Home Blog Page 2172

ಸತತ ಮಳೆಗೆ ಮಣ್ಣಿನ‌ ಮನೆ ಕುಸಿತ; ವ್ಯಕ್ತಿಗೆ ಗಾಯ, ಕರು ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲಾದ್ಯಂತ ನಿನ್ನೆ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದ್ದು, ಬೆಳಗ್ಗೆಯೂ ಜಿಟಿಜಿಟಿ ಮಳೆ ಮುಂದುವರೆದಿದೆ. ಉತ್ತರಿ ಮಳೆಗೆ ರೈತರು ಮತ್ತು ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ.

ಜಿಲ್ಲೆಯ ಕುಕನೂರು ತಾಲೂಕು ಬೆಣಕಲ್ ಗ್ರಾಮದಲ್ಲಿ ಚನ್ನಪ್ಪ ಬಳಗೇರಿ ಎಂಬುವರ ಮಣ್ಣಿನ ಮನೆಯ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು, ಮಲಗಿದಲ್ಲೇ ಆಕಳು ಮೃತಪಟ್ಟಿದೆ. ಮನೆಯಲ್ಲಿ ಮಲಗಿದ್ದ ಚನ್ನಪ್ಪ ಬಳಗೇರಿ ಅವರ ಮಗ ಮಂಜುನಾಥ ಬಳಗೇರಿ(28) ಗಂಭೀರ ಗಾಯಗೊಂಡಿದ್ದಾನೆ.

ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಮಣ್ಣಿನಲ್ಲಿ ಮುಚ್ಚಿ ಹೋಗಿರುವ ಮೃತ ಆಕಳ ಕಳೆಬರ ಹೊರ ತೆಗೆಯಲು ಗ್ರಾಮಸ್ಥರ ಹರಸಾಹಸ ಮಾಡುತ್ತಿದ್ದಾರೆ.

ಇನ್ನು ಈ ಜಿಟಿಜಿಟಿ ಮಳೆ ಕೊಪ್ಪಳ ಜಿಲ್ಲಾದ್ಯಂತ ಇದ್ದು, ಜಿಲ್ಲೆಯ ಬಹುತೇಕ ಕಡೆ ಹಳ್ಳ- ಕೊಳ್ಳ ತುಂಬಿ ಹರಿಯುತ್ತಿವೆ. ಅಪಾರ ಬೆಳೆ ಮತ್ತು ಆಸ್ತಿ ಹಾನಿಯಾಗಿದ್ದು, ಮಳೆ ಮುಂದುವರೆದ ಹಿನ್ನೆಲೆ ಇನ್ನೂ ಪಕ್ಕಾ ಮಾಹಿತಿ ಲಭ್ಯವಾಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗ ಶುರುವಾಯ್ತು ದೀಪಿಕಾ ವಿಚಾರಣೆ; ಡ್ರಗ್ಸ್-ಬಾಲಿವುಡ್ ಪ್ರಕರಣಕ್ಕೆ ಹೊಸ ತಿರುವು?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಬೈ: ಬಾಲಿವುಡ್ ತಾರೆ, ಮೋಹಕ ನಗುವಿನ ಮಾದಕ ತಾರೆ, ಪುಟ್ಟಾಪೂರಾ ಕನ್ನಡತಿ ದೀಪಿಕಾ ಪಡುಕೋಣೆ ಇದೀಗ ಮಾದಕದ್ರವ್ಯ ನಿಯಂತ್ರಣ ಕಚೇರಿಗೆ ಆಗಮಿಸಿ, ವಿಚಾರಣೆ ಎದುರಿಸುತ್ತಿದ್ದಾರೆ. ಇವತ್ತು ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್‌ರವರ ವಿಚಾರಣೆಯೂ ನಡೆಯಲಿದೆ.


ಈ ವಿಚಾರಣೆಯಿಂದ ಬಾಲಿವುಡ್ ಮತ್ತು ಡ್ರಗ್ಸ್ ಮಾಫಿಯಾದ ಜೊತೆಗಿನ ನಂಟಿನ ಕುರಿತು ಸ್ಫೋಟಕ ವಿಷಯಗಳು ಬಯಲಾಗಬಹುದು ಎನ್ನಲಾಗುತ್ತಿದೆ. ದೀಪಿಕಾರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರನ್ನು ಶುಕ್ರವಾರ ಸುದೀರ್ಘವಾಗಿ ವಿಚಾರಣಗೆ ಒಳಪಡಿಸಲಾಗಿತ್ತು.

ಜೂನ್ 14 ರಂದು ನಿಧನರಾದ ನಟ ಸುಶಾಂತ್ ಸಿಂಗ್ ಅವರ ಸಾವಿನ ತನಿಖೆ ಈಗ ಬಾಲಿವುಡ್ ಮತ್ತು ಡ್ರಗ್ಸ್ ಸಂಪರ್ಕದ ಕಡೆ ತಿರುಗಿದೆ. ರಾಜ್ಯದಲ್ಲೂ ಡ್ರಗ್ಸ್ ಮತ್ತು ಸ್ಯಾಂಡಲ್‌ವುಡ್ ಕುರಿತು ಸಿಸಿಬಿ ತೀವ್ರ ತನಿಖೆ ನಡೆಸುತ್ತಿದೆ. ಸಂಜನಾ, ರಾಗಿಣಿ ಜೈಲು ಪಾಲಾಗಿದ್ದಾರೆ. ಐಂದ್ರಿತಾ, ದಿಗಂತ್, ಲೂಸ್ ಮಾದ ಖ್ಯಾತಿಯ ಯೋಗೇಶ್ ಮುಂತಾದವರು ವಿಚಾರಣೆಗೆ ಒಳಪಟ್ಟಿದ್ದಾರೆ. 

ಲಾಲೂ ಪುತ್ರ ಸಿಎಂ ಅಭ್ಯರ್ಥಿ: ಮಿತ್ರಪಕ್ಷಗಳ ವಿರೋಧ? ದೇಶದ ಗಮನ ಸೆಳೆದಿರುವ ಬಿಹಾರ್ ಚುನಾವಣೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಪಾಟ್ನಾ: ಬಿಹಾರ್ ವಿಧಾನಸಭೆಯ ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶುಕ್ರವಾರ ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ ನಂತರ, ಬಿಹಾರ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.
ಅಲ್ಲೀಗ ಎನ್‌ಡಿಎ ಭಾಗವಾಗಿರುವ ಸಮಾಜವಾದಿ ಪಾರ್ಟಿಯ ನಿತೀಶ್‌ಕುಮಾರ್ ಅವರೇ ಈ ಸಲವೂ ಮುಖ್ಯಮಂತ್ರಿ ಅಭ್ಯರ್ಥಿ.  

ಅಲ್ಲಿನ ಪ್ರಮುಖ ವಿರೋಧ ಪಕ್ಷವಾಗಿರುವ ಆರ್‌ಜೆಡಿ, ಲಾಲ್ಲೂ ಪ್ರಸಾದ್ ಯಾದವ್‌ರ ಪುತ್ರ ತೇಜಸ್ವಿ ಯಾದವ್ ತನ್ನ ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ, ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ/ಮಾಡಿಕೊಳ್ಳಲಿರುವ ಪಕ್ಷಗಳಿಗೆ ಇದು ಅಸಮಾಧಾನ ಮೂಡಿಸಿದೆ.
ರಾಷ್ಟ್ರೀಯ ಲೋಕ್ ಸಮತಾ ಪಾರ್ಟಿಯ ಉಪೇಂದ್ರ ಕುಶ್ವಾಹಾ, ತೇಜಸ್ವಿಯನ್ನು ನಾಯಕನೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತ ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದೆ. ‘ತನ್ನ ನಾಯಕನನ್ನು ಆರ್‌ಜೆಡಿ ಆಯ್ದುಕೊಂಡಿದೆ. ಅದು ಆ ಪಕ್ಷದ ವಿಷಯ. ಸಿಎಂ ಅಭ್ಯರ್ಥಿ ವಿಷಯ ಈಗ ಚರ್ಚೆಯಲ್ಲಿ ಇಲ್ಲ’ ಎಂದಿದೆ. ಈ ಕಡೆ ಎನ್‌ಡಿಎ ಮೈತ್ರಿಕೂಟ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರನ್ನೇ ಪ್ರಾಜೆಕ್ಟ್ ಮಾಡಿ ರಭಸದ ಪ್ರಚಾರ ಆರಂಭಿಸಿದೆ.


ಕೊರೋನಾ-ಲಾಕ್‌ಡೌನ್ ನಂತರ ನಡೆಯುತ್ತಿರುವ ಮಹತ್ವದ ಚುನಾವಣೆ ಇದಾಗಿದ್ದು, ಇದರ ಫಲಿತಾಂಶ ದೇಶದ ಮುಂದಿನ ರಾಜಕೀಯ ಆಗು-ಹೋಗುಗಳಿಗೆ ದಿಕ್ಸೂಚಿ ಆಗಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಅಕ್ಟೋಬರ್ 28 ರಿಂದ ಚುನಾವಣೆ ಆರಂಭವಾಗಲಿದ್ದು 3 ಹಂತಗಳಲ್ಲಿ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ವಿಶ್ವಾದಾದ್ಯಂತ ಹರಡಿರುವ ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯು ನಡೆಯುತ್ತಿರುವ ಬಹುದೊಡ್ಡ  ಚುನಾವಣೆ ಇದಾಗಿದೆ. ಹಾಗಾಗಿ ಚುನಾವಣಾ ಆಯೋಗವು ಚುನಾವಣೆ ನಡೆಸಲು ಹಲವು ನಿಬಂಧನೆಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೊರೋನಾ ಪಾಸಿಟಿವ್ ಇರುವವರು ಸಹ ಮತದಾನ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.


ಬಿಹಾರ ಚುನಾವಣೆಗಾಗಿ 46 ಲಕ್ಷ ಮಾಸ್ಕ್ಗಳು, 23 ಲಕ್ಷ ಕೈಗವಸುಗಳು, 7 ಲಕ್ಷ ಲೀಟರ್ ಸ್ಯಾನಿಟೈಸರ್, 6 ಲಕ್ಷ ಪಿಪಿಇ ಕಿಟ್‌ಗಳನ್ನು ಬಳಸಲು ನಿರ್ಧಿರಿಸಲಾಗಿದೆ ಎಂದು ಸುನೀಲ್ ಅರೋರಾ ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿಯೂ ಸಹ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ.

ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತರೂಢ ಎನ್‌ಡಿಎ ಮತ್ತು ಮಹಾಮೈತ್ರಿ ನಡುವೆ ನೇರ ಹಣಾಹಣಿ ನಡೆಯಲಿದೆ. ಎನ್‌ಡಿಯ ಮೈತ್ರಿಕೂಟದಲ್ಲಿ ನಿತೀಶ್ ಕುಮಾರ್‌ರವರ ಜೆಡಿಯು, ಬಿಜೆಪಿ, ಚಿರಾಗ್ ಪಾಸ್ವಾನ್‌ರವರ ಎಲ್‌ಜೆಪಿ ಮತ್ತು ಜತಿನ್ ರಾಮ್ ಮಾಂಝಿಯವರ ಹಿಂದೂಸ್ತಾನ್ ಅವಮ್ ಮೋರ್ಚಾ ಸೇರಿವೆ. ಇದರ ಪ್ರತಿಸ್ಪರ್ಧಿ ಮಹಾಮೈತ್ರಿಯಲ್ಲಿ ಲಾಲು ಪ್ರಸಾದ್ ಯಾದವ್‌ರವರ ಆರ್‌ಜೆಡಿ, ಕಾಂಗ್ರೆಸ್ ಪ್ರಮುಖ ಪಕ್ಷಗಳಾಗಿವೆ.


ಸದ್ಯಕ್ಕೆ ಲಾಲು ಪ್ರಸಾದ್ ಯಾದವ್‌ರವರು ಜೈಲಿನಲ್ಲಿರುವ ಕಾರಣ ಅವರ ಮಗ ತೇಜಸ್ವಿ ಯಾದವ್ ಆರ್‌ಜೆಡಿ ಮತ್ತು ಮಹಾಮೈತ್ರಿಯನ್ನು ಮುನ್ನಡೆಸುತ್ತಿದ್ದಾರೆ. ನಿತೀಶ್ ಕುಮಾರ್‌ರವರು ಕೊರೋನಾ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿರುವ ಅವರು ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದ್ದಾರೆ.

ಹಾಲಿ ಮುಖ್ಯಮಂತ್ರಿ ಜೆಡಿಯುನ ನಿತೀಶ್ ಕುಮಾರ್ ನಾಲ್ಕನೇ ಬಾರಿಗೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. 2015 ರಲ್ಲಿ ಆರ್‌ಜೆಡಿ, ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಜಯಿಸಿ ಸಿಎಂ ಆಗಿದ್ದ ಅವರು 2017 ರಲ್ಲಿ ಮೈತ್ರಿ ಮುರಿದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ಕಾರಣಕ್ಕೆ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚುನಾವಣಾ ಚತುರ ಎಂದೇ ಖ್ಯಾತಿಯಾದ ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ಯುವಜನರನ್ನು ಸಂಘಟಿಸುತ್ತಿದ್ದಾರೆ. ಅದೇ ರೀತಿಯಾಗಿ ಕಳೆದ ಲೋಕಸಭೆಯಲ್ಲಿ ಸ್ಪರ್ಧಿಸಿ ಗಮನಸೆಳೆದಿದ್ದ ಸಿಪಿಐ ಪಕ್ಷದ ಯುವ ಮುಖಂಡ ಕನ್ಹಯ್ಯ ಕುಮಾರ್ ಸಹ ಈ ಚುನಾವಣೆಯಲ್ಲ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ.

ಅದೇ ರೀತಿಯಾಗಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿರುವ ಯುವ ದಲಿತ ಹೋರಾಟಗಾರ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಕೂಡ ‘ಅಜಾದ್ ಸಮಾಜ ಪಕ್ಷ’ ಸ್ಥಾಪಿಸಿದ್ದು, ಬಿಹಾರ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಚೀನಾ, ಪಾಕಿಸ್ತಾನಕ್ಕೆ ಪಾಠ ಮಾಡಲಿರುವ ಪ್ರಧಾನಿ? ಇವತ್ತು ಸಂಜೆ ವಿಶ್ವಸಂಸ್ಥೆ ಮೀಟಿಂಗ್‌ನಲ್ಲಿ ಮೋದಿ ಭಾಷಣ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇವತ್ತು ಸಂಜೆ ಭಾರತೀಯ ಕಾಲಮಾನ 6.30ಕ್ಕೆ (ನ್ಯೂಯಾರ್ಕ್ ಕಾಲಮಾನ 9.00 ಎ.ಎಂ) ವಿಡಿಯೊ ಕಾನ್ಫರೆನ್ಸ್ ಮೂಲಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೀಟಿಂಗ್‌ನಲ್ಲಿ ಪ್ರಧಾನಿ ನರೆಂದ್ರ ಮೋದಿ ಮಾತನಾಡಲಿದ್ದಾರೆ.

ಇಂಡಿಯನ್ ಎಕ್ಸ್ ಪ್ರೆಸ್ ಹೆಕ್ಕಿರುವ ಮಾಹಿತಿ ಪ್ರಕಾರ, ಪ್ರಧಾನಿ ಚೀನಾ ಮತ್ತು ಪಾಕಿಸ್ತಾನಗಳ ಧೋರಣೆಗಳ ಮೇಲೆ ದಾಳಿ ಮಾಡಲಿದ್ದಾರೆ. ಇದು ಒಂದು ಸೂಕ್ಷ್ಮ ನಡೆಯಾಗಿದ್ದು, ವಿಶ್ವ ಶಾಂತಿಗೆ ಚೀನಾದ ಪಾತ್ರವನ್ನು ಒತ್ತಿ ಹೇಳುತ್ತಲೇ, ಅದು ಗಡಿ ವಿಷಯದಲ್ಲಿ ಮಾಡುತ್ತಿರುವ ತಂಟೆಯನ್ನು ಬಿಚ್ಚಿಡಲಿದ್ದಾರೆ.

ಆದರೆ ಪಾಕಿಸ್ತಾನದ ಸಂಗತಿ ಮಾತನಾಡುವಾಗ, ಆ ದೇಶ ಭಯೋತ್ಪಾದಕತೆಯನ್ನು ಪೋಷಿಸುತ್ತಿರುವ ಬಗ್ಗೆ ಕಟುವಾಗಿ ಮಾತನಾಡಲಿದ್ದಾರೆ ಎಂದು ಎಕ್ಸ್ ಪ್ರೆಸ್ ವರದಿ ಮಾಡಿದೆ. 

ಶನಿವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ

0

ವಿಜಯಸಾಕ್ಷಿ ಕನ್ನಡ ದಿಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ  53190 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು :22 ಕ್ಯಾರಟ್: 47,300 ರೂ., 24 ಕ್ಯಾರಟ್: 51,570 ರೂ.
ಹುಬ್ಬಳ್ಳಿ: 22 ಕ್ಯಾರಟ್:  46,704 ರೂ., 24 ಕ್ಯಾರಟ್: 50,950 ರೂ.

ಕಪ್ಪತಗುಡ್ಡದ ಮೇಲೆ ಚಿನ್ನದ ಕರಿನೆರಳು: ರಾಮಘಡ್ ಕಂಪನಿಯಿಂದ ಅರ್ಜಿ, ಸರ್ಕಾರದ ಮಟ್ಟದಲ್ಲಿ ಲಾಬಿ! 

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕಪ್ಪತಗುಡ್ಡದಲ್ಲಿರುವ ಚಿನ್ನದ ನಿಕ್ಷೇಪಗಳ ಮೇಲೆ ಮತ್ತೊಮ್ಮೆ ಗಣಿ ಮಾಫಿಯಾದ ಕಣ್ಣು ಬಿದ್ದಿದೆ. ಜನರ ಪ್ರತಿರೋಧವಿದ್ದರೂ, ಪರಿಸರಪ್ರಿಯರ ಆಕ್ಷೇಪಗಳಿದ್ದರೂ ಗಣಿ ಲಾಬಿ ಮಾತ್ರ ಮರಳಿ ಯತ್ನ ಮಾಡುವುದನ್ನು ಬಿಟ್ಟಿಲ್ಲ. ಸದ್ಯಕ್ಕೆ ಮತ್ತೊಮ್ಮೆ ಚಿನ್ನದ ಗಣಿಗಾರಿಕೆಯ ಕರಿನೆರಳು ಕಪ್ಪತಗುಡ್ಡವನ್ನು ಆವರಿಸಿದೆ. ರಾಮಘಡ್ ಮಿನರಲ್ಸ್ ಆ್ಯಡ್ ಮೈನಿಂಗ್ ಲಿಮಿಟೆಡ್ (ಆರ್‌ಎಂಎಂಎಲ್) ಈಗ ಚಿನ್ನ ಹೆಕ್ಕಲು ಅನುಮತಿಗಾಗಿ ಕಾದು ಕುಳಿತಿದ್ದು, ಅನುಮತಿಗೆ ಅಗತ್ಯವಾದ ಎಲ್ಲ ತೆರೆಮರೆಯ ‘ಕ್ರಿಯೆ’ಗಳಲ್ಲಿ ಅದು ನಿರತವಾಗಿದೆ ಎನ್ನಲಾಗಿದೆ.

ವನ್ಯಜೀವಿಧಾಮವಾಗಿರುವ ಕಪ್ಪತಗುಡ್ಡ ಪ್ರದೇಶದಲ್ಲಿ ಯಾವುದೇ ಬೃಹತ್ ಕಾಮಗಾರಿಗಳನ್ನೇ ನಡೆಸುವಮತಿಲ್ಲ. ಅಂತದ್ದರಲ್ಲಿ ಗುಡ್ಡವನ್ನೇ ಆಳಕ್ಕೆ ಬಗೆಯುವ ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲಂತೂ ಬರುವುದಿಲ್ಲ. ಆದರೂ ಕಂಪನಿಯೊಂದು ಬಿಟ್ಟೂ ಬಿಡದೇ ಇದರ ಹಿಂದೆ ಬಿದ್ದಿರುವುದನ್ನು ನೋಡಿ, ಚಿನ್ನದ ಗಣಿಗಾರಿಕೆಗೆ ಎಲ್ಲಿ ಅನುಮತಿ ಸಿಕ್ಕೇ ಬಿಡುತ್ತದೆಯೋ ಎಂದು ಪರಿಸರವಾದಿಗಳು ಆತಂಕಗೊಂಡಿದ್ದಾರೆ. ಕೆಲವರು ಪ್ರತಿಭಟನೆಗೂ ತಯಾರಾಗುತ್ತಿದ್ದಾರೆ.

ಈಗಾಗಲೇ ಜಿಲ್ಲೆಯ ಅರಣ್ಯ ಇಲಾಖೆಗೆ ಈ ಅರ್ಜಿಯ ಕುರಿತಂತೆ ಪರಿಶೀಲನೆ ನಡೆಸಿ ವರದಿ ಕಳಿಸಲು ರಾಜ್ಯ ಅರಣ್ಯ ಇಲಾಖೆಯ ಕೇಂದ್ರ ಕಚೇರಿ ಸೂಚಿಸಿದೆ ಎಂದು ಡಿಎಫ್‌ಒ ಸೂರ್ಯಸೇನ್ ತಿಳಿಸಿದ್ದಾರೆ.

              ಪದೇ ಪದೇ ಅರ್ಜಿ!
ಬಳ್ಳಾರಿ ಮೂಲದ ಆರ್‌ಎಂಎಂಎಲ್ ಕಪ್ಪತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಅವಕಾಶ ಕೋರಿ 2019 ಅಕ್ಟೋಬರ್ 10 ರಂದು ಅರ್ಜಿ ಸಲ್ಲಿಸಿತ್ತು. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಗ್ರಾಮದ ಸರ್ವೆ ನಂ. 45, 49 ಮತ್ತು 50ರಲ್ಲಿ ಒಟ್ಟು 39.9 ಹೆಕ್ಟೇರ್ ಅರಣ್ಯ ಭೂಮಿಯನ್ನು ಚಿನ್ನದ ಗಣಿಗಾರಿಕೆ ನಡೆಸಲು ಅವಕಾಶ ಕೋರಿ ಅರಣ್ಯ ಇಲಾಖೆ, ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿತ್ತು. ಆರ್‌ಎಂಎಂಎಲ್ ಅರ್ಜಿ ಪರಿಶೀಲಿಸಿದ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿಗಳು, ಕೆಲವು ಮಹತ್ವದ ಮಾಹಿತಿ ಒದಗಿಸಿಲ್ಲ. ಹೀಗಾಗಿ ಈ ಅರ್ಜಿ ಅಪೂರ್ಣವಾಗಿದೆ.

ಅಗತ್ಯ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ ಎಂದು ನಾಲ್ಕು ಪುಟದ ವಿವರಣೆ ನೀಡಿತ್ತು. ಹೀಗಾಗಿ ಆರ್‌ಎಂಎಂಎಲ್ ಕಂಪನಿ, ಈಗ ಅಗತ್ಯ ದಾಖಲೆ, ಮಾಹಿತಿಯನ್ನು ಜೋಡಿಸಿಕೊಂಡು ಮತ್ತೆ ಚಿನ್ನದ ಗಣಿಗಾರಿಕೆಗೆ ಅರ್ಜಿ ಹಾಕಿದೆ. ಅರಣ್ಯ ಇಲಾಖೆ ಅರ್ಜಿ ತಿರಸ್ಕರಿಸುವ ಬದಲು, ಪರಿಒಶೀಲನೆ ನಡೆಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತಂತೆ ಇನ್ನೂ ಎಚ್ಚರ ವಹಿಸಿಲ್ಲ. ಪರಿಸರವಾದಿಗಳು ಮತ್ತು ಸಂಘಟನೆಗಳು ಈ ಬಗ್ಗೆ ಗಮನ ಹರಿಸಿ ಕಪ್ಪತಗುಡ್ಡವನ್ನು ಉಳಿಸಿಕೊಳ್ಳ ಬೇಕಾಗಿದೆ.

ಕ್ವಾರಿಗಳ ಸಂಚು

ಇನ್ನೊಂದು ಕಡೆ ಶಿರಹಟ್ಟಿ ತಾಲೂಕಿನ ವ್ಯಾಪ್ತಿಗೆ ಬರುವ ವನ್ಯಜೀವಿಧಾಮ ಬ್ಲಾಕ್-4 ಅನ್ನು ಅಧಿಸೂಚನೆಯಿಂದ ಹೊರಗಿಡಲು ಜಲ್ಲಿಕಲ್ಲು ಮತ್ತು ಎಂ-ಸ್ಯಾಂಡ್ ಮಾಫಿಯಾ ಜನಪ್ರತಿನಿಧಿಗಳ ಮೂಲಕ ಒತ್ತಡ ಹೇರುತ್ತಿದೆ. ಒಂದು ಕಡೆ ಚಿನ್ನದ ಗಣಿಗಾರಿಕೆ, ಇನ್ನೊಂದು ಕಡೆ ಕಲ್ಲು ಗಣಿಗಾರಿಕೆ ಕಪ್ಪತಗುಡ್ಡಕ್ಕೆ ಕರಿನೆರಳಿನಂತೆ ಕಾಡುತ್ತಿವೆ.


   ಅರ್ಜಿ ಸ್ವೀಕರಿಸುವುದೇ ತಪ್ಪು!

2019 ಜನವರಿ 10 ರಂದು ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಸರಕಾರ ಘೋಷಣೆ ಮಾಡಿದ ನಂತರವೂ ಗಣಿ ಕಂಪನಿ ಚಿನ್ನದ ಗಣಿಗಾರಿಕೆ ನಡೆಸಲು ಅವಕಾಶ ಕೋರಿದೆ. ವನ್ಯಜೀವಿ ಧಾಮ ಘೋಷಣೆ ಮಾಡಿದ ನಂತರ ಗಣಿಗಾರಿಕೆ ನಡೆಸಲು ಅವಕಾಶವಿಲ್ಲ ಎಂದು ನೇರವಾಗಿ ಗಣಿ ಕಂಪನಿಗೆ ಉತ್ತರಿಸುವ ಬದಲು, ಇನ್ನಷ್ಟು ದಾಖಲೆಯೊಂದಿಗೆ ಪುನಃ ಅರ್ಜಿ ಹಾಕಿ ಎಂದು ಇಲಾಖೆಯವರೇ ‘ಬೆಂಬಲ’ ಕೊಡುತ್ತಿರುವುದನ್ನು ನೋಡಿದರೆ, ಆರ್‌ಎಂಎಂಎಲ್ ಕಂಪನಿಯ ಬಾಹುಗಳು ಇಲಾಖೆಯ ಒಳಕ್ಕೂ ಚಾಚಿವೆ ಎಂಬುದು ಸ್ಪಷ್ಟ ಎನ್ನುತ್ತಾರೆ ಪರಿಸರವಾದಿಗಳು.

ಜಿಲ್ಲೆಯಲ್ಲಿ ಶುಕ್ರವಾರ 78 ಜನರಿಗೆ ಸೋಂಕು; 87 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಶುಕ್ರವಾರ ದಿ 25 ರಂದು 78 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

78 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8757 ಕ್ಕೇರಿದೆ. ಶುಕ್ರವಾರ 87 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7840 ಜನ ಗುಣಮುಖರಾಗಿದ್ದಾರೆ.

790 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬುಧವಾರ ಜಿಲ್ಲಾಡಳಿತ ನೀಡಿದ ಮಾಹಿತಿಯಂತೆ ಇದುವರೆಗೂ ಜಿಲ್ಲೆಯಲ್ಲಿ 127 ಜನ ಕೊವಿಡ್ ಗೆ ಮೃತಪಟ್ಟಿದ್ದಾರೆ.

ತಾಲೂಕುವಾರು ಒಟ್ಟು ಸೋಂಕಿತರ ವಿವರ: ಗದಗ-31, ಮುಂಡರಗಿ-12, ನರಗುಂದ-06, ರೋಣ-18, ಶಿರಹಟ್ಟಿ-07, ಹೊರಜಿಲ್ಲೆಯ ಪ್ರಕರಣಗಳು-04.

ಕೊವಿಡ್-19 ಸಂತ್ರಸ್ತ ಕಾರ್ಮಿಕರ ನೆರವಿಗೆ ಸಂಸದ ಕರಡಿ ಸಂಗಣ್ಣ ಸ್ಪಂದನೆ: ಕಾರ್ಮಿಕ ಇಲಾಖೆಯಿಂದ ಆಹಾರ ಸಾಮಾಗ್ರಿ ಕಿಟ್ ನೀಡಲು ಸಚಿವ ಶಿವರಾಂ ಹೆಬ್ಬಾರ್ ಗೆ ಮನವಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,ಕೊಪ್ಪಳ :
ಕೊವಿಡ್-19 ಲಾಕ್ ಡೌನ್ ಸಂದರ್ಭದಿಂದ ಇಲ್ಲಿಯವರೆಗೂ ಸರಿಯಾದ ಉದ್ಯೋಗ ಸಿಗದೆ ಸಂಕಷ್ಟದಲ್ಲಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪಗತಿಯಲ್ಲಿ ಬರುವ ಸಾವಿರಾರು ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರ ನೆರವಿಗೆ ಸ್ಪಂದಿಸಿರುವ ಸಂಸದ ಕರಡಿ ಸಂಗಣ್ಣ ಅವುರು ಕಾರ್ಮಿಕ ಇಲಾಖೆಯಿಂದ ಆಹಾರ ಸಾಮಾಗ್ರಿ ಕಿಟ್ ಗಳನ್ನು ನೀಡುವುಂತೆ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರದಿಂದ ಸಿಗುವ ಸೌಲಭ್ಯಗಳೊಂದಿಗೆ ಇತರ ದಾನಿಗಳ ನೆರವಿನೊಂದಿಗೆ ಕೃಷಿ ಕೂಲಿಕಾರರು, ಕಾರ್ಮಿಕರು, ಬಡವರಿಗೆ ದಿನಸಿ ಕಿಟ್ ಗಳು ಸೇರಿದಂತೆ ಇತರೆ ಸಹಾಯಹಸ್ತ ನೀಡಿರುವ ಸಂಸದರು ಕಾರ್ಮಿಕ ಇಲಾಖೆಯಿಂದ ಲೋಕಸಭಾ ಕ್ಷೇತ್ರದಲ್ಲಿರುವ ಸುಮಾರು 25 ಸಾವಿರ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರುಗಳಿಗೆ ಕೊವಿಡ್-19 ಪೂರ್ವದಲ್ಲಿದ್ದಂತೆ ಪ್ರತಿನಿತ್ಯ ಉದ್ಯೋಗ ಸಿಗದೆ ಜೀವನ ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗಿರುವದರಿಂದ ಆಹಾರ ಧ್ಯಾನ್ಯ ಸಾಮಾಗ್ರಿ ದಿನಸಿ ಕಿಟ್ ಗಳನ್ನು ಇಲಾಖೆಯಿಂದ ನೀಡಲು ಕೋರಿದ್ದಾರೆ.

ಕೋಟ್

ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಜಿಲ್ಲೆಯ ಹಾಗೂ ಲೋಕ ಸಭಾ ಕ್ಷೇತ್ರದಲ್ಲಿನ ಕಾರ್ಮಿಕರು, ಅಸಂಘಟಿತ ವರ್ಗದ ಜನರ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲಾಗಿದ್ದು, ಪ್ರಸ್ತುತ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ಇಲಾಖೆಯಿಂದ ಆಹಾರ ಸಾಮಾಗ್ರಿ ಕಿಟ್ ನೀಡಲು ಮಾಡಿಕೊಂಡ ಮನವಿಗೆ ಸಚಿವರು ಸ್ಪಂದಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.

ಕರಡಿ ಸಂಗಣ್ಣ, ಸಂಸದರು ಕೊಪ್ಪಳ.

ಗ್ರಾಮೀಣ ಬ್ಯಾಂಕ್ ಕಳ್ಳತನ ಪ್ರಕರಣ: ಆರೋಪಿಗಳ ಪತ್ತೆಗೆ 4 ವಿಶೇಷ ತಂಡ ರಚನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ನಿನ್ನೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನಡೆದಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ 4 ವಿಶೇಷ ತಂಡಗಳನ್ನು ರಚಿಸಲಾಗಿದೆ.

ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ಯಾಂಕಿನ ವ್ಯವಸ್ಥಾಪಕ ರವಿ ಭೀಮಪ್ಪ ಕೋಟೆಪ್ಪಗೋಳ ಸೆ. 24 ರಂದು ರಾತ್ರಿ ತಮ್ಮ ಬ್ಯಾಂಕ್ ನಲ್ಲಿ ಕಳ್ಳತನವಾಗಿರುವ ಕುರಿತಂತೆ ದೂರು ದಾಖಲಿಸಿದ್ದಾರೆ.

ಬ್ಯಾಂಕ್ ನ ಲಾಕರ್ ನಲ್ಲಿದ್ದ 1,24,80,333 ರೂಪಾಯಿ ಮೌಲ್ಯದ 3 ಕೆ.ಜಿ 761 ಗ್ರಾಂ ಚಿನ್ನಾಭರಣಗಳು ಹಾಗೂ 21,75,572 ರೂಪಾಯಿ ನಗದು ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರು ನೀಡಿದ್ದಾರೆ.ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ 4 ವಿಶೇಷ ತನಿಖಾ ತಂಡ ರಚಿಸಲಾಗಿದೆ.

ಗಂಗಾವತಿ ಡಿವೈಎಸ್ ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ಯಲಬುರ್ಗಾ ಸಿಪಿಐ ನಾಗರಡ್ಡಿ, ಕೊಪ್ಪಳ ನಗರ ಠಾಣೆಯ ಮಾರುತಿ ಗುಳಾರಿ, ಕುಕನೂರು ಪಿಎಸ್ಐ ವೆಂಕಟೇಶ, ಡಿಸಿಐಬಿ ಘಟಕದ ಪಿಎಸ್ಐ ಅಮರೇಶ ಹುಬ್ಬಳ್ಳಿ ಹಾಗೂ ನುರಿತ ತಾಂತ್ರಿಕ ಸಿಬ್ಬಂದಿಯನ್ನೊಳಗೊಂಡ ನಾಲ್ಕು ವಿಶೇಷ ಪತ್ತೆ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಮಾಹಿತಿ ನೀಡಿದ್ದಾರೆ.

ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ! ನಿಜಕ್ಕೂ ದುಡ್ಡು ಕೇಳಿದ್ಯಾರು?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ:
ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿದ್ದಾರೆ. ಕಂಪ್ಯೂಟರ್ ಆಪರೇಟರ್ ಕುಮಾರಸ್ವಾಮಿ ಮಠದ 1 ಲಕ್ಷ ರೂಪಾಯಿ ನಗದು ಲಂಚವಾಗಿ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.


ಗುತ್ತಿಗೆದಾರ ಅಕ್ತರಸಾಬ್ ಖಾಜಿ ಎಂಬುವರು ಕುಕನೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ 24 ಲಕ್ಷ ರೂಪಾಯಿ ಅನುದಾನದ ಕಾಮಗಾರಿ ನಿರ್ವಹಿಸಿದ್ದರೆ. ಇದರ ಬಿಲ್ ಪಾವತಿಗೆ ಒಟ್ಟು 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 1 ಲಕ್ಷ ರೂಪಾಯಿ ಪಡೆಯುತ್ತಿದ್ದೇನೆ ಎಂದು ಕಂಪ್ಯೂಟರ್ ಆಪರೇಟರ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.


ಆದರೆ, ವಾಸ್ತವದಲ್ಲಿ ಕಂಪ್ಯೂಟರ್ ಆಪರೇಟರ್ ಕೇವಲ ನೆಪ ಮಾತ್ರ. ಈತನ ಮೂಲಕ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್(ಜೆಇ) ಮತ್ತು ಮುಖ್ಯಾಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ಆಪರೇಟರ್ ನ ಸೂಕ್ತ ತನಿಖೆ ನಡೆಯಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಎಸಿಬಿ ಬಳ್ಳಾರಿ ಎಸ್ಪಿ ಗುರುನಾಥ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

error: Content is protected !!