಷ್ಠö್ಯತೆಯಿಂದ ಕೂಡಿವೆ. ರಾಷ್ಟçದ ಏಕತೆಗಾಗಿ ಇಂತಹ ಸಮ್ಮೇಳನಗಳು ಮೇಲಿಂದ ಮೇಲೆ ನಡೆಯುವದರಿಂದ ಯುವ ಪೀಳಿಗೆಗೆ ಹಿಂದೂ ಸಂಸ್ಕೃತಿಯನ್ನು ಪರಿಚಯಿಸಿದಂತಾಗುತ್ತದೆ. ಜ. 24ರಂದು ನರೇಗಲ್ಲ ಹೋಬಳಿ ಮಟ್ಟದ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸೋಣ ಇದಕ್ಕೆ ನಮ್ಮ ಸಲಹೆ, ಸಹಕಾರ ಸದಾ ಇದ್ದೇ ಇರುತ್ತದೆ ಎಂದರು.

ಸಮ್ಮೇಳನದ ಅಧ್ಯಕ್ಷ ಬಸವರಾಜ ವಂಕಲಕುಂಟಿ ಮಾತನಾಡಿ, ಸಮ್ಮೇಳನದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ನರೇಗಲ್ಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಗೆ ಸಂಚರಿಸಿ ಜನರಲ್ಲಿ ಸಮ್ಮೇಳನದ ರೂಪುರೇಷೆಗಳನ್ನು ತಿಳಿಸಲಾಗಿದೆ. ಇನ್ನು ತಮ್ಮ ಮಾರ್ಗದರ್ಶನದೊಂದಿಗೆ ಸಮ್ಮೇಳನದ ಯಶಸ್ಸಿಗೆ ಶ್ರಮವಹಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಆನಂದ ಕುಲಕರ್ಣಿ, ಜಗದೀಶ ಸಂಕನಗೌಡ್ರ, ಡಾ. ಆರ್.ಕೆ. ಗಚ್ಚಿಮಠ, ಉಮೇಶ ಪಾಟೀಲ, ರಘುನಾಥ ಕೊಂಡಿ, ಮಂಜುನಾಥ ಹೆಗಡೆ, ಎಸ್.ಕೆ. ಪಾಟೀಲ, ಮಲ್ಲನಗೌಡ ಪಾಟೀಲ, ಶಿವಕುಮಾರ ಮಾವಿನಕಾಯಿ, ಚನ್ನಬಸಪ್ಪ ಕುಷ್ಟಗಿ, ರವಿ ಮ್ಯಾಗೇರಿ, ಮಹೇಶ ಜೋಳದ, ಸುರೇಖಾ ರಾಯಬಾಗಿ, ಸೀಮಾ ಕೊಂಡಿ, ನಿರ್ಮಲಾ ಹಿರೇಮಠ ಹಾಗೂ ಅರ್ಚನಾ ಕುಲಕರ್ಣಿ ಉಪಸ್ಥಿತರಿದ್ದರು.

error: Content is protected !!