Home Blog Page 190

ಡಾ. ಅಂಬೇಡ್ಕರರ ಪುತ್ಥಳಿ ಅನಾವರಣ ಕಾರ್ಯವನ್ನು ನಾಡ ಹಬ್ಬದಂತೆ ಆಚರಿಸಲು ನಿರ್ಧಾರ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಡಂಬಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿ ಅನಾವರಣ ಮಾಡಬೇಕು ಎನ್ನುವ ಹಲವು ವರ್ಷಗಳ ದಲಿತ ಸಮುದಾಯದ ಮತ್ತು ಅಂಬೇಡ್ಕರ ಅಭಿಮಾನಿಗಳ ಕನಸು ಶೀಘ್ರದಲ್ಲೇ ನನಸಾಗುವ ಕಾಲ ಕೂಡಿ ಬಂದಿದ್ದು, ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಶನಿವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಮುಖಂಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಜನವರಿ ಅಥವಾ ಮುಂದಿನ ತಿಂಗಳ ಫೆಬ್ರುವರಿ ಮೂರನೇ ವಾರದೊಳಗೆ ಅಂಬೇಡ್ಕರ ಪುತ್ಥಳಿ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ಣಯದಂತೆ ಎಲ್ಲಾ ಸದಸ್ಯರನ್ನೊಳಗೊಂಡು ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸುವ ಕುರಿತು ಚರ್ಚೆಗಳು ನಡೆದವು. ವಿಶೇಷವಾಗಿ ಕಾರ್ಯಕ್ರಮ ಮಾಡುವ ಸ್ಥಳ, ಕುಂಭ ಮೆರವಣಿಗೆ, ಊಟದ ವ್ಯವಸ್ಥೆ, ನೀರು ನಿರ್ವಹಣೆ, ವೇದಿಕೆಯ ವ್ಯವಸ್ಥೆ, ಖರ್ಚು-ವೆಚ್ಚ ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಸಭೆಯಲ್ಲಿ ಮುಖಂಡರಾದ ದೇವಪ್ಪ ತಳಗೇರಿ, ಗ್ರಾ.ಪಂ ಸದಸ್ಯ ರಾಕೇಶ ಅಡವಿ, ಮಾರುತಿ ಬಿಸನಹಳ್ಳಿ, ಮುಖಂಡ ಹನಮಪ್ಪ ಶಿವಪ್ಪ ಹಾದಿಮನಿ, ಕೃಷ್ಣ ಕಟ್ಟೆಣ್ಣವರ, ಉಪನ್ಯಾಸಕರಾದ ಮಂಜುನಾಥ ಬಿಸನಹಳ್ಳಿ, ಗವಿಸಿದ್ದಪ್ಪ ಹಾದಿಮನಿ, ಲಕ್ಷ್ಮಣ ದೊಡ್ಡಮನಿ, ನಾಗಪ್ಪ ಕೊರವರ, ವಿಜಯಕುಮಾರ ಹಾದಿಮನಿ, ವೆಂಕಟೇಶ ತಳವಾರ, ಆದಿತ್ಯ ಗದಗಿನ, ಅಶೋಕ ತಳಗೇರಿ, ದೇವಿಂದ್ರಪ್ಪ ಪೂಜಾರ, ವಿನಾಯಕ ಕಟ್ಟೆಣ್ಣವರ, ಕುಮಾರ ಗೌಡಣ್ಣವರ, ಸುರೇಶ ದೊಡ್ಡಮನಿ, ಹನಮಪ್ಪ ಕೊರವರ, ಷಣ್ಮುಖಪ್ಪ ಒಂಟೆಲಭೋವಿ, ಯಮನಪ್ಪ ಹಾನಿ, ಗೋಪಾಲ ಕದಡಿ, ಫಕ್ಕಿರಪ್ಪ ಆನಿ, ಲೆಂಕೆಪ್ಪ ಕದಡಿ, ಚೇತನ ಸಿದ್ದಣ್ಣವರ, ಶಂಖರಲಿಂಗಪ್ಪ ಪೂಜಾರ ಮುಂತಾದವರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಗೌಡಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಶೇಷವಾಗಿ ಗ್ರಾ.ಪಂ ಆವರಣದಲ್ಲಿ ಅಂಬೇಡ್ಕರರ ಪುತ್ಥಳಿ ನಿರ್ಮಾಣದ ಕುರಿತು ಒಮ್ಮತದಿಂದ ಠರಾವು ಪಾಸು ಮಾಡಲು ಗಟ್ಟಿ ನಿರ್ಧಾರ ಕೈಗೊಂಡ ಎಲ್ಲಾ ಸದಸ್ಯರಿಗೂ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಸಮುದಾಯದ ಹಿರಿಯರಾದ ಮರಿತಿಮ್ಮಪ್ಪ ಆದಮ್ಮನವರ, ಕೆ.ಎನ್. ದೊಡ್ಡಮನಿ, ಡಿ. ಪ್ರಸಾದ, ಮರಿಯಪ್ಪ ಸಿದ್ದಣ್ಣವರ, ಗವಿಸಿದ್ದಪ್ಪ ಬಿಸನಹಳ್ಳಿ, ವಿರೂಪಾಕ್ಷಪ್ಪ ಯಲಿಗಾರ, ನಾಗಪ್ಪ ತಳವಾರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಗದಗ| ಲಕ್ಕುಂಡಿಯಲ್ಲಿ ಅಚ್ಚರಿ ಘಟನೆ; 101 ದೇವಸ್ಥಾನಗಳ ಊರಲ್ಲಿ ಪುರಾತನ ನಿಧಿ, ಚಿನ್ನದ ಗಣಿ ನೋಡಲು ಮುಗಿಬಿದ್ದ ಜನ!

0

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಅಚ್ಚರಿ ಮೂಡಿಸುವ ಘಟನೆ ನಡೆದಿದೆ.

ಹಳೆಯ ಮನೆಯ ಅಡಿಪಾಯ ತೋಡುವ ವೇಳೆ ಅಪಾರ ಪ್ರಮಾಣದ ಪುರಾತನ ಚಿನ್ನಾಭರಣಗಳಿರುವ ಲೋಹದ ಚೆಂಬು ಪತ್ತೆಯಾಗಿದ್ದು, ಗ್ರಾಮದಲ್ಲಿ ಸಂಚಲನ ಉಂಟಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ್ ರಿತ್ತಿ ಅವರ ಮನೆಯಲ್ಲಿ ಹೊಸ ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೋಡುತ್ತಿದ್ದಾಗ ಕಾರ್ಮಿಕರಿಗೆ ಲೋಹದ ಚೆಂಬು ಸಿಕ್ಕಿದೆ. ಪರಿಶೀಲನೆ ನಡೆಸಿದಾಗ ಅದರೊಳಗೆ ಚಿನ್ನದ ಚೈನ್, ಬೆಲೆಬಾಳುವ ಬಳೆಗಳು ಹಾಗೂ ವಿವಿಧ ವಿನ್ಯಾಸದ ಉಂಗುರಗಳು ಪತ್ತೆಯಾಗಿವೆ.

ನಿಧಿ ಸಿಕ್ಕ ಮನೆಗೆ ಹೊಂದಿಕೊಂಡಂತೆ ಪುರಾತನ ಲಕ್ಷ್ಮೀ ದೇವಸ್ಥಾನ ಇರುವುದರಿಂದ, ಈ ಚಿನ್ನಾಭರಣಗಳು ದೇವಸ್ಥಾನಕ್ಕೆ ಸೇರಿದ ಪುರಾತನ ಒಡವೆಗಳಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸ ಹೊಂದಿರುವ ಲಕ್ಕುಂಡಿಯಲ್ಲಿ ಮತ್ತೆ ನಿಧಿ ಪತ್ತೆಯಾಗಿರುವುದು ಇತಿಹಾಸಕ್ತರಲ್ಲಿ ಕುತೂಹಲ ಹೆಚ್ಚಿಸಿದೆ.

ವಿಷಯ ತಿಳಿಯುತ್ತಿದ್ದಂತೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಭರಣಗಳ ಕಾಲಮಾನ ಮತ್ತು ಮೌಲ್ಯ ನಿಗದಿಗಾಗಿ ಸಂಶೋಧನೆ ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಡಳಿತ ಸ್ಥಳವನ್ನು ಹೆಚ್ಚಿನ ಉತ್ಖನನ ನಡೆಸುವ ಸಾಧ್ಯತೆ ಇದೆ. 11–12ನೇ ಶತಮಾನದ ದೇವಸ್ಥಾನಗಳಿಗೆ ಹೆಸರುವಾಸಿಯಾದ ಲಕ್ಕುಂಡಿ ಗ್ರಾಮವು 101 ದೇವಸ್ಥಾನಗಳು ಮತ್ತು 101 ಬಾವಿಗಳನ್ನು ಹೊಂದಿರುವ ‘ಶಿಲ್ಪಕಲೆಯ ತೊಟ್ಟಿಲು’ ಎಂದೇ ಖ್ಯಾತಿ ಪಡೆದಿದೆ. ಇಂದಿನ ನಿಧಿ ಪತ್ತೆ ಕಲ್ಯಾಣ ಚಾಲುಕ್ಯರ ಕಾಲದ ಆರ್ಥಿಕ ಸಮೃದ್ಧಿ ಮತ್ತೊಮ್ಮೆ ನೆನಪಿಸಿದೆ.

ಘಟನೆ ಬೆನ್ನಲ್ಲೇ ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ್, ಎಡಿಸಿ‌ ದುರ್ಗೆಶ್ ಸೇರಿದಂತೆ ಹಲವು ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ಗಂಗವ್ವ ಬಸವರಾಜ್ ರಿತ್ತಿ ಕುಟುಂಬಸ್ಥರು, ತಮ್ಮ ಮನೆ ತಳಪಾಯ ತೆಗೆಯುವ ವೇಳೆ ಪತ್ತೆಯಾದ ನಿಧಿಯನ್ನ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದು, ಇವರ ಪ್ರಾಮಾಣಿಕತೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟು 466 ಗ್ರಾಂ ಹಳೆ ಕಾಲದ ಚಿನ್ನದ ಆಭರಣಗಳು ಸಿಕ್ಕಿವೆ.. ಸದ್ಯ ಇದರ ಮೌಲ್ಯ‌ ಸುಮಾರು 65 ರಿಂದ 70 ಲಕ್ಷ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ. `

 

ಹೂವಿನಶಿಗ್ಲಿ ಮಠದಲ್ಲಿ ಜ. 13ರಿಂದ 15ರವರೆಗೆ ಜಾತ್ರಾಮಹೋತ್ಸವ: ಸಾಂಗವಾಗಿ ನೆರವೇರಿದ ಖಡಕ್ ರೊಟ್ಟಿ-ಕರಿಂಡಿ ಸಂಗ್ರಹಿಸುವ ಕಾರ್ಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಹೂವಿನಶಿಗ್ಲಿ ಮಠದಲ್ಲಿ ಜ. 13ರಿಂದ 15ರವರೆಗೆ ನಡೆಯುವ ಖಡಕ್ ರೊಟ್ಟಿ-ಕರಿಂಡಿ ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು, ಕುಂದಗೋಳದ ಶ್ರೀ ಬಸವಣ್ಣಜ್ಜನವರು, ಜಮಖಂಡಿಯ ಗದಿಗೆಯ್ಯ ದೇವರ ನೇತೃತ್ವದಲ್ಲಿ ಗ್ರಾಮದಲ್ಲಿ ಎತ್ತಿನ ಬಂಡಿಗಳ ಮೂಲಕ ರೊಟ್ಟಿ, ಕಡಬು ಇತರೆ ಆಹಾರ ಪದಾರ್ಥ ಸಂಗ್ರಹಿಸುವ ಕಾರ್ಯ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಕಳೆದ 46 ವರ್ಷಗಳಿಂದ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವಕ್ಕೆ ಒಂದು ವಾರ ಮೊದಲು ಗ್ರಾಮದಲ್ಲಿನ ಎಲ್ಲ ಜಾತಿ, ಜನಾಂಗದವರೂ ರೊಟ್ಟಿ, ದವಸ-ಧಾನ್ಯಗಳನ್ನು ಕೈಲಾದ ಮಟ್ಟಿಗೆ ಮಠಕ್ಕೆ ತಂದು ಸಲ್ಲಿಸುವುದು ಸಂಪ್ರದಾಯ. ಕಳೆದ ವರ್ಷದಿಂದ ಶ್ರೀಗಳೇ ಎತ್ತಿನ ಬಂಡಿ, ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ಸಂಚರಿಸಿ ನೇರವಾಗಿ ಭಕ್ತರಿಂದಲೇ ರೊಟ್ಟಿ, ದವಸ-ಧಾನ್ಯ ಸಂಗ್ರಹಿಸಿ ಮೆರವಣಿಗೆ ಮೂಲಕ ಮಠಕ್ಕೆ ತರುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಶ್ರೀಗಳೇ ಭಕ್ತರ ಮನೆ ಬಾಗಿಲಿನತ್ತ ಬರುತ್ತಾರೆಂಬ ಸಂಭ್ರಮದಿಂದ ಗ್ರಾಮ ಪಂಚಾಯಿತಿಯವರು ಊರೆಲ್ಲ ಸ್ವಚ್ಛತೆ ಮಾಡಿದ್ದರು. ಪ್ರತಿ ಓಣಿಯಲ್ಲೂ ಭಕ್ತರು ತಮ್ಮ ಮನೆಯ ಮುಂದೆ ತಳಿರು-ತೋರಣ ಕಟ್ಟಿ, ರಂಗೋಲಿ ಹಾಕಿದ್ದರು. ಜಾತ್ರೆಯ ಪ್ರಸಾದ ಸೇವೆಗಾಗಿ ಪ್ರತಿ ಮನೆಯಲ್ಲಿ ಮೊದಲೇ ಸಿದ್ಧಪಡಿಸಿದ್ದ ನೂರಾರು ರೊಟ್ಟಿಗಳ ಎಣ್ಣೆಬುಟ್ಟಿಗೆ ಹೊಸ ಬಟ್ಟೆ ಕಟ್ಟಿ ಪೂಜೆ ಮಾಡಿ ತಲೆಯ ಮೇಲೆ ಹೊತ್ತು ಕಾಯುತ್ತಿದ್ದರು. ಶ್ರದ್ಧಾ ಭಕ್ತಿಯಿಂದ ರೊಟ್ಟಿ ಬುಟ್ಟಿ ಹೊತ್ತು ತಂದ ತಾಯಂದಿರ ತಲೆಯ ಮೇಲಿನ ಬುಟ್ಟಿಯನ್ನು ಮುಟ್ಟಿ ಆಶೀರ್ವದಿಸಿದ ಬಳಿಕ ಸಾಲುಗಟ್ಟಿ ಬರುತ್ತಿದ್ದ ಎತ್ತಿನ ಚಕ್ಕಡಿಯಲ್ಲಿ ರೊಟ್ಟಿ ಸಂಗ್ರಹಿಸಲಾಗುತ್ತಿತ್ತು. ಅಲ್ಲದೇ ನೂರಾರು ಮಹಿಳೆಯರು ರೊಟ್ಟಿ ಬುಟ್ಟಿ ಹೊತ್ತು ಮೆರವಣಿಗೆ ಮೂಲಕ ಮಠದವರೆಗೂ ತಲುಪಿಸಿ ಸಂತೃಪ್ತ ಭಾವ ವ್ಯಕ್ತಪಡಿಸಿದರು.

ಅಲಂಕೃತ ಎತ್ತಿನ ಬಂಡಿ, ಭಜನೆ, ಡೊಳ್ಳು ವಾದ್ಯಮೇಳದ ಮೆರವಣಿಗೆಯಲ್ಲಿ ವೇಳೆ ಎಲ್ಲ ಜಾತಿ, ಜನಾಂಗದ ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಶ್ರೀಮಠದ ಭಕ್ತ ಮಂಡಳಿಯ ಅಂದಾನಯ್ಯ ಹಿರೇಮಠ, ನೀಲಪ್ಪ ಹೊಸೂರ, ಆರ್.ಎಸ್. ಪಾಟೀಲ, ಮಾದೇವಪ್ಪ ಬಿಷ್ಟಣ್ಣವರ, ನಿಂಗಪ್ಪ ಕಳ್ಳಿಮನಿ, ಪಿ.ಎಚ್. ಪಾಟೀಲ, ಶಿವಲಿಂಗಯ್ಯ ಹಿರೇಮಠ ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಸಂಜೆಯ ಬಳಿಕ ರತೋತ್ಸವಕ್ಕೆ ಕಲಶಾರೋಹಣ ನೆರವೇರಿಸಲಾಯಿತು.

“ಹೂವಿನಶಿಗ್ಲಿ ಮಠದಲ್ಲಿ ಮಕರ ಸಂಕ್ರಾಂತಿ ಪುಣ್ಯಕಾಲದಲ್ಲಿ ಜರುಗುವ ಜಾತ್ರಾ ಮಹೋತ್ಸವದ ನಿಮಿತ್ತ ನಡೆಯುವ ಖಡಕ್-ರೊಟ್ಟಿ, ಕರಿಂಡಿ, ಕಡಬು ಪ್ರಸಾದ ಮಾಡುವ ಸಂಪ್ರದಾಯವನ್ನು ಶ್ರೀಮಠದ ಲಿಂ. ನಿರಂಜನ ಮಹಾಸ್ವಾಮಿಗಳು ಹಾಕಿಕೊಟ್ಟಿದ್ದಾರೆ. 5 ದಶಕಗಳಿಂದ ಭಕ್ತರು ಮಠಕ್ಕೆ ರೊಟ್ಟಿ, ಧಾನ್ಯ ತಂದು ಕೊಡುತ್ತಿದ್ದರು. 2 ವರ್ಷದಿಂದ ನಾವೇ ಭಕ್ತರ ಮನೆಯತ್ತ ಹೋಗಿ ಬಂಡಿ ಮೂಲಕ ರೊಟ್ಟಿ ಸಂಗ್ರಹಿಸುವ ಕಾರ್ಯ ಮಾಡಿದ್ದೇವೆ. ಗ್ರಾಮದ ಭಕ್ತರು ಶ್ರೀಮಠದ ಶಕ್ತಿ ಮತ್ತು ಸಂಪತ್ತಾಗಿದ್ದು, ಜಾತ್ರೆಯಷ್ಟೇ ಅಲ್ಲದೇ ವರ್ಷದುದ್ದಕ್ಕೂ ಗುರುಕುಲ ಮತ್ತು ಶಾಲೆಯ ಮಕ್ಕಳ ತ್ರಿವಿಧ ದಾಸೋಹ ಸೇವೆಗೆ ಸೇವೆ ಮಾಡುತ್ತಾ ಬಂದಿದ್ದಾರೆ. ಜಾತ್ರೆಯ 3 ದಿನಗಳ ಕಾಲ ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹ ಮಹೋತ್ಸವ ಜರುಗಲಿವೆ. ಎಲ್ಲ ಕಾರ್ಯಗಳಿಗೆ ಭಕ್ತರ ಸೇವೆ- ಸಹಾಯ-ಸಹಕಾರ ಸ್ಮರಣೀಯ”

  • ಶ್ರೀ ಚನ್ನವೀರ ಮಹಾಸ್ವಾಮಿಗಳು.

“ನಮ್ಮೂರಲ್ಲಿನ ಮಠದ ಲಿಂ. ನಿರಂಜನ ಸ್ವಾಮಿಗಳು ಮತ್ತು ಈಗಿನ ಚನ್ನವೀರ ಶ್ರೀಗಳ ಹೂವಿನಶಿಗ್ಲಿ ಎಂಬ ಚಿಕ್ಕ ಗ್ರಾಮ ನಾಡಿನೆಲ್ಲೆಡೆ ಹೆಸರಾಗಿದೆ. ಶ್ರೀಮಠದ ಗುರುಕುಲದ ಮಕ್ಕಳಿಗಾಗಿ, ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವಕ್ಕಾಗಿ ಅನ್ನದಾನದ ಅಳಿಲು ಸೇವೆ ಮಾಡುವ ಅವಕಾಶ ಕಲ್ಪಿಸಿರುವುದು ನಮ್ಮ ಭಾಗ್ಯ. ಶ್ರೀಮಠ ನಮ್ಮೂರ ಜನರಲ್ಲಿ ಮೇಲು-ಕೀಳು, ಬಡವ-ಶ್ರೀಮಂತ ಬೇಧ-ಭಾವ ಹೋಗಲಾಡಿಸಿ ಎಲ್ಲರೂ ಸೌಹಾರ್ದತೆ, ಸಹೋದರತೆಯ ಭಾವದಿಂದ ಬದುಕುವುದಕ್ಕೆ ಪ್ರೇರಣೆಯಾಗಿದೆ”

  • ಗಿರಿಜವ್ವ ಶ್ಯಾಮಸುಂದರ.
    ಶ್ರೀಮಠದ ಭಕ್ತೆ.

ವಿಶೇಷ ರೈಲುಗಳು ಗದಗ ಮೂಲಕವೇ ಸಂಚರಿಸಲಿ: ವಿಶ್ವನಾಥ ಖಾನಾಪೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರು-ವಿಜಯಪುರ ವಿಶೇಷ ರೈಲುಗಳು ಗದಗ ಮೂಲಕವೇ ಸಂಚರಿಸಲು ವಿಶ್ವನಾಥ ಖಾನಾಪೂರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.

ಯಶವಂತಪುರ-ವಿಜಯಪುರ ಹಬ್ಬದ ವಿಶೇಷ ರೈಲು ಸಂಕ್ರಾAತಿ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜನವರಿ 13ರಂದು ರೈಲು ಸಂಖ್ಯೆ: 06245 ಮತ್ತು ಜ. 23ರಂದು ರಾತ್ರಿ 7.15ಕ್ಕೆ ಎಸ್.ಎಂ.ವಿ.ಟಿ ರೈಲು ನಿಲ್ದಾಣದಿಂದ ಹೊರಡುವ ರೈಲು ಮರುದಿನ ಬೆಳಿಗ್ಗೆ 7ಕ್ಕೆ ವಿಜಯಪುರ ತಲುಪಲಿದೆ.

ಇಂತಹ ವಿಶೇಷ ಹಬ್ಬದ ಸಂದರ್ಭದಲ್ಲಿ ನಮ್ಮ ಗದಗ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಾವುದೇ ವಿಶೇಷ ರೈಲುಗಳು ಇಲ್ಲ. ಹೀಗಾಗಿ ಬೆಂಗಳೂರು-ವಿಜಯಪುರ ವಿಶೇಷ ರೈಲುಗಳಿಗೆ ಗದುಗಿನಲ್ಲಿಯೂ ನಿಲುಗಡೆ ನೀಡುವಂತೆ ಅವರು ವಿನಂತಿಸಿದ್ದಾರೆ.

ಹೆಣ್ಣಿನ ಪಾಲಿನ ಶಾರದೆ ಸಾವಿತ್ರಿಬಾಯಿ ಫುಲೆ: ವಿ.ವಿ. ನಡುವಿಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಅಕ್ಷರದ ಮಾತೆ, ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಚರಿತ್ರೆಯಲ್ಲಿ ಬರುವುದಕ್ಕಿಂತ ಪೂರ್ವ ಒಂದು ಕಾಲಘಟ್ಟದಲ್ಲಿ ದೇಶದ ಮಹಿಳೆಯನ್ನು ವಂಚಿಸಿ ಶಿಕ್ಷಣದಿಂದ ದೂರವಿರಿಸಿ ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದುದರ ವಿರುದ್ಧ ಧ್ವನಿಯೆತ್ತಿ ಅವರಿಗೂ ಕೂಡಾ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಸಮಾನತೆ ಸಿಗುವಂತೆ ಪ್ರಯತ್ನಿಸಿ, ಹೆಣ್ಣುಮಕ್ಕಳ ಪಾಲಿಗೆ ನಿಜಶಾರದೆಯಾಗಿದ್ದಾರೆ ಎಂದು ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿಮನಿ ಅಭಿಪ್ರಾಯಪಟ್ಟರು.

ಅವರು ವೃತ್ತಿಪರ ಮಹಿಳಾ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಗದಗ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಗದಗ ಹಾಗೂ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ ಅಧ್ಯಯನ ಕೇಂದ್ರ ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆಯವರ 195ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ರಾಜ್ಯ ದ.ಸಂ.ಸ ಸಂಘಟನಾ ಸಂಚಾಲಕರು ಹಾಗೂ ನಿವೃತ್ತ ಶಿಕ್ಷಕರಾದ ಎಸ್.ಎನ್. ಬಳ್ಳಾರಿ ಮಾತನಾಡಿ, ಸಾವಿತ್ರಿಬಾಯಿ ಫುಲೆಯವರ ಜೀವನ ಪ್ರತಿಯೊಬ್ಬ ಸ್ವಾಭಿಮಾನಿ ಮಹಿಳೆಗೆ ಸ್ಪೂರ್ತಿಯಾಗಿದ್ದು, ಅವರ ಸಾಮಾಜಿಕ ಕಳಕಳಿ ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ ಪರಿ ಕಷ್ಟಕರವಾಗಿದ್ದರೂ ಕೂಡಾ ಎದುರಿಸಿ ಸಾಧನೆ ಮಾಡಿರುವುದು ಅದ್ಭುತವಾದುದಾಗಿದೆ. ಪ್ರತಿಯೊಬ್ಬರೂ ಅವರ ಆದರ್ಶ ಪಾಲಿಸಬೇಕೆಂದು ಕರೆ ನೀಡಿದರು.

ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಚಂದ್ರು ಮೇಲಿನಮನಿ, ಕಾರ್ಯದರ್ಶಿಗಳಾದ ಮುತ್ತು ಮಾದರ, ತಾಲೂಕಾ ಸಂಚಾಲಕರಾದ ವಿನಾಯಕ ಬಳ್ಳಾರಿ, ದಲಿತ ನಾಯಕರಾದ ಮಂಜುನಾಥ ಮುಳಗುಂದ ಹಾಗೂ ವಿದ್ಯಾರ್ಥಿ ನಾಯಕರಾದ ವಿಶಾಲ ಗೋಶಲ್ಲನವರ ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ದಲಿತ ಕಲಾಮಂಡಳಿ ಸಂಚಾಲಕ ನಾಗರಾಜ ಗುತ್ತಿ ಕ್ರಾಂತಿಗೀತೆ ಹಾಡಿದರು. ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಕೃಷ್ಣಾ ಪೂಜಾರ ಸ್ವಾಗತಿಸಿದರೆ, ಹರೀಶ ಭಾವಿಮನಿ ವಂದಿಸಿದರು. ವೇದಿಕೆಯ ಮೇಲೆ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಗೋಪಾಲ ಪವಾರ, ನಿಲಯ ಪಾಲಕರಾದ ಸುಜಾತಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತವಾದ ಗುರಿ ಹೊಂದಿ ಸಾಧನೆಗೈದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದ ಅವರು, ಸಾಧಿಸುವ ಛಲ ಬೆಳೆಸಿಕೊಳ್ಳಲು ಕರೆ ನೀಡಿದರು.

ಶೌಚಾಲಯದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಹುಯಿಳಗೊಳ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಸೃಜನಶೀಲ ಕಾರ್ಯಕ್ರಮದಲ್ಲಿ ಶೌಚಾಲಯ ರಚನೆ ಮಾಡಿದ ಸದಸ್ಯರಿಗೆ ಶೌಚಾಲಯ ಸೀಟ್ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜ್ಞಾನವಿಕಾಸ ಕಾರ್ಯಕ್ರಮ ಸದಸ್ಯರಲ್ಲಿ ಜ್ಞಾನವನ್ನು ಹೆಚ್ಚಿಸುತ್ತದೆ, ಸದಸ್ಯರಿಗೆ ಕೌಶಲ್ಯ ಕಲಿಸುತ್ತದೆ, ಸ್ವ-ಉದ್ಯೋಗ ಮಾಡಲು ವೇದಿಕೆಯನ್ನು ರೂಪಿಸುತ್ತದೆ ಮತ್ತು ಸದಸ್ಯರು ಪ್ರಗತಿಯ ಜೀವನ ಕೂಡ ರೂಪಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ ಸಜ್ಜನರ ಮಾತನಾಡಿ, ಸದಸ್ಯರಿಗೆ ಶೌಚಾಲಯ ಬಳಕೆಯಿಂದ ಆಗುವ ಪ್ರಯೋಜನ ಮತ್ತು ಶೌಚಾಲಯ ಇಲ್ಲದಿದ್ದರೆ ಆಗುವ ತೊಂದರೆ ಕುರಿತು, ಬಯಲಲ್ಲಿ ಶೌಚ ಮಾಡುವುದರಿಂದ ಆಗುವ ಸಮಸ್ಯೆಗಳ ಕುರಿತು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪುತ್ರವ್ವ ಮಾಗಡಿ ವಹಿಸಿದ್ದರು. ನವಜೀವನ ಸಮಿತಿ ಅಧ್ಯಕ್ಷರಾದ ತಿಪ್ಪಣ್ಣ ಗಂಗಪ್ಪನವರ, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಉಮಾ ಎನ್.ಜಿ ಹಾಗೂ ಶ್ರೀನಿವಾಸ್ ಬೆಟದೂರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಧಿಕಾರಿ ಗಂಗಮ್ಮ ಮರಾಠಿ, ವಲಯ ಮೇಲ್ವಿಚಾರಕರಾದ ಮಲ್ಲಿಕಾರ್ಜುನ, ಸೇವಾ ಪ್ರತಿನಿಧಿಗಳಾದ ಸುಪ್ರಿಯಾ, ಕವಿತಾ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

ಭಾನುವಾರ ವಿವೇಕಾನಂದ ಜಯಂತ್ಯುತ್ಸವ ಆಚರಣೆ 

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಎ.ಪಿ.ಎಮ್.ಸಿ ಪ್ರಾಂಗಣದಲ್ಲಿ ಇರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ರವಿವಾರ ತಿಥಿ ಅನುಸಾರ 164ನೇ ವಿವೇಕಾನಂದ ಜಯಂತ್ಯುತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸ್ವಾಮಿ ನಿರ್ಭಯಾನಂದ ಸರಸ್ವತಿ ಹಾಗೂ ಸ್ವಾಮಿ ಜಗನ್ನಾಥಾನಂದ ಅವರು ವಹಿಸುವರು.

ಮುಂಜಾನೆ 5.30ಕ್ಕೆ ಆರತಿ, 6.30ಕ್ಕೆ ಪ್ರಾರ್ಥನೆ, 8ಕ್ಕೆ ಪೂಜೆ, 10ಕ್ಕೆ ಶಿವಸಹಸ್ರನಾಮ ಪಾರಾಯಣ ಮತ್ತು ಭಜನೆ, ಪೂರ್ವಾಹ್ನ 11ಕ್ಕೆ ಹೋಮ, 12ಕ್ಕೆ ಸ್ವಾಮಿ ನಿರ್ಭಯಾನಂದ ಸರಸ್ವತಿಯವರಿಂದ ಉಪನ್ಯಾಸ, ಮಧ್ಯಾಹ್ನ 1.30ಕ್ಕೆ ಮಹಾ ಪ್ರಸಾದ ಹಾಗೂ ಸಂಜೆ 6ರಿಂದ 7.30ರವರೆಗೆ ಭಜನೆ, ರಾತ್ರಿ 8.15ಕ್ಕೆ ಮಂಗಳಾರತಿ, 8.30ಕ್ಕೆ ಮಹಾ ಪ್ರಸಾದ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು, ಆಶ್ರಮ ಸದ್ಭಕ್ತರು, ರಾಮಕೃಷ್ಣ, ವಿವೇಕಾನಂದ ಹಾಗೂ ಶಾರದಾ ಮಾತೆಯ ಆರಾಧಕರು, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್ ಅವಧಿಯಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ

0

ವಿಜಯಸಾಕ್ಷಿ ಸುದ್ದಿ, ಗದಗ: ಹುಬ್ಬಳ್ಳಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ ಘಟನೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಮಿತಿಮೀರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಹುಬ್ಬಳ್ಳಿ ಘಟನೆಯು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಂ  ಹಿರೇಮಠ, ಸಿದ್ದಣ್ಣ ಪಲ್ಲೇದ, ಎಂ.ಎಸ್. ಕರಿಗೌಡ್ರ, ನಿರ್ಮಲ ಕೊಳ್ಳಿ, ಶ್ರೀಪತಿ ಉಡುಪಿ, ಅಶೋಕ ಸಂಕಣ್ಣವರ, ಜಗನ್ನಾಥಸಾ ಭಾಂಡಗೆ, ಸುರೇಶ್ ಮರಳಪ್ಪನವರ್, ಅನಿಲ್ ಅಬ್ಬಿಗೇರಿ, ಸುರೇಶ್ ಚಿತ್ತರಗಿ, ಸಂತೋಷ ಅಕ್ಕಿ, ವಿಜಯಲಕ್ಷ್ಮಿ ಮಾನ್ವಿ, ಸ್ವಾತಿ ಅಕ್ಕಿ, ಶಾರದಾ ಸಜ್ಜನರ, ಪಾರ್ವತಿ ಪಟ್ಟಣಶೆಟ್ಟಿ, ಪದ್ಮಿನಿ ಮುಟ್ಟಲದಿನ್ನಿ, ರೇಖಾ ಗವಳಿ, ರೇಖಾ ಬಂಗಾರ ಶೆಟ್ಟರ್, ರಾಜೇಶ್ವರಿ ಹಾದಿಮನಿ, ಶಾಂತ ತಿಮ್ಮಾಪುರ ಮುಂತಾದವರಿದ್ದರು.

ಜನಾರ್ದನ ರೆಡ್ಡಿ ಮನೆ ಮೇಲೆ ಫೈರಿಂಗ್: ಆಂಜನೇಯನ ಮೊರೆ ಹೋದ ಪತ್ನಿ ಅರುಣಾ ಲಕ್ಷ್ಮೀ, ಘಟನೆ ಬಗ್ಗೆ ಹೇಳಿದ್ದೇನು?

0

ಕೊಪ್ಪಳ: ಜನಾರ್ದನ ರೆಡ್ಡಿ ನಿವಾಸದ ಮೇಲೆ ನಡೆದ ಫೈರಿಂಗ್ ಘಟನೆ ಬಳಿಕ, ಅದರ ಭೀತಿಯಿಂದ ಇನ್ನೂ ಹೊರಬರಲಾಗದೆ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಸಂಕಟ ಅನುಭವಿಸುತ್ತಿದ್ದಾರೆ.

ನಾಳೆ ಶಾಸಕ ಜನಾರ್ದನ ರೆಡ್ಡಿ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ, ಪತಿಯ ಯೋಗಕ್ಷೇಮಕ್ಕಾಗಿ ಅರುಣಾ ಲಕ್ಷ್ಮೀ ಆಂಜನೇಯನ ಮೊರೆ ಹೋಗಿದ್ದಾರೆ. ಘಟನೆ ನಡೆದ ಬಳಿಕ ಎರಡನೇ ಬಾರಿ ಆಂಜನೇಯ ಬೆಟ್ಟ ಏರಿದ ಅವರು, 575 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದರ್ಶನದ ನಂತರ ಮಾತನಾಡಿದ ಅರುಣಾ ಲಕ್ಷ್ಮೀ, ಬಳ್ಳಾರಿಯಲ್ಲಿ ನಡೆದ ದುರ್ಘಟನೆಯ ನೆನಪುಗಳು ಇನ್ನೂ ಕಾಡುತ್ತಿವೆ, ಘಟನೆ ನೆನಸಿಕೊಂಡರೆ ಮೈ ನಡುಗುತ್ತದೆ. ಘಟನೆ ನಡೆದು 10 ದಿನಗಳಾದರೂ ತಾವು ಇನ್ನೂ ಆ ಆಘಾತದಿಂದ ಹೊರಬಂದಿಲ್ಲ ಎಂದರು. ಘಟನೆ ನಡೆದ ಸಂದರ್ಭದಲ್ಲಿ ತಾವು ಮತ್ತು ತಮ್ಮ ಮಗ ಮನೆಯಲ್ಲೇ ಇದ್ದೆವು. ಭರತ್ ರೆಡ್ಡಿಯ ಗೂಂಡಾಗಳು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಹಾಲಿ ಶಾಸಕರಾದ ತಮ್ಮ ಪತಿಯ ಮನೆ ಮೇಲೆ ದಾಳಿ ಮಾಡುವಂತಹ ದುಸ್ಸಾಹಸಕ್ಕೆ ಭರತ್ ರೆಡ್ಡಿ ಕೈ ಹಾಕಿದ್ದಾರೆ ಎಂದು ಅವರು ಹೇಳಿದರು.

ಭರತ್ ರೆಡ್ಡಿ ಪರ ಡಿಕೆ ಶಿವಕುಮಾರ್ ನಿಲ್ಲುವ ವಿಚಾರವೂ ತಮ್ಮನ್ನು ಇನ್ನಷ್ಟು ನೋಯಿಸಿದೆ, ಡಿಕೆಶಿಯ ಮಾತುಗಳು ಆ ಘಟನೆಯ ನೋವಿನಿಂದ ಹೊರಬರಲು ಅಡ್ಡಿಯಾಗಿವೆ. ತಮ್ಮ ಪತಿ ಹಾಗೂ ಜನತೆಗೆ ಯಾವುದೇ ಅಪಾಯ ಆಗಬಾರದೆಂಬ ಕಾರಣಕ್ಕೆ ಆಂಜನೇಯ ದರ್ಶನಕ್ಕೆ ಬಂದಿದ್ದೇನೆ ಎಂದು ಅರುಣಾ ಲಕ್ಷ್ಮೀ ಸ್ಪಷ್ಟಪಡಿಸಿದರು. ಜೊತೆಗೆ, ಘಟನೆ ಬಳಿಕ ರೆಡ್ಡಿ ಬ್ರದರ್ಸ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ವಿಚಾರವನ್ನು ತಳ್ಳಿಹಾಕಿ, ಮೊದಲಿನಿಂದಲೂ ನಾವು ಒಂದಾಗಿದ್ದೇವೆ, ಮುಂದೆಯೂ ಒಂದಾಗಿರುತ್ತೇವೆ ಎಂದರು.

ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು, ಪ್ರಸ್ತುತ ಸರ್ಕಾರದಿಂದ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲ, ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂದು ಅರುಣಾ ಲಕ್ಷ್ಮೀ ಆಗ್ರಹಿಸಿದರು.

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್; ಯಶಸ್ವಿನಿ ಬರೆದಿದ್ದ ಡೆತ್ ನೋಟ್ ಪತ್ತೆ!

0

ಆನೇಕಲ್:- ಕಳೆದ ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದ್ದ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ.

ಈ ಹಿಂದೆ ಮೃತಳ ತಾಯಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆರೋಪಿಸಿ, ಕಣ್ಣು ನೋವಿನಿಂದ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಕ್ಲಾಸ್‌ನಲ್ಲಿ ಅವಮಾನಿಸಿದ್ದಾರೆ ಹಾಗೂ ಅವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದರು. ಆದರೆ ಇದೀಗ ಡೆತ್‌ನೋಟ್ ಸಿಕ್ಕಿದೆ.

ಮೃತ ಯಶಸ್ವಿನಿ ಡೆತ್‌ನೋಟ್‌ನಲ್ಲಿ ನಾನು ಬದುಕಕ್ಕೆ ಯೋಗ್ಯಳಲ್ಲ, ಕ್ಷಮಿಸಿಬಿಡಿ. ನನ್ನ ಸಾವಿಗೆ ಯಾರು ಕಾರಣರಲ್ಲ. ನಾನು ಒಳ್ಳೆಯ ಮಗಳಲ್ಲ. ಅಮ್ಮ Thank You So Much ಎಂದು ಬರೆದಿದ್ದಾಳೆ. ಇನ್ನೂ ಕಾಲೇಜಿನಲ್ಲಿ ಮೃತ ಯಶಸ್ವಿನಿ ಅಳುತ್ತಾ ಕುಳಿತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಲೇಜು ಸಿಬ್ಬಂದಿ ಹಾಗೂ ಸೀನಿಯರ್ ಯಶಸ್ವಿನಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಬರೋದು ಸ್ಲಂನಿಂದ ಕೋತಿಯ ಹಾಗೆ ಇದ್ದೀಯಾ ಎಂದು ಅವಮಾನಿಸಿದ್ದರು. ಈ ಬಗ್ಗೆ ಪೋಷಕರು ಆಡಳಿತ ಮಂಡಳಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.

error: Content is protected !!