Home Blog Page 20

ಅಳಿಯನ ಕೊಲೆಯ ಪಶ್ಚಾತ್ತಾಪ, ದೇವಾಲಯಗಳ ಸುತ್ತಾಟ, ಕೊನೆಗೆ ಸಾಮೂಹಿಕ ಆತ್ಮಹತ್ಯೆ

0

ಬೆಂಗಳೂರು: ಫ್ರೀಫೈರ್ ಗೇಮ್ ವ್ಯಸನದಿಂದ ಆರಂಭವಾದ ಒಂದು ಕೊಲೆ ಪ್ರಕರಣ, ಇಡೀ ಕುಟುಂಬದ ಅಂತ್ಯಕ್ಕೆ ಕಾರಣವಾದ ಘಟನೆ ಸೋಲದೇವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ ಮಾವ ನಾಗಪ್ರಸಾದ್ ಸೇರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದು ನಗರವನ್ನೇ ಬೆಚ್ಚಿಬೀಳಿಸಿದೆ.

ಅಮೋಘಕೀರ್ತಿಯ ಸಾವಿನ ಬಳಿಕ ಕುಟುಂಬ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿತ್ತು. ಕೊಲೆಯ ಪಾಪ ಪರಿಹಾರಕ್ಕಾಗಿ ದೇವಾಲಯಗಳಿಗೆ ಭೇಟಿ, ತೀರ್ಥಯಾತ್ರೆಗಳು ನಡೆಸುತ್ತಿದ್ದ ಕುಟುಂಬ, ಕೊನೆಗೆ ಬಿಹಾರದ ಪ್ರವಾಸದ ವೇಳೆ ಒಟ್ಟಿಗೆ ಸಾವಿನ ದಾರಿ ಹಿಡಿದಿದೆ ಎನ್ನಲಾಗಿದೆ. ಮೃತರ ಬಳಿ ನಿದ್ದೆ ಮಾತ್ರೆಗಳು ಪತ್ತೆಯಾಗಿದ್ದು, ಓವರ್ ಡೋಸ್‌ನಿಂದ ಸಾವಾಗಿರುವ ಶಂಕೆ ವ್ಯಕ್ತವಾಗಿದೆ.

ನಾಗಪ್ರಸಾದ್, ತಾಯಿ ಸುಮಂಗಲಾ (78), ಸಹೋದರಿ ಶಿಲ್ಪಾ (48) ಮತ್ತು ಶ್ರುತಾ (43) ಮೃತಪಟ್ಟಿದ್ದಾರೆ. ಈ ದುರಂತದ ಮೂಲ ಆಗಸ್ಟ್ 8ರಂದು ನಡೆದ ಅಮೋಘಕೀರ್ತಿಯ ಕೊಲೆ ಪ್ರಕರಣ. ಫ್ರೀಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಬಾಲಕ ಹಣಕ್ಕಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದ. ಹಲ್ಲೆಗೂ ಮುಂದಾದ ಹಿನ್ನೆಲೆಯಲ್ಲಿ ನಾಗಪ್ರಸಾದ್ ಅತಿರೇಕದ ಹೆಜ್ಜೆ ಇಟ್ಟು ಬಾಲಕನನ್ನು ಕೊಲೆ ಮಾಡಿದ್ದ.

ಕೊಲೆ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ನಾಗಪ್ರಸಾದ್, ನಂತರ ಸೋಲದೇವನಹಳ್ಳಿ ಠಾಣೆಗೆ ಶರಣಾಗಿ ಜೈಲು ಸೇರಿದ್ದ. ಕೆಲ ದಿನಗಳ ಬಳಿಕ ಬೇಲ್ ಪಡೆದು ಹೊರಬಂದ ಆತ ಕುಟುಂಬದೊಂದಿಗೆ ಬಿಹಾರ ಪ್ರವಾಸ ಕೈಗೊಂಡಿದ್ದ. ಇದೀಗ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನು ಎತ್ತಿದೆ.

ಗೇಮಿಂಗ್ ವ್ಯಸನ, ಮಾನಸಿಕ ಅಪರಾಧ ಭಾರ, ಕುಟುಂಬದ ಒತ್ತಡ ಸೇರಿ ಸಂಭವಿಸಿದ ಈ ದುರಂತವು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಗಾಳಿ ಸ್ವಲ್ಪ ಹಸಿರಾಯ್ತು, ಕರಾವಳಿಯಲ್ಲಿ ಆತಂಕ: ಮಂಗಳೂರು–ಉಡುಪಿಯಲ್ಲಿ AQI ಭಾರೀ ಕುಸಿತ

0

ಬೆಂಗಳೂರು: ಕಳೆದ ಕೆಲವು ದಿನಗಳಿಂದ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದ್ದ ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಸದ್ಯಕ್ಕೆ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ. ನಿನ್ನೆಯೂ ತಕ್ಕಮಟ್ಟಿಗೆ ಉತ್ತಮಗೊಂಡಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಮತ್ತಷ್ಟು ಎಚ್ಚೆತ್ತುಕೊಂಡಿದ್ದು, ನಗರದ Air Quality Index (AQI) 127ಕ್ಕೆ ತಲುಪಿದೆ.

ಆದರೆ ಇದೇ ಸಮಯದಲ್ಲಿ ರಾಜ್ಯದ ಕರಾವಳಿ ನಗರಗಳಾದ ಮಂಗಳೂರು ಮತ್ತು ಉಡುಪಿಯಲ್ಲಿ ವಾಯು ಗುಣಮಟ್ಟ ಆತಂಕಕಾರಿ ರೀತಿಯಲ್ಲಿ ಹದಗೆಡುತ್ತಿದೆ. ಕೆಲ ದಿನಗಳ ಹಿಂದೆ 100ರ ಆಸುಪಾಸಿನಲ್ಲಿ ಇದ್ದ ಮಂಗಳೂರಿನ AQI ಇಂದು 173ಕ್ಕೆ ತಲುಪಿದ್ದು, ಉಡುಪಿಯ AQI 172 ದಾಖಲಾಗಿದೆ. ದಿನದಿಂದ ದಿನಕ್ಕೆ ಈ ನಗರಗಳಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದು ತಜ್ಞರಲ್ಲಿ ಚಿಂತೆ ಮೂಡಿಸಿದೆ.

WHO ಮಾನದಂಡಗಳ ಪ್ರಕಾರ, ಬೆಂಗಳೂರಿನ AQI 127 ಮಟ್ಟವೂ ಆರೋಗ್ಯಕ್ಕೆ ಹಾನಿಕರವೇ ಆಗಿದೆ. ಇನ್ನು ಮಂಗಳೂರು, ಉಡುಪಿ ಸೇರಿದಂತೆ ಹಲವೆಡೆ AQI 150ರ ಗಡಿ ದಾಟಿರುವುದು ‘ಅನಾರೋಗ್ಯಕರ’ ವಲಯಕ್ಕೆ ಸೇರಿದೆ. ಈ ಸ್ಥಿತಿ ಮುಂದುವರೆದರೆ ದೆಹಲಿಯಂತಹ ತೀವ್ರ ವಾಯು ಮಾಲಿನ್ಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಉಸಿರಾಟ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರನ ಸಾವು

0

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದ ಶಂಕಿತ ಭಯೋತ್ಪಾದಕನೊಬ್ಬ ಅನಾರೋಗ್ಯದ ಕಾರಣ ಮೃತಪಟ್ಟಿರುವ ಘಟನೆ ನಡೆದಿದೆ. ಸುದ್ದಗುಂಟೆಪಾಳ್ಯ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಧಿಕ್ ಪಾಷಾ (47) ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಕಳೆದ ಆರು ತಿಂಗಳಿಂದ ಲೋ ಬಿಪಿ, ಹೈ ಶುಗರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಾಧಿಕ್ ಪಾಷಾರ ಆರೋಗ್ಯದಲ್ಲಿ ಇತ್ತೀಚೆಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಈ ಹಿನ್ನೆಲೆ ಜೈಲು ಅಧಿಕಾರಿಗಳು ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 06ರ ಮಧ್ಯರಾತ್ರಿ ಸಾಧಿಕ್ ಪಾಷಾ ಕೊನೆಯುಸಿರು ಎಳೆದಿದ್ದಾನೆ.

ಸಾಧಿಕ್ ಪಾಷಾ 2020ರಲ್ಲಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಿಂದ ಬಂಧಿತನಾಗಿದ್ದ. ಈ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. ಆಗಿನಿಂದಲೂ ಸಾಧಿಕ್ ಪಾಷಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ನ್ಯಾಯಾಂಗ ಬಂಧನದಲ್ಲಿದ್ದ.

ಸದ್ಯ ಸಾಧಿಕ್ ಪಾಷಾ ಸಾವಿನ ಕುರಿತು ಜೈಲು ಹಾಗೂ ವಿಕ್ಟೋರಿಯಾ ಆಸ್ಪತ್ರೆ ಅಧಿಕಾರಿಗಳು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಸಾವಿನ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.

ಬೆಂಗಳೂರಿಗರ ಗಮನಕ್ಕೆ; ಈ ಏರಿಯಾಗಳಲ್ಲಿ ಭಾನುವಾರ ಪವರ್ ಕಟ್!

0

ಬೆಂಗಳೂರು: ತುರ್ತು ನಿರ್ವಹಣಾ ಮತ್ತು ತಾಂತ್ರಿಕ ಕಾಮಗಾರಿಗಳ ಹಿನ್ನೆಲೆಯಲ್ಲಿ ಭಾನುವಾರ ರಾಜಧಾನಿ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ಲಾಟಿನಮ್ ಸಿಟಿ, ಜಲಸೌಧ ಸುತ್ತಮುತ್ತಲಿನ ಪ್ರದೇಶಗಳು, ಎಚ್‌ಎಂಟಿ ರಸ್ತೆ, ಪೀಣ್ಯ ಕೈಗಾರಿಕಾ ಪ್ರದೇಶ, ರಾಜೇಶ್ವರಿನಗರ, ಗಣಪತಿನಗರ, ಭೈರವೇಶ್ವರ ನಗರ, ರಾಜಗೋಪಾಲ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಪವರ್ ಕಟ್ ಇರಲಿದೆ. ಜೊತೆಗೆ ಜಾಲಹಳ್ಳಿ ವಿಭಾಗದ ಅಬ್ಬಿಗೆರೆ ಉಪಕೇಂದ್ರ ವ್ಯಾಪ್ತಿಯ ಕಮ್ಮಗೊಂಡನಹಳ್ಳಿ, ವಡೇರಹಳ್ಳಿ, ವಿಶ್ವೇಶ್ವರಯ್ಯ ಬಡಾವಣೆ, ಕುವೆಂಪು ನಗರ, ಸಿಂಗಾಪುರ ಹಾಗೂ ಸುತ್ತಮುತ್ತಲಿನ ನಿವಾಸಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲೂ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.

ಕಾಮಗಾರಿ ಪೂರ್ಣಗೊಂಡ ತಕ್ಷಣ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.

ಮನೆಯೊಳಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಯುವಕನ ಶವ: ಯಾದಗಿರಿಯ ಯಾಳಗಿ ತಾಂಡಾದಲ್ಲಿ ಸಂಶಯಾಸ್ಪದ ಘಟನೆ

0

ಯಾದಗಿರಿ: ಮನೆಯೊಳಗೆ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಘಟನೆ ಸುರಪುರ ತಾಲ್ಲೂಕಿನ ಯಾಳಗಿ ತಾಂಡಾದಲ್ಲಿ ನಡೆದಿದ್ದು, ಮೃತನನ್ನು ಲಕ್ಷ್ಮಣ ರಾಠೋಡ್ (20) ಎಂದು ಗುರುತಿಸಲಾಗಿದೆ.

ಮನೆಯವರು ಹೊರಗಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಲಕ್ಷ್ಮಣನ ಶವವನ್ನು ಮನೆಯೊಳಗಿನ ಪ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಆದರೆ, ಮೃತನ ಕೈಗಳನ್ನು ಹಗ್ಗದಿಂದ ಕಟ್ಟಲಾಗಿದ್ದು, ಅರೆಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಸಾವಿನ ಹಿಂದೆ ಕೊಲೆ ನಡೆದಿದೆ ಎಂಬ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದು, ಯುವಕನನ್ನು ಕೊಲೆಗೈದು ನಂತರ ನೇಣು ಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶವದ ಸ್ಥಿತಿ ನೋಡಿದಾಗ ಆತ್ಮಹತ್ಯೆ ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಹುಣಸಗಿ ಸಿಪಿಐ ರವಿಕುಮಾರ್ ಹಾಗೂ ಪಿಎಸ್ಐ ಅಮೋಜ್ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಸಾಧ್ಯತೆ ಇದೆ.

ಯುವಕನ ಮನೆ ಎದುರು ಕುಟುಂಬಸ್ಥರ ಆಕ್ರಂದನ ಕಣ್ಣೀರಿನ ಕೋಲಾಹಲವಾಗಿ ಮಾರ್ಪಟ್ಟಿದ್ದು, ಗ್ರಾಮದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್: ತೇಜಸ್ವಿ ಸೂರ್ಯ–ಖಟ್ಟರ್ ಹಸ್ತಕ್ಷೇಪದಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್

0

ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ, ಸೋಮವಾರದಿಂದ ಜಾರಿಗೆ ಬರಬೇಕಿದ್ದ ದರ ಪರಿಷ್ಕರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಬೀಳುವ ಸಾಧ್ಯತೆ ಮೂಡಿದೆ. ಇದರಿಂದ ಲಕ್ಷಾಂತರ ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.

ಬಿಎಂಆರ್‌ಸಿಎಲ್ (BMRCL) ಪ್ರಸ್ತಾವಿಸಿದ್ದ ಟಿಕೆಟ್ ದರ ಏರಿಕೆ ವಿರುದ್ಧ ಜನಾಕ್ರೋಶ ಭುಗಿಲೆದಿದ್ದು, ರಾಜಕೀಯ ವಲಯದಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರದ ತಕ್ಷಣದ ಹಸ್ತಕ್ಷೇಪವನ್ನು ಕೋರಿದ್ದರು.

ಸೋಮವಾರದಿಂದ ಜಾರಿಗೆ ಬರಬೇಕಿದ್ದ ರಾಜ್ಯ ಸರ್ಕಾರದ ಅನ್ಯಾಯದ ಮೆಟ್ರೋ ಟಿಕೆಟ್ ದರ ಏರಿಕೆ ವಿರುದ್ಧ ನಿನ್ನೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದ ತೇಜಸ್ವಿ ಸೂರ್ಯ, ಇಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟ್ಟರ್) ನಲ್ಲಿ ಮಾಹಿತಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, “ಮೆಟ್ರೋ ದರ ಏರಿಕೆ ಬಗ್ಗೆ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಫೆಬ್ರವರಿ 9ರಿಂದ ಮೆಟ್ರೋ ಟಿಕೆಟ್ ದರ ಹೆಚ್ಚಿಸದಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ” ಎಂದು ತಿಳಿಸಿದ್ದಾರೆ.

“ದೇಶದಲ್ಲೇ ನಮ್ಮ ಮೆಟ್ರೋ ಅತ್ಯಂತ ದುಬಾರಿ ಮೆಟ್ರೋ ಸೇವೆಯಾಗಿದೆ. ದರ ಏರಿಕೆಯಿಂದ ಲಕ್ಷಾಂತರ ಜನರಿಗೆ ಆರ್ಥಿಕ ಹೊರೆ ಬೀಳಲಿದೆ. ಸಾರ್ವಜನಿಕ ಸಾರಿಗೆ ಇನ್ನಷ್ಟು ಅಲಭ್ಯವಾಗುತ್ತದೆ. ಹೀಗಾಗಿ ದರ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಸೂಚಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಎಲ್ಲ ನಿಗಮಗಳಲ್ಲೂ ಬಡ್ಡಿ ಮನ್ನಾ ಮಾಡಿಲ್ಲವೇಕೆ?: ಮುಖ್ಯಮಂತ್ರಿಗಳಿಗೆ ಸಿ.ಟಿ. ರವಿ ಪ್ರಶ್ನೆ

0

ಬೆಂಗಳೂರು: ಮಾನ್ಯ ಮುಖ್ಯಮಂತ್ರಿಗಳೇ, ಎಲ್ಲ ನಿಗಮಗಳಲ್ಲಿ ಸಾಲ ಪಡೆದವರ ಬಡ್ಡಿ ಮನ್ನಾ ಮಾಡಿಲ್ಲವೇಕೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲಗಳ ಬಡ್ಡಿ ಮನ್ನಾ ಮಾಡಿದ್ದೀರಿ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲದ ಬಡ್ಡಿ ಮನ್ನಾ ಯಾಕೆ ಮಾಡಿಲ್ಲ ಎಂದು ಕೇಳಿದರು. ವಾಲ್ಮೀಕಿ ನಿಗಮದ ಬಡ್ಡಿ ಮನ್ನಾ ಯಾಕೆ ಮಾಡಿಲ್ಲ? ಇತರ ಹಿಂದುಳಿದ ವರ್ಗಗಳ ನಿಗಮದಲ್ಲಿ ಕೊಟ್ಟ ಸಾಲದ ಬಡ್ಡಿ ಯಾಕೆ ಮನ್ನಾ ಮಾಡಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಕೇವಲ ಒಂದು ಕೋಮನ್ನು ಓಲೈಸುವುದು ನಿಮ್ಮ ಜಾತ್ಯತೀತತೆಯೇ? ಉಳಿದ ನಿಗಮಗಳಲ್ಲೂ ಬಡ್ಡಿ ಮನ್ನಾ ಮಾಡಿದ್ದರೆ ಅದು ಒಪ್ಪುವ ಮಾತಾಗುತ್ತಿತ್ತು. ನಿಮ್ಮದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಅದೇ ಹಳೇ ಕಥೆ; ಇದನ್ನೇ ಮತ್ತೆ ಮುಂದುವರೆಸಿದ್ದೀರಿ ಎಂದು ಆಕ್ಷೇಪಿಸಿದರು.

ಜಿಬಿಎಯ 5 ಮಹಾನಗರ ಪಾಲಿಕೆಗಳನ್ನೂ ನಾವು ಗೆಲ್ಲಲಿದ್ದೇವೆ. ಅದನ್ನು ಗೆಲ್ಲಲು ಬೇಕಾದ ಎಲ್ಲ ವಾತಾವರಣ ಇದೆ. ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಇದೆ. ಬೆಂಗಳೂರಿನ ಜನರು ಬೇಸತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ ಚರ್ಚೆ – HDK

0

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಕೋಲಾರದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಈ ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಯೋಜನೆ ಮಾಡಿದರು. ಆದರೆ ಬೆಂಗಳೂರಿನ ರೊಚ್ಚು ನೀರು ಕೊಟ್ಟರು. ಮೂರನೇ ಹಂತದ ಶುದ್ಧೀಕರಣ ಮಾಡಿ ಎಂದರೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ ಎಂದು ಎಂದರು.

ಈ ಜಿಲ್ಲೆಗೆ ಕೃಷ್ಣಾ ನೀರು ತರುವ ಬಗ್ಗೆ ಸಂಸದರಾದ ಮಲ್ಲೇಶ್ ಬಾಬು ಅವರು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನನ್ನ ಬೆಂಬಲವೂ ಇದೆ. ಕೃಷ್ಣ ನದಿ‌ ನೀರನ್ನು ಹರಿಸುವ ಕುರಿತು ಮಲ್ಲೇಶ್ ಬಾಬು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಸಾಧಿಸಬೇಕಿದೆ. ಅದಕ್ಕಾಗಿ ಅವರನ್ನು‌ ಭೇಟಿ ಮಾಡುತ್ತೇನೆ.

ಅವರ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಅವರ ಸಹಕಾರ ತೆಗೆದುಕೊಳ್ಳುವ ಕೆಲಸ‌ ಮಾಡುತ್ತೇವೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿದ ರುಣ ನಮ್ಮ‌ಮೇಲಿದೆ. ಅದನ್ನು ತೀರಿಸುವ ಕೆಲಸ ಮಾಡುವ ಪ್ರಯತ್ನ ಮಾಡುತ್ತೇವ ಎಂದು ಕೇಂದ್ರ ಸಚಿವರು ಹೇಳಿದರು.

2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆಆಡಿದ ದಿನವೇ ನಾನು ಕೋಲಾರದಲ್ಲಿದ್ದೆ. ಅವತ್ತೇ ಹೇಳಿದ್ದೆ. ಇಲ್ಲಿ ನೀರು ಸಿಗುವುದಿಲ್ಲ, ಸರಕಾರ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ದೆ. ಆದರೂ ಐದೇ ವರ್ಷದಲ್ಲಿ ನೀರು ಕೊಡುತ್ತೇವೆ ಎಂದು ಹೇಳಿದರು. ನಾನು ನಮ್ಮ ಕಡೆಯ ಹಳ್ಳಿ ಭಾಷೆಯಲ್ಲಿ ಅವತ್ತೇ ಹೇಳಿದ್ದೆ. ಎತ್ತಿನಹೊಳೆಯಿಂದ ಎರಡು ವರ್ಷಗಳಲ್ಲಿ‌ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ಳುವೆ ಎಂದು‌ ಹೇಳಿದ್ದೆ. ನನ್ನ ತಲೆಯಲ್ಲಿ ಕೂದಲು ಹೋಯಿತೇ ಹೊರತು ಈ ಜಿಲ್ಲೆಗಳಿಗೆ ನೀರು ಹರಿಯಲಿಲ್ಲ ಎಂದು ಅವರು ಲೇವಡಿ ಮಾಡಿದರು.

ಅವತ್ತಿನ ಕಾಂಗ್ರೆಸ್ ಸರ್ಕಾರ ನೀರು ಕೊಡುವುದಾಗಿ ಹೇಳಿ‌ ಹತ್ತು ವರ್ಷ ಆಗಿದೆ. ಆ ಯೋಜನೆಯ ಹೆಸರಿನಲ್ಲಿ ಎಷ್ಟೆಲ್ಲಾ ಲೂಟಿ ಆಗಿದೆ ಎನ್ನುವುದು ಗೊತ್ತಿದೆ. ಸಿಎಜಿ ವರದಿಯಲ್ಲಿ ಇದೆಲ್ಲವೂ ಇದೆ. ಅನರ್ಹ ಗುತ್ತಿಗೆದಾರರಿಗೆ ಕಾಮಗಾರಿ ಕೊಟ್ಟಿದ್ದಾರೆ, ಕಳಪೆ ಕಾಮಗಾರಿ ಆಗಿ ಹಣ ದುರುಪಯೋಗ ಆಗಿದೆ ಎಂದು ವರದಿಯಲ್ಲಿ ಉಲ್ಲೇಖವಿದೆ. ಈಗ ₹30,000 ಕೋಟಿಗೆ ಎತ್ತಿನಹೊಳೆ ಯೋಜನಾ ವೆಚ್ಚ ತಲುಪಿದೆ. ಇದೆಲ್ಲಾ ನಮ್ಮ ಶ್ರೀನಿವಾಸಪುರದ ಬುದ್ದಿವಂತ ಮಾಜಿ ಶಾಸಕರಿಗೆ ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಬೆಂಗಳೂರಿನ ರೊಚ್ಚು ನೀರಿನಿಂದಾಗಿ ಸಣ್ಣ ಮಕ್ಕಳು ಕೂಡ ಕಾಯಿಲೆಗೆ ತುತ್ತಾಗುತ್ತಿವೆ. ನದಿಯ ನೀರು ಕೊಡುತ್ತೇವೆ ಎಂದವರು ರೊಚ್ಚು ನೀರು ಕೊಟ್ಟು ಮೋಸ ಮಾಡಿದರು. ಈ ಜಿಲ್ಲೆಗಳ ಜನ ಕಾಂಗ್ರೆಸ್ಸಿಗರಿಗೆ ಏನು ದ್ರೋಹ ಮಾಡಿದ್ದರು? ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ವರದಿ ನೀಡಿವೆ. ಅವುಗಳನ್ನು ನೋಡಿದರೆ ಈ ಜಿಲ್ಲೆಗಳಿಗೆ ಆಗಿರುವ ಹಾನಿ ಏನೆಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನು ದೇಶ ವಿದೇಶಗಳಲ್ಲಿ ಪೈಪೋಟಿಗೆ ಬಿದ್ದು ಖರೀದಿ ಮಾಡುತ್ತಿದ್ದರು. ಇವತ್ತು ಈ ಭಾಗದ ತರಕಾರಿಯನ್ನು ಕೇಳುವವರೇ ಇಲ್ಲ. ಈಗ ನೋಡಿದರೆ 2027ಕ್ಕೆ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ! ಎತ್ತಿನಹೊಳೆಯ ಯಂತ್ರೋಪಕರಣಗಳು ಈಗಾಗಲೇ ತುಕ್ಕು ಹಿಡಿಯುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಜನರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾಲಗೆ ಹರಿಬಿಟ್ಟ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದ ಪ್ರೇಮ್

ಬೆಂಗಳೂರು: ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ನಿರ್ದೇಶಕ ಪ್ರೇಮ್ ವಿರುದ್ಧ ‘ಹಣ ಪಡೆದು ಸಿನಿಮಾ ಮಾಡಿಕೊಡಲಿಲ್ಲ’ ಎಂಬರ್ಥದ ಆರೋಪಗಳನ್ನು ಮಾಡಿದ್ದ ವಿಚಾರ ಇದೀಗ ತೀವ್ರ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಯಾಗಿ ನಿರ್ದೇಶಕ ಪ್ರೇಮ್ ಅವರು ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್‌ಗೆ ಅಧಿಕೃತ ದೂರು ನೀಡಿದ್ದಾರೆ.

ಫಿಲಂ ಚೇಂಬರ್‌ಗೆ ಖುದ್ದಾಗಿ ತೆರಳಿದ ಪ್ರೇಮ್, ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿಯಾಗಿ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ ತಮ್ಮ ವೃತ್ತಿಜೀವನದ ಹಿನ್ನೆಲೆಯನ್ನು ವಿವರಿಸಿರುವ ಅವರು, 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದು, ತಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರೇಮ್ ಅವರ ಪ್ರಕಾರ, 2004ರಲ್ಲಿ ನಿರ್ಮಾಪಕ ಆರ್.ಎಸ್. ಶ್ರೀನಿವಾಸ್ ಅವರು ಸಿನಿಮಾ ನಿರ್ದೇಶನ ಮಾಡುವಂತೆ ಕೇಳಿಕೊಂಡು ₹9 ಲಕ್ಷ ಮುಂಗಡ ಹಣ ನೀಡಿದ್ದಾರೆ. ಆ ಬಳಿಕ ನಿರ್ಮಾಪಕರಿಗಾಗಿ ವಿಶೇಷ ಆಫೀಸ್ ತೆರೆಯಲಾಗಿದ್ದು, ತಂಡ ರಚಿಸಿ ಕಥೆ ಹಾಗೂ ಚಿತ್ರಕಥೆ ಬರವಣಿಗೆ ಪೂರ್ಣಗೊಳಿಸಲಾಗಿದೆ. ಆದರೆ ನಂತರ ನಿರ್ಮಾಪಕರಿಂದ ಯಾವುದೇ ಪ್ರತಿಕ್ರಿಯೆ ಸಿಗದೇ, ಒಂದು ವರ್ಷಕ್ಕೂ ಹೆಚ್ಚು ಕಾಲ ಚಿತ್ರ ಯೋಜನೆ ಸ್ಥಗಿತಗೊಂಡಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಅವಧಿಯಲ್ಲಿ ಆಫೀಸ್ ಹಾಗೂ ತಂಡದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿದ್ದು, ಇದರಿಂದ ₹15 ರಿಂದ ₹20 ಲಕ್ಷದವರೆಗೆ ವೈಯಕ್ತಿಕ ನಷ್ಟ ಅನುಭವಿಸಿದ್ದೇನೆ. ಅಲ್ಲದೇ, ಈ ಕಾರಣದಿಂದಾಗಿ ಬೇರೆ ನಿರ್ಮಾಪಕರಿಂದ ಬಂದಿದ್ದ ಹಲವು ಅವಕಾಶಗಳನ್ನು ಕಳೆದುಕೊಂಡು ಕೋಟಿಗಟ್ಟಲೆ ನಷ್ಟ ಎದುರಿಸಬೇಕಾಯಿತು ಎಂದು ಪ್ರೇಮ್ ಆರೋಪಿಸಿದ್ದಾರೆ.

ಇನ್ನೊಂದೆಡೆ, ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಜೊತೆ ಸಿನಿಮಾ ಮಾಡಿದವರು ಹಣ ಕಳೆದುಕೊಂಡಿದ್ದಾರೆ, ಆದರೆ ಪ್ರೇಮ್ ಮಾತ್ರ ಚೆನ್ನಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳೇ ತಮ್ಮ ಗೌರವಕ್ಕೆ ಧಕ್ಕೆ ತಂದಿವೆ ಎಂದು ಪ್ರೇಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣ ಇದೀಗ ಫಿಲಂ ಚೇಂಬರ್ ಮಟ್ಟಕ್ಕೆ ತಲುಪಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹಾಸನ: ಕೆರೆಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು!

0

ಹಾಸನ: ಕೆರೆಗೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬರು ನೀರುಪಾಲಾದ ದುರ್ಘಟನೆ ಹಾಸನ ಹೊರವಲಯದ ಉದ್ದೂರು ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಪ್ರಜ್ವಲ್ (18) ಎಂದು ಗುರುತಿಸಲಾಗಿದೆ. ಅವರು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇಂದು ಮಧ್ಯಾಹ್ನ ನಾಲ್ವರು ಸ್ನೇಹಿತರೊಂದಿಗೆ ಉದ್ದೂರು ಕೆರೆಗೆ ಈಜಲು ತೆರಳಿದ್ದರು.

ಐವರಲ್ಲಿ ಇಬ್ಬರು ಸ್ನೇಹಿತರು ಈಜಲು ನೀರಿಗೆ ಇಳಿದಿದ್ದರು. ಕೆರೆಯ ಆಳವಾದ ಪ್ರದೇಶಕ್ಕೆ ಈಜುತ್ತಾ ಹೋಗಿದ್ದ ಪ್ರಜ್ವಲ್ ವಾಪಾಸ್ ಬರಲು ಆಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕದಳದ ಸಿಬ್ಬಂದಿ ಕೆರೆಯಿಂದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

error: Content is protected !!