Home Blog Page 17

ಜಾಮೀನು ಬಾಗಿಲು ಬಂದ್! ಈಗ ದರ್ಶನ್ ಕೇಸ್ ಹೊಸ ಜಡ್ಜ್ ಕೈಗೆ; ಸುಪ್ರೀಂ ಆದೇಶದಿಂದ ವೇಗ ಪಡೆಯುತ್ತಾ ವಿಚಾರಣೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಕಾನೂನು ಹೋರಾಟ ಮತ್ತಷ್ಟು ಕಠಿಣವಾಗುತ್ತಿದೆ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ, ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಕೋರ್ಟ್ ಮತ್ತು ನ್ಯಾಯಾಧೀಶರ ಬದಲಾವಣೆ ನಡೆದಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಈ ಪ್ರಕರಣವನ್ನು ಸಿಸಿಹೆಚ್-57 ಕೋರ್ಟ್‌ನಿಂದ ಸಿಸಿಹೆಚ್-59ಕ್ಕೆ ವರ್ಗಾವಣೆ ಮಾಡಲಾಗಿದೆ. ಜೂನ್ 1ರಿಂದ ಈ ವರ್ಗಾವಣೆ ಜಾರಿಯಾಗಲಿದ್ದು, ನ್ಯಾಯಮೂರ್ತಿ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳಲಿದ್ದಾರೆ.

ಇದರ ಜೊತೆಗೆ ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಸೂಚನೆ ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಒಂದು ವರ್ಷದೊಳಗೆ ಎಲ್ಲಾ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಸೂಚಿಸಿರುವ ಕಾರಣ, ಸ್ಥಳೀಯ ಕೋರ್ಟ್ ನಿರಂತರ ವಿಚಾರಣೆಗೆ ಸಿದ್ಧವಾಗುತ್ತಿದೆ.

ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಈಗಾಗಲೇ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದು, ವಾರಕ್ಕೆ ಹಲವು ದಿನಗಳ ಕಾಲ ವೇಗದ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಒಂದೆಡೆ ಜಾಮೀನು ದಾರಿ ಮುಚ್ಚಿಕೊಂಡಿದ್ದರೆ, ಮತ್ತೊಂದೆಡೆ ಪ್ರಕರಣದ ವಿಚಾರಣೆ ವೇಗ ಪಡೆಯುತ್ತಿರುವುದು ದರ್ಶನ್ ಶಿಬಿರದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಕಾನ್ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ಲುಕ್ ವೈರಲ್: ಟ್ರೋಲರ್‌ಗಳ ವಿರುದ್ಧ ಕಂಗನಾ ಫುಲ್ ಗರಂ

ವಿಶ್ವದ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಮಗಳು ಆರಾಧ್ಯ ಬಚ್ಚನ್ ಜೊತೆ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಐಶ್ವರ್ಯಾ, ಈ ಬಾರಿ ತಮ್ಮ ವಿಶಿಷ್ಟ ಫ್ಯಾಷನ್ ಆಯ್ಕೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣರಾದರು.

ನೀಲಿ ಬಣ್ಣದ ಅದ್ದೂರಿ ಗೌನ್‌ನಲ್ಲಿ ಮಿಂಚಿದ ಐಶ್ವರ್ಯಾ ಅವರ ಲುಕ್ ಕೆಲವರಿಗೆ ಮೆಚ್ಚುಗೆಯಾದರೆ, ಮತ್ತಷ್ಟು ಮಂದಿ ವಯಸ್ಸು ಮತ್ತು ಸ್ಟೈಲಿಂಗ್ ಕುರಿತು ಟೀಕೆ ಮಾಡಿದರು. ಈ ಟ್ರೋಲಿಂಗ್ ವಿರುದ್ಧ ಇದೀಗ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ನೇರವಾಗಿ ಕಿಡಿಕಾರಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಐಶ್ವರ್ಯಾ ಫೋಟೋ ಹಂಚಿಕೊಂಡ ಕಂಗನಾ, “ಯಾವ ಮಹಿಳೆಯೂ ಇತರರನ್ನು ಮೆಚ್ಚಿಸಲು ಮಾತ್ರ ಬದುಕುವುದಿಲ್ಲ. ಐಶ್ವರ್ಯಾ ತಮ್ಮ ಆತ್ಮವಿಶ್ವಾಸ ಮತ್ತು ವೈಯಕ್ತಿಕ ಶೈಲಿಯಿಂದ ರೆಡ್ ಕಾರ್ಪೆಟ್‌ನಲ್ಲಿ ನಿಲ್ಲುತ್ತಾರೆ” ಎಂದು ಬರೆದಿದ್ದಾರೆ.

ಟ್ರೋಲರ್‌ಗಳಿಗೆ ಮತ್ತಷ್ಟು ತಿರುಗೇಟು ನೀಡಿದ ಕಂಗನಾ, “ರೆಡ್ ಕಾರ್ಪೆಟ್ ಮೇಲೆ ವಯಸ್ಸಾದ ಮಹಿಳೆಯರನ್ನು ನೋಡಲು ಅಭ್ಯಾಸವಿಲ್ಲದವರು ಈಗಲೇ ಅದಕ್ಕೆ ಹೊಂದಿಕೊಳ್ಳಬೇಕು” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾನ್ 2026ರಲ್ಲಿ ಐಶ್ವರ್ಯಾ ಧರಿಸಿದ್ದ ವಿಶೇಷ ನೀಲಿ ಗೌನ್ ಅನ್ನು ಖ್ಯಾತ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ್ದು, ಅದನ್ನು ತಯಾರಿಸಲು ಸುಮಾರು 1500 ಗಂಟೆಗಳ ಶ್ರಮ ಬೇಕಾಗಿತ್ತು ಎಂದು ಹೇಳಲಾಗಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಐಶ್ವರ್ಯಾ ಲುಕ್ ಈಗ ಜಾಗತಿಕ ಮಟ್ಟದಲ್ಲಿ ಟ್ರೆಂಡಿಂಗ್ ಆಗಿದೆ.

‘ಜಾರ್ಜ್‌ಕುಟ್ಟಿ ಮತ್ತೆ ಗೇಮ್ ಚೇಂಜರ್!’: 4 ದಿನದಲ್ಲಿ ₹141 ಕೋಟಿ ಬಾಚಿದ ಮೋಹನ್‌ಲಾಲ್ ಥ್ರಿಲ್ಲರ್

ಮಲಯಾಳಂ ಸಿನಿಮಾಗಳು ಕೇವಲ ಕಂಟೆಂಟ್ ಮಟ್ಟದಲ್ಲೇ ಗೆಲ್ಲುತ್ತವೆ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದಾಖಲೆ ಮಾಡಲ್ಲ ಎಂಬ ಅಭಿಪ್ರಾಯವನ್ನು ‘ದೃಶ್ಯಂ 3’ ಸಂಪೂರ್ಣವಾಗಿ ಧೂಳಿಪಟ ಮಾಡಿದೆ. ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಜೋಡಿಯ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದೀಗ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ.

ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ಸಿನಿಮಾ ವಿಶ್ವದಾದ್ಯಂತ 141.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, 100 ಕೋಟಿ ಕ್ಲಬ್ ದಾಟಿ ಹೊಸ ಮೈಲಿಗಲ್ಲಿನತ್ತ ದಾಪುಗಾಲಿಟ್ಟಿದೆ.

ಭಾನುವಾರ ಭಾರತದಲ್ಲಿ ಮಾತ್ರವೇ 13.95 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ ಚಿತ್ರ, ದೇಶೀಯ ಮಾರುಕಟ್ಟೆಯಲ್ಲಿ 63.34 ಕೋಟಿ ರೂಪಾಯಿ ಗ್ರಾಸ್ ಗಳಿಕೆ ದಾಖಲಿಸಿದೆ. ನೆಟ್ ಕಲೆಕ್ಷನ್ 54.55 ಕೋಟಿ ರೂಪಾಯಿ ಆಗಿದೆ.

ಅದರಲ್ಲೂ ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾದ ಕ್ರೇಜ್ ಮತ್ತೊಂದು ಹಂತಕ್ಕೇರಿದೆ. ನಾಲ್ಕನೇ ದಿನ 13 ಕೋಟಿ ರೂಪಾಯಿ ಓವರ್‌ಸೀಸ್ ಕಲೆಕ್ಷನ್ ಮಾಡಿರುವ ‘ದೃಶ್ಯಂ 3’, ಒಟ್ಟು ವಿದೇಶಿ ಗಳಿಕೆಯನ್ನು 78 ಕೋಟಿ ರೂಪಾಯಿಗೆ ಏರಿಸಿದೆ.

ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಮೋಹನ್‌ಲಾಲ್ ಮತ್ತೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸಿದ್ದು, ಜೀತು ಜೋಸೆಫ್ ಅವರ ಸ್ಕ್ರೀನ್‌ಪ್ಲೇ ಚಿತ್ರದ ಅತಿದೊಡ್ಡ ಶಕ್ತಿಯಾಗಿದೆ. ಭಾರಿ ಬಜೆಟ್, ಭರ್ಜರಿ ವಿಎಫ್‌ಎಕ್ಸ್ ಇಲ್ಲದಿದ್ದರೂ ಕೇವಲ ಕಥೆಯ ಬಲದಿಂದ ಸಿನಿಮಾ ಇಂಡಸ್ಟ್ರಿಯನ್ನು ಶೇಕ್ ಮಾಡಬಹುದು ಎಂಬುದನ್ನು ‘ದೃಶ್ಯಂ 3’ ಮತ್ತೊಮ್ಮೆ ಸಾಬೀತುಪಡಿಸಿದೆ.

ಬಿಜೆಪಿ ಅವಧಿಯಲ್ಲಿ ನಡೆದ ಡೀಮ್ಡ್ ಅರಣ್ಯ ತಪ್ಪುಗಳನ್ನು ಸರಿಪಡಿಸಲು ಕ್ರಮ: ಸಚಿವ ಈಶ್ವರ ಖಂಡ್ರೆ

ಉಡುಪಿ: ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶ ಗುರುತಿಸುವ ಪ್ರಕ್ರಿಯೆಯಲ್ಲಿ ಸರ್ಕಾರಿ ಕಟ್ಟಡಗಳು, ಆಸ್ಪತ್ರೆಗಳು, ಅಂಗನವಾಡಿಗಳು ಸೇರಿದಂತೆ ಹಲವು ಪ್ರದೇಶಗಳು ಸೇರಿರುವ ಹಿನ್ನೆಲೆಯಲ್ಲಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ತಪ್ಪುಗಳನ್ನು ಸರಿಪಡಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಕಾರ್ಕಳದಲ್ಲಿ ಇಂದು ವಲಯ ಅರಣ್ಯಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೂತನ ಕಟ್ಟಡವನ್ನು ಉದ್ಘಾಟಿಸಿ, ಅರಣ್ಯ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಡೀಮ್ಡ್ ಅರಣ್ಯ ಸಮಸ್ಯೆ ಪರಿಹರಿಸಲು ಇದೀಗ ಕೊನೆಯ ಅವಕಾಶ ದೊರೆತಿದ್ದು, ಈ ಸಂಬಂಧ ಸರ್ವೋನ್ನತ ನ್ಯಾಯಾಲಯಕ್ಕೆ ಮರು ಮನವಿ ಸಲ್ಲಿಸಲು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಮೊದಲ ಬಾರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಸುಮಾರು 9 ಲಕ್ಷ ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಅರಣ್ಯ ಎಂದು ಗುರುತಿಸಲಾಗಿತ್ತು. ಬಳಿಕ 2022ರಲ್ಲಿ ಪರಿಷ್ಕೃತ ಪ್ರಮಾಣಪತ್ರ ಸಲ್ಲಿಸುವಾಗ 3 ಲಕ್ಷ 33 ಸಾವಿರ ಹೆಕ್ಟೇರ್ ಪ್ರದೇಶ ಎಂದು ಪರಿಷ್ಕರಿಸಲಾಯಿತು ಎಂದು ಅವರು ಹೇಳಿದರು.

ಆದರೆ ಸಮರ್ಪಕ ಸರ್ವೆ ಹಾಗೂ ಖುದ್ದು ಪರಿಶೀಲನೆ ನಡೆಸದೇ ಸರ್ಕಾರಿ ಕಟ್ಟಡಗಳು, ಶಾಲೆಗಳು, ಆಸ್ಪತ್ರೆಗಳು ಹಾಗೂ ಪಟ್ಟಾ ಭೂಮಿಯನ್ನೂ ಡೀಮ್ಡ್ ಅರಣ್ಯ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟ ಅನುಭವಿಸುತ್ತಿದ್ದು, ಈ ಲೋಪವನ್ನು ಸರಿಪಡಿಸುವ ಅಗತ್ಯವಿದೆ ಎಂದು ಖಂಡ್ರೆ ಅಭಿಪ್ರಾಯಪಟ್ಟರು.

ಇದೇ ವೇಳೆ, ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ ದಂಡ ಹಾಗೂ ಇತರೆ ಶುಲ್ಕ ಪಾವತಿಸಬೇಕಿರುವ ವಿಚಾರ ಪ್ರಸ್ತಾಪಿಸಿದ ಸಚಿವರು, ಈ ಸಂಬಂಧ ಹೈಕೋರ್ಟ್ ಈಗಾಗಲೇ ನಿರ್ದೇಶನ ನೀಡಿದ್ದು, ನ್ಯಾಯಾಲಯದ ಆದೇಶದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಭಟ್ಕಳ ದುರಂತಕ್ಕೆ ಕಣ್ಣೀರಿನ ವಿದಾಯ: 11 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರ – ಕುಟುಂಬಗಳ ಆಕ್ರಂದನ

ಕಾರವಾರ: ಕಪ್ಪೆಚಿಪ್ಪು ತೆಗೆಯಲು ತೆರಳಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ 11 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರವು ಇಂದು ಭಟ್ಕಳದ ಶಾರದಾಹೊಳೆಯಲ್ಲಿ ಶೋಕಾ ವಾತಾವರಣದಲ್ಲಿ ನೆರವೇರಿತು.

ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪ್ರದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದು ಮೃತರಿಗೆ ಕಣ್ಣೀರಿನ ವಿದಾಯ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸ್ಥಳಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ಭಟ್ಕಳದ ಇತಿಹಾಸದಲ್ಲೇ ಇಂತಹ ದುರ್ಘಟನೆ ನಡೆದಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರತಿ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕಪ್ಪೆಚಿಪ್ಪು ತೆಗೆಯುವ ಕಾರ್ಯ ಸಾಮಾನ್ಯವಾಗಿದ್ದರೂ, ಈ ಬಾರಿ ಸಂಭವಿಸಿದ ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಮೃತರ ಕುಟುಂಬಗಳಿಗೆ ಸರ್ಕಾರದ ನೆರವು ನಿರಂತರವಾಗಿ ಇರಲಿದೆ. ಚಿಕಿತ್ಸೆ ಪಡೆಯುತ್ತಿರುವವರ ವೈದ್ಯಕೀಯ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವುದಾಗಿ ತಿಳಿಸಿದ ಮಂಕಾಳು ವೈದ್ಯ, ಮೃತರ ಮಕ್ಕಳ ಶಿಕ್ಷಣಕ್ಕೂ ಅಗತ್ಯ ಸಹಾಯ ನೀಡಲು ಸಿದ್ಧವಿದ್ದೇನೆ ಎಂದು ಭರವಸೆ ನೀಡಿದರು.

ಒಂದು ಚಿರತೆ ಸೆರೆ ಬಳಿಕ ಮತ್ತೊಂದು ಚಿರತೆ ಭೀತಿ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ಸಮೀಪದ ಪ್ರದೇಶಗಳಲ್ಲಿ ಚಿರತೆ ಭೀತಿ ಮತ್ತೆ ಹೆಚ್ಚಾಗಿದೆ. ಇಂಡಿಗನತ್ತ ಗ್ರಾಮದ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ನಿನ್ನೆಯಷ್ಟೇ ಚಿರತೆ ಬಿದ್ದಿದ್ದರೂ, ಅದರ ಬೆನ್ನಲ್ಲೇ ನಾಗಮಲೆ ಗ್ರಾಮದಲ್ಲಿ ಮತ್ತೊಮ್ಮೆ ಚಿರತೆ ದಾಳಿ ನಡೆಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ನಾಗಮಲೆ ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆಯೊಂದು ಬಲಿಯಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಂಡಿಗನತ್ತ ಗ್ರಾಮದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ನಾಗಮಲೆ ಭಾಗದಲ್ಲಿ ಚಿರತೆ ಸಂಚಾರ ಮುಂದುವರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇತ್ತೀಚೆಗೆ ಇಂಡಿಗನತ್ತ ಗ್ರಾಮದ ಸಮೀಪ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದಿತ್ತು. ಆದರೆ ಬೋನಿಗೆ ಬಿದ್ದಿರುವ ಚಿರತೆಯೇ ನಾಗಮಲೆ ಮಾರ್ಗ ಮಧ್ಯದಲ್ಲಿ ಬೆಂಗಳೂರು ಮೂಲದ ಬಾಲಕನನ್ನು ಬಲಿ ಪಡೆದಿದ್ದ ಚಿರತೆಯೋ ಅಥವಾ ಮತ್ತೊಂದು ಚಿರತೆಯೋ ಎಂಬ ಅನುಮಾನ ಇನ್ನೂ ನಿವಾರಣೆಯಾಗಿಲ್ಲ.

ಈ ನಡುವೆ ಮತ್ತೊಮ್ಮೆ ಚಿರತೆ ದಾಳಿ ನಡೆಸಿ ಮೇಕೆಯನ್ನು ಕೊಂದಿರುವ ಘಟನೆ ಗ್ರಾಮಸ್ಥರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಪ್ರದೇಶದಲ್ಲಿ ಅರಣ್ಯ ಇಲಾಖೆ ತೀವ್ರ ನಿಗಾವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಾಶ್ಮೀರದಲ್ಲಿ ಜಮಾತ್-ಎ-ಇಸ್ಲಾಮಿ ಪುನಶ್ಚೇತನ ಯತ್ನ? ಹಲವೆಡೆ NIA ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿಷೇಧಿತ `ಜಮಾತ್-ಎ-ಇಸ್ಲಾಮಿ’ ಸಂಘಟನೆಯನ್ನು ಪುನಶ್ಚೇತನಗೊಳಿಸಲು ಯತ್ನ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಧ್ಯ ಹಾಗೂ ದಕ್ಷಿಣ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.

ಮೂಲಗಳ ಮಾಹಿತಿ ಪ್ರಕಾರ, ಶ್ರೀನಗರದ ಲಾಲ್ ಬಜಾರ್ ಹಾಗೂ ದಕ್ಷಿಣ ಕಾಶ್ಮೀರದ ಶೋಪಿಯಾನ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎನ್ಐಎ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ದಾಳಿಯ ವೇಳೆ ಕೆಲವು ಸ್ಥಳಗಳಲ್ಲಿ ದಾಖಲೆಗಳು ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

1941ರಲ್ಲಿ ಸ್ಥಾಪನೆಯಾದ `ಜಮಾತ್-ಎ-ಇಸ್ಲಾಮಿ’ ಸಂಘಟನೆಯ ವಿರುದ್ಧ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸುವುದು, ಭಾರತ ವಿರೋಧಿ ಪ್ರಚಾರ ನಡೆಸುವುದು ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಪರೋಕ್ಷ ಬೆಂಬಲ ನೀಡಿರುವ ಗಂಭೀರ ಆರೋಪಗಳು ಕೇಳಿಬಂದಿವೆ.

ಈ ಹಿನ್ನೆಲೆದಲ್ಲಿ ಕೇಂದ್ರ ಸರ್ಕಾರವು 2024ರ ಫೆಬ್ರವರಿಯಲ್ಲಿ ಜಮಾತ್-ಎ-ಇಸ್ಲಾಮಿ ಜಮ್ಮು ಕಾಶ್ಮೀರ’ ಸಂಘಟನೆಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) 1967ರ ಸೆಕ್ಷನ್ 3(1) ಅಡಿಯಲ್ಲಿ ಮತ್ತಷ್ಟು ಐದು ವರ್ಷಗಳ ಕಾಲ ಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸಿ ನಿಷೇಧಾವಧಿಯನ್ನು ವಿಸ್ತರಿಸಿತ್ತು.

ಬೌರಿಂಗ್ ಆಸ್ಪತ್ರೆ ದುರಂತ: 7 ಮಂದಿ ದುರ್ಮರಣ – ಗುತ್ತಿಗೆದಾರ ಕಂಪನಿ ವಿರುದ್ಧ FIR ದಾಖಲು

ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಜನರು ಸಾವನ್ನಪ್ಪಿದ ದುರಂತ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರ ಕಂಪನಿ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಚೆನ್ನೈ ಮೂಲದ ಎಎಸ್‌ಆರ್ ಟ್ರೇಡರ್ಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣದ ಭಾಗವಾಗಿ ಹಳೆಯ ಕಟ್ಟಡ ತೆರವುಗೊಳಿಸುವ ಕಾರ್ಯವನ್ನು ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆ ಪಡೆದ ಎಎಸ್‌ಆರ್ ಟ್ರೇಡರ್ಸ್ ಕಂಪನಿ ನಿರ್ಲಕ್ಷ್ಯ ತೋರಿದ್ದು, ಕಟ್ಟಡ ತೆರವು ನಂತರ ಉಳಿದ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೇ ಸ್ಥಳದಲ್ಲೇ ಬಿಟ್ಟು ಹೋಗಿರುವುದೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಲಾಗಿದೆ.

ಘಟನೆಯ ತನಿಖೆಗೆ ಸರ್ಕಾರದಿಂದ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ನಡುವೆ ತ್ಯಾಜ್ಯ ತೆರವುಗೊಳಿಸದ ಹಾಗೂ ನಿಯಮ ಉಲ್ಲಂಘನೆಯ ಕುರಿತು ಸ್ಪಷ್ಟೀಕರಣ ನೀಡುವಂತೆ ಸರ್ಕಾರವು ಎಎಸ್‌ಆರ್ ಟ್ರೇಡರ್ಸ್ ಕಂಪನಿಗೆ ಇಮೇಲ್ ಮೂಲಕ ನೋಟಿಸ್ ಜಾರಿ ಮಾಡಿತ್ತು. ಮೇ 18ರೊಳಗೆ ಲಿಖಿತ ಸ್ಪಷ್ಟೀಕರಣ ನೀಡುವಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರು ಗಡುವು ನೀಡಿದ್ದರೂ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಲಾಗಿದ್ದು, ಅದರಂತೆ ದೂರು ದಾಖಲಿಸಲಾಗಿದೆ. ಸದ್ಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಬಂಧಿತ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಶುದ್ಧ ಗಾಳಿ! ವಾಯು ಗುಣಮಟ್ಟ ಉತ್ತಮ ಮಟ್ಟಕ್ಕೆ

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿರುವ ಪರಿಣಾಮ ಕರ್ನಾಟಕದ ಹಲವು ನಗರಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಆರೋಗ್ಯಕರ ಮಟ್ಟಕ್ಕೆ ತಲುಪಿದೆ.

ಇಂದು ಬಿಡುಗಡೆಯಾದ ವಾಯು ಗುಣಮಟ್ಟ ವರದಿ ಪ್ರಕಾರ, ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 47 ದಾಖಲಾಗಿದ್ದು, ಇದನ್ನು ‘ಉತ್ತಮ’ ವರ್ಗಕ್ಕೆ ಸೇರಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಸುರಿದ ಮಳೆಯ ಪರಿಣಾಮ ವಾತಾವರಣದಲ್ಲಿದ್ದ ಧೂಳಿನ ಕಣಗಳು ನೆಲಕ್ಕಿಳಿದಿದ್ದು, ನಗರದಲ್ಲಿ ಸ್ವಚ್ಛ ಮತ್ತು ಹಸಿರು ವಾತಾವರಣ ನಿರ್ಮಾಣವಾಗಿದೆ.

ತಜ್ಞರ ಪ್ರಕಾರ, ಗಾಳಿಯಲ್ಲಿದ್ದ ಸೂಕ್ಷ್ಮ ಧೂಳಿನ ಕಣಗಳ ಪ್ರಮಾಣ ಕಡಿಮೆಯಾಗಿರುವುದರಿಂದ ಸಾರ್ವಜನಿಕರು ಹಾಗೂ ಮಕ್ಕಳು ಯಾವುದೇ ಆರೋಗ್ಯ ಸಮಸ್ಯೆಯ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ರಾಜ್ಯದ ಇತರೆ ನಗರಗಳಲ್ಲೂ ವಾಯು ಗುಣಮಟ್ಟ ಉತ್ತಮ ಮಟ್ಟದಲ್ಲೇ ದಾಖಲಾಗಿದೆ. ಬೆಳಗಾವಿಯಲ್ಲಿ ಕೇವಲ 16 ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದ್ದು, ಅತ್ಯಂತ ಶುದ್ಧ ವಾತಾವರಣ ಕಂಡುಬಂದಿದೆ. ಗದಗದಲ್ಲಿ 18, ಕೊಪ್ಪಳದಲ್ಲಿ 21 ಹಾಗೂ ಚಿಕ್ಕಬಳ್ಳಾಪುರದಲ್ಲಿ 25 ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ.

ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಭಾಗಗಳಲ್ಲೂ ಮಳೆಯ ಪ್ರಭಾವ ಮುಂದುವರಿದಿದ್ದು, ಗಾಳಿಯ ಗುಣಮಟ್ಟ ಸೂಚ್ಯಂಕ 50ರ ಒಳಗೆ ಉಳಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಪ್ಪೆಚಿಪ್ಪು ಹೆಕ್ಕಲು ಹೋಗಿ ಜಲಸಮಾಧಿ! ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಅಳ್ವೆಕೋಡಿ ಕಡಲತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ನಿನ್ನೆ 10 ಮಂದಿಯ ಮೃತದೇಹಗಳು ಪತ್ತೆಯಾಗಿದ್ದರೆ, ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಅವರ ಮೃತದೇಹವನ್ನು ಇಂದು ಎನ್‌ಡಿಆರ್‌ಎಫ್‌ ಹಾಗೂ ಈಶ್ವರ ಮಲ್ಪೆ ತಂಡದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಗಿದೆ. ಈ ಮೂಲಕ ಸಮುದ್ರದ ಅಬ್ಬರಕ್ಕೆ ಒಟ್ಟು 11 ಮಂದಿ ಬಲಿಯಾಗಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ.

ದುರಂತದಲ್ಲಿ ಮೃತರಾದ ಮಾಸ್ತಮ್ಮ ನಾಯ್ಕ್ ಅವರನ್ನು ರಕ್ಷಿಸಲು ಹೋಗಿದ್ದ ಅವರ ಮಗ ಉಮೇಶ್ ನಾಯ್ಕ್ ಕೂಡ ನೀರುಪಾಲಾಗಿರುವುದು ಮನಕಲಕುವಂತಾಗಿದೆ. ತಾಯಿ ನೀರಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದಾಗ ಮುಳುಗುತ್ತಿರುವುದನ್ನು ಕಂಡ ಉಮೇಶ್ ತಕ್ಷಣ ರಕ್ಷಣೆಗೆ ಧಾವಿಸಿದ್ದರು. ಆದರೆ ತಾಯಿಯನ್ನು ರಕ್ಷಿಸಲು ಸಾಧ್ಯವಾಗದೆ ಹಿಂದಿರುಗುವ ವೇಳೆ ಮತ್ತಿಬ್ಬರು ಸಹಾಯಕ್ಕಾಗಿ ಅವರ ಕಾಲು ಹಿಡಿದ ಪರಿಣಾಮ ಉಮೇಶ್ ಕೂಡ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮಂಜುನಾಥ್ ನಾಯ್ಕ್ ತಿಳಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟ ಕುಟುಂಬಗಳ ಸ್ಥಿತಿ ಹೃದಯವಿದ್ರಾವಕವಾಗಿದೆ. ಮಾದೇವ ನಾಯ್ಕ್ ಹಾಗೂ ಲಕ್ಷ್ಮಿ ನಾಯ್ಕ್ ದಂಪತಿ ಸಾವನ್ನಪ್ಪಿದ್ದು, ಅವರ ಮಕ್ಕಳಾದ ದರ್ಶನ (23) ಮತ್ತು ಕೀರ್ತನಾ (20) ಅನಾಥರಾಗಿದ್ದಾರೆ.

ಇನ್ನೊಂದೆಡೆ, ಮೃತ ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಪತಿ ಈಗಾಗಲೇ 10 ವರ್ಷಗಳ ಹಿಂದೆ ನಿಧನರಾಗಿದ್ದರು. ನಾಲ್ವರು ಮಕ್ಕಳಿಗೆ ತಾಯಿಯೇ ಆಸರೆಯಾಗಿದ್ದರೆ, ಇದೀಗ ಆಕೆಯೂ ಇಲ್ಲದ ಕಾರಣ ಕುಟುಂಬ ದಿಕ್ಕುತೋಚದ ಸ್ಥಿತಿಗೆ ತಲುಪಿದೆ.

ಘಟನೆ ಇಡೀ ಕರಾವಳಿ ಭಾಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

error: Content is protected !!