Home Blog Page 177

ರೈತರ ಸಂಕಷ್ಟಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕ್ಷೇತ್ರವನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಸೇರಿದಂತೆ ವಿಶೇಷ ನೆರವು ಘೋಷಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಮಳೆಯ ಕೊರತೆಯಿಂದ ಕ್ಷೇತ್ರದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.

ಮಳೆ ಇಲ್ಲದ ಕಾರಣ ಭೂಮಿಯಲ್ಲಿನ ತೇವಾಂಶ ಸಂಪೂರ್ಣವಾಗಿ ಕಳೆದು ಹೋಗಿದ್ದು, ಬೆಳೆಗಳು ನಾಶವಾಗುವ ಹಂತ ತಲುಪಿವೆ. ಬಿತ್ತನೆಗಾಗಿ ಬ್ಯಾಂಕ್‌ಗಳು ಹಾಗೂ ಖಾಸಗಿ ಮೂಲಗಳಿಂದ ಸಾಲ ಪಡೆದು ಬೀಜ, ರಸಗೊಬ್ಬರ ಮತ್ತು ಕೃಷಿ ಚಟುವಟಿಕೆಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ರೈತರಿಗೆ ಇದೀಗ ಸಂಕಷ್ಟ ಎದುರಾಗಿದೆ ಎಂದು ಹೇಳಿದರು.

ಕುಡಿಯುವ ನೀರಿನ ಮೂಲಗಳಾದ ಕೆರೆ, ಕೊಳವೆಬಾವಿಗಳು ಬತ್ತುತ್ತಿರುವುದರಿಂದ ಜಾನುವಾರುಗಳಿಗೆ ನೀರು ಮತ್ತು ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪಶುಗಳನ್ನು ಸಾಕುವುದು ಕಷ್ಟವಾಗಿರುವ ಕಾರಣ ಅನೇಕ ರೈತರು ತಮ್ಮ ಜಾನುವಾರುಗಳನ್ನು ಸಂತೆಗೆ ಕೊಂಡೊಯ್ದು ಮಾರಾಟ ಮಾಡುವ ಅನಿವಾರ್ಯತೆ ಎದುರಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರ ಸಂಕಷ್ಟವನ್ನು ಮನಗಂಡು ಸರ್ಕಾರ ತಕ್ಷಣವೇ ಶಿರಹಟ್ಟಿ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸುವುದರ ಜೊತೆಗೆ ಬೆಳೆಹಾನಿಯ ಸಮಗ್ರ ಸಮೀಕ್ಷೆ ನಡೆಸಿ ಪರಿಹಾರ ವಿತರಣೆ, ಬೆಳೆ ಸಾಲ ಮರುಪಾವತಿಗೆ ಕಾಲಾವಕಾಶ, ಬಡ್ಡಿ ಮನ್ನಾ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವ ವಿಶೇಷ ಪ್ಯಾಕೇಜ್ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ವಿಶೇಷ ಅನುದಾನ ಬಿಡುಗಡೆ ಮಾಡಿ ಶಿರಹಟ್ಟಿ ಕ್ಷೇತ್ರದ ರೈತರ ಹಿತರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನ ಕಾರ್ಯದರ್ಶಿಗೆ ಶಾಸಕರು ಮನವಿ ಸಲ್ಲಿಸಿದರು.

“ಮಳೆಯ ಅಭಾವದಿಂದ ಶಿರಹಟ್ಟಿ ಕ್ಷೇತ್ರದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ವಿಳಂಬ ಮಾಡದೆ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಸೇರಿದಂತೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.”

– ಡಾ. ಚಂದ್ರು ಲಮಾಣಿ, ಶಾಸಕ, ಶಿರಹಟ್ಟಿ ಕ್ಷೇತ್ರ

ಗ್ರಾಮೀಣರಿಗೆ ಉಚಿತ ನೇತ್ರ ತಪಾಸಣೆ; 30 ಮಂದಿಗೆ ಕಣ್ಣಿನ ಪೊರೆ ಪತ್ತೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ದೃಷ್ಟಿಯನ್ನು ಕಾಪಾಡಿಕೊಳ್ಳಬೇಕು ಎಂದು ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುತ್ತಣ್ಣ ಚೌಡರೆಡ್ಡಿ ಹೇಳಿದರು.

ಸಮೀಪದ ಅಬ್ಬಿಗೇರಿಯಲ್ಲಿ ನವಜ್ಯೋತಿ ಗ್ರಾಮೀಣಾಭಿವೃದ್ಧಿ ವಿವಿಧೋದ್ದೇಶ ಹಾಗೂ ಶಿಕ್ಷಣ ಸೇವಾ ಸಂಸ್ಥೆ, ಹುಬ್ಬಳ್ಳಿಯ ಜಯಪ್ರಿಯಾ ಫೌಂಡೇಶನ್, ಕರ್ನಾಟಕ ರಾಜ್ಯ ರೈತ ಸಂಘದ ರೋಣ ತಾಲೂಕು ಹಾಗೂ ಅಬ್ಬಿಗೇರಿ ಗ್ರಾಮ ಘಟಕ ಮತ್ತು ಗದಗ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಬಡ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸೆ ಸುಲಭವಾಗಿ ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳು ಒಗ್ಗೂಡಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಬಡವರ ಕಣ್ಣಿಗೆ ಬೆಳಕು ನೀಡುವ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ರೋಣ ತಾಲೂಕು ಅಧ್ಯಕ್ಷ ಸಂಗಣ್ಣ ಪವಾಡಶೆಟ್ಟಿ ಮಾತನಾಡಿ, ರೈತರು ದಿನವಿಡೀ ಬಿಸಿಲು, ಧೂಳು ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ದುಡಿಯುವುದರಿಂದ ಕಣ್ಣಿನ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಆರ್ಥಿಕ ಸಮಸ್ಯೆಯಿಂದ ಅನೇಕರು ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಉಚಿತ ಶಿಬಿರಗಳು ಗ್ರಾಮೀಣ ಜನರಿಗೆ ವರದಾನವಾಗಿವೆ ಎಂದು ಹೇಳಿದರು.

ಶಿಬಿರದಲ್ಲಿ ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಚಂದ್ರು, ಶ್ರೀಕಾಂತ ರೋಣ ಹಾಗೂ ವೈದ್ಯಕೀಯ ತಂಡ ಸುಮಾರು 150 ಮಂದಿಯ ನೇತ್ರ ತಪಾಸಣೆ ನಡೆಸಿತು. ತಪಾಸಣೆ ವೇಳೆ 30 ಮಂದಿಯಲ್ಲಿ ಕಣ್ಣಿನ ಪೊರೆ ಪತ್ತೆಯಾಗಿದ್ದು, ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು.

ಗದಗ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ವೀರೇಶ ಕಲಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಸವರಾಜ ಪಲ್ಲೇದ, ವಿನಾಯಕ ಜೋಶಿ, ವೀರಯ್ಯ ಅರಳಿಕಟ್ಟಿ, ಸಂಗಣ್ಣ ದಂಡಿನ, ಶಿವಲಿಂಗಪ್ಪ ತಿಪಶೆಟ್ಟಿ, ಬಸನಗೌಡ್ರ ಚನ್ನಪ್ಪಗೌಡ್ರ, ಶಂಕ್ರಪ್ಪ ಆರೇರ, ಬುದ್ದಿವಂತಪ್ಪ ಉಪಾಧ್ಯ, ಸೋಮಣ್ಣ ಕಣವಿ, ಕಳಕಪ್ಪ ನೀರಲೋಟಿ, ಮಲ್ಲಾರಪ್ಪ ಚವಡಿ, ಮಾದೇವಿ ಅಸೂಟಿ, ರಮೇಶ ಇಮ್ರಾಪುರ, ಮಲ್ಲಪ್ಪ ಎಂಡಿಗೇರಿ, ಮಲ್ಲಪ್ಪ ನೀರಲೋಟಿ, ಪ್ರಕಾಶ ಮಾರನಬಸರಿ, ಮಹೇಶ ಚವಡಿ, ಶರಣಪ್ಪ ಹಳ್ಳಿ, ಶರಣಪ್ಪ ಬಸವರಡ್ಡೇರ, ಬಸವರಾಜ ಬಸವರಡ್ಡೇರ, ಶಿವಶಿಂಪರ, ವೀರಪ್ಪ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ದೃಷ್ಟಿ ಮಾನವನ ಬದುಕಿನ ಅಮೂಲ್ಯ ಸಂಪತ್ತು. ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ.”

– ಮುತ್ತಣ್ಣ ಚೌಡರೆಡ್ಡಿ, ಅಧ್ಯಕ್ಷರು, ಗದಗ ಜಿಲ್ಲಾ ರೈತ ಸಂಘ

ಶಿರಹಟ್ಟಿ ಕ್ಷೇತ್ರದಲ್ಲಿ ಎಸ್‌ಐಆರ್‌ಗೆ ಚುರುಕು: ಶೇ.75ಕ್ಕೂ ಅಧಿಕ ಪ್ರಗತಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕುಗಳಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ವೇಗವಾಗಿ ಸಾಗುತ್ತಿದ್ದು, ಈಗಾಗಲೇ ಶೇ.75ಕ್ಕೂ ಅಧಿಕ ಪ್ರಗತಿ ಸಾಧಿಸಲಾಗಿದೆ ಎಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ತಿಳಿಸಿದರು.

ಶುಕ್ರವಾರ ಶಿರಹಟ್ಟಿಯ ತಹಸೀಲ್ದಾರ್ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಶಿರಹಟ್ಟಿ ತಾಲೂಕಿನ 88, ಲಕ್ಷ್ಮೇಶ್ವರ ತಾಲೂಕಿನ 102 ಹಾಗೂ ಮುಂಡರಗಿ ತಾಲೂಕಿನ 62 ಸೇರಿ ಒಟ್ಟು 252 ಮತಗಟ್ಟೆಗಳಿದ್ದು, 2,30,268 ಮತದಾರರ ಪೈಕಿ 1,74,275 ಮತದಾರರ ಮಾಹಿತಿಯನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಇದರೊಂದಿಗೆ ಕ್ಷೇತ್ರದಲ್ಲಿ ಶೇ.75ಕ್ಕೂ ಅಧಿಕ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಇದಲ್ಲದೆ ಶಿರಹಟ್ಟಿ ತಾಲೂಕಿನ 13, ಲಕ್ಷ್ಮೇಶ್ವರ ತಾಲೂಕಿನ 22 ಹಾಗೂ ಮುಂಡರಗಿ ತಾಲೂಕಿನ 14 ಸೇರಿ ಒಟ್ಟು 49 ಮತಗಟ್ಟೆಗಳಲ್ಲಿ ಶೇ.100ರಷ್ಟು ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ನಗರ ಪ್ರದೇಶಗಳಲ್ಲಿ ಕೆಲವು ತಾಂತ್ರಿಕ ಹಾಗೂ ಕಾರ್ಯನಿರ್ವಹಣೆಯ ಸಮಸ್ಯೆಗಳು ಕಂಡುಬಂದಿದ್ದು, ಅವುಗಳನ್ನು ಶೀಘ್ರ ಸರಿಪಡಿಸುವಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸೂಚಿಸಲಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಬಿಎಲ್‌ಒಗಳು ಮನೆ ಮನೆಗೆ ತೆರಳಿ ಈಗಾಗಲೇ ವಿತರಿಸಿರುವ ಎನ್ಯುಮರೇಷನ್ ಫಾರ್ಮ್‌ಗಳನ್ನು ಸಂಗ್ರಹಿಸುತ್ತಿದ್ದು, ಬಾಕಿ ಉಳಿದಿರುವ ಪ್ರಕ್ರಿಯೆಯನ್ನೂ ಶೀಘ್ರ ಪೂರ್ಣಗೊಳಿಸಲಾಗುವುದು. ಮತದಾರರ ಅನುಕೂಲಕ್ಕಾಗಿ ಫಾರ್ಮ್ ಸಲ್ಲಿಕೆಗೆ ಆಗಸ್ಟ್ 8ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಲಕ್ಷ್ಮೇಶ್ವರ ತಹಸೀಲ್ದಾರ್ ಎಂ. ಧನಂಜಯ, ಮುಂಡರಗಿ ತಹಸೀಲ್ದಾರ್ ಯರಿಸ್ವಾಮಿ, ಕಾಂಗ್ರೆಸ್ ಮುಖಂಡ ಎಚ್.ಡಿ. ಮಾಗಡಿ, ಬಿಜೆಪಿ ಮುಖಂಡ ಶಂಕರ ಮರಾಠೆ, ಜೆಡಿಎಸ್ ಮುಖಂಡ ಶರಣಪ್ಪ ಹೂಗಾರ, ಕಾಂಗ್ರೆಸ್ ಮುಖಂಡ ಡಿ.ಡಿ. ಮೊರನಾಳ, ಎಸ್‌ಡಿಪಿಐ ಪ್ರತಿನಿಧಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಬರದಿಂದ ಕಂಗೆಟ್ಟ ಮುಂಡರಗಿ: ಕೆರೆಗಳಿಗೆ ನೀರು ಹರಿಸಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟ ಹಿನ್ನೆಲೆಯಲ್ಲಿ ಮುಂಡರಗಿ ತಾಲೂಕಿನಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆಗಳ ಮೂಲಕ ಡಂಬಳ ಸೇರಿದಂತೆ ಸುತ್ತಮುತ್ತಲಿನ ಕೆರೆಗಳಿಗೆ ತಕ್ಷಣ ನೀರು ಹರಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ವೈ.ಎನ್. ಗೌಡರ ಆಗ್ರಹಿಸಿದರು.

ಡಂಬಳ ಹೋಬಳಿಯ ಡೋಣಿ ಗ್ರಾಮದ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆಯನ್ನು ಗುರುವಾರ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಯೋಜನೆ ನಿರ್ಮಾಣವಾಗಿದ್ದರೂ ಮುಂಡರಗಿ ತಾಲೂಕಿನ ರೈತರ ಜಮೀನುಗಳಿಗೆ ನೀರು ತಲುಪಿಲ್ಲ. ಪರಿಣಾಮ ಭೂಮಿ ಹಸಿರಾಗುವ ಬದಲು ರೈತರು ವರ್ಷದಿಂದ ವರ್ಷಕ್ಕೆ ಬರದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೂವಿನಹಡಗಲಿ ತಾಲೂಕಿನ ಬಲದಂಡೆ ಕಾಲುವೆ ಮೂಲಕ 2012ರಿಂದಲೇ ಸುಮಾರು 48 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದ್ದು, 22 ಕೆರೆಗಳನ್ನು ತುಂಬಿಸಲಾಗಿದೆ. ಆದರೆ ಡಂಬಳ, ತಾಮ್ರಗುಂಡಿ, ಜಂತಲಿ, ಶಿರೂರು, ಪೇಠಾಲೂರು ಸೇರಿದಂತೆ ಈ ಭಾಗದ ಕೆರೆಗಳಿಗೆ ನೀರು ಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ತಾಮ್ರಗುಂಡಿ–ಮೇವುಂಡಿ ಮಧ್ಯೆ ಕಾಲುವೆ ಕಳಪೆ ಕಾಮಗಾರಿಯಿಂದ ಹಾನಿಗೊಳಗಾಗಿದ್ದು, ತಕ್ಷಣ ದುರಸ್ತಿ ಕೈಗೊಂಡು ಕೆರೆಗಳಿಗೆ ನೀರು ಹರಿಸಬೇಕು. ಮಳೆ ಕೈಕೊಟ್ಟಿರುವುದರಿಂದ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಾವರಿ ಕಲ್ಪಿಸುವ ಬದಲು ಸೂಕ್ಷ್ಮ ಹನಿ ನೀರಾವರಿ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಲಾಭ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಡಂಬಳ, ಪೇಠಾಲೂರು, ಕದಾಂಪುರ, ಹಿರೇವಡ್ಡಟ್ಟಿ ಸೇರಿದಂತೆ ಹಲವು ಗ್ರಾಮಗಳು ನೀರಾವರಿ ವ್ಯಾಪ್ತಿಗೆ ಬರಬೇಕಾಗಿದ್ದರೂ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ರೈತರು ತಮ್ಮ ಜಮೀನುಗಳನ್ನು ಸೌರ ವಿದ್ಯುತ್ ಹಾಗೂ ಗಾಳಿ ವಿದ್ಯುತ್ ಯೋಜನೆಗಳಿಗೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಭೂಮಿಯ ಮಾಲೀಕರಾಗಿದ್ದರೂ ಇಂದು ಕೂಲಿ ಕಾರ್ಮಿಕರಾಗುವ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂಡರಗಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ಒಣ ಬೇಸಾಯ ಪ್ರದೇಶಕ್ಕೆ ಪ್ರತಿ ಹೆಕ್ಟೇರ್‌ಗೆ ₹13 ಸಾವಿರ ಹಾಗೂ ನೀರಾವರಿ ಪ್ರದೇಶಕ್ಕೆ ₹26 ಸಾವಿರ ಪರಿಹಾರ ನೀಡಬೇಕು. ಜೊತೆಗೆ ಕೆರೆಗಳಿಗೆ ನೀರು ಹರಿಸಿ, ಸೌರ ವಿದ್ಯುತ್ ಉತ್ಪಾದನೆಯ ಆದಾಯದಲ್ಲಿ ರೈತರಿಗೆ ಕನಿಷ್ಠ ಶೇ.25ರಷ್ಟು ಪಾಲು ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕುಬೇರಪ್ಪ ಬಂಡಿ, ಚಂದ್ರು ಯಳಮಲಿ, ಮಂಜುನಾಥ ಸಂಜೀವಣ್ಣವರ, ಬಸವರಾಜ ಬಂಡಿ, ಉಮೇಶ ಹೆಗ್ಗಪ್ಪನವರ, ಎಚ್.ಬಿ. ಕುರಿ, ಶರಣಪ್ಪ ಕಂಬಳಿ, ಮೈಲಾರಪ್ಪ ಕವಲೂರ, ಹುಚ್ಚಪ್ಪ ಹಂದ್ರಾಳ, ಸಿದ್ದಪ್ಪ ಹಲವಾಗಲಿ, ಗುಡದಪ್ಪ ಶಿರಹಟ್ಟಿ, ಮಂಜಪ್ಪ ಶಿರಹಟ್ಟಿ, ಗುಡದಪ್ಪ ಕುರಿ, ಮುತ್ತಪ್ಪ ಕಲ್‌ವಂಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಸಾವಿರ ಕೋಟಿ ರೂಪಾಯಿ ವೆಚ್ಚದ ಶಿಂಗಟಾಲೂರ ಏತ ನೀರಾವರಿ ಯೋಜನೆಯಿಂದ ಈ ಭಾಗದ ರೈತರಿಗೆ ನೀರು ಸಿಗದಿರುವುದು ದುರಂತ. ಕೆರೆಗಳಿಗೆ ತಕ್ಷಣ ನೀರು ಹರಿಸಿ, ಮುಂಡರಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ವಿಶೇಷ ಪರಿಹಾರ ನೀಡಬೇಕು.”

– ವೈ.ಎನ್. ಗೌಡರ, ಅಧ್ಯಕ್ಷರು, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ

ಫಾರ್ಮ್-3 ವಿತರಣೆಗೆ ವಿಶೇಷ ಅಭಿಯಾನ ನಡೆಸಿ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪುರಸಭೆ ವ್ಯಾಪ್ತಿಯ ಅರ್ಹ ನಿವಾಸಿಗಳಿಗೆ ಫಾರ್ಮ್-3 ವಿತರಣೆಯನ್ನು ವೇಗಗೊಳಿಸಲು ವಿಶೇಷ ಅಭಿಯಾನ ಕೈಗೊಳ್ಳಬೇಕು ಹಾಗೂ ಸಾಮಾನ್ಯ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಗಣೇಶ್, ಸಾಮಾನ್ಯ ಸಭೆಗಳು ಅಪರೂಪಕ್ಕೆ ನಡೆಯುತ್ತಿದ್ದು, ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಸಮರ್ಪಕ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಜೋಗಿ ಹನುಮಂತಪ್ಪ ಮಾತನಾಡಿ, ತಮ್ಮ ವಾರ್ಡ್‌ನಲ್ಲಿ ಬಹುತೇಕ ಕೊಳಗೇರಿ ಪ್ರದೇಶಗಳಿದ್ದು, 20 ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅನೇಕ ಅರ್ಹ ನಿವಾಸಿಗಳಿಗೆ ಇನ್ನೂ ಫಾರ್ಮ್-3 ವಿತರಿಸಿಲ್ಲ. ಈ ಕುರಿತು ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯರಾದ ಬಿ.ಡಿ. ಗಂಗಣ್ಣ, ರಾಜೇಶ್ ಬ್ಯಾಡಗಿ, ಜನ್ನು ನಾಗರಾಜ್ ಹಾಗೂ ಸುರೇಶ್ ಬಣಕಾರ್ ಮಾತನಾಡಿ, ಫಾರ್ಮ್-3 ವಿತರಣೆಗೆ ವಿಶೇಷ ಅಭಿಯಾನ ಹಮ್ಮಿಕೊಂಡು ಅರ್ಹ ಫಲಾನುಭವಿಗಳಿಗೆ ದಾಖಲೆಗಳನ್ನು ವಿತರಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಯನ್ನು ದೀರ್ಘ ಸಮಯ ಓದಲಾಗುತ್ತಿದ್ದ ವೇಳೆ ಸದಸ್ಯ ಮರಿ ರಾಮಣ್ಣ ಆಕ್ಷೇಪ ವ್ಯಕ್ತಪಡಿಸಿ, ಹಳೆಯ ದಾಖಲೆಗಳನ್ನು ಓದುತ್ತಲೇ ಸಮಯ ವ್ಯರ್ಥ ಮಾಡಬಾರದು ಎಂದು ಅಭಿಪ್ರಾಯಪಟ್ಟರು.

ಕಳೆದ ಆಗಸ್ಟ್‌ನಲ್ಲಿ ಸಾಮಾನ್ಯ ಸಭೆ, ಏಪ್ರಿಲ್‌ನಲ್ಲಿ ಬಜೆಟ್ ಸಭೆ ನಡೆದಿದ್ದು, ಅದರ ಬಳಿಕ ಇದೀಗ ಸಭೆ ನಡೆಯುತ್ತಿದೆ. ನಿಯಮದಂತೆ ಪ್ರತಿ ತಿಂಗಳು ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಗಣೇಶ್, ಬಿ.ಡಿ. ಗಂಗಣ್ಣ, ಜೋಗಿ ಹನುಮಂತಪ್ಪ, ನವೀನ್ ಹಾಗೂ ಜನ್ನು ನಾಗರಾಜ್ ಆಗ್ರಹಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಗೈರುಹಾಜರಿಯ ಬಗ್ಗೆಯೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷೆ ರೇಷ್ಮಾ ಸಿಕಂದರ್, ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಉಪಾಧ್ಯಕ್ಷೆ ನೇತ್ರಾವತಿ ಹುಚ್ಚಪ್ಪ, ಸದಸ್ಯರಾದ ಅಂಬಿಕಾ ದೇವಿಂದ್ರಪ್ಪ, ಮಲ್ಲೇಶ್ವರಿ ಭರತ್, ಚೆನ್ನಮ್ಮ ವಿಜಯಕುಮಾರ್, ಖಾಜಾ ಬನ್ನಿ ಅಲ್ಲಾಭಕ್ಷಿ, ಮಂಜುಳಾ ಕೃಷ್ಣ ನಾಯ್ಕ್, ನಾಮನಿರ್ದೇಶಿತ ಸದಸ್ಯರಾದ ದಾವಣಗೆರೆ ಕೊಟ್ರೇಶ್, ಬಾರಿಕರ ಮಂಜುನಾಥ್, ಬಾಳಪ್ಪ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.

“ಪುರಸಭೆ ವ್ಯಾಪ್ತಿಯ ಎಲ್ಲ ಅರ್ಹ ನಿವಾಸಿಗಳಿಗೆ ಫಾರ್ಮ್-3 ವಿತರಿಸಲು ವಿಶೇಷ ಅಭಿಯಾನ ಕೈಗೊಳ್ಳಲಾಗುವುದು.”

– ರೇಷ್ಮಾ ಸಿಕಂದರ್, ಅಧ್ಯಕ್ಷೆ, ಹಗರಿಬೊಮ್ಮನಹಳ್ಳಿ ಪುರಸಭೆ

ನಿವೃತ್ತಿಯ ಬಳಿಕವೂ ನಿಲ್ಲದ ಮಕ್ಕಳ ಮೇಲಿನ ಮಮಕಾರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸೇವೆಯಿಂದ ನಿವೃತ್ತರಾದ ಬಳಿಕವೂ ಶಾಲೆ ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರೀತಿಯನ್ನು ಉಳಿಸಿಕೊಂಡಿರುವ ಪಟ್ಟಣದ ಬಸ್ತಿಬಣದ ಸಿ.ಎಸ್. ಪಿಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ವಿ.ಕೆ. ಪೂಜಾರ ಅವರು ಶಾಲೆಯ 95ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಶನಿವಾರ ಧರಿಸುವ ಸಮವಸ್ತ್ರಗಳನ್ನು ವಿತರಿಸಿ ಮಾದರಿಯಾದರು.

ಶಾಲೆಯಲ್ಲಿ ಗುರುವಾರ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಗೌರವವಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಾಲೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೂ ವಿದ್ಯಾರ್ಥಿಗಳ ಮೇಲಿನ ಮಮಕಾರದಿಂದ ಸಾವಿರಾರು ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ ವಿತರಿಸಿರುವ ವಿ.ಕೆ. ಪೂಜಾರ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕಿ ವಿ.ಕೆ. ಪೂಜಾರ ಮಾತನಾಡಿ, ಇದೇ ಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸುವ ಅವಕಾಶ ನೀಡಿದ ಶಿಕ್ಷಣ ಇಲಾಖೆ, ಎಸ್‌ಡಿಎಂಸಿ ಹಾಗೂ ಊರಿನ ಹಿರಿಯರಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡುವುದು ಶಿಕ್ಷಕರಿಗೆ ಸಿಗುವ ಅತಿದೊಡ್ಡ ಬಹುಮಾನ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಆರ್.ಬಿ. ಜೋಶಿ, ದೈಹಿಕ ಶಿಕ್ಷಣಾಧಿಕಾರಿ ಎಲ್.ಟಿ. ಪಾಟೀಲ, ಸಿಆರ್‌ಪಿ ಉಮೇಶ ನೇಕಾರ, ಮುಖ್ಯೋಪಾಧ್ಯಾಯ ಕೆ.ಡಿ. ಕಗ್ಗಲಗೌಡ್ರ, ನಾಗರಾಜ ಪೂಜಾರ, ಡಿ.ಎನ್. ದೊಡ್ಡಮನಿ, ರಾಜೇಶ್ವರಿ ಅಡರಕಟ್ಟಿ, ಎನ್.ಎಸ್. ಪಾಟೀಲ, ಎಂ.ಪಿ. ಹರ್ಲಾಪೂರ, ಶಿವಲಿಂಗಯ್ಯ ಹೊತಗಿಮಠ, ದಿಗಂಬರ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಶಿಕ್ಷಕ ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾನೆ ಎಂಬುದಕ್ಕಿಂತ, ವಿದ್ಯಾರ್ಥಿಗಳ ಜೀವನದಲ್ಲಿ ಎಂತಹ ಬದಲಾವಣೆ ತಂದಿದ್ದಾನೆ ಎಂಬುದೇ ಮುಖ್ಯ. ವಿ.ಕೆ. ಪೂಜಾರ ಅವರು ನಿವೃತ್ತಿಯ ಬಳಿಕವೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಮಾದರಿ ಕೆಲಸ ಮಾಡಿದ್ದಾರೆ.”

– ಶಿವರಾಜ ಸೀಮಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ

ಒಳರೋಗಿಗಳಿಗೆ ಆಸರೆಯಾದ ಲಯನ್ಸ್ ಕ್ಲಬ್

0

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜಮುಖಿ ಸೇವಾ ಕಾರ್ಯಗಳ ಭಾಗವಾಗಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ವತಿಯಿಂದ ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಗತ್ಯವಿರುವ ಆರು ಒಳರೋಗಿಗಳಿಗೆ ವಾಕರ್‌ಗಳನ್ನು ಹಾಗೂ ಸುಮಾರು 100ಕ್ಕೂ ಹೆಚ್ಚು ರೋಗಿಗಳಿಗೆ ಬ್ರೆಡ್ ಮತ್ತು ಬಿಸ್ಕಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತಿರುವ ಲಯನ್ಸ್ ಕ್ಲಬ್‌ನ ಸೇವಾ ಮನೋಭಾವ ಶ್ಲಾಘನೀಯವಾಗಿದ್ದು, ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ ವಾರಕರ, ಕಾರ್ಯದರ್ಶಿ ಲಿಂಗರಾಜ ತೋಟದ, ಖಜಾಂಚಿ ರೇಣುಕಾಪ್ರಸಾದ ಶಿಗ್ಲಿಮಠ, ಲಯನ್ಸ್ ಮಹಿಳಾ ಘಟಕದ ಅಧ್ಯಕ್ಷೆ ಅಮೃತಾ ವಾರಕರ, ಕಾರ್ಯದರ್ಶಿ ಅಪರ್ಣಾ ತೋಟದ, ಖಜಾಂಚಿ ಪ್ರಿಯಾ ಶಿಗ್ಲಿಮಠ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ವಿನಾಯಕ ಪಂಚಗಾರ, ಡಾ. ಮಹಾಂತೇಶ ಪಾಟೀಲ, ಡಾ. ರಾಜಶೇಖರ ಪಾಟೀಲ, ರಾಜು ವೇರ್ಣೆಕರ, ರಮೇಶ ಶಿಗ್ಲಿ, ಅನಂತ ಅಮೀಚಂದ, ಸಂತೋಷ ಕಬಾಡರ, ವೀರಣ್ಣ ಪಟ್ಟಣಶೆಟ್ಟಿ, ನಿತೀಶ್ ಸಾಲಿ, ದತ್ತು ಬೇವಿನಕಟ್ಟಿ, ಶಿವಪ್ರಭು ನೀಲಗುಂದ, ಗೌತಮ್ ಗಡ್ಡಿ, ನೇತ್ರಾ ಗಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಅಗತ್ಯವಿರುವವರಿಗೆ ನೆರವಾಗುತ್ತಿರುವ ಲಯನ್ಸ್ ಕ್ಲಬ್‌ನ ಕಾರ್ಯ ಶ್ಲಾಘನೀಯ.”

– ಡಾ. ಬಸವರಾಜ ಬೊಮ್ಮನಹಳ್ಳಿ

ನಿರ್ದೇಶಕರು, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

ದೇಶದ ಅಭಿವೃದ್ಧಿಗೆ ಭಾರತೀಯ ರೈಲ್ವೆಯ ಕೊಡುಗೆ ಅಪಾರ: ಥಾವರ್ ಚಂದ್ ಗೆಹ್ಲೋಟ್

0

ವಿಜಯಸಾಕ್ಷಿ ಸುದ್ದಿ, ಅಳ್ನಾವರ/ಧಾರವಾಡ: ಉತ್ತರ ಕರ್ನಾಟಕದ ಪ್ರಮುಖ ರೈಲು ಜಂಕ್ಷನ್‌ಗಳಲ್ಲಿ ಒಂದಾದ ಅಳ್ನಾವರ ರೈಲು ನಿಲ್ದಾಣ ಈಗ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆ ಅಡಿಯಲ್ಲಿ ₹17.20 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಂಡ ನಿಲ್ದಾಣವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶದಾದ್ಯಂತ 75 ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಿದರು.

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಿಂದ ಭಾರತ ಹೊಸ ಎತ್ತರಕ್ಕೆ ಏರುತ್ತಿದ್ದು, ಹೈಡ್ರೋಜನ್ ರೈಲು ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ ಬಂಟ್ವಾಳ, ಬಾದಾಮಿ, ಕೊಪ್ಪಳ ಹಾಗೂ ಅಳ್ನಾವರ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣಿಕರಿಗೆ ವಿಶ್ವಮಟ್ಟದ ಸೌಲಭ್ಯಗಳನ್ನು ಒದಗಿಸುವ ಮೂಲಕ ರೈಲು ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲಾಗಿದೆ ಎಂದರು.

ಪುನರಾಭಿವೃದ್ಧಿ ಕಾಮಗಾರಿಯಡಿ ನಿಲ್ದಾಣದ ಮುಖ್ಯ ಕಟ್ಟಡ, ಪ್ರವೇಶ ದ್ವಾರ, ವಾಹನ ನಿಲುಗಡೆ ಪ್ರದೇಶ, ಡಿಜಿಟಲ್ ಟಿಕೆಟ್ ಕೌಂಟರ್, ಹವಾನಿಯಂತ್ರಿತ ನಿರೀಕ್ಷಣಾ ಕೊಠಡಿಗಳು, ಮಹಿಳೆಯರಿಗಾಗಿ ಪ್ರತ್ಯೇಕ ಸ್ತನ್ಯಪಾನ ಕೊಠಡಿ, ಎಕ್ಸಿಕ್ಯೂಟಿವ್ ಲೌಂಜ್, ಆಧುನಿಕ ಶೌಚಾಲಯಗಳು ಹಾಗೂ ಹೊಸ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಪ್ರದೀಪ ಶೆಟ್ಟರ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ನೈರುತ್ಯ ರೈಲ್ವೆ ಮಹಾಪ್ರಬಂಧಕ ಅನಂತ್ ಪಿ. ಸೇರಿದಂತೆ ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಹೈಟೆಕ್ ಸೌಲಭ್ಯಗಳ ಹೊಸ ಲೋಕ

ಎರಡು ಲಿಫ್ಟ್‌ಗಳು • 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ • ದಿವ್ಯಾಂಗ ಸ್ನೇಹಿ ರ್ಯಾಂಪ್‌ಗಳು • ಟ್ಯಾಕ್ಟೈಲ್ ಟೈಲ್ಸ್ • ಹವಾನಿಯಂತ್ರಿತ ನಿರೀಕ್ಷಣಾ ಕೊಠಡಿಗಳು • ಡಿಜಿಟಲ್ ಮಾಹಿತಿ ಫಲಕಗಳು • ಉಚಿತ ಹೈ-ಸ್ಪೀಡ್ ವೈ-ಫೈ • ವಿಶಾಲ ಪಾರ್ಕಿಂಗ್ ವ್ಯವಸ್ಥೆ

“ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಿಂದ ದೇಶದ ಸಮಗ್ರ ಪ್ರಗತಿಗೆ ಹೊಸ ವೇಗ ಸಿಕ್ಕಿದೆ. ಭಾರತ ಈಗ ಹೈಡ್ರೋಜನ್ ರೈಲು ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಸಶಕ್ತ ಹಾಗೂ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತಿದೆ.”

— ಥಾವರ್ ಚಂದ್ ಗೆಹ್ಲೋಟ್, ರಾಜ್ಯಪಾಲ

ಆಂಧ್ರದಲ್ಲಿ ಕೋವಿಡ್ ಆತಂಕ; ಪಾವಗಡ-ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್, 8 ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ!

ತುಮಕೂರು: ಆಂಧ್ರ ಪ್ರದೇಶದಲ್ಲಿ ಕೋವಿಡ್-19 ಸೋಂಕು ಹಾಗೂ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಮೂಲಕ ರಾಜ್ಯಕ್ಕೆ ಸೋಂಕು ಹರಡದಂತೆ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿ, ಎಂಟು ಗಡಿ ಮಾರ್ಗಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಆಂಧ್ರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯಂತೆ ಶುಕ್ರವಾರ ನಾಲ್ವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಈ ಬೆಳವಣಿಗೆ ಗಡಿಭಾಗದ ಜನರಲ್ಲಿ ಆತಂಕ ಮೂಡಿಸಿದೆ.

ಇದರಿಂದಾಗಿ ಪಾವಗಡ-ಆಂಧ್ರ ಗಡಿಭಾಗದ ನಾಗಲಮಡಿಕೆ, ಕೊಡಮಡುಗು, ವಳ್ಳೂರಿ ಸೇರಿದಂತೆ ಎಂಟು ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಗಡಿ ದಾಟಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗುತ್ತಿದೆ. ಪ್ರಯಾಣಿಕರ ವಿವರಗಳನ್ನೂ ದಾಖಲಿಸಿಕೊಳ್ಳಲಾಗುತ್ತಿದೆ.

ಆಂಧ್ರದಿಂದ ಪಾವಗಡಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದ್ದು, ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಿಗಳು ಇನ್ನೂ 11 ದಿನಗಳ ಕಾಲ ಗಡಿಯಲ್ಲಿ ತಪಾಸಣೆ ಮುಂದುವರಿಸಲಿದ್ದಾರೆ.

ಕಳೆದ ಎರಡು ದಿನಗಳಿಂದ ಗಡಿಭಾಗದಲ್ಲಿ ನಿರಂತರ ಪರಿಶೀಲನೆ ನಡೆಸಲಾಗುತ್ತಿದ್ದು, ಇದುವರೆಗೆ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು, ಅಗತ್ಯ ಬೆಡ್‌ಗಳು ಹಾಗೂ ಆಮ್ಲಜನಕ ವ್ಯವಸ್ಥೆಯನ್ನೂ ಸಿದ್ಧಗೊಳಿಸಲಾಗಿದೆ.

ಈ ಕುರಿತು ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲೂ ಕೋವಿಡ್ ಸೋಂಕಿನಿಂದ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಎಂದು ಹೇಳಿದರು. ಸೋಂಕಿನ ಲಕ್ಷಣಗಳಿರುವವರನ್ನು ಪ್ರತ್ಯೇಕವಾಗಿ ಇರಿಸಲು ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕುನ್‌ಗುನ್ಯಾ ಪ್ರಕರಣಗಳೂ ವರದಿಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಗಂಭೀರ; ಮಣಿಪಾಲ್ ಆಸ್ಪತ್ರೆಗೆ ಕುಟುಂಬಸ್ಥರ ಭೇಟಿ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ತಂಡ ನಿರಂತರ ನಿಗಾವಹಿಸಿದೆ.

ಮೊನ್ನೆ ಸಂಜೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಚೆನ್ನಮ್ಮ ಅವರನ್ನು ತುರ್ತುವಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರ ಆರೋಗ್ಯದ ಬಗ್ಗೆ ವೈದ್ಯರು ಅಗತ್ಯ ಚಿಕಿತ್ಸೆಯನ್ನು ಮುಂದುವರಿಸಿದ್ದು, ಕುಟುಂಬ ಸದಸ್ಯರು ಆಸ್ಪತ್ರೆಯಲ್ಲೇ ಇದ್ದು ವೈದ್ಯರಿಂದ ಆರೋಗ್ಯದ ಮಾಹಿತಿ ಪಡೆಯುತ್ತಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ ಸೇರಿದಂತೆ ಕುಟುಂಬದ ಪ್ರಮುಖ ಸದಸ್ಯರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಕುಮಾರಸ್ವಾಮಿ ಅವರು ತಾಯಿಯ ಆರೋಗ್ಯ ಸ್ಥಿತಿಯ ಕುರಿತು ವೈದ್ಯರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ಇತ್ತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಕೂಡ ಆಸ್ಪತ್ರೆಯ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದು, ಕುಟುಂಬಸ್ಥರು ಹಾಗೂ ಅಭಿಮಾನಿಗಳು ಚೆನ್ನಮ್ಮ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯ ಸ್ಥಿತಿಯನ್ನು ವೈದ್ಯರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.