Home Blog Page 162

ನಿದ್ರಿಸಿದ್ದ ಬಾಲಕನ ಕ್ಯಾಬ್‌ನಲ್ಲೆ ಬಿಟ್ಟುಹೋದ ಪೋಷಕರು: ‘ನಮ್ಮ 112’ ಚುರುಕು ಕಾರ್ಯಾಚರಣೆಯಿಂದ ರಕ್ಷಣೆ!

0

ಬೆಂಗಳೂರು: ನಗರದಲ್ಲಿ ಆತಂಕ ಮೂಡಿಸಿದ ಘಟನೆ ಹೆನ್ನೂರಿನಲ್ಲಿ ನಡೆದಿದೆ. ನಿದ್ರಿಸುತ್ತಿದ್ದ 4 ವರ್ಷದ ಮಗುವನ್ನು ಪೋಷಕರು ಕ್ಯಾಬ್ನಲ್ಲಿಯೇ ಮರೆತು ಮನೆಗೆ ತೆರಳಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ ರಾಜ್ಯದ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯಾದ ‘ನಮ್ಮ 112’ ಸಮಯೋಚಿತ ಕ್ರಮದಿಂದ ಮಗು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಗೊಂಡಿದೆ.

ಜಿಯಾನ್ ಚುಂಗಿ (4) ರಕ್ಷಿಸಲಾದ ಬಾಲಕ. ಕುಟುಂಬಸ್ಥರು ಒಟ್ಟಾಗಿ ಇಸ್ಕಾನ್ ದೇವಸ್ಥಾನಕ್ಕೆ ತೆರಳಿದ್ದರು. ಮರಳಿ ಬರುವಾಗ ಕ್ಯಾಬಿನ ಹಿಂಬದಿ ಆಸನದಲ್ಲಿ ಜಿಯಾನ್ ನಿದ್ರೆಗೆ ಜಾರಿದ್ದಾನೆ. ಅಪಾರ್ಟ್‌ಮೆಂಟ್ ತಲುಪಿದ ಬಳಿಕ ಕುಟುಂಬಸ್ಥರು ತುರ್ತಾಗಿ ಇಳಿದು ಮನೆಗೆ ತೆರಳಿದ್ದು, ನಿದ್ರಿಸುತ್ತಿದ್ದ ಮಗುವಿನ ಬಗ್ಗೆ ಯಾರಿಗೂ ಗಮನವಾಗಿಲ್ಲ. ಇನ್ನೂ ಆತಂಕಕಾರಿ ಸಂಗತಿಯೇನೆಂದರೆ, ಕ್ಯಾಬ್ ಚಾಲಕ ಮಗು ಇರುವುದನ್ನು ಗಮನಿಸದೇ ಮತ್ತೆರಡು ಟ್ರಿಪ್‌ಗಳನ್ನು ಪೂರೈಸಿದ್ದಾನೆ.

ಮನೆ ತಲುಪಿದ ಬಳಿಕ ಮಗು ಕಾಣೆಯಾಗಿರುವುದು ಗೊತ್ತಾಗಿ ಕುಟುಂಬಸ್ಥರು ಕಾಲ್ ಸೆಂಟರ್ ಮೂಲಕ ಕ್ಯಾಬ್ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಅದು ವಿಫಲವಾದ ಹಿನ್ನೆಲೆಯಲ್ಲಿ ತಕ್ಷಣ ‘ನಮ್ಮ 112’ಗೆ ಮಾಹಿತಿ ನೀಡಿದ್ದಾರೆ. ಹೋಯ್ಸಳ-51 ಪೇಟ್ರೋಲಿಂಗ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಕ್ಯಾಬ್ ನೋಂದಣಿ ಸಂಖ್ಯೆ ಆಧಾರದಲ್ಲಿ ತಂತ್ರಜ್ಞಾನ ಬಳಸಿ ಚಾಲಕನನ್ನು ಸಂಪರ್ಕಿಸಲಾಗಿದೆ.

ವಾಹನ ಪರಿಶೀಲಿಸಿದಾಗ ಜಿಯಾನ್ ಸುರಕ್ಷಿತವಾಗಿ ನಿದ್ರಿಸುತ್ತಿರುವುದು ಕಂಡುಬಂದಿದ್ದು, ಬಾಲಕನನ್ನು ಎಚ್ಚರಿಸದೆ ಅಪಾರ್ಟ್‌ಮೆಂಟ್‌ಗೆ ಮರಳುವಂತೆ ಚಾಲಕನಿಗೆ ಸೂಚಿಸಲಾಗಿದೆ. ಹುಡುಕಾಟ ಆರಂಭವಾದ 1 ಗಂಟೆಯೊಳಗೆ ಕ್ಯಾಬ್ ಅಪಾರ್ಟ್‌ಮೆಂಟ್‌ಗೆ ತಲುಪಿದ್ದು, ಬಾಲಕನನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ. ವಿಶೇಷವೆಂದರೆ, ಇಡೀ ಅವಧಿಯಲ್ಲಿ ಮಗು ನಿದ್ರೆಯಲ್ಲೇ ಇದ್ದಿದ್ದು, ಮನೆ ತಲುಪಿದ ಬಳಿಕವೇ ಎಚ್ಚರವಾಗಿದೆ ಎನ್ನಲಾಗಿದೆ.

“ನಾನು ಸತ್ತರೆ ನಿನ್ನ ನೋಡಿಕೊಳ್ಳೋದ್ಯಾರು”: ಪತ್ನಿಯ ಉಸಿರುಗಟ್ಟಿಸಿ ಕೊಂದ ನಿವೃತ್ತ ಇಸ್ರೋ ನೌಕರ

0

ಬೆಂಗಳೂರು: ನಗರದ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್ಮೆಂಟಿನಲ್ಲಿ ಬೆಚ್ಚಿಬೀಳಿಸುವ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ ನಿವೃತ್ತ ನೌಕರ ನಾಗಲೇಶ್ವರ ರಾವ್ ತನ್ನ ಪತ್ನಿ ಸಧ್ಯಾರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಆಲವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ನಾಗಲೇಶ್ವರ ರಾವ್ ಮತ್ತು ಸಧ್ಯಾ ವಿರ್ಟುಸೊ ಅಪಾರ್ಟ್ಮೆಂಟಿನಲ್ಲಿ ವಾಸವಾಗಿದ್ದರು. ಪ್ರಾಥಮಿಕ ವಿಚಾರಣೆ ವೇಳೆ “ನಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳೋವರು ಯಾರು? ಸಂಬಂಧಿಕರು ಇಲ್ಲ, ಆಕೆಯ ಮುಂದಿನ ಜೀವನ ಹೇಗೆ?” ಎಂಬ ಕಾರಣ ನೀಡಿ ಕೊಲೆ ಮಾಡಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ.

ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ದಂಪತಿಗೆ ಒಬ್ಬ ಮಗಳು ಇದ್ದು, ಆಕೆ ಅಮೆರಿಕದಲ್ಲಿ ನೆಲೆಸಿದ್ದಾಳೆ ಎನ್ನಲಾಗಿದೆ.

ಕಸ ವಿಲೇವಾರಿಗೆ ಅಡ್ಡಿಪಡಿಸುವವರ ಮನೆ, ಕಚೇರಿ ಮುಂದೆ ಕಸ ಸುರಿಯುತ್ತೇವೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

0

ಬೆಂಗಳೂರು:“ಗೌರವದಿಂದ ಇದ್ದರೆ ಸರಿ. ಇಲ್ಲ ಅಂದರೆ ಕಸ ವಿಲೇವಾರಿಗೆ ಅಡ್ಡಿ ಪಡಿಸುವವರು ಶಾಸಕರಾದರೂ ಸರಿ, ಬೇರೆ ಯಾರೇ ಆಗಿದ್ದರೂ ಸಹ ಎಸ್ಮಾ ಕಾಯ್ದೆ ಅಡಿ, ಯಾವುದೇ ಕರುಣೆ ಇಲ್ಲದೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಶಾಸಕರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಲೋಡ್‌ ಕಸವನ್ನು ತೆಗೆದುಕೊಂದು ಹೋಗಿ ಹಾಕಬೇಕಾಗುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಎಚ್ಚರಿಕೆ ನೀಡಿದರು.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ಮಹದೇವಪುರದಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸಿರುವ ಬಗ್ಗೆ ಕೇಳಿದಾಗ, “ಶಾಸಕರು ಕಸ ಹಾಕಬಾರದು ಹಾಗೂ ನಮಗೆ ಅನುದಾನ ಬೇಕು ಎಂದು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ.

ಮಂಗಳವಾರದಂದು ಅರವಿಂದ ಲಿಂಬಾವಳಿ, ಇಂದು ದೊಡ್ಡಬಳ್ಳಾಪುರ ಶಾಸಕರು ಬ್ಲಾಕ್‌ ಮೇಲ್‌ ಮಾಡಿದ್ದಾರೆ. ಹೀಗೆ ಮಾಡಿದರೆ ಕಸ ಎಲ್ಲಿಗೆ ಹೋಗಬೇಕು? ಕಸವು ಆರ್‌.ಅಶೋಕ್‌, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹೋಗಬೇಕಾಗುತ್ತದೆ. ಇವರುಗಳು ಯಾರಿಗೆ ಎಂದು ಬ್ಲಾಕ್‌ ಮೆಲ್‌ ಮಾಡುತ್ತಿದ್ದಾರೆ” ಎಂದರು.

ಯಾವ ಉದ್ದೇಶಕ್ಕೆ ಶಾಸಕರುಗಳು ಬ್ಲಾಕ್‌ ಮೆಲ್‌ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಈ ಹಿಂದಿನಿಂದ ಏನು ಕೆಲಸ ಮಾಡಿಕೊಂಡು ಬರಲಾಗುತ್ತಿತ್ತೊ ಅದೇ ಕೆಲಸವನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ. ಅವರ ಕ್ಷೇತ್ರಗಳಿಗೆ ಅನುದಾನ ಬೇಕು ಎಂದು ಹೀಗೆ ಮಾಡುತ್ತಿದ್ದಾರೆ” ಎಂದು ಹೇಳಿದರು.

ಕಸದ ಲಾರಿಯಿಂದ ಅಪಘಾತವಾಗಿದೆ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅಪಘಾತ ಆಗಬಾರದಿತ್ತು ಆಗಿದೆ. ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಸ ವಿಲೇವಾರಿ ನಿಲ್ಲಿಸಿರುವುದು ಸರಿಯಲ್ಲ. ಎಸ್‌.ಟಿ.ಸೋಮಶೇಖರ್‌, ಶಿವಣ್ಣ, ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಈಗ ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್‌ ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.

ಭೀಕರ ರಸ್ತೆ ಅಪಘಾತ: ಜಮಖಂಡಿ–ಮಿರಜ್ ಹೆದ್ದಾರಿಯಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

0

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಜಮಖಂಡಿ–ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ದಾರುಣ ಅಂತ್ಯ ಕಂಡಿದ್ದಾರೆ. ಲಾರಿ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್‌ನಲ್ಲಿದ್ದ ಗಂಡ, ಹೆಂಡತಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಗಿರೇಪ್ಪಾ ಕುಂದ್ರಾಳಿ, ಪತ್ನಿ ಮಂಜುಳಾ ಕುಂದ್ರಾಳಿ (27) ಮತ್ತು ಮಗಳು ಆರಾಧ್ಯ ಕುಂದ್ರಾಳಿ (7) ಎಂದು ಗುರುತಿಸಲಾಗಿದೆ. ಮೂವರು ಮಹಾರಾಷ್ಟ್ರದ Mirajನಿಂದ ಜಮಖಂಡಿ ಕಡೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಬೈಕ್ ಸಂಪೂರ್ಣ ನಾಶವಾಗಿದ್ದು, ಸ್ಥಳದಲ್ಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಹಾರೂಗೇರಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಶಾಲಾ ಬಸ್ ದುರಂತ: 4 ವರ್ಷದ ಮಗು ಸಾವು

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ. ಮೃತ ಮಗುವನ್ನು ಪುನೀತ್ ಎಂದು ಗುರುತಿಸಲಾಗಿದೆ.

ಗಾಜರಕೋಟ ಗ್ರಾಮದ ವಿಸ್ಡಮ್ ಶಾಲೆಯ ವಿದ್ಯಾರ್ಥಿಯಾಗಿದ್ದ ಪುನೀತ್, ಫೆಬ್ರವರಿ 17ರಂದು ಬಸ್‌ನಿಂದ ಇಳಿದ ತಕ್ಷಣ ಚಾಲಕ ರಿವರ್ಸ್ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಈ ವೇಳೆ ಬಸ್ ಮಗುವಿನ ಮೇಲೆ ಹರಿದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರು ಮಗುವಿನ ಶವವನ್ನು ರಸ್ತೆ ಮೇಲೆ ಇಟ್ಟು ಪ್ರತಿಭಟನೆ ನಡೆಸಿದರು. ಬಸ್ ಚಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ನಂತರ ಪೊಲೀಸರ ಮನವೊಲಿಕೆಯಿಂದ ಪ್ರತಿಭಟನೆ ಕೈಬಿಡಲಾಯಿತು.

ಡಿವೈಡರ್‌ಗೆ ಕಾರು ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಬೀದರ್ ಜಿಲ್ಲೆಯ ಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಮ್ನಾಬಾದ್ ತಾಲೂಕಿನ ಸಿಂಧನಕೇರಾದ ಕಾಶೀನಾಥ್ ಹಾಗೂ ಧುಮ್ಮನಸೂರ ನಿವಾಸಿ ನೀತೇಶ್ ಗಾಯಗೊಂಡಿದ್ದು, ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ಉಮ್ಮರ್ಗಾ ಕಡೆಯಿಂದ ಹುಮ್ನಾಬಾದ್ ಕಡೆಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ಪ್ರತ್ಯೇಕ ರಸ್ತೆ ಅಪಘಾತಗಳು ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸಿರುವುದು ಸಂಚಾರ ಸುರಕ್ಷತೆಯ ಪ್ರಶ್ನೆಯನ್ನು ಮತ್ತೊಮ್ಮೆ ಮುಂದಿಟ್ಟಿದೆ. ಪೊಲೀಸರು ಸಂಬಂಧಿತ ಪ್ರಕರಣಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.

ಅನಾಥ ಮಕ್ಕಳ ಅನುದಾನ ಬಿಡುಗಡೆ ವಿಳಂಬ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

0

ಬೆಂಗಳೂರು: ದುರಾಡಳಿತ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಒಳಜಗಳದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಅನಾಥ ಮಕ್ಕಳಿಗೂ ನ್ಯಾಯ ನೀಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು. ಕಳೆದ ಏಳು ತಿಂಗಳಿನಿಂದ ಅನಾಥ ಮಕ್ಕಳಿಗೆ ನೀಡಬೇಕಾದ ಅನುದಾನವನ್ನು ಬಿಡುಗಡೆ ಮಾಡದೇ ಸರ್ಕಾರ ವಿಳಂಬ ಧೋರಣೆ ಅನುಸರಿಸಿದೆ ಎಂದು ವಾಗ್ದಾಳಿ ನಡೆಸಿದರು.

ಬುಧವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿವಿಧ ಕಾರಣಗಳಿಂದ ಅನಾಥರಾಗಿರುವ ಮಕ್ಕಳ ಸಂಖ್ಯೆ ರಾಜ್ಯದಲ್ಲಿ 26,334 ಇದೆ. ಇವರ ಊಟ ಹಾಗೂ ವಸತಿ ನಿರ್ವಹಣೆಗೆ ಪ್ರತಿ ತಿಂಗಳು ಪ್ರತಿ ಮಗುವಿಗೆ 4,000 ರೂ. ನೀಡಬೇಕಾಗಿದೆ.

ಆದರೆ ಸರ್ಕಾರವು ಕಳೆದ ಏಳು ತಿಂಗಳಿನಿಂದ ಸುಮಾರು 75 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. “ಅನಾಥ ಮಕ್ಕಳ ಹಣವನ್ನೇ ತಡೆಹಿಡಿದಿರುವ ಸರ್ಕಾರ ದಿವಾಳಿಯಾಗಿದೆಯೇ?” ಎಂದು ಪ್ರಶ್ನಿಸಿದರು.

ಇದೇ ವೇಳೆ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ನಾಳೆಯಿಂದ ಮುಷ್ಕರಕ್ಕೆ ಕರೆ ನೀಡಿರುವುದನ್ನು ಉಲ್ಲೇಖಿಸಿದರು. ನೌಕರರ ವಿರುದ್ಧ ಎಸ್ಮಾ ಜಾರಿಗೆ ತರಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದ್ದರೂ, ನೌಕರರು ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದರು.

ತಾವು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಸಾರಿಗೆ ನಿಗಮಗಳು ನಷ್ಟದಲ್ಲಿರಲಿಲ್ಲ ಎಂದು ಹೇಳಿದ ಅವರು, “ಒಂದು ವೇಳೆ ನಷ್ಟದಲ್ಲಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ” ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ರಾಹುಲ್ ಗಾಂಧಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

0

ಬೆಂಗಳೂರು: ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಸರ್ಕಾರದ ಕ್ರಮದ ವಿರುದ್ಧ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯೆ ನೀಡಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

“ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ದೇಶಾದ್ಯಂತ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಬಗ್ಗೆ ಭಾಷಣ ಮಾಡುವ ರಾಹುಲ್ ಗಾಂಧಿಯವರೇ, ನಿಮ್ಮದೇ ಪಕ್ಷದ ಆಡಳಿತವಿರುವ ಕರ್ನಾಟಕದತ್ತ ಒಮ್ಮೆ ನೋಡಿ,” ಎಂದು ಟೀಕಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದು ಯಾವ ಸಂವಿಧಾನದ ನಿಯಮ ಎಂದು ಪ್ರಶ್ನಿಸಿದ ಅವರು, “ಮೊದಲು ಕರ್ನಾಟಕ ಸರ್ಕಾರಕ್ಕೆ ಸಂವಿಧಾನದ ಪಾಠ ಮಾಡಿ,” ಎಂದು ಆಗ್ರಹಿಸಿದರು.ಈ ಕ್ರಮವನ್ನು ಮಾಧ್ಯಮಗಳನ್ನು ಪಂಜರದಲ್ಲಿ ಇಡುವ ಪ್ರಯತ್ನ ಎಂದು ಟೀಕಿಸಿದ ನಿಖಿಲ್ ಕುಮಾರಸ್ವಾಮಿ, ಇದನ್ನು “ತುರ್ತು ಪರಿಸ್ಥಿತಿಯ ಮುಂದುವರಿದ ಭಾಗ” ಎಂದು ಕಿಡಿಕಾರಿದರು.

ಜೈಲುಗಳಲ್ಲಿ NDPS ತಪಾಸಣೆ ಕಡ್ಡಾಯ: ಡಿಜಿಪಿ ಅಲೋಕ್ ಕುಮಾರ್ ಘೋಷಣೆ

0

ಹುಬ್ಬಳ್ಳಿ: ಜೈಲಿಗೆ ಒಳಬರುವ ಹಾಗೂ ಹೊರಹೋಗುವ ಕೈದಿಗಳ ಮೇಲೆ ಎನ್‌ಡಿಪಿಎಸ್‌ (NDPS) ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ. ಜೈಲು ಒಳಗೆ ಮಾದಕ ವಸ್ತುಗಳ ಸರಬರಾಜು ನಡೆಯುತ್ತಿದೆಯೇ ಎಂಬುದನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹುಬ್ಬಳ್ಳಿಯ ಉಪಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿದ ಡಿಜಿಪಿ ಅಲೋಕ್ ಕುಮಾರ್, ಜೈಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಸಬ್‌ ಜೈಲು ಕಟ್ಟಡ, ತೋಟ, ಕೈದಿಗಳಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದು, ಕೈದಿಗಳ ಸೆಲ್‌ಗಳಿಗೂ ಭೇಟಿ ನೀಡಿದರು. ಸಜಾಬಂಧಿಗಳೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನೂ ಆಲಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಕಾರಾಗೃಹದಲ್ಲಿ ಒಟ್ಟು 132 ಕೈದಿಗಳಿದ್ದಾರೆ. ಇವರಲ್ಲಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಕೈದಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು. ಕೈದಿಗಳಿಗೆ ಜೈಲಿನಲ್ಲಿಯೇ ವಿವಿಧ ಕೆಲಸಗಳಲ್ಲಿ ತೊಡಗುವ ಅವಕಾಶ ಕಲ್ಪಿಸಲಾಗುತ್ತಿದೆ. ಬಿಡುಗಡೆಯಾದ ನಂತರ ಅವರ ಜೀವನಕ್ಕೆ ಸಹಕಾರಿಯಾಗಲು ಸ್ಕಿಲ್ ಡೆವಲಪ್‌ಮೆಂಟ್ ತರಬೇತಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ, ಎಲ್ಲಾ ಜೈಲುಗಳ ಕೈದಿಗಳಿಗೆ ಯೋಗ ಮತ್ತು ಧ್ಯಾನವನ್ನು ಕಡ್ಡಾಯಗೊಳಿಸುವ ಯೋಜನೆ ರೂಪಿಸಲಾಗಿದೆ. ಮೊದಲ ಬಾರಿಗೆ ಜೈಲು ಪ್ರವೇಶಿಸುವ ಆರೋಪಿಗಳಿಗೆ ಎನ್‌ಡಿಪಿಎಸ್‌ ಪರೀಕ್ಷೆ ಕಡ್ಡಾಯವಾಗಿದ್ದು, ಒಂದು ವಾರದೊಳಗೆ ಈ ಕ್ರಮ ಜಾರಿಗೊಳ್ಳಲಿದೆ. ಸಮಾಜವನ್ನು ಮಾದಕ ವಸ್ತುಗಳ ಸೇವನೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಜೈಲಿನಿಂದಲೇ ಈ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಅದರ ಜೊತೆಗೆ, ಮೊದಲ ಬಾರಿ ಪ್ರಕರಣ ಎದುರಿಸುತ್ತಿರುವ ಆರೋಪಿಗಳನ್ನು ರೂಢಾಪರಾಧಿಗಳಿಂದ ಪ್ರತ್ಯೇಕವಾಗಿ ಇರಿಸುವ ಕ್ರಮವೂ ಕೈಗೊಳ್ಳಲಾಗಿದೆ ಎಂದು ಡಿಜಿಪಿ ಸ್ಪಷ್ಟಪಡಿಸಿದರು.

ಪ್ರೀತಿಸುತ್ತಿದ್ದ ಮಂಗಳಮುಖಿ–ಯುವಕ ಅನುಮಾನಾಸ್ಪದ ಸಾವು, ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

0

ಬಳ್ಳಾರಿ: ನಗರದ ಕೆಎಂಎಫ್ ಡೈರಿ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ ಮಂಗಳಮುಖಿ ಸುಹಾಸಿನಿ (29) ಮತ್ತು ಯುವಕ ಶೇಖರ್ ಅಲಿಯಾಸ್ ಮಣಿ (31) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿದೆ. ಮನೆಯ ಕಿಟಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.

ಶೇಖರ್ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದವರಾಗಿದ್ದು, ಆಟೋ ಚಾಲಕರಾಗಿ ಜೀವನ ನಡೆಸುತ್ತಿದ್ದರು. ಸುಹಾಸಿನಿ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದವರಾಗಿದ್ದರು. ಕಳೆದ ಆರು ವರ್ಷಗಳಿಂದ ಇಬ್ಬರೂ ಒಟ್ಟಿಗೆ ವಾಸವಾಗಿದ್ದರು ಎನ್ನಲಾಗಿದೆ.

ಘಟನೆಯ ಮಾಹಿತಿ ಸಿಕ್ಕ ತಕ್ಷಣ ಬ್ರೂಸ್‌ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ಹಿನ್ನಲೆಯಲ್ಲಿ ಹಲವು ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮಂಗಳಮುಖಿ ಸಮುದಾಯದ ಸದಸ್ಯರು ಶೇಖರ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಉದ್ಭವಿಸಿದ ತಕರಾರಿನಿಂದ ಸುಹಾಸಿನಿ ಕೊಲೆಯಾಗಿರಬಹುದು, ನಂತರ ಶೇಖರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಕುಟುಂಬಸ್ಥರ ದುಃಖ ಮತ್ತು ಆಕ್ರಂದನ ಮನಕಲಕುವಂತಿದೆ. ಆತ್ಮಹತ್ಯೆಯೋ ಅಥವಾ ಪೂರ್ವಯೋಜಿತ ಕೊಲೆಯೋ ಎಂಬುದನ್ನು ಮರಣೋತ್ತರ ವರದಿ ಮತ್ತು ತನಿಖೆಯ ನಂತರವೇ ಸ್ಪಷ್ಟಪಡಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

15.42 ಲಕ್ಷ ಕಳ್ಳತನ: ಅಣ್ಣನ ಮನೆ ದೋಚಿದ ತಮ್ಮನ ಬಂಧನ

0

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣವು ಕುಟುಂಬದ ನಂಬಿಕೆಯನ್ನು ಕದಡುವಂತಾಗಿದೆ. ಅಣ್ಣನ ಮನೆಯನ್ನೇ ಕಳ್ಳತನ ಮಾಡಿದ ಆರೋಪದಲ್ಲಿ ತಮ್ಮ ಮಹಮ್ಮದ ಅಲಿ ಹಂಚಿನಮನಿ (36) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಫೆಬ್ರುವರಿ 14, 2026ರಂದು ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯೊಳಗೆ ಈ ಘಟನೆ ನಡೆದಿದೆ. ಮಹಮ್ಮದ ಗೌಸ್ ಹಂಚಿನಮನಿ ಅವರ ಮನೆಗೆ ಕಳ್ಳರು ಅಡುಗೆ ಕೋಣೆಯ ಮೇಲ್ಛಾವಣಿಯ ಹೆಂಚನ್ನು ಕತ್ತರಿಸಿ ಪ್ರವೇಶಿಸಿದ್ದಾರೆ. ಮನೆಯಲ್ಲಿ ಇರಿಸಿದ್ದ 15 ಲಕ್ಷ 42 ಸಾವಿರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಕದ್ದೊಯ್ದಿದ್ದಾರೆ.

ಪ್ರಕರಣ ಗಂಭೀರವಾಗಿದ್ದರಿಂದ ಹಾನಗಲ್ ಪೊಲೀಸರು ತಕ್ಷಣ ಸ್ಥಳ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಜಿಲ್ಲಾ ತಾಂತ್ರಿಕ ಸಿಬ್ಬಂದಿಯನ್ನು ಕರೆಸಿ ಪರಿಶೀಲನೆ ಕೈಗೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ಶಿಗ್ಗಾಂವ್ ಡಿವೈಎಸ್‌ಪಿ ಗುರುಶಾಂತಪ್ಪ ಕೆ.ವಿ ಹಾಗೂ ಹಾನಗಲ್ ಸಿಪಿಐ ಬಸವರಾಜ ಹಳಬಣ್ಣ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಂಪತ್ ಎಸ್ ಆನಿಕಿವಿ ನೇತೃತ್ವದ ತಂಡ ತನಿಖೆ ತೀವ್ರಗೊಳಿಸಿತು.

ತನಿಖೆಯಲ್ಲಿ ಶಂಕೆ ತಮ್ಮ ಮಹಮ್ಮದ ಅಲಿ ಕಡೆ ತಿರುಗಿತು. ವಿಚಾರಣೆ ನಡೆಸಿದಾಗ ಆರೋಪ ಸಾಬೀತಾಗಿದ್ದು, ಅವರನ್ನು ಬಂಧಿಸಲಾಯಿತು.

ಬಂಧಿತನಿಂದ  38 ಗ್ರಾಂ ಚಿನ್ನದ ಮಾಂಗಲ್ಯ ಸರ – 4.56 ಲಕ್ಷ ರೂ, .23 ಗ್ರಾಂ ಚಿನ್ನದ ನೆಕ್ಲೆಸ್ – 2.76 ಲಕ್ಷ ರೂ., 8 ಗ್ರಾಂ ಬಂಗಾರದ ಚೈನ್ – 96 ಸಾವಿರ ರೂ., 15 ಗ್ರಾಂ ಬಂಗಾರದ ಪದಕ ಸರ – 1.8 ಲಕ್ಷ ರೂ., 22 ಗ್ರಾಂ ತೂಕದ 9 ಉಂಗುರಗಳು – 2.5 ಲಕ್ಷ ರೂ., 135 ಗ್ರಾಂ ಬೆಳ್ಳಿ ಕಾಲು ಚೈನ್ – 35 ಸಾವಿರ ರೂ., 2 ಗ್ರಾಂ ಕಿವಿಯೋಲೆ – 24 ಸಾವಿರ ರೂ., ನಗದು ಹಣ – 31 ಸಾವಿರ ರೂ. ಒಟ್ಟು 15 ಲಕ್ಷ 42 ಸಾವಿರ ರೂಪಾಯಿ ಮೌಲ್ಯದ ಆಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.

ಕುಟುಂಬದೊಳಗಿನ ದ್ರೋಹವೇ ಈ ಪ್ರಕರಣದ ಪ್ರಮುಖ ಆಘಾತ. ಹಾನಗಲ್ ಪೊಲೀಸ್ ತಂಡದ ತ್ವರಿತ ಕಾರ್ಯಾಚರಣೆ ಪ್ರಕರಣವನ್ನು ಬೆಳಕಿಗೆ ತಂದಿದೆ.

“ಹೋದ ವರ್ಷ ನಾನು ಬಯಸಿದ್ದು ಸಿಕ್ಕಿಲ್ಲ… ಆದರೆ ಈ ವರ್ಷ ತೊಗೊಳದೆ ಬಿಡಲ್ಲ..” ಮುಂಡರಗಿಯಲ್ಲಿ ಹೀಗೊಂದು ವಾಮಾಚಾರ!

0

ಗದಗ: ತಂತ್ರಜ್ಞಾನ ಚಂದ್ರನ ಮೇಲೆ ಕಾಲಿಡುವ ಮಟ್ಟಕ್ಕೆ ಬೆಳೆದಿದ್ದರೂ ಕೂಡ ಜನ ಮಾತ್ರ ಇನ್ನೂ ಮಾಟ ಮಂತ್ರಗಳ ಮೂಲಕ ಜನರ ಜನರನ್ನ ಹೆದರಿಸುತ್ತಲೇ ಕಾಲ ಕಳೆಯುತ್ತಿದ್ದಾರೆ.

ಇದೀಗ ಜಿಲ್ಲೆಯ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದಲ್ಲಿ ವಾಮಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕ ಸ್ಥಳದಲ್ಲೇ ಈ ಕೃತ್ಯ ನಡೆದಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದ ಮಧ್ಯ ಭಾಗದಲ್ಲಿ ನಕ್ಷತ್ರ ಆಕಾರದಲ್ಲಿ ಚಿಹ್ನೆಗಳು ಹಾಕಿರುವುದು ಕಂಡುಬಂದಿದೆ. ಅಲ್ಲದೆ ಕಪ್ಪು ಬಣ್ಣದ ಗೊಂಬೆ, ಮೊಟ್ಟೆ, ಎಲೆ-ಅಡಿಕೆ, ನಿಂಬೆಹಣ್ಣು ಇತ್ಯಾದಿ ವಸ್ತುಗಳನ್ನು ಇಟ್ಟು ಅಸಾಮಾನ್ಯ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

“ಹೋದ ವರ್ಷ ನಾನು ಬಯಸಿದ್ದು ಸಿಕ್ಕಿಲ್ಲ… ಆದರೆ ಈ ವರ್ಷ ತೊಗೊಳದೆ ಬಿಡಲ್ಲ..” ಎಂಬ ರೀತಿಯ ಬರಹವೂ ಸ್ಥಳದಲ್ಲಿ ಕಾಣಿಸಿಕೊಂಡಿದ್ದು, ಇದರಿಂದ ಸ್ಥಳೀಯರು ಮತ್ತಷ್ಟು ಭಯಭೀತರಾಗಿದ್ದಾರೆ.

ಘಟನೆ ತಿಳಿದ ಬಳಿಕ ಹುಡ್ಕೋ ಕಾಲೋನಿ ನಿವಾಸಿಗಳು ಬಸ್ ನಿಲ್ದಾಣದ ಕಡೆಗೆ ಹೋಗಲು ಸಹ ಹಿಂಜರಿಯುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲೇ ಇಂತಹ ಕೃತ್ಯ ನಡೆದಿರುವುದರಿಂದ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

error: Content is protected !!