Home Blog Page 172

ಸಿಎಂ–ಡಿಸಿಎಂ ಗೊಂದಲಕ್ಕೆ ತೆರೆ: ರಾಹುಲ್ ಗಾಂಧಿಯಿಂದ ದೆಹಲಿಗೆ ಆಹ್ವಾನ – ಅಶೋಕ್ ಪಟ್ಟಣ್

0

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ವಿಚಾರಗಳನ್ನು ಚರ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರನ್ನೂ ದೆಹಲಿಗೆ ಆಹ್ವಾನಿಸಿದ್ದಾರೆ ಎಂದು ವಿಧಾನಸಭಾ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆಯುವ ಮಾತುಕತೆಯಲ್ಲಿ ಎಲ್ಲಾ ಗೊಂದಲಗಳಿಗೆ ಅಂತ್ಯ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅಶೋಕ್ ಪಟ್ಟಣ್, ನಿನ್ನೆ ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಯಾವುದೇ ಅಧಿಕೃತ ಚರ್ಚೆ ನಡೆಸಿಲ್ಲ. ಆದರೆ ಇಬ್ಬರನ್ನೂ ದೆಹಲಿಗೆ ಬರಲು ಸೂಚಿಸಿದ್ದಾರೆ. ದೆಹಲಿಗೆ ಹೋದ ನಂತರ ಎಲ್ಲ ವಿಚಾರಗಳನ್ನು ಸರಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ವಿವರಿಸಿದರು.

ಡಿಕೆ ಶಿವಕುಮಾರ್ ಮಾತನಾಡಬೇಕು ಎಂದು ಕೇಳಿಕೊಂಡ ಸಂದರ್ಭದಲ್ಲಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ಬರಬೇಕು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಸಂಕ್ರಾಂತಿ ಬಳಿಕ ಇಬ್ಬರೂ ದೆಹಲಿಗೆ ತೆರಳಿ ಮಾತುಕತೆ ನಡೆಸಲಿದ್ದು, ಶೇ.100ರಷ್ಟು ಗೊಂದಲಗಳು ಪರಿಹಾರವಾಗಲಿವೆ ಎಂದು ಅಶೋಕ್ ಪಟ್ಟಣ್ ವಿಶ್ವಾಸ ವ್ಯಕ್ತಪಡಿಸಿದರು.

ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದು, ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ರನ್‌ವೇಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ರಾಹುಲ್ ಗಾಂಧಿ ಬಂದ ಸಂದರ್ಭದಲ್ಲಿ ಸಾಮಾನ್ಯ ಮಾತುಕತೆ ಮಾತ್ರ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಕುರ್ಡಿ ಗ್ರಾಮದಲ್ಲಿ ಚರಂಡಿಗೆ ಬಿದ್ದು ವೃದ್ಧೆ ಸಾವು – ಪಂಚಾಯಿತಿ ವಿರುದ್ಧ ಜನರ ಅಸಮಾಧಾನ

0

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದ ದುರ್ಘಟನೆ ಗ್ರಾಮ ಪಂಚಾಯಿತಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವನ್ನು ಮತ್ತೆ ಬಯಲು ಮಾಡಿದೆ. ಅರೆಬರೆ ಕಾಮಗಾರಿ ಮಾಡಿದ್ದ ಚರಂಡಿಯಲ್ಲಿ ಬಿದ್ದು 60 ವರ್ಷದ ಗಂಗಮ್ಮ ಆರೋಲಿ ಸಾವನ್ನಪ್ಪಿದ್ದಾರೆ.

ಘಟನೆ ಗ್ರಾಮದ ಚರ್ಚ್ ಮುಂಭಾಗದಲ್ಲಿ ನಡೆದಿದೆ. ಚರಂಡಿ ಕಾಮಗಾರಿಯ ವೇಳೆ ಹಲವೆಡೆ ಗುಂಡಿಗಳನ್ನು ಮುಚ್ಚದೇ ಬಿಟ್ಟಿರುವುದು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಈ ದುರಂತಕ್ಕೆ ನೇರ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೂರು ತಿಂಗಳಿಗೂ ಹೆಚ್ಚು ಸಮಯ ಕಳೆದರೂ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸದೆ, ಅಪೂರ್ಣ ಸ್ಥಿತಿಯಲ್ಲೇ ಬಿಟ್ಟಿರುವುದು ಸಾರ್ವಜನಿಕರ ಜೀವಕ್ಕೆ ಅಪಾಯವಾಗುವಂತೆ ಮಾಡಿದೆ. ಈ ಕುರಿತು ಹಲವು ಬಾರಿ ಗುತ್ತಿಗೆದಾರರಿಗೆ ತಿಳಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಈ ಘಟನೆ ಬಳಿಕ ಕುರ್ಡಿ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯದಿಂದ ಸಂಭವಿಸಿದ ಈ ಸಾವು ಗ್ರಾಮದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Gadag-ಏರ್ ಫ್ರೆಶ್ನರ್ ಬಾಟಲ್ ಸ್ಫೋಟ: ಬಾಲಕಿ ಗಂಭೀರ ಗಾಯ!

0

ಗದಗ: ಏರ್ ಫ್ರೆಶ್ನರ್ ಬಾಟಲ್ ಸ್ಫೋಟಗೊಂಡ ಕಾರಣ ಅಪ್ರಾಪ್ತ ಬಾಲಕಿಯೊಬ್ಬಳ ಮುಖಕ್ಕೆ ಗಂಭೀರ ಗಾಯಗಳಾಗಿರುವ ಘಟನೆ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆ ಪಕ್ಕದಲ್ಲಿ ಬೆಂಕಿ ಹಚ್ಚಿದ ವೇಳೆ ಏರ್ ಫ್ರೆಶ್ನರ್ ಬಾಟಲ್ ಸ್ಫೋಟಗೊಂಡು ಈ ಘಟನೆ ಜರುಗಿದೆ.

ಸ್ಫೋಟದಿಂದ ಗಾಯಗೊಂಡ ಬಾಲಕಿಯನ್ನು ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ಬಾಲಕಿಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮಗಳನ್ನು ಚುಡಾಯಿಸುತ್ತಿದ್ದ ಅಲ್ತಾಪ್ ಎಂಬ ಯುವಕನೇ ಉದ್ದೇಶಪೂರ್ವಕವಾಗಿ ಏರ್ ಫ್ರೆಶ್ನರ್ ಬಾಟಲ್ ಸ್ಫೋಟ ಮಾಡಿದ್ದಾನೆ ಎಂದು ದೂರಿದ್ದಾರೆ. ಈ ಹಿಂದೆ ಕೂಡ ಎರಡು ಕುಟುಂಬಗಳ ನಡುವೆ ಗಲಾಟೆಗಳು ನಡೆದಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.

ಘಟನೆಯ ಮಾಹಿತಿ ಪಡೆದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಮಾತನಾಡಿದ ಅವರು, ಮನೆ ಸಮೀಪ ಬೆಂಕಿ ಹಚ್ಚಿದಾಗ ಏರ್ ಫ್ರೆಶ್ನರ್ ಬಾಟಲ್ ಸ್ಫೋಟಗೊಂಡು ಬಾಲಕಿಗೆ ಗಾಯವಾಗಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಚುಡಾಯಿಸಿದ್ದಾನೆ ಎನ್ನಲಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ವರದಕ್ಷಿಣೆ ಕೇಸ್‌ಗೆ ತಿರುವು: “ನನ್ನನ್ನು ಕೊಲ್ಲಲು ಪತ್ನಿಯೇ ಪ್ಲಾನ್ ಮಾಡಿದ್ದಳು”- ಕಾನ್ಸಟೇಬಲ್ ಮಚೇಂದ್ರ ಗಂಭೀರ ಆರೋಪ

0

ಬೀದರ್: ಜಿಲ್ಲೆಯ ಪೊಲೀಸ್ ಕಾನ್ಸಟೇಬಲ್ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣ ಇದೀಗ ಹೊಸ ಆಯಾಮ ಪಡೆದುಕೊಂಡಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ಪೊಲೀಸ್ ಕಾನ್ಸಟೇಬಲ್ ಮಚೇಂದ್ರ ಇದೀಗ ಪ್ರತಿದಾಳಿ ನಡೆಸಿದ್ದು, ಪತ್ನಿ ಸೀನಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪತ್ನಿ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ, ತನ್ನನ್ನು ಕೊಲ್ಲಲು ಯತ್ನಿಸಿದ್ದಾಳೆ ಎಂದು ಮಚೇಂದ್ರ ಆರೋಪಿಸಿದ್ದಾರೆ. ಊಟಕ್ಕೆ ವಿಷ ಬೆರೆಸಿ ಕೊಲ್ಲುವ ಸಂಚು ರೂಪಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲೂ ಪತ್ನಿ ಭೇಟಿಗೆ ಬರಲಿಲ್ಲ, ಯಾವುದೇ ಆರೈಕೆ ನೀಡಲಿಲ್ಲ ಎಂದು ಮಚೇಂದ್ರ ಆರೋಪಿಸಿದ್ದಾರೆ. ಬಳಿಕ ಸ್ವಗ್ರಾಮ ಚಿಟಗುಪ್ಪಾಕ್ಕೆ ಬಂದಾಗ ಪತ್ನಿ ತವರು ಮನೆಗೆ ತೆರಳಿದ್ದಾಳೆ ಎಂದು ಹೇಳಿದ್ದಾರೆ.

ಈ ಕಾರಣಗಳಿಂದ ಜನವರಿ 2025ರಲ್ಲಿ ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ನಂತರ ಸೆಟಲ್‌ಮೆಂಟ್ ಎಂಬ ಹೆಸರಿನಲ್ಲಿ ಕರೆಸಿ ಒಂದು ಕೋಟಿ ರೂ. ಬೇಡಿಕೆ ಇಟ್ಟಿದ್ದು, ಒಪ್ಪದ ಕಾರಣ ಹುಮನಾಬಾದ್ ತಾಲೂಕಾ ಪಂಚಾಯತ್ ಕಚೇರಿ ಬಳಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

2025ರ ಸೆಪ್ಟೆಂಬರ್‌ನಲ್ಲಿ ಮತ್ತೆ ಹುಮನಾಬಾದ್‌ನಲ್ಲಿ ಹಲ್ಲೆ ನಡೆದಿದೆ ಎಂದು ಹೇಳಿರುವ ಮಚೇಂದ್ರ, ವರದಕ್ಷಿಣೆ ಡಿಮ್ಯಾಂಡ್, ಮಕ್ಕಳಿಲ್ಲ ಎಂಬ ಕಾರಣಕ್ಕೆ ಕಿರುಕುಳ ನೀಡಿದ್ದೆ ಎಂಬ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಈ ಆರೋಪ–ಪ್ರತ್ಯಾರೋಪಗಳ ನಡುವೆ ಪ್ರಕರಣದ ತನಿಖೆ ಯಾವ ದಿಕ್ಕು ಪಡೆಯಲಿದೆ ಎಂಬುದನ್ನು ಕಾನೂನು ಪ್ರಕ್ರಿಯೆ ನಿರ್ಧರಿಸಬೇಕಿದೆ.

ICC Rankings: 1736 ದಿನಗಳ ಬಳಿಕ ಸಿಂಹಾಸನ ವಾಪಸ್: ಕಿಂಗ್ ಕೊಹ್ಲಿ ಮತ್ತೆ ನಂ.1!

0

ಏಕದಿನ ಕ್ರಿಕೆಟ್‌ನಲ್ಲಿ ರನ್ ಮಳೆ ಸುರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿಯಿಂದ ಭರ್ಜರಿ ಗೌರವ ಲಭಿಸಿದೆ. ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ನಿರಂತರವಾಗಿ 50 ಪ್ಲಸ್ ರನ್ ಗಳಿಸಿರುವ ಕೊಹ್ಲಿ, ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

ಬುಧವಾರ ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 785 ರೇಟಿಂಗ್ ಅಂಕಗಳೊಂದಿಗೆ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಇದೊಂದು ಖುಷಿಯ ಸಂಗತಿಯಾಗಿದ್ದರೆ, ಇದೇ ವೇಳೆ ಈವರೆಗೆ ಅಗ್ರಸ್ಥಾನದಲ್ಲಿದ್ದ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿರುವುದು ಗಮನಾರ್ಹ.

ವಿರಾಟ್ ಕೊಹ್ಲಿ ಸುಮಾರು 4 ವರ್ಷ 9 ತಿಂಗಳು (1736 ದಿನಗಳ) ದೀರ್ಘ ಕಾಯುವಿಕೆಯ ಬಳಿಕ ಮತ್ತೆ ಏಕದಿನ ಕ್ರಿಕೆಟ್‌ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಹಿಂದೆ ಅವರು 2021ರ ಏಪ್ರಿಲ್ 13ರವರೆಗೆ ಅಗ್ರಸ್ಥಾನದಲ್ಲಿದ್ದರು. ಅದರ ಬಳಿಕ ಪಾಕಿಸ್ತಾನದ ಬಾಬರ್ ಆಝಂ ಆ ಸ್ಥಾನವನ್ನು ವಶಪಡಿಸಿಕೊಂಡಿದ್ದರು.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 2 ಶತಕ ಮತ್ತು 1 ಅರ್ಧಶತಕ ಸಿಡಿಸಿದ್ದ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 93 ರನ್ ಗಳಿಸಿ ತಮ್ಮ ಫಾರ್ಮ್‌ನ್ನು ಮುಂದುವರೆಸಿದ್ದಾರೆ. ಈ ಅದ್ಭುತ ಪ್ರದರ್ಶನವೇ ಅವರನ್ನು ಮತ್ತೆ ಶ್ರೇಯಾಂಕದ ಶಿಖರಕ್ಕೆ ಕೊಂಡೊಯ್ದಿದೆ.

ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ (ಟಾಪ್):

  1. ವಿರಾಟ್ ಕೊಹ್ಲಿ – 785

  2. ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್) – 784

  3. ರೋಹಿತ್ ಶರ್ಮಾ – 775

  4. ಶುಭಮನ್ ಗಿಲ್

  5. ಶ್ರೇಯಸ್ ಅಯ್ಯರ್

ಆದರೆ ಕೊಹ್ಲಿಗೆ ಈ ಸ್ಥಾನವನ್ನು ಉಳಿಸಿಕೊಳ್ಳುವುದು ಸುಲಭವಾಗಿಲ್ಲ. ಏಕೆಂದರೆ ಡ್ಯಾರಿಲ್ ಮಿಚೆಲ್ ಕೇವಲ ಒಂದು ರೇಟಿಂಗ್ ಅಂಕ ಹಿಂದಿದ್ದು, ಮುಂದಿನ ಎರಡು ಏಕದಿನ ಪಂದ್ಯಗಳಲ್ಲಿನ ಪ್ರದರ್ಶನವೇ ಮುಂದಿನ ವಾರದ ಶ್ರೇಯಾಂಕವನ್ನು ನಿರ್ಧರಿಸಲಿದೆ. ಕೊಹ್ಲಿ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ಸ್ಥಿರ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.

ಕನ್ನಡದಲ್ಲೇ ಪತ್ರ ಬರೆದು ಮೋದಿ ಸಂಕ್ರಾಂತಿ ಶುಭಾಶಯ: ಕರ್ನಾಟಕಕ್ಕೆ ವಿಶೇಷ ಗೌರವ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕದ ಜನತೆಗೆ ಮಕರ ಸಂಕ್ರಾಂತಿ ಶುಭಾಶಯ ಕೋರಿದ್ದು, ವಿಶೇಷವಾಗಿ ಕನ್ನಡದಲ್ಲೇ ಪತ್ರ ಬರೆದು ಶುಭಹಾರೈಸಿರುವುದು ಗಮನ ಸೆಳೆದಿದೆ. ಈ ಪತ್ರವನ್ನು ಮೋದಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೋದಿ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪತ್ರ ಬರೆದು ಆಯಾ ರಾಜ್ಯದ ಜನತೆಗೆ ಸಂಕ್ರಾಂತಿ / ಪೊಂಗಲ್ ಶುಭಾಶಯ ಕೋರಿದ್ದಾರೆ. ಅದರಲ್ಲೂ ಕನ್ನಡದಲ್ಲಿ ನೇರವಾಗಿ ಸಂದೇಶ ನೀಡಿರುವುದು ಕರ್ನಾಟಕದಲ್ಲಿ ವಿಶೇಷ ಗಮನ ಸೆಳೆಯುತ್ತಿದೆ.

ಪತ್ರದಲ್ಲಿ ಮೋದಿ, “ಆತ್ಮೀಯ ಸಹ ನಾಗರಿಕರೇ, ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಸೂಚಿಸುವ ಈ ಹಬ್ಬ ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ” ಎಂದು ಬರೆದಿದ್ದಾರೆ.

ದೇಶಾದ್ಯಂತ ವಿಭಿನ್ನ ರೂಪಗಳಲ್ಲಿ ಆಚರಿಸಲ್ಪಡುವ ಸಂಕ್ರಾಂತಿ, ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತಿಬಿಂಬವಾಗಿದ್ದು, ಒಗ್ಗಟ್ಟಿನ ಭಾವನೆಯನ್ನು ಬಲಪಡಿಸುವ ಹಬ್ಬ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಸಂಕ್ರಾಂತಿ ರೈತರ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದೆ ಎಂದು ಹೇಳಿದ ಮೋದಿ, “ಇದು ಅನ್ನದಾತರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭ. ಸಂಕ್ರಾಂತಿ ನಮ್ಮನ್ನು ಆತ್ಮವಿಶ್ವಾಸ ಮತ್ತು ಆಶಾವಾದದೊಂದಿಗೆ ಮುಂದಕ್ಕೆ ಸಾಗಲು ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ.

“ನಿಮ್ಮ ಜೀವನದಲ್ಲಿ ಸಮೃದ್ಧಿ, ಆರೋಗ್ಯ, ಸಂತೋಷ ನೆಲೆಸಲಿ. ನಿಮ್ಮ ಮನೆಗಳಲ್ಲಿ ಸಂತೋಷ, ಸಮಾಜದಲ್ಲಿ ಸಾಮರಸ್ಯ ಮೂಡಲಿ” ಎಂದು ಪ್ರಧಾನಿ ಹಾರೈಸಿದ್ದಾರೆ.

ಟ್ವಿಟ್ಟರ್ ಪೋಸ್ಟ್‌ನಲ್ಲೂ ಮೋದಿ, “ಎಳ್ಳು-ಬೆಲ್ಲದ ಮಾಧುರ್ಯದಂತೆ ಈ ಹಬ್ಬ ಜನರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ತರಲಿ. ಸೂರ್ಯ ದೇವರು ಎಲ್ಲರನ್ನೂ ಆಶೀರ್ವದಿಸಲಿ” ಎಂದು ಹೇಳಿದ್ದಾರೆ.

ಮಹಿಳಾ ಆಯುಕ್ತೆಗೆ ಫೋನ್‌ನಲ್ಲಿ ನಿಂದನೆ: ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ FIR

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಫೋನ್ ಮೂಲಕ ಅಶ್ಲೀಲ ನಿಂದನೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ಅಧಿಕೃತ ದೂರು ದಾಖಲಾಗಿದೆ.

ಪೌರಾಯುಕ್ತೆ ಅಮೃತಾ ಗೌಡ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿ, BNS 79, 132, 352, 199, 54 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೂರಿನಲ್ಲಿ, ತಮಗೆ ಮಾನಸಿಕವಾಗಿ ಭಾರೀ ಆಘಾತ ಉಂಟಾಗಿದ್ದು, ತಾವು ಕೇಂದ್ರ ಸ್ಥಾನದಲ್ಲಿ ಒಬ್ಬರೇ ವಾಸಿಸುತ್ತಿರುವುದರಿಂದ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಯ ಅಮೃತಾ ಗೌಡ, “ಬ್ಯಾನರ್ ತೆರವುಗೊಳಿಸುವ ಪ್ರಕ್ರಿಯೆ ಸಂಪೂರ್ಣವಾಗಿ ನಿಯಮಾನುಸಾರವಾಗಿತ್ತು. ಕೌನ್ಸಿಲರ್‌ಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು. ಸಾರ್ವಜನಿಕ ತೊಂದರೆಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ನೋವು ತಂದಿದೆ” ಎಂದಿದ್ದಾರೆ.

ಆರೋಪಕ್ಕೆ ರಾಜೀವ್ ಗೌಡ ಪ್ರತಿಕ್ರಿಯೆ ನೀಡಿದ್ದು, ವೈರಲ್ ಆಡಿಯೋ ಕುರಿತು ಪ್ರತಿಕ್ರಿಯಿಸಿದ ರಾಜೀವ್ ಗೌಡ,
“ನಾನು ಅಧಿಕಾರಿಗೆ ಬೆದರಿಕೆ ಹಾಕಿಲ್ಲ. ಫ್ಲೆಕ್ಸ್‌ಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದೇನೆ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ಯಾವುದೇ ಕಾನೂನು ಕ್ರಮಕ್ಕೂ ಸಿದ್ಧ” ಎಂದು ಹೇಳಿದ್ದಾರೆ.

ಈ ಘಟನೆಯ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜೀವ್ ಗೌಡನ ಬಂಧನಕ್ಕೆ ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಮಹಿಳಾ ಅಧಿಕಾರಿಗಳ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆಯ ಹಿನ್ನೆಲೆ

‘ಕಲ್ಟ್’ ಸಿನಿಮಾ ಪ್ರಚಾರದ ವೇಳೆ ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಬ್ಯಾನರ್ ಹಾಕಲಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಾರ್ವಜನಿಕ ದೂರು ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಫ್ಲೆಕ್ಸ್ ತೆರವುಗೊಳಿಸಿದ್ದರು. ಇದಕ್ಕೆ ಸಂಬಂಧಿಸಿ ರಾಜೀವ್ ಗೌಡ ಪೌರಾಯುಕ್ತೆಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: “ನಮ್ಮ ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

“ನಾನು ಕೆಪಿಸಿಸಿ ಅಧ್ಯಕ್ಷ, ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ. ಶಿಷ್ಟಾಚಾರದ ಮೂಲಕ ಅವರನ್ನು ನಾನು ಸ್ವಾಗತಿಸಿ, ಭೇಟಿ ಮಾಡಿದ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವೇ? ನೀವುಗಳು ನಿಮಗೆ ಇಚ್ಛೆ ಬಂದಂತೆ ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದೀರಿ.

ನಾವು ಯಾವ ಸಂದೇಶವನ್ನು ಕೊಟ್ಟಿಲ್ಲ. ನಮಗೂ ಯಾವ ಸಂದೇಶವನ್ನೂ ಕೊಟ್ಟಿಲ್ಲ. ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ, ಇದನ್ನೇ ಮುಂದುವರಿಸಿಕೊಂಡು ಹೋಗಿ ಎಂದು ನಮ್ಮ ನಾಯಕರು ಹೇಳಿದ್ದಾರೆ. ನರೇಗಾ ವಿಚಾರವಾಗಿ ನಾವು ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದ್ದೇನೆ. ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ರಾಜಕಾರಣ ಚರ್ಚೆ ಮಾಡಿದ್ದೇವೆ.

“ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ” ಎಂಬ ಟ್ವೀಟ್ ವಿಚಾರವಾಗಿ ಕೇಳಿದಾಗ, “ನಾನು ಹೊಸದಾಗಿ ಈ ಮಾತನ್ನು ಹೇಳುತ್ತಿಲ್ಲ. ಒಕ್ಕಲಿಗ ಉದ್ಯಮಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ನಾನು ಅಲ್ಲಿನ ಉದ್ಯಮಿಗಳ ಜೊತೆ ನನ್ನ ಅನುಭವದ ಮಾತುಗಳನ್ನು ಹೇಳಿಕೊಂಡಿದ್ದೇನೆ” ಎಂದರು. ದೆಹಲಿಗೆ ತೆರಳುತ್ತಿದ್ದೀರಾ ಎಂದು ಕೇಳಿದಾಗ, “16 ರಂದು ದೆಹಲಿಗೆ ತೆರಳುತ್ತಿದ್ದೇನೆ” ಎಂದು ತಿಳಿಸಿದರು.

ಪೊಲೀಸರ ಕಾರ್ಯಾಚರಣೆ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್!

0

ಬೆಂಗಳೂರು: ವಿವೇಕನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರಸ್ತೆ ಬದಿಯಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಂಜಿತ್ ಬಾಗ್ (35) ಮತ್ತು ಮಿಥುನ್ ಕುಂಭಾರ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಓಡಿಸ್ಸಾದಿಂದ ತರಲಾಗುತ್ತಿದ್ದ ಗಾಂಜಾವನ್ನು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ವಾಟ್ಸ್‌ಆಪ್ ಮೂಲಕ ಡ್ರಗ್ ಡೀಲಿಂಗ್ ನಡೆಸುತ್ತಿದ್ದು, ರಾಜಸ್ಥಾನದ ಪ್ರಮುಖ ಆರೋಪಿ ರಾಕೇಶ್ ಎಂಬಾತ ಈ ಇಬ್ಬರನ್ನು ಸಂಪರ್ಕಿಸಿ ಗಾಂಜಾ ಮಾರಾಟ ಮಾಡುವಂತೆ ಸೂಚನೆ ನೀಡುತ್ತಿದ್ದನು ಎಂಬುದು ಬೆಳಕಿಗೆ ಬಂದಿದೆ. ರಾಕೇಶ್ ವಾಟ್ಸ್‌ಆಪ್ ಮೂಲಕಲೇ ಡ್ರಗ್ ಡೀಲ್‌ಗಳನ್ನು ಆಪರೇಟ್ ಮಾಡುತ್ತಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಕೇಶ್ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಮೊದಲು ಈ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 21 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ರಾಕೇಶ್ ಹಾಗೂ ಸುಕ್ರ ವರ್ಮಾ ಎಂಬುವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ವಿವೇಕನಗರ ಪೊಲೀಸರ ಮುಂದುವರೆದ ತನಿಖೆ ನಡೆಯುತ್ತಿದೆ.

 

ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ: ಬಿ.ವೈ.ವಿಜಯೇಂದ್ರ

0

ಚಿತ್ರದುರ್ಗ: ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ನಿಜವಾಗಿ ಏನೂ ಅಭಿವೃದ್ಧಿ ಆಗಿಲ್ಲ; ಕಾಂಗ್ರೆಸ್ಸಿನ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ನಿನ್ನೆ ಜರ್ಮನಿಯ ಚಾನ್ಸೆಲರ್ ಕರ್ನಾಟಕಕ್ಕೆ ಬಂದಿದ್ದರು. ಜರ್ಮನಿಯು ಉತ್ಪಾದನಾ ಹಬ್ ಆಗಿರುವ ತಂತ್ರಜ್ಞಾನದ ದೇಶ. ಅಂಥ ದೇಶದ ಚಾನ್ಸೆಲರ್ ಕರ್ನಾಟಕಕ್ಕೆ ಬಂದರೆ, ಇವರಲ್ಲಿ ಒಬ್ಬರು ಸಿಎಂ ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಅದೇ ಕುರ್ಚಿ ಕಸಿದುಕೊಳ್ಳಲು ಹೋಗಿ ರಾಹುಲ್ ಗಾಂಧಿ ಜೊತೆ ನಿಂತುಕೊಂಡಿದ್ದಾರೆ. ಇದರಂದ ರಾಜ್ಯದ ಪರಿಸ್ಥಿತಿ ಏನಾಗಬೇಕು ಎಂದು ಕೇಳಿದರು.

ಇದೆಲ್ಲವನ್ನೂ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಉತ್ತರ ನೀಡುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ಸಿನಲ್ಲಿ ಆಂತರಿಕ ಕಚ್ಚಾಟ ಇದೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಕಾತುರದಲ್ಲಿದ್ದಾರೆ. ನನ್ನ ತಾಳ್ಮೆ ಕೆಣಕಬೇಡಿ; ನಾನು ಸಿಎಂ ಆಗಬೇಕೆಂದು ಉಳಿದವರು ರೆಡಿ ಆಗಿದ್ದಾರೆ ಎಂದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಷ್ಟೇ ಅಲ್ಲ; ರಾಜ್ಯದ ಪ್ರಮುಖರ ಜೊತೆ ಚರ್ಚೆ ಮಾಡಿದಾಗ ನಾವೆಲ್ಲರೂ ಬಳ್ಳಾರಿ ಪಾದಯಾತ್ರೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯ ಬಹುತೇಕ ಎಲ್ಲರದೂ ಆಗಿದೆ. ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನಿಸಬೇಕಾಗಿದೆ ಎಂದು ನುಡಿದರು. ನಾನು ಈಗಾಗಲೇ ಈ ಕುರಿತು ಪಕ್ಷದ ದೆಹಲಿ ವರಿಷ್ಠರಿಗೆ ಮಾತನಾಡಿದ್ದೇನೆ. ಇವತ್ತು, ನಾಳೆಯೊಳಗೆ ಅದರ ಬಗ್ಗೆ ಸಂದೇಶವುಳ್ಳ ಮಾಹಿತಿ ಬರಲಿದೆ ಎಂದು ತಿಳಿಸಿದರು.

error: Content is protected !!