Home Blog Page 211

ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಗಾಂಜಾ ಸಾಗಿಸಲು ಯತ್ನ: ಇಬ್ಬರು ಯುವಕರು ಅರೆಸ್ಟ್

0

ಶಿವಮೊಗ್ಗ:- ಕೈದಿ ಭೇಟಿಯಾಗಲು ಗಾಂಜಾ ತಂದಿದ್ದ ಇಬ್ಬರು ಜೈಲಿನಲ್ಲೇ ಲಾಕ್ ಆಗಿರುವ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಜರುಗಿದೆ.

ಬಂಧಿತರನ್ನ ಮಹಮ್ಮದ್ ಅಕ್ಬರ್ ಅಲಿಯಾಸ್ ಕಣ್ಣಪ್ಪ (22), ಮದರಿ ಪಾಳ್ಯ ಅಲಿಯಾಸ್‌ ಅಜ್ಗರ್ ಅಲಿ ಅಲಿಯಾಸ್ ಅಜ್ಜು (21) ಎಂದು ಗುರುತಿಸಲಾಗಿದೆ.

ಜ.5ರ ಸಂಜೆ ಕೇಂದ್ರ ಕಾರಾಗೃಹದಲ್ಲಿ ಕೈದಿಯನ್ನು ಭೇಟಿಯಾಗಲು ಈ ಇಬ್ಬರು ಆಗಮಿಸಿದ್ದರು. ಈ ವೇಳೆ ಜೈಲು ಅಧಿಕಾರಿಗಳು ರೂಢಿಯಂತೆ ತಪಾಸಣೆ ನಡೆಸಿದಾಗ, ಅವರ ಪ್ಯಾಂಟ್ ಒಳಗಡೆ ಗಾಂಜಾ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಜೈಲು ಅಧಿಕಾರಿಗಳು ತುಂಗಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ಪತ್ತೆಯಾದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದೆಲ್ಲೆಡೆ ಇಂದು ಒಣಹವೆ, ಮಂಜು ಕವಿದ ವಾತಾವರಣ; ಇಂದಿನ ಹವಾಮಾನ ವರದಿ ಹೀಗಿದೆ

0

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಒಣಹವೆ ವಾತಾವರಣ ಇದ್ದು, ಇಂದೂ ಸಹ ಅದೇ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಿನೇ ದಿನೇ ಚಳಿಗಾಲದ ಪ್ರಭಾವ ಹೆಚ್ಚಾಗುತ್ತಿದ್ದು, ಹಲವೆಡೆ ಬೆಳಗಿನ ಜಾವ ಮಂಜು ಹಾಗೂ ತಂಪು ಹವಾಮಾನ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಇನ್ನೆರಡು ದಿನಗಳ ಕಾಲ ಒಣಹವೆ ಮುಂದುವರಿಯಲಿದ್ದು, ನಂತರ ಕೆಲವು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಣಹವೆ ಇರುವ ಜಿಲ್ಲೆಗಳು:-

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಳೆಯ ಲಕ್ಷಣಗಳಿಲ್ಲ.

ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವಾಮಾನ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿಯೂ ಇಂದು ಒಣಹವೆ ಮುಂದುವರಿಯಲಿದೆ.

ಬೆಂಗಳೂರು ಹವಾಮಾನ:-

ರಾಜಧಾನಿ ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದ್ದು, ಬೆಳಗಿನ ಜಾವ ಮಂಜು ಕಂಡುಬರುತ್ತಿದೆ. ಇಂದು ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಳಿಯಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು ಮತ್ತು ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಗದಗ| ಬಸ್‌ನಿಂದ ಬಾಲಕಿ ಕೆಳಗಿಳಿಸಿದ್ದಕ್ಕೆ ಮಹಿಳಾ ಕಂಡಕ್ಟರ್‌ಗೆ ಕಪಾಳಮೋಕ್ಷ..! ವಿಡಿಯೋ ವೈರಲ್…

0

ಗದಗ: ಟೋಲ್ ನಾಕಾದ ಬಳಿ ಪ್ರಯಾಣಿಕರನ್ನು ಹತ್ತಿಸಲು ನಿಯಮಾತ್ಮಕ ನಿರ್ಬಂಧವಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಕೆಳಗಿಳಿಸಿದ್ದಕ್ಕೆ NWKRTC ಬಸ್ ಕಂಡಕ್ಟರ್ ಮೇಲೆ ಆಕೆಯ ತಂದೆ ಹಾಗೂ ಮತ್ತೊಬ್ಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಪಾಳ ಮೋಕ್ಷ ‌ಮಾಡಿದ ಗಂಭೀರ ಘಟನೆ ಗದಗನಲ್ಲಿ ನಡೆದಿದೆ.

NWKRTCಗೆ ಸೇರಿದ ಬಸ್ ಸಂಖ್ಯೆ KA-26/F-0852ರಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನೇತ್ರಾವತಿ ಕೋಂ ಮಾಂತೇಶ ಪತ್ರಿಮಠ ಅವರು ಮಂಗಳವಾರ 06-01-2025ರಂದು ಬೆಳಿಗ್ಗೆ ಸುಮಾರು 9.30ಕ್ಕೆ ಶಿಂಗಟರಾಯನಕೇರಿ ತಾಂಡಾದಿಂದ ಕದಾಂಪೂರ ಮಾರ್ಗವಾಗಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಗದಗ ಕಡೆಗೆ ಬರುತ್ತಿದ್ದರು. ಈ ವೇಳೆ ಪಾಪನಾಶಿ ಟೋಲ್ ನಾಕಾದ ಬಳಿ ಬಸ್ ಓಪನ್ ಡೋರ್ ಇರುವುದನ್ನು ಬಳಸಿಕೊಂಡು ವಿದ್ಯಾರ್ಥಿನಿ ಬಸ್ ಹತ್ತಿದ್ದಾಳೆ. ಆದರೆ ಟೋಲ್ ನಾಕಾದಲ್ಲಿ ಪ್ರಯಾಣಿಕರನ್ನು ಹತ್ತಿಸುವುದಕ್ಕೆ ಅವಕಾಶವಿಲ್ಲ ಎಂಬ ನಿಯಮದಂತೆ ಮಹಿಳಾ ಕಂಡಕ್ಟರ್ ಬಸ್ ನಿಲ್ಲಿಸಿ ಬಾಲಕಿಯನ್ನು ಕೆಳಗಿಳಿಸಿದ್ದಾರೆ.

ಇದರಿಂದ ಸಿಟ್ಟಾದ ಕದಾಂಪೂರ ಗ್ರಾಮದ ವಿದ್ಯಾರ್ಥಿನಿಯ ತಂದೆ ಪ್ರಕಾಶ್ ತಂದೆ ಲಕ್ಷ್ಮಣ್ಣ ಸಂಕಣ್ಣವರ್ ಬಸ್ ಬೆನ್ನತ್ತಿ ಗದಗ–ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಟ್ಟಿ ಸ್ಕೂಲ್ ಹತ್ತಿರ ಬೈಕ್ ಅಡ್ಡಗಟ್ಟಿ ಬಸ್ ನಿಲ್ಲಿಸಿ ಬಸ್ ಒಳಗೆ ನುಗ್ಗಿ ಕಂಡಕ್ಟರ್ ನೇತ್ರಾವತಿ ಪತ್ರಿಮಠ ಅವರ ಮೊಬೈಲ್ ಕಸಿದುಕೊಂಡು, ಅವಾಚ್ಯ ಶಬ್ದಗಳಿಂದ‌ ನಿಂದಿಸಿದಾಗ ನಮ್ಮ ಮನೆಯಲ್ಲೂ ಪೊಲೀಸರು ಇದ್ದಾರೆ ಎಂದಾಗ…ಆರೋಪಿ ಪ್ರಕಾಶ್ ಸಂಕಣ್ಣವರ್, ಯಾರಿಗೆ ಹೇಳ್ತೀ ಹೇಳ್ಕೋ….ಎಸ್ಪಿಗೆ‌ ಹೇಳ್ತಿಯೋ ಡಿಸಿಗೆ ಹೇಳ್ತೀಯೋ ಅಂತ ವಾದಿಸುತ್ತಿದ್ದಾಗ, ಆಗ ಮತ್ತೊಬ್ಬ ಆರೋಪಿ ಶಿಂಗಟಾರಾಯನಕೇರಿಯ ನೀಲಪ್ಪ ಅಲಿಯಾಸ್ ಮುತ್ತಣ್ಣ ತಂದೆ ಹುಚ್ಚಪ್ಪ ಜಂತ್ಲಿ, ಏಕಾಏಕಿ ‌ಬಸ್ ಹತ್ತಿದವನೇ ಕಂಡಕ್ಟರ್ ನೇತ್ರಾವತಿ ಅವರಿಗೆ ಕಪಾಳಕ್ಕೆ ಹೊಡೆದುಬಿಟ್ಟ. ಇದರಿಂದ ವಿಚಲಿತರಾದ ಕಂಡಕ್ಟರ್ ನೇತ್ರಾವತಿ ಚೀರಿ….ಕೆಳಗೆ ಕುಸಿದುಬಿದ್ದರು. ಆಗ ಇತರ ಪ್ರಯಾಣಿಕರು ಕುಸಿದು‌ಬಿದ್ದ ಕಂಡಕ್ಟರ್ ನೇತ್ರಾವತಿ ಅವರಿಗೆ ಸಮಾಧಾನ ಮಾಡಿದರು.

ಇಡೀ ಈ ಗಲಾಟೆಯ ದೃಶ್ಯ ಚಾಲಕನ ಮೊಬೈಲ್‌ನಲ್ಲಿ ಸೆರೆಯಾಗಿದ್ದ ಅದೀಗ ವೈರಲ್ ಆಗಿದೆ.

ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಸಂಖ್ಯೆ 05/2026ರಡಿ IPC ಕಲಂಗಳು 115(2), 132, 76, 352, 6/2, 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು PSI ವಿ.ಜಿ. ಪವಾರ ಅವರು ಕೈಗೊಂಡಿದ್ದಾರೆ.

ಘಟನೆಯು ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಸುರಕ್ಷತೆ ಕುರಿತಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, NWKRTC ಸಿಬ್ಬಂದಿ ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸಲು ಕಠಿಣ ರಕ್ಷಣಾತ್ಮಕ ಕ್ರಮಗಳು ಅಗತ್ಯವೆಂಬ ಒತ್ತಾಯ ವಿವಿಧ ವಲಯಗಳಿಂದ ಕೇಳಿ ಬಂದಿದೆ.

ತುಮಕೂರು| ಮಕ್ಕಳ ಜೊತೆ ಸಂಪಿಗೆ ಬಿದ್ದು ತಾಯಿ ಸೂಸೈಡ್

0

ತುಮಕೂರು:- ತುಮಕೂರು ತಾಲ್ಲೂಕಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೊನಿಯಲ್ಲಿ ಮಕ್ಕಳ ಜೊತೆ ಸಂಪಿಗೆ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ವಿಜಯಲಕ್ಷ್ಮಿ ಎಂಬ ಮಹಿಳೆಯು, ತನ್ನ ಮಕ್ಕಳ ಜೊತೆ ಸಂಪಿಗೆ ಬಿದ್ದು ಆತ್ಮಹತ್ಯೆ ಶರಣಾರದವರು. ಶಿವಗಂಗೆ ಮೂಲದ ಸಂಪತ್ ಕುಮಾರ್‌ಗೆ ನೆಲಮಂಗಲ ಮೂಲದ ವಿಜಯಲಕ್ಷ್ಮಿ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾಗಿ ಕೇವಲ 6 ವರ್ಷ ಅಷ್ಟೇ ಆಗಿತ್ತು. ತುಮಕೂರಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಗಂಡ ಸಂಪತ್ ಕುಮಾರ್, ಇಬ್ಬರು ಮಕ್ಕಳು ಹಾಗೂ ಅತ್ತೆ ಮಾವರೊಂದಿಗೆ ಅನ್ಯೋನ್ಯವಾಗಿ ಸಂಸಾರ ಸಾಗಿತ್ತು.

ಆದರೆ ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮುಂದೆ ಇದ್ದ ಸಂಪಿನಲ್ಲಿ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಮೂವರ ಮೃತದೇಹ ಹೊರ ತೆಗೆದಿದ್ದಾರೆ. ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಸಾವಿನ ಕಾರಣ ನಿಗೂಢವಾಗಿದೆ. ಪೋಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

ಮದುವೆಗೆ ಒಪ್ಪದ ಪ್ರಿಯತಮೆ; ಮನನೊಂದು ಯುವಕ ನೇಣಿಗೆ ಶರಣು

0

ಕಾರವಾರ:- ಪ್ರೀತಿಸಿದ ಯುವತಿ ವಿವಾಹಕ್ಕೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲ ತಾಲೂಕಿನ ಅಸ್ಲಗದ್ದೆ ಗ್ರಾಮದಲ್ಲಿ ಜರುಗಿದೆ.

ಪವನ್ ಭಟ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಪವನ್ ಭಟ್ ವೃತ್ತಿಯಿಂದ ಪೌರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇದೇ ಊರಿನ ಯುವತಿಯೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಈ ಸಂಬಂಧವನ್ನ ವಿವಾಹವಾಗಿ ಮುಂದುವರಿಸಲು ಯುವಕ ಆಕೆಯ ಮೇಲೆ ಒತ್ತಡ ಹಾಕಿದ್ದಾನೆ. ಆದರೆ ಯುವತಿ ವಿವಾಹಕ್ಕೆ ನಿರಾಕರಿಸಿದ್ದಾಳೆ ಎಂದು ತಿಳಿದುಬಂದಿದೆ.

ಈ ನಿರಾಕರಣೆಯಿಂದ ಮನನೊಂದ ಪವನ್ ಭಟ್‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ಕುರಿತು ಮಾಹಿತಿ ಪಡೆದ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೌರ್ಜನ್ಯ ಪೀಡಿತ ಕುಟುಂಬಕ್ಕೆ ಭರವಸೆ ಮೂಡಿಸಿ: ಟಿ. ಶಾಮ್ ಭಟ್ 

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ಅವರು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ ಗ್ರಾಮದ ದಲಿತ ದೌರ್ಜನ್ಯ ಪೀಡಿತ ಕುಟುಂಬ ಸದಸ್ಯರ ಭೇಟಿ ಮತ್ತು ಗ್ರಾಮದಲ್ಲಿನ ವಾಸ್ತವಿಕ ಪರಿಸ್ಥಿತಿಯ ಅಧ್ಯಯನದ ನಂತರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿದರು.

ಸಭೆಯಲ್ಲಿ ಟಿ. ಶಾಮ್ ಭಟ್ ಮಾತನಾಡಿ, ದೌರ್ಜನ್ಯ ಪೀಡಿತ ಕುಟುಂಬಕ್ಕೆ ಭದ್ರತೆ ಕುರಿತು ಸಂಪೂರ್ಣ ಭರವಸೆ ಮೂಡಿಸಬೇಕು. ಗ್ರಾಮದಲ್ಲಿ ಎಲ್ಲ ಕುಟುಂಬಗಳು ಪ್ರಕರಣ ಪೂರ್ವದಲ್ಲಿ ಇದ್ದಂತೆ ಅನ್ಯೋನ್ಯವಾಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ವಾಸಿಸುವಂತೆ ವಾತಾವರಣ ರೂಪಿಸಬೇಕು. ಈ ನಿಟ್ಟಿನಲ್ಲಿ ಅಗತ್ಯವಿದ್ದರೆ ಗ್ರಾಮದಲ್ಲಿ ಮತ್ತಷ್ಟು ಸಭೆಗಳನ್ನು ಆಯೋಜಿಸಬೇಕು. ಗ್ರಾಮಸ್ಥರಲ್ಲಿ ಆಗಲಿ ಅಥವಾ ದೊಡಮನಿ ಕುಟುಂಬದಲ್ಲಿ ಯಾವುದೇ ಭಯದ ವಾತಾವರಣ ಇರದಂತೆ ನೋಡಿಕೊಳ್ಳಬೇಕು. ಯಾವುದೇ ವ್ಯಕ್ತಿ ಅಥವಾ ಕುಟುಂಬ ಸದಸ್ಯರ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೊಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಡಿವೈಎಸ್‌ಪಿ ವಿನೋದ ಮುಕ್ತೆದಾರ, ಡಿಸಿಆರ್‌ಇ ಡಿವೈಎಸ್‌ಪಿ ಸಂದೀಪಸಿಂಗ್ ಮುರಗೋಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಮ್. ಹೊನಕೇರಿ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಎಮ್.ಎಸ್, ತಹಸೀಲ್ದಾರ ಜಿ.ಆರ್. ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ, ವೀರಭದ್ರಪ್ಪ ಕಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅತೀಕಾ ಸಿದ್ದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಕರಣದ ತನಿಖೆಯನ್ನು ಈಗಾಗಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ. ಪೊಲೀಸ್ ಇಲಾಖೆ ತನಿಖೆಗೆ ಸಹಕಾರ ನೀಡಿ, ಗ್ರಾಮದಲ್ಲಿ ಅಗತ್ಯವಿದ್ದರೆ ಇನ್ನಷ್ಟು ಸೂಕ್ತ ಬಂದೋಬಸ್ತ್ ಕ್ರಮವಹಿಸಬೇಕು. ಡಿಸಿಆರ್‌ಇ ಪಾರದರ್ಶಕ ತನಿಖೆ ಮಾಡಿ ಆದಷ್ಟು ಬೇಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆ ನಿಯಮಾನುಸಾರ ಕುಟುಂಬಕ್ಕೆ ಅಗತ್ಯ ನೆರವು ನೀಡಬೇಕು. ಜಿಲ್ಲಾಡಳಿತ ಪ್ರಕರಣದ ಕುರಿತು ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ಕೈಗೊಂಡ ಕ್ರಮಗಳ ಬಗ್ಗೆ ವರದಿ ಪಡೆದು ಆಯೋಗಕ್ಕೆ ಸಲ್ಲಿಸಬೇಕು. ಗ್ರಾಮದ ಶಾಂತಿ, ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ನಿಗಾ ವಹಿಸಬೇಕೆಂದು ಟಿ. ಶಾಮ್ ಭಟ್ ಹೇಳಿದರು.

ಜ. 15ರಂದು ಹರಜಾತ್ರಾ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕರ ಸಂಕ್ರಾತಿ ಹಬ್ಬದ ಅಂಗವಾಗಿ ಜನವರಿ 15ರಂದು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಹರಜಾತ್ರೆ ನಡೆಯಲಿದ್ದು, ಈ ವೇಳೆ ಕಿತ್ತೂರು ರಾಣಿ ಚನ್ನಮ್ಮಾಜೀ ದ್ವಿಶತಮಾನ ವಿಜಯೋತ್ಸವ ಸಮಾರೋಪ ಸಮಾರಂಭ, ಲಿಂ. ಶ್ರೀ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 13ನೇ ವರ್ಷದ ಪುಣ್ಯ ಸ್ಮರಣೋತ್ಸವ, ವಚನಾನಂದ ಮಹಾಸ್ವಾಮಿಗಳವರ ಅಷ್ಟಮ ವಾರ್ಷಿಕ ಪೀಠಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರದ ಪಂಚಮಸಾಲಿ ಗುರುಗಳಾದ ವಚನಾನಂದ ಶ್ರೀಗಳು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಹರಿಹರದ ಪೀಠದಲ್ಲಿ 2020ರಿಂದ ಹರಜಾತ್ರಾ ಮಹೋತ್ಸವ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ ಎಂದರು.

ಹಾವೇರಿಯ ಖ್ಯಾತ ವೈದ್ಯ ಡಾ. ಬಸವರಾಜ ವೀರಾಪೂರ ಅವರನ್ನು 2026ರ ಹರಜಾತ್ರೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲೆಯ ಸಮಾಜ ಬಾಂಧವರು ಹರಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಪ್ರಸಕ್ತ ವರ್ಷದಿಂದ ಹರಿಹರ ಪೀಠದಿಂದ ವೀರರಾಣಿ ಕಿತ್ತೂರ ಚನ್ನಮ್ಮಳ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಹಾಗೂ 2026ರ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಈ ವೇಳೆ ಅಖಿಲ ಕರ್ನಾಟಕ ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ವೀರಣ್ಣ ಕರಿಬಿಷ್ಠಿ, ಎಸ್.ವಿ. ಪಲ್ಲೇದ, ಬಸವರಾಜ ವೀರಾಪೂರ, ಮೋಹನ್ ಲಿಂಬೆಕಾಯಿ, ಎಫ್.ವ್ಹಿ. ಮರಿಗೌಡ, ವಸಂತ ಪಡಗದ, ಅಶೋಕ ಸಂಕಣ್ಣನವರ, ಮಂಜು ಮಾಗಡಿ, ಮೋಹನ್ ಮಾಳಶೆಟ್ಟಿ, ಅನಿಲ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಹಿಂದಿನ ಜಾತ್ರಾ ಅವಧಿಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿತ್ತು. ಸುಮಾರು 6,543 ಯುವಕ-ಯುವತಿಯರು ಭಾಗವಹಿಸಿದ್ದರು. 14ಕ್ಕೂ ಹೆಚ್ಚು ವಿವಿಧ ಕಂಪನಿಗಳು ಹಾಜರಿದ್ದವು. ಈ ವೇಳೆ ಸುಮಾರು 6,453 ಉದ್ಯೋಗಗಳು ಸೃಷ್ಟಿಯಾದವು. ಶೈಕ್ಷಣಿಕ ಶೃಂಗ ಸಭೆ ನಡೆಸಲಾಗಿತ್ತು. ರಾಜ್ಯದ ವಿಶ್ವವಿದ್ಯಾಲಯದ ಕುಲಪತಿಗಳನ್ನು ಕರೆತಂದು ಮಾಹಿತಿ ನೀಡಲಾಯಿತು. ಅದರಂತೆ ಪ್ರಸಕ್ತ ವರ್ಷ ಕಿತ್ತೂರ ಚನ್ನಮ್ಮ ವಿಜಯೋತ್ಸವದ ದ್ವಿಶತಮಾನೋತ್ಸವದ ಸಮಾರೋಪ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಶಾಸಕರಿಗೊಂದು, ಜನಸಾಮಾನ್ಯರಿಗೊಂದು ಕಾನೂನೇ?!: ರಾಜು ಖಾನಪ್ಪನವರ 

0

ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ಪಿ.ಎಸ್.ಐ ಈರಣ್ಣ ರಿತ್ತಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅವರನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಗಮಿಸುವ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈರಣ್ಣ ರಿತ್ತಿ ವರ್ಗಾವಣೆಗೆ ಆಗ್ರಹಿಸಿ ನಿರಂತರವಾಗಿ ಪ್ರತಿಭಟನೆ ನಡೆಸಿದರೂ ಪ್ರಯೋಜನ ಆಗಿಲ್ಲ. ಈರಣ್ಣ ರಿತ್ತಿ ಭ್ರಷ್ಟ ಅಧಿಕಾರಿಯಾಗಿದ್ದು, ಲಂಚದ ರೂಪದಲ್ಲಿ ಪಡೆದ ಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ನೀಡುತ್ತಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ. ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಬೆಳಿಗ್ಗೆ ನೇಮಕವಾದ ಎಸ್ಪಿ ಅವರನ್ನು ರಾತ್ರೋರಾತ್ರಿ ವರ್ಗಾವಣೆಗೊಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ದ್ವಿಮುಖ ನೀತಿಯ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪ್ರಥಮವಾಗಿ ಬಳ್ಳಾರಿಯಲ್ಲಿ ವೈಯಕ್ತಿಕ ಗನ್‌ಮ್ಯಾನ್‌ನಿಂದ ಯುವಕನ ಕೊಲೆ ನಡೆದಿದೆ. ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ಉದ್ದೇಶವೇನಿತ್ತು? ರೆಡ್ಡಿ ಕುಟುಂಬವನ್ನು ಮುಗಿಸುವ ಹುನ್ನಾರ ರಾಜ್ಯ ಸರ್ಕಾರದಿಂದ ನಡೆದಿರಬಹುದು ಎಂಬ ಅನುಮಾನವಿದೆ. ಘಟನೆಗೆ ಸಂಬಂಧಿಸಿದಂತೆ ಎಂಟು ಪ್ರಕರಣ ದಾಖಲಾದರೂ ಯಾರನ್ನೂ ಬಂಧಿಸಿಲ್ಲ. ಶಾಸಕರಿಗೊಂದು, ಜನಸಾಮಾನ್ಯರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದ ಅವರು, ಈ ಮೂಲಕ ಡಾ. ಅಂಬೇಡ್ಕರ್ ಬರೆದ ಕಾನೂನಿಗೆ ಅವಮಾನ ಮಾಡಲಾಗುತ್ತಿದೆ ಎಂದರು.

ಜಗತ್ತಿಗೆ ರಾಮನನ್ನು ಸರಳವಾಗಿ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಬಳ್ಳಾರಿಯಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಬೆಂಬಲಿಗರು ಬಳ್ಳಾರಿಯಲ್ಲಿ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ತಮ್ಮ ಶಾಸಕರನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೊಲೆಯಾದ ಯುವಕನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಕುಮಾರ ನಡಗೇರಿ, ಶಿವಯೋಗಿ ಹಿರೇಮಠ, ಈರಣ್ಣ ಪೂಜಾರ, ಪಿ.ಎಸ್. ಕಾಳೆ, ಸೋಮು ಗುಡಿ, ಹುಲಗಪ್ಪ ವಾಲ್ಮೀಕಿ, ಸುನೀಲ ಮುಳ್ಳಾಳ, ಸತೀಶ್ ಕುಂಬಾರ, ಹರೀಶ್ ಗೋಸಾವಿ, ವೆಂಕಟೇಶ್ ದೊಡ್ಡಮನಿ, ಕಿರಣ್ ಹಿರೇಮಠ ಉಪಸ್ಥಿತರಿದ್ದರು.

“ಜ. 7ರಂದು ರಾಜ್ಯ ಸರ್ಕಾರದ ದ್ವಿಮುಖ ನೀತಿ ಖಂಡಿಸಿ ಮುಳಗುಂದ ನಾಕಾದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಎಲ್ಲ ಹಿಂದೂಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಬೇಕು”

ರಾಜು ಖಾನಪ್ಪನವರ.
ರಾಜ್ಯ ಸಂಚಾಲಕ,
ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟ.

ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ಜ.9ರಂದು ತಜ್ಞ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಕನ್ನಡ ಆಂಗ್ಲ ಮಾಧ್ಯಮ ಪ್ರಾಥಮಿಕ-ಪ್ರೌಢಶಾಲೆ, ಶ್ರೀಮತಿ ಜಾನಕಿಬಾಯಿ ರಜಪೂತ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಪುಟ್ಟಯ್ಯ ಸಂಗಯ್ಯ ಕೂಡ್ಲಮಠ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಖ್ಯಾತ ವೈದ್ಯರುಗಳು ಅಗಲಿದ ಶಿಕ್ಷಕರ ಸ್ಮರಣಾರ್ಥ ಜ.9ರಂದು ಎಸ್.ಎಸ್. ಕೂಡ್ಲಮಠ ಶಾಲಾವರಣದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ. ಬಳಿಗಾರ ಹೇಳಿದರು.

ಅವರು ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, 6 ದಶಕಗಳಿಂದ ಶಿಕ್ಷಣ ಸೇವೆಯಲ್ಲಿ ನಿರತವಾಗಿರುವ ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಶಾಲೆಯಲ್ಲಿ ಕಲಿತ ಖ್ಯಾತ ವೈದ್ಯರುಗಳಾದ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಎಸ್.ಪಿ. ಬಳಿಗಾರ, ಹೃದಯರೋಗ ತಜ್ಞರಾದ ಡಾ. ರವಿ ಸಾಲ್ಮನಿ, ಡಾವಣಗೆರೆ ಎಸ್.ಎಸ್. ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಡಾ. ಎನ್.ಕೆ. ಕಾಳಪ್ಪನವರ, ಚಿಕ್ಕ ಮಕ್ಕಳ ತಜ್ಞರಾದ ಡಾ. ವಿನೋದ ರಟಗೇರಿ, ತಜ್ಞವೈದ್ಯರಾದ ಪ್ರದೀಪ ಕಲ್ಲೊಳ್ಳಿಮಠ, ಲಂಡನ್‌ನ ರೇಡಿಯೋಲಾಜಿಸ್ಟ್ ಡಾ. ರಾಜಶ್ರೀ ಪಾಟೀಲ ಸೇರಿ ಸ್ಥಳೀಯ ವೈದ್ಯರುಗಳ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ.

ಆರೋಗ್ಯ ಶಿಬಿರವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸುವರು, ಎಸ್.ಪಿ. ಬಳಿಗಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಗದಗ ಜಿಮ್ಸ್ ನಿರ್ದೇಶಕರಾದ ಬಸವರಾಜ ಬೊಮ್ಮನಹಳ್ಳಿ, ಎಫ್.ಡಿ. ಹುನಗುಂದ ಉಪಸ್ಥಿತರಿರುವರು. ಸಂಜೆ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಲಿದೆ ಎಂದು ಹೇಳಿದರು.

ಈ ವೇಳೆ ಸಿ.ಎಂ. ರಾಗಿ, ಎಚ್.ಎಫ್. ತಳವಾರ, ಬಿ.ಎಂ. ಕಳಸದ, ಎಂ.ಎನ್. ಪಾಟೀಲ, ವೀರಣ್ಣ ಪವಾಡದ, ಪ್ರವೀಣ ಕಾಳಪ್ಪನವರ, ರಮೇಶ ಅಣ್ಣಿಗೇರಿ, ಸಿ.ಬಿ. ಮುಗಳಿ, ಎಲ್.ಪಿ. ಲಮಾಣಿ, ಆರ್.ಎಂ. ಜಂಬೇರಾಳ ಮುಂತಾದವರಿದ್ದರು.

ಮಾನವ ಹಕ್ಕುಗಳ ಉಲ್ಲಂಘನೆಯಾಗಬಾರದು: ಟಿ. ಶಾಮ್ ಭಟ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ಅವರು ಮಂಗಳವಾರ ಇನಾಂವೀರಾಪುರ ಗ್ರಾಮಕ್ಕೆ ಭೇಟಿ ನೀಡಿ, ದಲಿತ ಕುಟುಂಬದ ಮೇಲೆ ಆಗಿರುವ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ವಾಸ್ತವಿಕ ಪರಿಸ್ಥಿತಿಯನ್ನು ಅವಲೋಕಿಸಿದರು.

ದಲಿತ ಕುಟುಂಬಗಳು ವಾಸಿಸುವ ಓಣಿ, ದೌರ್ಜನ್ಯಕ್ಕೆ ಒಳಗಾದ ವಿವೇಕಾನಂದ ಅವರ ಮನೆ, ಕೃತ್ಯ ನಡೆದ ಸ್ಥಳ ಪರಿಶೀಲಿಸಿ, ಸ್ಥಳೀಯ ನಿವಾಸಿಗಳಿಂದ, ಪೊಲೀಸ್ ಅಧಿಕಾರಿಗಳಿಂದ ಹಾಗೂ ಇತರರಿಂದ ವಿವರವಾದ ಮಾಹಿತಿಯನ್ನು ಅವರು ಪಡೆದುಕೊಂಡರು.

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗದಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಮತ್ತು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಟಿ. ಶಾಮ್ ಭಟ್ ಹೇಳಿದರು.

ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಅವಕಾಶವಿಲ್ಲ ಎಂಬುದನ್ನು ಎಲ್ಲರೂ ಮನಗಂಡು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ದಲಿತ ಕುಟುಂಬಗಳಿಗೆ ಅಗತ್ಯ ಭದ್ರತೆ ಒದಗಿಸುವುದು, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸದುಪಯೋಗ ದೊರಕುವಂತೆ ನೋಡಿಕೊಳ್ಳುವುದು ಹಾಗೂ ಘಟನೆಗೆ ಸಂಬಂಧಿಸಿದಂತೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೊಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿವೈಎಸ್‌ಪಿ ವಿನೋದ ಮುಕ್ತೆದಾರ, ತಹಸೀಲ್ದಾರ ಜಿ.ಆರ್. ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅತೀಕಾ ಸಿದ್ದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವೇಕಾನಂದ ದೊಡಮನಿ ಕುಟುಂಬದ ಸದಸ್ಯರು ಇದ್ದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲಾಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಇನಾಂವೀರಾಪುರ ಗ್ರಾಮದ ಪ್ರಕರಣದ ಕುರಿತು ತನಿಖೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು, ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಪರವಾಗಿ ವಿಶೇಷ ಅಭಿಯೋಜಕರನ್ನು ನೇಮಿಸಲು ಮತ್ತು ಸದರಿ ಕುಟುಂಬಕ್ಕೆ ವಿಶೇಷ ಪರಿಹಾರ ನೀಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಪ್ರಸ್ತಾವನೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಎಂದು ಹೇಳಿದರು.

error: Content is protected !!