Home Blog Page 19

Stephen Fleming: 17 ವರ್ಷಗಳ ಬಳಿಕ CSKಗೆ ಗುಡ್ ಬೈ ಹೇಳಿದ ಸ್ಟೀಫನ್ ಫ್ಲೆಮಿಂಗ್!

0

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಮುಖ್ಯ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿದಿದ್ದಾರೆ. ಇದರೊಂದಿಗೆ ಸುಮಾರು 17 ವರ್ಷಗಳ ಕಾಲ ಸಿಎಸ್ಕೆ ತಂಡದೊಂದಿಗೆ ಸಾಗಿದ ಅವರ ಯಶಸ್ವಿ ಪಯಣಕ್ಕೆ ತೆರೆ ಬಿದ್ದಿದೆ.

ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ಸಮಗ್ರ ಪರಾಮರ್ಶೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಮಾಜಿ ಬ್ಯಾಟರ್ ಹೇಮಂಗ್ ಬದಾನಿ ಹೊಸ ಕೋಚಿಂಗ್ ತಂಡವನ್ನು ಸೇರಿಕೊಳ್ಳುವ ಪ್ರಮುಖ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.

ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‌ನ ಪೂರ್ಣಾವಧಿ ನಿರ್ದೇಶಕಿ ಹಾಗೂ ಎನ್. ಶ್ರೀನಿವಾಸನ್ ಅವರ ಪುತ್ರಿ ರೂಪಾ ಗುರುನಾಥ್ ಅಧಿಕೃತ ಪ್ರಕಟಣೆ ನೀಡಿದ್ದಾರೆ. “ಸ್ಟೀಫನ್ ಫ್ಲೆಮಿಂಗ್ ನಮ್ಮ ಫ್ರಾಂಚೈಸಿಯ ಪಯಣದಲ್ಲಿ ಕೋಚಿಂಗ್ ವಿಭಾಗದ ಬೆನ್ನೆಲುಬಾಗಿದ್ದರು.

ಕಳೆದ ಎರಡು ದಶಕಗಳ ಅವಧಿಯಲ್ಲಿ ತಂಡದ ಸಂಸ್ಕೃತಿ, ದೃಷ್ಟಿಕೋನ ಮತ್ತು ಯಶಸ್ಸಿನ ಪರಂಪರೆಯನ್ನು ಕಟ್ಟುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಮೈದಾನದಲ್ಲಿನ ಅವರ ಜವಾಬ್ದಾರಿ ಮುಕ್ತಾಯಗೊಂಡಿದ್ದರೂ, ಅವರು ಸದಾ ಸಿಎಸ್ಕೆ ಕುಟುಂಬದ ಅವಿಭಾಜ್ಯ ಅಂಗವಾಗಿರುತ್ತಾರೆ” ಎಂದು ಅವರು ತಿಳಿಸಿದ್ದಾರೆ.

2008ರಲ್ಲಿ ಆಟಗಾರರಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿದ್ದ ಸ್ಟೀಫನ್ ಫ್ಲೆಮಿಂಗ್, 2009ರಲ್ಲಿ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ ಸಿಎಸ್ಕೆ 10 ಐಪಿಎಲ್ ಫೈನಲ್‌ಗಳಿಗೆ ಪ್ರವೇಶಿಸಿ ಹಲವು ಬಾರಿ ಪ್ರಶಸ್ತಿ ಗೆದ್ದಿದ್ದು,

ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನೂ ತನ್ನದಾಗಿಸಿಕೊಂಡಿತ್ತು. ಆದರೆ ಇತ್ತೀಚಿನ ಋತುಗಳಲ್ಲಿ ತಂಡದ ಪ್ರದರ್ಶನ ಕುಸಿತ ಕಂಡಿತ್ತು. 2024ರಲ್ಲಿ ಪ್ಲೇಆಫ್ ಪ್ರವೇಶಿಸಲು ವಿಫಲವಾಗಿದ್ದ ಸಿಎಸ್ಕೆ, ನಂತರದ ಎರಡು ಸೀಸನ್‌ಗಳಲ್ಲಿ ಕ್ರಮವಾಗಿ 10ನೇ ಮತ್ತು 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಫ್ಲೆಮಿಂಗ್ ಮುಖ್ಯ ಕೋಚ್ ಆಗಿರುವ ದಕ್ಷಿಣ ಆಫ್ರಿಕಾದ ಜೋಬರ್ಗ್ ಸೂಪರ್ ಕಿಂಗ್ಸ್ ಹಾಗೂ ಅಮೆರಿಕದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಗಳ ಪ್ರದರ್ಶನವೂ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ. ವಿಶೇಷವಾಗಿ, ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಋತುವಿನಲ್ಲಿ 10 ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ ಕೊನೆಯ ಸ್ಥಾನದಲ್ಲಿತ್ತು.

ಈ ನಡುವೆ, ಡಲ್ಲಾಸ್‌ನಲ್ಲಿ ಬೀಡುಬಿಟ್ಟಿರುವ ಸಿಎಸ್ಕೆ ಉನ್ನತಾಧಿಕಾರಿಗಳು ತಂಡದ ಭವಿಷ್ಯದ ಕಾರ್ಯತಂತ್ರ, ಆಟಗಾರರ ಟ್ರೇಡಿಂಗ್, ಕೋಚಿಂಗ್ ವಿಭಾಗದ ಪುನಾರಚನೆ ಹಾಗೂ ನಾಯಕತ್ವದ ಬದಲಾವಣೆ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ರಾಮಮಂದಿರ ದೇಣಿಗೆ ಹಗರಣ: ಇಂದು ಸುಪ್ರೀಂನಲ್ಲಿ ಅಯೋಧ್ಯೆ ಅರ್ಜಿ ವಿಚಾರಣೆ!

0

ನವದೆಹಲಿ: ಅಯೋಧ್ಯೆಯ ರಾಮಮಂದಿರ ದೇಣಿಗೆ ಹಗರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠದಲ್ಲಿ ನಡೆಯಲಿದೆ. ಪ್ರಕರಣದ ವಿಚಾರಣೆ ದೇಶದಾದ್ಯಂತ ಗಮನ ಸೆಳೆದಿದೆ.

ಈ ನಡುವೆ, ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಹತ್ವದ ಸ್ಪಷ್ಟನೆ ನೀಡಿದ್ದು, ದೇವಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ನೇಮಕ ಹಾಗೂ ಅವರ ಅಧಿಕಾರಗಳನ್ನು ಅಯೋಧ್ಯೆ ಟ್ರಸ್ಟ್‌ವೇ ನಿರ್ಧರಿಸುತ್ತದೆ, ಸರ್ಕಾರಕ್ಕೆ ಇದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.

ಭಕ್ತರ ವಿಶ್ವಾಸವನ್ನು ಕಾಪಾಡುವುದು ಸಿಇಓ ಅವರ ಪ್ರಮುಖ ಜವಾಬ್ದಾರಿಯಾಗಿದ್ದು, ಹೊಸ ಸಿಇಓ ದೇವಾಲಯದ ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯನ್ನೂ ವಹಿಸಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಎಂದು ನೃಪೇಂದ್ರ ಮಿಶ್ರಾ ಸ್ಪಷ್ಟಪಡಿಸಿದ್ದಾರೆ. ಸಿಇಓ ನೇಮಕ ಕುರಿತು ಜುಲೈ 22ರಂದು ಟ್ರಸ್ಟ್‌ನ ಮಹತ್ವದ ಸಭೆ ನಡೆಯಲಿದೆ.

ಇದೇ ವೇಳೆ ದೇಣಿಗೆ ಹಗರಣದ ಆರೋಪದ ವಿಚಾರವಾಗಿ ರಾಜಕೀಯ ವಾಗ್ವಾದವೂ ತೀವ್ರಗೊಂಡಿದೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿದ್ದು, ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಆಗ್ರಹಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಕೂಡ ಪ್ರಕರಣದ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ಇಡೀ ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದೆ ಎಂದು ಆರೋಪಿಸಿದ್ದಾರೆ.

ಇನ್ನೊಂದೆಡೆ, ಬದರಿನಾಥ ದೇಗುಲದ ದೇಣಿಗೆ ದುರುಪಯೋಗದ ಆರೋಪಗಳ ಹಿನ್ನೆಲೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯ ಸಿಇಓಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚನೆ ನೀಡಿದ್ದಾರೆ.

ಉದ್ಯೋಗಕ್ಕಾಗಿ ನೇಪಾಳಕ್ಕೆ ಹೋಗಿದ್ದ ಬೆಳಗಾವಿ ಯುವಕನ ಕೊಲೆ: ಮೃತದೇಹ ಭಾರತಕ್ಕೆ ತರಲು ಕುಟುಂಬದ ಮನವಿ

0

ಬೆಳಗಾವಿ: ಉದ್ಯೋಗ ಅರಸಿ ನೇಪಾಳಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಯುವಕನನ್ನು ಆತನ ರೂಮ್‌ಮೇಟ್‌ನೇ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೃತ ಯುವಕನನ್ನು ಖಾನಾಪುರ ಪಟ್ಟಣದ ಸಾಹಿಲ್ ರಿಯಾಜ್ ಅಹ್ಮದ್ ಮೋಮಿನ್ (25) ಎಂದು ಗುರುತಿಸಲಾಗಿದೆ.

ನೇಪಾಳದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾಹಿಲ್, ತನ್ನೊಂದಿಗೆ ವಾಸವಾಗಿದ್ದ ರೂಮ್‌ಮೇಟ್‌ನಿಂದಲೇ ಕೊಲೆಯಾಗಿರುವ ಮಾಹಿತಿ ಲಭ್ಯವಾಗಿದೆ. ಕೊಲೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮೃತದೇಹವನ್ನು ಭಾರತಕ್ಕೆ ತರುವ ಸಂಬಂಧ ಕುಟುಂಬಸ್ಥರು ಪೊಲೀಸರ ಮೂಲಕ ಅಗತ್ಯ ಪ್ರಕ್ರಿಯೆ ಆರಂಭಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರಕ್ಕೆ ಮನವಿ ಮಾಡಿದ್ದಾರೆ.

ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ಯುವಕನ ದುರಂತ ಸಾವಿನ ಸುದ್ದಿ ಖಾನಾಪುರದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ಕುಟುಂಬಸ್ಥರು ಹಾಗೂ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.

ಗಂಡನ ಮನೆಯವರ ಸಾಲದ ಕಿರುಕುಳ: 3 ವರ್ಷದ ಮಗನೊಂದಿಗೆ ನೇಣುಬಿಗಿದುಕೊಂಡು ತಾಯಿ ಆತ್ಮಹತ್ಯೆ

0

ಬೆಳಗಾವಿ: ಗಂಡನ ಮನೆಯವರಿಂದ ನಿರಂತರವಾಗಿ ನಡೆದಿದ್ದ ಮಾನಸಿಕ ಮತ್ತು ದೈಹಿಕ ಕಿರುಕುಳದ ಆರೋಪದ ನಡುವೆ ಮಹಿಳೆಯೊಬ್ಬರು ತಮ್ಮ ಮೂರು ವರ್ಷದ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಗಾವಿಯ ಪೀರನವಾಡಿಯಲ್ಲಿ ನಡೆದಿದೆ.

ಪ್ರೇಮಾ ನಾಗೇಶ ತಳವಾರ (28) ಮತ್ತು ಪುತ್ರ ಭುವನ (3) ಮೃತರು. ಪೀರನವಾಡಿಯ ಪಾಟೀಲ್ ಗಲ್ಲಿಯಲ್ಲಿರುವ ಮನೆಯಲ್ಲಿ ತಾಯಿ-ಮಗ ಇಬ್ಬರೂ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತನಿಖೆಯ ಪ್ರಾಥಮಿಕ ಮಾಹಿತಿಯಂತೆ, ಗಂಡನ ಮನೆಯವರು ಮಾಡಿಕೊಂಡಿದ್ದ ಸಾಲವನ್ನು ತೀರಿಸುವಂತೆ ಪ್ರೇಮಾ ಅವರ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿತ್ತು. ಇದೇ ವಿಚಾರವಾಗಿ ಪತಿ ಸೇರಿದಂತೆ ಕುಟುಂಬದ ಸದಸ್ಯರು ದಿನನಿತ್ಯ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕಿರುಕುಳವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಯ ಬಳಿಕ ಮೃತೆಯ ಕುಟುಂಬಸ್ಥರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪತಿ ನಾಗೇಶ ತಳವಾರ, ಅತ್ತೆ ಸುಶೀಲಾ ತಳವಾರ, ಮೈದುನ ಪರಶುರಾಮ ತಳವಾರ, ನಾದಿನಿ ಸಂಗೀತಾ ತಳವಾರ, ಮರೇವ್ವಾ ತಳವಾರ ಹಾಗೂ ಶಾರದಾ ಕಲಕಾಂವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೃತದೇಹಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಹಾಗೂ ಕಿರುಕುಳದ ಆರೋಪಗಳ ಕುರಿತು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.

ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದು ಕಂಡು ಪತಿಯೂ ನೇಣು ಬಿಗಿದುಕೊಂಡು ಸಾವು

0

ತುಮಕೂರು: ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿದ್ದ ನವದಂಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ಪತ್ನಿ ನೇಣು ಬಿಗಿದುಕೊಂಡಿರುವುದನ್ನು ಕಂಡ ಪತಿ ಕೂಡ ಕೆಲವೇ ಕ್ಷಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತರನ್ನು ಶರಣ್ಯ (20) ಮತ್ತು ಗಿರೀಶ್ (28) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಶರಣ್ಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಮನೆಗೆ ಬಂದ ಗಿರೀಶ್ ಪತ್ನಿಯ ಮೃತದೇಹವನ್ನು ಕಂಡು ಮಾನಸಿಕವಾಗಿ ಕುಗ್ಗಿ, ಸಮೀಪದ ಹೊಲದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಜೀವ ತೆತ್ತಿದ್ದಾರೆ.

ಘಟನೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಪಟ್ಟನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಒಂದೆಡೆ ಪ್ರವಾಹ ಭೀತಿ, ಮತ್ತೊಂದೆಡೆ ಬರದ ಆತಂಕ; ಮಳೆಗಾಗಿ ಕಾದು ಕುಳಿತ ಅನ್ನದಾತರು!

ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದ್ದರೆ, ಇನ್ನೂ ಹಲವು ಜಿಲ್ಲೆಗಳಲ್ಲಿ ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ.

ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಕಾಡು ಪ್ರಾಣಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ನಿರ್ಮಾಣವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನೀರಿನ ಅಭಾವದ ಪರಿಸ್ಥಿತಿ ಎದುರಾಗಿದೆ. ಕಳೆದ ವರ್ಷವೂ ಇದೇ ಸಮಸ್ಯೆ ಎದುರಾಗಿದ್ದರಿಂದ ಅಧಿಕಾರಿಗಳು ಕಾಡು ಪ್ರಾಣಿಗಳಿಗಾಗಿ ಸಣ್ಣ ಟ್ಯಾಂಕ್‌ಗಳನ್ನು ನಿರ್ಮಿಸಿದ್ದರು. ಆದರೆ ಇದೀಗ ಆ ಟ್ಯಾಂಕ್‌ಗಳಲ್ಲಿನ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ.

ಮೇ ತಿಂಗಳಲ್ಲಿ ಸುರಿದ ಅಲ್ಪ ಮಳೆಯಿಂದ ಕೆಲವು ಕೆರೆಗಳು ಭಾಗಶಃ ತುಂಬಿದ್ದರೂ, ಹಲವು ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಮಳೆ ಮುಂದುವರಿಯದಿದ್ದರೆ ವನ್ಯಜೀವಿಗಳಿಗೂ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

ಚಿತ್ರದುರ್ಗದಲ್ಲಿ ಬೆಳೆಗಳಿಗೆ ಬರದ ಹೊಡೆತ:

ಕೋಟೆನಾಡು ಚಿತ್ರದುರ್ಗದಲ್ಲೂ ಮಳೆಯ ಕೊರತೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಸೂರ್ಯಕಾಂತಿ ಬಿತ್ತನೆಗೂ ಮುನ್ನ ಉತ್ತಮ ಮಳೆಯಾಗಿದ್ದರೂ, ಕಳೆದ ಎರಡು ತಿಂಗಳಿಂದ ಮಳೆ ಬಾರದ ಪರಿಣಾಮ ತೊಗರಿ ಮತ್ತು ಮೆಕ್ಕೆಜೋಳ ಬೆಳೆಗಳು ಒಣಗುತ್ತಿವೆ.

ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ರೈತರು ಎಕರೆಗೆ 50ರಿಂದ 60 ಸಾವಿರ ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದು, ಫಸಲು ಬರುವ ಮುನ್ನವೇ ಬೆಳೆಗಳು ಹಾಳಾಗುತ್ತಿರುವುದರಿಂದ ಆತಂಕಗೊಂಡಿದ್ದಾರೆ.

ವಿಜಯಪುರದಲ್ಲೂ ರೈತರ ಸಂಕಷ್ಟ:

ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಜೂನ್ ಮೊದಲ ವಾರದಲ್ಲಿ ಅಲ್ಪ ಮಳೆಯಾದ ಹಿನ್ನೆಲೆಯಲ್ಲಿ ಶೇ.20ರಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಉಳಿದ ರೈತರು ಮಳೆಗಾಗಿ ಕಾಯುತ್ತಿದ್ದು, ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕಾಗಿ ಮಾಡಿರುವ ಸಾಲದ ಚಿಂತೆಯಲ್ಲಿ ಸಿಲುಕಿದ್ದಾರೆ.

ಜುಲೈ ಬಂದರೂ ನಿರೀಕ್ಷಿತ ಮಳೆ ಬಾರದ ಕಾರಣ ರೈತರು ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಕೊಡಗಿನಲ್ಲಿ ಮಳೆ ಕಡಿಮೆಯಾದರೂ ಸಮಸ್ಯೆ ಮುಂದುವರಿಕೆ:

ಇತ್ತ ಕೊಡಗು ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಗೆ ಉಂಟಾದ ಸಮಸ್ಯೆಗಳು ಇನ್ನೂ ಮುಂದುವರಿದಿವೆ. ಭಾಗಮಂಡಲ ಹಾಗೂ ಚೆಟ್ಟಿಮಾನಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಕತ್ತಲಿನಲ್ಲಿ ದಿನ ಕಳೆಯುವಂತಾಗಿದೆ.

ಭಾರಿ ಗಾಳಿ ಮಳೆಯಿಂದ 16ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಮಳೆಯ ಚಿತ್ರಣ ವಿಭಿನ್ನವಾಗಿದೆ. ಕೆಲವೆಡೆ ಮಳೆ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ರೈತರು ಹಾಗೂ ವನ್ಯಜೀವಿಗಳು ನೀರಿಗಾಗಿ ಮಳೆರಾಯನ ನಿರೀಕ್ಷೆಯಲ್ಲಿವೆ.

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು: ತನಿಖೆಗೆ ರಾಜ್ಯಪಾಲರಿಂದ ಅಧಿಕೃತ ಆದೇಶ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಜ್ಯಪಾಲರ ಆದೇಶದಂತೆ, ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲು ಶಿಫಾರಸು ಮಾಡಲಾಗಿದೆ. ಅಲ್ಲದೆ, ಭಾರತೀಯ ಸಂವಿಧಾನದ 317(1)ನೇ ವಿಧಿಯ ಅನ್ವಯ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವ ಸಂಬಂಧ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಅಥವಾ ಮುಂದಿನ ಆದೇಶ ಹೊರಬೀಳುವವರೆಗೆ ಕೆಪಿಎಸ್‌ಸಿಯ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿರುವ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಲ್ಲಿಕೆಯಾಗಿದ್ದ ದೂರುಗಳ ಆಧಾರದ ಮೇಲೆ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ವಿರುದ್ಧವೂ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆ ನಕಲಿ ಆದಾಯ ಹಾಗೂ ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಮೀಸಲಾತಿಯ ಸೌಲಭ್ಯ ಪಡೆದಿರುವ ಆರೋಪ ಕೇಳಿಬಂದಿತ್ತು. ದಾಖಲೆಗಳ ಪರಿಶೀಲನೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ.

ರಾಜ್ಯಪಾಲರ ಆದೇಶಕ್ಕೆ ಸಂಬಂಧಿಸಿದಂತೆ ಲೋಕಭವನ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಶಿವಶಂಕರಪ್ಪ ಸಾಹುಕಾರ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ಅವುಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದೇ ಕಾರಣಕ್ಕೆ ಸಂವಿಧಾನದ 317(1)ನೇ ವಿಧಿಯ ಅನ್ವಯ ಪ್ರಕರಣವನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸಲು ಶಿಫಾರಸು ಮಾಡಲಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Milk vs Curd: ತೂಕ ಕಡಿಮೆ ಮಾಡಲು ಯಾವುದು ಉತ್ತಮ? ಹಾಲು ಅಥವಾ ಮೊಸರು?

0

ಹಾಲು ಮತ್ತು ಮೊಸರು ಭಾರತೀಯ ಆಹಾರ ಪದ್ಧತಿಯ ಪ್ರಮುಖ ಭಾಗವಾಗಿವೆ.

ಬೆಳಗಿನ ಚಹಾದಿಂದ ಹಿಡಿದು ಊಟದವರೆಗೂ ಇವುಗಳ ಬಳಕೆ ಸಾಮಾನ್ಯವಾಗಿದೆ. ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಹಾಲು ಮತ್ತು ಮೊಸರು ದೇಹದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತವೆ.

ಪೋಷಕಾಂಶ ತಜ್ಞರ ಪ್ರಕಾರ, ತೂಕ ಇಳಿಕೆ ಹಾಗೂ ಜೀರ್ಣಕ್ರಿಯೆಯ ವಿಚಾರದಲ್ಲಿ ಹಾಲು ಮತ್ತು ಮೊಸರು ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತವೆ. ಹಾಲು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡಿದರೆ, ಮೊಸರು ನೈಸರ್ಗಿಕ ಪ್ರೋಬಯಾಟಿಕ್ ಆಗಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

ಹಾಲು ಮತ್ತು ಮೊಸರಿನ ಪೋಷಕಾಂಶಗಳಲ್ಲಿ ವ್ಯತ್ಯಾಸ:

ಹಾಲು ಮತ್ತು ಮೊಸರು ಎರಡೂ ಹಾಲಿನಿಂದ ತಯಾರಾಗುತ್ತವೆ. ಆದರೆ ಮೊಸರನ್ನು ಹುದುಗಿಸುವ ಪ್ರಕ್ರಿಯೆಯಿಂದ ಅದರ ಗುಣಗಳಲ್ಲಿ ಬದಲಾವಣೆ ಆಗುತ್ತದೆ.

100 ಮಿ.ಲೀ ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಜೊತೆಗೆ ಸುಮಾರು 3.2 ಗ್ರಾಂ ಪ್ರೋಟೀನ್ ಇರುತ್ತದೆ. 100 ಗ್ರಾಂ ಮೊಸರಿನಲ್ಲಿ ಸುಮಾರು 3.5 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಮೊಸರಿನಲ್ಲಿ ಲ್ಯಾಕ್ಟೋಸ್ ಪ್ರಮಾಣ ಕಡಿಮೆ ಇರುವುದರಿಂದ ಕೆಲವರಿಗೆ ಹಾಲಿಗಿಂತ ಸುಲಭವಾಗಿ ಜೀರ್ಣವಾಗುತ್ತದೆ.

ತೂಕ ಇಳಿಸಲು ಯಾವುದು ಉತ್ತಮ?

ತೂಕ ಇಳಿಸಲು ಹಾಲು ಮತ್ತು ಮೊಸರು ಎರಡೂ ಸಹಾಯಕವಾಗಬಹುದು. ಹಾಲಿನಲ್ಲಿರುವ ಪ್ರೋಟೀನ್ ಹೆಚ್ಚು ಸಮಯ ಹೊಟ್ಟೆ ತುಂಬಿರುವ ಭಾವನೆ ನೀಡುತ್ತದೆ. ಇದರಿಂದ ಅನಗತ್ಯ ಹಸಿವು ಕಡಿಮೆಯಾಗುತ್ತದೆ.

ತೂಕ ಇಳಿಸಲು ಬಯಸುವವರು ಕಡಿಮೆ ಕೊಬ್ಬಿನ ಹಾಲು ಹಾಗೂ ಸಕ್ಕರೆ ಸೇರಿಸದ ಹಾಲನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮೊಸರಿನಲ್ಲಿರುವ ಪ್ರೋಬಯಾಟಿಕ್ಸ್ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಚಯಾಪಚಯ ಕ್ರಿಯೆಗೆ ಸಹಾಯ ಮಾಡಬಹುದು.

ಜೀರ್ಣಕ್ರಿಯೆಗೆ ಯಾವುದು ಬೆಸ್ಟ್?

ಹೊಟ್ಟೆಯ ಆರೋಗ್ಯಕ್ಕೆ ಮೊಸರು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ಕಾಪಾಡುತ್ತವೆ.

ಆದರೆ ಸ್ನಾಯುಗಳನ್ನು ಬಲಪಡಿಸಲು ಹಾಗೂ ವ್ಯಾಯಾಮ ಮಾಡುವವರಿಗೆ ಹಾಲು ಉತ್ತಮ ಪ್ರೋಟೀನ್ ಮೂಲವಾಗಬಹುದು.

ದಿನಕ್ಕೆ ಎಷ್ಟು ಸೇವಿಸಬೇಕು?

ತಜ್ಞರ ಪ್ರಕಾರ, ಸಾಮಾನ್ಯ ವ್ಯಕ್ತಿಯು ದಿನಕ್ಕೆ ಸುಮಾರು 500 ರಿಂದ 600 ಮಿ.ಲೀ ಹಾಲು ಸೇವಿಸಬಹುದು. ಒಂದು ಅಥವಾ ಎರಡು ಕಪ್ ಮೊಸರು ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.

ವ್ಯಾಯಾಮದ ನಂತರ ಹಾಲು ಸೇವಿಸುವುದು ಉತ್ತಮ. ಊಟದ ಸಮಯದಲ್ಲಿ ಮೊಸರು ಸೇವಿಸುವುದು ಸಹ ಪ್ರಯೋಜನಕಾರಿ ಎಂದು ತಜ್ಞರು ತಿಳಿಸಿದ್ದಾರೆ.

ಯಾರು ಎಚ್ಚರಿಕೆ ವಹಿಸಬೇಕು?

ಕರುಳಿನ ಆರೋಗ್ಯ ಸುಧಾರಿಸಬೇಕೆಂದರೆ ಮೊಸರು ಉತ್ತಮ. ಸ್ನಾಯುಗಳ ಬೆಳವಣಿಗೆ ಹಾಗೂ ಶಕ್ತಿಗಾಗಿ ಹಾಲು ಸಹಾಯಕ.

ಆದರೆ ಹಾಲು ಅಥವಾ ಮೊಸರು ಸೇವಿಸಿದ ಬಳಿಕ ಅಸ್ವಸ್ಥತೆ ಉಂಟಾಗುವವರು ಅಥವಾ ಲ್ಯಾಕ್ಟೋಸ್ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಒಟ್ಟಿನಲ್ಲಿ, ತೂಕ ಇಳಿಕೆಗಾಗಿ ಹಾಲು ಮತ್ತು ಮೊಸರು ಎರಡೂ ಸಹಾಯ ಮಾಡಬಹುದು. ನಿಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ.

ಎರಡು ತೊಲ ಬಂಗಾರಕ್ಕಾಗಿ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ: ಚಿಕಿತ್ಸೆ ಫಲಿಸದೆ ಮಹಿಳೆ ಸಾವು

0

ಬೆಂಗಳೂರು: ವರದಕ್ಷಿಣೆ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳಕ್ಕೆ ಮತ್ತೊಂದು ಜೀವ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂರು ತಿಂಗಳ ಗಂಡು ಮಗುವಿಗೆ ಎರಡು ತೊಲ ಚಿನ್ನ ನೀಡಲಿಲ್ಲ ಎಂಬ ಕಾರಣಕ್ಕೆ ಅಳಿಯ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ 45 ವರ್ಷದ ರೋಷನಬಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೂಲತಃ ಯಾದಗಿರಿ ಜಿಲ್ಲೆಯವರಾದ ರೋಷನಬಿ ಅವರ ಕುಟುಂಬ ಕಳೆದ ಏಳು ವರ್ಷಗಳಿಂದ ಬೆಂಗಳೂರಿನ ವಿದ್ಯಾರಣ್ಯಪುರದ ಮೇಡಿ ಅಗ್ರಹಾರ ಪ್ರದೇಶದಲ್ಲಿ ನೆಲೆಸಿತ್ತು. ಆರೋಪಿ ಅಕ್ಬರ್, ಎರಡು ತೊಲ ಚಿನ್ನ ನೀಡುವಂತೆ ನಿರಂತರವಾಗಿ ಪತ್ನಿ ಹಾಗೂ ಆಕೆಯ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಚಿನ್ನ ನೀಡದಿದ್ದರೆ ಕೊಲೆ ಮಾಡುವುದಾಗಿ ಅತ್ತೆಗೆ ಬೆದರಿಕೆ ಹಾಕಿದ್ದ ಆರೋಪವೂ ಕೇಳಿಬಂದಿದೆ.

ಜುಲೈ 10ರಂದು ಅಕ್ಬರ್ ಕೊಡಲಿಯೊಂದಿಗೆ ಮನೆಗೆ ಬಂದು ಯಾವುದೇ ಮಾತುಕತೆಯಿಲ್ಲದೆ ರೋಷನಬಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಘಟನೆ ಕುರಿತು ಮಾತನಾಡಿದ ಮೃತರ ಪುತ್ರಿ ಹಾಗೂ ಆರೋಪಿಯ ಪತ್ನಿ ರಂಜಾನ್, “ಏಳು ವರ್ಷಗಳ ಹಿಂದೆ ನಾವು ಪ್ರೀತಿಸಿ ಮದುವೆಯಾಗಿದ್ದೆವು. ಮದುವೆಯಾದ ದಿನದಿಂದಲೇ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಎರಡನೇ ಮಗು ಜನಿಸಿದ ಬಳಿಕ ಎರಡು ತೊಲ ಚಿನ್ನ ಕೊಡಿಸಬೇಕೆಂದು ನಿರಂತರವಾಗಿ ಜಗಳ ಮಾಡುತ್ತಿದ್ದ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಹೇಳಿದರೂ ಕೇಳುತ್ತಿರಲಿಲ್ಲ. ಜುಲೈ 10ರಂದು ಕೊಡಲಿಯೊಂದಿಗೆ ಬಂದು ನನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.

ಆರೋಪಿ ಅಕ್ಬರ್ ಮತ್ತು ರಂಜಾನ್ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೋಣಾಳ ಗ್ರಾಮದವರಾದ ಅಕ್ಬರ್, ಶಾಲೆಯಲ್ಲಿ ಓದುತ್ತಿದ್ದ ರಂಜಾನ್ ಅವರನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದ ಎಂದು ತಿಳಿದುಬಂದಿದೆ. ಆರಂಭದಲ್ಲಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರೂ, ನಂತರ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರು. ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಹಾಗೂ ಒಂದು ತಿಂಗಳ ಹಿಂದೆ ಜನಿಸಿದ ಗಂಡು ಮಗು ಇದೆ.

ಮದುವೆಯಾದ ಬಳಿಕದಿಂದಲೇ ಅಕ್ಬರ್ ವರದಕ್ಷಿಣೆಗಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಹಿಂದೆ ಸೀಮೆಎಣ್ಣೆ ಸುರಿದು ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದ ಎನ್ನುವ ಆರೋಪವೂ ಇದೆ. ಗಂಡು ಮಗು ಜನಿಸಿದ ಬಳಿಕ ಎರಡು ತೊಲ ಚಿನ್ನ ನೀಡುವಂತೆ ಮತ್ತಷ್ಟು ಒತ್ತಡ ಹೇರುತ್ತಿದ್ದು, ಇದೇ ವಿಚಾರದಲ್ಲಿ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 

ಅಮೆರಿಕ-ಇರಾನ್ ಸಂಘರ್ಷ: ಭೀಕರ ದಾಳಿಯ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಶೇ. 4ರಷ್ಟು ಏರಿಕೆ!

0

ಲಂಡನ್: ಅಮೆರಿಕ ಮತ್ತು ಇರಾನ್ ನಡುವಿನ ಕ್ಷಿಪಣಿ ಹಾಗೂ ವೈಮಾನಿಕ ದಾಳಿಗಳು ತೀವ್ರಗೊಂಡಿರುವ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಶೇ. 4ಕ್ಕೂ ಅಧಿಕ ಏರಿಕೆ ಕಂಡಿವೆ. ವಿಶ್ವದ ಇಂಧನ ಸರಬರಾಜಿಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಭದ್ರತೆ ಕುರಿತು ಆತಂಕ ಹೆಚ್ಚಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 4.28ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 79.26 ಡಾಲರ್‌ (ಸುಮಾರು ₹7,570) ತಲುಪಿದೆ. ಅದೇ ವೇಳೆ, ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಶೇ. 4.37ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 74.53 ಡಾಲರ್‌ (ಸುಮಾರು ₹7,125) ದಾಖಲಾಗಿದೆ.

ವಾರಾಂತ್ಯದಲ್ಲಿ ಇರಾನ್ ತನ್ನ ಮಿಲಿಟರಿ ಕಾರ್ಯಾಚರಣೆಯ ವ್ಯಾಪ್ತಿಯನ್ನು ಕತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ವರೆಗೂ ವಿಸ್ತರಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ ಹಲವು ಮಿಲಿಟರಿ ನೆಲೆಗಳ ಮೇಲೆ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಇದರ ನಡುವೆ, ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದ ಬಳಿಕ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಾಗಿ ಇರಾನ್ ಘೋಷಿಸಿದೆ. ಹಡಗುಗಳ ಸಂಚಾರವನ್ನು ಮೇಲ್ವಿಚಾರಣೆ ಮಾಡುವ ಕೆಪ್ಲರ್ ಸಂಸ್ಥೆಯ ಮಾಹಿತಿಯ ಪ್ರಕಾರ, ಭಾನುವಾರ ಈ ಜಲಸಂಧಿಯ ಮೂಲಕ ಕೇವಲ ಆರು ಹಡಗುಗಳು ಮಾತ್ರ ಸಂಚರಿಸಿವೆ. ಕಳೆದ ಐದು ವಾರಗಳಲ್ಲಿ ದಾಖಲಾಗಿರುವ ಅತ್ಯಂತ ಕಡಿಮೆ ಸಂಚಾರ ಇದಾಗಿದೆ.

ಕಳೆದ ತಿಂಗಳು ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ತಗ್ಗಿಸುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ ನಡುವೆ ನಡೆದಿದ್ದ ತಾತ್ಕಾಲಿಕ ಶಾಂತಿ ಒಪ್ಪಂದ ಹಾಗೂ ಮಾತುಕತೆಗಳು ಇತ್ತೀಚಿನ ದಾಳಿಗಳ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಅಮೆರಿಕದ ದಾಳಿಯನ್ನು ಇರಾನ್ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಈ ಕ್ರಮವು ವಿಶ್ವಸಂಸ್ಥೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಇರಾನ್, ತನ್ನ ವಿರುದ್ಧದ ಯಾವುದೇ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕಕ್ಕೆ ತಮ್ಮ ಭೂಭಾಗ ಅಥವಾ ಸೇನಾ ನೆಲೆಗಳನ್ನು ಬಳಸಲು ಅವಕಾಶ ನೀಡುವ ದೇಶಗಳನ್ನು ಶತ್ರು ರಾಷ್ಟ್ರಗಳೆಂದು ಪರಿಗಣಿಸಿ ಅಗತ್ಯ ಪ್ರತಿದಾಳಿ ನಡೆಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದೆ.