Home Blog Page 193

ವಿಚ್ಛೇದಿತ ಮಹಿಳೆಗೆ ಮದುವೆ ಭರವಸೆ ನೀಡಿ 36 ಲಕ್ಷ ರೂ. ವಂಚನೆ! ಆರೋಪಿ ವಿರುದ್ಧ FIR

0

ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನು ಬಣ್ಣದ ಮಾತುಗಳಿಂದ ನಂಬಿಸಿ ಬಾಳು ಕೊಡೋದಾಗಿ ಮದುವೆಯಾಗಿದ್ದ ಮೋಹನ್ ರಾಜ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಚಿನ್ನಾಭರಣ ಸೇರಿ ಒಟ್ಟು 36 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತೆಯ ದೂರಿನ ಪ್ರಕಾರ, ಮೋಹನ್ ರಾಜ್ ಮಹಿಳೆಗೆ ಮದುವೆ ಭರವಸೆ ನೀಡಿ ಸಂಸಾರ ನಡೆಸಿದ್ದ. ದಂಪತಿಗೆ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಬಳಿಕ “ಹೊಸ ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ” ಎಂದು ನಂಬಿಸಿ ಮಹಿಳೆಯಿಂದ ಹಣ ಪಡೆದು, ಚಿನ್ನಾಭರಣ ಸೇರಿ ಸುಮಾರು 36 ಲಕ್ಷ ರೂ. ವಂಚನೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದೀಗ ನ್ಯಾಯಕ್ಕಾಗಿ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮೋಹನ್ ರಾಜ್ ಹಾಗೂ ಮಹಿಳೆ ಬನಶಂಕರಿಯ ಒಂದೇ ಪ್ರದೇಶದವರು. ಮಹಿಳೆಯ ವಿಚ್ಛೇದನ ವಿಚಾರ ಸಂಪೂರ್ಣವಾಗಿ ತಿಳಿದಿದ್ದರೂ, ಹಲವು ವರ್ಷಗಳ ಪರಿಚಯದ ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿ 2022ರಲ್ಲಿ ವಿವಾಹವಾಗಿದ್ದಾನೆ. ಆದರೆ ಬಳಿಕ ವರ್ತನೆ ಬದಲಿಸಿಕೊಂಡು ಮಹಿಳೆಯನ್ನು ಸಂಕಷ್ಟಕ್ಕೆ ದೂಡಿದ್ದಾನೆ ಎಂದು ಆರೋಪಿಸಲಾಗಿದೆ.

ಮೋಹನ್ ರಾಜ್ ಮತ್ತು ಮಹಿಳೆ ಕಳೆದ 10 ವರ್ಷಗಳಿಂದ ಪರಿಚಿತರಾಗಿದ್ದು, 2023ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. 2025ರಲ್ಲಿ ಏಕಾಏಕಿ ಮನೆ ಬಿಟ್ಟು ಹೋದ ಮೋಹನ್ ರಾಜ್ ಬಳಿಕ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಹನ್ ರಾಜ್ ಬೇರೆ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದ ಹಾಗೂ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾನೆ ಎಂಬ ಆರೋಪವನ್ನೂ ಮಹಿಳೆ ಮಾಡಿದ್ದಾರೆ. ಈ ಕುರಿತು ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ. ದೂರು ನೀಡಲು ಒತ್ತಾಯಿಸಿದರೆ “ನಿನ್ನನ್ನೇ ಒಳಗೆ ಹಾಕ್ತೀವಿ” ಎಂದು ಪೊಲೀಸರು ಹೆದರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 200 ರೂ. ಹಣದ ವಿಚಾರವಾಗಿ ಗಲಾಟೆ:  ಜೀವ ಕಳೆದುಕೊಂಡ ಇಬ್ಬರು ಮಕ್ಕಳ ತಾಯಿ

0

ನೆಲಮಂಗಲ: ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಕೇವಲ 200 ರೂ. ವಿಚಾರಕ್ಕೆ ನಡೆದ ಗಂಡ-ಹೆಂಡತಿ ಗಲಾಟೆ ಕೊನೆಗೆ ಒಂದು ಕುಟುಂಬವನ್ನೇ ದುಃಖದೊಳಗೆ ತಳ್ಳಿದೆ.

ಎರಡು ಮಕ್ಕಳ ತಾಯಿ ಸುಮಾ (30) ಆತ್ಮಹತ್ಯೆಗೆ ಶರಣಾಗಿದ್ದಾರೆ. 8 ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ಸುಮಾ ವಿವಾಹವಾಗಿದ್ದರು. ಕುಟುಂಬ ನಿರ್ವಹಣೆ ಮತ್ತು ಹೊಣೆಗಾರಿಕೆಯ ಭಾಗವಾಗಿ, ಧರ್ಮಸ್ಥಳ ಸ್ವಸಹಾಯ ಸಂಘದ ಕಂತು ಪಾವತಿಸಲು ಸುಮಾ ಮನೆಯಲ್ಲೇ 1,300 ರೂ. ಉಳಿಸಿಕೊಂಡಿದ್ದರು. ಆದರೆ ಗಂಡ ಚಂದ್ರಶೇಖರ್ ಆ ಹಣದಲ್ಲಿ 200 ರೂ. ಅನ್ನು ಸ್ವಂತ ಖರ್ಚಿಗೆ ಬಳಸಿದ್ದರಿಂದ ದಂಪತಿ ನಡುವೆ ವಾಗ್ವಾದ ನಡೆದಿದೆ.

ಶುಕ್ರವಾರ ಬೆಳಗ್ಗೆ ನಡೆದ ಗಲಾಟೆಯ ನಂತರ ಪತಿ ಮತ್ತು ಅತ್ತೆ ಕೆಲಸಕ್ಕೆ ಹೊರಟಿದ್ದರು. ಆ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಸುಮಾ ತೀವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಊಟಕ್ಕೆಂದು ಮನೆಗೆ ಬಂದಾಗ ಘಟನೆ ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ದುರ್ಘಟನೆ ಮತ್ತೆ ಒಮ್ಮೆ ಕುಟುಂಬಗಳಲ್ಲಿ ಸಂವಾದ ಮತ್ತು ಮನೋಸಹಾಯದ ಅಗತ್ಯವನ್ನೇ ನೆನಪಿಸುತ್ತದೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಕಾಮೆಂಟ್‌ ಪ್ರಕರಣ: 6 ಮಂದಿ ಅರೆಸ್ಟ್

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ. ಸೈಬರ್ ಕ್ರೈಂ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ತನಿಖೆ ಇದೀಗ ಅಂತಿಮ ಹಂತ ತಲುಪಿದೆ.

ವಿಜಯಲಕ್ಷ್ಮಿಗೆ ಕೆಟ್ಟ ಕಾಮೆಂಟ್ ಮಾಡಿ ಪರಾರಿಯಾಗಿದ್ದವರ ಪೈಕಿ 6 ಮಂದಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಲ್ಲಿ ನಟ ಸುದೀಪ್ ಅಭಿಮಾನಿಗಳು ಕೂಡ ಸೇರಿರುವುದು ಚರ್ಚೆಗೆ ಕಾರಣವಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ, ಬಂಧಿತರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಪೆಟ್ರೋಲ್ ಬಂಕ್ ಮ್ಯಾನೇಜರ್ ಕೂಡ ಸೇರಿದ್ದಾರೆ.

60 ದಿನಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಸಬೇಕಿರುವ ಕಾನೂನು ಬದ್ಧತೆಯ ಹಿನ್ನೆಲೆಯಲ್ಲಿ, ಪೊಲೀಸರು ಬಂಧಿತರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿರುವುದನ್ನೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣ ಇದೀಗ ಸೋಷಿಯಲ್ ಮೀಡಿಯಾದ ದುರುಪಯೋಗಕ್ಕೆ ಎಚ್ಚರಿಕೆಯ ಸಂದೇಶವಾಗುತ್ತಿದೆ.

ಸ್ಫೋಟದ ನೋವಲ್ಲಿ ಗ್ರಾಮಗಳು: ಅಕ್ರಮ ಗಣಿಗಾರಿಕೆಯಿಂದ ಗರ್ಭಿಣಿಯರಿಗೂ ಅಪಾಯ, ಜನರ ಕಣ್ಣೀರು

0

ಶಿವಮೊಗ್ಗ: ಜಿಲ್ಲೆಯ ಆನವಟ್ಟಿ ತಾಲೂಕಿನ ಎಣ್ಣೆಕೊಪ್ಪ, ಬೆಲವಂತನಕೊಪ್ಪ ಹಾಗೂ ತೆವರತೆಪ್ಪ ಗ್ರಾಮಗಳು ಇಂದು ಅಕ್ರಮ ಕಲ್ಲು ಗಣಿಗಾರಿಕೆಯ ಭಾರೀ ಸಂಕಷ್ಟವನ್ನು ಎದುರಿಸುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸ್ಫೋಟಗಳ ತೀವ್ರತೆ ಗರ್ಭಿಣಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಕೆಲವರು ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಎಂಬುದು ಗ್ರಾಮಸ್ಥರ ನೋವಿನ ಮಾತಾಗಿದೆ. ಗರ್ಭಪಾತವಾಗುವ ಭೀತಿ ಜನರ ಮನದಲ್ಲಿ ಆಳವಾಗಿ ಮೂಡಿದೆ.

ಈ ಗಂಭೀರ ಪರಿಸ್ಥಿತಿಯ ನಡುವೆಯೂ ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಸಚಿವ ಮಧು ಬಂಗಾರಪ್ಪ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗಲಿಲ್ಲ ಎಂಬುದು ಅವರ ಅಳಲು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿಠಲ ದೇವಾಲಯದಿಂದ ನಾಡ ಕಚೇರಿವರೆಗೆ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಧ್ವನಿ ಎತ್ತಿದರು. ಸ್ಫೋಟಗಳಿಂದ ಉಂಟಾಗುವ ಧೂಳು ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿದ್ದು, ಜನರಲ್ಲಿ ಅಲರ್ಜಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸೊರಬ ತಹಶೀಲ್ದಾರ್ ಬಳಿ ದೂರು ಸಲ್ಲಿಸಿದ್ದಾರೆ.

ಗದಗ: ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ!

ಗದಗ: ಕಡಲೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ರೈತರು ರೆಡ್ ಹ್ಯಾಂಡ್ ಆಗಿ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಗದಗನ ಹೊಂಬಳ ರಸ್ತೆಯ ಸರ್ವಜ್ಞ ಸರ್ಕಲ್ ಬಳಿ ನಡೆದಿದೆ.

ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದ್ದ ನಾಗರಿಕರ ಕಣ್ಣಿಗೆ ಕಳ್ಳನ ಚಲನವಲನ ಬಿದ್ದಿದ್ದು, ತಕ್ಷಣವೇ ಈ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ರೈತರು ಸ್ಥಳಕ್ಕೆ ಧಾವಿಸಿ, ಜಮೀನಿನಲ್ಲಿ ಕಡಲೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

ಕಳೆದ ಹಲವು ದಿನಗಳಿಂದ ರೈತರ ಜಮೀನುಗಳಲ್ಲಿ ಕಡಲೆ ಕಳ್ಳತನ ನಡೆಯುತ್ತಿದ್ದು, ಕಡಲೆ ಕಳ್ಳರ ಹಾವಳಿಯಿಂದ ರೈತರು ಕಂಗಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಡಲೆ ಕಳ್ಳತನ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ರೈತರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕಳ್ಳನನ್ನು ಕಂಬಕ್ಕೆ ಕಟ್ಟಿ, ತಲೆ ಹಾಗೂ ಕೊರಳಿಗೆ ಕಡಲೆ ಗಿಡಗಳ ಮಾಲೆ ಹಾಕಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಯ ಮಾಹಿತಿ ಪಡೆದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ಚಳಿ ಹೆಚ್ಚಳ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಹಲವೆಡೆ ಮಂಜು–ಒಣಹವೆ

0

ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ತಾಪಮಾನದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಹಲವೆಡೆ ಮಂಜು ಮತ್ತು ಒಣ ಹವೆಯ ವಾತಾವರಣ ಮುಂದುವರಿದಿದೆ. ಈ ಹಿನ್ನೆಲೆ ಹವಾಮಾನ ಇಲಾಖೆ ರಾಜ್ಯದ ಬೀದರ್, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ–ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವೆಯ ಸ್ಥಿತಿ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದಲೂ ಒಣ ಹವೆಯ ವಾತಾವರಣ ಇದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಇಂದು ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಲಾಗಿದೆ.

ಚಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು ಹಾಗೂ ಬಿಸಿ ಆಹಾರ ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇ–ಖರೀದಿ ಪ್ರಕ್ರಿಯೆ ತಾಂತ್ರಿಕ ಪರಿಷ್ಕರಣೆಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ಬೆಂಗಳೂರು: ಸಾರ್ವಜನಿಕ ಕಾಮಗಾರಿಗಳಿಗೆ ಬಿಡ್‌ ಸಲ್ಲಿಸುವ ವೇಳೆ ಅಸ್ತಿತ್ವದಲ್ಲಿರುವ ಇ–ಖರೀದಿ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಗುರುತಿಸಿ, ರಾಜ್ಯದ ಇ–ಖರೀದಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಪರಿಷ್ಕರಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಜತೆಗೆ, ಪ್ರಸ್ತುತ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ವಂಚನೆಯನ್ನು ತೊಡೆದುಹಾಕುವ ಉದ್ದೇಶದಿಂದ ಉನ್ನತ ಮಟ್ಟದ ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಟೆಂಡರ್ ದಾಖಲೆಗಳ ರಿಯಲ್–ಟೈಮ್ ಪರಿಶೀಲನೆಯನ್ನು ಕಡ್ಡಾಯಗೊಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ನಿಯಮ–2000ರ ನಿಯಮ 26ಎ ಅಡಿಯಲ್ಲಿ, ಮಂಗಳೂರು ಮಹಾನಗರ ಪಾಲಿಕೆಗೆ ಬಿಡ್ ಸಲ್ಲಿಸುವ ವೇಳೆ ನಕಲಿ ಪರವಾನಗಿಗಳು, ಅಸ್ತಿತ್ವದಲ್ಲಿಲ್ಲದ ಕಾಮಗಾರಿ ಆದೇಶಗಳು ಹಾಗೂ ನಿಗದಿಗಿಂತ ಅಧಿಕ ವೆಚ್ಚದ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಆರೋಪದ ಮೇಲೆ ಸಾರ್ವಜನಿಕ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ನಿಷೇಧಿಸಿರುವುದನ್ನು ಪ್ರಶ್ನಿಸಿ ಮಂಗಳೂರು ಮೂಲದ ಗುತ್ತಿಗೆದಾರ ಅನಂತಕೃಷ್ಣ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಮಹತ್ವದ ನಿರ್ದೇಶನಗಳನ್ನು ನೀಡಿದೆ.

ರಾಜ್ಯದ ಎಲ್ಲಾ ಸಾರ್ವಜನಿಕ ಖರೀದಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇ–ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮೂಲಕವೇ ನಡೆಯಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಬಿಡ್ಡರ್‌ಗಳು ಸಲ್ಲಿಸುವ ಟೆಂಡರ್ ದಾಖಲೆಗಳನ್ನು ಮುಖಾಮುಖಿ ಹಸ್ತಕ್ಷೇಪವಿಲ್ಲದೆ ಸ್ವಯಂ ಪರಿಶೀಲಿಸಲು, ಇ–ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮತ್ತು ವಿವಿಧ ಸರ್ಕಾರಿ ಡೇಟಾಬೇಸ್‌ಗಳ ನಡುವೆ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್‌ (ಎಪಿಐ) ಏಕೀಕರಣವನ್ನು ಸ್ಥಾಪಿಸಿ ಕಾರ್ಯಗತಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

ಇದು ಒಂದೇ ಒಂದು ಪ್ರಕರಣಕ್ಕೆ ಸೀಮಿತವಲ್ಲ; ನಕಲಿ ಟೆಂಡರ್ ದಾಖಲೆಗಳನ್ನು ಸಲ್ಲಿಸುವ ಪ್ರವೃತ್ತಿ ಸಾರ್ವಜನಿಕ ಬೊಕ್ಕಸಕ್ಕೆ ಭಾರಿ ನಷ್ಟ ಉಂಟುಮಾಡಿದ್ದು, ಬಿಡ್ಡಿಂಗ್ ವ್ಯವಸ್ಥೆಯ ಸಮಗ್ರತೆಗೆ ಗಂಭೀರ ಧಕ್ಕೆ ತಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಖರೀದಿ ಪ್ರಕ್ರಿಯೆಯ ಪಾರದರ್ಶಕತೆ ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟ, ನಿಯಮಗಳ ಅನುಸರಣೆ, ವ್ಯಾಪಾರ–ವೃತ್ತಿಯ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ರಕ್ಷಣೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಕೇವಲ ಆಡಳಿತಾತ್ಮಕ ಕಡ್ಡಾಯವಲ್ಲ; ಸಂವಿಧಾನದ ವಿಧಿ 14 (ಸಮಾನತೆ) ಮತ್ತು ವಿಧಿ 19 ರಲ್ಲಿ ಅಡಕವಾದ ತತ್ವಗಳನ್ನು ಆಧರಿಸಿದ ಸಾಂವಿಧಾನಿಕ ಆದೇಶವಾಗಿದೆ ಎಂದು ಪೀಠ ಹೇಳಿದೆ.

ಕಂಪನಿಗಳ ನೋಂದಣಿ ಸಂಸ್ಥೆ, ಜಿಎಸ್‌ಟಿ ಇಂಡಿಯಾ ಪೋರ್ಟಲ್, ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು, ವೃತ್ತಿಪರ ಸಂಸ್ಥೆಗಳು, ನಿಗಮ–ಮಂಡಳಿಗಳು, ಪರಿಸರ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಉದ್ಯಮಗಳು, ಸ್ಮಾರ್ಟ್ ಸಿಟಿ ಘಟಕಗಳು, ಮೂಲಸೌಕರ್ಯ ಅಭಿವೃದ್ಧಿ ಮಂಡಳಿಗಳು, ಪುರಸಭೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ಜಿಲ್ಲಾಡಳಿತಗಳೊಂದಿಗೆ ಸಮಾಲೋಚನೆ ನಡೆಸಿ ಎಪಿಐ ಏಕೀಕರಣ ಜಾರಿಗೆ ತರಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

WPL 2026; ಮುಂಬೈ ವಿರುದ್ದ ಗೆಲುವಿನ ಬೆನ್ನಲ್ಲೇ RCB ತಂಡಕ್ಕೆ ಬಿಗ್ ಶಾಕ್; ಪ್ರಮುಖ ವೇಗಿ ಔಟ್!

0

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್–4ರ ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್‌ಗೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಆದರೆ ಈ ಜಯದ ಸಂಭ್ರಮದ ನಡುವೆಯೇ ಆರ್‌ಸಿಬಿಗೆ ದೊಡ್ಡ ಆಘಾತ ಎದುರಾಗಿದೆ.

ತಂಡದ ಪ್ರಮುಖ ವೇಗಿ ಪೂಜಾ ವಸ್ತ್ರಾಕರ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು, ವೈದ್ಯರ ಸಲಹೆ ಮೇರೆಗೆ ಕನಿಷ್ಠ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ಐದು ಪಂದ್ಯಗಳಿಗೆ ಲಭ್ಯರಾಗುವುದಿಲ್ಲ. ಪೂಜಾ ವಸ್ತ್ರಾಕರ್ ಆರ್‌ಸಿಬಿ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದರು. ಅವರ ಅನುಪಸ್ಥಿತಿ ತಂಡದ ಬೌಲಿಂಗ್ ಸಂಯೋಜನೆಗೆ ಸವಾಲಾಗಿ ಪರಿಣಮಿಸಿದೆ.

ಮೊದಲ ಪಂದ್ಯದಲ್ಲೇ ಪೂಜಾ ಹೊರಗುಳಿದಿದ್ದ ಕಾರಣ ಇಂಗ್ಲೆಂಡ್ ವೇಗಿ ಲಿನ್ಸೆ ಸ್ಮಿತ್ ಅವರನ್ನು ಆರ್‌ಸಿಬಿ ಕಣಕ್ಕಿಳಿಸಿತ್ತು. ಆದರೆ ಸ್ಮಿತ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅವರು ಎರಡು ಓವರ್‌ಗಳಲ್ಲಿ 23 ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಪೂಜಾ ವಸ್ತ್ರಾಕರ್ ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ಮುಂದಿನ ಪಂದ್ಯಗಳಲ್ಲೂ ಲಿನ್ಸೆ ಸ್ಮಿತ್ ಅವರನ್ನೇ ಆರ್‌ಸಿಬಿ ಆಡುವ ಸಾಧ್ಯತೆ ಇದೆ.

ಅಪ್ರಾಪ್ತೆ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್; ಪ್ರಿಯಕರನ ಕಿರುಕುಳವಾ? ಪೋಷಕರ ಒತ್ತಡವಾ? ಸಾವಿನ ಸುತ್ತ ಅನುಮಾನಗಳ ಹುತ್ತ!

0

ಮೈಸೂರು:- ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಅಪ್ರಾಪ್ತೆ ದಿವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಸಾವಿಗೆ ಪ್ರಿಯಕರನ ಪಾತ್ರವಿದೆಯಾ ಅಥವಾ ಪೋಷಕರ ಒತ್ತಡ ಕಾರಣವೇ? ಎಂಬ ಬಗ್ಗೆ ಪರಸ್ಪರ ಆರೋಪ–ಪ್ರತ್ಯಾರೋಪಗಳು ಕೇಳಿಬರುತ್ತಿವೆ. ದಿವ್ಯಾ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಆದಿತ್ಯ ಎಂಬ ಯುವಕನೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇಬ್ಬರೂ ಚಾಮುಂಡಿಬೆಟ್ಟ ಸೇರಿದಂತೆ ಹಲವು ಸ್ಥಳಗಳಿಗೆ ತೆರಳಿದ್ದು, ಅವರ ಸೆಲ್ಫಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಒಂದು ಕಡೆ, ಯುವಕನ ಕಿರುಕುಳದಿಂದ ಬೇಸತ್ತು ದಿವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪಗಳು ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ಆಕೆಯ ಪೋಷಕರ ಒತ್ತಡವೇ ಸಾವಿಗೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ನಡುವೆ ದಿವ್ಯಾ–ಆದಿತ್ಯ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್ ಬಹಿರಂಗವಾಗಿದ್ದು, ಅದರಲ್ಲಿ ದಿವ್ಯಾ ತನ್ನ ಭಯವನ್ನು ವ್ಯಕ್ತಪಡಿಸಿ, ಆದಿತ್ಯನನ್ನು ಮದುವೆಯಾಗುವಂತೆ ಮನವಿ ಮಾಡಿಕೊಂಡಿದ್ದಾಳೆ.

ಆದಿತ್ಯ ತನ್ನ ಮೇಲೆ ದಿವ್ಯಾ ತಂದೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದು, ತಾನು ಯಾವುದೇ ಕಿರುಕುಳ ನೀಡಿಲ್ಲ ಎಂಬುದಕ್ಕೆ ಸಾಕ್ಷಿಗಳನ್ನು ಪೊಲೀಸರಿಗೆ ಒದಗಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾನೆ. ಘಟನೆಯ ನಿಜಾಂಶವನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆಯಿಂದಲೇ ದಿವ್ಯಾ ಸಾವಿನ ಹಿಂದಿನ ಅಸಲಿ ಕಾರಣ ಬಹಿರಂಗವಾಗಬೇಕಿದೆ.

ಯಶವಂತಪುರ ಫ್ಲೈಓವರ್ ಬಳಿ ಡಿವೈಡರ್‌ಗೆ ಮಿನಿ ಟೆಂಪೋ ಡಿಕ್ಕಿ; ವಾಹನ ಜಖಂ

0

ಬೆಂಗಳೂರು:- ನಗರದ ಯಶವಂತಪುರ ಫ್ಲೈಓವರ್ ಬಳಿ, ಡಿವೈಡರ್‌ಗೆ ಮಿನಿ ಟೆಂಪೋ ಡಿಕ್ಕಿ ಹೊಡೆದ ಘಟನೆ ಜರುಗಿದೆ.

ತುಮಕೂರು ಹೈವೇಯಿಂದ ಯಶವಂತಪುರ ಫ್ಲೈಓವರ್ ಕಡೆ ಮಿನಿ ಟೆಂಪೋ ಬರುತ್ತಿತ್ತು. ಈ ವೇಳೆ ಮುಂಭಾಗ ಬರುತ್ತಿದ್ದ ಕಾರಿನ ಚಾಲಕ ಸಡನ್ ಆಗಿ ಬಲ ಭಾಗಕ್ಕೆ ಬಂದಿದ್ದಾನೆ. ಏಕಾಏಕಿ ಬಲಕ್ಕೆ ಬಂದ ಪರಿಣಾಮ ಹಿಂದೆ ಬರುತ್ತಿದ್ದ ಮಿನಿ ಟೆಂಪೋ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಗುದ್ದಿದೆ.

ಡಿವೈಡರ್‌ಗೆ ಗುದ್ದಿದ ಪರಿಣಾಮ ಮಿನಿ ಟೆಂಪೋ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸದ್ಯ ಟೆಂಪೋ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!