Home Blog Page 21

ರಿಹ್ಯಾಬ್ ಮಾಲೀಕ ಹತ್ಯೆ: ಬೆಂಗಳೂರು ಪುನರ್ವಸತಿ ಕೇಂದ್ರಗಳಲ್ಲಿ ಶುರುವಾಯ್ತು ಭೀತಿ!

0

ಬೆಂಗಳೂರು: ಚಂದ್ರಲೇಔಟ್‌ನಲ್ಲಿರುವ ನ್ಯೂ ಲೈಫ್ ರಿಹ್ಯಾಬ್ ಸೆಂಟರ್ ಮಾಲೀಕ ಶಿವಲಿಂಗಯ್ಯ ಹತ್ಯೆ ಪ್ರಕರಣದ ಬಳಿಕ ನಗರದ ಇತರೆ ಪುನರ್ವಸತಿ ಕೇಂದ್ರಗಳ ಮಾಲೀಕರಲ್ಲಿ ಆತಂಕ ಮನೆ ಮಾಡಿದೆ.

ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ರಿಹ್ಯಾಬ್ ಕೇಂದ್ರದಲ್ಲಿದ್ದ ನಿತಿನ್ ಎಂಬಾತನನ್ನು ಬಿಡಿಸಿಕೊಂಡು ಹೋಗುವ ಉದ್ದೇಶದಿಂದಲೇ ಹತ್ಯೆ ನಡೆಸಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಕೃತ್ಯ ಪೂರ್ವನಿಯೋಜಿತವಾಗಿದ್ದು, ಎಂಟರಿಂದ ಒಂಬತ್ತು ಮಂದಿ ದುಷ್ಕರ್ಮಿಗಳು ಸಂಚಿನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಹತ್ಯೆಯ ಬಳಿಕ ಆರೋಪಿಗಳು ಸ್ಥಳದಿಂದ ಒಂದು ಬ್ಯಾಗ್‌ನ್ನು ತೆಗೆದುಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ. ಬ್ಯಾಗ್‌ನಲ್ಲಿ ಹಣ ಇತ್ತೇ ಅಥವಾ ರಿಹ್ಯಾಬ್‌ನಲ್ಲಿದ್ದ ವ್ಯಕ್ತಿಯ ಬಟ್ಟೆಗಳಿದ್ದವೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ತುಂಬಾ ದಿನಗಳಿಂದಲೇ ಹತ್ಯೆಯ ಸಂಚು ರೂಪಿಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದ್ದು, ಘಟನೆ ನಡೆದ ವೇಳೆ ಮಾಲೀಕನ ಪುತ್ರ ಹಾಗೂ ಚಾಲಕ ಸ್ಥಳದಲ್ಲಿ ಇರದಿರುವುದನ್ನು ಗಮನಿಸಿ ದುಷ್ಕರ್ಮಿಗಳು ದಾಳಿ ನಡೆಸಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಪ್ರಕರಣದ ಬೆನ್ನಲ್ಲೇ ನಗರದ ಇತರೆ ಪುನರ್ವಸತಿ ಕೇಂದ್ರಗಳ ಕಾರ್ಯವೈಖರಿ ಹಾಗೂ ಭದ್ರತಾ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ.

ಚಂದ್ರಲೇಔಟ್ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಹಂತಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಯರೇ ಹಂಚಿನಾಳದಲ್ಲಿ ಕುಡಿಯುವ ನೀರಿಗೆ ಹಾಹಾಕಾರ! ಕ್ಯಾನ್ ಹಿಡಿದು ಜನರ ಪರದಾಟ

ಕೊಪ್ಪಳ: ಜಿಲ್ಲೆಯ ಯರೇ ಹಂಚಿನಾಳ ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮಸ್ಥರು ಶುದ್ಧ ನೀರಿಗಾಗಿ ಪರದಾಡುವಂತಾಗಿದೆ.

ಕುಡಿಯುವ ನೀರು ಪಡೆಯಲು ಗ್ರಾಮಸ್ಥರು ಕ್ಯಾನ್‌ಗಳನ್ನು ಹಿಡಿದು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವೇ ಬಹುತೇಕ ಗ್ರಾಮಸ್ಥರ ಏಕೈಕ ಆಸರೆಯಾಗಿದ್ದು, ಪ್ರತಿದಿನ ನೀರು ಪಡೆಯಲು ಜನರು ಘಟಕದ ಮುಂದೆ ಕಾದು ನಿಲ್ಲುತ್ತಿದ್ದಾರೆ. ಬೇಸಿಗೆ ಮತ್ತು ಮಳೆಯ ಕೊರತೆಯಿಂದ ಗ್ರಾಮದಲ್ಲಿನ ಪ್ರಮುಖ ನೀರಿನ ಮೂಲವಾದ ಕೆರೆಯಲ್ಲೂ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.

ನೀರಿನ ಅಭಾವದಿಂದ ಗ್ರಾಮಸ್ಥರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದ್ದು, ಮಹಿಳೆಯರು ಮತ್ತು ವೃದ್ಧರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಆತಂಕವೂ ವ್ಯಕ್ತವಾಗಿದೆ.

ಗ್ರಾಮಸ್ಥರು ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಫೇಕ್ ಅಟ್ರಾಸಿಟಿ ಕೇಸ್ ಆರೋಪ; ವಿಷ ಸೇವಿಸಿ ವ್ಯಾಪಾರಿ ಆತ್ಮಹತ್ಯೆ!

ಬೆಂಗಳೂರು: ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಾಡುಗೋಡಿ ಚನ್ನಸಂದ್ರ ನಿವಾಸಿ ಪಾಪಣ್ಣ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆಗೂ ಮುನ್ನ ವಿಡಿಯೋ ಸಂದೇಶ ದಾಖಲಿಸಿರುವ ಪಾಪಣ್ಣ, ಎಕೆಜಿ ಕಾಲೋನಿಯ ನಿವಾಸಿಗಳಾದ ಜೋಗಿ ಶೀನಾ, ಪ್ರಶಾಂತ್, ಸಂತೋಷ್, ರಾಧಾ ಹಾಗೂ ಲಲಿತ್ ಕುಮಾರ್ ಸೇರಿದಂತೆ ಅವರ ಕುಟುಂಬದವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಪಾಪಣ್ಣ, “ಸುಳ್ಳು ಅಟ್ರಾಸಿಟಿ ಪ್ರಕರಣಗಳನ್ನು ದಾಖಲಿಸಿ ಹಣಕ್ಕಾಗಿ ಒತ್ತಡ ಹೇರಲಾಗುತ್ತಿದೆ. 2021ರಲ್ಲಿಯೂ ಇದೇ ರೀತಿಯ ಪ್ರಕರಣ ದಾಖಲಿಸಿ, ಅದನ್ನು ವಾಪಸ್ ಪಡೆಯಲು ಲಕ್ಷಾಂತರ ರೂಪಾಯಿ ಪಡೆದಿದ್ದರು. ಇದೀಗ ಮತ್ತೊಮ್ಮೆ ಸುಳ್ಳು ಪ್ರಕರಣ ದಾಖಲಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ನಾನು ಬಡ ವ್ಯಾಪಾರಿಯಾಗಿದ್ದು, ಈ ಕಿರುಕುಳದಿಂದ ಮನನೊಂದಿದ್ದೇನೆ” ಎಂದು ಆರೋಪಿಸಿದ್ದಾರೆ.

ಅಲ್ಲದೆ, ತಮ್ಮ ಸಾವಿಗೆ ಜೋಗಿ ಶೀನಾ ಮತ್ತು ಅವರ ಕುಟುಂಬದವರೇ ಕಾರಣ ಎಂದು ಹೇಳಿರುವ ಪಾಪಣ್ಣ, ತಮ್ಮ ಕುಟುಂಬ ಹಾಗೂ ತಂಗಿಯನ್ನು ರಕ್ಷಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮೃತರು ಮಂಗಳವಾರ ರಾತ್ರಿ ಸುಮಾರು 10.05 ಗಂಟೆಗೆ ವಿಡಿಯೋ ಸಂದೇಶ ಕಳುಹಿಸಿದ್ದು, ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಬೆಳಗಿನ ಜಾವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತನ ತಂಗಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಭಾಗ್ಯಶ್ರೀ ನೀಡಿದ ದೂರಿನ ಜೊತೆಗೆ ವಿಡಿಯೋ ಸಾಕ್ಷ್ಯವನ್ನು ಆಧರಿಸಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಎರಡು ಲಾರಿಗಳು!

ಬೆಳಗಾವಿ: ಲಾರಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲೇ ಎರಡೂ ವಾಹನಗಳು ಬೆಂಕಿಗಾಹುತಿಯಾದ ಘಟನೆ ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿ ಸಮೀಪ ನಡೆದಿದೆ.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋವಿನ ಜೋಳದ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಗೆ ಹಾಲಿನ ಟ್ಯಾಂಕರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿವೆ.

ಅಪಘಾತದ ವೇಳೆ ಲಾರಿ ಹಾಗೂ ಟ್ಯಾಂಕರ್ ಚಾಲಕರು ಸಮಯಪ್ರಜ್ಞೆ ಮೆರೆದು ವಾಹನಗಳಿಂದ ಹೊರಬಂದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಉದ್ದನೆಯ ವಾಹನಗಳ ಸರತಿ ನಿರ್ಮಾಣವಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದರು.

ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವೋಟರ್ ಐಡಿ ಇದ್ದವರಿಗೆ ಮಾತ್ರ ಶಕ್ತಿ ಸ್ಮಾರ್ಟ್ ಕಾರ್ಡ್? ದುರ್ಬಳಕೆ ತಡೆಗೆ ಸರ್ಕಾರ ಕ್ರಮ!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲು ಸಾರಿಗೆ ಇಲಾಖೆ ಮುಂದಾಗಿದೆ.

ಯೋಜನೆಯ ದುರ್ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಪ್ರಕ್ರಿಯೆಯನ್ನು ಸರ್ಕಾರ ಚುರುಕುಗೊಳಿಸಿದೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಬೇರೆ ರಾಜ್ಯಗಳ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಕುರಿತು ದೂರುಗಳು ಕೇಳಿಬಂದಿದ್ದವು. ಇದರಿಂದ ಸಾರಿಗೆ ನಿಗಮಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

ಯೋಜನೆಯಡಿ ರಾಜ್ಯದ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹೊಂದಿರುವ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ನೀಡುವ ಪ್ರಸ್ತಾವನೆ ಇದೆ. ಫಲಾನುಭವಿಗಳು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಸಲ್ಲಿಸಿ ಕಾರ್ಡ್ ಪಡೆಯಬಹುದಾಗಿದೆ.

ಸ್ಮಾರ್ಟ್ ಕಾರ್ಡ್‌ನಲ್ಲಿ ಫಲಾನುಭವಿಯ ಹೆಸರು, ಭಾವಚಿತ್ರ, ಆಧಾರ್ ಸಂಖ್ಯೆ ಮತ್ತು ವಿಳಾಸದ ವಿವರಗಳು ಅಳವಡಿಕೆಯಾಗಲಿದ್ದು, ಇತರರಿಗೆ ವರ್ಗಾಯಿಸಲು ಅವಕಾಶ ಇರುವುದಿಲ್ಲ. ರಾಜ್ಯಾದ್ಯಂತ ಸುಮಾರು 3 ಕೋಟಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಬೆಂಗಳೂರಿನ ಬಿಎಂಟಿಸಿ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಜಾರಿಯಾಗಲಿದ್ದು, ಬಳಿಕ ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೂ ವಿಸ್ತರಿಸಲಾಗುವುದು.

ಇದಕ್ಕಾಗಿ ಬಿಎಂಟಿಸಿ ಈಗಾಗಲೇ 11 ಸಾವಿರಕ್ಕೂ ಹೆಚ್ಚು ಸುಧಾರಿತ ಇಟಿಎಂ ಯಂತ್ರಗಳನ್ನು ಪಡೆದುಕೊಂಡಿದೆ. ಸ್ಮಾರ್ಟ್ ಕಾರ್ಡ್‌ಗಳಲ್ಲಿ ಎನ್‌ಎಫ್‌ಸಿ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಬಸ್‌ಗಳ ಜೊತೆಗೆ ‘ನಮ್ಮ ಮೆಟ್ರೋ’ ಪ್ರಯಾಣಕ್ಕೂ ಬಳಸಲು ಅವಕಾಶ ಕಲ್ಪಿಸುವ ಯೋಜನೆ ಇದೆ.

ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಸೈಬರ್ ಕೇಂದ್ರಗಳು ಹಾಗೂ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬಹುದಾಗಿದೆ. ಅರ್ಹ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಈ ಕಾರ್ಡ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು.

ಸರ್ಕಾರದ ಈ ಕ್ರಮವನ್ನು ಹಲವರು ಸ್ವಾಗತಿಸಿದ್ದು, ಯೋಜನೆಯ ನಿಜವಾದ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪಲು ಇದು ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು; ಬೆಂಗಳೂರಿನಲ್ಲಿ ಕೂಲ್ ಕೂಲ್ ವೀಕೆಂಡ್!

ಬೆಂಗಳೂರು: ನೈಋತ್ಯ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಾರಾಂತ್ಯದ ದಿನವಾದ ಇಂದು ಬೆಂಗಳೂರಿನಲ್ಲಿ ತಂಪಾದ ವಾತಾವರಣ ಕಂಡುಬರುವ ನಿರೀಕ್ಷೆಯಿದೆ.

ನಗರದಲ್ಲಿ ಗರಿಷ್ಠ ತಾಪಮಾನ 29 ರಿಂದ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ರಿಂದ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಹಗಲಿನಲ್ಲಿ ಶೇ.40 ಮತ್ತು ಸಂಜೆ ಹಾಗೂ ರಾತ್ರಿ ವೇಳೆಗೆ ಶೇ.65ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಪಶ್ಚಿಮ ದಿಕ್ಕಿನಿಂದ ಗಂಟೆಗೆ 15 ರಿಂದ 25 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಕೆಲವೊಮ್ಮೆ ಗಾಳಿಯ ವೇಗ 40 ಕಿ.ಮೀ ತಲುಪಬಹುದು ಎಂದು ಇಲಾಖೆ ತಿಳಿಸಿದೆ.

ಆಕಾಶ ಸಾಮಾನ್ಯವಾಗಿ ಮೋಡ ಕವಿದ ವಾತಾವರಣದಿಂದ ಕೂಡಿರಲಿದ್ದು, ಸಂಜೆ ವೇಳೆಗೆ ಎಂ.ಜಿ. ರಸ್ತೆ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಜಯನಗರ ಹಾಗೂ ಯಶವಂತಪುರ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ರಾತ್ರಿ ವೇಳೆಗೆ ಚಳಿ ಹಾಗೂ ತಂಪಾದ ಗಾಳಿ ಹೆಚ್ಚಾಗಲಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲ ಭಾಗಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರ ತೀರ ಪ್ರದೇಶಗಳಲ್ಲಿ ಗಾಳಿಯ ವೇಗ ಹೆಚ್ಚಾಗಲಿದ್ದು, ಜೂನ್ 21ರಿಂದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಬಿರುಗಾಳಿ, ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇನ್ನೊಂದೆಡೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ಒಣ ಹವಾಮಾನ ಮುಂದುವರಿಯಲಿದ್ದು, ಕೆಲವೆಡೆ ಹಗುರ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಸೆಖೆಯ ವಾತಾವರಣವೂ ಮುಂದುವರಿಯಲಿದೆ.

ಚಿನ್ನದ ಗಣಿಗಾರಿಕೆಗೆ ಗ್ರೀನ್ ಸಿಗ್ನಲ್? ಭೂಮಿ ಕಳೆದುಕೊಳ್ಳುವ ಭಯದಲ್ಲಿ ರೈತರು

ಹಾವೇರಿ: ಹಾವೇರಿ ತಾಲೂಕಿನ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗುವ ಸಾಧ್ಯತೆ ಕುರಿತು ಮತ್ತೆ ಚರ್ಚೆಗಳು ಜೋರಾಗಿದ್ದು, ಈ ಬೆಳವಣಿಗೆ ರೈತರಲ್ಲಿ ಆತಂಕ ಮೂಡಿಸಿದೆ.

ಗ್ರಾಮದಲ್ಲಿ ಚಿನ್ನದ ನಿಕ್ಷೇಪಗಳು ಇರುವುದನ್ನು 2015ರಲ್ಲೇ ಸಂಶೋಧನೆಯ ಮೂಲಕ ದೃಢಪಡಿಸಲಾಗಿತ್ತು. ಇದೀಗ ಗಣಿಗಾರಿಕೆ ಪ್ರಕ್ರಿಯೆಗೆ ಮತ್ತೆ ಚೈತನ್ಯ ಸಿಗುವ ಸಾಧ್ಯತೆ ವ್ಯಕ್ತವಾಗಿರುವುದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2015ರಲ್ಲಿ ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿ ಪ್ರಾಥಮಿಕ ಪರವಾನಗಿ ಪಡೆದು ಗಣಜೂರು ಪ್ರದೇಶದಲ್ಲಿ ಸಂಶೋಧನೆ ಆರಂಭಿಸಿತ್ತು. ಡೆಕ್ಕನ್ ಎಕ್ಸ್‌ಪ್ಲೋರೇಶನ್ ಸರ್ವೀಸಸ್ ಹೆಸರಿನಲ್ಲಿ ರೈತರ ಜಮೀನುಗಳನ್ನು ಲೀಸ್ ಪಡೆದು ಕೊಳವೆ ಬಾವಿ ಕೊರೆದು ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕಲ್ಲುಗಳಲ್ಲಿ ಗಣನೀಯ ಪ್ರಮಾಣದ ಚಿನ್ನದ ಅಂಶ ಇರುವುದನ್ನು ಪತ್ತೆಹಚ್ಚಲಾಗಿತ್ತು.

ಸಂಶೋಧನೆಗಾಗಿ ಕಂಪನಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದು, ಸುಮಾರು ಏಳು ರಿಂದ ಎಂಟು ವರ್ಷಗಳ ಕಾಲ ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಬಳಿಕ ಪೂರ್ಣ ಪ್ರಮಾಣದ ಗಣಿಗಾರಿಕೆಗೆ ಅರ್ಜಿ ಸಲ್ಲಿಸಿದ್ದರೂ ಕೆಲ ಕಾನೂನು ತೊಡಕುಗಳಿಂದ ಅದು ಮುಂದುವರಿಯಲಿಲ್ಲ.

ಇದೀಗ ಮಹಾರಾಷ್ಟ್ರದ ಗಣಿಗಾರಿಕೆ ಸಂಬಂಧಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಗಣಜೂರು ಯೋಜನೆಗೆ ಪೂರಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಗಣಿಗಾರಿಕೆ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಗಣಜೂರು ಪ್ರದೇಶದಲ್ಲಿ ಸುಮಾರು 400 ಎಕರೆ ವ್ಯಾಪ್ತಿಯನ್ನು ಗುರುತಿಸಲಾಗಿದ್ದು, ಅದರಲ್ಲೂ 70ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಹೇರಳ ಪ್ರಮಾಣದ ಚಿನ್ನದ ನಿಕ್ಷೇಪವಿದೆ ಎಂದು ಹೇಳಲಾಗುತ್ತಿದೆ. ರಾಯಚೂರಿನ ಹಟ್ಟಿ ಚಿನ್ನದ ಗಣಿ ಹಾಗೂ ಕೋಲಾರದ ಕೆಜಿಎಫ್‌ಗಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ಇಲ್ಲಿರಬಹುದು ಎಂಬ ಅಂದಾಜು ವ್ಯಕ್ತವಾಗಿದೆ.

ಆದರೆ ಗಣಿಗಾರಿಕೆ ಪ್ರಾರಂಭದ ಸಾಧ್ಯತೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. “ನಮಗೆ ಇರುವುದೇ ಒಂದೆರಡು ಎಕರೆ ಜಮೀನು. ಅದನ್ನೂ ಕೊಟ್ಟರೆ ನಾವು ಎಲ್ಲಿಗೆ ಹೋಗಬೇಕು? ಕಂಪನಿ ಮೊದಲು ರೈತರೊಂದಿಗೆ ಸಭೆ ನಡೆಸಿ ಸ್ಪಷ್ಟನೆ ನೀಡಬೇಕು” ಎಂದು ರೈತ ಸುರೇಶ್ ಚಲವಾದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಇತಿಹಾಸದಲ್ಲಿ ‘ಚಿನ್ನದೂರು’ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿರುವ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗುವ ಕುರಿತು ಚರ್ಚೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ, ಕಂಪನಿ ಹಾಗೂ ರೈತರ ನಿಲುವು ಯಾವ ರೀತಿಯಲ್ಲಿ ರೂಪುಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಕುಡಿಯುವ ನೀರಿನ ಯೋಜನೆಗೆ ಅಡ್ಡಿ ಬೇಡ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಕಾಲೇಜು ಆವರಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆ.ಯು.ಡಬ್ಲ್ಯೂ.ಎಸ್.) ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಜಲಾಗಾರ ಕಾಮಗಾರಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಪ್ರತಿಭಟನೆಯಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಸ್ಥಳದಲ್ಲಿ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಕಾಮಗಾರಿ ಸಂಬಂಧ ಸಮಗ್ರ ಮಾಹಿತಿ ಸಂಗ್ರಹಿಸಿದರು.

ಈ ವೇಳೆ ಪ್ರತಿಭಟನಾಕಾರರು, ಕುಡಿಯುವ ನೀರಿನ ಯೋಜನೆಗೆ ತಮ್ಮ ವಿರೋಧವಿಲ್ಲ. ಆದರೆ ಭವಿಷ್ಯದಲ್ಲಿ ಕಾಲೇಜು ಸರ್ಕಾರಕ್ಕೆ ಹಸ್ತಾಂತರವಾಗಲಿದ್ದು, ಕಟ್ಟಡ ವಿಸ್ತರಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಕಾಮಗಾರಿಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜಲಾಗಾರ ನಿರ್ಮಾಣದಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇದು ಪುರಸಭೆಯ ಆಸ್ತಿಯಾಗಿದ್ದು, ಕುಡಿಯುವ ನೀರು ಜನರ ಮೂಲಭೂತ ಅಗತ್ಯವಾಗಿದೆ. ಜನರ ಅನುಕೂಲಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಯೋಜನೆಗೆ ಅನಗತ್ಯ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು.

ಕಾಮಗಾರಿಗೆ ವಿರೋಧ ವ್ಯಕ್ತಪಡಿಸಲು ಸೂಕ್ತ ದಾಖಲೆಗಳು ಅಥವಾ ಕಾನೂನು ಆಧಾರಗಳಿದ್ದರೆ ಸಲ್ಲಿಸಿ, ಅವುಗಳನ್ನು ಪರಿಶೀಲಿಸಲಾಗುವುದು. ಆದರೆ ಯಾವುದೇ ಕಾರಣಕ್ಕೂ ಯೋಜನೆ ವಿಳಂಬವಾಗಬಾರದು ಎಂದು ಸ್ಪಷ್ಟಪಡಿಸಿದರು.

ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪೈಪ್‌ಲೈನ್ ಅಳವಡಿಕೆ, ಪಂಪ್‌ಸೆಟ್ ಅಳವಡಿಕೆ ಸೇರಿದಂತೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಶೀಘ್ರ ಮುಗಿಸಬೇಕು. ನಿರ್ಮಾಣ ಸಾಮಗ್ರಿಗಳನ್ನು ಕಾಲೇಜು ಆವರಣದ ಹೊರಭಾಗದಲ್ಲಿ ಸಂಗ್ರಹಿಸಬೇಕು ಎಂದು ನಿರ್ದೇಶನ ನೀಡಿದರು.

ಪಟ್ಟಣದ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಕಾಮಗಾರಿ ವಿಳಂಬಕ್ಕೆ ಅವಕಾಶ ನೀಡಬಾರದು. ಕೆ.ಯು.ಡಬ್ಲ್ಯೂ.ಎಸ್. ಹಾಗೂ ಪುರಸಭೆ ಅಧಿಕಾರಿಗಳು ನಿರಂತರ ನಿಗಾವಹಿಸಬೇಕು. ತಾವೂ ಸಹ ಕಾಲಕಾಲಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಇದೇ ವೇಳೆ ಒಳಚರಂಡಿ ಕಾಮಗಾರಿಯಿಂದ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಹಾಗೂ ಕಾಲೇಜು ಕಟ್ಟಡದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆ ವೇಳೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ, ಕೆ.ಯು.ಡಬ್ಲ್ಯೂ.ಎಸ್. ಇಂಜಿನಿಯರ್ ಜೆ.ಬಿ. ಹೊಸಮನಿ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಇಂಜಿನಿಯರ್ ಈರಣ್ಣ ದುರಗಣ್ಣವರ, ಪ್ರಭಾರಿ ಪ್ರಾಚಾರ್ಯ ವಾಗೀಶ ನಾಗಶೆಟ್ಟಿ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

“ಕುಡಿಯುವ ನೀರು ಜನರ ಮೂಲಭೂತ ಹಕ್ಕು. ಸರ್ಕಾರ ಜನರ ಅನುಕೂಲಕ್ಕಾಗಿ ಕೈಗೊಂಡಿರುವ ಯೋಜನೆಗಳು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕು.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಬಡ ಪ್ರತಿಭೆಗಳ ಭವಿಷ್ಯಕ್ಕೆ ಬೆಳಕಾದ ಅವಸರ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಅವಸರ್ ಫೌಂಡೇಶನ್ ಟ್ರಸ್ಟ್‌ನ ಆರ್ಥಿಕ ಸಹಕಾರದಿಂದ ಕೆಯು ಪಬ್ಲಿಕ್ ಶಾಲೆಯಲ್ಲಿ ನಿರ್ಮಿಸಲಾಗಿರುವ ನವೀಕೃತ ತರಗತಿ ಕೊಠಡಿಗಳು ಹಾಗೂ ಸ್ಮಾರ್ಟ್ ಬೋರ್ಡ್‌ಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದ್ದು, ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಉನ್ನತ ಭಾರತ ಅಭಿಯಾನ ಕೋಶ, ಕೆಯು ಪಬ್ಲಿಕ್ ಶಾಲೆ ಹಾಗೂ ಅವಸರ್ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ₹30 ಲಕ್ಷ ವೆಚ್ಚದ ನವೀಕೃತ ವರ್ಗ ಕೊಠಡಿಗಳು ಮತ್ತು ಸ್ಮಾರ್ಟ್ ಬೋರ್ಡ್ ಹಸ್ತಾಂತರ ಕಾರ್ಯಕ್ರಮ ಹಾಗೂ ದತ್ತು ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅವಸರ್ ಫೌಂಡೇಶನ್ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಉದಾರವಾಗಿ ನೆರವು ನೀಡಿರುವುದು ಶ್ಲಾಘನೀಯ. ನವೀಕರಣದ ನಂತರ ಶಾಲೆಗೆ ಹೊಸ ಮೆರುಗು ಬಂದಿದ್ದು, ದತ್ತು ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಅವಸರ್ ಫೌಂಡೇಶನ್ ಸಂಸ್ಥಾಪಕ ಆನಂದ ಚತುರ್ವೇದಿ ಮಾತನಾಡಿ, ಕಳೆದ 14 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮಾಜಕ್ಕೆ ಮರಳಿ ಕೊಡುವ ಮನೋಭಾವವೇ ಈ ಕಾರ್ಯಗಳಿಗೆ ಪ್ರೇರಣೆಯಾಗಿದೆ. ಶಿಷ್ಯವೇತನ ಪಡೆದ ವಿದ್ಯಾರ್ಥಿನಿಯರ ಬದುಕಿನಲ್ಲಿ ಈ ಕ್ಷಣ ಸ್ಮರಣೀಯವಾಗಿರಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಯು ಪಬ್ಲಿಕ್ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡರ ಮಾತನಾಡಿ, ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹30 ಲಕ್ಷ ವೆಚ್ಚ ಮಾಡಿ ಕೊಡುಗೆ ನೀಡಿರುವ ಆನಂದ ಚತುರ್ವೇದಿ ಅವರ ಸೇವೆ ಅನುಕರಣೀಯವಾಗಿದೆ. ಪ್ರಸಕ್ತ ಸಾಲಿನಿಂದ ತಾವು ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಅವಸರ್ ಫೌಂಡೇಶನ್ ವತಿಯಿಂದ ವಿಶ್ವವಿದ್ಯಾಲಯದ ದತ್ತು ಗ್ರಾಮಗಳ 13 ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ತಲಾ ₹10 ಸಾವಿರ ಶಿಷ್ಯವೇತನದ ಚೆಕ್‌ಗಳನ್ನು ವಿತರಿಸಲಾಯಿತು.

ಉನ್ನತ ಭಾರತ ಅಭಿಯಾನ ಕೋಶದ ಸಂಯೋಜಕಿ ಪ್ರೊ. ತ್ರಿವೇಣಿ ಎಸ್., ಸಂಯೋಜಕ ಡಾ. ಚೇತನ್ ಜೆ.ಡಿ., ಮುಖ್ಯ ಅತಿಥಿಗಳಾದ ಪ್ರೊ. ಜೆ.ಎಂ. ಚೆಂದುನವರ, ಪ್ರೊ. ಸಂಗೀತಾ ಮಾನೆ, ಪ್ರೊ. ಎನ್. ರಾಮಾಂಜನೇಯಲು, ಸ್ಥಾನಿಕ ಅಭಿಯಂತರ ಗಿರೀಶ ಜೋಶಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯೆ ಅನಸೂಯಾ ನಾಯಕ ಸ್ವಾಗತಿಸಿದರು. ಎಂ.ಎಸ್. ಹಿರೇಮಠ ವಂದಿಸಿದರು.

“ಸ್ಮಾರ್ಟ್ ಬೋರ್ಡ್ ಮತ್ತು ಆಧುನಿಕ ಕಲಿಕಾ ಸೌಲಭ್ಯಗಳು ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆಗೆ ನೆರವಾಗುತ್ತವೆ. ಇಂತಹ ದಾನಿಗಳ ಸಹಕಾರದಿಂದ ಶಿಕ್ಷಣ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಲಿದೆ.”

ಪ್ರೊ. ಎ.ಎಂ. ಖಾನ್, ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ

ಬಡ ಪ್ರತಿಭೆಗಳಿಗೆ ವಿದ್ಯಾಪೋಷಕದ ಆಸರೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ನೆರವಾಗುವ ಉದ್ದೇಶದಿಂದ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು 2026-27ನೇ ಶೈಕ್ಷಣಿಕ ಸಾಲಿನ ‘ನರ್ಚರ್ ಮೆರಿಟ್’ ಯೋಜನೆಯಡಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೊದಲ ಬಾರಿಗೆ ಬರೆದು ಶೇ.80ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ದ್ವಿತೀಯ ಪಿಯುಸಿ ನಂತರ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ.

ಇಂಜಿನಿಯರಿಂಗ್ ಪ್ರವೇಶಾಕಾಂಕ್ಷಿಗಳು ಸಿಇಟಿ ಪರೀಕ್ಷೆಯಲ್ಲಿ 25 ಸಾವಿರಕ್ಕಿಂತ ಕಡಿಮೆ ರ‍್ಯಾಂಕ್ ಪಡೆದಿರಬೇಕು. ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ 3 ಸಾವಿರಕ್ಕಿಂತ ಕಡಿಮೆ ಹಾಗೂ ಅಖಿಲ ಭಾರತ ಮಟ್ಟದಲ್ಲಿ 60 ಸಾವಿರಕ್ಕಿಂತ ಕಡಿಮೆ ರ‍್ಯಾಂಕ್ ಪಡೆದಿರಬೇಕು ಎಂದು ಸಂಸ್ಥೆ ತಿಳಿಸಿದೆ.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ಮಾಸಿಕ ಆದಾಯ ₹15 ಸಾವಿರಕ್ಕಿಂತ ಕಡಿಮೆ ಇರಬೇಕು. ವಿದ್ಯಾರ್ಥಿಗಳ ಪೋಷಕರು ಕರ್ನಾಟಕದ ನಿವಾಸಿಗಳಾಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ವಿದ್ಯಾಪೋಷಕ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ, ಮಾರ್ಗಸೂಚಿಗಳು ಹಾಗೂ ನಿಯಮಗಳಿಗಾಗಿ ವಿದ್ಯಾಪೋಷಕ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ. ಗದಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಗಾಗಿ ಡಾ. ಎಸ್.ಬಿ. ಸಜ್ಜನರ, ಡಾ. ಪ್ರಭು ಗಂಜಿಹಾಳ, ಡಾ. ಪ್ರಕಾಶ ಕಣವಿ, ಪ್ರೊ. ಮಂಜುನಾಥ ಹೊಳ್ಳಿಯವರ, ಪ್ರೊ. ಎಚ್.ಎನ್. ಕಾಳೆ ಹಾಗೂ ಆರ್.ಕೆ. ಭಾಗವಾನ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

error: Content is protected !!