Home Blog Page 176

ಪ್ರಾಚೀನ ದೇವಸ್ಥಾನಗಳನ್ನು ರಕ್ಷಿಸಿ: ವಿ.ಬಿ. ಸೋಮನಕಟ್ಟಿಮಠ

0

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣದಲ್ಲಿರುವ ಸೋಮನಾಥ ಲಿಂಗೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾಗಿದ್ದು, ಈ ದೇವಸ್ಥಾನವನ್ನು ದ್ರೋಣಾಚಾರ್ಯರು ನಿರ್ಮಿಸಿದ್ದಾರೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ ಹೇಳಿದರು.

ಅವರು ಮಂಗಳವಾರ ಸಂಗನಗೌಡ (ಮಿಥುನ್) ಪಾಟೀಲರ ಅಭಿಮಾನಿ ಬಳಗದವರು ಸೋಮನಾಥ ಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರೋಣ ಪಟ್ಟಣಕ್ಕೆ ಪ್ರಾಚೀನ ಕಾಲದಲ್ಲಿ ದ್ರೋಣಾಪೂರ ಎಂಬ ಹೆಸರಿತ್ತು. ಅಲ್ಲದೆ ಇಲ್ಲಿ ದ್ರೋಣಾಚಾರ್ಯರು ನೆಲೆಸುವ ಮೂಲಕ ಪಟ್ಟಣದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ ಎಂಬ ಕುರುಹುಗಳು ಇಂದಿಗೂ ಸಿಗುತ್ತವೆ. ಮುಖ್ಯವಾಗಿ ಮಹಾಭಾರತದಲ್ಲಿ ಕೌರವವರು ಹಾಗೂ ಪಾಂಡವರಿಗೆ ಯುದ್ಧದ ನೈಪುಣ್ಯತೆಯನ್ನು ಹೇಳಿಕೊಟ್ಟ ನೆಲ ನಮ್ಮ ದ್ರೋಣಾಪೂರ ಎಂಬುದು ದೇವಸ್ಥಾನಗಳ ಕಲ್ಲಿನ ಬರೆಯಲಾಗಿರುವ ಬರಹಗಳಲ್ಲಿ ತಿಳಿದುಬರುತ್ತದೆ ಎಂದರು.

ನಮ್ಮ ನಾಡು ಹಾಗೂ ದೇಶದಲ್ಲಿ ಜಕಣಾಚಾರ್ಯರು ಕಟ್ಟಿದ ದೇವಸ್ಥಾನಗಳು ನಮಗೆ ಕಾಣಸಿಗುತ್ತವೆ. ವಿಪರ್ಯಾಸ ಅಂದರೆ ದ್ರೋಣಾಚಾರ್ಯರು ಕಟ್ಟಿರುವ ದೇವಸ್ಥಾನಗಳನ್ನು ರೋಣ ಪಟ್ಟಣದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದ ಅವರು, ಪಟ್ಟಣದ ಜನತೆ ಇತಿಹಾಸವನ್ನು ತಿಳಿದುಕೊಳ್ಳುವ ಮೂಲಕ ಪ್ರಾಚೀನ ದೇವಸ್ಥಾನಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಬೇಕು. ಅಂದಾಗ ನಮ್ಮ ಊರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಸಹಾಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ ದಂಪತಿಗಳನ್ನು ಸತ್ಕರಿಸಲಾಯಿತು. ಅಸ್ಲಂ ಕೊಪ್ಪಳ, ಯಲ್ಲಪ್ಪ ಕಿರೇಸೂರ, ಬಸವರಾಜ ಹಲಗಿ, ಶಾಬಾಜ್ ಗದಗ, ಬಶೀರ ಕಟ್ಟಿಮನಿ, ತೌಹಿದ್ ಜಲವಾರ, ಸಮೀರ್ ದೊಡ್ಡಮನಿ, ಕೈಪ್ ಮಕಾಂದಾರ, ಮೋದಿನ ಹುಲ್ಯಾಳ, ಭರತ್ ಮಾನೆ, ಮಹದೇವಪ್ಪ ತೆಗ್ಗಿನಮನಿ, ಮಲ್ಲು ರಾಯನಗೌಡ್ರ, ಶಶಿಕುಮಾರ ಹಾದಿಮನಿ ಸೇರಿದಂತೆ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

ಸಂಗನಗೌಡ ಪಾಟೀಲರ ಅಭಿಮಾನಿ ಬಳಗದವರು ಪ್ರಾಚೀನ ದೇವಸ್ಥಾನದ ಆವರಣದ ಸ್ವಚ್ಛತಾ ಕಾರ್ಯ ಸೇರಿದಂತೆ ದೇವಸ್ಥಾನವನ್ನು ಸಿಂಗರಿಸಿದ್ದಾರೆ. ಅಲ್ಲದೆ ಅನ್ನಸಂತರ್ಪಣೆಯಂತಹ ಮಹತ್ವದ ಕಾರ್ಯವನ್ನು ಮಾಡಿದ್ದು ಸ್ವಾಗತಾರ್ಹ. ಪಟ್ಟಣದಲ್ಲಿರುವ ಎಲ್ಲ ಪ್ರಾಚೀನ ದೇವಾಲಯಗಳ ಬಗ್ಗೆ ನಾವೆಲ್ಲ ತಿಳಿದುಕೊಳ್ಳುವ ಅವಶ್ಯಕೆಯಿದೆ. ಒಳ್ಳೆಯ ಕೆಲಸಗಳಿಗೆ ಶಾಸಕ ಜಿ.ಎಸ್. ಪಾಟೀಲ ಕುಟುಂಬ ಸದಾ ಇರಲಿದೆ ಎಂದು ವಿ.ಬಿ. ಸೋಮನಕಟ್ಟಿಮಠ ಹೇಳಿದರು.

ಚಿಕ್ಕಬಳ್ಳಾಪುರ| ಡ್ರಾಪ್ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; ಕಾಮುಕ ಅರೆಸ್ಟ್!

0

ಚಿಕ್ಕಬಳ್ಳಾಪುರ:- ಡ್ರಾಪ್ ನೆಪದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಜರುಗಿದೆ.

ಗಣೇಶ್ ಬಂಧಿತ ಆರೋಪಿ. ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂತ್ರಸ್ತೆ, ಬಾಗೇಪಲ್ಲಿಯಿಂದ ವಾಪಸ್ಸು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮಕ್ಕೆ ತೆರಳಲು ಪೆರೇಸಂದ್ರ ಕ್ರಾಸ್ ಬಳಿಯ ಬಸ್‍ನಿಲ್ದಾಣದಲ್ಲಿ ನಿಂತಿದ್ದಳು. ಆ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ ಗಣೇಶ್​​ ಅಪ್ರಾಪ್ತ ವಿದ್ಯಾರ್ಥಿನಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯನ್ನು ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನಂತೆ. ನಂತರ ಭಯ ಭೀತನಾದ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮಾಡಿದ ಪಾಪಕೃತ್ಯವನ್ನು ಹೇಳಿಕೊಂಡಿದ್ದಾನೆ. ಗಣೇಶ್​​ ಸ್ನೇಹಿತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಬೆನ್ನಲ್ಲೇ ಪೊಲೀಸರು ನಿರ್ಜನ ಪ್ರದೇಶಕ್ಕೆ ಬಂದು ಹುಡುಕಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಆರೋಪಿಯ ಮೊಬೈಲ್​​ ಟ್ರೇಸ್​​ ಮಾಡಲಾಗಿದ್ದು, ನಿರ್ಜನ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಪತ್ತೆಹಚ್ಚಲಾಗಿದೆ. ಬಳಿಕ ವಿದ್ಯಾರ್ಥಿನಿಯನ್ನು ಸ್ಥಳೀಯ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ರವಾನಿಸಿದ್ದು, ಆರೋಪಿ ಗಣೇಶ್​​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಚಿಕ್ಕಮಗಳೂರು| ಕಾಫಿನಾಡಲ್ಲಿ ರಾತ್ರಿ ವೇಳೆ ಮಚ್ಚು–ರಾಡ್ ಹಿಡಿದು ಸಂಚರಿಸುತ್ತಿದೆ ರಾಬರಿ ಗ್ಯಾಂಗ್!

0

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಾತ್ರಿ ವೇಳೆ ಮಚ್ಚು, ರಾಡ್‌ಗಳೊಂದಿಗೆ ಸಂಚರಿಸಿ ದರೋಡೆ ನಡೆಸುವ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಐವರ ಗ್ಯಾಂಗ್ ಆಯುಧ ಸಮೇತ ರಾತ್ರಿ ವೇಳೆ ಸಂಚರಿಸುತ್ತಿದ್ದು, ಶಬ್ದವಾಗದಂತೆ ಚಪ್ಪಲಿಯನ್ನೂ ಧರಿಸದೆ ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದ ಪವಿತ್ರವನ ಹಾಗೂ ಟೀಚರ್ಸ್ ಕಾಲೋನಿ ಪ್ರದೇಶದಲ್ಲಿ ಈ ಗ್ಯಾಂಗ್ ನಿರಂತರವಾಗಿ ಸಂಚರಿಸುತ್ತಿದ್ದು, ಈಗಾಗಲೇ ನಾಲ್ಕು ಮನೆಗಳಲ್ಲಿ ಕಳ್ಳತನ ನಡೆದಿರುವ ಮಾಹಿತಿ ಲಭ್ಯವಾಗಿದೆ.

ಕಳ್ಳರ ಗ್ಯಾಂಗ್ ಆಂಧ್ರ ಪ್ರದೇಶ ಮೂಲದವರಾಗಿರಬಹುದು ಎನ್ನಲಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ರಾಹುಲ್ ಗಾಂಧಿ ಜೊತೆ ಡಿಕೆಶಿ ಸೀಕ್ರೆಟ್ ಮಾತು; ‘ಕುರ್ಚಿ’ ಒಪ್ಪಂದ ನೆನಪು ಮಾಡಿದ್ರಾ ಡಿಸಿಎಂ! ಸಿದ್ದು ಜೊತೆಯಲ್ಲೂ ಪಿಸುನುಡಿ!

0

ಮೈಸೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಹೈಕಮಾಂಡ್ ಸೂಚನೆಯಂತೆ ತಣ್ಣಗಾಗಿದ್ದ ಪವರ್ ಶೇರಿಂಗ್ ಒಪ್ಪಂದದ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ.

ಇಂದು ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಮೊದಲು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಚರ್ಚಿಸಿದ ರಾಹುಲ್ ಗಾಂಧಿ, ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸೈಡ್‌ಗೆ ಕರೆದುಕೊಂಡು ಹೋಗಿ ಗುಪ್ತವಾಗಿ ಮಾತುಕತೆ ನಡೆಸಿದ್ದಾರೆ.

ವಿಮಾನದಿಂದ ಹೆಲಿಕಾಪ್ಟರ್ ಹತ್ತುವ ಮುನ್ನ ನಡೆದ ಈ ರಹಸ್ಯ ಚರ್ಚೆ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಡಿಕೆ ಶಿವಕುಮಾರ್ ಅವರು ಪವರ್ ಶೇರಿಂಗ್ ಒಪ್ಪಂದವನ್ನು ರಾಹುಲ್ ಗಾಂಧಿಗೆ ನೆನಪು ಮಾಡಿದ್ರಾ? ಕೊಟ್ಟ ಮಾತು ಉಳಿಸಿಕೊಳ್ಳಲು ತಮ್ಮ ಡಿಮ್ಯಾಂಡ್‌ಗಳನ್ನು ಮುಂದಿಟ್ಟರಾ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿವೆ. ಡಿಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಮಾತನಾಡುತ್ತಿರುವ ಫೋಟೋಗಳು ಲಭ್ಯವಾಗಿದ್ದು, ಈ ಭೇಟಿ ರಾಜ್ಯ ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ನರೇಗಾ ವಿಚಾರವಾಗಿ ವಿಶೇಷ ಅಧಿವೇಶನ ನಡೆಸಲಿ, ಚರ್ಚೆಗೆ ಸಿದ್ಧ; ಸರ್ಕಾರಕ್ಕೆ ಸಿ.ಟಿ. ರವಿ ಸವಾಲ್

0

ಬೆಂಗಳೂರು: ನರೇಗಾ ವಿಚಾರವಾಗಿ ಸರ್ಕಾರ ವಿಶೇಷ ಅಧಿವೇಶನ ನಡೆಸಿ ಚರ್ಚೆ ಮಾಡಲಿ, ನಾವು ಸಂಪೂರ್ಣವಾಗಿ ಸಿದ್ಧ ಎಂದು ಸರ್ಕಾರಕ್ಕೆ ಮಾಜಿ ಸಚಿವ ಸಿ.ಟಿ. ರವಿ ಸವಾಲ್ ಹಾಕಿದ್ದಾರೆ.

ನರೇಗಾ ವಿಷಯದ ಕುರಿತು ಸರ್ಕಾರ ಇಂದು ವಿಶೇಷ ಕ್ಯಾಬಿನೆಟ್ ಸಭೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿಶೇಷ ಕ್ಯಾಬಿನೆಟ್ ಅಲ್ಲ, ವಿಶೇಷ ಅಧಿವೇಶನವೇ ಕರೆಯಲಿ. ಈಗಾಗಲೇ ವಿಜಯೇಂದ್ರ, ಆರ್. ಅಶೋಕ್ ಹಾಗೂ ಕುಮಾರಸ್ವಾಮಿ ಅವರು ಈ ವಿಚಾರದಿಂದ ರಾಜ್ಯದ ಹಿತಾಸಕ್ತಿಗೆ ಏನು ಧಕ್ಕೆ ಆಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು. ಬೇಕಾದರೆ ಸಾರ್ವಜನಿಕವಾಗಿ ಅಥವಾ ವಿಶೇಷ ಅಧಿವೇಶನದಲ್ಲೇ ಒಂದು ದಿನ ಪೂರ್ಣ ಚರ್ಚೆ ನಡೆಸೋಣ ಎಂದು ಸಿ.ಟಿ. ರವಿ ಹೇಳಿದ್ದಾರೆ.

ನರೇಗಾ ಯೋಜನೆಯಲ್ಲಿ ಎಷ್ಟು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ? ಲಾಭ ಎಷ್ಟು, ನಷ್ಟ ಎಷ್ಟು? ಮನ್ರೇಗಾ ಮೂಲಕ ಜನರಿಗೆ ಎಷ್ಟು ಲಾಭವಾಗಿದೆ? ಗುತ್ತಿಗೆದಾರರಿಗೆ ಎಷ್ಟು ಲಾಭವಾಗಿದೆ? ಎಷ್ಟು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ? ಎಲ್ಲವನ್ನೂ ತೆರೆದ ಚರ್ಚೆಗೆ ತರುವುದಾಗಿ ಅವರು ಸವಾಲು ಹಾಕಿದರು.

ಇದೇ ವೇಳೆ ರಾಮನ ಹೆಸರಿನ ಬಗ್ಗೆ ಕಾಂಗ್ರೆಸ್‌ಗೆ ಯಾಕೆ ದ್ವೇಷ ಎಂಬ ಪ್ರಶ್ನೆ ಎತ್ತಿದ ಸಿ.ಟಿ. ರವಿ, ಗಾಂಧೀಜಿ ರಾಮನ ವ್ಯಕ್ತಿತ್ವದಿಂದ ಪ್ರೇರಣೆ ಪಡೆದು ರಾಮರಾಜ್ಯ ನಿರ್ಮಾಣದ ಬಗ್ಗೆ ಮಾತನಾಡಿದ್ದರು. ಮಧ್ಯರಾತ್ರಿಯಲ್ಲೂ ಮಹಿಳೆಯರು ನಿರ್ಭಯವಾಗಿ ಓಡಾಡುವ ಸಮಾಜವೇ ರಾಮರಾಜ್ಯ ಎಂಬುದು ಗಾಂಧೀಜಿಯ ಕನಸಾಗಿತ್ತು. ಆದರೆ ಮಹಿಳೆಯರು ಕುಡಿದು ತೂರಾಡಿ ಓಡಾಡಬೇಕು ಎಂದು ಅವರು ಹೇಳಿರಲಿಲ್ಲ. ಕುಡಿದವರಿಗೆ ಮನೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡ್ತೀವಿ ಎನ್ನುವುದು ಗಾಂಧೀಜಿಯ ರಾಮರಾಜ್ಯ ಅಲ್ಲ ಎಂದು ಕಿಡಿಕಾರಿದರು. ಜಿ ರಾಮ್ ಜಿ ಬಿಲ್‌ನಲ್ಲಿ ಗೋಡ್ಸೆ ರಾಮ ಇದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ. ರವಿ, ಸಿದ್ದರಾಮನಲ್ಲೂ ರಾಮ ಇದ್ದಾನೆ ಎಂದು ಪ್ರತಿಕ್ರಿಯಿಸಿದರು.

ರಾಮನನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಭಾವನೆ, ಭಕ್ತಿಯ ದೃಷ್ಟಿಯಿಂದ ಕಾಣುತ್ತಾರೆ. ಸಿದ್ದರಾಮಯ್ಯ ಅವರು ಯಾವ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಗೋಡ್ಸೆಯಲ್ಲೇ ರಾಮನನ್ನು ನೋಡ್ತಿರಬಹುದು. ಅವರವರಿಗೆ ಅವರವರ ತರನಾಗಿ ರಾಮ ಕಾಣುತ್ತಿರಬಹುದು ಎಂದು ವ್ಯಂಗ್ಯವಾಡಿದರು.

ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಕೊಂದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

0

ಬೆಂಗಳೂರು: “ಗ್ರಾಮೀಣ ಭಾಗದ ಅಭಿವೃದ್ಧಿಗೆ ನೆರವಾಗಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಕೊಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ “ಮನರೇಗಾ ಬಚಾವ್ ಸಂಗ್ರಾಮ” ಹೋರಾಟದ ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.

“ಶ್ರೀಮತಿ ಸೋನಿಯಾ ಗಾಂಧಿ ಅವರು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಸಂವಿಧಾನದ ಮೂಲಕ ಬಡವರಿಗೆ ಉದ್ಯೋಗ ಖಾತರಿ ಹಕ್ಕನ್ನು ನೀಡಿದ್ದರು. ಇದರಿಂದ ನಮ್ಮ ರಾಜ್ಯದ ಪಂಚಾಯಿತಿ ಹಾಗೂ ಗ್ರಾಮಗಳ ಮಟ್ಟದಲ್ಲಿ ಪ್ರತಿ ವರ್ಷ 6 ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದವು. ಈ ಕೆಲಸಗಳನ್ನು ಸ್ಥಳೀಯ ಪಂಚಾಯಿತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು. ನರೇಗಾ ಉದ್ಯೋಗ ಕಾರ್ಡ್ ಹೊಂದಿರುವವರಿಗೆ ಉದ್ಯೋಗ ನೀಡಬೇಕಿತ್ತು, ಉದ್ಯೋಗ ಸಿಗದಿದ್ದರೆ ಕೂಲಿ ನೀಡಲಾಗುತ್ತಿತ್ತು. ಇದರಲ್ಲಿ ದುರ್ಬಳಕೆ ತಡೆಗಟ್ಟಲು ಹೆಬ್ಬೆರಳಚ್ಚು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲಾಗಿತ್ತು” ಎಂದು ತಿಳಿಸಿದರು.

“ಈ ಯೋಜನೆಯಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಯಾಗಿತ್ತು. ನಾವು ಬಳ್ಳಾರಿ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಕೆಲವು ಮಹಿಳೆಯರನ್ನು ವಿಚಾರಿಸಿದೆವು. ಕೆಲವು ಮಹಿಳೆಯರು ಬೇರೆಯವರ ಜಮೀನಿನಲ್ಲಿ ಹೋಗಿ ಕೆಲಸ ಮಾಡಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದರು. ಆಗ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿದ್ದ ನಾನು ದೆಹಲಿಗೆ ಹೋಗಿ,

ಈ ಪರಿಸ್ಥಿತಿಯನ್ನು ಸೋನಿಯಾ ಗಾಂಧಿ ಅವರಿಗೆ ತಿಳಿಸಿದೆ. ಅವರು ಸಿ.ಪಿ ಜೋಷಿ ಅವರನ್ನು ಕರೆಸಿ ಈ ವಿಚಾರದ ಬಗ್ಗೆ ಗಮನಹರಿಸಿ ಎಂದು ಸೂಚಿಸಿದರು. ನಂತರ ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ತಾವೇ ಕೂಲಿ ಮಾಡಿದರೆ, ಜಮೀನು ಮಟ್ಟ, ದನ, ಕುರಿ ಕೊಟ್ಟಿಗೆ, ಇಂಗು ಗುಂಡಿ, ಕೃಷಿ ಹೊಂಡ ನಿರ್ಮಾಣಕ್ಕೆ ಕೂಲಿ ನೀಡುವ ವ್ಯವಸ್ಥೆ ತಂದರು. ಇನ್ನು ರೈತರು ತಮ್ಮ ಜಮೀನಿನಲ್ಲಿ ತೋಟಗಾರಿಕಾ ಬೆಳೆ ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟರು” ಎಂದು ವಿವರಿಸಿದರು.

ಡೆಲಿವರಿ ರೇಸ್‌ಗೆ ಬ್ರೇಕ್: ಕೇಂದ್ರ ಸರ್ಕಾರದ ಒತ್ತಡಕ್ಕೆ ‘10 ನಿಮಿಷ ಗ್ಯಾರಂಟಿ’ ಕೈಬಿಟ್ಟ ಬ್ಲಿಂಕಿಟ್

0

ನವದೆಹಲಿ: ಡೆಲಿವರಿ ಪಾಲುದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಕಾರ್ಮಿಕ ಸಚಿವ ಮನ್ಸೂಖ್ ಮಾಂಡವಿಯಾ ಅವರ ಹಸ್ತಕ್ಷೇಪದ ನಂತರ, ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ತನ್ನ ಪ್ರಸಿದ್ಧ ‘10 ನಿಮಿಷ ಡೆಲಿವರಿ’ ಘೋಷಣೆಯನ್ನು ತನ್ನ ಎಲ್ಲಾ ಬ್ರ್ಯಾಂಡ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಿದೆ.

ಕಾರ್ಮಿಕ ಸಚಿವ ಮನ್ಸೂಖ್ ಮಾಂಡವಿಯಾ ಅವರು ಬ್ಲಿಂಕಿಟ್, ಝೆಪ್ಟೋ, ಸ್ವಿಗ್ಗಿ ಮತ್ತು ಜೊಮ್ಯಾಟೊ ಸೇರಿದಂತೆ ಪ್ರಮುಖ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಡೆಲಿವರಿ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಾದ ಸಮಯ ಮಿತಿಗಳನ್ನು ತೆಗೆದುಹಾಕುವಂತೆ ಸಲಹೆ ನೀಡಿದ್ದರು.

ಅತಿ ಆಕ್ರಮಣಕಾರಿ ಸಮಯ ಮಿತಿಗಳು ಡೆಲಿವರಿ ಪಾಲುದಾರರ ಮೇಲೆ ಅನಗತ್ಯ ಒತ್ತಡ ಉಂಟುಮಾಡುತ್ತವೆ ಮತ್ತು ರಸ್ತೆ ಅಪಘಾತಗಳ ಅಪಾಯ ಹೆಚ್ಚಿಸುತ್ತವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದರ ಪರಿಣಾಮವಾಗಿ ಕಂಪನಿಗಳು ತಮ್ಮ ಬ್ರ್ಯಾಂಡ್ ಜಾಹೀರಾತುಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಹಾಗೂ ಇತರ ಪ್ರಚಾರಗಳಲ್ಲಿ ಡೆಲಿವರಿ ಸಮಯದ ಭರವಸೆಗಳನ್ನು ತೆಗೆದುಹಾಕಲು ಒಪ್ಪಿಗೆ ನೀಡಿವೆ ಎಂದು ಮೂಲಗಳು ತಿಳಿಸಿವೆ.

ತ್ವರಿತ-ವಾಣಿಜ್ಯ ಮಾದರಿಗಳ ಪರಿಣಾಮಗಳ ಕುರಿತು ಪರಿಶೀಲನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದ್ದು, ವೇಗದ ವಿತರಣೆಗಾಗಿ ಕಾರ್ಮಿಕರ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟ ಸಂದೇಶ ನೀಡಿದೆ.

ಕೇವಲ ಎರಡು ನಿಮಿಷದಲ್ಲಿ ರಾಜಕೀಯ ಚರ್ಚೆ ಇಲ್ಲದೇ ಮುಕ್ತಾಯವಾಯ್ತು ಸಿದ್ದು–ಡಿಕೆಶಿ–ರಾಹುಲ್ ಭೇಟಿ

0

ಮೈಸೂರು: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದರೂ, ಈ ಭೇಟಿ ಸಂಪೂರ್ಣವಾಗಿ ತುರ್ತು ಸಂಚಾರದಂತೆಯೇ ಮುಗಿದುಹೋಯಿತು. ಕೇವಲ 15 ನಿಮಿಷಗಳ ಕಾಲ ಮಾತ್ರ ಏರ್‌ಪೋರ್ಟ್‌ನಲ್ಲಿ ಉಳಿದ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಲು ಸಿಕ್ಕ ಸಮಯ ಕೇವಲ ಎರಡು ನಿಮಿಷ ಮಾತ್ರ.

ಇಂದು ಮಧ್ಯಾಹ್ನ 2:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ರಾಹುಲ್ ಗಾಂಧಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗಿದರು. 2:35ಕ್ಕೆ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ಗುಡ್ಲುರಿಗೆ ಹೊರಟರು. ಸಂಜೆ 5:45ಕ್ಕೆ ಮತ್ತೆ ಮೈಸೂರಿಗೆ ವಾಪಸ್ ಆಗಿ, ಸಂಜೆ 6 ಗಂಟೆಗೆ ದೆಹಲಿಗೆ ವಿಶೇಷ ವಿಮಾನದಲ್ಲಿ ಮರಳಲಿದ್ದಾರೆ.

ಸಿಎಂ ಮತ್ತು ಡಿಸಿಎಂ ರಾಹುಲ್ ಗಾಂಧಿಯನ್ನು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಆದರೆ ಅಧಿಕಾರ ಹಂಚಿಕೆ ಗೊಂದಲ ಆರಂಭವಾದ ಬಳಿಕ ಮೊದಲ ಬಾರಿಗೆ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಭೇಟಿಯಾದರೂ, ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಉಭಯ ಕುಶಲೋಪರಿಗಷ್ಟೇ ಮಾತುಕತೆ ಸೀಮಿತವಾಯಿತು.

ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಮೈಸೂರಿನಲ್ಲಿ ಡಿಕೆಶಿ ಸಂಪೂರ್ಣವಾಗಿ ಏಕಾಂಗಿಯಾಗಿ ಸಂಚರಿಸಿದರು. ರಾಹುಲ್ ಗಾಂಧಿಯನ್ನು ಹೆಲಿಕಾಪ್ಟರ್ ಹತ್ತಿಸಿದ ಬಳಿಕ ಸಿಎಂ ಮತ್ತು ಡಿಸಿಎಂ ಒಟ್ಟಿಗೆ ಹೊರಟಿಲ್ಲ. ಸಿಎಂ ಜೊತೆ ಸೇರದೆ, ಡಿಕೆಶಿ ದೂರ ನಡೆದು ಪ್ರತ್ಯೇಕವಾಗಿ ಕಾರ್ ಹತ್ತಿ ಹೊರಟ ದೃಶ್ಯಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಈ ನಡುವೆ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಮೈಸೂರು ಅರಮನೆ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು. ಸಚಿವ ಕೆ.ಜೆ. ಜಾರ್ಜ್ ಆನೆ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು.

ಬೀದಿ ನಾಯಿಗಳ ಕಡಿತದ ಸಾವು–ಗಾಯ ಪ್ರಕರಣಗಳಿಗೆ ಸರ್ಕಾರವೇ ಪರಿಹಾರ ನೀಡಬೇಕು: ಸುಪ್ರೀಂ

0

ನವದೆಹಲಿ: ಬೀದಿನಾಯಿಗಳ ಕಡಿತದಿಂದ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ಸರ್ಕಾರವೇ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಮಕ್ಕಳು ಮತ್ತು ವೃದ್ಧರು ಬೀದಿನಾಯಿಗಳ ದಾಳಿಯಿಂದ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಯಾರು ಹೊಣೆಗಾರರು ಎಂಬ ಗಂಭೀರ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ, 9 ವರ್ಷದ ಮಗುವಿನ ಸಾವನ್ನು ಉಲ್ಲೇಖಿಸಿ, “ನಾಯಿ ಪ್ರಿಯರ ಸಂಘಟನೆಗಳು ಪೋಷಿಸುವ ಬೀದಿನಾಯಿಗಳಿಂದ ಮಗು ಸಾವನ್ನಪ್ಪಿದರೆ ಹೊಣೆ ಯಾರದ್ದು?” ಎಂದು ಪ್ರಶ್ನಿಸಿತು. “ನ್ಯಾಯಾಲಯ ಕಣ್ಣು ಮುಚ್ಚಿ ಎಲ್ಲವೂ ನಡೆಯಲು ಬಿಡಬೇಕೇ?” ಎಂದು ಪೀಠ ಕಠಿಣವಾಗಿ ಕೇಳಿತು.

“ಕೇವಲ ನಾಯಿಗಳ ಮೇಲಷ್ಟೇ ಕನಿಕರವೇಕೆ? ಮಾನವರ ಮೇಲೆ ನಡೆಯುವ ದಾಳಿಗಳ ಬಗ್ಗೆ ಏಕೆ ಮೌನ?” ಎಂದು ಪ್ರಶ್ನಿಸಿದ ನ್ಯಾಯಾಲಯ, ನಾಯಿ ಕಡಿತದಿಂದ ಉಂಟಾಗುವ ಸಾವು–ಗಾಯಗಳಿಗೆ ರಾಜ್ಯ ಸರ್ಕಾರ ಪರಿಹಾರ ಪಾವತಿಸಬೇಕು ಎಂದು ತಿಳಿಸಿದೆ. ಜೊತೆಗೆ, ನಾಯಿ ಮಾಲೀಕರು ಮತ್ತು ಅವುಗಳನ್ನು ಪ್ರತಿನಿಧಿಸುವ ಸಂಸ್ಥೆಗಳ ಮೇಲೂ ಜವಾಬ್ದಾರಿ ನಿಗದಿಪಡಿಸಿ ಪರಿಹಾರ ವಿಧಿಸಲಾಗುತ್ತದೆ ಎಂದು ಹೇಳಿದೆ.

ನಾಯಿಗಳಿಗೆ ಆಹಾರ ನೀಡಲು ಅಥವಾ ಆರೈಕೆ ಮಾಡಲು ಬಯಸುವವರು ತಮ್ಮ ಸ್ವಂತ ಆವರಣದಲ್ಲೇ ಅಥವಾ ಮನೆಯಲ್ಲೇ ಮಾಡಬೇಕು. ಅವುಗಳನ್ನು ಬೀದಿಗಳಲ್ಲಿ ಸುತ್ತಾಡಲು ಬಿಡುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಯಾಕೆ ಎಂಬ ಪ್ರಶ್ನೆಯನ್ನು ಪೀಠ ಮುಂದಿಟ್ಟಿತು.

ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಚಾರಣೆ ವೇಳೆ ಇನ್ನಷ್ಟು ಗಂಭೀರ ಪ್ರಶ್ನೆಗಳನ್ನು ಎತ್ತಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಹಿಂದಿನ ವಿಚಾರಣೆಯಲ್ಲಿ ನಾಯಿಗಳ ಮೇಲಿನ ಕ್ರೌರ್ಯ ವೀಡಿಯೊಗಳನ್ನು ವೀಕ್ಷಿಸಲು ನಿರಾಕರಿಸಿದ್ದನ್ನು ನೆನಪಿಸಿಕೊಂಡ ನ್ಯಾಯಾಲಯ, ಮಕ್ಕಳು ಮತ್ತು ವೃದ್ಧರ ಮೇಲೆ ನಾಯಿಗಳ ದಾಳಿಯನ್ನು ತೋರಿಸುವ ವೀಡಿಯೊಗಳೂ ಇದ್ದವೆ ಎಂಬುದನ್ನು ಗಮನಿಸಿತು.

ಪ್ರಾಂಶುಪಾಲನಿಂದ ದಲಿತ ಉಪನ್ಯಾಸಕಿಗೆ ಕಿರುಕುಳ ಆರೋಪ: 21 ದಿನಗಳಾದರೂ ಕ್ರಮ ಕೈಗೊಳ್ಳದ ಪೊಲೀಸರು!

0

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಶಿಕ್ಷಣ ಸಂಸ್ಥೆಯೊಳಗೆ ನಡೆದಿದ್ದ ಘಟನೆ ಇದೀಗ ರಾಜ್ಯಮಟ್ಟದಲ್ಲಿ ಆಕ್ರೋಶ ಹುಟ್ಟುಹಾಕಿದೆ. ಎನ್ಇಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ದಲಿತ ಅತಿಥಿ ಉಪನ್ಯಾಸಕಿ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಆರೋಪ ಮಾಡಿದ್ದಾರೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಥಾಪಿತವಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯಲ್ಲೇ ಈ ರೀತಿಯ ಗಂಭೀರ ಆರೋಪ ಕೇಳಿಬಂದಿರುವುದು ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಶ್ನಾರ್ಥಕ ಗುರುತು ಮೂಡಿಸಿದೆ.

ಸಂತ್ರಸ್ತೆಯ ಪ್ರಕಾರ, ಕಾರಿನಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲೇ ಪ್ರಾಂಶುಪಾಲ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಜಾತಿಯನ್ನು ಉಲ್ಲೇಖಿಸಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದೇ ಸಂಸ್ಥೆಯ ಇಬ್ಬರು ಮಹಿಳಾ ಸಿಬ್ಬಂದಿಗಳ ಮೇಲೂ ಜಾತಿ ನಿಂದನೆಯ ಆರೋಪವನ್ನು ಅವರು ಮಾಡಿದ್ದಾರೆ.

ಘಟನೆ ಬಗ್ಗೆ ದೂರು ದಾಖಲಿಸಿ 21 ದಿನಗಳು ಕಳೆದರೂ ಆರೋಪಿ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ. ಪ್ರಾಂಶುಪಾಲನ ಬಂಧನವಾಗಿಲ್ಲ, ಆಡಳಿತ ಮಂಡಳಿ ಮೌನವಾಗಿದೆ. ಇನ್ನೊಂದು ಕಡೆ, ಸಂಸ್ಥೆಯೇ ಸಂತ್ರಸ್ತೆಯನ್ನು ಕೆಲಸದಿಂದ ವಜಾಗೊಳಿಸಿದ್ದು, ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿಗೆ ಅವಳನ್ನು ತಳ್ಳಿದೆ.

ಆರೋಪಿಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.

error: Content is protected !!