Home Blog Page 192

ಮುಂಬೈಗೆ ಸೋಲುಣಿಸಿ RCBಗೆ ರೋಚಕ ಜಯ: ಪಂದ್ಯದ ಬಳಿಕ ಸ್ಮೃತಿ ಮಂಧಾನ ಹೇಳಿದ್ದೇನು?

0

ವುಮೆನ್ಸ್ ಪ್ರೀಮಿಯರ್ ಲೀಗ್ (WPL) 4ನೇ ಆವೃತ್ತಿಯ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಭರ್ಜರಿ ರೋಮಾಂಚನ ನೀಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೀಸನ್‌ಗೆ ಶುಭಾರಂಭ ಮಾಡಿದೆ.

ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು. 155 ರನ್ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಕೊನೆಯ ಓವರ್‌ನಲ್ಲಿ 18 ರನ್ ಅಗತ್ಯವಿತ್ತು.

ಅಂತಿಮ ಓವರ್‌ನಲ್ಲಿ ನಾಟ್ ಸ್ಕೀವರ್ ಬ್ರಂಟ್ ಎಸೆದ ಬೌಲಿಂಗ್‌ನ್ನು ಸಮರ್ಥವಾಗಿ ಎದುರಿಸಿದ ನಡಿನ್ ಡಿ ಕ್ಲರ್ಕ್ 6, 4, 6, 4 ಎಂಬ ಅಬ್ಬರದ ಶಾಟ್‌ಗಳ ಮೂಲಕ ಆರ್‌ಸಿಬಿಗೆ 3 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು.

ಪಂದ್ಯ ನಂತರ ಮಾತನಾಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ, “ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯವೇ ಇಷ್ಟೊಂದು ರೋಮಾಂಚಕರಾಗಿದ್ದುದು ಖುಷಿ ನೀಡಿದೆ. ಇಂತಹ ಪಂದ್ಯದಲ್ಲಿ ಗೆದ್ದಿರುವುದು ತಂಡಕ್ಕೆ ದೊಡ್ಡ ಆತ್ಮವಿಶ್ವಾಸ ನೀಡುತ್ತದೆ” ಎಂದು ಹೇಳಿದರು.

“ಆರ್‌ಸಿಬಿ ಎಂದರೆ ಥ್ರಿಲ್ಲರ್‌ಗಳಿಗೆ ಹೆಸರುವಾಸಿ. ಇಂದು ಕೂಡ ಅಂತಹದೇ ರೋಚಕ ಪಂದ್ಯವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಈ ಗೆಲುವಿನ ಸಂಪೂರ್ಣ ಶ್ರೇಯಸ್ಸು ನಡಿನ್ ಡಿ ಕ್ಲರ್ಕ್‌ಗೆ ಸಲ್ಲಬೇಕು. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅಪಾರ ಜವಾಬ್ದಾರಿ ನಿಭಾಯಿಸಿದ್ದಾರೆ” ಎಂದು ಮಂಧಾನ ಪ್ರಶಂಸಿಸಿದರು.

ನಡಿನ್ ಡಿ ಕ್ಲರ್ಕ್ ಈ ಹಿಂದೆ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಆಡಿದ ಅದ್ಭುತ ಇನಿಂಗ್ಸ್‌ನ್ನು ನೆನಪಿಸಿಕೊಂಡ ಮಂಧಾನ, “ಅದೇ ರೀತಿ ಈ ಪಂದ್ಯದಲ್ಲೂ ಅವರು ಆರ್‌ಸಿಬಿಗಾಗಿ ನಿರ್ಣಾಯಕ ಪ್ರದರ್ಶನ ನೀಡಿದ್ದಾರೆ” ಎಂದರು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ WPL 4ನೇ ಸೀಸನ್‌ಗೆ ಆತ್ಮವಿಶ್ವಾಸದ ಆರಂಭ ನೀಡಿದೆ.

ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್!

0

ಬೆಂಗಳೂರು: ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಮೂಡಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಯುವತಿ ತಮ್ಮ ನಿವಾಸದಿಂದ ಮಾನ್ಯತಾ ಟೆಕ್ ಪಾರ್ಕ್‌ಗೆ ತೆರಳಲು ರಾಪಿಡೋ ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದರು. ಪ್ರಯಾಣದ ವೇಳೆ ಚಾಲಕ ವಿವೇಕ್ ಹಿಂಬದಿಗೆ ಸರಿದು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ಆಕ್ಷೇಪ ವ್ಯಕ್ತಪಡಿಸಿದರೂ, ಚಾಲಕ ಆಕೆಯ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ ಹಾಗೂ ಎದೆ ಭಾಗಕ್ಕೆ ಕೈ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯಿಂದ ಬೆಚ್ಚಿಬಿದ್ದ ಯುವತಿ ಕಿರುಚಾಡಿ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿ ವಿವೇಕ್‌ನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಈ ಘಟನೆ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಬಳಸುವ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಸಾರ್ವಜನಿಕರು ಹಾಗೂ ಮಹಿಳಾ ಸಂಘಟನೆಗಳು ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಚಾರ್ಮಾಡಿ ಘಾಟ್​​ನಲ್ಲಿ ಲಾರಿಗೆ ಬೆಂಕಿ: ಸಂಪೂರ್ಣ ಸುಟ್ಟು ಕರಕಲಾದ ಮೆಕ್ಕೆಜೋಳ ತುಂಬಿದ ಲಾರಿ

0

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ನಡೆದಿದೆ. ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಜ.9 ಮಧ್ಯರಾತ್ರಿ ಈ ಅವಘಡ ಸಂಭವಿಸಿದೆ.

ಚಿಕ್ಕಮಗಳೂರಿನಿಂದ ಮೂಡಬಿದಿರೆ ಕಡೆಗೆ ಮೆಕ್ಕೆಜೋಳ ಲೋಡ್ ತೆಗೆದುಕೊಂಡು ಹೋಗುತ್ತಿದ್ದ KA-13-AA-4758 ಸಂಖ್ಯೆಯ ಲಾರಿಗೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಎರಡನೇ ತಿರುವಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಲಾರಿಯಲ್ಲಿದ್ದ ಚಾಲಕ ಸೇರಿ ಮೂವರು ಲಾರಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಾರಿಯ ಟಯರ್ ಭಾಗದಿಂದ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಲಾರಿಗೆ ವ್ಯಾಪಿಸಿ, ಲಕ್ಷಾಂತರ ರೂ. ಮೌಲ್ಯದ ಮೆಕ್ಕೆಜೋಳ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಲಾರಿಯೂ ಸಂಪೂರ್ಣವಾಗಿ ಸುಟ್ಟುಹೋಗಿದೆ.

ಬೆಂಕಿಯ ತೀವ್ರತೆಯಿಂದ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೂ ಅಗ್ನಿ ವ್ಯಾಪಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯ ಯುವಕರು ಬೆಳ್ತಂಗಡಿ ಅಗ್ನಿಶಾಮಕ ದಳ ಮತ್ತು ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಧಾವಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಬೆಳ್ತಂಗಡಿ ಸಂಚಾರಿ ಪೊಲೀಸರು ಸಂಚಾರ ಪುನರ್ ವ್ಯವಸ್ಥೆ ಮಾಡಿದರು.

ಲಾರಿ ಬೆಂಕಿಗಾಹುತಿಯಾದ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪದೇ ಪದೇ ಚಾರ್ಮಾಡಿ ಘಾಟ್‌ನಲ್ಲಿ ಈ ರೀತಿಯ ಘಟನೆಗಳು ಸಂಭವಿಸುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಬಡಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕನ್ನಡ ಶಾಲೆಗಳಲ್ಲಿ ಮಲಯಾಳಂ ಹೇರಿಕೆ ಖಂಡನೀಯ: ಬಿ.ವೈ. ವಿಜಯೇಂದ್ರ

0

ಬೆಂಗಳೂರು: ಕರ್ನಾಟಕದ ಗಡಿ ಭಾಗದ ಕೇರಳ ರಾಜ್ಯದ ಪ್ರದೇಶದಲ್ಲಿರುವ ಕನ್ನಡ ಶಾಲೆಗಳಲ್ಲಿ ಒತ್ತಾಯಪೂರ್ವಕವಾಗಿ ಮಲೆಯಾಳ ಭಾಷೆ ಹೇರುವ ಕೆಲಸಕ್ಕೆ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಸರ್ಕಾರ ಕೈ ಹಾಕಿದೆ. ಇದು ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಈ ಕ್ರಮವನ್ನು ಪ್ರಬಲವಾಗಿ ಖಂಡಿಸುತ್ತಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಎಲ್ಲ ಕನ್ನಡಪರ ಸಂಘಟನೆಗಳು ಕೂಡ ಈ ವಿಷಯದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.

ಕೇರಳದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸುವ ವಿಚಾರದಲ್ಲಿ ಕೇವಲ ಹೇಳಿಕೆಗಳು ಅಥವಾ ಪತ್ರ ಬರೆಯುವುದರಿಂದ ಪ್ರಯೋಜನವಿಲ್ಲ. ಕನ್ನಡಿಗರಿಗೆ ಅನ್ಯಾಯವಾಗಬಾರದು ಎಂಬುದಾದರೆ, ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರ ಮೇಲೆ ಒತ್ತಡ ತರುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದು ಅವರು ಹೇಳಿದರು. ಕೇರಳದಲ್ಲಿರುವ ಕನ್ನಡ ಶಾಲೆಗಳ ರಕ್ಷಣೆ ಮಾಡಬೇಕು ಹಾಗೂ ಮಲೆಯಾಳ ಭಾಷೆ ಹೇರಿಕೆಗೆ ಅವಕಾಶ ಕೊಡಬಾರದು ಎಂಬುದಾಗಿ ಸಿದ್ದರಾಮಯ್ಯ ಸರ್ಕಾರ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇನ್ನು ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಎಐಸಿಸಿ) ಕೆ.ಸಿ. ವೇಣುಗೋಪಾಲ್ ಅವರು ಕರ್ನಾಟಕದ ವಿಚಾರಗಳಲ್ಲಿ ಪದೇಪದೇ ಮೂಗು ತೂರಿಸುವುದಾಗಿ ಆರೋಪಿಸಿದ ವಿಜಯೇಂದ್ರ, ವಯನಾಡಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕ ಹಲವು ಬಾರಿ ಸಹಾಯಹಸ್ತ ಚಾಚಿರುವುದು ಎಲ್ಲರಿಗೂ ತಿಳಿದ ವಿಚಾರ ಎಂದರು.

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಆತಂಕ: ಮರ ಕೆಡವಿ 2 ಕಿಮೀ ಟ್ರಾಫಿಕ್ ಜಾಮ್

0

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯ 2 ಮತ್ತು 3ನೇ ತಿರುವಿನ ಬಳಿ ಒಂಟಿ ಸಲಗ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಶುಕ್ರವಾರ (ಜ.9) ರಾತ್ರಿ ಕಾಡಾನೆ ರಸ್ತೆ ಮೇಲೆ ಮರ ಕೆಡವಿ, ರಸ್ತೆಯಲ್ಲೇ ನಿಂತ ಪರಿಣಾಮ ಚಿಕ್ಕಮಗಳೂರು ಹಾಗೂ ಮಂಗಳೂರು ಕಡೆಗೆ ಸಾಗುವ ಮಾರ್ಗದಲ್ಲಿ ಸುಮಾರು 2 ಕಿಲೋ ಮೀಟರ್‌ ಟ್ರಾಫಿಕ್ ಜಾಮ್ ಉಂಟಾಗಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮೊಬೈಲ್ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಪ್ರವಾಸಿಗರು ಪರದಾಡಿದ ಘಟನೆ ನಡೆದಿದೆ. ಕೆಲವರು ಪರಿಸ್ಥಿತಿಯನ್ನು ಗಮನಿಸಿ ತಮ್ಮ ವಾಹನಗಳನ್ನು ವಾಪಸ್‌ ತಿರುಗಿಸಿಕೊಂಡು ತೆರಳಿದ್ದಾರೆ.

ಈ ಹಿಂದೆಯೂ ಈ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡ ಘಟನೆಗಳು ವರದಿಯಾಗಿದ್ದು, ಇದೀಗ ಮತ್ತೆ ಆತಂಕ ಹೆಚ್ಚಿಸಿದೆ. ಕಾಡಾನೆ ಕಾಣಿಸಿಕೊಂಡ ಹಿನ್ನೆಲೆ, ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನಾಡಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್

0

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಆಲನಾಥ ಗ್ರಾಮದಲ್ಲಿ ನಡೆದ ನಾಡಬಾಂಬ್ ಸ್ಫೋಟ ಪ್ರಕರಣ ಗ್ರಾಮಸ್ಥರ ಮನಸ್ಸನ್ನು ಕಲುಷಿತಗೊಳಿಸಿತ್ತು. ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್‌ಗೆ ಬಲಿ ಆದ ಹಸುವಿನ ನೋವಿನ ಕಥೆಗೆ ಇದೀಗ ನ್ಯಾಯ ದೊರಕತೊಡಗಿದೆ.

ಜನವರಿ 3ರಂದು ರೈತ ಶಿವನೇಗೌಡ ತಮ್ಮ ಹಸುವನ್ನು ಮೇಯಲು ಬಿಟ್ಟಾಗ, ಹಸುವಿನ ಬಾಯಿಗೆ ನಾಡಬಾಂಬ್ ಸಿಲುಕಿ ಭೀಕರ ಸ್ಫೋಟ ಸಂಭವಿಸಿತ್ತು. ಬಾಯಿ ಛಿದ್ರಗೊಂಡ ಹಸು ತೀವ್ರ ನೋವಿನಲ್ಲಿ ನರಳಾಡುತ್ತಾ ಎರಡು ದಿನಗಳ ಬಳಿಕ ಸಾವನ್ನಪ್ಪಿತ್ತು. ಈ ಘಟನೆ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ಘಟನೆಗೆ ಸಂಬಂಧಿಸಿ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಕಾಡು ಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿದ್ದ ಮೂವರು ಆರೋಪಿಗಳಾದ ಕೃಷ್ಣಮೂರ್ತಿ (45), ಶಿವಕುಮಾರ್ (23) ಮತ್ತು ಶಿವನಪ್ಪ (46) ಅವರನ್ನು ಬಂಧಿಸಿದ್ದಾರೆ. ಜೊತೆಗೆ, ಇನ್ನೆರಡು ಜೀವಂತ ನಾಡಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆ ಮೂಲಕ ಅಕ್ರಮ ಬೇಟೆ ಮತ್ತು ಸ್ಫೋಟಕ ಬಳಕೆಗೆ ಪೊಲೀಸರ ಕಠಿಣ ಸಂದೇಶ ನೀಡಿದಂತಾಗಿದೆ.

ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ಅವಘಡ: ಬಿಹಾರ ಮೂಲದ ಐವರಿಗೆ ಗಂಭೀರ ಗಾಯ

0

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗಾಯಗೊಂಡವರನ್ನು ಬಿಹಾರ ಮೂಲದ ಅಂಶುರಾಜ್ ಕುಮಾರ್ (18), ಹುಸೇನ್ ಖಾನ್ (21), ರೋಹಿತ್ ಚೌದರಿ (20), ಆರಬೇಗ್ ಆಲಂ (26) ಹಾಗೂ ಮುಜಾಫರ್ ಹುಸೇನ್ (19) ಎಂದು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈ ಐವರೂ ಚೊಕ್ಕಸಂದ್ರದಲ್ಲಿರುವ ಒಂದೇ ಕೋಣೆಯಲ್ಲಿ ವಾಸವಾಗಿದ್ದರು. ಕೋಣೆಯಲ್ಲಿ ಇರಿಸಿದ್ದ ಅಡುಗೆ ಅನಿಲ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿರುವುದನ್ನು ಗಮನಿಸದೇ, ಶುಕ್ರವಾರ ಬೆಳಿಗ್ಗೆ ಟೀ ತಯಾರಿಸಲು ಲೈಟರ್ ಹಚ್ಚಿದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಐವರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪತ್ನಿ ಕೊಂದು ಪತಿ ಆತ್ಮಹತ್ಯೆಗೆ ಶರಣು: ಗಂಡ ಹೆಂಡ್ತಿ ಜಗಳದಲ್ಲಿ ಮಕ್ಕಳು ಅನಾಥ!

0

ಬೆಳಗಾವಿ: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದು, ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಲಹೊಂಗಲ ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಯಲ್ಲವ್ವ ಕಂಬಳಿ (46) ಕೊಲೆಯಾದ ಪತ್ನಿಯಾಗಿದ್ದು, ಶಿವಪ್ಪ ಸಣ್ಣಬಸಪ್ಪ ಕಂಬಳಿ (50) ಆತ್ಮಹತ್ಯೆ ಮಾಡಿಕೊಂಡ ಪತಿಯಾಗಿದ್ದಾರೆ.

ಯಲ್ಲವ್ವ ತವರು ಮನೆಗೆ ಹೋಗುವ ವಿಚಾರಕ್ಕೆ ಸಂಬಂಧಿಸಿ ಪತಿ ಶಿವಪ್ಪರೊಂದಿಗೆ ಪದೇಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ. ಕಳೆದ ವಾರ ಯಲ್ಲವ್ವ ತಾಯಿ ನಿಧನರಾಗಿದ್ದರಿಂದ, ತವರು ಊರಾದ ಮೇಕಲಮರಡಿ ಗ್ರಾಮಕ್ಕೆ ಹೋಗಿದ್ದರು. ಮಂಗಳವಾರ ಮಾತ್ರವೇ ಅವರು ಗಂಡನ ಮನೆಗೆ ಮರಳಿದ್ದರು.

ತಾಯಿಯ ಸಾವಿನ ನಂತರದ ವಿಧಿವಿಧಾನಗಳನ್ನು ನೆರವೇರಿಸಲು ಶುಕ್ರವಾರ ಬೆಳಿಗ್ಗೆ ಸಿಹಿ ಅಡುಗೆ ಮಾಡಿಕೊಂಡು ಮೇಕಲಮರಡಿಗೆ ತೆರಳಲು ಯಲ್ಲವ್ವ ಸಿದ್ಧತೆ ನಡೆಸುತ್ತಿದ್ದ ವೇಳೆ, ಪತಿ ಶಿವಪ್ಪ ಮತ್ತೆ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದ ನಂತರ ಕೋಪೋದ್ರಿಕ್ತನಾದ ಶಿವಪ್ಪ ಕೊಡಲಿಯಿಂದ ಯಲ್ಲವ್ವ ಅವರ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಯಲ್ಲವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪತ್ನಿಯನ್ನು ಕೊಲೆಗೈದ ಬಳಿಕ ಶಿವಪ್ಪ ಕೂಡ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಒಬ್ಬ ಮಗ ನಿನ್ನೆ ಸಂಬಂಧಿಕರ ಊರಿಗೆ ತೆರಳಿದ್ದರೆ, ಮತ್ತೊಬ್ಬ ಮಗ ಬೆಳಿಗ್ಗೆ ಎಂದಿನಂತೆ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಗೆ ಕೆಲಸಕ್ಕೆ ಹೋಗಿದ್ದ. ಬೆಳಿಗ್ಗೆ ಸುಮಾರು 8.45ರಿಂದ 9 ಗಂಟೆ ನಡುವೆ ಮನೆಗೆ ತಂದೆತಾಯಿ ಇಬ್ಬರೇ ಇದ್ದ ಸಮಯದಲ್ಲಿ ದುರ್ಘಟನೆ ನಡೆದಿದೆ.

ಅಪ್ಪಅಮ್ಮ ಇಬ್ಬರೂ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳ ಆಕ್ರಂದನ ಹೃದಯ ವಿದ್ರಾವಕವಾಗಿತ್ತು. ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

ವಿಚ್ಛೇದಿತ ಮಹಿಳೆಗೆ ಮದುವೆ ಭರವಸೆ ನೀಡಿ 36 ಲಕ್ಷ ರೂ. ವಂಚನೆ! ಆರೋಪಿ ವಿರುದ್ಧ FIR

0

ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನು ಬಣ್ಣದ ಮಾತುಗಳಿಂದ ನಂಬಿಸಿ ಬಾಳು ಕೊಡೋದಾಗಿ ಮದುವೆಯಾಗಿದ್ದ ಮೋಹನ್ ರಾಜ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಚಿನ್ನಾಭರಣ ಸೇರಿ ಒಟ್ಟು 36 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತೆಯ ದೂರಿನ ಪ್ರಕಾರ, ಮೋಹನ್ ರಾಜ್ ಮಹಿಳೆಗೆ ಮದುವೆ ಭರವಸೆ ನೀಡಿ ಸಂಸಾರ ನಡೆಸಿದ್ದ. ದಂಪತಿಗೆ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಬಳಿಕ “ಹೊಸ ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ” ಎಂದು ನಂಬಿಸಿ ಮಹಿಳೆಯಿಂದ ಹಣ ಪಡೆದು, ಚಿನ್ನಾಭರಣ ಸೇರಿ ಸುಮಾರು 36 ಲಕ್ಷ ರೂ. ವಂಚನೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದೀಗ ನ್ಯಾಯಕ್ಕಾಗಿ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮೋಹನ್ ರಾಜ್ ಹಾಗೂ ಮಹಿಳೆ ಬನಶಂಕರಿಯ ಒಂದೇ ಪ್ರದೇಶದವರು. ಮಹಿಳೆಯ ವಿಚ್ಛೇದನ ವಿಚಾರ ಸಂಪೂರ್ಣವಾಗಿ ತಿಳಿದಿದ್ದರೂ, ಹಲವು ವರ್ಷಗಳ ಪರಿಚಯದ ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿ 2022ರಲ್ಲಿ ವಿವಾಹವಾಗಿದ್ದಾನೆ. ಆದರೆ ಬಳಿಕ ವರ್ತನೆ ಬದಲಿಸಿಕೊಂಡು ಮಹಿಳೆಯನ್ನು ಸಂಕಷ್ಟಕ್ಕೆ ದೂಡಿದ್ದಾನೆ ಎಂದು ಆರೋಪಿಸಲಾಗಿದೆ.

ಮೋಹನ್ ರಾಜ್ ಮತ್ತು ಮಹಿಳೆ ಕಳೆದ 10 ವರ್ಷಗಳಿಂದ ಪರಿಚಿತರಾಗಿದ್ದು, 2023ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. 2025ರಲ್ಲಿ ಏಕಾಏಕಿ ಮನೆ ಬಿಟ್ಟು ಹೋದ ಮೋಹನ್ ರಾಜ್ ಬಳಿಕ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಹನ್ ರಾಜ್ ಬೇರೆ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದ ಹಾಗೂ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾನೆ ಎಂಬ ಆರೋಪವನ್ನೂ ಮಹಿಳೆ ಮಾಡಿದ್ದಾರೆ. ಈ ಕುರಿತು ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ. ದೂರು ನೀಡಲು ಒತ್ತಾಯಿಸಿದರೆ “ನಿನ್ನನ್ನೇ ಒಳಗೆ ಹಾಕ್ತೀವಿ” ಎಂದು ಪೊಲೀಸರು ಹೆದರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 200 ರೂ. ಹಣದ ವಿಚಾರವಾಗಿ ಗಲಾಟೆ:  ಜೀವ ಕಳೆದುಕೊಂಡ ಇಬ್ಬರು ಮಕ್ಕಳ ತಾಯಿ

0

ನೆಲಮಂಗಲ: ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಕೇವಲ 200 ರೂ. ವಿಚಾರಕ್ಕೆ ನಡೆದ ಗಂಡ-ಹೆಂಡತಿ ಗಲಾಟೆ ಕೊನೆಗೆ ಒಂದು ಕುಟುಂಬವನ್ನೇ ದುಃಖದೊಳಗೆ ತಳ್ಳಿದೆ.

ಎರಡು ಮಕ್ಕಳ ತಾಯಿ ಸುಮಾ (30) ಆತ್ಮಹತ್ಯೆಗೆ ಶರಣಾಗಿದ್ದಾರೆ. 8 ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ಸುಮಾ ವಿವಾಹವಾಗಿದ್ದರು. ಕುಟುಂಬ ನಿರ್ವಹಣೆ ಮತ್ತು ಹೊಣೆಗಾರಿಕೆಯ ಭಾಗವಾಗಿ, ಧರ್ಮಸ್ಥಳ ಸ್ವಸಹಾಯ ಸಂಘದ ಕಂತು ಪಾವತಿಸಲು ಸುಮಾ ಮನೆಯಲ್ಲೇ 1,300 ರೂ. ಉಳಿಸಿಕೊಂಡಿದ್ದರು. ಆದರೆ ಗಂಡ ಚಂದ್ರಶೇಖರ್ ಆ ಹಣದಲ್ಲಿ 200 ರೂ. ಅನ್ನು ಸ್ವಂತ ಖರ್ಚಿಗೆ ಬಳಸಿದ್ದರಿಂದ ದಂಪತಿ ನಡುವೆ ವಾಗ್ವಾದ ನಡೆದಿದೆ.

ಶುಕ್ರವಾರ ಬೆಳಗ್ಗೆ ನಡೆದ ಗಲಾಟೆಯ ನಂತರ ಪತಿ ಮತ್ತು ಅತ್ತೆ ಕೆಲಸಕ್ಕೆ ಹೊರಟಿದ್ದರು. ಆ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಸುಮಾ ತೀವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಊಟಕ್ಕೆಂದು ಮನೆಗೆ ಬಂದಾಗ ಘಟನೆ ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ದುರ್ಘಟನೆ ಮತ್ತೆ ಒಮ್ಮೆ ಕುಟುಂಬಗಳಲ್ಲಿ ಸಂವಾದ ಮತ್ತು ಮನೋಸಹಾಯದ ಅಗತ್ಯವನ್ನೇ ನೆನಪಿಸುತ್ತದೆ.

error: Content is protected !!