Home Blog Page 189

ಚಿತ್ರದುರ್ಗ| ಭೀಕರ ಅಪಘಾತ; ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ದುರ್ಮರಣ

0

ಚಿತ್ರದುರ್ಗ:- ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಭೀಕರ ಘಟನೆ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಜರುಗಿದೆ.

ಮೃತರನ್ನು ವಿಶ್ವನಾಥ್(22), ನಂಜುಂಡಿ(23), ರಾಹುಲ್(23) ಮತ್ತು ಯಶ್ವಂತ್(22) ಎಂದು ಗುರುತಿಸಲಾಗಿದೆ. ಇವರು ಹಿರಿಯೂರು ತಾಲೂಕಿನ ನಂಜಯ್ಯನಕೊಟ್ಟಿಗೆ ಗ್ರಾಮದವರು ಎನ್ನಲಾಗಿದೆ.

ಕೂಡಲೇ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೆಡಿಎಸ್‌ ನಾಯಕಿಯ ಪುತ್ರನ ಕಿರುಕುಳಕ್ಕೆ ಮನನೊಂದು ಯುವತಿ ಸೂಸೈಡ್!

0

ಉತ್ತರ ಕನ್ನಡ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ಜೆಡಿಎಸ್‌ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜರುಗಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ರಿಶಾಲ್‌ ಡಿಸೋಜಾ‌(20) ಎಂದು ಗುರುತಿಸಲಾಗಿದೆ. ಚೈತ್ರಾ ಕೋಠಾರಕರ ಪುತ್ರ ಚಿರಾಗ್​​ ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪ ಕೇಳಿಬಂದಿದೆ.

ಚೈತ್ರಾ ಕೋಠಾರಕರ ಪುತ್ರ ಚಿರಾಗ್​​, ಕದ್ರಾ ಗ್ರಾಮದ ಕೆಪಿಸಿಎಲ್ ಕಾಲೋನಿ ನಿವಾಸಿ ರಿಶಾಲ್‌ ಡಿಸೋಜಾ‌ಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಕಳೆದ ಕೆಲ ದಿನಗಳಿಂದ ಯುವತಿ ಮನೆ ಬಳಿ ಬಂದು ಹೋಗುತ್ತಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಬೇಗ ಸತ್ತು ಹೋಗು ಎಂದು ಚಿರಾಗ್‌ ಹೇಳಿದ್ದ. ಇದರಿಂದ ನೊಂದ ರಿಶಾಲ್‌ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ಸದ್ಯ ರಿಶಾಲ್‌ ತಂದೆ ಕ್ರಿಸ್ತೋದ್ ಫ್ರಾನ್ಸಿಸ್ ದೂರಿನ ಮೇರೆಗೆ ಚಿರಾಗ್ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಶೀಘ್ರವೇ ಟ್ರ್ಯಾಕಿಗಿಳಿಯಲಿದೆ ಪಿಂಕ್ ಲೈನ್ ಮೆಟ್ರೋ, ನಾಳೆ ರೋಲಿಂಗ್ ಸ್ಟಾಕ್ ಟೆಸ್ಟ್ ಆರಂಭ!

0

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದೆ.

ಶೀಘ್ರವೇ ಪಿಂಕ್ ಲೈನ್ ಮೆಟ್ರೋ ಟ್ರ್ಯಾಕ್‌ಗೆ ಇಳಿಯಲಿದ್ದು, ನಾಳೆಯಿಂದ ರೋಲಿಂಗ್ ಸ್ಟಾಕ್ ಪರೀಕ್ಷೆಗಳು ಆರಂಭವಾಗಲಿವೆ. ಈ ಪರೀಕ್ಷೆಗಳ ಮೂಲಕ ಸಿಗ್ನಲಿಂಗ್ ವ್ಯವಸ್ಥೆ, ಬ್ರೇಕ್ ಕಾರ್ಯಕ್ಷಮತೆ, ರೈಲಿನ ವೇಗ, ವಿದ್ಯುತ್ ಹಾಗೂ ದೂರಸಂಪರ್ಕ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಲಾಗುತ್ತದೆ.

ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಸುಮಾರು 7.5 ಕಿ.ಮೀ ಉದ್ದದ ಪಿಂಕ್ ಲೈನ್ ಮಾರ್ಗದಲ್ಲಿ ರೋಲಿಂಗ್ ಸ್ಟಾಕ್ ಟೆಸ್ಟ್ ನಡೆಯಲಿದ್ದು, ಜ.11ರಿಂದ ಏಪ್ರಿಲ್ ಮಧ್ಯಭಾಗದವರೆಗೆ ಮುಂದುವರೆಯಲಿದೆ. ವಾಣಿಜ್ಯ ಸಂಚಾರ ಆರಂಭಿಸುವ ಮೊದಲು ಕೈಗೊಳ್ಳಲಾಗುವ ಅತ್ಯಂತ ಮಹತ್ವದ ಹಂತವಾಗಿರುವ ಈ ಪರೀಕ್ಷೆಗಳು, ಮೆಟ್ರೋ ರೈಲುಗಳ ಕಾರ್ಯಕ್ಷಮತೆ ಹಾಗೂ ವಿವಿಧ ವ್ಯವಸ್ಥೆಗಳ ಪರಸ್ಪರ ಸಂಯೋಜನೆಯ ಸಂಪೂರ್ಣ ಮೌಲ್ಯಮಾಪನಕ್ಕೆ ನೆರವಾಗಲಿವೆ. ಅನುಮೋದನೆ ಪಡೆಯಲು ಈ ಪರೀಕ್ಷೆಗಳು ಅಗತ್ಯವಾಗಿವೆ.

ಅವ್ವ ಸೇವೆಗೆ ಗೌರವ: ಡಾ. ಬಸವರಾಜ ಧಾರವಾಡರಿಗೆ ಸನ್ಮಾನ

0

ಗದಗ: ಶ್ರೀ ಜಗದ್ಗುರು ತೋಂಟದಾರ್ಯ ಮಠ ಯಡಿಯೂರ-ಗದಗ, ಲಿಂಗಾಯತ ಪ್ರಗತಿಶೀಲ ಸಂಘ ಗದಗ ಹಾಗೂ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅವ್ವನ ಕುರಿತ ವಿಶೇಷ ಶಿವಾನುಭವ, ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ರೂವಾರಿಗಳಾದ ಅವ್ವ ಸೇವಾ ಟ್ರಸ್ಟ್‌ನ ಗದಗಿನ ಸಂಚಾಲಕರಾದ ಡಾ. ಬಸವರಾಜ ಧಾರವಾಡ ಅವರನ್ನು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಅವ್ವ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಶಶಿ ಸಾಲಿ ಮುಂತಾದವರು ಉಪಸ್ಥಿತರಿದ್ದರು.

ಚಳಿ ಎಫೆಕ್ಟ್: ಚಿಕನ್–ಮೊಟ್ಟೆ ದರ ಏರಿಕೆ! ಕೆಜಿ ಮಾಂಸ ಎಷ್ಟು ಗೊತ್ತಾ?

0

ಬೆಂಗಳೂರು:- ಕರ್ನಾಟಕದಲ್ಲಿ ಚಳಿ ತೀವ್ರವಾಗಿದ್ದು, ಇದರ ಪರಿಣಾಮವಾಗಿ ಕೋಳಿ ಮಾಂಸ ಹಾಗೂ ಮೊಟ್ಟೆಯ ದರದಲ್ಲಿ ಏರಿಕೆ ಕಂಡುಬಂದಿದೆ.

ಶೀತ ವಾತಾವರಣದಿಂದ ಕೋಳಿಗಳು ಮೊಟ್ಟೆ ಇಡುವ ಪ್ರಮಾಣ ಕಡಿಮೆಯಾಗಿದ್ದು, ಕೋಳಿ ಫಾರಂಗಳಲ್ಲಿ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಉಂಟಾಗಿದೆ. ಸಾಮಾನ್ಯವಾಗಿ 2.2 ಕೆಜಿ ತೂಕ ಬರಬೇಕಾದ ಕೋಳಿ ಸದ್ಯ 1.8 ಕೆಜಿಗೆ ಸೀಮಿತವಾಗುತ್ತಿದ್ದು, ತಿಂಗಳಿಗೆ 28ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು ಈಗ 22ರಿಂದ 24 ಮೊಟ್ಟೆ ಮಾತ್ರ ಇಡುತ್ತಿವೆ.

ಚಳಿಗಾಲದಲ್ಲಿ ಸೂರ್ಯನ ಬೆಳಕು ಹಾಗೂ ಬಿಸಿಲಿನ ಕೊರತೆಯಿಂದ ಕೋಳಿಗಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಫಾರಂ ಮಾಲೀಕರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಚಿಕನ್ ಬೆಲೆ ಕೆಜಿಗೆ 280ರಿಂದ 300 ರೂಪಾಯಿಗೆ ಏರಿಕೆಯಾಗಿ, ಮೊಟ್ಟೆಯ ದರದಲ್ಲೂ ಹೆಚ್ಚಳವಾಗಿದೆ. ಬೆಲೆ ಏರಿಕೆಯ ಹೊಡೆತದಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದು, ಮಾರುಕಟ್ಟೆಯಲ್ಲಿ ಚಿಕನ್ ಮತ್ತು ಮೊಟ್ಟೆ ಬೇಡಿಕೆ ಕುಸಿತ ಕಂಡುಬಂದಿದೆ.

ಮಾಧ್ಯಮ ಅಕಾಡೆಮಿ ದತ್ತಿ ಪ್ರಶಸ್ತಿಗೆ ಪತ್ರಕರ್ತ ನಾಗರಾಜ್ ವೈ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕರ್ನಾಟಕ ಮಾಧ್ಯಮ ಅಕಾಡೆಮಿಯ 2025ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪೈಕಿ `ಪ್ರಜಾ ಸಂದೇಶ ದತ್ತಿ ಪ್ರಶಸ್ತಿ’ಗೆ ಟಿವಿ 5 ವಾಹಿನಿ ಕೊಪ್ಪಳ ಜಿಲ್ಲಾ ವರದಿಗಾರ ನಾಗರಾಜ್ ವೈ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಮಾಧ್ಯಮ ಅಕಾಡೆಮಿ ಕಚೇರಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಜಾ ಸಂದೇಶ ದತ್ತಿ ಪ್ರಶಸ್ತಿಗೆ ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ದೃಶ್ಯ ಹಾಗೂ ಮುದ್ರಣ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಕೊಪ್ಪಳ ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ ಯುವಕನೊಬ್ಬ ಅನ್ಯಜಾತಿ ಯುವತಿಯನ್ನು ಮದುವೆಯಾಗಿರುವ ಕಾರಣಕ್ಕೆ 8 ವರ್ಷಗಳ ಕಾಲ ಬಹಿಷ್ಕಾರ ಹಾಕಿದ ಘಟನೆ ಬಗ್ಗೆ ಟಿವಿ 5 ವಾಹಿನಿಯಲ್ಲಿ ವಿಶೇಷ ವರದಿ ಮಾಡಿದ್ದರು.

ಕೊಪ್ಪಳ ಜಿಲ್ಲೆಯ ಪತ್ರಕರ್ತ ಬಳಗ ಹರ್ಷ ವ್ಯಕ್ತಪಡಿಸಿದ್ದು ಅರ್ಹ ಪತ್ರಕರ್ತನಿಗೆ ಪ್ರಶಸ್ತಿ ದೊರಕಲು ಕಾರಣರಾದ ಮಾಧ್ಯಮ ಅಕಾಡೆಮಿ ಅಧ್ಯಕ್ಷರಿಗೂ, ಮಾಧ್ಯಮ ಅಕಾಡೆಮಿ ಸದಸ್ಯರು, ಕೊಪ್ಪಳದ ಹಿರಿಯ ಪತ್ರಕರ್ತರಾದ ನಿಂಗಜ್ಜ ಅವರಿಗೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಅಕಾಡೆಮಿ ಸದಸ್ಯರಾದ ಶಿವಾನಂದ ತಗಡೂರು ಅವರಿಗೆ ಕೊಪ್ಪಳ ಜಿಲ್ಲೆಯ ಪತ್ರಕರ್ತರು ಅಭಿನಂದನೆ ತಿಳಿಸಿದ್ದಾರೆ.

ಪ್ರಶಸ್ತಿಯು ಸಾಮಾಜಿಕವಾಗಿ ಹೆಚ್ಚಿನ ಜವಾಬ್ದಾರಿ ನೀಡಿದೆ. ನಾನು ಮಾಡಿದ ವರದಿ ಪರಿಗಣಿಸಿ ಪ್ರಶಸ್ತಿ ನೀಡಿದ್ದಕ್ಕೆ ಸರ್ಕಾರಕ್ಕೆ ಹಾಗೂ ಮಾಧ್ಯಮ ಅಕಾಡೆಮಿಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರ್ಹರನ್ನು ಗುರುತಿಸುತ್ತಿರುವ ಅಕಾಡೆಮಿ ಸದಸ್ಯರು, ಹಿರಿಯ ಪತ್ರಕರ್ತ ಕೆ. ನಿಂಗಜ್ಜ, ಮಾಧ್ಯಮ ಅಕಾಡೆಮಿ ಸದಸ್ಯರಾದ ಶಿವಾನಂದ ತಗಡೂರು, ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ, ಕಾರ್ಯದರ್ಶಿ ಸಹನಾ ಎಂ ಸೇರಿದಂತೆ ಅಕಾಡೆಮಿಯ ಎಲ್ಲಾ ಸದಸ್ಯರಿಗೆ ನಾಗರಾಜ್ ವೈ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕಳಸಾಪುರ ರಸ್ತೆಯಲ್ಲಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ರಾಷ್ಟ್ರಮಟ್ಟದ 4ನೇ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸ್ಥಳೀಯ ಶ್ರೀ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಪಟುಗಳಾದ ಸಂಪ್ರೀತ್ ಪಿ.ಹೂಗಾರ್ ಕಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ತೃತೀಯ, ವಿರೂಪಾಕ್ಷಿ ಕೆ.ಹೊಂಬಾಳಿ ಕುಮಿಟೆಯಲ್ಲಿ ದ್ವಿತೀಯ, ಕಟಾದಲ್ಲಿ ದ್ವಿತೀಯ, ಅಮೈರಾ ಮುಲ್ಲಾ ಕಟಾದಲ್ಲಿ ಪ್ರಥಮ, ವೇದಸಾಯಿ ವಿ.ಪುಪ್ತಿ ಕಟಾದಲ್ಲಿ ತೃತೀಯ, ಯಜ್ಞ ಸಾಯಿ ವಿ.ಪುಪ್ತಿ ತೃತೀಯ ಸ್ಥಾನ ಹಾಗೂ ಭರತ್ ಇರಾಳ್ ಸಮಾಧಾನಕರ ಪ್ರಶಸ್ತಿ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಾದ ಆಸೀಫ್ ಅ.ಕದಡಿ ಅವರಿಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಪಾಲಕರು ಅಭಿನಂದಿಸಿದ್ದಾರೆ.

ಬಿಜೆಪಿಗೆ ಸದ್ಯ ಮಾಡಲು ಕೆಲಸವಿಲ್ಲ: ಜ್ಯೋತಿ ಎಂ.ಗೊಡಬಾಳ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ ಗಲಾಟೆಯ ಘಟನೆಗಳನ್ನು ರಾಜಕೀಯ ಲಾಭಕ್ಕೆ ಜಟಿಲಗೊಳಿಸಿ ಹಲ್ಲೆಯ ಆರೋಪ ಹೇಳುತ್ತಿರುವುದು ಬಿಜೆಪಿಯ ಹತಾಶೆಯ ಮನಸ್ಥಿತಿಯ ಕಾರಣಕ್ಕೆ ಬಂದವುಗಳು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೊಡಬಾಳ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿಗೆ ಸದ್ಯ ಮಾಡಲು ಕೆಲಸವಿಲ್ಲ. ದೇಶದಲ್ಲಿ ಈಗಾಗಲೇ ಸುಳ್ಳು ಹೇಳುವ ಮೂಲಕ, ಜನ ಮತ್ತು ವ್ಯವಸ್ಥೆಯನ್ನು ಕಲುಷಿತಗೊಳಿಸಿ ಅಧಿಕಾರ ಪಡೆದುಕೊಂಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಮರ್ಥ ಆಡಳಿತ ಅರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಹತಾಶೆಯಿಂದ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೊಪ್ಪಳದ ರೈಲ್ವೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಇದನ್ನು ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಅವರೇ ಮಾಡಿಸಿದ್ದಾರೆ ಎಂದು ಹೋರಾಟಕ್ಕೆ ಇಳಿದಿದ್ದಾರೆ. ಇದೆಲ್ಲಾ ಅತ್ಯಂತ ಕ್ಷುಲ್ಲಕ ಮತ್ತು ಅಧಿಕಾರದ ಹಪಾಹಪಿತನಕ್ಕೆ ಸಾಕ್ಷಿಯಾಗಿದೆ. ಇಂತಹ ಕೆಲಸ ಮಾಡುವುದೇ ಬಿಜೆಪಿಯ ಹಳೆಯ ಚಾಳಿ. ಶಿಷ್ಟಾಚಾರ ಉಲ್ಲಂಘನೆ ಆಗಿದ್ದಕ್ಕೆ ಸಹಜವಾಗಿ ಕಾರ್ಯಕರ್ತರಿಗೆ ನೋವಾಗಿ ಕೂಗಾಡಿದ್ದಕ್ಕೆ ಬಡಿದೇ ಬಿಟ್ಟರು ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.

ಇನ್ನು ಬಳ್ಳಾರಿಯಲ್ಲಿ ಜನಾರ್ಧನರಡ್ಡಿ ಅವರು ಕಾಲಿಡುತ್ತಲೇ ಜಗಳ, ಗಲಾಟೆಗಳು ಪ್ರಾರಂಭವಾಗಿದ್ದು, ಸದಾ ತಮಗೆ ಸಂಬಂಧವೇ ಇಲ್ಲದ ಮಾತುಗಳಿಂದ ಪ್ರಚಾರದಲ್ಲಿ ಇರಲು ಪ್ರಯತ್ನ ಮಾಡುವ ಜನಾರ್ಧನ ರಡ್ಡಿಯವರಿಂದಲೇ ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಶಾಂತಿ ಭಂಗವಾಗುತ್ತಿದೆ. ಇವರನ್ನು ಕಾನೂನು ಮೂಲಕ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಜ್ಯೋತಿ ಒತ್ತಾಯಿಸಿದ್ದಾರೆ.

ಡಾ. ಅಂಬೇಡ್ಕರರ ಪುತ್ಥಳಿ ಅನಾವರಣ ಕಾರ್ಯವನ್ನು ನಾಡ ಹಬ್ಬದಂತೆ ಆಚರಿಸಲು ನಿರ್ಧಾರ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಡಂಬಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿ ಅನಾವರಣ ಮಾಡಬೇಕು ಎನ್ನುವ ಹಲವು ವರ್ಷಗಳ ದಲಿತ ಸಮುದಾಯದ ಮತ್ತು ಅಂಬೇಡ್ಕರ ಅಭಿಮಾನಿಗಳ ಕನಸು ಶೀಘ್ರದಲ್ಲೇ ನನಸಾಗುವ ಕಾಲ ಕೂಡಿ ಬಂದಿದ್ದು, ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಶನಿವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಮುಖಂಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಜನವರಿ ಅಥವಾ ಮುಂದಿನ ತಿಂಗಳ ಫೆಬ್ರುವರಿ ಮೂರನೇ ವಾರದೊಳಗೆ ಅಂಬೇಡ್ಕರ ಪುತ್ಥಳಿ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ಣಯದಂತೆ ಎಲ್ಲಾ ಸದಸ್ಯರನ್ನೊಳಗೊಂಡು ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸುವ ಕುರಿತು ಚರ್ಚೆಗಳು ನಡೆದವು. ವಿಶೇಷವಾಗಿ ಕಾರ್ಯಕ್ರಮ ಮಾಡುವ ಸ್ಥಳ, ಕುಂಭ ಮೆರವಣಿಗೆ, ಊಟದ ವ್ಯವಸ್ಥೆ, ನೀರು ನಿರ್ವಹಣೆ, ವೇದಿಕೆಯ ವ್ಯವಸ್ಥೆ, ಖರ್ಚು-ವೆಚ್ಚ ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಸಭೆಯಲ್ಲಿ ಮುಖಂಡರಾದ ದೇವಪ್ಪ ತಳಗೇರಿ, ಗ್ರಾ.ಪಂ ಸದಸ್ಯ ರಾಕೇಶ ಅಡವಿ, ಮಾರುತಿ ಬಿಸನಹಳ್ಳಿ, ಮುಖಂಡ ಹನಮಪ್ಪ ಶಿವಪ್ಪ ಹಾದಿಮನಿ, ಕೃಷ್ಣ ಕಟ್ಟೆಣ್ಣವರ, ಉಪನ್ಯಾಸಕರಾದ ಮಂಜುನಾಥ ಬಿಸನಹಳ್ಳಿ, ಗವಿಸಿದ್ದಪ್ಪ ಹಾದಿಮನಿ, ಲಕ್ಷ್ಮಣ ದೊಡ್ಡಮನಿ, ನಾಗಪ್ಪ ಕೊರವರ, ವಿಜಯಕುಮಾರ ಹಾದಿಮನಿ, ವೆಂಕಟೇಶ ತಳವಾರ, ಆದಿತ್ಯ ಗದಗಿನ, ಅಶೋಕ ತಳಗೇರಿ, ದೇವಿಂದ್ರಪ್ಪ ಪೂಜಾರ, ವಿನಾಯಕ ಕಟ್ಟೆಣ್ಣವರ, ಕುಮಾರ ಗೌಡಣ್ಣವರ, ಸುರೇಶ ದೊಡ್ಡಮನಿ, ಹನಮಪ್ಪ ಕೊರವರ, ಷಣ್ಮುಖಪ್ಪ ಒಂಟೆಲಭೋವಿ, ಯಮನಪ್ಪ ಹಾನಿ, ಗೋಪಾಲ ಕದಡಿ, ಫಕ್ಕಿರಪ್ಪ ಆನಿ, ಲೆಂಕೆಪ್ಪ ಕದಡಿ, ಚೇತನ ಸಿದ್ದಣ್ಣವರ, ಶಂಖರಲಿಂಗಪ್ಪ ಪೂಜಾರ ಮುಂತಾದವರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಗೌಡಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಶೇಷವಾಗಿ ಗ್ರಾ.ಪಂ ಆವರಣದಲ್ಲಿ ಅಂಬೇಡ್ಕರರ ಪುತ್ಥಳಿ ನಿರ್ಮಾಣದ ಕುರಿತು ಒಮ್ಮತದಿಂದ ಠರಾವು ಪಾಸು ಮಾಡಲು ಗಟ್ಟಿ ನಿರ್ಧಾರ ಕೈಗೊಂಡ ಎಲ್ಲಾ ಸದಸ್ಯರಿಗೂ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಸಮುದಾಯದ ಹಿರಿಯರಾದ ಮರಿತಿಮ್ಮಪ್ಪ ಆದಮ್ಮನವರ, ಕೆ.ಎನ್. ದೊಡ್ಡಮನಿ, ಡಿ. ಪ್ರಸಾದ, ಮರಿಯಪ್ಪ ಸಿದ್ದಣ್ಣವರ, ಗವಿಸಿದ್ದಪ್ಪ ಬಿಸನಹಳ್ಳಿ, ವಿರೂಪಾಕ್ಷಪ್ಪ ಯಲಿಗಾರ, ನಾಗಪ್ಪ ತಳವಾರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಗದಗ| ಲಕ್ಕುಂಡಿಯಲ್ಲಿ ಅಚ್ಚರಿ ಘಟನೆ; 101 ದೇವಸ್ಥಾನಗಳ ಊರಲ್ಲಿ ಪುರಾತನ ನಿಧಿ, ಚಿನ್ನದ ಗಣಿ ನೋಡಲು ಮುಗಿಬಿದ್ದ ಜನ!

0

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಅಚ್ಚರಿ ಮೂಡಿಸುವ ಘಟನೆ ನಡೆದಿದೆ.

ಹಳೆಯ ಮನೆಯ ಅಡಿಪಾಯ ತೋಡುವ ವೇಳೆ ಅಪಾರ ಪ್ರಮಾಣದ ಪುರಾತನ ಚಿನ್ನಾಭರಣಗಳಿರುವ ಲೋಹದ ಚೆಂಬು ಪತ್ತೆಯಾಗಿದ್ದು, ಗ್ರಾಮದಲ್ಲಿ ಸಂಚಲನ ಉಂಟಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ್ ರಿತ್ತಿ ಅವರ ಮನೆಯಲ್ಲಿ ಹೊಸ ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೋಡುತ್ತಿದ್ದಾಗ ಕಾರ್ಮಿಕರಿಗೆ ಲೋಹದ ಚೆಂಬು ಸಿಕ್ಕಿದೆ. ಪರಿಶೀಲನೆ ನಡೆಸಿದಾಗ ಅದರೊಳಗೆ ಚಿನ್ನದ ಚೈನ್, ಬೆಲೆಬಾಳುವ ಬಳೆಗಳು ಹಾಗೂ ವಿವಿಧ ವಿನ್ಯಾಸದ ಉಂಗುರಗಳು ಪತ್ತೆಯಾಗಿವೆ.

ನಿಧಿ ಸಿಕ್ಕ ಮನೆಗೆ ಹೊಂದಿಕೊಂಡಂತೆ ಪುರಾತನ ಲಕ್ಷ್ಮೀ ದೇವಸ್ಥಾನ ಇರುವುದರಿಂದ, ಈ ಚಿನ್ನಾಭರಣಗಳು ದೇವಸ್ಥಾನಕ್ಕೆ ಸೇರಿದ ಪುರಾತನ ಒಡವೆಗಳಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸ ಹೊಂದಿರುವ ಲಕ್ಕುಂಡಿಯಲ್ಲಿ ಮತ್ತೆ ನಿಧಿ ಪತ್ತೆಯಾಗಿರುವುದು ಇತಿಹಾಸಕ್ತರಲ್ಲಿ ಕುತೂಹಲ ಹೆಚ್ಚಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಭರಣಗಳ ಕಾಲಮಾನ ಮತ್ತು ಮೌಲ್ಯ ನಿಗದಿಗಾಗಿ ಸಂಶೋಧನೆ ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಡಳಿತ ಸ್ಥಳವನ್ನು ಹೆಚ್ಚಿನ ಉತ್ಖನನ ನಡೆಸುವ ಸಾಧ್ಯತೆ ಇದೆ. 11–12ನೇ ಶತಮಾನದ ದೇವಸ್ಥಾನಗಳಿಗೆ ಹೆಸರುವಾಸಿಯಾದ ಲಕ್ಕುಂಡಿ ಗ್ರಾಮವು 101 ದೇವಸ್ಥಾನಗಳು ಮತ್ತು 101 ಬಾವಿಗಳನ್ನು ಹೊಂದಿರುವ ‘ಶಿಲ್ಪಕಲೆಯ ತೊಟ್ಟಿಲು’ ಎಂದೇ ಖ್ಯಾತಿ ಪಡೆದಿದೆ. ಇಂದಿನ ನಿಧಿ ಪತ್ತೆ ಕಲ್ಯಾಣ ಚಾಲುಕ್ಯರ ಕಾಲದ ಆರ್ಥಿಕ ಸಮೃದ್ಧಿ ಮತ್ತೊಮ್ಮೆ ನೆನಪಿಸಿದೆ.

ಘಟನೆ ಬೆನ್ನಲ್ಲೇ ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ್, ಎಡಿಸಿ‌ ದುರ್ಗೆಶ್ ಸೇರಿದಂತೆ ಹಲವು ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ಗಂಗವ್ವ ಬಸವರಾಜ್ ರಿತ್ತಿ ಕುಟುಂಬಸ್ಥರು, ತಮ್ಮ ಮನೆ ತಳಪಾಯ ತೆಗೆಯುವ ವೇಳೆ ಪತ್ತೆಯಾದ ನಿಧಿಯನ್ನ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದು, ಇವರ ಪ್ರಾಮಾಣಿಕತೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟು 466 ಗ್ರಾಂ ಹಳೆ ಕಾಲದ ಚಿನ್ನದ ಆಭರಣಗಳು ಸಿಕ್ಕಿವೆ.. ಸದ್ಯ ಇದರ ಮೌಲ್ಯ‌ ಸುಮಾರು 65 ರಿಂದ 70 ಲಕ್ಷ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ. `

 

error: Content is protected !!