Home Blog Page 174

‘ದೃಶ್ಯಂ 3’ಗೆ ಬಾಕ್ಸ್ ಆಫೀಸ್‌ ಉಡೀಸ್‌: 6 ದಿನಕ್ಕೆ 170 ಕೋಟಿ ದಾಟಿದ ಜಾರ್ಜ್‌ಕುಟ್ಟಿ ಮ್ಯಾಜಿಕ್!

ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಮುಂದುವರಿಸಿದೆ. ಬಿಡುಗಡೆಯಾದ ಆರನೇ ದಿನವೂ ಚಿತ್ರ ಭರ್ಜರಿ ಕಲೆಕ್ಷನ್ ದಾಖಲಿಸಿದ್ದು, ಜಾಗತಿಕ ಮಟ್ಟದಲ್ಲಿ 170 ಕೋಟಿ ರೂಪಾಯಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ.

ವಾರದ ದಿನಗಳಲ್ಲೂ ಪ್ರೇಕ್ಷಕರ ಸೆಳೆತ ಕಡಿಮೆಯಾಗದಿರುವುದು ಚಿತ್ರದ ದೊಡ್ಡ ಪ್ಲಸ್ ಆಗಿದೆ. ಮಂಗಳವಾರ (ಮೇ 26) ಒಂದೇ ದಿನ ಭಾರತದಲ್ಲಿ 4,668 ಪ್ರದರ್ಶನಗಳನ್ನು ಕಂಡ ‘ದೃಶ್ಯಂ 3’, 6.45 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಆರು ದಿನಗಳಲ್ಲಿ ಚಿತ್ರದ ಭಾರತದ ಒಟ್ಟು ನೆಟ್ ಕಲೆಕ್ಷನ್ 68.60 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಭಾರತದ ಗ್ರಾಸ್ ಕಲೆಕ್ಷನ್ 79.62 ಕೋಟಿ ರೂಪಾಯಿ ಆಗಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಜಾರ್ಜ್‌ಕುಟ್ಟಿ ಕ್ರೇಜ್ ಭಾರೀ ಜೋರಾಗಿದೆ. ಆರನೇ ದಿನವೇ ಓವರ್‌ಸೀಸ್ ಮಾರುಕಟ್ಟೆಯಿಂದ 6 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಒಟ್ಟು ವಿದೇಶಿ ಗ್ರಾಸ್ ಗಳಿಕೆ 90.70 ಕೋಟಿ ರೂಪಾಯಿಗೆ ತಲುಪಿದೆ.

ಭಾರತ ಮತ್ತು ವಿದೇಶಿ ಮಾರುಕಟ್ಟೆಯ ಕಲೆಕ್ಷನ್ ಒಟ್ಟುಗೂಡಿಸಿದರೆ, ‘ದೃಶ್ಯಂ 3’ ಚಿತ್ರದ ವಿಶ್ವವ್ಯಾಪಿ ಒಟ್ಟು ಗ್ರಾಸ್ ಕಲೆಕ್ಷನ್ 170.32 ಕೋಟಿ ರೂಪಾಯಿ ದಾಟಿದೆ. ಈ ವೇಗ ಮುಂದುವರಿದರೆ ಸಿನಿಮಾ ಶೀಘ್ರದಲ್ಲೇ 200 ಕೋಟಿ ಕ್ಲಬ್ ಸೇರುವುದು ಖಚಿತ ಎನ್ನಲಾಗುತ್ತಿದೆ.

ಜಾರ್ಜ್‌ಕುಟ್ಟಿ ಈ ಬಾರಿ ಪೊಲೀಸರ ಕೈಯಿಂದ ಹೇಗೆ ಪಾರಾಗುತ್ತಾನೆ ಎಂಬ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶವೇ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ.

ರಾಮ್ ಚರಣ್ ‘ಪೆದ್ದಿ’ಗೆ ವಿದೇಶದಲ್ಲಿ ದೊಡ್ಡ ಟ್ವಿಸ್ಟ್: ಕೊನೆ ಕ್ಷಣದಲ್ಲಿ ಜಪಾನ್ ರಿಲೀಸ್ ಪೋಸ್ಟ್‌ಪೋನ್!

ಹೈದರಾಬಾದ್, ಮೇ 26: ಜೂನ್ 4 ರಂದು ಬಿಡುಗಡೆಯಾಗಲಿರುವ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಇದೀಗ ಹೊಸ ಬೆಳವಣಿಗೆಯಿಂದ ಸುದ್ದಿಯಲ್ಲಿದೆ. ಭಾರತದ ಜೊತೆ ಜಪಾನ್‌ನಲ್ಲೂ ಏಕಕಾಲಕ್ಕೆ ತೆರೆಗೆ ಬರಬೇಕಿದ್ದ ಸಿನಿಮಾ, ಕೊನೆ ಕ್ಷಣದಲ್ಲಿ ಜಪಾನ್ ಬಿಡುಗಡೆ ಮುಂದೂಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

‘ಆರ್‌ಆರ್‌ಆರ್‌’ ನಂತರ ಜಪಾನ್‌ನಲ್ಲಿ ರಾಮ್ ಚರಣ್‌ಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ನಿರ್ಮಾಣವಾಗಿತ್ತು. ಇದೇ ಕಾರಣಕ್ಕೆ ‘ಪೆದ್ದಿ’ ಚಿತ್ರವನ್ನು ಜಪಾನ್ ಮಾರುಕಟ್ಟೆಯಲ್ಲೂ ಭರ್ಜರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಕೆಲವು ತಾಂತ್ರಿಕ ಹಾಗೂ ವಿತರಣಾ ಸಮಸ್ಯೆಗಳ ಹಿನ್ನೆಲೆ ಸದ್ಯಕ್ಕೆ ಜಪಾನ್ ಬಿಡುಗಡೆ ಸ್ಥಗಿತಗೊಂಡಿದೆ ಎನ್ನಲಾಗಿದೆ.

ಈ ನಿರ್ಧಾರ ಜಪಾನ್ ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿದ್ದು, ಹೊಸ ಬಿಡುಗಡೆ ದಿನಾಂಕ ಯಾವಾಗ ಘೋಷಣೆಯಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಇತ್ತ ಭಾರತೀಯ ಸಿನಿಪ್ರೇಮಿಗಳು ಕೂಡ ಜಾಗತಿಕ ರಿಲೀಸ್ ಆಗಿದ್ದರೆ ಸಿನಿಮಾ ಇನ್ನೂ ದೊಡ್ಡ ಮಟ್ಟದಲ್ಲಿ ದಾಖಲೆ ಬರೆಯಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

‘ಪೆದ್ದಿ’ ಚಿತ್ರದ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಶಿವರಾಜ್‌ಕುಮಾರ್ ಪಾತ್ರ. ರಾಮ್ ಚರಣ್ ಮತ್ತು ಶಿವಣ್ಣ ಕಾಂಬಿನೇಷನ್ ಈಗಾಗಲೇ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಕನ್ನಡ-ತೆಲುಗು ಪ್ರೇಕ್ಷಕರಲ್ಲಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ.

ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾಗೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದು, ಜಗಪತಿ ಬಾಬು, ದಿವ್ಯೇಂದು ಶರ್ಮ ಹಾಗೂ ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ ಗೆ ಸಿಂಗಾಪುರ ಕೋರ್ಟ್ ನಿಂದ 6 ತಿಂಗಳ ಜೈಲು ಶಿಕ್ಷೆ!

ಸಿಂಗಾಪುರದಲ್ಲಿ ಬೈಜೂಸ್ (BYJU’S) ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್‌ಗೆ ಸಂಬಂಧಿಸಿದ ಒಪ್ಪಂದ ಉಲ್ಲಂಘನೆ ಹಾಗೂ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಈ ತೀರ್ಪು ಪ್ರಕಟವಾಗಿದೆ.

ಆಸ್ತಿ ವಿವರಗಳನ್ನು ಬಹಿರಂಗಪಡಿಸುವ ಕುರಿತು 2024ರ ಏಪ್ರಿಲ್‌ನಿಂದ ನ್ಯಾಯಾಲಯ ನೀಡಿದ್ದ ಹಲವು ಆದೇಶಗಳನ್ನು ಅವರು ಪಾಲಿಸದೆ ಉಲ್ಲಂಘಿಸಿದ ಕಾರಣ ಈ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯವು ಬೈಜು ರವೀಂದ್ರನ್ ಅವರು ಯಾವುದೇ ವಿಳಂಬ ಅಥವಾ ನೆಪವಿಲ್ಲದೆ ತಕ್ಷಣವೇ ಸಿಂಗಾಪುರದ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಖಡಕ್ ಆದೇಶ ನೀಡಿದೆ. ಜೊತೆಗೆ ಕಾನೂನು ವೆಚ್ಚವಾಗಿ ಸುಮಾರು 90,000 ಸಿಂಗಾಪುರ ಡಾಲರ್ (ಅಂದಾಜು ₹67.47 ಲಕ್ಷ) ಪಾವತಿಸುವಂತೆ ಸೂಚಿಸಿದೆ.

ಹೂಡಿಕೆದಾರರ ಹಣದ ದುರುಪಯೋಗ ಮತ್ತು ಆಸ್ತಿ ವಿವರಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಗಳಿಂದ ಮುಚ್ಚಿಡಲು ಪ್ರಯತ್ನಿಸಿದ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ವೈಯಕ್ತಿಕ ಹಾಗೂ ಕಂಪನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ನೀಡಿದ್ದ ಹಲವು ಆದೇಶಗಳನ್ನು ಅವರು ನಿರಂತರವಾಗಿ ನಿರ್ಲಕ್ಷಿಸಿದ್ದಾರೆ ಎಂದು ಕೂಡ ನ್ಯಾಯಾಲಯ ಗಮನಿಸಿದೆ.

ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಮಾಹಿತಿಯನ್ನು ಮುಚ್ಚಿಡಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲಾಗಿದೆ ಎಂದು ನ್ಯಾಯಾಲಯ ಗಂಭೀರವಾಗಿ ಟೀಕಿಸಿದೆ.

ಈ ನಡುವೆ, ವಿದೇಶಿ ಹೂಡಿಕೆದಾರರು ಮತ್ತು ಸಾಲದಾತರು ತಮ್ಮ ನಷ್ಟವನ್ನು ವಸೂಲಿಸಲು ವಿವಿಧ ದೇಶಗಳಲ್ಲಿ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಈ ಹಿಂದೆಯೂ ಅಮೆರಿಕದ ನ್ಯಾಯಾಲಯವು ಆದೇಶ ಉಲ್ಲಂಘನೆಯ ಹಿನ್ನೆಲೆಯಲ್ಲಿ ಬೈಜು ರವೀಂದ್ರನ್ ಅವರಿಗೆ ಭಾರಿ ದಂಡ ವಿಧಿಸಿದ್ದುದನ್ನು ಗಮನಿಸಬಹುದು.

ಭಾರತದ ಜಾರಿ ನಿರ್ದೇಶನಾಲಯವು ಕೂಡ ಬೈಜೂಸ್ ಸಂಸ್ಥೆಯ ವಿದೇಶಿ ಹಣಕಾಸು ವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿದ್ದು, ಸುಮಾರು ₹9,000 ಕೋಟಿಗೂ ಹೆಚ್ಚು ಮೊತ್ತದ FEMA ನಿಯಮ ಉಲ್ಲಂಘನೆ ಆರೋಪಗಳಿವೆ ಎಂದು ವರದಿಯಾಗಿದೆ. ಕಂಪನಿಯ ಆದಾಯವನ್ನು ಹೆಚ್ಚಾಗಿ ತೋರಿಸಿ ಹೂಡಿಕೆದಾರರನ್ನು ಆಕರ್ಷಿಸಲು ಸುಳ್ಳು ಲೆಕ್ಕಪತ್ರಗಳನ್ನು ಸೃಷ್ಟಿಸಿದ ಆರೋಪವೂ ತನಿಖೆಯಲ್ಲಿದೆ.

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ!

ದೇವನಹಳ್ಳಿ: ಬೆಂಗಳೂರು ಹೊರವಲಯದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.

ಟರ್ಮಿನಲ್–1ರಲ್ಲಿ ನಿಂತಿದ್ದ ವಿಮಾನವು ಬೆಂಗಳೂರಿನಿಂದ ಚೆನ್ನೈಗೆ ತೆರಳಬೇಕಾಗಿತ್ತು.

ವಿಮಾನ ಟೇಕ್‌ಆಫ್‌ಗೆ ಸಜ್ಜಾಗಿದ್ದ ವೇಳೆ ಏಕಾಏಕಿ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಪೈಲೆಟ್ ಎಚ್ಚೆತ್ತುಕೊಂಡು ರನ್‌ವೇಯಲ್ಲೇ ವಿಮಾನವನ್ನು ನಿಲ್ಲಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ಹಿರಿಯ ತಾಂತ್ರಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಮಾನದ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಬಿರುಗಾಳಿ–ಆಲಿಕಲ್ಲು ಮಳೆ ಆರ್ಭಟ: ಮನೆ ಮೇಲ್ಛಾವಣಿ ಬಿದ್ದು 6 ವರ್ಷದ ಬಾಲಕಿ ದುರ್ಮರಣ!

ಬೀದರ್: ಜಿಲ್ಲೆ ಹುಲಸೂರು ತಾಲೂಕಿನ ತಹಶೀಲ್ದಾರ್ ಕಚೇರಿ ಸಮೀಪದ ಬಡಾವಣೆಯಲ್ಲಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಭೀಕರ ಆರ್ಭಟಕ್ಕೆ ದಾರುಣ ಘಟನೆ ಸಂಭವಿಸಿದೆ.

ಭಾರೀ ಗಾಳಿ ಮತ್ತು ಮಳೆಯ ತೀವ್ರತೆಗೆ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ.

ಮೇಲ್ಛಾವಣಿಯ ಮೇಲಿದ್ದ ಭಾರವಾದ ಕಲ್ಲುಗಳು ಮನೆಯೊಳಗೆ ಬಿದ್ದ ಪರಿಣಾಮ, 6 ವರ್ಷದ ಬಾಲಕಿ ಮಾಹೇರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಕುಟುಂಬದ ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಅಬ್ಬರದಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಮಂಡ್ಯದಲ್ಲಿ ಭೀಕರ ಅಪಘಾತ! ಟಾಟಾ ಏಸ್ ಪಲ್ಟಿಯಾಗಿ ಓರ್ವ ಮಹಿಳೆ ಸಾವು, 10 ಕ್ಕೂ ಹೆಚ್ಚು ಮಂದಿಗೆ ಗಾಯ!

ಮಂಡ್ಯ: ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ಬಳಿ ಟಾಟಾ ಏಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮೃತರನ್ನು ಹಟ್ನ ಗ್ರಾಮದ ತಾಯಮ್ಮ (60) ಎಂದು ಗುರುತಿಸಲಾಗಿದೆ. ದೇವರ ಕಾರ್ಯಕ್ಕೆ ನಾಗಮಂಗಲ ತಾಲೂಕಿನ ಹೆಗಟಿ ಗ್ರಾಮಕ್ಕೆ ತೆರಳಿದ್ದ ಹಟ್ನ ಗ್ರಾಮದ ಜನರು ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆ ಬದಿಗೆ ಪಲ್ಟಿಯಾಗಿದೆ. ಈ ವೇಳೆ ವಾಹನದಲ್ಲಿದ್ದ ತಾಯಮ್ಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂರ್ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ನಂತರ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಬಳಿಕ ಎಲ್ಲ ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತ ಸಂಭವಿಸಿದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಯಿತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ವಾಹನವನ್ನು ತೆರವುಗೊಳಿಸಿದ್ದಾರೆ.

ಈ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಆರಂಭಿಸಿದ್ದಾರೆ.

ಸ್ಥಳೀಯರು ರಸ್ತೆ ಸುರಕ್ಷತೆ ಹಾಗೂ ಅತಿಭಾರ ಪ್ರಯಾಣದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಗುಜರಾತ್ ವಿರುದ್ಧ 92 ರನ್‌ಗಳ ಭರ್ಜರಿ ಜಯ! ಫೈನಲ್‌ಗೆ RCB ಎಂಟ್ರಿ – ಈ ಸಲನೂ ಕಪ್‌ ನಮ್ದೆ?

ನಾಯಕ ರಜತ್ ಪಾಟಿದಾರ್ ಅವರ ಅಬ್ಬರದ ಬ್ಯಾಟಿಂಗ್ ಹಾಗೂ ಜಾಕೋಬ್ ಡಫ್ಫಿ ಅವರ ಮಾರಕ ಬೌಲಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಕ್ವಾಲಿಫೈಯರ್-1 ಪಂದ್ಯದಲ್ಲಿ 92 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ನಾಯಕ ರಜತ್ ಪಾಟಿದಾರ್ ಕೇವಲ 33 ಬಾಲ್‌ಗಳಲ್ಲಿ 9 ಸಿಕ್ಸರ್ ಹಾಗೂ 5 ಫೋರ್ ಸಹಿತ 93 ರನ್ ಸಿಡಿಸಿ ಗುಜರಾತ್ ಬೌಲರ್‌ಗಳನ್ನು ಕಂಗೆಡಿಸಿದರು. ವಿರಾಟ್ ಕೊಹ್ಲಿ 43 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ 30 ರನ್‌ಗಳ ಕೊಡುಗೆ ನೀಡಿದರು. ಕೃಣಾಲ್ ಪಾಂಡ್ಯ ಕೂಡ 43 ರನ್ ಗಳಿಸಿ ತಂಡಕ್ಕೆ ಬಲ ನೀಡಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು.

255 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಆರಂಭದಲ್ಲೇ ಕುಸಿತ ಕಂಡಿತು. ಸಾಯಿ ಸುದರ್ಶನ್ 14 ರನ್‌ಗೆ ಹಿಟ್ ವಿಕೆಟ್ ಆದರೆ, ಶುಭಮನ್ ಗಿಲ್ ಕೇವಲ 2 ರನ್‌ಗೆ ಕ್ಲೀನ್ ಬೌಲ್ಡ್ ಆದರು. ಜೋಸ್ ಬಟ್ಲರ್ 29 ರನ್ ಗಳಿಸಿದರೂ ತಂಡವನ್ನು ಗೆಲುವಿನತ್ತ ಕರೆದೊಯ್ಯಲು ಸಾಧ್ಯವಾಗಲಿಲ್ಲ. ರಾಹುಲ್ ತೆವಾಟಿಯಾ 68 ರನ್ ಗಳಿಸಿ ಹೋರಾಟ ಮಾಡಿದರೂ, ಉಳಿದ ಬ್ಯಾಟರ್‌ಗಳ ವಿಫಲತೆಯಿಂದ ಗುಜರಾತ್ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯಿತು.

ಆರ್‌ಸಿಬಿ ಪರ ಜಾಕೋಬ್ ಡಫ್ಫಿ 3 ವಿಕೆಟ್ ಪಡೆದು ಮಿಂಚಿದರು. ಭುವನೇಶ್ವರ್ ಕುಮಾರ್, ರಸಿಕ್ ಸಲಾಂ ಹಾಗೂ ಕೃಣಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಜೋಶ್ ಹೇಜಲ್‌ವುಡ್ 1 ವಿಕೆಟ್ ಪಡೆದರು.

ಈ ಜಯದೊಂದಿಗೆ ಆರ್‌ಸಿಬಿ 2009, 2011, 2016 ಹಾಗೂ 2025ರ ನಂತರ ಐದನೇ ಬಾರಿಗೆ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದೆ. ಇದೀಗ ತಂಡ ಮತ್ತೊಮ್ಮೆ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ.

ರಾಜ್ಯಾದ್ಯಂತ ಭಾರೀ ಮಳೆ! ಹಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಈ ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ದಕ್ಷಿಣ ಒಳನಾಡಿನ ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಹ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಬಳ್ಳಾರಿ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಮಳೆ ಮತ್ತು ಬಿರುಗಾಳಿ ಸಂದರ್ಭಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದ್ದು, ಹಳೆಯ ಕಟ್ಟಡಗಳು, ಮರಗಳ ಕೆಳಭಾಗ ಮತ್ತು ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಸೂಚಿಸಿದೆ.

ಬಡವರ ಅನ್ನಕ್ಕೂ ಸರ್ವರ್ ಕಂಟಕ!

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಬಯೋಮೆಟ್ರಿಕ್ ಸರ್ವರ್ ಕೈಕೊಟ್ಟ ಪರಿಣಾಮ, ಪಡಿತರ ಪಡೆಯಲು ಫಲಾನುಭವಿಗಳು ಕಳೆದ ಹಲವು ದಿನಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಹೆಬ್ಬೆಟ್ಟು ಹಾಕಲು ಸಾಧ್ಯವಾಗದೆ ನೂರಾರು ಮಂದಿ ದಿನಪೂರ್ತಿ ಸಾಲಿನಲ್ಲಿ ನಿಂತರೂ ಖಾಲಿಕೈಯಿಂದ ಮನೆಗೆ ಹಿಂತಿರುಗುತ್ತಿರುವ ದೃಶ್ಯ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಎದುರು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಆಡಳಿತದ ವಿರುದ್ಧ ಘೋಷಣೆ ಕೂಗಿದರು.
“ಬೇಕೇ ಬೇಕು ನ್ಯಾಯ ಬೇಕು”, “ಸರ್ವರ್ ಸಮಸ್ಯೆ ನಿವಾರಿಸಿ” ಎಂದು ಕೂಗಿದ ಪ್ರತಿಭಟನಾಕಾರರು, ಸಾರ್ವಜನಿಕರಿಗೆ ಮೂಲಭೂತ ಸೇವೆ ಒದಗಿಸುವಲ್ಲಿಯೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮಳೆಗಾಲದ ಕೃಷಿ ಚಟುವಟಿಕೆ ಆರಂಭವಾಗಿರುವ ವೇಳೆಯಲ್ಲೇ ರೈತರು ಹೊಲದ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
“ಬೆಳಗ್ಗೆಯಿಂದ ಸಂಜೆವರೆಗೆ ಕಾಯಿಸುತ್ತಾರೆ. ಕೊನೆಗೆ ‘ಸರ್ವರ್ ಇಲ್ಲ’ ಎಂದು ಮನೆಗೆ ಕಳುಹಿಸುತ್ತಾರೆ. ಎರಡು-ಮೂರು ದಿನಗಳಿಂದ ಬರುತ್ತಿದ್ದರೂ ಪಡಿತರ ಸಿಗುತ್ತಿಲ್ಲ,” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
“ಒಂದೆಡೆ ಕೃಷಿ ಕೆಲಸ, ಮತ್ತೊಂದೆಡೆ ಪಡಿತರದ ಕಷ್ಟ. ಕೆಲಸವೂ ಆಗುತ್ತಿಲ್ಲ, ಪಡೀತರವೂ ಸಿಗುತ್ತಿಲ್ಲ,” ಎಂದು ಅಸಮಾಧಾನ ಹೊರಹಾಕಿದರು.
ಮಹಿಳೆಯರು ಮಾತನಾಡಿ, “ಮನೆಯ ಕೆಲಸ, ಮಕ್ಕಳ ಜವಾಬ್ದಾರಿ ಬಿಟ್ಟು ಬರುತ್ತಿದ್ದೇವೆ. ದಿನವಿಡೀ ಕಾಯಿಸಿದರೂ ಪಡಿತರ ಸಿಗುತ್ತಿಲ್ಲ. ಬಡವರ ಸಂಕಷ್ಟ ಸರ್ಕಾರಕ್ಕೆ ಕಾಣುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ವೃದ್ಧರು, “ಬೆರಳಚ್ಚೇ ಸರಿಯಾಗಿ ಬರುತ್ತಿಲ್ಲ. ಅದರ ಮೇಲೆ ಸರ್ವರ್ ಸಮಸ್ಯೆ. ಪ್ರತಿದಿನ ಬಂದು ಹಿಂತಿರುಗುವುದು ತುಂಬಾ ಕಷ್ಟ,” ಎಂದು ಅಳಲು ತೋಡಿಕೊಂಡರು.
ಅಂಗವಿಕಲರು ಮತ್ತು ವೃದ್ಧ ಮಹಿಳೆಯರು ನೆಲದ ಮೇಲೆಯೇ ಕುಳಿತು ಕಾಯುತ್ತಿರುವ ದೃಶ್ಯ ಜನರ ಮನಕಲುಕಿತು.
“ಸರ್ವರ್ ಸಮಸ್ಯೆ ಇದೆ ಎಂದು ಹೇಳುವುದನ್ನು ಬಿಟ್ಟರೆ ಬೇರೆ ಯಾವುದೇ ಸ್ಪಂದನೆ ಇಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಕೇಳುವವರೇ ಇಲ್ಲ,” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಆಫ್‌ಲೈನ್ ಮೂಲಕವಾದರೂ ಪಡಿತರ ವಿತರಣೆ ಮಾಡಬೇಕು. ಇಲ್ಲವಾದರೆ ತಾಲೂಕು ಮಟ್ಟದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಜನರ ಪ್ರಮುಖ ಆಗ್ರಹಗಳು

  •  ಸರ್ವರ್ ಸಮಸ್ಯೆ ತಕ್ಷಣ ಬಗೆಹರಿಸಬೇಕು
  •  ಆಫ್‌ಲೈನ್ ಮೂಲಕ ಪಡಿತರ ವಿತರಣೆ ಆರಂಭಿಸಬೇಕು
  •  ಹಿರಿಯ ನಾಗರಿಕರು, ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು
  •  ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು

ಗುಲ್ಮೋಹರ್ ಹೂವಿನ ಸುರಂಗವಾಗಿ ಮಿಂಚಿದ ರಸ್ತೆ!

0
ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಮಾರನಬಸರಿ ಗ್ರಾಮದಿಂದ ಕೊಪ್ಪದ ಕ್ರಾಸ್‌ವರೆಗೆ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಗುಲ್ಮೋಹರ್ ಮರಗಳು ಇದೀಗ ಸಂಚಾರಿಗಳ ಕಣ್ಮನ ಸೆಳೆಯುತ್ತಿವೆ. ಕೆಂಪು-ಕಿತ್ತಳೆ ಬಣ್ಣದ ಹೂವುಗಳಿಂದ ಕಂಗೊಳಿಸುತ್ತಿರುವ ಈ ಮರಗಳು ರಸ್ತೆಯನ್ನೇ ನೈಸರ್ಗಿಕ ಹೂವಿನ ಸುರಂಗವನ್ನಾಗಿ ಮಾರ್ಪಡಿಸಿವೆ.
ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾಗಿ ಬೆಳೆದಿರುವ ಮರಗಳು ಪ್ರಯಾಣಿಕರಿಗೆ ತಂಪಾದ ನೆರಳನ್ನು ನೀಡುತ್ತಿದ್ದು, ಬೇಸಿಗೆಯ ಬಿಸಿಲಿನ ಮಧ್ಯೆಯೂ ಮನಸಿಗೆ ಹಿತ ನೀಡುವ ವಾತಾವರಣ ಸೃಷ್ಟಿಸಿವೆ.
ಹೂವುಗಳಿಂದ ಆವೃತವಾಗಿರುವ ರಸ್ತೆಯಲ್ಲಿ ಯುವಕರು, ಪ್ರವಾಸಿಗರು ಹಾಗೂ ಸ್ಥಳೀಯರು ನಿಂತು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ರಸ್ತೆಯ ಮೇಲೆ ಉದುರಿರುವ ಗುಲ್ಮೋಹರ್ ಹೂವುಗಳು ಪ್ರಕೃತಿಯ ರಂಗೋಲಿಯಂತೆಯೇ ಕಂಗೊಳಿಸುತ್ತಿದ್ದು, ಈ ಮಾರ್ಗವನ್ನು ಮತ್ತಷ್ಟು ಆಕರ್ಷಕವಾಗಿಸಿವೆ.
ಪ್ರಕೃತಿ ಪ್ರೇಮಿಗಳು ಹಾಗೂ ವಾಹನ ಸವಾರರು ಈ ರಸ್ತೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ದೃಶ್ಯಗಳು ವೈರಲ್ ಆಗುತ್ತಿವೆ.