Home Blog Page 186

AI ಯುವತಿಯ ಮೋಹದಲ್ಲಿ ಸಿಲುಕಿದ ಬೆಂಗಳೂರು ಯುವಕ: ವಿಡಿಯೋ ಕಾಲ್ ಟ್ರ್ಯಾಪ್ ಮೂಲಕ 1.53 ಲಕ್ಷ ರೂ. ಲೂಟಿ

0

ಬೆಂಗಳೂರು: ಎಐ ಯುವತಿಯ (AI Girl) ಬಲೆಗೆ ಬಿದ್ದು ಬೆಂಗಳೂರಿನ 26 ವರ್ಷದ ಯುವಕನೊಬ್ಬ ಸುಮಾರು 1.53 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಯುವಕ Happn ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದು, ಇಶಾನಿ ಎಂಬ ಹೆಸರಿನ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ.

ನಂತರ ಇಬ್ಬರ ನಡುವೆ ಮೊಬೈಲ್ ನಂಬರ್ ವಿನಿಮಯವಾಗಿ ಖಾಸಗಿ ವಿಚಾರಗಳ ಬಗ್ಗೆ ಚಾಟಿಂಗ್ ಆರಂಭವಾಗಿದೆ. ಕೆಲ ದಿನಗಳ ಬಳಿಕ ಯುವತಿಯ ಮೊಬೈಲಿನಿಂದ ಯುವಕನಿಗೆ ವಿಡಿಯೋ ಕಾಲ್ ಬಂದಿದೆ. ಆ ವಿಡಿಯೋ ಕಾಲ್‌ನಲ್ಲಿ ಯುವತಿ ಬೆತ್ತಲಾಗಿದ್ದಳು. ಬಳಿಕ ಯುವಕನಿಗೂ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದು, ಯುವಕ ಆಕೆಯ ಮಾತಿಗೆ ಮರುಳಾಗಿ ಬೆತ್ತಲಾಗಿದ್ದಾನೆ.

ಈ ಸಂದರ್ಭವನ್ನು ಆರೋಪಿಗಳು ರೆಕಾರ್ಡ್ ಮಾಡಿಕೊಂಡು, ಯುವಕನ ಬೆತ್ತಲೆ ವಿಡಿಯೋ ಮತ್ತು ಫೋಟೊಗಳನ್ನು ಆತನಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಬಳಿಕ ಹಂತ ಹಂತವಾಗಿ ಯುವಕನಿಂದ 1.53 ಲಕ್ಷ ರೂ. ವಸೂಲಿ ಮಾಡಲಾಗಿದೆ. ಇನ್ನೂ ಹಣ ಕೇಳಲು ಆರಂಭಿಸಿದಾಗ ಯುವಕ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಎಐ ತಂತ್ರಜ್ಞಾನ ಬಳಸಿ ಯುವತಿಯಂತೆ ನಟಿಸಿ ಈ ವಂಚನೆ ನಡೆಸಿರುವ ಸಾಧ್ಯತೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಮೆಟ್ರೋ ಟಿಕೆಟ್ ಮತ್ತೆ ಹೆಚ್ಚಳ: ಪ್ರಯಾಣಿಕರಿಗೆ ಮತ್ತಷ್ಟು ಹೊರೆ!

0

ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆಯ ಶಾಕಿಂಗ್ ಸುದ್ದಿ ಸಿಕ್ಕಿದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್‌, ಫೆಬ್ರವರಿಯಿಂದ ಟಿಕೆಟ್ ದರವನ್ನು 5% ಹೆಚ್ಚಿಸಲು ಮುಂದಾಗಿದೆ. ಇದು ಶುಲ್ಕ ನಿಗದಿ ಸಮಿತಿ ಪ್ರತಿವರ್ಷ ಶಿಫಾರಸು ಮಾಡುವ 5% ದರ ಹೆಚ್ಚಳದ ನಿಯಮದ ಅಡಿಯಲ್ಲಿ ಕಾನೂನುಬದ್ಧವಾಗಿದ್ದು, ಮೆಟ್ರೋ ರೈಲು ನಿರ್ವಹಣೆ ಕಾಯ್ದೆ 2002 ರ 33ನೇ ಅಡಿಯಲ್ಲಿ ಅನುಸರಿಸಲಾಗುತ್ತಿದೆ.

ಕಳೆದ ವರ್ಷ ಮಾತ್ರ BMRCL 71% ದರ ಏರಿಕೆ ಮಾಡಿದ್ದು, ಅದರಿಂದ ಪ್ರಯಾಣಿಕರಿಗೆ ಭಾರವಾದ ಸರಾಸರಿ ಶುಲ್ಕವನ್ನು ಭರಿಸಲು ಆಗಿತ್ತು. ಈಗಿನ 5% ದರ ಏರಿಕೆ ಹೆಚ್ಚುವರಿ ಹಣಕಾಸು ಒದಗಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ. ಪ್ರತಿವರ್ಷದ ದರ ಏರಿಕೆಯಿಂದಾಗಿ ಸಾಮಾನ್ಯ ಪ್ರಯಾಣಿಕರ ಹತ್ತಿರ ಮೆಟ್ರೋ ಸೇವೆ ದುಬಾರಿ ಆಗುತ್ತಿದೆ ಎಂದು ಕೆಲವರು ತೀವ್ರವಾಗಿ ಆಕ್ಷೇಪಿಸುತ್ತಿದ್ದಾರೆ. ಆದರೆ BMRCL ಈ ದರ ಏರಿಕೆಯನ್ನು ಪ್ರಯಾಣಿಕರಿಗೆ ಉತ್ತಮ ಮತ್ತು ಸುರಕ್ಷಿತ ಸೇವೆಯನ್ನು ನಿರಂತರವಾಗಿ ಒದಗಿಸುವಂತೆ ಬದ್ಧತೆಯೊಂದಿಗೆ ನಿಗದಿಪಡಿಸಿದೆ.

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್: ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಅರೆಸ್ಟ್!

0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸರು ಭೇದಿಸಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ವಿವಿಧ ಜಿಲ್ಲೆಗಳ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಹ ಶಿಕ್ಷಕರು ಹಾಗೂ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಸೇರಿದ್ದಾರೆ. ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವುದು ಪತ್ತೆಯಾಗಿದ್ದು, ಈ ಸಂಬಂಧ ಬೆಂಗಳೂರು ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಪ್ರಶ್ನೆ ಪತ್ರಿಕೆ ಸೋರಿಕೆಯಾದುದು ದೃಢಪಡಿಸಿದ್ದಾರೆ.

ಪೊಲೀಸರ ತನಿಖೆಯಲ್ಲಿ ತುಮಕೂರು, ರಾಮನಗರ ಮತ್ತು ಕಲಬುರಗಿ ಜಿಲ್ಲೆಗಳ ಕೆಲವು ಶಾಲೆಗಳ ಶಿಕ್ಷಕರು ಈ ಪ್ರಕರಣದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ತುಮಕೂರಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ವಿ.ಡಿ. ಗಿರೀಶ್, ರಾಮನಗರದ ಸಹ ಶಿಕ್ಷಕ ಅಮ್ಜದ್ ಖಾನ್ ಸೇರಿದಂತೆ ಕಲಬುರಗಿ ಜಿಲ್ಲೆಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಬಂಧನಕ್ಕೊಳಗಾಗಿದ್ದಾರೆ.

ಬಂಧಿತರ ಪೈಕಿ ಕಲಬುರಗಿ ಜಿಲ್ಲೆಯ ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ, ಶಿಕ್ಷಕ ಮೊಹಮ್ಮದ್ ಸಿರಾಜುದ್ದೀನ್, ಸಹ ಶಿಕ್ಷಕಿ ಫಾಹ್ಮಿದಾ ಹಾಗೂ ಶಿಕ್ಷಕಿ ಫರ್ಜಾನಾ ಬೇಗಂ ಇದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಬಂಧಿತರ ವಿವರ:
ವಿ.ಡಿ. ಗಿರೀಶ್ – ಮುಖ್ಯೋಪಾಧ್ಯಾಯ, ತುಮಕೂರು.

ಅಮ್ಜದ್ ಖಾನ್ – ಸಹ ಶಿಕ್ಷಕ, ರಾಮನಗರ.

ಶಾಹಿದಾ ಬೇಗಂ – ಮುಖ್ಯ ಶಿಕ್ಷಕಿ, ಕಲಬುರಗಿ.

ಫಾಹ್ಮಿದಾ – ಸಹ ಶಿಕ್ಷಕಿ, ಕಲಬುರಗಿ.

ಮೊಹಮ್ಮದ್ ಸಿರಾಜುದ್ದೀನ್ – ಶಿಕ್ಷಕ, ಕಲಬುರಗಿ.

ಫರ್ಜಾನಾ ಬೇಗಂ – ಶಿಕ್ಷಕಿ, ಕಲಬುರಗಿ.

ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು.

ಸದ್ಯ ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಯಾವ ರೀತಿಯಲ್ಲಿ ಸೋರಿಕೆಯಾಯಿತು, ಇನ್ನಿತರರು ಪ್ರಕರಣದಲ್ಲಿ ಶಾಮೀಲಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಈ ಘಟನೆ ರಾಜ್ಯಾದ್ಯಂತ ಆತಂಕ ಮೂಡಿಸಿದೆ.

ಏನ್ ಆಟ ಆಡ್ತಿದ್ದೀರಾ? ಜನಸಂಪರ್ಕ ಸಭೆ ಸುಮ್ಮನೆ ಮಾಡ್ತಿದ್ದೀವಾ? – ನೀರಾವರಿ ಇಲಾಖೆ ಅಧಿಕಾರಿಗೆ ಯತೀಂದ್ರ ಕ್ಲಾಸ್

0

ಮೈಸೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ನೀರಾವರಿ ಇಲಾಖೆ ಅಧಿಕಾರಿಗೆ ಫೋನಿನಲ್ಲೇ ಕ್ಲಾಸ್ ತೆಗೆದುಕೊಂಡ ಪ್ರಸಂಗ ಜರುಗಿದೆ.

ಎಸ್, ಮೈಸೂರು ಜಿಲ್ಲೆಯ ವರುಣ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಹನುಮನಪುರ ಗ್ರಾಮದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಅಧಿಕಾರಿಗೆ ಕರೆ ಮಾಡಿ ಯತೀಂದ್ರ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಯತೀಂದ್ರ ಬಳಿ ರೈತರು ಸಮಸ್ಯೆ ಹೇಳಿಕೊಂಡರು. ಬಳಿಕ ಅಧಿಕಾರಿಗೆ ಕಾಲ್ ಮಾಡಿದ ಯತೀಂದ್ರ, ಏನ್ ಆಟ ಆಡ್ತಿದ್ದೀರಾ? ಸಿಎಂ ಕ್ಷೇತ್ರದಲ್ಲೇ ಹೀಗಾದ್ರೆ ಬೇರೆ ಕಡೆ ಹೇಗೆ ಕೆಲಸ ಮಾಡ್ತೀರಾ? ಜನಸಂಪರ್ಕ ಸಭೆ ಸುಮ್ಮನೆ ಮಾಡ್ತಿದ್ದೀವಾ? ಕೂಡಲೇ ನಿರ್ಲಕ್ಷ್ಯ ಮಾಡಿದ ಅಧಿಕಾರಿ ಮೇಲೆ ಕ್ರಮ ಆಗಬೇಕು ಎಂದು ಹಿರಿಯ ಅಧಿಕಾರಿಗೆ ಗದರಿದ್ದಾರೆ.

ಸಂಕ್ರಾಂತಿ ಬಳಿಕ ರಾಜಕೀಯ ಕ್ರಾಂತಿ ಎಂಬುವುದೆಲ್ಲಾ ಊಹಾಪೋಹ; ಕೆ.ಹೆಚ್‌.ಮುನಿಯಪ್ಪ

0

ಕಲಬುರ್ಗಿ:- ಸಂಕ್ರಾಂತಿ ಬಳಿಕ ರಾಜಕೀಯ ಕ್ರಾಂತಿ ಎಂಬುವುದೆಲ್ಲಾ ಊಹಾಪೋಹ ಎಂದು ಸಚಿವ ಕೆ.ಹೆಚ್‌.ಮುನಿಯಪ್ಪ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯಾಗುತ್ತದೆ ಎಂಬುದೆಲ್ಲ ಬರಿ ಊಹಾಪೋಹ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಕಾರಣಕ್ಕೂ ಬದಲಾವಣೆಯಾಗುವುದಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ರಾಜ್ಯದ ಅಭಿವೃದ್ಧಿಗೆ ಬುನಾದಿ ಹಾಕಿಕೊಟ್ಟಿದ್ದರು. ಸಿದ್ದರಾಮಯ್ಯ ಅವರು ಆ ಬುನಾದಿಯ ಮೇಲೆ ಸುಭದ್ರವಾದ ಮನೆಯನ್ನು ಕಟ್ಟಿದ್ದಾರೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲ ವರ್ಗದವರಿಗೂ ಸಮಾನತೆ ತಂದಿರುವ ಅವರು, ಪೂರ್ಣ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದ್ದಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಶತಮಾನೋತ್ಸವಕ್ಕೆ ಸಜ್ಜಾದ ಮುಂಡರಗಿ ಪ್ರತಿಷ್ಠಿತ ವಿದ್ಯಾಸಂಸ್ಥೆ; ಜನವರಿ 17–18ರಂದು ಅದ್ದೂರಿ ಆಚರಣೆ!

0

ಗದಗ:- ಮುಂಡರಗಿ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾಸಮಿತಿಯ ಶತಮಾನೋತ್ಸವ ಸಮಾರಂಭವು ಇದೇ ಜನವರಿ 17 ಮತ್ತು 18ರಂದು ವಿಜೃಂಭಣೆಯಿಂದ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದ ಹಳೆಯ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ. ಈ ಕುರಿತು ಜಗದ್ಗುರು ಅನ್ನದಾನೀಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡದಲ್ಲಿ ಪತ್ರಿಕಾ ಗೋಷ್ಟಿ ನಡೆಸಲಾಯಿತು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರು ಹಾಗೂ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಮನಿಪ್ರ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, 1969ರಲ್ಲಿ ಒಂದೇ ಶಿಕ್ಷಣ ಸಂಸ್ಥೆಯಿಂದ ಆರಂಭವಾದ ಅನ್ನದಾನೀಶ್ವರ ವಿದ್ಯಾಸಂಸ್ಥೆ ಇಂದು 33ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನೊಳಗೊಂಡ ಶೈಕ್ಷಣಿಕ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ ಆರಂಭದ ದಿನಗಳಲ್ಲೇ ಏಳು ಕಡೆಗಳಲ್ಲಿ ಪ್ರಸಾದ ನಿಲಯಗಳನ್ನು ಸ್ಥಾಪಿಸಲಾಗಿದ್ದು, ಈ ಸಾಧನೆಗೆ ಶ್ರೀಮಠ ಹಾಗೂ ಭಕ್ತಸಮೂಹದ ಸಹಕಾರ ಪ್ರಮುಖವಾಗಿದೆ ಎಂದರು.

ಬಳಿಕ ಉತ್ತರಾಧಿಕಾರಿಗಳಾದ ಶ್ರೀ ಮನಿಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಜಿಗಳು ಮಾತನಾಡಿ, ಲಾಭದ ದೃಷ್ಟಿಯಿಲ್ಲದೆ ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ಸಂಸ್ಥೆಯಲ್ಲಿ ವಿದ್ಯೆ ಪಡೆದ ಎಲ್ಲ ಹಳೆಯ ವಿದ್ಯಾರ್ಥಿಗಳು ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿದ್ಧಲಿಂಗಯ್ಯ ಹಿರೇಮಠ ನಿರೂಪಿಸಿ ವಂದಿಸಿದರು.

ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ; 40ರ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ!

0

ಬಾಗಲಕೋಟೆ:- ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್​​​ನಲ್ಲಿ ವಿಚ್ಛೇದಿತ ಮಹಿಳೆ‌ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವಂತಹ ಘಟನೆ ಜರುಗಿದೆ.

40 ವರ್ಷದ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ನಡೆದಿದ್ದು, ಘಟನೆ ಬಳಿಕ ರಾಷ್ಟ್ರೀಯ ಹೆದ್ದಾರಿ ಬಳಿ ಬಿಸಾಕಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಸದ್ಯ ಮಹಿಳೆ ಮೇಲೆ ಗ್ಯಾಂಗ್​ನಿಂದ​ ಅಥವಾ ಒಬ್ಬರಿಂದ ಅತ್ಯಾಚಾರ ನಡೆಯಿತಾ ಎಂಬುವುದು ಪೊಲೀಸ್​ ತನಿಖೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಳಿ ಬಿಸಾಕಿ ಹೋದ ಮಹಿಳೆಯನ್ನು ನೋಡಿದ ಸಾರ್ವಜನಿಕರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಆಂಬ್ಯುಲೆನ್ಸ್ ಮೂಲಕ ಅವರನ್ನು ಮೊದಲಿಗೆ ಹುನಗುಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ‌ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಹುನಗುಂದ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ.

ಮಹಿಳೆಯ ಸಹೋದರ ತಮ್ಮ ಸಹೋದರಿ ಮೇಲಾದ ದೌರ್ಜನ್ಯ ನೆನೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಾತನಾಡಿದ ಸಹೋದರ ರವಿ ಮಾದರ, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಬಿಕ್ಕಿಬಿಕ್ಕಿ ಅತ್ತರು. ಯಾರು ಇಂತಹ ಕೆಲಸ ಮಾಡಿದ್ದಾರೆ ಅವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸಂತ್ರಸ್ತೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪರೀಕ್ಷೆ ಮಾಡಲಾಗಿದ್ದು, ಗುಪ್ತಾಂಗದ ಮೇಲೆ‌ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅತ್ಯಾಚಾರ ಆಗಿದೆಯಾ ಎಂಬ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಖಚಿತವಾಗಲಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಕುಟುಂಬದೊಂದಿಗೆ ಅಂಡಮಾನ್‌ಗೆ ಹೋಗಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಹೃದಯಾಘಾತಕ್ಕೆ ಬಲಿ!

0

ಧಾರವಾಡ: ಅಂಡಮಾನ್–ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದ ಧಾರವಾಡದ ಕೆಸಿಡಿ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮೃತರನ್ನು ಎಸ್. ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಅವರು ಕೆಸಿಡಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಕಾವೇರಿ ಹಾಸ್ಟೆಲ್ ವಾರ್ಡನ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಅನ್ನಪೂರ್ಣ ಅವರು ಮೂರು ದಿನಗಳ ಹಿಂದೆ ಕುಟುಂಬದೊಂದಿಗೆ ಅಂಡಮಾನ್–ನಿಕೋಬಾರ್‌ನ ಫೋರ್ಟ್ ಬ್ಲೇರ್‌ಗೆ ಪ್ರವಾಸಕ್ಕೆ ತೆರಳಿದ್ದರು. ಶನಿವಾರ ರಾತ್ರಿ ಅಸ್ವಸ್ಥರಾಗಿದ್ದ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತದೇಹವನ್ನು ಧಾರವಾಡಕ್ಕೆ ತರಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದು, ಸೋಮವಾರ ನಗರಕ್ಕೆ ತರಲಾಗುವ ಸಾಧ್ಯತೆ ಇದೆ. ಅನ್ನಪೂರ್ಣ ಅವರ ಅಕಾಲಿಕ ನಿಧನಕ್ಕೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ನವರು ತಮ್ಮ ಪಕ್ಷವನ್ನೇ ಮಾರಾಟಕ್ಕಿಟ್ಟಿದ್ದಾರೆ; ಪ್ರಿಯಾಂಕ ಖರ್ಗೆ

0

ಕಲಬುರ್ಗಿ:- ಜೆಡಿಎಸ್ ನವರು ತಮ್ಮ ಪಕ್ಷವನ್ನೇ ಮಾರಾಟಕ್ಕಿಟ್ಟಿದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಲೇವಡಿ ಮಾಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್‌ನವರು ತಮ್ಮ ಪಕ್ಷವನ್ನೇ ಮಾರಾಟಕ್ಕೆ ಇಟ್ಟಿದ್ದಾರೆ. ಅಂತದ್ರಲ್ಲಿ ಅವರು ಸಿಎಂ ಲೀಸ್ ಪಿರಿಡ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಈಗಾಗಲೇ ಜೆಡಿಎಸ್ ಫ್ಲಾಟ್‌ ನಲ್ಲಿ ಬಿಜೆಪಿಯವರು ಬಹುಮಹಡಿ ಕಟ್ಟಡವನ್ನೇ ಕಟ್ಟಿದ್ದಾರೆ. ಕುಮಾರಸ್ವಾಮಿ ಹಿಂದೆ ಸಹ ರಾಜ್ಯ ರಾಜಕಾರಣದಲ್ಲಿದ್ರು ಆಗಲೂ ಏನೂ ಆಗಿಲ್ಲ. ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಟ್ಟಿನ ಹೊಟ್ಟೆ ನೋವು ತಾಳಲಾರದೇ ನೇಣಿಗೆ ಶರಣಾದ ಯುವತಿ!

0

ತುಮಕೂರು:- ತುಮಕೂರು ತಾಲೂಕಿನ ಬ್ಯಾತ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ಜರುಗಿದೆ.

ಋತುಚಕ್ರದ ಹೊಟ್ಟೆ ನೊವು ತಾಳಲಾಗದೆ ಯುವತಿಯೊಬ್ಬಳು ನೇಣಿಗೆ ಶರಣಾಗಿದ್ದಾರೆ. ಕೀರ್ತನಾ (19) ನೇಣಿಗೆ ಶರಣಾದ ಯುವತಿ. ಗುಲ್ಬರ್ಗದ ಕಲಗಿ ತಾಲೂಕಿನ ಸಾಲಹಳ್ಳಿಯ ಕೀರ್ತನಾ ಕೆಲಸ ಅರಸಿ ತುಮಕೂರಿನಲ್ಲಿದ್ದ ಚಿಕ್ಕಪ್ಪನ ಮನೆಯಲ್ಲಿ ಬಂದಿದ್ದಳು. ಕೆಲಸ ಸಿಗದ ಕಾರಣ ಮನೆಯಲ್ಲೆ ವಾಸವಾಗಿದ್ದಳು

ಚಿಕ್ಕಪ್ಪನ ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮುಟ್ಟಿನ ಕಾಲದ ಹೊಟ್ಟೆ ನೋವಿನ ಕಾರಣಕ್ಕೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!