ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶಿಕ್ಷಕರ ತರಬೇತಿ, ಶೈಕ್ಷಣಿಕ ಗುಣಮಟ್ಟ ವೃದ್ಧಿ ಹಾಗೂ ಇಲಾಖೆಯ ಸಮಾಲೋಚನಾ ಸಭೆಗಳ ಉದ್ದೇಶದಿಂದ ನಿರ್ಮಿಸಲಾದ ಮುಳಗುಂದದ ಸಮೂಹ ಸಂಪನ್ಮೂಲ ಕೇಂದ್ರ (ಸಿಆರ್ಸಿ) ನಿರ್ವಹಣೆ ಕೊರತೆಯಿಂದ ಪಾಳುಬಿದ್ದು ಅನಾಥ ಕಟ್ಟಡವಾಗಿ ಮಾರ್ಪಟ್ಟಿದೆ.
ಮುಳಗುಂದ ಕ್ಲಸ್ಟರ್ ವ್ಯಾಪ್ತಿಯ 12 ಶಾಲೆಗಳಿಗಾಗಿ ನಿರ್ಮಿಸಲಾದ ಈ ಕೇಂದ್ರದಲ್ಲಿ ಹಿಂದೆ ಶಿಕ್ಷಕರ ಸಭೆಗಳು, ತರಬೇತಿ ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಅನುದಾನದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡ ಹಾಳಾಗಿದ್ದು, ಕಿಟಕಿ-ಬಾಗಿಲುಗಳು ಮುರಿದು, ಒಳಗೆ ಮದ್ಯದ ಬಾಟಲಿಗಳು, ಇಸ್ಪೀಟ್ ಕಾರ್ಡ್ಗಳ ಕಸದ ರಾಶಿ ತುಂಬಿಕೊಂಡಿದೆ. ಕಟ್ಟಡ ಇದೀಗ ಆಗಸ್ಟ್ 15 ಹಾಗೂ ಜನವರಿ 26ರಂದು ಧ್ವಜಾರೋಹಣಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಆರ್. ತಡೆದಮಠ ಮಾತನಾಡಿ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನಿರ್ಮಿಸಿದ ಕಟ್ಟಡವನ್ನು ಕೂಡಲೇ ದುರಸ್ತಿ ಮಾಡಿ ಚಟುವಟಿಕೆ ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಕ್ಲಸ್ಟರ್ ಸಿಆರ್ಪಿ ರಮೀಜಾ ಅಣ್ಣಿಗೇರಿ, ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು, ದುರಸ್ತಿ ಹಾಗೂ ಸುಣ್ಣ-ಬಣ್ಣ ಕಾಮಗಾರಿ ನಡೆಸಿ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.



