ಕೊಪ್ಪಳ: ಜನಾರ್ದನ ರೆಡ್ಡಿ ನಿವಾಸದ ಮೇಲೆ ನಡೆದ ಫೈರಿಂಗ್ ಘಟನೆ ಬಳಿಕ, ಅದರ ಭೀತಿಯಿಂದ ಇನ್ನೂ ಹೊರಬರಲಾಗದೆ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಸಂಕಟ ಅನುಭವಿಸುತ್ತಿದ್ದಾರೆ.
ನಾಳೆ ಶಾಸಕ ಜನಾರ್ದನ ರೆಡ್ಡಿ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ, ಪತಿಯ ಯೋಗಕ್ಷೇಮಕ್ಕಾಗಿ ಅರುಣಾ ಲಕ್ಷ್ಮೀ ಆಂಜನೇಯನ ಮೊರೆ ಹೋಗಿದ್ದಾರೆ. ಘಟನೆ ನಡೆದ ಬಳಿಕ ಎರಡನೇ ಬಾರಿ ಆಂಜನೇಯ ಬೆಟ್ಟ ಏರಿದ ಅವರು, 575 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದರ್ಶನದ ನಂತರ ಮಾತನಾಡಿದ ಅರುಣಾ ಲಕ್ಷ್ಮೀ, ಬಳ್ಳಾರಿಯಲ್ಲಿ ನಡೆದ ದುರ್ಘಟನೆಯ ನೆನಪುಗಳು ಇನ್ನೂ ಕಾಡುತ್ತಿವೆ, ಘಟನೆ ನೆನಸಿಕೊಂಡರೆ ಮೈ ನಡುಗುತ್ತದೆ. ಘಟನೆ ನಡೆದು 10 ದಿನಗಳಾದರೂ ತಾವು ಇನ್ನೂ ಆ ಆಘಾತದಿಂದ ಹೊರಬಂದಿಲ್ಲ ಎಂದರು. ಘಟನೆ ನಡೆದ ಸಂದರ್ಭದಲ್ಲಿ ತಾವು ಮತ್ತು ತಮ್ಮ ಮಗ ಮನೆಯಲ್ಲೇ ಇದ್ದೆವು. ಭರತ್ ರೆಡ್ಡಿಯ ಗೂಂಡಾಗಳು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಹಾಲಿ ಶಾಸಕರಾದ ತಮ್ಮ ಪತಿಯ ಮನೆ ಮೇಲೆ ದಾಳಿ ಮಾಡುವಂತಹ ದುಸ್ಸಾಹಸಕ್ಕೆ ಭರತ್ ರೆಡ್ಡಿ ಕೈ ಹಾಕಿದ್ದಾರೆ ಎಂದು ಅವರು ಹೇಳಿದರು.
ಭರತ್ ರೆಡ್ಡಿ ಪರ ಡಿಕೆ ಶಿವಕುಮಾರ್ ನಿಲ್ಲುವ ವಿಚಾರವೂ ತಮ್ಮನ್ನು ಇನ್ನಷ್ಟು ನೋಯಿಸಿದೆ, ಡಿಕೆಶಿಯ ಮಾತುಗಳು ಆ ಘಟನೆಯ ನೋವಿನಿಂದ ಹೊರಬರಲು ಅಡ್ಡಿಯಾಗಿವೆ. ತಮ್ಮ ಪತಿ ಹಾಗೂ ಜನತೆಗೆ ಯಾವುದೇ ಅಪಾಯ ಆಗಬಾರದೆಂಬ ಕಾರಣಕ್ಕೆ ಆಂಜನೇಯ ದರ್ಶನಕ್ಕೆ ಬಂದಿದ್ದೇನೆ ಎಂದು ಅರುಣಾ ಲಕ್ಷ್ಮೀ ಸ್ಪಷ್ಟಪಡಿಸಿದರು. ಜೊತೆಗೆ, ಘಟನೆ ಬಳಿಕ ರೆಡ್ಡಿ ಬ್ರದರ್ಸ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ವಿಚಾರವನ್ನು ತಳ್ಳಿಹಾಕಿ, ಮೊದಲಿನಿಂದಲೂ ನಾವು ಒಂದಾಗಿದ್ದೇವೆ, ಮುಂದೆಯೂ ಒಂದಾಗಿರುತ್ತೇವೆ ಎಂದರು.
ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು, ಪ್ರಸ್ತುತ ಸರ್ಕಾರದಿಂದ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲ, ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂದು ಅರುಣಾ ಲಕ್ಷ್ಮೀ ಆಗ್ರಹಿಸಿದರು.

