Home Blog Page 20

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹರಿದು ಗಾರೆ ಕಾರ್ಮಿಕ ಸಾವು!

 

ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಕ್ರಾಸ್ ಬಳಿ ನಡೆದಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 58 ವರ್ಷದ ರಾಜು ಎಂಬವರು ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರು ನಗರದ ಮಂಗನಹಳ್ಳಿ ಕ್ರಾಸ್‌ನಲ್ಲಿ ನಿನ್ನೆ ಸಂಜೆ ಸುಮಾರು 6 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ರಾಜು ಎಂಬ 58 ವರ್ಷದ ವ್ಯಕ್ತಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ರಾಜು ರಸ್ತೆಗೆ ಬಿದ್ದಿದ್ದು, ಬಳಿಕ ಬಸ್ ಅವರ ಮೇಲೆಯೇ ಹರಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಹಾಗೂ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿದರೂ, ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ರಾಜು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಪ್ರತಿದಿನದಂತೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತಕ್ಕೆ ಕಾರಣವಾದ ಬಸ್ ಹಾಗೂ ಅದರ ಚಾಲಕನ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಅಡ್ಡ ಮತದಾನ ಆಗುತ್ತದೆ ಎಂಬುದು ಮೊದಲೇ ಗೊತ್ತಿತ್ತು: HD ಕುಮಾರಸ್ವಾಮಿ!

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಡ್ಡ ಮತದಾನ ನಡೆಯುವ ಸಾಧ್ಯತೆ ಬಗ್ಗೆ ತಮಗೆ ಮೊದಲೇ ಮಾಹಿತಿ ಇತ್ತು ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿಯಾದ ನಂಬಿಕೆಯೇ ಪಕ್ಷಕ್ಕೆ ಆಘಾತ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಷತ್ ಚುನಾವಣೆಯ ಫಲಿತಾಂಶದಿಂದ ಪಾಠ ಕಲಿತಿದ್ದು, ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಯುವಕರು ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಲು ನಿರಾಕರಿಸಿದರು. ಮಾಧ್ಯಮ ಪ್ರತಿನಿಧಿಗಳು ಜಿಟಿ ದೇವೇಗೌಡ ಅವರ ಹೆಸರನ್ನು ಪ್ರಸ್ತಾಪಿಸಿದಾಗ, “ಅವರ ಹೆಸರು ಎತ್ತಬೇಡಿ” ಎಂದು ಪ್ರತಿಕ್ರಿಯಿಸಿದರು. ಕಳೆದ ಒಂದೂವರೆ ವರ್ಷದಿಂದ ಅವರ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಇತ್ತೀಚೆಗೆ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿಯೂ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ತಾವೇ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಹೇಳಿದರು. ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಗುರುವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಜಯಗಳಿಸಿದ್ದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಸೋಲು ಕಂಡಿದ್ದು, ಪಕ್ಷದ ಕೆಲ ಶಾಸಕರು ಅಡ್ಡ ಮತದಾನ ನಡೆಸಿದ್ದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಬಸ್ ಶೆಲ್ಟರ್ ಮೇಲೆ ಬಿದ್ದ ಬೃಹತ್ ಅರಳಿ ಮರದ ಕೊಂಬೆ: ತಪ್ಪಿದ ಭಾರೀ ದುರಂತ!

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಬಳಿ ಭಾರೀ ಅವಘಡವೊಂದು ಸಂಭವಿಸಿದೆ.

ಬೃಹತ್ ಅರಳಿ ಮರದ ಕೊಂಬೆಯೊಂದು ಬಸ್ ತಂಗುದಾಣದ ಮೇಲೆ ಬಿದ್ದ ಪರಿಣಾಮ ಬಸ್ ಶೆಲ್ಟರ್ ಸಂಪೂರ್ಣ ಜಖಂಗೊಂಡಿದ್ದು, ಸಮೀಪದಲ್ಲಿದ್ದ ಬೈಕ್‌ಗೂ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆ ವೇಳೆ ಬಸ್ ನಿಲ್ದಾಣದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದ ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದೇವಾಲಯದ ಸಮೀಪವಿರುವ ಬಸ್ ತಂಗುದಾಣದ ಮೇಲೆ ಸುಮಾರು 100 ವರ್ಷಗಳಷ್ಟು ಹಳೆಯದಾದ ಬೃಹತ್ ಅರಳಿ ಮರದ ಕೊಂಬೆಯೊಂದು ಏಕಾಏಕಿ ಮುರಿದು ಬಿದ್ದಿದೆ.

ಕೊಂಬೆ ಬಿದ್ದ ರಭಸಕ್ಕೆ ಬಸ್ ಶೆಲ್ಟರ್ ಸಂಪೂರ್ಣ ಧ್ವಂಸಗೊಂಡಿದ್ದು, ಅಲ್ಲೇ ನಿಲ್ಲಿಸಲಾಗಿದ್ದ ಬೈಕ್ ಕೂಡ ಹಾನಿಗೊಳಗಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಅಥವಾ ಭಕ್ತರು ಇಲ್ಲದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಸ್ಥಳೀಯರ ಪ್ರಕಾರ, ಕಳೆದ ಮಂಗಳವಾರವೂ ಇದೇ ಮರದ ಮತ್ತೊಂದು ಕೊಂಬೆ ಮುರಿದು ಬಿದ್ದಿತ್ತು. ಆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಮರದ ಕೊಂಬೆಗಳು ದುರ್ಬಲಗೊಂಡು ಮುರಿದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ಹಳೆಯ ಮರಗಳ ಕೊಂಬೆಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಸ್ಥಳೀಯರು, ಮತ್ತೊಂದು ಅವಘಡ ಸಂಭವಿಸುವ ಮುನ್ನ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ; ತೈಲ ಸಂಸ್ಕರಣಾಗಾರಕ್ಕೆ ಹಾನಿ!

0

ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಉಕ್ರೇನ್ ಮತ್ತೊಮ್ಮೆ ಮಾಸ್ಕೋ ಮೇಲೆ ಡ್ರೋನ್ ದಾಳಿ ನಡೆಸಿದೆ.

ಈ ವಾರದಲ್ಲೇ ಎರಡನೇ ಬಾರಿಗೆ ಉಕ್ರೇನಿಯನ್ ಡ್ರೋನ್‌ಗಳು ಮಾಸ್ಕೋದ ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಇದೇ ವೇಳೆ ರಷ್ಯಾ ಉಕ್ರೇನ್ ರಾಜಧಾನಿ ಕೀವ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುದ್ಧ ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕ ಮತ್ತು ಯುರೋಪಿನ ರಾಷ್ಟ್ರಗಳ ಬೆಂಬಲ ಕೋರುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಕಳೆದ ರಾತ್ರಿ ವಿವಿಧ ಪ್ರದೇಶಗಳಲ್ಲಿ ಉಡಾಯಿಸಲಾದ 555 ಉಕ್ರೇನಿಯನ್ ಡ್ರೋನ್‌ಗಳನ್ನು ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಮಾಸ್ಕೋ ನಗರವನ್ನು ಗುರಿಯಾಗಿಸಿಕೊಂಡು ಬಂದ ಸುಮಾರು 200 ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮಾಸ್ಕೋ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಅವರು, ಹಲವು ಡ್ರೋನ್‌ಗಳು ನಗರದ ತೈಲ ಸಂಸ್ಕರಣಾಗಾರಕ್ಕೆ ಅಪ್ಪಳಿಸಿದ್ದು, ಘಟನೆಯ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಯುದ್ಧ ಅಂತ್ಯಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ಉಭಯ ರಾಷ್ಟ್ರಗಳು ಪರಸ್ಪರ ದಾಳಿ ಮುಂದುವರಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.

ಕಾವೇರಿ ಕೊಳ್ಳದಲ್ಲಿ ನೀರಿನ ಕೊರತೆ; ಬೆಂಗಳೂರು-ಮೈಸೂರು ಜನರಿಗೆ ಕುಡಿಯುವ ನೀರಿನ ಚಿಂತೆ!

ಮಡಿಕೇರಿ: ರಾಜ್ಯದಲ್ಲಿ ಮಳೆ ಕೊರತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿದಿದ್ದು, ಜಲಸಂಕಷ್ಟದ ಆತಂಕ ಮೂಡಿಸಿದೆ.

ಧಾರಾಕಾರ ಮಳೆಯ ನಿರೀಕ್ಷೆಯಲ್ಲಿದ್ದ ಕೊಡಗು ಜಿಲ್ಲೆಯ ಕಾವೇರಿ ಕೊಳ್ಳದಲ್ಲಿ ಮಳೆ ಅಭಾವ ಕಂಡುಬಂದಿದ್ದು, ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ನೀರಿನ ಮಟ್ಟ ತೀವ್ರವಾಗಿ ಇಳಿಕೆಯಾಗಿದೆ. ಸಾಮಾನ್ಯವಾಗಿ 10ರಿಂದ 15 ಅಡಿ ನೀರು ಹರಿಯುವ ಪ್ರದೇಶದಲ್ಲಿ ಇದೀಗ ಕೇವಲ ಅರ್ಧ ಅಡಿಯಿಂದ ಒಂದು ಅಡಿ ನೀರು ಮಾತ್ರ ಹರಿಯುತ್ತಿರುವುದು ಕಂಡುಬಂದಿದೆ.

ನದಿಯ ಒಡಲು ಕಲ್ಲುಗಳಿಂದ ಆವೃತವಾಗಿದ್ದು, ಜಲಮಾಪಕದಲ್ಲಿ ನೀರಿನ ಮಟ್ಟ ಶೂನ್ಯಕ್ಕೆ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ಕಾವೇರಿ ಕೊಳ್ಳದಲ್ಲಿ ಸಮರ್ಪಕ ಮಳೆಯಾಗದಿರುವುದೇ ಈ ಸ್ಥಿತಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಈ ಬೆಳವಣಿಗೆಯಿಂದ ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಭೀತಿ ಎದುರಾಗಿದೆ.

ಕಾವೇರಿ ನೀರಾವರಿ ವ್ಯವಸ್ಥೆಯ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್ ಹಾಗೂ ಹಾರಂಗಿ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ಜಲಸಂಕಷ್ಟ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

 

ವಿಷ ಸೇವಿಸಿ ಮುಖ್ಯ ಶಿಕ್ಷಕ ಆತ್ಮಹತ್ಯೆ ಪ್ರಕರಣ: 10 ಮಂದಿ ವಿರುದ್ಧ ದಾಖಲಾಯ್ತು ಎಫ್‌ಐಆರ್!

ದಾವಣಗೆರೆ: ಹರಿಹರ ತಾಲೂಕಿನ ಕೊಕ್ಕನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ (54) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಶಿಕ್ಷಕರು, ಬಿಸಿಯೂಟ ಸಿಬ್ಬಂದಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿ 10 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜಯಪ್ಪ ಅವರ ಪತ್ನಿ ಅಂಜನಮ್ಮ ನೀಡಿದ ದೂರಿನ ಆಧಾರದ ಮೇಲೆ ಮಾನಸಿಕ ಹಿಂಸೆ, ಕಿರುಕುಳ ಹಾಗೂ ಜಾತಿನಿಂದನೆ ಆರೋಪದಡಿ ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ, ಮಹಾಂತೇಶ್ ಗೌಳಿ, ಅಡುಗೆ ಸಹಾಯಕರಾದ ಸುಮಾ, ಚೆನ್ನಮ್ಮ, ರೂಪಾ, ವಿಜಯಮ್ಮ ಹಾಗೂ ಇತರರ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಉಲ್ಲೇಖಿಸಿರುವಂತೆ, ಕಳೆದ 10 ತಿಂಗಳಿನಿಂದ ಕೊಕ್ಕನೂರು ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಯಪ್ಪ ಅವರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಪರಿಶಿಷ್ಟ ಜಾತಿಗೆ ಸೇರಿದ ಕಾರಣ ಜಾತಿ ನಿಂದನೆ ಮಾಡಲಾಗುತ್ತಿತ್ತು ಎಂದು ಜಯಪ್ಪ ಹಲವು ಬಾರಿ ತಮ್ಮ ಪತ್ನಿಗೆ ತಿಳಿಸಿದ್ದರೆಂದು ಆರೋಪಿಸಲಾಗಿದೆ.

ಶಾಲೆಯಲ್ಲಿ ಶಿಕ್ಷಕರು, ಅಡುಗೆ ಸಿಬ್ಬಂದಿ ಹಾಗೂ ಮುಖ್ಯ ಶಿಕ್ಷಕರ ನಡುವೆ ಮನಸ್ತಾಪ ಉಂಟಾಗಿದ್ದ ಹಿನ್ನೆಲೆಯಲ್ಲಿ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಸಲಾಗಿತ್ತು. ಇದೇ ವೇಳೆ ಶಾಲೆಯ ಶೌಚಾಲಯಕ್ಕೆ ತೆರಳಿದ ಜಯಪ್ಪ ವಿಷ ಸೇವಿಸಿದ್ದರು ಎನ್ನಲಾಗಿದೆ.

ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಘಟನೆ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲದ ವದಂತಿ ಸುಳ್ಳು: ರೈತರಿಗೆ ಹವಾಮಾನ ತಜ್ಞರ ಭರವಸೆ!

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ ಆವರಿಸಲಿದೆ ಎಂಬ ವದಂತಿಗಳ ನಡುವೆ ಹವಾಮಾನ ತಜ್ಞರು ಹಾಗೂ ವಿಜ್ಞಾನಿಗಳು ರೈತರಿಗೆ ನೆಮ್ಮದಿ ನೀಡುವ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಯಾವುದೇ ತೀವ್ರ ಬರಗಾಲ ಉಂಟಾಗುವುದಿಲ್ಲ ಮತ್ತು ಕೃಷಿ ಚಟುವಟಿಕೆಗಳಿಗೆ ಗಮನಾರ್ಹ ತೊಂದರೆಯಾಗುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಕೃಷಿ ಹವಾಮಾನ ತಜ್ಞ ಡಾ. ಎಂ.ಬಿ. ರಾಜೇಗೌಡ, ರಾಜ್ಯದಲ್ಲಿ ಭೀಕರ ಬರಗಾಲ ಬರುತ್ತದೆ ಹಾಗೂ ಶೇಕಡಾ 64ರಷ್ಟು ಮಳೆ ಕೊರತೆಯಾಗುತ್ತದೆ ಎಂಬ ಮಾತುಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದ್ದಾರೆ. ಎಲ್ ನಿನೋ ಪರಿಣಾಮದಿಂದ ರಾಜ್ಯದಲ್ಲಿ ಶೇಕಡಾ 4ರಿಂದ 8ರಷ್ಟು ಮಳೆ ಕೊರತೆ ಸಂಭವಿಸುವ ಸಾಧ್ಯತೆ ಇದ್ದರೂ, ಅದು ಕೃಷಿಗೆ ದೊಡ್ಡ ಮಟ್ಟದ ಸಮಸ್ಯೆ ಉಂಟುಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

1964-65ರಲ್ಲಿ ದೇಶದಲ್ಲಿ ಶೇಕಡಾ 28ರಷ್ಟು ಮಳೆ ಕೊರತೆಯಾಗಿದ್ದ ಸಂದರ್ಭದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗಿನ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿದ್ದು, ಅಷ್ಟು ದೊಡ್ಡ ಪ್ರಮಾಣದ ಮಳೆ ಕೊರತೆ ಸಂಭವಿಸುವ ಸಾಧ್ಯತೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಲ್ ನಿನೋ ಪ್ರಭಾವವು ನಾಲ್ಕು ವರ್ಷಗಳಿಗೊಮ್ಮೆ ಕಂಡುಬರುವ ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದ್ದು, ಮಳೆಯ ಹಂಚಿಕೆ ಸಮರ್ಪಕವಾಗಿದ್ದರೆ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ರಾಜೇಗೌಡ ಹೇಳಿದ್ದಾರೆ. ಇದೇ ವೇಳೆ ವೆಸ್ಟರ್ನ್ ಡಿಸ್ಟರ್ಬೆನ್ಸ್ ಪ್ರಭಾವದಿಂದ ಉತ್ತರ ಹಾಗೂ ಮಧ್ಯ ಭಾರತದಲ್ಲಿ ಉತ್ತಮ ಮಳೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ಬಿತ್ತನೆ ಕಾರ್ಯವೂ ಹೆಚ್ಚಾಗಿದೆ. ಕಳೆದ ಬಾರಿ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಈ ಬಾರಿ ಅದು 17 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಇದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ, ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸಿ.ಎಸ್. ಪಾಟೀಲ್ ಪ್ರತಿಕ್ರಿಯಿಸಿ, ಕಳೆದ ವರ್ಷ ರಾಜ್ಯದಲ್ಲಿ ಸರಾಸರಿ ಶೇಕಡಾ 14ರಷ್ಟು ಅಧಿಕ ಮಳೆಯಾಗಿತ್ತು. ಆದರೆ ಈ ಬಾರಿ ಎಲ್ ನಿನೋ ಪರಿಣಾಮದಿಂದ ರಾಜ್ಯದಲ್ಲಿ ಸರಾಸರಿ ಶೇಕಡಾ 10ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಮಳೆ ಕೊರತೆಯ ಸಾಧ್ಯತೆ ಇದ್ದರೂ ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗುವ ಭೀತಿ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದು, ರೈತ ಸಮುದಾಯಕ್ಕೆ ಧೈರ್ಯ ತುಂಬಿದ್ದಾರೆ.

ವರ್ತೂರಿನ ತ್ಯಾಜ್ಯ ನೀರು ಘಟಕದಲ್ಲಿ ಅವಘಡ: ಇಬ್ಬರು ಕಾರ್ಮಿಕರು ನಾಪತ್ತೆ!

ಬೆಂಗಳೂರು: ನಗರದ ವರ್ತೂರಿನ ಬೆಳಗೆರೆಯಲ್ಲಿರುವ ಬಿಡಬ್ಲ್ಯೂಎಸ್ಎಸ್‌ಬಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ನಡೆದ ಅವಘಡದಲ್ಲಿ ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದು, ಅವರಿಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸುಮಾರು 40 ಅಡಿ ಆಳದ ಟ್ಯಾಂಕ್‌ಗೆ ಕೆಲಸದ ನಿಮಿತ್ತ ಇಳಿದಿದ್ದ ಮೂವರು ಕಾರ್ಮಿಕರು ಆಯತಪ್ಪಿ ಬಿದ್ದಿದ್ದಾರೆ. ಈ ಪೈಕಿ ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಬಿಹಾರದ ಬ್ರಿಜೇಶ್ ಹಾಗೂ ತಮಿಳುನಾಡಿನ ಅಖಿಲೇಶ್ ನಾಪತ್ತೆಯಾಗಿದ್ದಾರೆ. ಟ್ಯಾಂಕ್ ಒಳಗೆ ಆಮ್ಲಜನಕದ ಕೊರತೆ ಇರುವ ಸಾಧ್ಯತೆ ಇದ್ದು, ಇಬ್ಬರ ಸ್ಥಿತಿಗತಿ ಬಗ್ಗೆ ಆತಂಕ ವ್ಯಕ್ತವಾಗಿದೆ.

ಮಾಹಿತಿಯ ಪ್ರಕಾರ, ಕಾರ್ಮಿಕರು ಯಾವುದೇ ಸುರಕ್ಷತಾ ಕಿಟ್, ಆಮ್ಲಜನಕ ಉಪಕರಣ ಅಥವಾ ರಕ್ಷಣಾ ಸಾಧನಗಳಿಲ್ಲದೆ ಟ್ಯಾಂಕ್‌ಗೆ ಇಳಿದಿದ್ದರು. ಇದೇ ಅವಘಡಕ್ಕೆ ಪ್ರಮುಖ ಕಾರಣವಾಗಿರಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಕಾರ್ಮಿಕರನ್ನು ಕೆಲಸಕ್ಕೆ ಇಳಿಸಲಾಗಿತ್ತೇ ಎಂಬ ಪ್ರಶ್ನೆಗಳು ಮೂಡಿವೆ.

ಈ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಕೋರಮಂಗಲದಿಂದ ವರ್ತೂರು ಭಾಗದವರೆಗೆ ಹರಿದು ಬರುವ ಡ್ರೈನೇಜ್ ನೀರು ಸೇರುತ್ತದೆ. ಲಕ್ಷಾಂತರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಕೊಳಚೆ ನೀರನ್ನು ಸಂಗ್ರಹಿಸಿ ಬಳಿಕ ಶುದ್ಧೀಕರಣ ಪ್ರಕ್ರಿಯೆ ನಡೆಸಲಾಗುತ್ತದೆ. ಘಟನೆ ನಡೆದ ವೇಳೆ ಕಾರ್ಮಿಕರು ಏಣಿ ಮೂಲಕ ಟ್ಯಾಂಕ್ ಒಳಗೆ ಇಳಿದು ನಿರ್ವಹಣಾ ಕಾರ್ಯದಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.

ಸದ್ಯ ನಾಪತ್ತೆಯಾಗಿರುವ ಇಬ್ಬರು ಕಾರ್ಮಿಕರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜು.11ರಂದು ರಾಷ್ಟ್ರೀಯ ಲೋಕ ಅದಾಲತ್

0

ವಿಜಯಸಾಕ್ಷಿ ಸುದ್ದಿ, ಗದಗ: ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜುಲೈ 11, 2026ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು, ಸಾರ್ವಜನಿಕರು ಹಾಗೂ ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮನವಿ ಮಾಡಿದೆ.

ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ನ್ಯಾಯಾಲಯದ ವೆಚ್ಚ, ಸಮಯ ಹಾಗೂ ಅನಗತ್ಯ ಆರ್ಥಿಕ ಹೊರೆ ತಪ್ಪುವುದರ ಜೊತೆಗೆ ಪರಸ್ಪರ ಬಾಂಧವ್ಯವನ್ನು ಉಳಿಸಿಕೊಳ್ಳಲು ಸಹ ಸಾಧ್ಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಶ್ರೀಮತಿ ನಾಗವೇಣಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಿವಿಲ್ ದಾವೆಗಳು, ಭೂಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಎಂಎಂಆರ್‌ಡಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ವೈವಾಹಿಕ ವ್ಯಾಜ್ಯಗಳು ಹಾಗೂ ರಾಜೀ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡಬಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ರಾಜೀ ಸಂಧಾನಕ್ಕಾಗಿ ಗುರುತಿಸಲಾಗಿದೆ.

ಸಂಬಂಧಿತ ವಕೀಲರು ಹಾಗೂ ಪಕ್ಷಗಾರರಿಗೆ ರಾಜೀ ಸಂಧಾನದಿಂದ ಆಗುವ ಪ್ರಯೋಜನಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡಿ, ಸೌಹಾರ್ದಯುತ ಪರಿಹಾರಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಜುಲೈ 11ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಕೀಲರು, ಕಕ್ಷಿದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಲೋಕ ಅದಾಲತ್ ನ್ಯಾಯದ ವೇಗದ ದಾರಿ. ಪರಸ್ಪರ ಒಪ್ಪಂದದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸಮಯ, ಹಣ ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳುವ ಅಪರೂಪದ ಅವಕಾಶ ಇದಾಗಿದೆ.”

ಶ್ರೀಮತಿ ನಾಗವೇಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ

ಶಿಕ್ಷಕರ ತರಬೇತಿ ಕೇಂದ್ರವೇ ದುಸ್ಥಿತಿಯಲ್ಲಿ..!

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿಕ್ಷಕರಿಗೆ ತರಬೇತಿ, ಕಾರ್ಯಾಗಾರ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿರುವ ಶಿರಹಟ್ಟಿ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿಆರ್‌ಸಿ) ಮೂಲ ಸೌಲಭ್ಯಗಳ ಕೊರತೆಯಿಂದ ತತ್ತರಿಸಿದ್ದು, “ಶಿಕ್ಷಕರಿಗೆ ಮಾದರಿಯಾಗಬೇಕಾದ ಕೇಂದ್ರವೇ ದುಸ್ಥಿತಿಗೆ ತಲುಪಿರುವುದು ವಿಪರ್ಯಾಸ” ಎಂಬ ಮಾತುಗಳು ಶಿಕ್ಷಕರ ವಲಯದಲ್ಲಿ ಕೇಳಿ ಬರುತ್ತಿವೆ.

ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರಿಗೆ ತರಬೇತಿ, ಕಾರ್ಯಾಗಾರ, ಸಭೆ ಸೇರಿದಂತೆ ಅನೇಕ ಶೈಕ್ಷಣಿಕ ಚಟುವಟಿಕೆಗಳು ನಡೆಯುವ ಈ ಕೇಂದ್ರ ಹಲವು ವರ್ಷಗಳಿಂದ ದುರಸ್ತಿಯಾಗದೇ ಉಳಿದಿದ್ದು, ಈಗ ಹೆಸರಿಗೆ ಮಾತ್ರ ಕ್ಷೇತ್ರ ಸಂಪನ್ಮೂಲ ಕೇಂದ್ರ ಎಂಬ ಸ್ಥಿತಿಗೆ ತಲುಪಿದೆ ಎಂಬ ಆರೋಪ ವ್ಯಕ್ತವಾಗಿದೆ.

ಹಾಳಾಗುತ್ತಿರುವ ಉಪಗ್ರಹ ಆಧಾರಿತ ತರಬೇತಿ ಪರಿಕರಗಳು

ಶಿಕ್ಷಕರಿಗೆ ಉಪಗ್ರಹ ಆಧಾರಿತ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಟೆಲಿಕಾನ್ಫರೆನ್ಸ್‌ಗಳ ಮೂಲಕ ತರಬೇತಿ ನೀಡಲು ಅಳವಡಿಸಲಾಗಿದ್ದ ರೋಟ್ (Receive Only Terminal) ಸೇರಿದಂತೆ ವಿವಿಧ ಪರಿಕರಗಳು ದುರಸ್ತಿಯಲ್ಲಿವೆ. ಇವುಗಳನ್ನು ಸರಿಪಡಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಲಕ್ಷಾಂತರ ರೂ. ಮೌಲ್ಯದ ಪರಿಕರಗಳು ಹಾಳಾಗುವ ಹಂತ ತಲುಪಿವೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.

ಕುಡಿಯುವ ನೀರಿಗೂ ಪರದಾಟ

ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ತರಬೇತಿಗಾಗಿ ಆಗಮಿಸುವ ಶಿಕ್ಷಕರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಶೌಚಾಲಯಗಳು ನಿರ್ವಹಣೆಯ ಕೊರತೆಯಿಂದ ಗಬ್ಬೆದ್ದು ನಾರುತ್ತಿದ್ದು, ಬಳಕೆಗೆ ಯೋಗ್ಯವಾಗಿಲ್ಲ.

ಕಚೇರಿ ಆವರಣದಲ್ಲಿ ಎಲ್ಲೆಂದರಲ್ಲಿ ಡೆಡ್‌ಸ್ಟಾಕ್ ಸಾಮಗ್ರಿಗಳು ಬಿದ್ದಿವೆ. ಕಸ-ಕಡ್ಡಿಗಳು ತುಂಬಿಕೊಂಡಿದ್ದು, ಸ್ವಚ್ಛತೆ ಸಂಪೂರ್ಣವಾಗಿ ಮರೀಚಿಕೆಯಾಗಿದೆ. ತಂತಿ ಬೇಲಿ ಇಲ್ಲದ ಕಾರಣ ಭದ್ರತೆಯ ಕೊರತೆಯೂ ಕಾಡುತ್ತಿದೆ.

ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ನಡೆದ ಬೆನ್ನಲ್ಲೇ, ಅದರ ಪಕ್ಕದಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿಯೂ ಶಿಕ್ಷಕರಿಂದ ಹಣ ವಸೂಲಿ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗಂಭೀರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಉಪನಿರ್ದೇಶಕ ಆರ್.ಎಸ್. ಬುರಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ದುರಸ್ತಿ ಕುರಿತು ಪ್ರಸ್ತಾವನೆ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

“ಶಿಕ್ಷಕರಿಗೆ ಗುಣಮಟ್ಟದ ತರಬೇತಿ ನೀಡಬೇಕಾದ ಕ್ಷೇತ್ರ ಸಂಪನ್ಮೂಲ ಕೇಂದ್ರವೇ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕಟ್ಟಡ, ಶೌಚಾಲಯ, ಕುಡಿಯುವ ನೀರು ಹಾಗೂ ತರಬೇತಿ ಪರಿಕರಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು.”

— ಹೆಸರು ಹೇಳಲು ಬಯಸದ ಶಿಕ್ಷಕರು

8-9 ವರ್ಷಗಳಿಂದ ಸುಣ್ಣ-ಬಣ್ಣವೇ ಇಲ್ಲ

ಸುಮಾರು 8-9 ವರ್ಷಗಳಿಂದ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯದೇ ಇರುವುದರಿಂದ ಗೋಡೆಗಳು ಬಿರುಕು ಬಿಟ್ಟಿದ್ದು, ಕಚೇರಿ ಜೀರ್ಣಾವಸ್ಥೆಯತ್ತ ಸಾಗುತ್ತಿದೆ. ಇದಕ್ಕೆ ಕಾಯಕಲ್ಪ ನೀಡಬೇಕಾದ ಅಧಿಕಾರಿಗಳು ಆಸಕ್ತಿ ವಹಿಸದಿರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

error: Content is protected !!