Home Blog Page 2173

ಮರಳುಗಾರಿಕೆ ದೋಣಿ ಮುಳುಗಡೆ; 7 ಜನರ ರಕ್ಷಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಉತ್ತರ ಕನ್ನಡ: ಮರಳುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ನದಿಯಲ್ಲಿ ಮುಳುಗಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

ಕುಮಟಾ ತಾಲೂಕಿನ ಮಾನೀರ್ ಗ್ರಾಮದ ಸಮೀಪ ಅಘನಾಶಿನಿ ನದಿಯಲ್ಲಿ ಈ ಅವಘಡ ಸಂಭವಿಸಿದ್ದು ದೋಣಿಯಲ್ಲಿದ್ದ 7 ಮಂದಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೀವಗಿಯ ನಿತ್ಯ ಅಂಬಿಗ ಎನ್ನುವವರಿಗೆ ಸೇರಿದ ದೋಣಿ ಇದಾಗಿದ್ದು ಬೆಳಿಗ್ಗೆ ಮರಳುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿಯ ಮೇಲೆ ಭಾರ ಹೆಚ್ಚಾದ ಪರಿಣಾಮ ನದಿಯಲ್ಲಿ ಮಗುಚಿದ್ದು ಸಮೀಪದಲ್ಲಿದ್ದ ದೋಣಿಯವರು ನೀರಲ್ಲಿ ಬಿದ್ದವರನ್ನು ರಕ್ಷಣೆ ಮಾಡಿದ್ದಾರೆ.

ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ ಗೋವಾ; ಕೆಂಡಾಮಂಡಲವಾದ ಮಹದಾಯಿ ಹೋರಾಟಗಾರರು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕಳಸಾ ಬಂಡೂರಿ ನಾಲಾ ಯೋಜನೆಯ ಹೋರಾಟವು ಮೂರು ದಶಕಗಳ ದಾಹ ನೀಗಿಸುವ ಭರವಸೆ ಮೂಡಿಸಿತ್ತು. ಈ ನಡುವೆ ಗೋವಾ ಸರಕಾರ ಏಕಾಏಕಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಕರ್ನಾಟಕ ಸರಕಾರದ ವಿರುದ್ಧ ನ್ಯಾಯ್ಯಾಂಗ ನಿಂದನೆ ಆರೋಪ ಮಾಡಿ ಅರ್ಜಿ ಸಲ್ಲಿಸಿದೆ. ಇದರಿಂದ ಹೋರಾಟದ ಶಕ್ತಿಕೇಂದ್ರವಾಗಿದ್ದ ಗದಗನಲ್ಲಿ ಹೋರಾಟಗಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಳಸಾ ಬಂಡೂರಿ ಯೋಜನೆಯು ಸಾವಿರಾರು ರೈತರ ಹೋರಾಟದ ಶ್ರಮಕ್ಕೆ ಸಿಕ್ಕ ಗೆಲುವಾಗಿತ್ತು.
ಕಳಸಾ ನಾಲೆ ಯೋಜನೆ ಆರಂಭಿಸಲು ಕ್ಷಣಗಣನೆ ಎಣಿಸುತ್ತಿರುವ ಸಂದರ್ಭದಲ್ಲೇ ಗೋವಾ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದೆ. ಗೋವಾ ಸರಕಾರ ಮತ್ತೆ ತನ್ನ ಮೂಗು ತೂರಿಸಲು ಮುಂದಾಗಿದೆ. ನ್ಯಾಯ್ಯಾಂಗ ನಿಂದನೆ ಆರೋಪ ಮಾಡಿ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅರ್ಜಿ ಸಲ್ಲಿಸಿರುವುದು ರಾಜ್ಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಕಳಸಾ ಯೋಜನೆ ಇನ್ನೇನು ಬಗೆಹರಿಯಿತು. ಉತ್ತರ ಕರ್ನಾಟಕದ ಜನರ ನೀರಿನ ದಾಹ ನೀಗಿತು ಎಂದು ಭಾವಿಸಿದ್ದೆವು. ಮಲಪ್ರಭಾ ನದಿ ನಿರಂತರವಾಗಿ ತುಂಬಿ ಹರಿದು ಈ ಭಾಗದಲ್ಲಿ ಸದಾ ಹಸಿರಿನಿಂದ ನಳನಳಿಸುತ್ತದೆ ಎಂದುಕೊಂಡವರಿಗೆ ಈಗ ಗೋವಾ ಆಘಾತ ನೀಡಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಧ್ಯೆ ಪ್ರವೇಶಿಸಿ ಈ ಭಾಗದ ಜನರಿಗೆ ನ್ಯಾಯ ಒದಗಿಸಬೇಕು ಎನ್ನುವುದು ರೈತರ ಆಗ್ರಹ.

ಈಗಾಗಲೇ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರ ಅಧಿಸೂಚನೆ ಹೊರಡಿಸಲು 2020ರ ಫೆಬ್ರವರಿ 2ರಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಫೆ.27ಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿ ನೀರು ಬಳಕೆಗೆ ಸಮ್ಮತಿ ನೀಡಿತ್ತು. ಹೀಗಾಗಿ ಮಹದಾಯಿ ನದಿ ತಿರುವು ಯೋಜನೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಈಗ ಮತ್ತೆ ಗೋವಾ ಸರ್ಕಾರ ತಕರಾರು ತೆಗೆದು ಸುಪ್ರೀಂ ಮೇಟ್ಟಿಲೇರಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು. ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕು. ಒಂದು ವೇಳೆ ಇದೇ ರೀತಿ ರಾಜಕೀಯ ಮುನ್ನೆಲೆಗೆ ಬಂದರೆ ಮತ್ತೆ ಕ್ರಾಂತಿಗೆ ಸಿದ್ಧ. ವಿಜಯ ಕುಲಕರ್ಣಿ, ಮಹದಾಯಿ ಹೋರಾಟಗಾರ

ಗೋವಾ ಮುಖ್ಯಮಂತ್ರಿಯಿಂದ ನ್ಯಾಯಾಂಗ ನಿಂದನೆ ಸಲ್ಲಿಸಿದ್ದು ಹಾಸ್ಯಾಸ್ಪದವಾಗಿದೆ. ಕುಡಿಯುವ ನೀರಿಗೆ ಯಾರ ಅನುಮತಿಯ ಅಗತ್ಯವಿಲ್ಲ. ಸಮಸ್ಯೆಯನ್ನು ಜೀವಂತ ಇಡಬೇಕೆನ್ನುವುದು ಬಿಜೆಪಿ ಭಾವಿಸಿರುವಂತಿದೆ. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಮತ್ತೆ ಅದೇ ರಾಜಕೀಯ ಮುಂದುವರಿದಿದೆ. ಅರ್ಜಿ ವಿಚಾರಣೆ ಹಂತದಲ್ಲಿ ಇದ್ದಾಗ ನೀರು ತಿರುಗಿಸಿ ನ್ಯಾಯಾಂಗ ನಿಂದನೆಯ ಆರೋಪ ಮಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ನಡೆ ರಾಜಕೀಯ ದುರುದ್ದೇಶದಿಂದ ಕೂಡಿದೆ. -ಚಂದ್ರು ಚೌಹಾಣ್, ಹೋರಾಟಗಾರ.

ಆಯೋಗದ ನಿರ್ದೇಶನದೊಂದಿಗೆ ಕೊರೋನಾ ನಿಯಮ ಪಾಲಿಸಿ; ಸುಂದರೇಶ್ ಬಾಬು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ;
ಪಶ್ಚಿಮ ಪದವೀಧರರ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳ ಜೊತೆಗೆ ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಚುನಾವಣೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.


ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಪಶ್ಚಿಮ ಪದವೀಧರರ ಚುನಾವಣೆ-2020 ರ ವಿವಿಧ ಸಮಿತಿಗಳ ಮುಖ್ಯಸ್ಥರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಐದಕ್ಕಿಂತ ಹೆಚ್ಚು ಜನರು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳದಂತೆ ಕ್ರಮ ವಹಿಸಿಬೇಕು. ಹೆಚ್ಚಿನ ಜನರು ಒಂದೆಡೆ ಸೇರಲು ಅವಕಾಶ ಇಲ್ಲದಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನ ಮತ್ತು ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದರು.


ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಚುನಾವಣಾ ಕೆಲಸ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಸ್ವೀಪ್ ಸಮಿತಿ ಮತದಾರರಲ್ಲಿ ಕೊವಿಡ್ ತಡೆಗಟ್ಟುವುದರೊಂದಿಗೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶಿಸಿದರು.


ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ವಿಚಾರ ಪ್ರಕಟಿಸಬೇಕಿದ್ದಲ್ಲಿ ಜಿಲ್ಲಾಡಳಿತದ ಅನುಮತಿ ಕಡ್ಡಾಯವಾಗಿದೆ. ಪೂರ್ವಾನುಮತಿ ಇಲ್ಲದೇ ಪ್ರಕಟಿಸಿದಲ್ಲಿ ಸೂಕ್ತ ಕ್ರಮ ವಹಿಸಿಲಾಗುವುದು ಎಂದು ಅವರು ತಿಳಿಸಿದರು.


ಜಿಲ್ಲಾ ಪಂಚಾಯತ ಸಿಇಒ ಡಾ.ಆನಂದ ಕೆ. ಮಾತನಾಡಿ, ಚುನವಣಾ ಕರ್ತವ್ಯದ ಸಂದರ್ಭದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕಲ್ಲದೇ, ಇನ್ನುಳಿದ ಚುನಾವಣೆಗಳಂತೆ ಪದವೀಧರ ಕ್ಷೇತ್ರಗಳ ಚುನಾವಣೆಗಳು ಅಷ್ಟೇ ಮಹತ್ವದ್ದಾಗಿವೆ. ಜಿಲ್ಲೆಯ ಎಲ್ಲ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಪ್ರಿಂಟರ‍್ಸ್ ಮಾಲೀಕರ ಸಭೆ ಕರೆದು ಚುನಾವಣೆಗೆ ಸಂಬಂಧಿಸಿದ ಕರಪತ್ರ/ಭಿತ್ತಿಪತ್ರ, ಬ್ಯಾನರ‍್ಸ್ ಮುದ್ರಣಕ್ಕೂ ಮುನ್ನ ಅವುಗಳ ಪ್ರತಿಗಳನ್ನು ನೀಡುವಂತೆ ಸೂಚಿಸಬೇಕು. ದೇವಸ್ಥಾನಗಳಲ್ಲಿ ಚುನಾವಣಾ ಸಭೆ ಸೇರದಂತೆ ಕ್ರಮ ಕೈಗೊಳ್ಳಬೇಕು. ವಿಡಿಯೋ ವಿಚಕ್ಷಣಾ ದಳ ಸಭೆ ನಡೆಯುವ ಸ್ಥಳಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಸೂಚಿಸಿದರು.


ಎಸ್ಪಿ ಯತೀಶ್ ಎನ್. ಮಾತನಾಡಿ, ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧದ ದೂರಿನಲ್ಲಿ ಸ್ಪಷ್ಟತೆ ಇರಬೇಕು. ಅಭ್ಯರ್ಥಿಗಳು 50,000 ರೂ.ಕ್ಕಿಂತ ಹೆಚ್ಚು ಹಣ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದು ಕಂಡು ಬಂದರೆ ಹಣ ಜಪ್ತಿ ಮಾಡಲಾಗುವುದು ಎಂದರು. ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತರಬೇತಿಯಲ್ಲಿ ಇದ್ದರು.

ಹದಗೆಟ್ಟ ರಸ್ತೆ; ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಹಿಡಿಶಾಪ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ:
ಪಟ್ಟಣದಿಂದ ಹೈದರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ದ್ಯಾಂಪೂರ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ಹದಗೆಟ್ಟು ದಶಕ ಕಳೆದರೂ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಹಿಡಿ ಡಾಂಬರ್ ಹಾಕುವುದಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಸುಮಾರು 7 ಕಿ.ಮೀ ಉದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿರುವುದರಿಂದ ಸರ್ಕಾರಿ ಬಸ್, ರೈತರ ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳು ಸಿಲುಕಿಕೊಳ್ಳುವುದು ಸಾಮಾನ್ಯವಾಗಿದೆ. ರೋಣ-ನರೇಗಲ್ಲ ಮಾರ್ಗವಾಗಿ ಕೊಪ್ಪಳಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಯಲಬುರ್ಗಾ ತಾಲೂಕ ಕುಕನೂರನಿಂದ ಪಟ್ಟಣಕ್ಕೆ ಬರುತ್ತಿದ್ದ ಇಟ್ಟಂಗಿ ತುಂಬಿದ ಟ್ರ್ಯಾಕ್ಟರ್ ದ್ಯಾಂಪೂರ ಗ್ರಾಮದ ಹತ್ತಿರ ಸಿಲುಕಿಕೊಂಡ ಪರಿಣಾಮ ಎರಡ್ಮೂರು ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಬೇರೆ ಬೇರೆ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಪರದಾಟ ನಡೆಸುವಂತಾಯಿತು.

ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾಮ ಪಂಚಾಯಿತಿ ವತಿಯಿಂದ ಕೊಳವೆ ಬಾವಿಗಳ ಮೂಲಕ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು (ಪೈಪ್ ಲೈನ್) ಮಾಡುವ ಉದ್ದೇಶಕ್ಕಾಗಿ ರಸ್ತೆ ಪಕ್ಕಕ್ಕೆ ದೊಡ್ಡ ದೊಡ್ಡ ಗುಂಡಿಗಳನ್ನು ತೊಡಲಾಗಿತ್ತು. ಪೈಪ್ ಲೈನ್ ಕಾಮಗಾರಿಯ ಗುತ್ತಿಗೆದಾರ ಹಾಗೂ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ತೆಗ್ಗುಗಳನ್ನು ಸರಿಯಾಗಿ ಮುಚ್ಚದ ಪರಿಣಾಮ ರಸ್ತೆಯಲ್ಲಿ ಬಸ್, ಟ್ರ್ಯಾಕ್ಟರ್ ಸಿಲುಕಿಕೊಂಡಿದೆ ಎನ್ನುತ್ತಾರೆ ಸ್ಥಳೀಯರು.

ಜನಪ್ರತಿನಿಧಿಗಳ ವಿರೋಧ ಸವಾರರ ಆಕ್ರೋಶ : ರಾಜಕಾರಣಿಗಳು ಮತ ಕೇಳಲು ಮಾತ್ರ ಬರುತ್ತಾರೆ. ಅಧಿಕಾರ ಬಂದ ಮೇಲೆ ಮತ ಹಾಕಿದ ಮತದಾರರಿಗೆ ಮೂಲ ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ. ಅವರು ಕೇವಲ ಅಧಿಕಾರಕ್ಕಾಗಿ, ಹಣಕ್ಕಾಗಿ ಬಾಯಿ ಬಿಡುತ್ತಿದ್ದಾರೆ ಎಂದು ಎಂದು ತೊಂಡಿಹಾಳ, ಯಲಬುರ್ಗಾ, ಕುಕನೂರ ಗ್ರಾಮದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಎರಡೂ ಗ್ರಾಮಗಳ ಜನರ ನಡುವೆ ವಾಗ್ವಾದ : ತೊಂಡಿಹಾಳ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಬಸ್,ಟ್ರ್ಯಾಕ್ಟರ್ ಸಿಕ್ಕಿ ಹಾಕಿಕೊಂಡಿದ್ದು, ಗ್ರಾ.ಪಂ ಸಿಬ್ಬಂದಿಗಳೇ ರಸ್ತೆ ಹಾಳು ಮಾಡಿದ್ದಾರೆ ಎಂದು ನರೇಗಲ್ಲನ ಸಾರ್ವಜನಿಕರು ಆರೋಪಿಸಿದರು. ಇದರಿಂದ ಕೆರಳಿದ ತೊಂಡಿಹಾಳ ಗ್ರಾಮಸ್ಥರು, ನಮ್ಮ ವ್ಯಾಪ್ತಿಯ ರಸ್ತೆಗಳು ಉತ್ತಮವಾಗಿವೆ. ನಿಮ್ಮ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ನಿಮ್ಮ ಶಾಸಕರು ಜೀವಂತವಾಗಿದ್ದಾರೆಯೇ? ಅವರಿಗೆ ತಿಳಿಸಿ ರಸ್ತೆ ದುರಸ್ತಿ ಮಾಡಿಸಿಕೊಳ್ಳಲಾಗುತ್ತಿಲ್ಲ ನಿಮಗೆ ಎಂದರು.


ನಂತರ ಮಾಹಿತಿ ಪಡೆದ ಪಪಂ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಿಲುಕಿಕೊಂಡಿದ್ದ ಬಸ್, ಟ್ರ್ಯಾಕ್ಟರ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಬೀದಿ ನಾಯಿಗಳ ಹಾವಳಿ ತಡೆಗೆ “ಆಪರೇಷನ್ ಡಾಗ್”

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಎಚ್ಚೆತ್ತುಕೊಂಡ ಗಂಗಾವತಿ ನಗರಸಭೆ ಆಪರೇಷನ್ ಡಾಗ್ ಕಾರ್ಯಾಚರಣೆಯನ್ನು ಬುಧುವಾರದಿಂದ ಪ್ರಾರಂಭಿಸಿದೆ.

ನಗರದ ಡೈಲಿ ತರಕಾರಿ ಮಾರುಕಟ್ಟೆ, ಗಾಂಧಿವೃತ್ತ, ಮಹಾವೀರ ಸರ್ಕಲ್ ಸೇರಿದಂತೆ ವಿವಿಧ ಪ್ರಮುಖ ಬೀದಿಗಳಲ್ಲಿ ಕಾರ್ಯಚರಣೆ ನಡೆಸಿತು. ಬುಧವಾರ ಒಂದೇ ದಿನ ನೂರಕ್ಕೂ ಹೆಚ್ಚು ನಾಯಿಗಳನ್ನು ಸೆರೆ ಹಿಡಿಯಲಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಗಳಲ್ಲಿ ಬಿಡಲಾಗುವುದು ಎಂದು ನಗರಸಭೆ ಕಮೀಷನರ್ ಅರವಿಂದ್ ಜಮಖಂಡಿಯವರು ತಿಳಿಸಿದ್ದಾರೆ.

ಇನ್ನೂ ಆಪರೇಷನ್ ಡಾಗ್ ಕಾರ್ಯಾಚರಣೆ ಸತತವಾಗಿ ಮೂರು ದಿನಗಳ ಕಾಲ ಮುಂದುವೆರಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಶ್ವಾನಗಳನ್ನು ಹಿಡಿಯಲು ಶಿವಮೊಗ್ಗ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ..


ಸಾಕಿದ ನಾಯಿಗಳನ್ನು ಹೊರತುಪಡಿಸಿ, ಬೀದಿಗಳಲ್ಲಿ ಜನರಿಗೆ ತೊಂದರೆ ಕೊಡುತ್ತಿರುವ ನಾಯಿಗಳನ್ನು ಗುರುತಿಸಿ ಸೆರೆ ಹಿಡಿಯಲಾಗುತ್ತಿದೆ. ಅಲ್ಲದೇ ನುರಿತ ಕೆಲಸಗಾರದಿಂದ ನಾಯಿಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬೀಡಲಾಗುತ್ತಿದೆ. ಆಪರೇಷನ್ ಡಾಗ್ ಕಾರ್ಯಾಚರಣೆ ಗಂಗಾವತಿ ಸಾರ್ವಜನಿಕರ ದೂರಿನ ಮೇರೆ ಪ್ರಾರಂಭಿಸಲಾಗಿದೆ. ಇನ್ನೂ ಮೂರು ದಿನಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ.
-ಅರವಿಂದ್ ಜಮಖಂಡಿ, ಗಂಗಾವತಿ ನಗರಸಭೆ ಕಮೀಷನರ್.

ವಿಜಯಸಾಕ್ಷಿ ಇಂಪ್ಯಾಕ್ಟ್;
ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಗ್ರಾಮಕ್ಕೆ ಅಧಿಕಾರಿಗಳ ತಂಡ ದೌಡು

0

*ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ ಶಾಸಕ ದಡೇಸೂಗೂರು; ಗುಳದಾಳ (ಮಸಾರಿ ಕ್ಯಾಂಪ್) ಗ್ರಾಮಕ್ಕೆ ಬೆಳಕಾದ ಭರವಸೆ

ಬಿಯಸ್ಕೆ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕೊಪ್ಪಳ:“ರಸ್ತೆ ಮಾಡಿ ಕೊಡಿ, ಆಮೇಲೆ ಓಟ್ ಕೇಳೋಕೆ ಬನ್ನಿ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಸೆಪ್ಟೆಂಬರ್ 29 ರಂದು ಪ್ರಕಟಿಸಿದ್ದ ವಿಜಯಸಾಕ್ಷಿ ವಿಶೇಷ ವರದಿಯಿಂದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಗ್ರಾಮಕ್ಕೆ ಈಗ ರಸ್ತೆ ಭಾಗ್ಯ, ವಿದ್ಯುತ್ ಭಾಗ್ಯ ಒದಗಿ ಬಂದಿದ್ದು, ಇದು ವಿಜಯಸಾಕ್ಷಿ ಸ್ಪೆಷಲ್ ರಿಪೋರ್ಟ್‌ನ ಬಿಗ್ ಇಂಪ್ಯಾಕ್ಟ್.

ಹೌದು.. ಜಿಲ್ಲೆಯ ಗಂಗಾವತಿ
ತಾಲೂಕಿನ ಮಸಾರಿಕ್ಯಾಂಪ್ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದೇ ಅಲ್ಲಿನ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ಸವಿಸ್ತಾರವಾದ ವರದಿಯನ್ನು ವಿಜಯಸಾಕ್ಷಿ ಪ್ರಕಟಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ತಕ್ಷಣ ಇಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸಿ ಪರಿಹರಿಸಲು ಸೂಚಿಸಿದ್ದರು.

ಅವರ ಸೂಚನೆ ಮೇರೆಗೆ ಗಂಗಾವತಿ ತಹಶೀಲ್ದಾರ ಎಂ. ರೇಣುಕಾ , ತಾಲೂಕ ಪಂಚಾಯತ್ ಇಒ ಡಾ. ಮೋಹನ್, ಬಿಇಓ ಸೋಮಶೇಖರ್ ಗೌಡ ಅವರು ಬುಧವಾರ ಗುಳದಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಕಲ್ಪಿಸಲು ಇರುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಈ ತಂಡ ಸ್ಥಳಕ್ಕೆ ಭೇಟಿ ನೀಡಿತು.

ಮಸಾರಿಕ್ಯಾಂಪ್ (ಗುಳದಳ್ಳಿ) ಗ್ರಾಮಕ್ಕೆ ತುಂಗಭದ್ರಾ ಎಡದಂಡೆ ಕಾಲುವೆ ಮೇಲಿರುವ ರಸ್ತೆಯ ಮೂಲಕ ಮಾತ್ರ ಗ್ರಾಮಕ್ಕೆ ಪ್ರವೇಶಿಸಲು ಸಾಧ್ಯವಿದೆ. ಅದನ್ನು ಬಿಟ್ಟರೆ ಗ್ರಾಮಕ್ಕೆ ಬೇರೆ ದಾರಿಯಿಲ್ಲ. ಮಳೆಗಾಲ ಬಂದರೆ ಕಾಲುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿ ನಡೆದಾಡಲು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಜನರು ಬಹುತೇಕ ಬಾಹ್ಯ ಸಂಪರ್ಕ ಕಳೆದುಕೊಳ್ಳುವಂತಹ‌ ಪರಿಸ್ಥಿತಿ ಇದೆ. ಹೀಗಾಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಇರುವ ಸಾಧ್ಯತೆಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಾಗಿ ತಂಡ ತಿಳಿಸಿತು.

ಈ ಬಗ್ಗೆ ಜಿಲ್ಲಾಧಿಕಾರಿಗಳ ಸೂಚನೆ ಅನುಸಾರ ನಾವೆಲ್ಲರೂ ಸಹ ಬಂದಿದ್ದೇವೆ. ಇನ್ನು ಈ ಬಗ್ಗೆ ಶಾಸಕರು ಸಹ ಮಾಹಿತಿ ನೀಡಿದ್ದು, ಪಿಎಂಜಿಎಸ್ವೈ ( ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ) ರಸ್ತೆಯನ್ನು ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕನಕಗಿರಿ ಶಾಸಕರು ಸಲ್ಲಿಸಿದ್ದಾರೆ. ಅನುಮೋದನೆ ಸಿಕ್ಕ ತಕ್ಷಣ ರಸ್ತೆ ನಿರ್ಮಾಣವಾಗುತ್ತೆ. ಗ್ರಾಮಸ್ಥರು ಆತಂಕಪಡುವ ಪ್ರಶ್ನೆ ಇಲ್ಲ..
-ಡಾ.ಮೋಹನ್ , ಇಒ ತಾಲೂಕ ಪಂಚಾಯತ್ ಗಂಗಾವತಿ.

ವಿಜಯಸಾಕ್ಷಿ ವರದಿ ನನ್ನ ಗಮನಕ್ಕೆ ಬಂದಿದೆ. ಈ ಹಿಂದೆಯೂ ನನ್ನ ಕ್ಷೇತ್ರದ ಜನರು ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳ ಬಳಿ ಚರ್ಚೆ ಮಾಡಿ, ಪಿಎಂಜಿಎಸ್ವೈ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಹೇಳಿದ್ದೇನೆ. ಕಾಮಗಾರಿ ಅನುಮೋದನೆ ಸಿಕ್ಕ ತಕ್ಷಣವೇ ರಸ್ತೆ ನಿರ್ಮಾಣ ಮಾಡಲಾಗುವುದು ಗುಳದಾಳ ಜನರ ಜೊತೆ ನಾನೀದ್ದೇನೆ ಯೋಚನೆ ಬೇಡ.
-ಬಸವರಾಜ ದಡೇಸೂಗೂರು, ಕನಕಗಿರಿ ಶಾಸಕ.

ಏರೋ ಇಂಡಿಯಾ 2021: ಆಯೋಜನೆಗೆ ಪೂರ್ವಭಾವಿ ಸಭೆ

0

ವಿಜಯಸಾಕ್ಷಿ ಸುದ್ದಿ ಬೆಂಗಳೂರು
ಕೇಂದ್ರದ ರಕ್ಷಣಾ ಉತ್ಪನ್ನಗಳ ಇಲಾಖೆಯು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಇಂದು ಆಯೋಜಿಸಿದ್ದ 13ನೇ ಆವೃತ್ತಿಯ ಮೆಗಾ ಅಂತರರಾಷ್ಟ್ರೀಯ ಏರೋ ಶೋ- ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಸಂಬಂಧಿಸಿದ ರಾಯಭಾರಿಗಳ ದುಂಡು ಮೇಜಿನ ವರ್ಚುಯಲ್ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿ ಮಾತನಾಡಿದರು.
ಕಳೆದ ಹನ್ನೆರಡು ಏರ್‍ಶೋ ಆವೃತ್ತಿಗಳಿಗೆ ಕರ್ನಾಟಕ ಅತಿಥೇಯ ರಾಜ್ಯವಾಗಿ ಉತ್ತಮ ಅನುಭವವನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿಯೂ ಫೆಬ್ರವರಿ 3 ರಿಂದ 7, 2021 ರವರೆಗೆ ಆಯೋಜಿಸಿರುವ 13ನೇ ಆವೃತ್ತಿಯ ಮೆಗಾ ಅಂತರರಾಷ್ಟ್ರೀಯ ಏರೋ ಶೋ- ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಕರ್ನಾಟಕ ಅತಿಥೇಯ ರಾಜ್ಯವಾಗಿ ಈ ಬಾರಿಯೂ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ.
ಕೋವಿಡ್ 19 ಸಾಂಕ್ರಾಮಿಕದ ನಡುವೆಯೂ ಇಂತಹ ಮಹತ್ವಪೂರ್ಣ ಕಾರ್ಯಕ್ರಮವನ್ನು ಆಯೋಜಿಸುವುದು ಕರ್ನಾಟಕ ರಾಜ್ಯ ಹಾಗೂ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಒಂದು ಸವಾಲಿನ ವಿಷಯ. ಏರೋ ಇಂಡಿಯಾ 2021ರ ವೆಬ್‍ಸೈಟ್ ಪ್ರಾರಂಭವಾದ ಕೂಡಲೇ ವಸ್ತುಪ್ರದರ್ಶನಕ್ಕಾಗಿ ಈಗಾಗಲೇ ಆಸಕ್ತರು ಬಹುಪಾಲು ಸ್ಥಳವನ್ನು ಕಾಯ್ದಿರಿಸಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸರ್ಕಾರ ಅನೇಕ ಪೂರಕ ಕ್ರಮಗಳನ್ನು ಕೈಗೊಂಡಿದ್ದು, ಭಾರತ ಸರ್ಕಾರದ ಆರೋಗ್ಯ ಸಚಿವಾಲಯದ ಎಲ್ಲ ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಏರೋ ಇಂಡಿಯಾ 2021 ಕಾರ್ಯಕ್ರಮದಲ್ಲಿ ಭಾಗವಹಿಸುವ ಅಂತರರಾಷ್ಟ್ರೀಯ ಗಣ್ಯರು, ಅಧಿಕಾರಿ/ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಥರ್ಮಲ್ ಸ್ಕ್ರೀನಿಂಗ್, ಕಾ¯ಕಾಲಕ್ಕೆ ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವುದು ಮುಂತಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಭಾರತದ ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮಕ್ಕೆ ಕರ್ನಾಟಕ ರಾಜ್ಯ ಶೇ. 25 ರಷ್ಟು ಕೊಡುಗೆ ನೀಡುತ್ತಿದೆ. ಭಾರತದ ವೈಮಾನಿಕ ಸಂಬಂಧಿತ ರಫ್ತಿಗೆ ಶೇ.65% ರಷ್ಟು ಹಾಗೂ ರಕ್ಷಣಾ ವಲಯದ ಸೇವೆಗಳಿಗಾಗಿ ಹೆಲಿಕಾಪ್ಟರ್ ಮತ್ತು ವಿಮಾನÀ ಉತ್ಪಾದನೆಗೆ ಶೇ.67% ಕೊಡುಗೆ ನೀಡುತ್ತಿದೆ ಎಂದರು.
ರಾಷ್ಟ್ರದಲ್ಲಿ ಏರೋಸ್ಪೇಸ್ ನೀತಿಯನ್ನು ರೂಪಿಸಿದ ಮೊಟ್ಟಮೊದಲ ರಾಜ್ಯ ಕರ್ನಾಟಕ. ಹೆಚ್‍ಎಎಲ್, ಬೆಮೆಲ್, ಬಿಇಎಲ್ ನಂತಹ ಪ್ರಮುಖ ಸಾರ್ವಜನಿಕ ವಲಯದ ಘಟಕಗಳು ಬೆಂಗಳೂರಿನಲ್ಲಿ ಸ್ಥಾಪಿತಗೊಂಡಿವೆ. ಬೆಳಗಾವಿಯಲ್ಲಿ ಖಾಸಗಿ ಏರೋಸ್ಪೇಸ್ ಆರ್ಥಿಕ ವಲಯ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ 1000 ಎಕರೆ ಪ್ರದೇಶದಲ್ಲಿ ಏರೋಸ್ಪೇಸ್ ಪಾರ್ಕ್, ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ಮತ್ತು ತುಮಕೂರು ಜಿಲ್ಲೆಯಲ್ಲಿ ರಕ್ಷಣಾ ಉತ್ಪಾದನಾ ಕ್ಲಸ್ಟರ್‍ನ್ನು ಕರ್ನಾಟಕ ಒಳಗೊಂಡಿದೆ.
ಪ್ರಾದೇಶಿಕ ನಾಗರಿಕ ವಿಮಾನಯಾನ ಸೌಲಭ್ಯಗಳು ಮತ್ತು ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ಸ್ಥಾಪನೆಗೆ ವಿಶೇಷ ಸಹಾಯಧನವನ್ನು ಹೂಡಿಕೆದಾರರಿಗೆ ಕರ್ನಾಟಕ ಒದಗಿಸುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಮಾತನಾಡಿ, ಅತಿಥಿ ದೇವೋಭವ ಎಂಬ ಮಾತಿನಲ್ಲಿ ನಂಬಿಕೆ ಇರುವವರು ನಾವು. ಶಾಂತಿಗಾಗಿ ರಕ್ಷಣಾ ಇಲಾಖೆಯನ್ನು ಇನ್ನಷ್ಟು ಸಬಲಗೊಳಿಸಲು ಪೂರಕವಾಗಿ ರಕ್ಷಣಾ ನೀತಿಯನ್ನು ಅಳವಡಿಸಿಕೊಳ್ಳುವುದೇ ನಮ್ಮ ಉದ್ದೇಶ.
ಭಾರತವು ಅತಿ ದೊಡ್ಡ ರಕ್ಷಣಾ ಉತ್ಪಾದನಾ ವಲಯವನ್ನು ಹೊಂದಿದೆ. ಏರೋ ಇಂಡಿಯಾ 2021 ಮೂಲಕ ಭಾರತ ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮದಲ್ಲಿ ಮುಂಚೂಣಿಯ ಐದು ರಾಷ್ಟ್ರಗಳಲ್ಲಿ ಒಂದಾಗಿರಬೇಕು ಎನ್ನುವುದು ನಮ್ಮ ಆಶಯ.
ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಕ್ರಿಯ ಭಾಗವಹಿಸುವಿಕೆಯಿಂದ ಭಾರತವನ್ನು ರಕ್ಷಣಾ ಉತ್ಪನ್ನಗಳ ಕೇಂದ್ರವಾಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ 19ರ ಹಿನ್ನೆಲೆಯಲ್ಲಿ ಸಂಪರ್ಕ ರಹಿತ ವ್ಯವಹಾರವನ್ನು ಖಾತ್ರಿಪಡಿಸಲು ಎಲ್ಲ ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್, ವಿವಿಧ ದೇಶಗಳ ರಾಯಭಾರಿಗಳು, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exclusive…ಬ್ಯಾಂಕ್ ದರೋಡೆಕೋರರ ಬಂಧನ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಈಚೆಗೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ಬ್ಯಾಂಕ್‌ಗೆ ಕನ್ನ ಹಾಕಿದ್ದು, ಜಿಲ್ಲೆಯಲ್ಲಿ ಇದುವರೆಗೂ ನಡೆದ ದೊಡ್ಡ ದರೋಡೆ ಎಂಬ ಕುಖ್ಯಾತಿ ಹೊಂದಿತ್ತು.
ಸೆಪ್ಟೆಂಬರ್ 23ರಂದು ಬೇವೂರಿನ ಗ್ರಾಮೀಣ ಬ್ಯಾಂಕ್‌ಗೆ ಕನ್ನ ಹಾಕಿದ್ದ ಖದೀಮರು, 3.76 ಕೆಜಿ ಬಂಗಾರ, 21.75 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ 4 ವಿಶೇಷ ತನಿಖಾ ತಂಡ ರಚಿಸಿದ್ದ ಎಸ್ಪಿ ಜಿ.ಸಂಗೀತಾ ಅವರು ದರೋಡೆಕೋರರ ಪತ್ತೆಗೆ ಜಾಲ ಬೀಸಿದ್ದರು.
ಮಹಾರಾಷ್ಟ್ರ ಮೂಲದ ದರೋಡೆಕೋರರು ಪೊಲೀಸ್ ಬಲೆಗೆ ಬಿದ್ದಿದ್ದು, ನಗದು ಹಾಗೂ ಬಂಗಾರ ವಶಪಡಿಸಿಕೊಳ್ಳಲಾಗಿದೆ. ಈ ಕುರಿತ ಸಮಗ್ರ ಮಾಹಿತಿಯನ್ನು ಅಕ್ಟೋಬರ್ 8ರಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗುವುದು ಎಂದು ಎಸ್ಪಿ ಜಿ.ಸಂಗೀತಾ ವಿಜಯಸಾಕ್ಷಿಗೆ ತಿಳಿಸಿದರು.

ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷನ ಮೇಲೆ ಹಲ್ಲೆ; ದುಷ್ಕರ್ಮಿಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ವಿಜಯಪುರ: ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಜಿಲ್ಲೆಯ ಸಿಂದಗಿಯಲ್ಲಿ ನಡೆದಿದೆ. ಸಿಂದಗಿ ತಾಲೂಕಿನ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ರವಿಕಾಂತ ನಾಯ್ಕೋಡಿ ಮೇಲೆ ದುಷ್ಕರ್ಮಿಗಳಿಂದ ಮಾರಾಣಾಂತಿಕ ಹಲ್ಲೆ ನಡೆದಿದೆ.

ಸೋಮವಾರ ರಾತ್ರಿ ಸಿಂಧಗಿ ಪಟ್ಟಣದ ಹೊರವಲಯದ ಅರ್ಪಿತಾ ಧಾಬಾ ದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಕೆಲ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿವೆ. ರವಿಕಾಂತ ಮೇಲೆ ತಲವಾರ್ ನಿಂದ, ಧಾಬಾ ಸುತ್ತಲೂ ಓಡಾಡಿಸಿರುವ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.

ಹಲ್ಲೆ ನಂತರ ದುಷ್ಕರ್ಮಿಗಳು ಬೈಕ್ ಮೇಲೆ ಪರಾರಿ ಅಗಿದ್ದಾರೆ. ಘಟನೆಯಲ್ಲಿ ರವಿಕಾಂತ ಎಡಗೈಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಬಲೇಶ್ವರ ಗ್ರಾಮದ ಅನಿಲ್, ರಾಂಪೂರ ಪಿ.ಎ ಗ್ರಾಮದ ಯುವರಾಜ ಸೇರಿದಂತೆ ನಾಲ್ವರ ಮೇಲೆ ಸಿಂಧಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಣದ ವ್ಯವಹಾರವೇ ಈ ಹಲ್ಲೆಗೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ; ಸ್ಥಳೀಯರಿಂದ ಹಗ್ಗದಿಂದ ರಕ್ಷಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆ ಆಗಿದ್ದರೂ ಅವಾಂತರ ಮಾತ್ರ ನಿಂತಿಲ್ಲ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಬೈಕ್ ಓಡಿಸಿ, ಕೊಚ್ಚಿ ಹೋಗುತ್ತಿದ್ದ ಸವಾರನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕೊಪ್ಪಳ ತಾಲೂಕು ಶಿವಪುರ ಗ್ರಾಮದ ಹಳ್ಳದಲ್ಲಿ ಘಟನೆ ನಡೆದಿದೆ.

ಶಿವುಪುರ ಮತ್ತು ಹುಲಗಿ ನಡುವೆ ಹರಿಯೋ ಹಳ್ಳ ರಭಸವಾಗಿ ಹರಿಯುತ್ತಿದೆ. ಈ ನೀರಿನಲ್ಲೇ ಬೈಕ್ ಓಡಿಸಿದ್ದು, ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ. ಬೈಕ್ ಸವಾರ ಹಳ್ಳದಲ್ಲಿದ್ದ ಗಿಡ ಹಿಡಿದುಕೊಂಡು ನಿಂತು, ಜೀವ ಉಳಿಸಿಕೊಂಡಿದ್ದಾನೆ. ಇದನ್ನು ನೋಡಿರುವ ಸ್ಥಳೀಯರು ಹಗ್ಗದ ಮೂಲಕ ಬೈಕ್ ಸವಾರರನ್ನು ರಕ್ಷಿಸಿದ್ದು, ವಿಡಿಯೋ ವೈರಲ್ ಆಗಿದೆ.

error: Content is protected !!