Home Blog Page 18

ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಯಾಕೆ ಹೀಗಾಗುತ್ತೆ; ಜೋಶಿ ಪ್ರಶ್ನೆ!

0

ರಾಯಚೂರು:- ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ನಿಮ್ಮ ಸರ್ಕಾರ ಬಂದಾಗಲೇ ಯಾಕೇ ಹೀಗಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

ಬಾಂಬ್ ಹಾಕಿದವರನ್ನು ಬ್ರದರ್ಸ್ ಅಂತೀರಿ. ಗಣೇಶನ ವಿಗ್ರಹಕ್ಕೂ ಮಸೀದಿಯಿಂದ ಕಲ್ಲು ಬಿತ್ತು. ಶಿವಾಜಿ ಮೆರವಣಿಗೆಯಲ್ಲೂ ಮಸೀದಿಯಿಂದ ಕಲ್ಲು ಬೀಳುತ್ತೆ. ಕಲ್ಲು ಹೊಡೆದವರನ್ನ ಅರೆಸ್ಟ್ ಮಾಡೊದಿಲ್ಲ. ಅಕ್ರಮ ಮಸೀದಿ ಎಂದವರ ಮೇಲೆ ಕೇಸ್ ಹಾಕಿದ್ರಿ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ರೆ ಹೀಗೆ ಆಗಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪೊಲೀಸರ ಮೇಲೆ ಹಿಡಿತ ಇಟ್ಟುಕೊಂಡಿದೆ. ಕಾಂಗ್ರೆಸ್ ತುಷ್ಟಿಕರಣದಿಂದ ಹೀಗೆ ಆಗುತ್ತಿದೆ. ತುಷ್ಟಿಕರಣ ನೀತಿಯಿಂದ ಇಂತಹ ಘಟನೆಗಳು ನಡೆಯುತ್ತವೆ. ಪೊಲೀಸ್ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದಕ್ಕೆ ಇಂತಹ ಘಟನೆ ಆಗುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರ್ವಜ್ಞರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂತ ಕವಿ ಸರ್ವಜ್ಞರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಬೇಕೆಂದು ಅಪರ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್ ಹೇಳಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜರುಗಿದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಕವಿ ಸರ್ವಜ್ಞರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಅವರ ಆದರ್ಶಗಳನ್ನು ಪಾಲಿಸಬೇಕು. ಈಗಿನ ಮಕ್ಕಳಿಗೆ ಸರ್ವಜ್ಞರ ವಚನಗಳು, ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಸರ್ವಜ್ಞರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕು, ಮೂಢನಂಬಿಕೆಗಳನ್ನು ಹೋಗಲಾಡಿಸಿ ಲೋಕಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಶ್ರಮಿಸಬೇಕು ಎಂದರು.

ಶಿವಾನಂದ ಚಕ್ರಸಾಲಿ ಉಪನ್ಯಾಸ ನೀಡಿ, ಸರ್ವಜ್ಞನ ವಿಚಾರಗಳು ಇಂದಿಗೂ ಪ್ರಸ್ತುತ. ಸಮಾಜದಲ್ಲಿನ ಜಾತಿ ಪದ್ಧತಿ, ಧಾರ್ಮಿಕ ಅಸಹಿಷ್ಣುತೆ, ಮತ್ತು ಮೌಲ್ಯಗಳ ಕುಸಿತವನ್ನು ಸರಿಪಡಿಸಲು ಸರ್ವಜ್ಞನ ತ್ರಿಪದಿಗಳು ದಿಕ್ಸೂಚಿಯಂತೆ ಇಂದಿಗೂ ಕೆಲಸ ಮಾಡುತ್ತವೆ. ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಪುಸ್ತಕದ ಜ್ಞಾನ ನೀಡುತ್ತಿದೆ. ಆದರೆ ಸರ್ವಜ್ಞ ಹೇಳಿದ ಅನುಭವದ ಶಿಕ್ಷಣ ನಮಗೆ ಬೇಕಾಗಿದೆ. `ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಅವರ ಮಾತು ಇಂದಿನ ಒತ್ತಡದ ಬದುಕಿಗೆ ಮತ್ತು ಆರೋಗ್ಯಕ್ಕೆ ಸಂಜೀವಿನಿಯಂತಿದೆ ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ವಿ.ಆರ್. ಕುಂಬಾರ, ಮುರಿಗೆಪ್ಪ ಕೇರಿ, ಯಲ್ಲಪ್ಪ ಕುಂಬಾರ, ನಿಂಗಪ್ಪ ಕುಂಬಾರ, ಶರಣಮ್ಮ, ಈಶ್ವರಪ್ಪ ಕುಂಬಾರ, ಸಮಾಜದ ಮುಖಂಡರು, ಗಣ್ಯರು, ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು. ವೀರಣ್ಣ ಅಂಗಡಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ಚಕ್ರಸಾಲಿ ಮಾತನಾಡಿ, ಸಂತ ಕವಿ ಸರ್ವಜ್ಞ ಸುಮಾರು 16ನೇ ಶತಮಾನದಲ್ಲಿ ಜನಿಸಿದವರು. ಹಾವೇರಿ ಜಿಲ್ಲೆಯ ಹೀರೆಕೆರೂರು ತಾಲೂಕಿನ ಅಬಲೂರು ಗ್ರಾಮದವರು. ತಂದೆ ಬಸವರಸ ಮತ್ತು ತಾಯಿ ಮಾಳೆಯ ಪುತ್ರನಾಗಿ ಜನಿಸಿದ ಇವರ ಮೂಲ ಹೆಸರು ಪುಷ್ಪದತ್ತ. ಲೋಕಸಂಚಾರ ಮಾಡುತ್ತಾ, ತಮ್ಮ ಅನುಭವದೊಂದಿಗೆ ಬೆಂದು, ಜ್ಞಾನವನ್ನೇ ಉಸಿರಾಗಿಸಿಕೊಂಡು ಅವರು ‘ಸರ್ವಜ್ಞ’ರಾಗಿ ರೂಪುಗೊಂಡರು.

ಬಾಲ್ ಎಂದು ನಾಡಬಾಂಬ್ ಎಸೆದ ಬಾಲಕ; ಬ್ಯಾಟ್‌ ಬೀಸಿದಾಗ ಸ್ಫೋಟ, ಓರ್ವನಿಗೆ ಗಾಯ!

0

ಮಂಗಳೂರು:- ಕಾಡುಹಂದಿ ಬೇಟೆಗೆ ಆಡಲು ಇಟ್ಟಿದ್ದ ನಾಡಬಾಂಬ್‌ ಅನ್ನು ಬಾಲ್‌ ಎಂದು ತಿಳಿದು ಬಾಲಕರಿಬ್ಬರು ಅದರಲ್ಲಿ ಕ್ರಿಕೆಟ್‌ ಆಡಿದ್ದು, ಈ ವೇಳೆ ಬಾಂಬ್‌ ಸ್ಫೋಟಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಜರುಗಿದೆ.

ಓರ್ವ ಬಾಲಕ ಸ್ಫೋಟದಲ್ಲಿ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಲಕನನ್ನು ಅಭೀಶ್ ಎಂದು ಗುರುತಿಸಲಾಗಿದೆ. ಬಾಲಕನಿಗೆ ಸರ್ಕಾರಿ ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಅಭೀಶ್ ಹಾಗೂ ಮತ್ತೊಬ್ಬ ಬಾಲಕ ಮನೆಯ ಮುಂಭಾಗದಲ್ಲಿ ಕ್ರಿಕೆಟ್ ಆಡುವ ವೇಳೆ ಕಾಡುಹಂದಿಗೆ ಇಟ್ಟಿದ್ದ ಬಾಲ್‌ ತರಹದ ಸ್ಫೋಟಕ ಸಿಕ್ಕಿದೆ. ಅದನ್ನು ಅಭೀಶ್ ಗೆಳೆಯ ಚೆಂಡೆಂದು ತಿಳಿದು ಹಾಕಿದ್ದಾನೆ. ಬ್ಯಾಟ್‌ನಿಂದ ಅದಕ್ಕೆ ಹೊಡೆದಾಗ ಅದು ಸ್ಫೋಟವಾಗಿದೆ. ಸ್ಟೋಟ ಅಷ್ಟೊಂದು ತೀವ್ರತೆ ಇಲ್ಲದ ಕಾರಣ, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

`ಇನ್ಫೋಸಿಸ್ ಪ್ರತಿಷ್ಠಾನ-ಪುಲಿಗೆರೆ ಉತ್ಸವ’ಕ್ಕೆ ವಿದ್ಯುಕ್ತ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ 3 ದಿನಗಳ ಕಾಲ ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಮತ್ತು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ ಹಮ್ಮಿಕೊಂಡಿರುವ `ಇನ್ಫೋಸಿಸ್ ಪ್ರತಿಷ್ಠಾನ-ಪುಲಿಗೆರೆ ಉತ್ಸವ’ ಶುಕ್ರವಾರ ವಿದ್ಯುಕ್ತವಾಗಿ ಆರಂಭಗೊಂಡಿತು.

ಮೊದಲ ದಿನ ಶುಕ್ರವಾರ ಪ್ರಾತಃಕಾಲ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಮತ್ತು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ ಸೋಮೇಶ್ವರ ದೇವರಿಗೆ ಪುಷ್ಪಗಳನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ನಾಗಲಕ್ಷ್ಮಿ ಕೆ.ರಾವ್, ಇದೊಂದು ಐತಿಹಾಸಿಕ ದೇವಸ್ಥಾನವಾಗಿದ್ದು, ಇಲ್ಲಿನ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇನ್ಫೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿಯವರು ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಸೋಮೇಶ್ವರನ ಸನ್ನಿಧಿಯಲ್ಲಿ ಈ ರೀತಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಲಿ ಎನ್ನುವ ಉದ್ದೇಶದಿಂದ ಇಂತಹ ವೈಶಿಷ್ಟ್ಯಪೂರ್ಣ ಉತ್ಸವವನ್ನು ಕಳೆದ 8 ವರ್ಷಗಳಿಂದ ಸಂಘಟಿಸುತ್ತಾ ಬರಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ಸಿ.ಆರ್. ಲಕ್ಕುಂಡಿಮಠ, ಬಸವೇಶ ಮಹಾಂತಶೆಟ್ಟರ, ಅಶ್ವಿನಿ ಅಂಕಲಕೋಟಿ, ಮಹಾಬಳೇಶ್ವರಪ್ಪ ಬೇವಿನಮರದ, ಪ್ರವೀಣ ಬಾಳಿಕಾಯಿ, ಸಿದ್ದನಗೌಡ ಬಳ್ಳೊಳ್ಳಿ, ಚನ್ನಪ್ಪ ಜಗಲಿ, ಡಾ. ಪಿ.ಡಿ. ತೋಟದ, ಈಶ್ವರ ಮೇಡ್ಲೇರಿ, ನಾಗರಾಜ ಕಳಸಾಪೂರ, ಸಿ.ಜಿ. ಹಿರೇಮಠ, ಸೋಮನಾಥ ಪೂಜಾರ, ಸಮೀರ ಪೂಜಾರ, ರಾಘವೇಂದ್ರ ಪೂಜಾರ, ಮಾಲಾದೇವಿ ದಂದರಗಿ, ಸುಮಾ ಚೋಟಗಲ್, ಪಾರ್ವತಿ ಕಳ್ಳಿಮಠ, ಪೂರ್ಣಾಜಿ ಖರಾಟೆ, ಸುರೇಶ್ ರಾಚನಾಯ್ಕರ್, ಬಸವರಾಜ ಮೆಣಸಿನಕಾಯಿ ಮುಂತಾದವರಿದ್ದರು.

ಪುಲಿಗೆರೆ ಉತ್ಸವ ಉದಯರಾಗ-1ರ ಪ್ರಥಮ ಕಾರ್ಯಕ್ರಮವನ್ನು ಲಕ್ಷ್ಮೇಶ್ವರದವರೇ ಆದ ಸಂಗೀತ ಶಿಕ್ಷಕಿ ವಿ.ಮುಕ್ತಾ ಕುಲಕರ್ಣಿಯವರ ಸಿತಾರ್ ವಾದನದ ಮೂಲಕ ಸೂರ್ಯೋದಯವನ್ನು ಸ್ವಾಗತಿಸಲಾಯಿತು. ಇವರಿಗೆ ಕೃಷ್ಣಕುಮಾರ ಕುಲಕರ್ಣಿ ತಬಲಾ ಸಾಥ್ ನೀಡಿದರು.

ಬಳಿಕ ಹುಬ್ಬಳ್ಳಿಯ ಯುವ ಕಲಾವಿದೆ ವಿ. ರಾಜೇಶ್ವರಿ ಪಾಟೀಲ ಅವರ ಹಿಂದೂಸ್ತಾನಿ ಸಂಗೀತ ಅಲೆ ಅಲೆಯಾಗಿ ತೇಲಿ ಬಂದಿತು. ಇವರಿಗೆ ಹರ್ಷಿತ ಸೋನಿ ತಬಲಾ ಹಾಗೂ ಚಿದಂಬರ ಜೋಶಿ ಹಾರ್ಮೋನಿಯಂ ಸಾಥ್ ನೀಡಿದರು.

ನಾಳೆ ಪುಲಿಗೆರೆ ಉತ್ಸವದಲ್ಲಿ 
ಇನ್ಫೋಸಿಸ್ ಪುಲಿಗೆರೆ ಉತ್ಸವದಲ್ಲಿ ಫೆ.21ರಂದು 2ನೇ ದಿನದ ಉದಯರಾಗ-2ರಲ್ಲಿ ಬೆಳಿಗ್ಗೆ 6ಕ್ಕೆ ಲಕ್ಷ್ಮೇಶ್ವರದ ಯುವ ಕಲಾವಿದ ರಾಘವೇಂದ್ರ ಕೃಷ್ಣಾಜಿ ಕ್ಷತ್ರಿಯ ಇವರಿಂದ ಬಾನ್ಸುರಿ ವಾದನ, 7ಕ್ಕೆ ಬೆಂಗಳೂರಿನ ಪ್ರತಿಭಾವಂತ ಕಲಾವಿದೆ ವಿದುಷಿ ಚೈತ್ರಾ ಎಚ್.ಜಿ. ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವವು ಪಟ್ಟಣದ ಪ್ರಮುಖ ಮಾರ್ಗದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ನೆರವೇರಲಿದೆ. ಪಲ್ಲಕ್ಕಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯವರು ವಿನಂತಿಸಿದ್ದಾರೆ.

ಸಂಜೆ 5.30ಕ್ಕೆ ಬೆಂಗಳೂರಿನ ರತ್ನಾಲಯದ ವಿ. ಅರುಣಾ ರಾಜಮಣಿ ಅವರ ತಂಡದಿಂದ ಭರತನಾಟ್ಯ, ಸಂಜೆ 6.30ಕ್ಕೆ ಬೆಂಗಳೂರಿನ ಕೂಚಿಪುಡಿ ನೃತ್ಯ ಅಕಾಡೆಮಿಯ ವಿ. ದಿವ್ಯಾ ರಾಮಚಂದ್ರ ಅವರ ತಂಡದಿಂದ ಕೂಚಿಪುಡಿ ನೃತ್ಯ ನಡೆಯಲಿದೆ. ಸಂಜೆ 7.30ಕ್ಕೆ ಕುಂದಗೋಳದ ಪಂ. ಅಶೋಕ ನಾಡಿಗೇರ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮಗಳು ನೆರವೇರಲಿವೆ ಎಂದು ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಠಗಳು ಸಂಸ್ಕಾರ ಬೆಳೆಸುವ ಆಧ್ಯಾತ್ಮ ಕೇಂದ್ರಗಳಾಗಲಿ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಭಾರತ ಧರ್ಮ ಭೂಮಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಬಹಳಷ್ಟು ಮಹತ್ವದ ಸ್ಥಾನವಿದೆ. ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ವಿಶಾಲ ಉತ್ಕೃಷ್ಟ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಹೊಂದಿದೆ. ಈ ನಾಡಿನ ಮಠಗಳು ಸಂಸ್ಕಾರ ಕೊಡುವ, ಸಂಸ್ಕೃತಿ ಕಲಿಸುವ ಆಧ್ಯಾತ್ಮಿಕ ಕೇಂದ್ರಗಳಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ತಾಲೂಕಿನ ಶ್ರೀಮತ್ಕಾಶೀ ಶಾಖಾ ವಿರೂಪಾಪುರ ಕಲಕೇರಿ ಶ್ರೀ ಮುದುಕೇಶ್ವರ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮಾನವ ಜೀವನದ ಶ್ರೇಯಸ್ಸು ಧರ್ಮಾಚರಣೆಯಲ್ಲಿದೆ. ಧರ್ಮದ ದಿಕ್ಸೂಚಿ ಇಲ್ಲದೇ ಇದ್ದರೆ ಮಾನವ ಜೀವನ ವ್ಯರ್ಥ. ಸಂತಸ, ಶಾಂತಿಯ ಬದುಕಿಗೆ ಧರ್ಮ ಪರಿಪಾಲನೆಯ ಅವಶ್ಯಕತೆಯಿದೆ. ಭೌತಿಕ ಸಂಪತ್ತಿನ ಜೊತೆಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಮತ್ತು ಗುರು ಕಾರುಣ್ಯ ಇರಬೇಕಾಗುತ್ತದೆ. ವೀರಶೈವ ಧರ್ಮದಲ್ಲಿ ಶ್ರೀ ಗುರುವಿಗೆ ಮಹತ್ವದ ಸ್ಥಾನವನ್ನು ಕಲ್ಪಿಸಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ-ಸಿದ್ಧಾಂತಗಳು ಜೀವನದ ವಿಕಾಸಕ್ಕೆ ಅಡಿಪಾಯವಾಗಿವೆ.

ವಿರೂಪಾಪುರ ಕಲಕೇರಿ ಹಿರೇಮಠದ ಮುದುಕೇಶ್ವರ ಶಿವಾಚಾರ್ಯರು ಅತ್ಯಂತ ಮುಗ್ಧರು, ಸರಳ ಜೀವಿಗಳು. ಭಕ್ತರ ಸಹಕಾರದಿಂದ ಶ್ರೀ ಮಠವನ್ನು ಅಭಿವೃದ್ಧಿಪಡಿಸಿದ್ದಾರೆ. ಪಟ್ಟಾಭಿಷಿಕ್ತರಾದ ನೂತನ ಅಭಿನವ ಮುದುಕೇಶ್ವರ ಶಿವಾಚಾರ್ಯರು ಹಿರಿಯರ ಆದರ್ಶ ದಾರಿಯಲ್ಲಿ ಮುನ್ನಡೆದು ಈ ಭಾಗದ ಭಕ್ತರಿಗೆ ಸನ್ಮಾರ್ಗ ದರ್ಶನ ನೀಡುವರೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು, ಉಭಯ ಶ್ರೀಗಳಿಗೆ ಸ್ಮರಣಿಕೆ ಮತ್ತು ಫಲಪುಷ್ಪವಿತ್ತು ಶುಭ ಹಾರೈಸಿದರು.

ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಭಾವನೆಗಳು ಬೆಳೆಯುತ್ತಿಲ್ಲ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿ ಇದೆ ಎಂಬುದನ್ನು ಯಾರೂ ಮರೆಯಬಾರದು. ಸಂಸ್ಕಾರ, ಸಂಸ್ಕೃತಿಗಳ ಪುನರುತ್ಥಾನ ಈ ನಾಡಿನ ಮಠಗಳಿಂದ ನಿರಂತರ ನಡೆಯುತ್ತಲೇ ಬಂದಿದೆ. ವಿದ್ಯಾ ವಿನಯ ಸಂಪನ್ನರಾದ ಅಭಿನವ ಮುದುಕೇಶ್ವರ ಶಿವಾಚಾರ್ಯರನ್ನು ಪಡೆದ ಇಲ್ಲಿಯ ಜನ ಭಾಗ್ಯವಂತರು. ವೀರಶೈವ ಧರ್ಮದ ಆದರ್ಶ ಚಿಂತನಗಳನ್ನು ಭಕ್ತ ಸಂಕುಲಕ್ಕೆ ಬೋಧಿಸಿ ಸನ್ಮಾರ್ಗಕ್ಕೆ ಕರೆ ತರುವ ಶಕ್ತಿಯನ್ನು ನೂತನ ಶ್ರೀಗಳಿಗೆ ಭಗವಂತ ಕೊಡಲೆಂದು ಆಶಿಸಿ ಆಶೀರ್ವದಿಸಿದರು.

ನೇತೃತ್ವ ವಹಿಸಿದ ಹಿರಿಯ ಪಟ್ಟಾಧ್ಯಕ್ಷರಾದ ಮುದುಕೇಶ್ವರ ಶಿವಾಚಾರ್ಯರು ಮಾತನಾಡಿ, ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಕಾಯಕದಿಂದಲೇ ಮನುಷ್ಯನಿಗೆ ಕಳಾ ಚೈತನ್ಯ ಪ್ರಾಪ್ತಿಯಾಗುತ್ತದೆ. ಶ್ರೀ ಮಠದ ಅಭಿವೃದ್ಧಿಗಾಗಿ ಸದಾ ಶ್ರಮಿಸಿರುವೆ. ಇದೇ ದಾರಿಯಲ್ಲಿ ನೂತನ ಶ್ರೀಗಳು ಕಾರ್ಯೋನ್ಮುಖರಾಗಿ ಮಾರ್ಗದರ್ಶನ ನೀಡುತ್ತಾರೆ ಎಂದರು.

ಮುಕ್ತಿಮಂದಿರ, ಹುಕ್ಕೇರಿ, ಬನ್ನಿಕೊಪ್ಪ, ಸುಳ್ಳ, ಶಿರಕೋಳ, ಕೊಣಂದೂರು, ಹಿರೇವಡ್ಡಟ್ಟಿ, ಅಂಗೂರು, ಹಂಪಸಾಗರ, ಹಿರೇಮಲ್ಲಕೇರಿ ಮಾನಿಹಳ್ಳಿ, ಮೈನಳ್ಳಿ ಮೊದಲ್ಗೊಂಡು 25ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರೇಶ ಕೂಗು, ಚಂದ್ರು ಬಾಳಿಹಳ್ಳಿಮಠ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಶಿವಕುಮಾರಗೌಡ ಪಾಟೀಲ ಸ್ವಾಗತಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಪಟ್ಟಾಭಿಷಿಕ್ತರಾದ ನೂತನ ಅಭಿನವ ಮುದುಕೇಶ್ವರ ಶಿವಾಚಾರ್ಯರು ಮಾತನಾಡಿ, ಧರ್ಮ ಮಾನವ ಜೀವನದ ಉಸಿರಾಗಬೇಕು. ಅನ್ನ, ನೀರು, ಗಾಳಿ ಮನುಷ್ಯನಿಗೆ ಎಷ್ಟು ಅವಶ್ಯಕವೋ ಅಷ್ಟೇ ಧರ್ಮ ಪಾಲನೆಯ ಅವಶ್ಯಕತೆಯಿದೆ. ವೀರಶೈವ ಧರ್ಮದ ಆದರ್ಶ ಚಿಂತನ ಮತ್ತು ಗುರು ಪರಂಪರೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರುತ್ತೇವೆ ಎಂದು ಸಂಕಲ್ಪ ತೊಟ್ಟರು.

ದೇವತಾ ಕಾರ್ಯಕ್ರಮಕ್ಕೆ ದೇಣಿಗೆ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಸಮೀಪದ ಕೊಡಗಾನೂರು ಗ್ರಾಮದಲ್ಲಿನ ಶ್ರೀ ಮಾರುತಿ ದೇವಸ್ಥಾನದ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ 1,40,000 ರೂ. ದೇಣಿಗೆಯನ್ನು ನಿವೃತ್ತ ಶಿಕ್ಷಕರಾದ ನೂರಂದಪ್ಪ ಮಾಹಾಂತಪ್ಪ ಕಲ್ಯಾಣಿ ಹಾಗೂ ಅವರ ಧರ್ಮಪತ್ನಿ ಪಾರ್ವತಮ್ಮ ನೂರಂದಪ್ಪ ಕಲ್ಯಾಣಿ ಅವರು ನೀಡಿದರು.

ದೇವಸ್ಥಾನದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತಿರುವ ಕಲ್ಯಾಣಿ ದಂಪತಿ, ಈ ಬಾರಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಯಶಸ್ವಿಯಾಗಿ ನೆರವೇರಲೆಂಬ ಉದ್ದೇಶದಿಂದ ದೇಣಿಗೆ ಮೊತ್ತದ ಚೆಕ್‌ನ್ನು ದೇವಸ್ಥಾನ ಸಮಿತಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಯುವಕ ಮಿತ್ರರು ಭಾಗವಹಿಸಿ ದಂಪತಿಯನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಗ್ರಾಮ ಹಿರಿಯರು, ಶಿಕ್ಷಕರಾಗಿ ಹಲವು ವರ್ಷಗಳ ಕಾಲ ಸಮಾಜ ಸೇವೆ ಸಲ್ಲಿಸಿದ ನೂರಂದಪ್ಪ ಕಲ್ಯಾಣಿ ಅವರು ನಿವೃತ್ತಿಯಾದ ನಂತರವೂ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಏಕತೆ, ಭಕ್ತಿಭಾವ ಮತ್ತು ಸಹಕಾರದ ಪ್ರತೀಕವಾಗಿ ಈ ದೇಣಿಗೆ ಕಾರ್ಯ ಗಮನ ಸೆಳೆದಿದ್ದು, ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಹಿರೇಮಠ, ಆರ್.ಎನ್. ಜೋಶಿ, ಬಸಯ್ಯ ಕಪ್ಲಿಮಠ, ಪ್ರಶಾಂತ ವಾಲ್ಮೀಕಿ, ನಾಗಯ್ಯ ಹಿರೇಮಠ, ಹನುಮಂತ ರಾಮಜಿ, ರಾಚಯ್ಯ ಬಾಳಿಕಾಯಿಮಠ, ಅಂದಪ್ಪ ವಾಲ್ಮೀಕಿ, ಶರಣಪ್ಪ ಹೂಗಾರ, ರಾಮಪ್ಪ ಹೂಗಾರ, ಸಂಗಪ್ಪ ಹೂಗಾರ ಸೇರಿದಂತೆ ಊರಿನ ಹಿರಿಯರು, ಯುವಕರು ಉಪಸ್ಥಿತರಿದ್ದರು.

ನೇತ್ರದಾನ ಜಾಗೃತಿ ಜಾಥಾ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಲಯನ್ಸ್ ಕ್ಲಬ್, ಗದಗ ಐಎಂಎ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ಜರುಗಿತು.

ಗದಗ ತೋಂಟದಾರ್ಯ ಮಠದಿಂದ ಆರಂಭಗೊಂಡ ಜಾಥಾ ಮಹೇಂದ್ರಕರ ಸರ್ಕಲ್, ಟಾಂಗಾ ಕೂಟ, ಹತ್ತಿಕಾಳ ಕೂಟ, ಹಳೇ ಬಸ್ ನಿಲ್ದಾಣ, ಕೃಷ್ಣಾ ಟಾಕೀಸ್ ಮಾರ್ಗವಾಗಿ ಮರಳಿ ತೋಂಟದಾರ್ಯ ಮಠವನ್ನು ತಲುಪಿತು.

ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಗದಗ ಜಿಲ್ಲೆಯಲ್ಲಿ ಯಾರೇ ಮೃತಪಟ್ಟರೂ ಕುಟುಂಬಸ್ಥರು ತಕ್ಷಣ 9448611272, 9480193193, 9886328687, 9945865368 ಈ ನಂಬರ್‌ಗೆ ಫೋನ್ ಮಾಡಿದರೆ ನೇತ್ರದಾನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಕಾರಣ ವ್ಯಕ್ತಿಯ ಮರಣದ ನಂತರ ಕಣ್ಣು ಮಣ್ಣಿನಲ್ಲಿ ಮಣ್ಣಾಗದೆ, ಕಣ್ಣಿಲ್ಲದವರಿಗೆ ಅವರ ಕಣ್ಣು ಕಾಣುವಂತೆ ಮಾಡಲು ಕಣ್ಣುದಾನ ಮಾಡಲು ಕುಟುಂಬಸ್ಥರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.

ರ್ಯಾಲಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ರಾಜು ವೇರ್ಣೆಕರ, ರಾಜಣ್ಣ ಮಲ್ಲಾಡದ, ರೇಣುಕಪ್ರಸಾದ ಹಿರೇಮಠ, ಆನಂದ ಪೋತ್ನೀಸ್, ರಮೇಶ್ ಶಿಗ್ಲಿ, ನಿತೀಶ್ ಸಾಲಿ, ಡಾ. ಶ್ರೀಧರ ಕುರಡಗಿ, ಮಂಜುನಾಥ ವೀರಲಿಂಗಯ್ಯನಮಠ, ಎಸ್.ಕೆ. ಶೆಟ್ಟರ, ಅಮೀತ್‌ಚಂದ್, ಪ್ರವೀಣ ವಾರಕರ, ಪ್ರಸಾದ ಶಿಗ್ಲಿಮಠ, ಪ್ರಕಾಶ ರಾಯ್ಕರ್, ಡಾ. ಲಾವಣ್ಯ, ಡಾ. ಸುನೀತಾ ಕುರಡಗಿ, ಸುರೇಖಾ ಮಲ್ಲಾಡದ, ಸಹನಾ ಹಿರೇಮಠ ಮುಂತಾದವರಿದ್ದರು.

ಚಿಕ್ಕೋಡಿ| ಕೊಳೆತ ಡೇಟ್ಸ್ ಮಾರಾಟ: ಗ್ರಾಹಕರ ಆರೋಗ್ಯಕ್ಕೆ ಸ್ಮಾರ್ಟ್ ಬಜಾರ್ ಅಪಾಯ!

0

ಚಿಕ್ಕೋಡಿ:- ಪಟ್ಟಣದ ಚಿಕ್ಕೋಡಿಯಲ್ಲಿರುವ ರಿಲಯನ್ಸ್ ಸ್ಮಾರ್ಟ್ ಬಜಾರ್ನಲ್ಲಿ ಗ್ರಾಹಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಗಂಭೀರ ನಿರ್ಲಕ್ಷ್ಯ ಪ್ರಕರಣ ಬೆಳಕಿಗೆ ಬಂದಿದೆ.

ಸ್ಮಾರ್ಟ್ ಬಜಾರ್‌ನಲ್ಲಿ ಫಂಗಸ್ ಹಿಡಿದ ಡೇಟ್ಸ್ ಸೇರಿದಂತೆ ಕೊಳೆತ ಆಹಾರ ಪದಾರ್ಥಗಳನ್ನು ಮಾರಾಟಕ್ಕೆ ಇಟ್ಟಿರುವುದು ಪತ್ತೆಯಾಗಿದ್ದು, ಗ್ರಾಹಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. KIMIA ಕಂಪನಿಯ ಡೇಟ್ಸ್‌ಗಳನ್ನು ಗ್ರಾಹಕರು ಖರೀದಿಸಿ ಸೇವಿಸಲು ಮುಂದಾದ ವೇಳೆ ಅವುಗಳಲ್ಲಿ ಫಂಗಸ್ ಕಂಡುಬಂದಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಸ್ಮಾರ್ಟ್ ಬಜಾರ್ ಮ್ಯಾನೇಜರ್‌ರನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡು, ಯಾವುದೇ ಪರಿಶೀಲನೆ ಇಲ್ಲದೆ ಕೆಟ್ಟ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಣ್ಣು–ತರಕಾರಿ ಸೇರಿದಂತೆ ಹಲವು ಆಹಾರ ವಸ್ತುಗಳು ಕೊಳೆತ ಸ್ಥಿತಿಯಲ್ಲಿರುವುದೂ ಕಂಡುಬಂದಿದೆ ಎನ್ನಲಾಗಿದೆ. ಈ ಗಂಭೀರ ಬೆಳವಣಿಗೆಗಳ ನಡುವೆಯೂ ಚಿಕ್ಕೋಡಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, FSSAI ಇಲಾಖೆ ಹಾಗೂ ಸ್ಮಾರ್ಟ್ ಬಜಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

Bengaluru Power Cut: ಬೆಂಗಳೂರಿಗರಿಗೆ ಮುಗಿಯದ ‘ಪವರ್’ ಸಮಸ್ಯೆ; ಶನಿವಾರವೂ ಈ ಏರಿಯಾಗಳಲ್ಲಿ ಇರಲ್ಲ ಕರೆಂಟ್!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಶನಿವಾರವೂ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ಪವರ್ ಕಟ್?

ಕೆಎಂಎಫ್, ವೈಎನ್‌ಕೆ ನ್ಯೂ ಟೌನ್ 208, 407 ಬಿ ಸೆಕ್ಟರ್, ಅಲ್ಲಾಳಸಂದ್ರ, ಶಾರದನಗರ, ಜನಪ್ರಿಯ, ಅನ್ರಿಯಾ, ಮಾರುತಿ ನಗರ, ಕೋಗಿಲು, ಬಿ.ಬಿ ರಸ್ತೆ ಯಲಹಂಕ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ.

ಬಾಗಲೂರು ಕ್ರಾಸ್, ವೆಂಕಟಾಲ, ನಿಟ್ಟೆ ಕಾಲೇಜು, ಬಿಎಸ್‌ಎಫ್‌, ಐಎಎಫ್‌, ಇಂಟರ್‌ನ್ಯಾಷನಲ್ ಸ್ಕೂಲ್, ಕಾಗೆನ್ ಅಡ್ಯಾನ್ ಕಾಲೇಜು, ರಾಯಣ್ಣನ ಶಾಲೆ ಪಾಲನಹಳ್ಳಿ, ದ್ವಾರಕಾನಗರ ಇತ್ಯಾದಿ. ಪೂರ್ವಂಕರ ಆರ್‌ಎಂಜೆಡ್ ಗ್ಯಾಲೇರಿಯಾ, ತಿರುಮಲ ನಗರ, ಅಟ್ಟೂರು ಬಡಾವಣೆ 1ನೇ ಅಡ್ಡರಸ್ತೆ- ಯಿಂದ 10ನೇ ಅಡ್ಡರಸ್ತೆ, ಎಸ್ಕಾರ್ಟ್ಸ್ ಬಡಾವಣೆ, ದೊಡ್ಡಬೆಟ್ಟಹಳ್ಳಿ, ಟಿಪ್ಪು ಸರ್ಕಲ್, ಚಿಕ್ಕಬೆಟ್ಟಹಳ್ಳಿ, ಕಾವೇರಿ ಬಡಾವಣೆ, ಗಿರಿಧಾಮನಗರ, ಎಎಂಎಸ್ ಬಡಾವಣೆ, ಡಿಫೆನ್ಸ್‌ ಕಾಲೊನಿ, ಎಂ.ಎಸ್‌. ಪಾಳ್ಯ, ಶಿಕ್ಷಕರ ಕಾಲೊನಿ, ಬಿಇಎಲ್ 6ನೇ ಬ್ಲಾಕ್, ಎಚ್‌ಎಂಟಿ 3ನೇ ಬ್ಲಾಕ್, ಎಚ್‌ಎಂಟಿ 4ನೇ ಬ್ಲಾಕ್ ಹಾಗೂ ಎಚ್‌ಎಂಟಿ 6ನೇ ಬ್ಲಾಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಕಲಬುರ್ಗಿ| ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದ ವಿದ್ಯಾರ್ಥಿ ಪ್ರಶ್ನಿಸಿದ್ದಕ್ಕೆ ಮೇಲ್ವಿಚಾರಕರ ಮೇಲೆ ಹಲ್ಲೆ!

0

ಕಲಬುರ್ಗಿ:- ನಗರದ ಡಾ. ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಸಹಾಯಕ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್​ ಮೇಲೆ ವಿದ್ಯಾರ್ಥಿ ಶಹಬಾಜ್​​ ಎಂಬಾತನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇಂದು ಡಾ.ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಮಟೇರಿಯಾ ಮೆಡಿಕಾ ವಿಷಯದ ಇಂಟರ್ನಲ್ ಎಕ್ಸಾಮ್​ ನಡೆದಿತ್ತು. ಈ ವೇಳೆ ವಿದ್ಯಾರ್ಥಿ ಶಹಬಾಜ್​ ಮೊಬೈಲ್ ಬಳಸಿಕೊಂಡು ಕಾಪಿ ಮಾಡಲು ಮುಂದಾಗಿದ್ದ. ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಾಗಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್​, ಪ್ರಶ್ನಿಸಿ ಉತ್ತರ ಪತ್ರಿಕೆ ಪಡೆದುಕೊಂಡಿದ್ದರು.

ವಿದ್ಯಾರ್ಥಿಯನ್ನು ತಕ್ಷಣವೇ ಪರೀಕ್ಷಾ ಹಾಲ್‌ನಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ತಕ್ಷಣ ಪ್ರಾಧ್ಯಾಪಕ ಶಿವರಾಜಕುಮಾರ್ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಈ ಆಕಸ್ಮಿಕ ಘಟನೆಯಿಂದ ಕೆಲಕಾಲ ಕಾಲೇಜು ಆವರಣದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಇನ್ನು ವಿದ್ಯಾರ್ಥಿ ಶಹಬಾಜ್ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಅಲ್ಲದೇ ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಿರಲು ಕಾಲೇಜು ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.

error: Content is protected !!