Home Blog Page 200

ನಾಲಿಗೆಯ ಬಣ್ಣವೇ ನಿಮ್ಮ ಆರೋಗ್ಯದ ಕನ್ನಡಿ! ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಗ್ಯಾರಂಟಿ

0

ನಾಲಿಗೆ ಕೇವಲ ಆಹಾರದ ರುಚಿಯನ್ನು ತಿಳಿಯುವ ಅಂಗವಷ್ಟೇ ಅಲ್ಲ, ದೇಹದ ಆರೋಗ್ಯದ ಸ್ಥಿತಿಯನ್ನು ಸೂಚಿಸುವ ಪ್ರಮುಖ ಭಾಗವೂ ಹೌದು. ಸಾಮಾನ್ಯವಾಗಿ ಆರೋಗ್ಯಕರ ನಾಲಿಗೆ ತಿಳಿ ಗುಲಾಬಿ ಬಣ್ಣದಲ್ಲಿದ್ದು, ಅದರ ಮೇಲ್ಮೈ ಸ್ವಚ್ಛವಾಗಿರುತ್ತದೆ. ಆದರೆ ನಾಲಿಗೆಯ ಬಣ್ಣ, ಮೇಲಿನ ಪದರ, ನೋವು ಅಥವಾ ಉರಿ ಕಾಣಿಸಿಕೊಂಡರೆ ಅದು ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ನಾಲಿಗೆಯ ಮೇಲೆ ಬಿಳಿ ಪದರ ಕಾಣಿಸಿಕೊಳ್ಳುವುದು ಬಾಯಿಯ ಸ್ವಚ್ಛತೆ ಸರಿಯಾಗಿ ಇಲ್ಲದಿರುವುದು ಅಥವಾ ಶಿಲೀಂಧ್ರ ಹಾಗೂ ಇತರ ಸೋಂಕುಗಳ ಲಕ್ಷಣವಾಗಿರಬಹುದು. ಇದೇ ವೇಳೆ ನಾಲಿಗೆ ಅತಿಯಾಗಿ ಕೆಂಪು ಬಣ್ಣಕ್ಕೆ ತಿರುಗಿದ್ದರೆ ವಿಟಮಿನ್ ಬಿ12, ಫೋಲೇಟ್ ಅಥವಾ ಕಬ್ಬಿಣದ ಕೊರತೆಯ ಸಂಕೇತವಾಗಿರಬಹುದು.

ಇನ್ನು ನಾಲಿಗೆಯಲ್ಲಿ ನೋವು ಅಥವಾ ಉರಿ ಕಾಣಿಸಿಕೊಳ್ಳಲು ಬಿಸಿ ಆಹಾರ ಸೇವನೆ, ಬಾಯಿಯ ಹುಣ್ಣು, ಅಲರ್ಜಿ ಅಥವಾ ಸೋಂಕು ಕಾರಣವಾಗಬಹುದು. ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ನಾಲಿಗೆಯ ಮೇಲ್ಮೈಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುವ ಸಾಧ್ಯತೆಯೂ ಇರುತ್ತದೆ.

ತಜ್ಞರ ಪ್ರಕಾರ, ನಾಲಿಗೆಯ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಹಲ್ಲುಜ್ಜುವಾಗ ಟಂಗ್ ಕ್ಲೀನರ್ ಅಥವಾ ಮೃದುವಾದ ಬ್ರಷ್ ಬಳಸಿ ನಾಲಿಗೆಯನ್ನು ಸ್ವಚ್ಛಗೊಳಿಸಬೇಕು. ದಿನವಿಡೀ ಸಾಕಷ್ಟು ನೀರು ಕುಡಿಯುವುದು, ಧೂಮಪಾನ ಮತ್ತು ತಂಬಾಕು ಉತ್ಪನ್ನಗಳಿಂದ ದೂರವಿರುವುದು, ಪೌಷ್ಟಿಕ ಆಹಾರ ಸೇವಿಸುವುದು ಹಾಗೂ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸ ಬೆಳೆಸಿಕೊಳ್ಳುವುದು ಬಾಯಿಯ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ.

ನಾಲಿಗೆಯ ಬಣ್ಣ ಅಥವಾ ಸ್ಥಿತಿಯಲ್ಲಿ ಬದಲಾವಣೆಗಳು ದೀರ್ಘಕಾಲ ಮುಂದುವರಿದರೆ ಅಥವಾ ನೋವು, ಉರಿ, ಗಾಯಗಳು ಗುಣವಾಗದಿದ್ದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಬದಲು ದಂತ ವೈದ್ಯರು ಅಥವಾ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗಮನಿಸಿ! ಇಂದಿನಿಂದ ಜಾರಿಗೆ ಬಂದ ಹೊಸ ನಿಯಮಗಳು; ತಡ ಮಾಡಿದರೆ ದಂಡ, ತಪ್ಪಿದರೆ ತೊಂದರೆ

0

ನವದೆಹಲಿ: ಹೊಸ ತಿಂಗಳ ಆರಂಭದೊಂದಿಗೆ ದೇಶದಲ್ಲಿ ಹಲವು ಪ್ರಮುಖ ನಿಯಮಗಳು ಬದಲಾಗಿವೆ.

ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್, ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಹಾಗೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಗಳು ಇಂದಿನಿಂದ ಜಾರಿಗೆ ಬಂದಿವೆ.

ಈ ಬದಲಾವಣೆಗಳು ಸಾಮಾನ್ಯ ಜನರು, ತೆರಿಗೆದಾರರು ಹಾಗೂ ವ್ಯಾಪಾರಿಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ತತ್ಕಾಲ್ ಟಿಕೆಟ್ ಬುಕ್ಕಿಂಗ್‌ನಲ್ಲಿ ಬದಲಾವಣೆ:

ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಮೀಸಲಾತಿ ಕೌಂಟರ್‌ಗಳಲ್ಲಿ ಟೋಕನ್ ನೀಡುವ ಸಮಯವನ್ನು ತತ್ಕಾಲ್ ಟಿಕೆಟ್ ಬುಕ್ಕಿಂಗ್ ಆರಂಭದ ಸಮಯಕ್ಕೆ ಹೊಂದಿಸಲಾಗಿದೆ.

ಈ ಹಿಂದೆ ಟೋಕನ್ ಪಡೆಯಲು ಮತ್ತು ಟಿಕೆಟ್ ಕಾಯ್ದಿರಿಸಲು ಪ್ರತ್ಯೇಕ ಸಮಯದಲ್ಲಿ ಕೌಂಟರ್‌ಗೆ ತೆರಳಬೇಕಾಗಿತ್ತು. ಇದರಿಂದ ಪ್ರಯಾಣಿಕರಿಗೆ ತೊಂದರೆ ಹಾಗೂ ಹೆಚ್ಚಿನ ಸಮಯ ವ್ಯಯವಾಗುತ್ತಿತ್ತು.

ಹೊಸ ನಿಯಮದ ಪ್ರಕಾರ ಎಸಿ ತತ್ಕಾಲ್ ಟಿಕೆಟ್‌ಗಳಿಗೆ ಬೆಳಗ್ಗೆ 10 ಗಂಟೆಗೆ ಹಾಗೂ ನಾನ್ ಎಸಿ ತತ್ಕಾಲ್ ಟಿಕೆಟ್‌ಗಳಿಗೆ ಬೆಳಗ್ಗೆ 11 ಗಂಟೆಗೆ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಬುಕ್ಕಿಂಗ್‌ಗೂ ಈ ನಿಯಮ ಅನ್ವಯವಾಗಲಿದೆ.

ಈ ಬದಲಾವಣೆಯಿಂದ ಕೌಂಟರ್‌ಗಳಲ್ಲಿ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.

ITR ಸಲ್ಲಿಕೆಯಲ್ಲಿ ವಿಳಂಬಕ್ಕೆ ದಂಡ:

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ತೆರಿಗೆದಾರರು ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಗದಿತ ಅವಧಿಯ ನಂತರ ITR ಸಲ್ಲಿಸಿದರೆ ದಂಡ ವಿಧಿಸಲಾಗುತ್ತದೆ.

ತಡವಾಗಿ ITR ಸಲ್ಲಿಸುವವರಿಗೆ ಆದಾಯದ ಆಧಾರದ ಮೇಲೆ ₹1,000ರಿಂದ ₹5,000ವರೆಗೆ ದಂಡ ವಿಧಿಸುವ ನಿಯಮ ಮುಂದುವರಿಯಲಿದೆ.

ವ್ಯವಹಾರಗಳು ಹಾಗೂ ಕೆಲವು ವರ್ಗದ ತೆರಿಗೆದಾರರಿಗೆ ITR ಸಲ್ಲಿಸುವ ಅಂತಿಮ ದಿನಾಂಕಗಳು ಪ್ರತ್ಯೇಕವಾಗಿದ್ದು, ತೆರಿಗೆದಾರರು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ರಿಟರ್ನ್ ಸಲ್ಲಿಸುವುದು ಉತ್ತಮ.

ವಾಣಿಜ್ಯ LPG ಸಿಲಿಂಡರ್ ಬೆಲೆ ಇಳಿಕೆ:

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ LPG ಸಿಲಿಂಡರ್ ದರ ಪರಿಷ್ಕರಣೆ ಮಾಡುತ್ತವೆ. ಆಗಸ್ಟ್ 1ರಿಂದ 19 ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ₹202ರಷ್ಟು ಇಳಿಕೆ ಮಾಡಲಾಗಿದೆ.

ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹2,930ರಿಂದ ₹2,728ಕ್ಕೆ ಇಳಿಕೆಯಾಗಿದೆ.

ಈ ಬೆಲೆ ಇಳಿಕೆಯಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟೀ ಅಂಗಡಿಗಳು ಹಾಗೂ ಇತರ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.

ಆದರೆ, ಗೃಹ ಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಜನರು ಗಮನಿಸಬೇಕಾದ ಅಂಶಗಳು:

ಆಗಸ್ಟ್ 1ರಿಂದ ಜಾರಿಗೆ ಬಂದಿರುವ ಈ ಬದಲಾವಣೆಗಳು ಜನರ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತವೆ.

ರೈಲು ಪ್ರಯಾಣಿಕರು ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯವನ್ನು ಗಮನಿಸಬೇಕು. ತೆರಿಗೆದಾರರು ITR ಸಲ್ಲಿಕೆ ದಿನಾಂಕಗಳನ್ನು ತಪ್ಪಿಸಿಕೊಳ್ಳಬಾರದು. ವ್ಯಾಪಾರಿಗಳು ವಾಣಿಜ್ಯ ಗ್ಯಾಸ್ ಬೆಲೆ ಇಳಿಕೆಯ ಪ್ರಯೋಜನ ಪಡೆಯಬಹುದು.

ಹೊಸ ನಿಯಮಗಳ ಬಗ್ಗೆ ಮಾಹಿತಿ ಪಡೆದು, ಅಗತ್ಯ ಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಳ್ಳುವುದು ಉತ್ತಮ.

ಗದಗ ಪೊಲೀಸರ ಖಡಕ್ ಆ್ಯಕ್ಷನ್; 5 ಕೇಸ್‌ಗಳ ರೌಡಿಶೀಟರ್ ಜಿಲ್ಲೆಯಿಂದ ಗಡಿಪಾರು!

0

ಗದಗ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದ ರೌಡಿಶೀಟರ್ ವಿರುದ್ಧ ಗದಗ ಜಿಲ್ಲಾ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

ಕೊಲೆ ಯತ್ನ ಸೇರಿದಂತೆ ಐದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

ಸದಾನಂದಸಿಂಗ್ ಗುರ್ಲಹೊಸೂರು ಎಂಬ ಆರೋಪಿಯನ್ನು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಗಡಿಪಾರು ಮಾಡಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಈ ಆದೇಶ ಹೊರಡಿಸಿದ್ದಾರೆ. ಸಮಾಜವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ದಾಖಲೆಗಳ ಪ್ರಕಾರ, ಆರೋಪಿಯ ವಿರುದ್ಧ 2016ರಿಂದ 2025ರವರೆಗೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಅಕ್ರಮ ಗುಂಪು ರಚನೆ, ಗಲಭೆ, ಮಾರಕಾಸ್ತ್ರಗಳಿಂದ ಹಲ್ಲೆ, ಸಾರ್ವಜನಿಕ ಆಸ್ತಿ ಹಾನಿ, ಅಕ್ರಮ ಪ್ರವೇಶ, ದಾರಿ ತಡೆ, ಜೀವ ಬೆದರಿಕೆ ಹಾಗೂ ಕೊಲೆ ಯತ್ನದಂತಹ ಗಂಭೀರ ಆರೋಪಗಳು ಈತನ ಮೇಲಿವೆ. ಹಲವು ಬಾರಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನ ಅನುಭವಿಸಿದ್ದರೂ, ಸಮಾಜವಿರೋಧಿ ಚಟುವಟಿಕೆಗಳಲ್ಲಿ ಮುಂದುವರಿದಿದ್ದಾನೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಸಲ್ಲಿಸಲಾದ ಪ್ರಸ್ತಾವನೆಯನ್ನು ಪರಿಶೀಲಿಸಿದ ಎಸ್‌ಪಿ ರೋಹನ್ ಜಗದೀಶ್, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆರೋಪಿಯನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡುವ ಆದೇಶ ಹೊರಡಿಸಿದ್ದಾರೆ.

ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಮುಖ ಪ್ರಕರಣಗಳು:

2016 (ಗುನ್ನೆ ಸಂಖ್ಯೆ 123/2016): ಅಕ್ರಮ ಗುಂಪು ರಚನೆ, ಗಲಭೆ, ಮಾರಕಾಸ್ತ್ರಗಳೊಂದಿಗೆ ಹಲ್ಲೆ, ದಾರಿ ತಡೆ, ಸಾರ್ವಜನಿಕ ಆಸ್ತಿ ಹಾನಿ

2016 (ಗುನ್ನೆ ಸಂಖ್ಯೆ 131/2016): ಅಕ್ರಮ ಪ್ರವೇಶ, ಗಲಭೆ ಹಾಗೂ ಸಾರ್ವಜನಿಕ ಆಸ್ತಿ ಹಾನಿ

2016 (ಗುನ್ನೆ ಸಂಖ್ಯೆ 132/2016): ಕೊಲೆ ಯತ್ನ, ಹಲ್ಲೆ, ದಾರಿ ತಡೆ, ಗಲಭೆ, ಜೀವ ಬೆದರಿಕೆ

2017 (ಗುನ್ನೆ ಸಂಖ್ಯೆ 15/2017): ಅಪಾಯಕಾರಿ ಆಯುಧದಿಂದ ಗಂಭೀರ ಹಲ್ಲೆ ಹಾಗೂ ಜೀವ ಬೆದರಿಕೆ

2025 (ಗುನ್ನೆ ಸಂಖ್ಯೆ 128/2025): ಭಾರತೀಯ ನ್ಯಾಯ ಸಂಹಿತೆ (BNS-2023) ಅಡಿ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡಿದ ಪ್ರಕರಣ.

ಪೊಲೀಸರ ಪ್ರಕಾರ, ಆರೋಪಿಯ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿತ್ತು. ಇದೇ ಕಾರಣಕ್ಕೆ ಗಡಿಪಾರು ಕ್ರಮ ಜರುಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ “ಜಿಲ್ಲೆಯಲ್ಲಿ ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಮುಂದುವರಿಯಲಿದೆ. ಸಾರ್ವಜನಿಕ ಶಾಂತಿ ಕದಡುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಬಾಣಂತಿಯರು ಮನೆ ಗುಡಿಸಬಾರದು ಎನ್ನುವುದಕ್ಕೆ ಕಾರಣವೇನು? ತಿಳಿದರೆ ಅಚ್ಚರಿ ಪಡ್ತೀರಾ!

0

ಹೆರಿಗೆಯ ನಂತರ ಮಹಿಳೆಯರ ಆರೈಕೆಗೆ ನಮ್ಮ ಹಿರಿಯರು ಹಲವು ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದಾರೆ.

ಅವುಗಳಲ್ಲಿ ಪ್ರಮುಖವಾದದ್ದು ಬಾಣಂತಿಯರು ಕೆಲ ದಿನಗಳ ಕಾಲ ಪೊರಕೆ ಮುಟ್ಟಬಾರದು, ಮನೆ ಗುಡಿಸಬಾರದು ಎಂಬ ಪದ್ಧತಿ.

ಮೇಲ್ನೋಟಕ್ಕೆ ಇದು ಕೇವಲ ಸಂಪ್ರದಾಯ ಅಥವಾ ಮೂಢನಂಬಿಕೆಯಂತೆ ಕಾಣಬಹುದು. ಆದರೆ ಇದರ ಹಿಂದೆ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವ ಉದ್ದೇಶವಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಹೆರಿಗೆಯ ನಂತರ ಮಹಿಳೆಯ ದೇಹದಲ್ಲಿ ಹಲವು ಬದಲಾವಣೆಗಳು ಸಂಭವಿಸುತ್ತವೆ. ದೇಹ ದುರ್ಬಲವಾಗಿರುತ್ತದೆ, ಗರ್ಭಾಶಯ ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಶ್ರಮದ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆಯುರ್ವೇದದ ಪ್ರಕಾರ ಹೆರಿಗೆಯ ನಂತರ ಮಹಿಳೆಯ ದೇಹದಲ್ಲಿ ‘ವಾತ ದೋಷ’ ಹೆಚ್ಚಾಗುತ್ತದೆ. ದೇಹದ ಸ್ನಾಯುಗಳು ಮತ್ತು ಅಂಗಾಂಗಗಳು ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ 40 ರಿಂದ 50 ದಿನಗಳವರೆಗೆ ತಾಯಿಗೆ ಹೆಚ್ಚು ವಿಶ್ರಾಂತಿ ನೀಡಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

ಮನೆ ಗುಡಿಸುವಾಗ ಪದೇ ಪದೇ ಬಾಗುವುದು, ದೈಹಿಕ ಶ್ರಮ ಪಡುವುದು ಹಾಗೂ ತೂಕದ ಕೆಲಸ ಮಾಡುವುದರಿಂದ ಬೆನ್ನು ನೋವು, ದೇಹದ ನೋವು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೆರಿಗೆ ಶಸ್ತ್ರಚಿಕಿತ್ಸೆ ಆಗಿದ್ದರೆ ಗಾಯ ಸಂಪೂರ್ಣ ಗುಣವಾಗುವವರೆಗೂ ಹೆಚ್ಚಿನ ಎಚ್ಚರಿಕೆ ಅಗತ್ಯ.

ಆಧುನಿಕ ವೈದ್ಯಕೀಯ ವಿಜ್ಞಾನವೂ ಹೆರಿಗೆಯ ನಂತರದ ಮೊದಲ 4 ರಿಂದ 6 ವಾರಗಳ ಕಾಲ ಮಹಿಳೆಯರು ಕಠಿಣ ಮನೆ ಕೆಲಸಗಳಿಂದ ದೂರ ಇರಬೇಕು ಎಂದು ಸಲಹೆ ನೀಡುತ್ತದೆ. ಪೊರಕೆಯಲ್ಲಿ ಇರುವ ಧೂಳು, ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಾಣುಗಳಿಂದ ಸೋಂಕಿನ ಅಪಾಯ ಹೆಚ್ಚಾಗಬಹುದು.

ಇದಲ್ಲದೆ, ಹೆರಿಗೆಯ ನಂತರ ತಾಯಿಗೆ ದೈಹಿಕ ವಿಶ್ರಾಂತಿಯ ಜೊತೆಗೆ ಮಾನಸಿಕ ನೆಮ್ಮದಿಯೂ ಅಗತ್ಯ. ವಿಶ್ರಾಂತಿ ಸಿಕ್ಕಾಗ ತಾಯಿಯ ಒತ್ತಡ ಕಡಿಮೆಯಾಗುತ್ತದೆ, ಮಗುವಿನ ಆರೈಕೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತದೆ. ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕ ಸಂಬಂಧವೂ ಈ ಸಮಯದಲ್ಲಿ ಗಟ್ಟಿಯಾಗುತ್ತದೆ.

ಹೀಗಾಗಿ ಹೆರಿಗೆಯ ನಂತರ ಪೊರಕೆ ಮುಟ್ಟಬಾರದು ಎಂಬ ಪದ್ಧತಿಯ ಹಿಂದೆ ಕೇವಲ ಧಾರ್ಮಿಕ ನಂಬಿಕೆ ಮಾತ್ರವಲ್ಲ, ತಾಯಿಗೆ ಅಗತ್ಯವಾದ ವಿಶ್ರಾಂತಿ ನೀಡುವ ಆರೋಗ್ಯದ ಕಾಳಜಿಯೂ ಅಡಗಿದೆ.

ತಾಯಿ ಆರೋಗ್ಯವಾಗಿದ್ದರೆ ಮಾತ್ರ ಮಗು ಕೂಡ ಆರೋಗ್ಯವಾಗಿರಲು ಸಾಧ್ಯ. ಆದ್ದರಿಂದ ಸಂಪ್ರದಾಯದ ಜೊತೆಗೆ ವೈದ್ಯರ ಸಲಹೆಗಳನ್ನು ಪಾಲಿಸುವುದು ಮುಖ್ಯವಾಗಿದೆ.

ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಸಿಹಿಸುದ್ದಿ; ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಭಾರೀ ಇಳಿಕೆ

0

ನವದೆಹಲಿ: ಬಹುದಿನಗಳ ಬಳಿಕ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ ಸಿಕ್ಕಿದೆ.

ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿವೆ.

ದೆಹಲಿ, ಬೆಂಗಳೂರು, ಕೋಲ್ಕತ್ತಾ ಸೇರಿದಂತೆ ಹಲವು ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು 200 ರೂ.ಗಳಷ್ಟು ಕಡಿಮೆಯಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ಬೆಲೆ ಇಳಿಕೆಯಲ್ಲಿ ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 209 ರೂ. ಕಡಿಮೆಯಾಗಿದ್ದು, ಹೊಸ ದರ 2,872.50 ರೂ. ಆಗಿದೆ. ದೆಹಲಿಯಲ್ಲಿ 202 ರೂ. ಇಳಿಕೆಯಾಗಿದ್ದು, ಸಿಲಿಂಡರ್ ಬೆಲೆ 2,728 ರೂ.ಗೆ ತಲುಪಿದೆ.

ಬೆಂಗಳೂರಿನಲ್ಲೂ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಸುಮಾರು 200 ರೂ. ಇಳಿಕೆ ಮಾಡಲಾಗಿದೆ. ಇದರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಫಾಸ್ಟ್‌ಫುಡ್ ಅಂಗಡಿಗಳು ಹಾಗೂ ಕ್ಯಾಟರಿಂಗ್‌ ಉದ್ಯಮಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.

ಇನ್ನು ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಒಂದು ತಿಂಗಳಲ್ಲಿ ಎರಡನೇ ಬಾರಿ ಇಳಿಕೆ:

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗುತ್ತಿರುವುದು ಇದು ಸತತ ಎರಡನೇ ಬಾರಿ. ಕಳೆದ ತಿಂಗಳು ಕೂಡ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 183.50 ರೂ. ಕಡಿತ ಮಾಡಲಾಗಿತ್ತು.

ಇದಲ್ಲದೆ, 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (FTL) ಸಿಲಿಂಡರ್ ಬೆಲೆಯನ್ನೂ ಶೇ.13ರಷ್ಟು ಕಡಿಮೆ ಮಾಡಲಾಗಿದೆ. ದೆಹಲಿಯಲ್ಲಿ ಇದರ ಪರಿಷ್ಕೃತ ಬೆಲೆ 808.50 ರೂ. ಆಗಿದೆ.

ಆದರೆ, ಗೃಹ ಬಳಕೆಯ ಸಿಲಿಂಡರ್ ಗ್ರಾಹಕರಿಗೆ ಯಾವುದೇ ಬೆಲೆ ಇಳಿಕೆಯ ಪ್ರಯೋಜನ ಸದ್ಯಕ್ಕೆ ಸಿಗುವುದಿಲ್ಲ.

ತಾಯಿ ವಿರುದ್ಧದ ನಿಂದನೆಗೆ ಮೋದಿ ಭಾವುಕ ಪ್ರತಿಕ್ರಿಯೆ; ವಿಡಿಯೋ ಮೂಲಕ ಯುವಕರಿಗೆ ಹೇಳಿದ್ದೇನು?

0

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಜಂತರ್ ಮಂತರ್‌ನಲ್ಲಿ ಏನಾಯಿತು ಎಂಬುದನ್ನು ದೇಶ ಮತ್ತು ಜಗತ್ತು ನೋಡಿದೆ. ಕೆಲವು ಕಿಡಿಗೇಡಿ ಮಕ್ಕಳು ನಾಗರಿಕ ಸಮಾಜಕ್ಕೆ ಒಪ್ಪದಂತಹ ಅತ್ಯಂತ ಅಸಭ್ಯ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆ. ನನ್ನನ್ನು ವೈಯಕ್ತಿಕವಾಗಿ ನಿಂದಿಸಲಾಯಿತು, ಅಷ್ಟೇ ಅಲ್ಲದೆ ನನ್ನ ದಿವಂಗತ ತಾಯಿಯನ್ನೂ ಬಿಡದೆ ನಿಂದಿಸಲಾಯಿತು. ನಮ್ಮ ಹೆಣ್ಣುಮಕ್ಕಳು ಇಂತಹ ಭಾಷೆ ಬಳಸಿರುವುದು ಇಡೀ ಸಮಾಜಕ್ಕೆ ಸಾಂಸ್ಕೃತಿಕ ಆಘಾತ ತಂದಿದೆ” ಎಂದು ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

“ಬಾಲ್ಯದಲ್ಲಿ ತಪ್ಪುಗಳು ನಡೆಯುವುದು ಸಹಜ, ಅದೇ ರೀತಿ ಆ ತಪ್ಪುಗಳನ್ನು ತಿದ್ದುಕೊಳ್ಳಲು ಬಾಲ್ಯದಲ್ಲೇ ಅವಕಾಶವೂ ಸಿಗುತ್ತದೆ. ಹೀಗಾಗಿ ಸಮಾಜದಲ್ಲಿ ಉಂಟಾಗಿರುವ ಆಕ್ರೋಶವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಈಗ ನಾವು ಆ ಮಕ್ಕಳನ್ನು ಅಪ್ಪಿಕೊಂಡು ಅವರಿಗೆ ಸರಿಯಾದ ದಾರಿಯನ್ನು ತೋರಿಸಬೇಕಾದ ಸಮಯ ಬಂದಿದೆ. ಅವರು ದಾರಿ ತಪ್ಪಿದ್ದಾರೆ, ಅವರನ್ನು ಸರಿಯಾದ ಹಾದಿಗೆ ತರುವುದು ನಮ್ಮ ಕರ್ತವ್ಯ” ಎಂದಿದ್ದಾರೆ.

ಅವರನ್ನು ಶಿಕ್ಷಿಸುವುದು, ಕೋರ್ಟ್‌ ಮೆಟ್ಟಿಲೇರಿಸುವುದು ಅಥವಾ ಸಮಾಜದಲ್ಲಿ ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ಇದನ್ನು ಸ್ವೀಕರಿಸಬೇಕು. ಕೆಲವೊಮ್ಮೆ ನಮ್ಮ ನಾಲಿಗೆ ಹಲ್ಲಿನ ನಡುವೆ ಸಿಲುಕಿ ರಕ್ತ ಬರುತ್ತದೆ, ಹಾಗೆಂದು ನಾವು ಹಲ್ಲನ್ನು ಮುರಿದುಕೊಳ್ಳುವುದಿಲ್ಲವಲ್ಲ. ಏಕೆಂದರೆ ಹಲ್ಲು ಮತ್ತು ನಾಲಿಗೆ ಎರಡೂ ನಮ್ಮದೇ. ಅದೇ ರೀತಿ ಈ ಮಕ್ಕಳೂ ಸಹ ನಮ್ಮವರೇ” ಎಂದು ಭಾವುಕ ನಿದರ್ಶನ ನೀಡಿದ್ದಾರೆ.

“ದಾರಿ ತಪ್ಪಿದ ಯುವಜನತೆಗೆ ನೇರ ಕರೆ ನೀಡಿದ ಪ್ರಧಾನಿ, “ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವುದು ಕಷ್ಟಕರ, ಆದರೆ ನಾವು ಆ ಕೆಲಸವನ್ನು ಮಾಡಲೇಬೇಕು. ಆದ್ದರಿಂದ ನಾನು ಈ ಮಕ್ಕಳಿಗೆ ಕರೆ ನೀಡುತ್ತಿದ್ದೇನೆ. , ದೇಶದ ಹಿತಕ್ಕಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ. ಹೊಸದನ್ನು ಕಲಿಯೋಣ, ಮಾಡಿದ ತಪ್ಪುಗಳಿಂದಲೂ ಪಾಠ ಕಲಿಯೋಣ. ದೇಶವು ವೇಗವಾಗಿ ಮುನ್ನಡೆಯುತ್ತಿದ್ದು, ನಿಮ್ಮ ಕನಸುಗಳನ್ನೂ ಈಡೇರಿಸಿಕೊಳ್ಳಿ. ನಾನು ನಿಮಗಾಗಿಯೇ ಜೀವಿಸುತ್ತಿದ್ದೇನೆ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನನ್ನನ್ನು ಮುಡಿಪಾಗಿಟ್ಟಿದ್ದೇನೆ” ಎಂದು ಹೇಳಿ ತಮ್ಮ ಮಾತನ್ನು ಕೊನೆಗೊಳಿಸಿದ್ದಾರೆ.

ನೋಯ್ಡಾ ಯುವತಿಯ ಮೇಲೆ ಎಫ್‌ಐಆರ್:

ನೋಯ್ಡಾ ನಿವಾಸಿ, 25 ವರ್ಷದ ರುಚಿಕಾ ಸಿಂಗ್ ಎಂಬುವವರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಸಂದೇಶ ಹೊರಬಿದ್ದಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ರುಚಿಕಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಾಜಿಯಾಬಾದ್ ಮೂಲದ ವಕೀಲರೊಬ್ಬರು ನೀಡಿದ ದೂರಿನ ಮೇರೆಗೆ, ನೋಯ್ಡಾ ಎಕ್ಸ್‌ಪ್ರೆಸ್‌ವೇ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಮುಳ್ಳಯ್ಯನಗಿರಿಯಲ್ಲಿ ಭಾರಿ ಗುಡ್ಡ ಕುಸಿತ! ದತ್ತಪೀಠ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತ!

ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ದತ್ತಪೀಠ ಮಾರ್ಗದಲ್ಲಿ ಗುಡ್ಡ ಕುಸಿದಿದೆ.

ನಿತ್ಯ ನೂರಾರು ಪ್ರವಾಸಿಗರು ಹಾಗೂ ಸ್ಥಳೀಯರು ಸಂಚರಿಸುವ ಕವಿಕಲ್ ಗಂಡಿ ಸಮೀಪ ರಸ್ತೆ ಮೇಲೆ ಭಾರಿ ಪ್ರಮಾಣದ ಮಣ್ಣು ಕುಸಿದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ದುರದೃಷ್ಟವಶಾತ್, ಗುಡ್ಡ ಕುಸಿತ ತಡೆಯಲು ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲೇ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಈ ರಸ್ತೆ ಅತ್ತಿಗುಂಡಿ, ಮಹಲ್ ಸೇರಿದಂತೆ ಹಲವು ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಅಲ್ಲದೆ, ಮುಳ್ಳಯ್ಯನಗಿರಿ ತಪ್ಪಲಿನ ಕಾಫಿ ತೋಟಗಳಿಗೆ ತೆರಳುವ ಸಾವಿರಾರು ಕಾರ್ಮಿಕರು ಇದೇ ರಸ್ತೆಯನ್ನು ಬಳಸುತ್ತಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಜೆಸಿಬಿ ಯಂತ್ರಗಳ ಮೂಲಕ ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿದರು. ಬಳಿಕ ವಾಹನಗಳ ಸಂಚಾರವನ್ನು ಪುನಃ ಆರಂಭಿಸಲಾಯಿತು.

ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಮಳೆ ಇನ್ನೂ ಮುಂದುವರಿದಿದ್ದು, ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಮತ್ತಷ್ಟು ಕಡೆಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಎಚ್ಚರಿಕೆಯಿಂದ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಇಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ; 12 ಪ್ರಮುಖ ರಸ್ತೆ ಬಂದ್, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮೈಸೂರಿಗೆ ಭೇಟಿ ನೀಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಿರುವ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ’ (ವಿವೇಕ ಸ್ಮಾರಕ)ವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.

ಪ್ರಧಾನಿ ಮೋದಿ ಮಧ್ಯಾಹ್ನ 2.55ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನಕ್ಕೆ ತೆರಳಿ, ಅಲ್ಲಿಂದ ರಸ್ತೆ ಮಾರ್ಗವಾಗಿ ರಾಮಕೃಷ್ಣ ಆಶ್ರಮಕ್ಕೆ ಹೋಗಲಿದ್ದಾರೆ. ಮಧ್ಯಾಹ್ನ 3.30ರಿಂದ ಸಂಜೆ 5.15ರವರೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಆಶ್ರಮದ ಶಾಲೆಗೆ ಭೇಟಿ ನೀಡಿ, ಸಂಜೆ 5.55ಕ್ಕೆ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಇಂದು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಆದ ಬಳಿಕ ಇದು ಅವರ ಮೊದಲ ಮೈಸೂರು ಪ್ರವಾಸವಾಗಿದೆ. ಬೆಳಿಗ್ಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು, ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿ, ವಿವೇಕ ಸ್ಮಾರಕ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಗರದ 12 ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಕೆ.ಆರ್.ಬಿ ರಸ್ತೆ, ಬೋಗಾದಿ ರಸ್ತೆ, ಜೆ.ಎಲ್.ಬಿ ರಸ್ತೆ, ರಮಾವಿಲಾಸ ರಸ್ತೆ, ಕೃಷ್ಣವಿಲಾಸ ರಸ್ತೆ ಸೇರಿದಂತೆ ಹಲವು ರಸ್ತೆಗಳು ಬಂದ್ ಆಗಲಿವೆ. ಸಾರ್ವಜನಿಕರು ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ! ಕೊಡಗು-ಚಿಕ್ಕಮಗಳೂರಿನಲ್ಲಿ ಶಾಲೆಗಳಿಗೆ ರಜೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ನಿರಂತರ ಮಳೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕುಗಳಲ್ಲಿ ಇಂದು ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆಯಾ ತಾಲೂಕುಗಳ ತಹಶೀಲ್ದಾರ್‌ಗಳು ಈ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲೂ ಮಳೆಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಮತ್ತು ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಕರಾವಳಿ ಭಾಗದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯೊಂದಿಗೆ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಉತ್ತರ ಒಳನಾಡಿನ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 50ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ನಿವಾಸಿಗಳು, ನದಿ ಹಾಗೂ ಹಳ್ಳಗಳ ಸಮೀಪ ವಾಸಿಸುವವರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅನಗತ್ಯ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಹಾಗೂ ಹವಾಮಾನ ಇಲಾಖೆಯ ಅಧಿಕೃತ ಮಾಹಿತಿ ಗಮನಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಲಂಚದ ಬಲೆಗೆ ಬಿದ್ದ ಪುರಸಭೆ ವ್ಯವಹಾರ: ಹಣ ಪಡೆಯುತ್ತಿದ್ದ ಮಧ್ಯವರ್ತಿ ಪರಾರಿ!

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಖಾತೆ ಜಮಾಬಂಧಿ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಶಿರಹಟ್ಟಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದು, ₹5 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಧ್ಯವರ್ತಿಯಾಗಿ ಆರೋಪಿಸಲಾದ ವಿನೋದ ಕಪ್ಪತ್ತನವರ ಪರಾರಿಯಾಗಿದ್ದಾನೆ.

ಮಾಂತೇಶ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಹಟ್ಟಿ ಪಟ್ಟಣ ಪಂಚಾಯಿತಿಯ ಮಾಜಿ ಮುಖ್ಯಾಧಿಕಾರಿ ಸವಿತಾ ತಾಂಬ್ರೆ ವಿರುದ್ಧವೂ ಗದಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಂದ ಖಾತೆ ಜಮಾಬಂಧಿ ಪತ್ರ ನೀಡಲು ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಅದರ ಭಾಗವಾಗಿ ₹5 ಸಾವಿರ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಂಚ ಸ್ವೀಕರಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.

ದಾಳಿ ವೇಳೆ ಆರೋಪಿ ವಿನೋದ ಕಪ್ಪತ್ತನವರ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಲೋಕಾಯುಕ್ತ ಡಿಎಸ್‌ಪಿ ಲೋಕೇಶ್ ನೇತೃತ್ವದ ತಂಡ ಗುರುವಾರ ತಡರಾತ್ರಿವರೆಗೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿತು.

“ದೂರು ಆಧರಿಸಿ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದ್ದು, ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.”

– ಲೋಕಾಯುಕ್ತ ಅಧಿಕಾರಿಗಳು