Home Blog Page 2

ಶಿರಹಟ್ಟಿ ತಾಲೂಕನ್ನು ಬರಪೀಡಿತ ಘೋಷಿಸಿ: ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಅಶೋಕ ಹುಬ್ಬಳ್ಳಿ ಮಾತನಾಡಿ, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಹಾಗೂ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಈಗಾಗಲೇ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಆದರೆ ಶಿರಹಟ್ಟಿ ತಾಲೂಕನ್ನು ಈ ಪಟ್ಟಿಯಲ್ಲಿ ಸೇರಿಸದಿರುವುದು ತಾಲೂಕಿನ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಬರದ ಪರಿಸ್ಥಿತಿ ಇದ್ದರೂ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದಿರುವುದರಿಂದ ರೈತರಿಗೆ ಸರ್ಕಾರದ ಪರಿಹಾರ ಮತ್ತು ಸೌಲಭ್ಯಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಶಿರಹಟ್ಟಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಮತ್ತು ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಢಾಕಪ್ಪ ಲಮಾಣಿ, ಮಹಮ್ಮದ್ ಅಜರುದ್ದೀನ್ ಹೆಸರೂರ, ಲಿಂಬಣ್ಣ ಲಮಾಣಿ, ಪರಶುರಾಮ ಹುಬ್ಬಳ್ಳಿ, ಪವನ ಹುಬ್ಬಳ್ಳಿ, ರವಿ ಲಮಾಣಿ, ಅವಿನಾಳ ಲಮಾಣಿ ಹಾಗೂ ಸುಭಾಸ ಅಂಬಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಂತರರಾಷ್ಟ್ರೀಯ ನ್ಯಾಯಾಧೀಶ ಲಿಯೋನಾರ್ಡೋ ಬ್ರಾಂಟ್‌ಗೆ ಜಿ.ಎಸ್. ಪಾಟೀಲ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಹೇಗ್‌ನ ಅಂತರರಾಷ್ಟ್ರೀಯ ನ್ಯಾಯಾಲಯದ ಪ್ರಮುಖ ನ್ಯಾಯಾಧೀಶ ಲಿಯೋನಾರ್ಡೋ ಬ್ರಾಂಟ್ ಅವರು ಶನಿವಾರ ವಿಧಾನಸೌಧಕ್ಕೆ ಭೇಟಿ ನೀಡಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರನ್ನು ಭೇಟಿಯಾದರು.

ವಿಧಾನಸೌಧದಲ್ಲಿರುವ ತಮ್ಮ ಅಧಿಕೃತ ಕಚೇರಿಯಲ್ಲಿ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರು ನ್ಯಾಯಾಧೀಶ ಲಿಯೋನಾರ್ಡೋ ಬ್ರಾಂಟ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ಗಣ್ಯರ ನಡುವೆ ವಿವಿಧ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಿತು.

ಜಾಗತಿಕ ಮಟ್ಟದ ಕಾನೂನು ವ್ಯವಸ್ಥೆ, ನ್ಯಾಯ ವಿತರಣೆ ಹಾಗೂ ಅಂತರರಾಷ್ಟ್ರೀಯ ನ್ಯಾಯಾಲಯದ ಕಾರ್ಯವೈಖರಿ ಕುರಿತು ಲಿಯೋನಾರ್ಡೋ ಬ್ರಾಂಟ್ ಮಾಹಿತಿ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕರ್ನಾಟಕ ಶಾಸನಸಭೆಯ ಪರಂಪರೆ, ಶಾಸನ ರಚನೆ ಪ್ರಕ್ರಿಯೆ ಹಾಗೂ ಪ್ರಜಾಸತ್ತಾತ್ಮಕ ಕಾರ್ಯಕಲಾಪಗಳ ಕುರಿತು ಸಭಾಧ್ಯಕ್ಷ ಜಿ.ಎಸ್. ಪಾಟೀಲ ವಿವರಿಸಿದರು.

ಬಳಿಕ ಸಭಾಧ್ಯಕ್ಷರು ಲಿಯೋನಾರ್ಡೋ ಬ್ರಾಂಟ್ ಅವರಿಗೆ ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಗಣಿತದ ಭಯ ಗೆದ್ದರೆ ಭವಿಷ್ಯದ ಸವಾಲೂ ಗೆಲ್ಲಬಹುದು: ಕೃಷ್ಣಗೌಡ ಎಚ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಗಣಿತವೆಂದರೆ ಭಯಪಡುವ ವಿಷಯವಲ್ಲ, ಅದು ಕುತೂಹಲ, ಚಿಂತನೆ ಹಾಗೂ ಹೊಸ ಸಾಧ್ಯತೆಗಳ ಜಗತ್ತು ಎಂಬ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಗಣಿತ ಬಾಲ ಭಾಸ್ಕರ’ ಕಾರ್ಯಕ್ರಮವು ಶಾಲಾ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದು ಯುವ ಮುಖಂಡ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.

ನಗರದ ಭೀಮಸೇನ ಜೋಶಿ ರಂಗಮಂದಿರದಲ್ಲಿ ನಡೆದ ‘ಗಣಿತ ಬಾಲ ಭಾಸ್ಕರ’ ಸೆಮಿಫೈನಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಚ್.ಕೆ. ಪಾಟೀಲ ಪ್ರತಿಷ್ಠಾನ, ಜಿ.ಎನ್.ಟಿ.ಟಿ.ಎಫ್ ಹಾಗೂ ಜಿ.ಸಿ.ಐ.ಇ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸ್ಪರ್ಧಾತ್ಮಕ ವೇದಿಕೆ ಕಲ್ಪಿಸುತ್ತಿದೆ ಎಂದು ಹೇಳಿದರು.

ಗಣಿತದ ಮೇಲಿನ ಭಯವನ್ನು ದೂರ ಮಾಡಿ, ವಿಷಯದ ಬಗ್ಗೆ ಆಸಕ್ತಿ ಮತ್ತು ಪ್ರೀತಿ ಬೆಳೆಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕೌಶಲ್ಯ ಹಾಗೂ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ವೃದ್ಧಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಗೆಲುವು-ಸೋಲಿಗಿಂತ ಅನುಭವ ಮುಖ್ಯ

ಎಚ್.ಕೆ. ಪಾಟೀಲ ಪ್ರತಿಷ್ಠಾನದ ನಿರ್ದೇಶಕ ಆನಂದ ಪೋತ್ನಿಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲುವುದು ಅಥವಾ ಸೋಲುವುದು ಮಾತ್ರ ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಪಡೆಯುವ ಹೊಸ ಅನುಭವ ಮತ್ತು ಕಲಿಕೆಯೇ ಅತ್ಯಂತ ಮಹತ್ವದ್ದು ಎಂದರು.

ಕಾರ್ಯಕ್ರಮದ ಯಶಸ್ಸಿಗೆ ಗದಗ ಜಿಲ್ಲಾ ಶಿಕ್ಷಣ ಇಲಾಖೆ, ಗ್ರಾಮೀಣ ವೈದ್ಯಕೀಯ ಸೇವಾ ಸಂಸ್ಥೆ ಹಾಗೂ ಜೇಸಿ ಪ್ರೌಢಶಾಲೆಗಳ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸಹಜ ಪ್ರತಿಭೆ ಮತ್ತು ಕೌಶಲ್ಯ ಅಡಗಿರುತ್ತದೆ. ಸೂಕ್ತ ಅವಕಾಶ ದೊರೆತಾಗ ಆ ಪ್ರತಿಭೆಯನ್ನು ಗುರುತಿಸಿ ಹೊರತರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜೇಸಿ ಪ್ರೌಢಶಾಲೆಯ ಅಧ್ಯಕ್ಷ ವಾಸಣ್ಣ ಕುರುಡಗಿ, ಜಿ.ಎನ್.ಟಿ.ಟಿ.ಎಫ್ ಉಪಾಧ್ಯಕ್ಷ ಪ್ರಭು ದಂಡಾವತಿಮಠ, ಆರ್.ಆರ್. ಓದುಗೌಡರ ಸೇರಿದಂತೆ ಜಿ.ಎನ್.ಟಿ.ಟಿ.ಎಫ್ ಹಾಗೂ ಜಿ.ಸಿ.ಐ.ಇ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸೌಮ್ಯಾ ಪಾಟೀಲ ನಿರೂಪಿಸಿದರು. ಮಧುಸೂಧನ ಪುಣೇಕರ ವಂದಿಸಿದರು.

ಗಣಿತದ ಭಯವನ್ನು ಬಿಟ್ಟು ಗಣಿತದೊಂದಿಗೆ ಸ್ನೇಹ ಬೆಳೆಸೋಣ. ಇಂದಿನ ಆತ್ಮವಿಶ್ವಾಸವೇ ನಾಳಿನ ಯಶಸ್ಸಿನ ಮೆಟ್ಟಿಲಾಗಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು, ಪ್ರತಿಯೊಂದು ಅವಕಾಶವನ್ನೂ ಬಳಸಿಕೊಂಡು ಸ್ಪರ್ಧಾತ್ಮಕ ಭವಿಷ್ಯದತ್ತ ಹೆಜ್ಜೆ ಹಾಕಬೇಕು.

— ಕೃಷ್ಣಗೌಡ ಎಚ್. ಪಾಟೀಲ

6 ಕಿ.ಮೀ. ರಸ್ತೆ, 45 ನಿಮಿಷದ ನರಕಯಾತನೆ: ನರೇಗಲ್ಲ–ತೊಂಡಿಹಾಳ ಮಾರ್ಗ ಹದಗೆಟ್ಟು ಹೈರಾಣು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕೇವಲ ಆರು ಕಿಲೋಮೀಟರ್ ರಸ್ತೆ ಕ್ರಮಿಸಲು ಮುಕ್ಕಾಲು ಗಂಟೆ ಬೇಕು ಎಂದರೆ ಆ ರಸ್ತೆಯ ದುಸ್ಥಿತಿ ಎಷ್ಟಿರಬಹುದು? ನರೇಗಲ್ಲ–ತೊಂಡಿಹಾಳ ನಡುವಿನ ಪ್ರಮುಖ ಸಂಪರ್ಕ ರಸ್ತೆ ಇದೀಗ ಇದೇ ದುಸ್ಥಿತಿಗೆ ಸಾಕ್ಷಿಯಾಗಿದೆ. ಸಂಪೂರ್ಣ ಹದಗೆಟ್ಟ ರಸ್ತೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ.

ನರೇಗಲ್ಲ–ತೊಂಡಿಹಾಳ ನಡುವಿನ ಸುಮಾರು 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ತುಂಬೆಲ್ಲ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದಾಗ ಈ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವ ಬದಲು ರಸ್ತೆಯನ್ನೇ ಹುಡುಕಿಕೊಂಡು ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಅಪಘಾತದ ಭೀತಿಯಲ್ಲೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಸಣ್ಣ ವಾಹನಗಳ ಚಾಲಕರಿಗೂ ರಸ್ತೆ ಸಂಚಾರ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನರೇಗಲ್ಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತೊಂಡಿಹಾಳ ಮಾರ್ಗವು ಅತ್ಯಂತ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆ ಮುಂದಿನ ಪ್ರದೇಶಗಳನ್ನು ಹೈದರಾಬಾದ್–ಕರ್ನಾಟಕ ಭಾಗದೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದರೂ, ರಸ್ತೆ ಅಭಿವೃದ್ಧಿ ಹಾಗೂ ದುರಸ್ತಿ ವಿಚಾರದಲ್ಲಿ ಸಂಬಂಧಿಸಿದ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಆಂಬ್ಯುಲೆನ್ಸ್‌ಗೂ ಸಂಕಷ್ಟ… ಶಾಲಾ ವಾಹನಗಳಿಗೂ ತೊಂದರೆ

ರಸ್ತೆ ಹದಗೆಟ್ಟಿರುವ ಪರಿಣಾಮ ವಾಹನಗಳ ನಿರ್ವಹಣಾ ವೆಚ್ಚವೂ ಹೆಚ್ಚುತ್ತಿದೆ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳು ವೇಗವಾಗಿ ಸಂಚರಿಸುವುದಕ್ಕೂ ಅಡ್ಡಿಯಾಗುತ್ತಿದೆ. ಶಾಲಾ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ರಸ್ತೆ ದುಸ್ಥಿತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಹಲವು ವರ್ಷಗಳಿಂದ ರಸ್ತೆ ದುರಸ್ತಿಗೆ ಒತ್ತಾಯಿಸುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹದಗೆಟ್ಟ ರಸ್ತೆಯಿಂದ ಕೆಲವೇ ಕಿಲೋಮೀಟರ್ ಪ್ರಯಾಣಕ್ಕೂ ಮುಕ್ಕಾಲು ಗಂಟೆ ಸಮಯ ವ್ಯಯವಾಗುತ್ತಿದೆ. ಅಭಿವೃದ್ಧಿಯ ಮಾತುಗಳು ಕೇಳಿಬರುತ್ತಿದ್ದರೂ, ಪ್ರಮುಖ ಸಂಪರ್ಕ ರಸ್ತೆಯ ಈ ದುಸ್ಥಿತಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಅಗತ್ಯವಿದ್ದರೆ ಸಂಪೂರ್ಣವಾಗಿ ನವೀಕರಣ ಮಾಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ನರೇಗಲ್ಲ–ತೊಂಡಿಹಾಳ ರಸ್ತೆ ಈ ಭಾಗದ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಆದರೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೇವಲ 6 ಕಿ.ಮೀ. ಪ್ರಯಾಣಕ್ಕೂ ಮುಕ್ಕಾಲು ಗಂಟೆ ಬೇಕಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

ಸ್ಥಳೀಯ ಸಾರ್ವಜನಿಕರು

ಹಗರಿಬೊಮ್ಮನಹಳ್ಳಿಗೆ ಡೆಮು ರೈಲು ಎಂಟ್ರಿ; ಸಂಭ್ರಮದ ಸ್ವಾಗತ..!

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಬಹುದಿನಗಳ ನಿರೀಕ್ಷೆ, ನಿರಂತರ ಹೋರಾಟ ಹಾಗೂ ಜನರ ಒಗ್ಗಟ್ಟಿನ ಫಲವಾಗಿ ಹೊಸಪೇಟೆ–ಅರಸೀಕೆರೆ ನಡುವೆ ಸಂಚರಿಸುವ ಡೆಮು ರೈಲು ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಂಭ್ರಮ ಮನೆ ಮಾಡಿತು. ಸಾರ್ವಜನಿಕರು, ರೈಲ್ವೆ ಪ್ರಯಾಣಿಕರು, ಹೋರಾಟಗಾರರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಮುಖಂಡರು ರೈಲಿಗೆ ಭವ್ಯ ಸ್ವಾಗತ ಕೋರಿದರು.

ಬೆಳಿಗ್ಗೆ ಸುಮಾರು 7.30ಕ್ಕೆ ರೈಲು ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನಿಲ್ದಾಣದಲ್ಲಿ ಹರ್ಷೋದ್ಗಾರ ಮೊಳಗಿತು. ಬಹುನಿರೀಕ್ಷಿತ ರೈಲು ಸೇವೆ ಆರಂಭವಾಗಿರುವುದು ಈ ಭಾಗದ ಜನತೆಗೆ ಹೊಸ ಸಂಚಾರದ ಆಶಾಭಾವನೆ ಮೂಡಿಸಿದೆ.

ನಂದಿಪುರದ ಪರಮಪೂಜ್ಯ ಡಾ. ಮಹೇಶ್ವರ ಮಹಾಸ್ವಾಮಿಗಳು ಪುಷ್ಪನಮನ ಸಲ್ಲಿಸುವ ಮೂಲಕ ನೂತನ ರೈಲು ಸೇವೆಯನ್ನು ಸ್ವಾಗತಿಸಿದರು. ಇಂದಿನ ರೈಲ್ವೆ ಸೌಲಭ್ಯದ ಹಿಂದೆ ಅನೇಕ ಜನರ ಶ್ರಮ, ಹೋರಾಟ ಹಾಗೂ ಸಹಕಾರ ಅಡಗಿದೆ ಎಂದು ಅವರು ಸ್ಮರಿಸಿದರು.

ರೈಲ್ವೆ ಸಂಪರ್ಕಕ್ಕಾಗಿ ನಡೆದ ಹೋರಾಟದ ಪ್ರತಿಯೊಂದು ಹಂತದಲ್ಲೂ ಸಾರ್ವಜನಿಕರು ತಮ್ಮ ಸಮಯ, ಶ್ರಮ ಹಾಗೂ ಸಹಕಾರ ನೀಡಿದ್ದಾರೆ. ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಗುರು–ಹಿರಿಯರು, ವಿವಿಧ ಸಂಘ–ಸಂಸ್ಥೆಗಳು, ಯುವಕರು ಹಾಗೂ ಪತ್ರಕರ್ತರು ಮತ್ತು ಮಾಧ್ಯಮ ಮಿತ್ರರ ಸಹಕಾರದಿಂದಲೇ ಈ ಯಶಸ್ಸು ಸಾಧ್ಯವಾಗಿದೆ ಎಂದು ತಿಳಿಸಿದರು.

ರೈಲ್ವೆ ಹೋರಾಟ ಸಮಿತಿಯ ಸಂಚಾಲಕ ಕೊಟ್ರೇಶ್ ಶೆಟ್ಟರ್ ಮಾತನಾಡಿ, ಹೊಸಪೇಟೆ–ಅರಸೀಕೆರೆ ಡೆಮು ರೈಲು ಆರಂಭವಾಗಿರುವುದು ಈ ಭಾಗದ ನಾಗರಿಕರಿಗೆ ಅತ್ಯಂತ ಅನುಕೂಲಕರವಾಗಿದೆ ಎಂದರು.

ತುಮಕೂರು ಹಾಗೂ ಬೆಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಬಹುಕಾಲದಿಂದ ಬೇಡಿಕೆ ಸಲ್ಲಿಸಲಾಗುತ್ತಿತ್ತು. ಸದ್ಯ ಅರಸೀಕೆರೆವರೆಗೆ ಸಂಪರ್ಕ ದೊರೆತಿದ್ದು, ಮುಂದಿನ ಹಂತದಲ್ಲಿ ಮೈಸೂರು ಸೇರಿದಂತೆ ಇನ್ನಷ್ಟು ಪ್ರಮುಖ ನಗರಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.

ಸತ್ಸಂಗ ಸಮಿತಿಯ ಹಿರಿಯ ನಾಗರಿಕ ಜಿ. ಲಕ್ಷ್ಮೀಪತಿ ಮಾತನಾಡಿ, ಇಂದಿನ ರೈಲ್ವೆ ಸೌಲಭ್ಯಗಳ ಹಿಂದೆ ರೈಲ್ವೆ ಹೋರಾಟ ಸಮಿತಿಯ ನಿರಂತರ ಶ್ರಮವಿದೆ. ಅಧಿಕಾರಿಗಳನ್ನು ಸಂಪರ್ಕಿಸಿ ನಿರಂತರವಾಗಿ ಬೇಡಿಕೆಗಳನ್ನು ಮುಂದಿಟ್ಟ ಪರಿಣಾಮ ಹಲವು ರೈಲ್ವೆ ಸೌಲಭ್ಯಗಳು ದೊರೆತಿವೆ ಎಂದು ತಿಳಿಸಿದರು.

ವಿಜಯನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ ಮಾತನಾಡಿ, ಹೊಸಪೇಟೆ–ಅರಸೀಕೆರೆ ರೈಲು ಸೇವೆಯಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಸೇರಿದಂತೆ ಪ್ರಮುಖ ನಗರಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದು ಒತ್ತಾಯಿಸಿದರು.

ಡಿಶ್ ಮಂಜುನಾಥ್ ಮಾತನಾಡಿ, ಬಹುದಿನಗಳ ಕನಸು ಇಂದು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮನಸಿ ದೇವರಾಜ್ ರೈಲು ಸೇವೆ ಉಳಿಸಿಕೊಳ್ಳಲು ಈ ಹಿಂದೆ ನಡೆದ ಹೋರಾಟಗಳನ್ನು ಸ್ಮರಿಸಿದರು.

ನ್ಯಾರೋ ಗೇಜ್ ರೈಲು ಸೇವೆ ರದ್ದಾದ ಸಂದರ್ಭದಲ್ಲಿ ರೈಲು ಮಾರ್ಗ ಉಳಿಸುವ ವಿಚಾರವಾಗಿ ಹೋರಾಟ ನಡೆದಿತ್ತು. ನಂದಿಪುರದ ಪೂಜ್ಯ ಶ್ರೀರಂತಪ್ಪಜ್ಜ ಸ್ವಾಮೀಜಿ ಸೇರಿದಂತೆ ಅನೇಕ ನಾಗರಿಕರು ಹೋರಾಟಕ್ಕೆ ಧುಮುಕಿದ್ದರು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲ ಸತ್ಯನಾರಾಯಣ, ರೈಲ್ವೆ ಹೋರಾಟಗಾರರ ಸಮಿತಿಯ ಸದಸ್ಯರು, ಆಟೋ ಸಂಘದ ಕೈಲಾಸ್ ಹಾಗೂ ಸತೀಶ್ ಪಾಟೀಲ್ ಸೇರಿದಂತೆ ಹಲವರು ಮಾತನಾಡಿ, ಮುಂದಿನ ದಿನಗಳಲ್ಲಿ ಧರ್ಮಸ್ಥಳ, ಶಿವಮೊಗ್ಗ, ಮೈಸೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ ರೈಲು ಸಂಪರ್ಕ ವಿಸ್ತರಿಸಿದರೆ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ್, ಕೆ. ಮೈಲಾರಪ್ಪ, ಆಡಿಟರ್ ನಟರಾಜ್, ಅಕ್ಕಿ ಶಿವಣ್ಣ, ನೀಲಕಂಠಪ್ಪ, ವಿರೂಪಾಕ್ಷಪ್ಪ, ಹೊನ್ನೂರಪ್ಪ, ಚಿನ್ನಪ್ಪ ಮಲ್ಕಿ ಒಡೆಯರ್ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ರೈಲ್ವೆ ಹೋರಾಟ ಸಮಿತಿಯ ಸದಸ್ಯರು, ಪತ್ರಕರ್ತರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಡೆಮು ರೈಲಿನಲ್ಲಿ ಪ್ರಯಾಣಿಸಿದರೆ ಈ ಸೇವೆ ಮತ್ತಷ್ಟು ಬಲಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಡಬಲ್ ಲೈನ್, ವಿದ್ಯುದೀಕರಣ ಹಾಗೂ ಕಡಿಮೆ ಸಮಯದಲ್ಲಿ ವೇಗವಾಗಿ ಪ್ರಯಾಣಿಸುವಂತಹ ರೈಲು ಸೌಲಭ್ಯಗಳು ಈ ಭಾಗಕ್ಕೆ ದೊರೆಯಬೇಕು.

— ಡಾ. ಮಹೇಶ್ವರ ಮಹಾಸ್ವಾಮಿಗಳು

ಗದಗ ಎಸ್‌ಪಿ ರೋಹನ್ ಜಗದೀಶ್ ರಾಮನಗರಕ್ಕೆ ವರ್ಗಾವಣೆ; ಮಿಥುನ್ ಎಚ್.ಎನ್. ನೂತನ SP

0

ಗದಗ: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ವರ್ಗಾವಣೆ ನಡೆಸಿದ್ದು, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಐಪಿಎಸ್ ಅವರನ್ನು ವರ್ಗಾವಣೆ ಮಾಡಿ ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ಕಾರ್ಯನಿರ್ವಹಿಸುತ್ತಿದ್ದ ಮಿಥುನ್ ಎಚ್.ಎನ್., ಐಪಿಎಸ್ ಅವರನ್ನು ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಗದಗ ಜಿಲ್ಲೆಯಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ರೋಹನ್ ಜಗದೀಶ್ ಅವರು ತಮ್ಮ ವಿಶಿಷ್ಟ ಕಾರ್ಯವೈಖರಿ ಹಾಗೂ ಖಡಕ್ ಕ್ರಮಗಳಿಂದ ಗಮನ ಸೆಳೆದಿದ್ದರು. ವಿಶೇಷವಾಗಿ ರೌಡಿ ಶೀಟರ್‌ಗಳು ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದವರಿಗೆ ಸಿಂಹಸ್ವಪ್ನವಾಗಿದ್ದ ಅವರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು.

ಅಪರಾಧಿಗಳ ವಿರುದ್ಧ ಖಡಕ್ ನಿಲುವು ತಳೆದಿದ್ದ ರೋಹನ್ ಜಗದೀಶ್ ಅವರು, ಸಾರ್ವಜನಿಕರೊಂದಿಗೆ ಮಾತ್ರ ಅತ್ಯಂತ ಆತ್ಮೀಯ ಹಾಗೂ ಸ್ನೇಹಪರವಾಗಿ ವರ್ತಿಸುತ್ತಿದ್ದರು. ಯಾವಾಗಲೂ ನಗುಮೊಗದಿಂದ, ಹಸನ್ಮುಖಿಯಾಗಿ ಸಾರ್ವಜನಿಕರನ್ನು ಎದುರಿಸುತ್ತಿದ್ದ ಅವರ ಸರಳ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನವನ್ನೂ ಅವರು ನಡೆಸಿದ್ದರು.

ಒಂದೆಡೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ, ಮತ್ತೊಂದೆಡೆ ಸಾರ್ವಜನಿಕರೊಂದಿಗೆ ಸ್ನೇಹಪರ ನಡೆ—ಈ ಎರಡು ವಿಭಿನ್ನ ಮುಖಗಳ ಕಾರ್ಯವೈಖರಿಯಿಂದ ರೋಹನ್ ಜಗದೀಶ್ ಅವರು ಗದಗ ಜಿಲ್ಲೆಯ ಜನತೆಯ ಗಮನ ಸೆಳೆದಿದ್ದರು.

ಇದೀಗ ಸರ್ಕಾರದ ವರ್ಗಾವಣೆ ಆದೇಶದಂತೆ ಅವರು ರಾಮನಗರದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇನ್ನು ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿರುವ ಮಿಥುನ್ ಎಚ್.ಎನ್. ಅವರು 2020ರ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ವಿವಿಧ ಪೊಲೀಸ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಸಕಲೇಶಪುರದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಿಥುನ್ ಎಚ್.ಎನ್. ಅವರನ್ನು ಇದೀಗ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ರೌಡಿ ಶೀಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದರೂ, ಸಾರ್ವಜನಿಕರೊಂದಿಗೆ ನಗುಮೊಗದ ಹಸನ್ಮುಖಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ರೋಹನ್ ಜಗದೀಶ್ ಅವರ ವರ್ಗಾವಣೆಯೊಂದಿಗೆ ಗದಗ ಜಿಲ್ಲೆಗೆ ನೂತನ ಪೊಲೀಸ್ ಸಾರಥಿಯಾಗಿ ಮಿಥುನ್ ಎಚ್.ಎನ್. ಆಗಮಿಸುತ್ತಿದ್ದು, ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.

RSS ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ: ಪ್ರಿಯಾಂಕ್ ಖರ್ಗೆ, ನಲಪಾಡ್ʼಗೆ ಜಾಮೀನು ಮಂಜೂರು!

0

ಬೆಂಗಳೂರು: ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಇಬ್ಬರಿಗೂ ತಲಾ 10 ಸಾವಿರ ರೂ. ವೈಯಕ್ತಿಕ ಶ್ಯೂರಿಟಿ ನೀಡುವ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದೆ.

ತೇಜಸ್ ಗೌಡ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನ ಮೇರೆಗೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ನಲಪಾಡ್‌ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಕಳೆದ ವಿಚಾರಣೆ ವೇಳೆ ಇಬ್ಬರೂ ನಾಯಕರು ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆದುಕೊಂಡಿದ್ದರು. ಆದರೆ ಈ ಬಾರಿ ಖುದ್ದು ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು.

ಇದಕ್ಕೆ ಬದಲಾಗಿ ಸದಾಶಿವನಗರ ಮತ್ತು ಅಶೋಕ ನಗರ ಪೊಲೀಸರು ಖುದ್ದು ಹಾಜರಾಗಿ ವರದಿ ಸಲ್ಲಿಸಿದ್ದರು. ಆದರೆ ಈ ವರದಿ ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಧೀಶರು, ಇಬ್ಬರೂ ನಾಯಕರು ಖುದ್ದು ಹಾಜರಾಗುವಂತೆ ಸೂಚಿಸಿ ಮತ್ತೆ ಸಮನ್ಸ್ ಜಾರಿ ಮಾಡಿದ್ದರು.

ರಾಜಕೀಯಕ್ಕೆ ರವಿಚಂದ್ರನ್ ಎಂಟ್ರಿ: ಬಾಲ್ಯದ ಗೆಳೆಯನಿಗೆ ಡಿಕೆಶಿ ‘ಉಡುಗೊರೆ’

ಬೆಂಗಳೂರು: ಚಿತ್ರರಂಗದಲ್ಲಿ ಅದ್ಧೂರಿ ಕನಸುಗಳನ್ನು ತೆರೆಗೆ ತಂದ ‘ಕನಸುಗಾರ’ ರವಿಚಂದ್ರನ್‌ ಇದೀಗ ರಾಜಕೀಯ ಅಂಗಳಕ್ಕೆ ಕಾಲಿಡಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಕಲಾ ಕ್ಷೇತ್ರದ ಸಾಧಕರ ಕೋಟಾದಲ್ಲಿ ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಚರ್ಚೆ ನಡೆಯುತ್ತಿದೆ ಎನ್ನಲಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಶಿಫಾರಸು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರವಿಚಂದ್ರನ್‌ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದವರು. ಯಾವುದೇ ರಾಜಕೀಯ ಪಕ್ಷದೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಅವರೊಂದಿಗೆ ರವಿಚಂದ್ರನ್ ಹೊಂದಿರುವ ವೈಯಕ್ತಿಕ ಆತ್ಮೀಯತೆ ಇದೀಗ ಈ ಚರ್ಚೆಯ ಕೇಂದ್ರಬಿಂದುವಾಗಿದೆ.

ರವಿಚಂದ್ರನ್ ಮತ್ತು ಶಿವಕುಮಾರ್ ಬಾಲ್ಯದ ಗೆಳೆಯರು ಹಾಗೂ ಶಾಲಾ ಸಹಪಾಠಿಗಳು ಎಂಬುದು ಈಗಾಗಲೇ ಬಹಿರಂಗವಾಗಿದೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ಭೇಟಿಗಳು ಹೆಚ್ಚಾಗಿರುವುದು ಕೂಡ ರಾಜಕೀಯ ವಲಯದ ಗಮನ ಸೆಳೆದಿದೆ.

ವಿಶೇಷವಾಗಿ ಮದ್ದೂರಮ್ಮ ಉತ್ಸವದ ಸಂದರ್ಭದಲ್ಲಿ ರವಿಚಂದ್ರನ್ ಅವರು ಶಿವಕುಮಾರ್ ಅವರನ್ನು ಕೊಂಡಾಡಿದ್ದ ಮಾತುಗಳು ಇದೀಗ ಮತ್ತೆ ಚರ್ಚೆಯಾಗುತ್ತಿವೆ. ‘ನಾನು ಕೈ ಚಾಚುವ ಮುನ್ನವೇ ನನ್ನ ಕೈಹಿಡಿದಿದ್ದಾರೆ. ಜೀವನಪರ್ಯಂತ ಅವರ ಋಣದಲ್ಲಿ ಇರುತ್ತೇನೆ’ ಎಂಬ ಅರ್ಥದ ಮಾತುಗಳ ಮೂಲಕ ಸಿಎಂ ಮೇಲಿನ ತಮ್ಮ ಆತ್ಮೀಯತೆ ಹಾಗೂ ಕೃತಜ್ಞತೆಯನ್ನು ಅವರು ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಕಲಾ ಕ್ಷೇತ್ರದ ಕೋಟಾದಲ್ಲಿ ರವಿಚಂದ್ರನ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಭಿಮಾನಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬೆಳವಣಿಗೆಯನ್ನು ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದಾರೆ.

ರವಿಚಂದ್ರನ್ ಅವರ ಸಿನಿಮಾ ಬದುಕು ಹಲವು ದಶಕಗಳಷ್ಟು ಹಳೆಯದು. ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರಿಗೆ ಕಲಾ ಕ್ಷೇತ್ರದ ಸಾಧಕರಾಗಿ ಪರಿಷತ್ ಪ್ರವೇಶದ ಅವಕಾಶ ಸಿಗಬಹುದು ಎಂಬ ಚರ್ಚೆ ನಡೆಯುತ್ತಿದೆ.

ಆದರೆ ಇಲ್ಲಿ ಪ್ರಮುಖ ಅಂಶವೆಂದರೆ, ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸುವ ಕುರಿತು ಕಾಂಗ್ರೆಸ್ ಪಕ್ಷವಾಗಲಿ ಅಥವಾ ಮುಖ್ಯಮಂತ್ರಿ ಕಚೇರಿಯಾಗಲಿ ಯಾವುದೇ ಅಧಿಕೃತ ನಿರ್ಧಾರ ಅಥವಾ ಘೋಷಣೆ ಮಾಡಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಇದು ದೃಢಪಟ್ಟ ನೇಮಕಾತಿಯಲ್ಲ; ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ನಿರೀಕ್ಷೆ ಮತ್ತು ಚರ್ಚೆಯಾಗಿದೆ.

ನಾಗೇಂದ್ರ ವಿರುದ್ಧ ಹಣ ಪಡೆದಿರುವುದಕ್ಕೆ ಸಾಕ್ಷ್ಯವಿಲ್ಲ, ಬಿಜೆಪಿ ರಾಜಕೀಯ ಮಾಡುತ್ತಿದೆ: ಪರಮೇಶ್ವರ್ ಆರೋಪ

0

ಮೈಸೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಖಂಡಿತವಾಗಿಯೂ ಪಕ್ಷಕ್ಕೆ ಮುಜುಗರ ತಂದಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು. ಮೈಸೂರಿಗೆ ಹೆಚ್ಚಿನ ಕಾರ್ಖಾನೆಗಳನ್ನು ತರುವ ಉದ್ದೇಶದಿಂದ ಕೆಐಡಿಬಿ ಭೂಮಿಗೆ ನೋಟಿಫಿಕೇಶನ್ ನೀಡಿರಬಹುದು ಎಂದು ಹೇಳಿದ ಪರಮೇಶ್ವರ್,

ಈ ವಿಚಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಳ್ಳುತ್ತಾರೆ, ಕೈಗಾರಿಕಾ ಸಚಿವರು ಮತ್ತು ಜಿಲ್ಲಾ ಮಂತ್ರಿಗಳೇ ಇದನ್ನು ನಿರ್ವಹಿಸುತ್ತಾರೆ ಎಂದು ತಿಳಿಸಿದರು. ನಾಗೇಂದ್ರ ರಾಜೀನಾಮೆ ಪಕ್ಷಕ್ಕೆ ಖಂಡಿತ ಮುಜುಗರ ತಂದಿದೆ ಎಂದ ಪರಮೇಶ್ವರ್, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿದೆ ಎಂದು ಆರೋಪಿಸಿದರು.

ಎರಡು ಬಾರಿ ರಾಜೀನಾಮೆ ಕೊಡಿಸುವ ಮೂಲಕ ಬಿಜೆಪಿ ರಾಜಕೀಯ ನಡೆಸಿದೆ ಎಂದ ಅವರು, ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾಗೇಂದ್ರ ಪಕ್ಷಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು, ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ ಎಂದು ಸಮರ್ಥಿಸಿಕೊಂಡರು. ಇಡಿ ಹಾಗೂ ಸಿಬಿಐ ತನಿಖೆಗಳಲ್ಲಿ ನಾಗೇಂದ್ರ ಹೆಸರಿನ ಉಲ್ಲೇಖವಿಲ್ಲ ಎಂದೂ, ಅವರು ಹಣ ಪಡೆದಿರುವ ಬಗ್ಗೆಯೂ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದೂ ಪರಮೇಶ್ವರ್ ಸ್ಪಷ್ಟಪಡಿಸಿದರು.

ತಾವು ಗೃಹ ಸಚಿವರಾಗಿದ್ದಾಗಲೇ ಶೇ. 79ರಷ್ಟು ಹಣ ರಿಕವರಿಯಾಗಿತ್ತು ಎಂದು ಹೇಳಿದ ಅವರು, ಈಗ 5 ಕೋಟಿ ರೂ. ರಿಕವರಿ ಪ್ರಕ್ರಿಯೆಯಲ್ಲಿದ್ದು, ಇದರಲ್ಲೂ ನಾಗೇಂದ್ರ ಹೆಸರು ಇಲ್ಲ ಎಂದರು. ಮುಂದಿನ ದಿನಗಳಲ್ಲಿ ವಸ್ತುಸ್ಥಿತಿಯನ್ನು ಜನರ ಮುಂದೆ ತೆರೆದಿಡುವುದಾಗಿ ತಿಳಿಸಿದ ಪರಮೇಶ್ವರ್, ಸದನದಲ್ಲಿ ಈ ಪ್ರಶ್ನೆ ಕೇಳುವಂತೆ ಸೂಚಿಸಿದರೂ ಬಿಜೆಪಿಯವರು ಕೇಳಲಿಲ್ಲ, ಅವರು ಬರೀ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಟೀಕಿಸಿದರು.

ಕುಮಾರಸ್ವಾಮಿ ರಾಮನಗರಕ್ಕೆ ಬರಲಿ, ಪಾದ ತೊಳೆದು ಸ್ವಾಗತಿಸುತ್ತೇನೆ: ಇಕ್ಬಾಲ್ ಹುಸೇನ್

0

ರಾಮನಗರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಮನಗರಕ್ಕೆ ಬಂದರೆ ಕಾಲು ತೊಳೆದು ಸ್ವಾಗತಿಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದರು. “ಅವರು ರಾಜ್ಯ ರಾಜಕಾರಣಕ್ಕೆ ಬಂದರೆ ಸಂತೋಷದಿಂದ ಸ್ವಾಗತಿಸುತ್ತೇವೆ. ರಾಮನಗರಕ್ಕೆ ಬಂದರೆ ಅವರ ಪಾದ ತೊಳೆದೇ ಸ್ವಾಗತಿಸುತ್ತೇವೆ” ಎಂದು ಕುಟುಕಿದರು.

ನೈಸ್ ರಸ್ತೆ ವಿಚಾರವಾಗಿ ಹೋರಾಟಕ್ಕೆ ಮುಂದಾಗಿರುವ ಜೆಡಿಎಸ್ ವಿರುದ್ಧ ಕಿಡಿಕಾರಿದ ಇಕ್ಬಾಲ್ ಹುಸೇನ್, ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ರಾಜ್ಯದ ಪರ ಕೆಲಸ ಮಾಡಬೇಕು ಹಾಗೂ ರಾಮನಗರ ಜನತೆಯ ಋಣ ತೀರಿಸಬೇಕು ಎಂದರು. ರಾಮನಗರ ಭಾಗಕ್ಕೆ ಬೃಹತ್ ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗ ಒದಗಿಸುವ ಆಲೋಚನೆ ಮಾಡಬೇಕಿದ್ದ ಕುಮಾರಸ್ವಾಮಿಗೆ ಅಂತಹ ಅಭಿವೃದ್ಧಿ ಚಿಂತನೆಗಳೇ ಇಲ್ಲ ಎಂದೂ, ಬಿಡದಿ ಮತ್ತು ನೈಸ್ ರಸ್ತೆ ವಿಚಾರದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷದ ಬಳಿ ಬೇರೆ ಅಸ್ತ್ರಗಳಿಲ್ಲ ಎಂದು ಟೀಕಿಸಿದರು. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಹಾಗೂ ಬಿಜೆಪಿಯವರ ವರ್ತನೆಯಿಂದ ನೊಂದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆಯೇ ಹೊರತು, ಆರೋಪ ಸಾಬೀತಾಗಿದ್ದಕ್ಕಲ್ಲ ಎಂದು ಸಮರ್ಥಿಸಿಕೊಂಡ ಅವರು, ಪಕ್ಷಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಈಗಾಗಲೇ ಎಸ್‌ಐಟಿ ನಾಗೇಂದ್ರಗೆ ಕ್ಲೀನ್ ಚಿಟ್ ನೀಡಿದ್ದು, ಬಿಜೆಪಿ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪ್ರತಿಪಾದಿಸಿದರು.