Home Blog Page 17

ಶಂಕರ್​ ನಾಗ್ ಕನಸಿನ ಕೂಸು ‘ಮಾಲ್ಗುಡಿ ಡೇಸ್’ ಸರಣಿಗೆ 40 ವರ್ಷ: ಮಾಯಾಲೋಕ ಏಕೆ ಎವರ್‌ಗ್ರೀನ್?

ಬೆಂಗಳೂರು: ಭಾರತೀಯ ಟೆಲಿವಿಷನ್ ಇತಿಹಾಸದಲ್ಲಿ ಕಾಲಾತೀತ ಕ್ಲಾಸಿಕ್ ಆಗಿ ಉಳಿದಿರುವ ‘ಮಾಲ್ಗುಡಿ ಡೇಸ್’ ಧಾರಾವಾಹಿ ಬಿಡುಗಡೆಯಾಗಿ 40 ವರ್ಷಗಳು ಪೂರ್ಣಗೊಂಡಿವೆ. ಪೀಳಿಗೆಗಳನ್ನು ದಾಟಿ ಇಂದಿಗೂ ಅದೇ ಪ್ರೀತಿ, ಅದೇ ಗೌರವದೊಂದಿಗೆ ನೆನಪಾಗುವ ಈ ಸರಣಿ ಭಾರತೀಯರ ಭಾವನಾತ್ಮಕ ನೆನಪಿನ ಭಾಗವಾಗಿದೆ.

ಸಾಹಿತಿ ಆರ್.ಕೆ. ನಾರಾಯಣ್ ಅವರ ಅಮರ ಕಥೆಗಳಿಗೆ ನಿರ್ದೇಶಕ ಶಂಕರ್ ನಾಗ್ ನೀಡಿದ ದೃಶ್ಯರೂಪ ‘ಮಾಲ್ಗುಡಿ ಡೇಸ್’ಗೆ ಶಾಶ್ವತ ಸ್ಥಾನ ತಂದುಕೊಟ್ಟಿತು. ತಂತ್ರಜ್ಞಾನ, ಕ್ಯಾಮೆರಾ ಬಳಕೆ ಹಾಗೂ ಕಥೆ ಹೇಳುವ ಶೈಲಿಯಲ್ಲಿ ಶಂಕರ್ ನಾಗ್ ಮೂಡಿಸಿದ ಹೊಸತನ ಇಂದಿಗೂ ಅಚ್ಚರಿಯನ್ನೇ ಹುಟ್ಟಿಸುತ್ತದೆ.

ಶಿವಮೊಗ್ಗ ಜಿಲ್ಲೆಯ ಆಗುಂಬೆಯನ್ನೇ ಕಾಲ್ಪನಿಕ **‘ಮಾಲ್ಗುಡಿ’**ಯಾಗಿ ರೂಪಿಸಿ, ಅದರ ನೈಸರ್ಗಿಕ ಸೊಬಗನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದರು. ಧಾರಾವಾಹಿಯ ಯಶಸ್ಸಿನ ನಂತರ ಆಗುಂಬೆ ಪ್ರವಾಸೋದ್ಯಮಕ್ಕೂ ಹೊಸ ಗುರುತು ಸಿಕ್ಕಿತ್ತು.

ಮಾಸ್ಟರ್ ಮಂಜುನಾಥ್ ಅವರ ‘ಸ್ವಾಮಿ’, ಅನಂತ್ ನಾಗ್, ಗಿರೀಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ ಸೇರಿದಂತೆ ಕಲಾವಿದರ ಮನೋಜ್ಞ ಅಭಿನಯ ಧಾರಾವಾಹಿಗೆ ಜೀವ ತುಂಬಿತ್ತು. ಎಲ್. ವೈದ್ಯನಾಥನ್ ಅವರ ಅಮರ ಶೀರ್ಷಿಕೆ ಸಂಗೀತ ಇಂದಿಗೂ ಕೇಳುಗರನ್ನು ಬಾಲ್ಯದ ದಿನಗಳಿಗೆ ಕರೆದೊಯ್ಯುತ್ತದೆ.

‘ಮಾಲ್ಗುಡಿ ಡೇಸ್’ ಕೇವಲ ಒಂದು ಧಾರಾವಾಹಿಯಲ್ಲ; ಅದು ಭಾರತೀಯ ದೂರದರ್ಶನದ ಸುವರ್ಣ ಯುಗದ ಸಂಕೇತ, ಶಂಕರ್ ನಾಗ್ ಅವರ ಸೃಜನಶೀಲತೆಗೆ ಸಾಕ್ಷಿ ಮತ್ತು ಭಾರತೀಯ ಸಂಸ್ಕೃತಿಯ ಶಾಶ್ವತ ನೆನಪಾಗಿ ಇಂದಿಗೂ ಅಜರಾಮರವಾಗಿದೆ.

ಅಜಿತ್ ಸಿನಿಮಾದಿಂದ ಶ್ರೀಲೀಲಾ ಔಟ್! ಹ್ಯಾಟ್ರಿಕ್ ಅವಕಾಶ ಪಡೆದುಕೊಂಡ ಕನ್ನಡದ ನಟಿ

ಚೆನ್ನೈ: ಸ್ಟಾರ್ ನಟಿ ಶ್ರೀಲೀಲಾಗೆ ಮತ್ತೊಂದು ನಿರಾಸೆ ಎದುರಾಗಿದೆ. ತಮಿಳಿನ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕೊನೆಯ ಕ್ಷಣದಲ್ಲಿ ಕೈತಪ್ಪಿದ್ದು, ಆ ಪಾತ್ರಕ್ಕೆ ಇದೀಗ ಕನ್ನಡದ ಮೂಲದ ನಟಿ ಖಯಾದು ಲೋಹರ್ ಆಯ್ಕೆಯಾಗಿದ್ದಾರೆ.

ಚಿತ್ರದ ಕುರಿತು ಶ್ರೀಲೀಲಾ ಹಾಗೂ ಚಿತ್ರತಂಡದ ನಡುವೆ ಮಾತುಕತೆ ನಡೆದಿದ್ದರೂ, ಅಂತಿಮ ಹಂತದಲ್ಲಿ ನಾಯಕಿ ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾಗೆ ಕೈತಪ್ಪಿದ ಪ್ರಮುಖ ಚಿತ್ರಗಳ ಸಂಖ್ಯೆ ಮೂರಕ್ಕೇರಿದೆ.

ಈ ಹಿಂದೆ ವಿಜಯ್ ದೇವರಕೊಂಡ ಅಭಿನಯದ ‘ಕಿಂಗ್ಡಮ್’ ಸಿನಿಮಾಕ್ಕೆ ಮೊದಲ ಆಯ್ಕೆಯಾಗಿದ್ದ ಶ್ರೀಲೀಲಾ ಬಳಿಕ ಆ ಪ್ರಾಜೆಕ್ಟ್‌ನಿಂದ ಹೊರಬಂದಿದ್ದರು. ನಂತರ ಅಖಿಲ್ ಅಕ್ಕಿನೇನಿ ಅಭಿನಯದ ‘ಲೆನಿನ್’ ಚಿತ್ರದಿಂದಲೂ ಹಿಂದೆ ಸರಿದಿದ್ದು, ಎರಡೂ ಚಿತ್ರಗಳಲ್ಲಿ ಭಾಗ್ಯಶ್ರೀ ಭೋರ್ಸೆ ಅವಕಾಶ ಪಡೆದಿದ್ದರು.

ಇದೀಗ ಅಜಿತ್ ಸಿನಿಮಾದಲ್ಲೂ ಶ್ರೀಲೀಲಾ ಬದಲಿಗೆ ಖಯಾದು ಲೋಹರ್ ಅವರನ್ನು ಚಿತ್ರತಂಡ ಅಂತಿಮಗೊಳಿಸಿದ್ದು, ತಮಿಳು ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಂತಾಗಿದೆ.

ಆದಾಗ್ಯೂ ಶ್ರೀಲೀಲಾ ಅವರ ವೃತ್ತಿಜೀವನ ವೇಗ ಕಡಿಮೆಯಾಗಿಲ್ಲ. ಧನುಷ್ ಜೊತೆಗಿನ ತಮಿಳು ಸಿನಿಮಾ, ತೆಲುಗಿನಲ್ಲಿ ಎರಡು ಹೊಸ ಪ್ರಾಜೆಕ್ಟ್‌ಗಳು ಹಾಗೂ ಬಾಲಿವುಡ್‌ನಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಬಿಗ್ ಬಜೆಟ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಿರಂತರವಾಗಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶ್ರೀಲೀಲಾ ಇನ್ನೂ ಬೇಡಿಕೆಯ ನಟಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

Bengaluru Crime News: ಅಣ್ಣನ ಪ್ರೀತಿ ತಿರಸ್ಕರಿಸಿದ ಯುವತಿಯನ್ನು ಕೊಂದ ತಮ್ಮ!

0

ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹೆಚ್‌ಎಎಲ್ ರಸ್ತೆ ಕೋಡಿಹಳ್ಳಿ ಬಳಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಮೃತ ಯುವತಿಯನ್ನು ಅಮೃತ ಎಂದು ಗುರುತಿಸಲಾಗಿದೆ. ಜುಲೈ 13ರಂದು ಸಂಜೆ ಅಮೃತ ಮನೆ ಬಳಿ ಬಂದಿದ್ದ ಸೂರ್ಯ ಎಂಬಾತ ಆಕೆಯೊಂದಿಗೆ ಗಲಾಟೆ ನಡೆಸಿದ್ದಾನೆ. ಬಳಿಕ ಚಾಕುವಿನಿಂದ ಅಮೃತಳ ಬೆನ್ನು ಮತ್ತು ಎದೆ ಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ.

ಗಾಯಗೊಂಡಿದ್ದ ಅಮೃತಳನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಜುಲೈ 15ರಂದು ಸಂಜೆ ಮೃತಪಟ್ಟಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನಭೀಮಾನಗರ ಠಾಣೆ ಪೊಲೀಸರು ಸೂರ್ಯ ಹಾಗೂ ಆತನ ಸಹೋದರ ಧನುಷ್‌ನನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಅಮೃತ, ಧನುಷ್ ಹಾಗೂ ಸೂರ್ಯ ಒಂದೇ ಪ್ರದೇಶದವರಾಗಿದ್ದರು. ಪರಿಚಯದ ಬಳಿಕ ಧನುಷ್ ಮತ್ತು ಅಮೃತ ನಡುವೆ ಪ್ರೀತಿ ಬೆಳೆದಿತ್ತು. ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆದರೆ ಧನುಷ್‌ಗೆ ಈಗಾಗಲೇ ಮದುವೆಯಾಗಿದ್ದು, ಬಳಿಕ ವಿಚ್ಛೇದನ ಪಡೆದಿದ್ದ ವಿಚಾರ ಅಮೃತಳಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಈ ವಿಷಯ ತಿಳಿದ ನಂತರ ಅಮೃತ ಧನುಷ್‌ನಿಂದ ದೂರವಾಗಿದ್ದಳು.

ಇದರಿಂದ ಕೋಪಗೊಂಡ ಸೂರ್ಯ, ತನ್ನ ಅಣ್ಣನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅಮೃತಳ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಅಮೃತ ಲಾ ವಿದ್ಯಾರ್ಥಿನಿಯಾಗಿದ್ದು, ಪಿಜ್ಜಾ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಾಚೀನ ದೇವಾಲಯದ ಮೂರ್ತಿಗಳಿಗೆ ಭದ್ರತೆ ಕಲ್ಪಿಸಿ: ಸರ್ಕಾರಕ್ಕೆ ಹಿಂದೂ ಸಂಘಟನೆಗಳ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಹಿಂದೂ ದೇವಾಲಯಗಳ ವಿಗ್ರಹಗಳು ಹಾಗೂ ಮಹಾತ್ಮರ ಪ್ರತಿಮೆಗಳನ್ನು ಪದೇ ಪದೇ ವಿರೂಪಗೊಳಿಸಲಾಗುತ್ತಿದ್ದು, ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳ ಮುಖಂಡ ರಾಜೂ ಖಾನಪ್ಪನವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರಾಜೂ ಖಾನಪ್ಪನವರ, ಜಿಲ್ಲೆಯಲ್ಲಿ ದೇವರ ಮೂರ್ತಿಗಳು ಹಾಗೂ ಮಹಾತ್ಮರ ಪ್ರತಿಮೆಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಗದಗದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿನ ಅಪರೂಪದ ಸರಸ್ವತಿ ದೇವಿಯ ಮೂರ್ತಿಯನ್ನು ಮತ್ತೆ ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ. ಈ ಮೂರ್ತಿಯ ಮೇಲೆ ಕಳೆದ ಮೂರು ವರ್ಷಗಳಲ್ಲಿ ಹಲವು ಬಾರಿ ದಾಳಿ ನಡೆದಿದ್ದರೂ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರಾದರೂ ದೂರು ನೀಡಿದರೆ ಮಾತ್ರ ಪ್ರಕರಣ ದಾಖಲಿಸುತ್ತೇವೆ ಎಂಬ ಪೊಲೀಸ್ ಇಲಾಖೆಯ ನಿಲುವು ಸರಿಯಲ್ಲ. ರಾಷ್ಟ್ರೀಯ ಮಹತ್ವದ ಸ್ಮಾರಕಗಳು ಮತ್ತು ಪ್ರಾಚೀನ ದೇವಾಲಯಗಳಲ್ಲಿ ಇಂತಹ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಲಕ್ಕುಂಡಿಯಲ್ಲೂ ಪ್ರಾಚೀನ ಶಿಲ್ಪಗಳು ಹಾನಿಗೊಳಗಾಗಿದ್ದು, ಹರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮಹಾತ್ಮ ಗಾಂಧೀಜಿ ಹಾಗೂ ದಾನಿ ಸೋಮಶೇಖರಯ್ಯ ಹುಚ್ಚಯ್ಯ ಗಣಾಚಾರಿ ಅವರ ಪ್ರತಿಮೆಗಳನ್ನೂ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಘಟನೆ ನಡೆದ ಹಲವು ದಿನಗಳಾದರೂ ಸಂಬಂಧಪಟ್ಟ ಅಧಿಕಾರಿಗಳು ದೂರು ದಾಖಲಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯ ಐತಿಹಾಸಿಕ ದೇವಾಲಯಗಳು, ಶಿಲ್ಪಕಲೆ ಹಾಗೂ ಮಹನೀಯರ ಪ್ರತಿಮೆಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅವುಗಳ ರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಎಲ್ಲ ಪ್ರಾಚೀನ ದೇವಾಲಯಗಳಲ್ಲಿ ಭದ್ರತೆ ಹಾಗೂ ಸಿಸಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಿ, ವಿಗ್ರಹ ವಿರೂಪ ಪ್ರಕರಣಗಳ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್. ದುರ್ಗೇಶ್, ಸರ್ಕಾರದ ಗಮನಕ್ಕೆ ವಿಷಯವನ್ನು ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹೇಶ ರೋಖಡೆ, ಭರತ್ ಲದ್ದಿ, ಕುಮಾರ ನಡಗೇರಿ, ಕುಮಾರ ಮಿಟ್ಟಿಮಠ, ಆನಂದ ಅರಕೇರಿ, ಮಹೇಶ ಬಡಿಗೇರ, ಮಂಜು ಪೂಜಾರ, ವೀರಣ್ಣ ಹೆಬಸೂರ, ಬಸಯ್ಯ ಗಣಾಚಾರಿ, ಬಸವರಾಜ ಯಳವತ್ತಿ, ಮಹೇಶ ಕಂಬಾರ, ಪರಮೇಶ ಬೆಂತೂರ, ಬಸವರಾಜ ನವಲಿ, ಅಶೋಕ ಬಜಂತ್ರಿ, ಮುತ್ತಣ್ಣ ವಾಲ್ಮೀಕಿ, ಹುಲಿಗೆಪ್ಪ ವಾಲ್ಮೀಕಿ, ಶಿವಯೋಗಿ ಹಿರೇಮಠ ಹಾಗೂ ಸುನೀಲ ಮುಳ್ಳಾಳ ಉಪಸ್ಥಿತರಿದ್ದರು.

“ಪ್ರಾಚೀನ ದೇವಾಲಯಗಳ ವಿಗ್ರಹಗಳು ಮತ್ತು ಮಹಾತ್ಮರ ಪ್ರತಿಮೆಗಳ ಮೇಲಿನ ದಾಳಿಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಿ ಶಾಶ್ವತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.”

– ರಾಜೂ ಖಾನಪ್ಪನವರ

ಜುಲೈ 17ರಂದು ಬೃಹತ್ ಉಚಿತ ಆರೋಗ್ಯ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಗದಗ: ಕೆ.ಎಲ್.ಇ. ಸಂಸ್ಥೆಯ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಜುಲೈ 17ರಂದು ಬೆಳಿಗ್ಗೆ 10.30ಕ್ಕೆ ನಗರದ ಕೆ.ಎಲ್.ಇ. ಜೆ.ಟಿ. ಕಾಲೇಜಿನ ಸಭಾಭವನದಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕರೆ ನೀಡಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಲ್.ಇ. ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಕಾಹೇರ ಬೆಳಗಾವಿ, ಕೆ.ಎಲ್.ಇ. ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಹುಬ್ಬಳ್ಳಿ ಸೇರಿದಂತೆ ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಗದಗ ತಾಲೂಕಿನ ಸುಮಾರು 50 ಗ್ರಾಮಗಳಿಂದ 10 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ 8 ಸಾವಿರಕ್ಕೂ ಹೆಚ್ಚು ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕಾಗಿ 20 ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ ಎಂದರು.

ಶಿಬಿರದಲ್ಲಿ ಹೃದಯ, ಮೂಳೆ-ಕೀಲು, ಮೂತ್ರಪಿಂಡ, ಸಾಮಾನ್ಯ ಶಸ್ತ್ರಚಿಕಿತ್ಸೆ, ಕಿವಿ-ಮೂಗು-ಗಂಟಲು, ಕಣ್ಣಿನ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ, ಚರ್ಮ, ನರರೋಗ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ, ಕ್ಯಾನ್ಸರ್, ದಂತ, ಮನೋವೈದ್ಯಕೀಯ, ಭೌತಿಕ ಚಿಕಿತ್ಸೆ, ಆಯುರ್ವೇದ ಹಾಗೂ ಹೋಮಿಯೋಪತಿ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಉಚಿತ ತಪಾಸಣೆ ನಡೆಸಿ ಅಗತ್ಯ ಔಷಧ ವಿತರಿಸಲಿದ್ದಾರೆ. ಅಗತ್ಯವಿರುವ ರೋಗಿಗಳನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದು, ಕೆ.ಎಲ್.ಇ. ಸಂಸ್ಥೆಯ ಮಾಜಿ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎಚ್.ಕೆ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಹಾಗೂ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮತ್ತು ಡಾ. ಎಚ್.ಎಸ್. ನೀಲಗುಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಸ್.ಬಿ. ಸಂಶಿಮಠ, ಆರ್.ಟಿ. ಪವಾಡಶೆಟ್ಟರ್, ಅಶೋಕ ನಿಲೂಗಲ್, ಬಿ.ಜಿ. ಶೆಲ್ಲಿಕೇರಿ, ರಜನಿ ಪಾಟೀಲ ಹಾಗೂ ಡಾ. ಅಲ್ಲಮಪ್ರಭು ಕುಡಚಿ ಉಪಸ್ಥಿತರಿದ್ದರು.

Puri Rath Yatra 2026: ಲಕ್ಷಾಂತರ ಭಕ್ತರ ನಡುವೆ ಜಗನ್ನಾಥ ರಥೋತ್ಸವಕ್ಕೆ ಭವ್ಯ ಚಾಲನೆ

0

ಪುರಿ: ದೇಶದ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ 2026 ಗುರುವಾರ ಭವ್ಯವಾಗಿ ಆರಂಭವಾಗಿದೆ.

ಲಕ್ಷಾಂತರ ಭಕ್ತರು ಪುರಿ ನಗರಕ್ಕೆ ಆಗಮಿಸಿದ್ದು, ಇಡೀ ನಗರವು ‘ಜಯ ಜಗನ್ನಾಥ’ ಘೋಷಣೆಯಿಂದ ಭಕ್ತಿಯ ವಾತಾವರಣದಲ್ಲಿ ಮುಳುಗಿದೆ.

ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ನಿಗದಿಪಡಿಸಿದ ಧಾರ್ಮಿಕ ವಿಧಿವಿಧಾನಗಳಂತೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ಭಕ್ತರ ಸುರಕ್ಷತೆಗಾಗಿ ಪುರಿ ನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಪುರಿ ರಥಯಾತ್ರೆಯ ವಿಶೇಷತೆ ಎಂದರೆ, ಇಲ್ಲಿ ಭಕ್ತರು ದೇವರ ದರ್ಶನಕ್ಕಾಗಿ ದೇವಸ್ಥಾನದ ಒಳಗೆ ಹೋಗುವುದಿಲ್ಲ. ಬದಲಾಗಿ ಜಗನ್ನಾಥ ಸ್ವಾಮಿ, ಸಹೋದರ ಬಲಭದ್ರ ಹಾಗೂ ಸಹೋದರಿ ಸುಭದ್ರಾ ದೇವಿಯೊಂದಿಗೆ ಸ್ವತಃ ದೇವಾಲಯದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಸಂಪ್ರದಾಯದ ಪ್ರಕಾರ ಜಗನ್ನಾಥ ಸ್ವಾಮಿ ತನ್ನ ಒಡಹುಟ್ಟಿದವರೊಂದಿಗೆ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಸ್ಥಾನಕ್ಕೆ ತೆರಳುತ್ತಾರೆ. ಅಲ್ಲಿ ಒಂಬತ್ತು ದಿನಗಳ ಕಾಲ ದೇವತೆಗಳು ವಾಸ್ತವ್ಯ ಹೂಡಿ ವಿಶೇಷ ಪೂಜೆಗಳನ್ನು ಸ್ವೀಕರಿಸುತ್ತಾರೆ.

ಈ ರಥಯಾತ್ರೆಯ ಮತ್ತೊಂದು ವಿಶೇಷವೆಂದರೆ ಪ್ರತಿ ವರ್ಷವೂ ಹೊಸ ರಥಗಳನ್ನು ನಿರ್ಮಿಸಲಾಗುತ್ತದೆ. ಹಿಂದಿನ ವರ್ಷದ ರಥಗಳನ್ನು ಮರುಬಳಕೆ ಮಾಡುವುದಿಲ್ಲ. ವಿಶೇಷ ಮರಗಳಿಂದ ನಿರ್ಮಿಸಲಾದ ಮೂರು ಬೃಹತ್ ರಥಗಳಲ್ಲಿ ದೇವತೆಗಳ ಮೆರವಣಿಗೆ ನಡೆಯುತ್ತದೆ.

ಜಗನ್ನಾಥ ಸ್ವಾಮಿಯ ರಥವನ್ನು ‘ನಂದಿಘೋಷ’, ಬಲಭದ್ರ ಸ್ವಾಮಿಯ ರಥವನ್ನು ‘ತಾಳಧ್ವಜ’, ಸುಭದ್ರಾ ದೇವಿಯ ರಥವನ್ನು ‘ದರ್ಪದಲನ’ ಎಂದು ಕರೆಯಲಾಗುತ್ತದೆ.

ರಥದ ಹಗ್ಗವನ್ನು ಎಳೆದು ಸೇವೆ ಸಲ್ಲಿಸಿದರೆ ಪುಣ್ಯ ಲಭಿಸುತ್ತದೆ ಎಂಬುದು ಕೋಟ್ಯಂತರ ಭಕ್ತರ ನಂಬಿಕೆಯಾಗಿದೆ.

ರಥಯಾತ್ರೆಯ ಪ್ರಮುಖ ದಿನಾಂಕಗಳು:

  • ಜುಲೈ 16: ರಥಯಾತ್ರೆ ಆರಂಭ, ದೇವರ ಮೂರ್ತಿಗಳ ಪಹಂಡಿ ಆಚರಣೆ ಹಾಗೂ ರಥ ಚಲನೆ.
  • ಜುಲೈ 17ರಿಂದ ಜುಲೈ 23ರವರೆಗೆ: ಗುಂಡಿಚಾ ದೇವಸ್ಥಾನದಲ್ಲಿ ದೇವತೆಗಳ ವಾಸ್ತವ್ಯ ಮತ್ತು ವಿಶೇಷ ಪೂಜೆ.
  • ಜುಲೈ 24: ದೇವತೆಗಳು ಮೂಲ ಜಗನ್ನಾಥ ದೇವಸ್ಥಾನಕ್ಕೆ ಮರಳುವ ‘ಬಹುಡಾ ಯಾತ್ರೆ’.

ರಥೋತ್ಸವದ ಪ್ರಮುಖ ಆಚರಣೆಗಳಲ್ಲಿ ಒಂದಾದ ‘ಛೇರಾ ಪಹರಾ’ ಕೂಡ ನಡೆಯಲಿದೆ. ಈ ವೇಳೆ ಪುರಿಯ ಗಜಪತಿ ಮಹಾರಾಜರು ಚಿನ್ನದ ಹಿಡಿಕೆಯ ಕಸಪೊರಕೆಯಿಂದ ರಥದ ಸುತ್ತಲೂ ಸ್ವಚ್ಛಗೊಳಿಸಿ, ಶ್ರೀಗಂಧದ ನೀರನ್ನು ಪ್ರೋಕ್ಷಣೆ ಮಾಡುತ್ತಾರೆ.

ರಾಜನಾಗಲಿ, ಸಾಮಾನ್ಯ ಭಕ್ತನಾಗಲಿ ದೇವರ ಮುಂದೆ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಈ ಆಚರಣೆ ಸಾರುತ್ತದೆ.

ಲಕ್ಷಾಂತರ ಭಕ್ತರ ಆಗಮನದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ಸಂಚಾರ ವ್ಯವಸ್ಥೆ, ಭದ್ರತೆ ಹಾಗೂ ಮೂಲಸೌಕರ್ಯಗಳಿಗಾಗಿ ವಿಶೇಷ ವ್ಯವಸ್ಥೆಗಳನ್ನು ಕೈಗೊಂಡಿದೆ.

₹78 ಕೋಟಿ ಅವ್ಯವಹಾರ ಪ್ರಕರಣ: ಕೊಪ್ಪಳದ ಮಾಜಿ ಕಾರ್ಯನಿರ್ವಾಹಕ ಎಂಜಿನಿಯರ್ ಅರೆಸ್ಟ್

ಕೊಪ್ಪಳ: ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ಮಾಜಿ ಕಾರ್ಯನಿರ್ವಾಹಕ ಎಂಜಿನಿಯರ್ ಝರಣಪ್ಪ ಎಂ. ಚಿಂಚೋಳಿಕರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಗ್ರೂಪ್ ಲೀಡರ್ ದೇವರಾಜ ರೇಷ್ಮೆ ಅವರನ್ನೂ ಬಂಧಿಸಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಬೆಂಗಳೂರಿನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಲೋಕಾಯುಕ್ತ ಡಿವೈಎಸ್‌ಪಿ ಮಲ್ಲಿಕಾರ್ಜುನ ಚುಕ್ಕಿ ನೇತೃತ್ವದ ತಂಡ, ಬೆಂಗಳೂರು ಹಾಗೂ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳ ಸಹಕಾರದೊಂದಿಗೆ ಆರೋಪಿಗಳನ್ನು ಬಂಧಿಸಿದೆ. ಬಂಧನದ ಬಳಿಕ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಯಿತು.

ಝರಣಪ್ಪ ಎಂ. ಚಿಂಚೋಳಿಕರ್ ಅವರು ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಅಮಾನತುಗೊಂಡಿದ್ದರು. ನಂತರ ಅವರನ್ನು ಸೇವೆಯಿಂದಲೂ ವಜಾಗೊಳಿಸಲಾಗಿತ್ತು.

2016ರಿಂದ 2018ರ ಅವಧಿಯಲ್ಲಿ ಯಲಬುರ್ಗಾ ಕ್ಷೇತ್ರದ ಸುವರ್ಣ ಗ್ರಾಮ ಯೋಜನೆಯಡಿ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಅವರು 2020ರಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‌ಗಳ ನೇತೃತ್ವದಲ್ಲಿ ಪಂಚನಾಮೆ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗಿತ್ತು.

ಈ ಹಿಂದೆ ಕೂಡ ಚಿಂಚೋಳಿಕರ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಇದೀಗ ಇದೇ ಪ್ರಕರಣ ಸೇರಿದಂತೆ ಕೆಆರ್‌ಐಡಿಎಲ್‌ನಲ್ಲಿ ನಡೆದಿರುವ ಸುಮಾರು 78 ಕೋಟಿ ರೂ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿರುವುದಾಗಿ ಲೋಕಾಯುಕ್ತ ಮೂಲಗಳು ತಿಳಿಸಿವೆ.

ಫಲವತ್ತಾದ ಭೂಮಿ ಉಳಿಸಲು ರೈತರ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ನರಸಾಪೂರ ಸರಹದ್ದಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕು ಹಾಗೂ ಹನಿ ನೀರಾವರಿ ಯೋಜನೆ ಹೆಸರಿನಲ್ಲಿ ರಾಜ್ಯ ಹೆದ್ದಾರಿಯಲ್ಲಿ ಕಾನೂನುಬಾಹಿರವಾಗಿ ಪೈಪ್‌ಲೈನ್ ಅಳವಡಿಸುತ್ತಿರುವುದನ್ನು ವಿರೋಧಿಸಿ ಜುಲೈ 17ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಎಂ.ಪಿ. ಪರ್ವತಗೌಡ್ರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಟಗೇರಿ ಹೊರವಲಯದ ನಾಗಸಮುದ್ರ ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದ ಸಮೀಪ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ಈಗಾಗಲೇ ನರಸಾಪೂರ ವ್ಯಾಪ್ತಿಯಲ್ಲಿ 160ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡು ಕೈಗಾರಿಕೆ ಸ್ಥಾಪಿಸಿದೆ. ಇದೀಗ ಮತ್ತೆ 220 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರೈತರಿಗೆ ನೋಟಿಸ್ ನೀಡಲಾಗಿದೆ. ಇದರಿಂದ ರೈತರ ಬದುಕು ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದ್ದು, ಸರ್ಕಾರ ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಸುಂಕದ ಮಾತನಾಡಿ, ಹನಿ ನೀರಾವರಿ ಕಾಮಗಾರಿಯ ಗುತ್ತಿಗೆದಾರರು ರಾಜ್ಯ ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿದ್ದಾರೆ. ರಾಜ್ಯ ಹೆದ್ದಾರಿಯಿಂದ 40 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂಬ ನಿಯಮವಿದ್ದರೂ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.

ನಾಗಸಮುದ್ರದ ಐತಿಹಾಸಿಕ ದಂಡಿನ ದುರ್ಗಾದೇವಿ ದೇವಸ್ಥಾನದ 150ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯ ಬೇವಿನ ಮರದ ಸಮೀಪ ಆಳವಾಗಿ ಗುಂಡಿ ತೋಡಿರುವುದರಿಂದ ಮರಕ್ಕೆ ಅಪಾಯ ಎದುರಾಗಿದ್ದು, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜು ಬಾಳಿಕಾಯಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸಯ್ಯ ಗುಡ್ಡಿಮಠ, ಬಸವರಾಜ ಮುಳ್ಳಾಳ, ಬಸವರಾಜ ಹೊನ್ನಪ್ಪನವರ, ಮಂಜುನಾಥ ಹೊನ್ನಪ್ಪನವರ, ಅಪ್ಪಣ್ಣ ಕಾಳೆ, ಸುರೇಶ ಪೂಜಾರ, ಸುರೇಶ ನಿಂಗಪ್ಪ ಪೂಜಾರ, ಕೆಂಪಣ್ಣ ಪೂಜಾರ, ಪರಶುರಾಮ ಗಾಯಕವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ರೈತರ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ರೈತರ ಬದುಕು ಉಳಿಸಲು ಅಗತ್ಯವಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ.”

– ಎಂ.ಪಿ. ಪರ್ವತಗೌಡ್ರ, ಜಿಲ್ಲಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ)

150 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಿ.ಜಿ. ಅಣ್ಣಿಗೇರಿ ಪ್ರತಿಷ್ಠಾನವು ಗದಗ ನಗರ ಹಾಗೂ ತಾಲೂಕಿನ ವಿವಿಧ ಸರ್ಕಾರಿ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸುಮಾರು 150 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿತು.

ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಶ್ಚಂದ್ರ ಬೆಟದೂರ ಮಾತನಾಡಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಗೌರವಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುವುದರ ಜೊತೆಗೆ ಮತ್ತಷ್ಟು ಸಾಧನೆಗೆ ಪ್ರೇರಣೆಯಾಗುತ್ತದೆ. ಪ್ರತಿಭೆಯನ್ನು ಪ್ರೋತ್ಸಾಹಿಸುವ ಮೂಲಕ ಸಮಾಜದ ಭವಿಷ್ಯವನ್ನು ಸದೃಢಗೊಳಿಸುವುದು ಪ್ರತಿಷ್ಠಾನದ ಉದ್ದೇಶವಾಗಿದೆ ಎಂದು ಹೇಳಿದರು.

ಪ್ರತಿಷ್ಠಾನದ ಗೌರವಾಧ್ಯಕ್ಷ ಜ. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ಅಧ್ಯಕ್ಷ ಶಿವಕುಮಾರ ಎಚ್. ಪಾಟೀಲ ಅವರ ಮಾರ್ಗದರ್ಶನದಲ್ಲಿ ಡಿಡಿಪಿಐ ಆರ್.ಎಸ್. ಬುರಡಿ, ಬಿಇಒ, ಮುಖ್ಯೋಪಾಧ್ಯಾಯರು ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಗದಗ ನಗರ ಹಾಗೂ ತಾಲೂಕಿನ 30 ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಪ್ರತಿಷ್ಠಾನದ ಪದಾಧಿಕಾರಿಗಳು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಐದು ಸ್ಥಾನ ಪಡೆದ ಸುಮಾರು 150 ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಂಸಾ ಪತ್ರ ಹಾಗೂ ಕಾಲೇಜು ಬ್ಯಾಗ್ ವಿತರಿಸಿ ಅಭಿನಂದಿಸಿದರು.

ಸಿದ್ಧಲಿಂಗನಗರ, ಆಶ್ರಯ ಕಾಲೋನಿ, ರಾಜೀವಗಾಂಧಿ ನಗರ, ಬೆಟಗೇರಿ ಗಾಂಧಿನಗರ ಹಾಗೂ ಗದುಗಿನ ಉರ್ದು ಸರ್ಕಾರಿ ಪ್ರೌಢಶಾಲೆಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

“ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವುದು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗುತ್ತದೆ. ಶಿಕ್ಷಣ ಸೇವೆಯ ಮೂಲಕ ಸಮಾಜ ನಿರ್ಮಾಣಕ್ಕೆ ಪ್ರತಿಷ್ಠಾನ ಸದಾ ಬದ್ಧವಾಗಿದೆ.”

– ಸುಭಾಶ್ಚಂದ್ರ ಬೆಟದೂರ, ಕಾರ್ಯದರ್ಶಿ, ಬಿ.ಜಿ. ಅಣ್ಣಿಗೇರಿ ಪ್ರತಿಷ್ಠಾನ

2028ರ ಚುನಾವಣೆಗೆ ಎಸ್‌ಡಿಪಿಐ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಗದಗ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಗದಗ ನಗರದಲ್ಲಿ ಆಯೋಜಿಸಿದ್ದ ‘ಲೀಡರ್ಸ್ ಕಾಂಕ್ಲೇವ್’ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಭಾಗವಹಿಸಿ, ಸಂಘಟನೆ ಬಲವರ್ಧನೆ, ಮುಂಬರುವ ಚುನಾವಣಾ ಸಿದ್ಧತೆ ಹಾಗೂ ಪಕ್ಷದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದರು.

ಮುಳಗುಂದ ನಾಕಾ ವೃತ್ತದಲ್ಲಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಜಿಲ್ಲಾ ಘಟಕದ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ಮೆರವಣಿಗೆಯ ಮೂಲಕ ಕನಕ ಭವನ ಫಂಕ್ಷನ್ ಹಾಲ್‌ಗೆ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಹೋದರತ್ವದ ಮೌಲ್ಯಗಳನ್ನು ಬಲಪಡಿಸುವ ಸಮರ್ಥ ನಾಯಕತ್ವವನ್ನು ಬೆಳೆಸುವುದು ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಪಕ್ಷವು ದೇಶದ 15 ರಾಜ್ಯಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದೆ ಎಂದು ತಿಳಿಸಿದರು.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಸಂಘಟನೆ ಬಲವರ್ಧನೆ ಹಾಗೂ ಮುಂದಿನ ರಾಜಕೀಯ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದರು.

ಮುಂಬರುವ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ 2028ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಕ್ರಿಯವಾಗಿ ಸ್ಪರ್ಧಿಸಲಿದ್ದು, ರಾಜ್ಯದ 50 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಗದಗ ಜಿಲ್ಲೆಯಲ್ಲಿಯೂ ಅರ್ಹ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ “ಎಸ್‌ಡಿಪಿಐ ಬಿಜೆಪಿಯ ಬಿ-ಟೀಮ್ ಎಂಬ ಆರೋಪ” ಕುರಿತ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ ಮಜೀದ್, ತಮ್ಮ ಪಕ್ಷ ಯಾರನ್ನಾದರೂ ಗೆಲ್ಲಿಸಲು ಅಥವಾ ಸೋಲಿಸಲು ಚುನಾವಣೆ ಎದುರಿಸುವುದಿಲ್ಲ. ಜನಪರ ಆಡಳಿತಕ್ಕಾಗಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಾಫಿ, ರಾಷ್ಟ್ರೀಯ ಕಾರ್ಯದರ್ಶಿ ಮೊಯಿದ್ದೀನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ಅಫ್ಸರ್ ಕೆ.ಆರ್. ನಗರ ಹಾಗೂ ಗದಗ ಜಿಲ್ಲಾ ಅಧ್ಯಕ್ಷ ಬಿಲಾಲ್ ಗೋಕಾವಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

“ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಸಹೋದರತ್ವದ ಮೌಲ್ಯಗಳನ್ನು ಬಲಪಡಿಸುವ ಸಮರ್ಥ ನಾಯಕತ್ವವನ್ನು ಬೆಳೆಸುವುದೇ ಎಸ್‌ಡಿಪಿಐಯ ಪ್ರಮುಖ ಗುರಿಯಾಗಿದೆ.”

– ಎಂ.ಕೆ. ಫೈಝಿ, ರಾಷ್ಟ್ರೀಯ ಅಧ್ಯಕ್ಷ, ಎಸ್‌ಡಿಪಿಐ