Home Blog Page 219

ಡಿಕೆ ಶಿವಕುಮಾರ್‌ ಸರ್ಕಾರದ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್; ಸೋಮವಾರ ಸಂಜೆ ನೂತನ ಸಚಿವರ ಪ್ರಮಾಣವಚನ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಸೋಮವಾರ ಸಂಜೆ 4 ಗಂಟೆಗೆ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

ಕಾಂಗ್ರೆಸ್ ಹೈಕಮಾಂಡ್ ಅಂತಿಮ ಹಂತದ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ನೂತನ ಸಚಿವರ ಪ್ರಮಾಣವಚನಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಆಗಸ್ಟ್ 2ರಂದು ನೂತನ ಸಚಿವರ ಪಟ್ಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈ ಸೇರಲಿದ್ದು, ಭಾನುವಾರ ಸಂಜೆ ವೇಳೆಗೆ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಖಾಲಿ ಇರುವ 20 ಸಚಿವ ಸ್ಥಾನಗಳ ಪೈಕಿ ಸುಮಾರು 18 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪ್ರತ್ಯೇಕ ಪಟ್ಟಿಗಳನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದು, ಜಾತಿ ಹಾಗೂ ಪ್ರಾದೇಶಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಹೆಸರುಗಳು:

  • ಎಸ್.ಎಸ್. ಮಲ್ಲಿಕಾರ್ಜುನ – ಲಿಂಗಾಯತ, ದಾವಣಗೆರೆ ಶಾಸಕ
  • ಎನ್. ಚಲುವರಾಯಸ್ವಾಮಿ – ಒಕ್ಕಲಿಗ, ನಾಗಮಂಗಲ ಶಾಸಕ
  • ಜಮೀರ್ ಅಹ್ಮದ್ – ಮುಸ್ಲಿಂ, ಚಾಮರಾಜಪೇಟೆ ಶಾಸಕ
  • ಶರತ್ ಬಚ್ಚೇಗೌಡ – ಒಕ್ಕಲಿಗ, ಹೊಸಕೋಟೆ ಶಾಸಕ
  • ಆನೇಕಲ್ ಶಿವಣ್ಣ – ದಲಿತ, ಆನೇಕಲ್ ಶಾಸಕ
  • ಕೆ.ಎಸ್. ಬಸವಂತಪ್ಪ – ದಲಿತ ಎಡಗೈ, ಮಾಯಕೊಂಡ ಶಾಸಕ
  • ಜೆ.ಎನ್. ಗಣೇಶ – ಪರಿಶಿಷ್ಟ ಪಂಗಡ, ಕಂಪ್ಲಿ ಶಾಸಕ
  • ರುದ್ರಪ್ಪ ಲಮಾಣಿ – ಪರಿಶಿಷ್ಟ ಜಾತಿ, ಹಾವೇರಿ ಶಾಸಕ
  • ಎ.ಎಸ್. ಪೊನ್ನಣ್ಣ – ಕೊಡವ ಸಮುದಾಯ, ವಿರಾಜಪೇಟೆ ಶಾಸಕ
  • ಬೇಳೂರು ಗೋಪಾಲಕೃಷ್ಣ – ಈಡಿಗ ಸಮುದಾಯ, ಸಾಗರ ಶಾಸಕ
  • ಶಿವಣ್ಣನವರ್ – ಕುರುಬ ಸಮುದಾಯ, ಬ್ಯಾಡಗಿ ಶಾಸಕ
  • ಶ್ರೀನಿವಾಸ್ ಮಾನೆ – ಮರಾಠ ಸಮುದಾಯ, ಹಾನಗಲ್ ಶಾಸಕ
  • ಮಂಕಾಳು ವೈದ್ಯ – ಮೊಗವೀರ ಸಮುದಾಯ, ಭಟ್ಕಳ ಶಾಸಕ

ಈ ನಡುವೆ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಸಚಿವ ಸಂಪುಟ ಸೇರ್ಪಡೆ ಕುರಿತು ಕುತೂಹಲ ಹೆಚ್ಚಾಗಿದೆ. ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿತ್ತು. ಈ ವಿಚಾರವಾಗಿ ಜಮೀರ್ ಅವರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಬಳಿ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದರು ಎನ್ನಲಾಗಿದೆ.

ಜಮೀರ್ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗುತ್ತದೆಯೇ ಎಂಬುದು ಹೈಕಮಾಂಡ್ ಮಟ್ಟದ ಅಂತಿಮ ಚರ್ಚೆಯಲ್ಲಿ ನಿರ್ಧಾರವಾಗಲಿದೆ.

ಇದೇ ವೇಳೆ, ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ಪ್ರಯತ್ನ ಮುಂದುವರಿಸಿದ್ದಾರೆ. ಶಾಸಕ ಅಪ್ಪಾಜಿಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. “ನನಗೆ ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ ನಡೆದಿದೆ, ಆದರೆ ಈ ಬಾರಿ ಅವಕಾಶ ಸಿಗುವ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ.

ಅಂತಿಮ ಪಟ್ಟಿಗೆ ಹೈಕಮಾಂಡ್ ಅನುಮೋದನೆ ದೊರೆತ ಬಳಿಕ ರಾಜ್ಯಪಾಲರ ಕಚೇರಿಗೆ ಮಾಹಿತಿ ರವಾನಿಸಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

ಎಥೆನಾಲ್ ಮಿಶ್ರಣ ಇಲ್ಲದಿದ್ದರೆ ಪೆಟ್ರೋಲ್ ಬೆಲೆ ₹125 ತಲುಪುತ್ತಿತ್ತು: ಕೇಂದ್ರ ಸರ್ಕಾರದ ಸ್ಪಷ್ಟನೆ

0

ನವದೆಹಲಿ: ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡದೇ ಇದ್ದಿದ್ದರೆ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯ ಸಂದರ್ಭದಲ್ಲಿ ದೇಶದಲ್ಲಿ ಪೆಟ್ರೋಲ್ ದರ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿತ್ತು ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 135 ಡಾಲರ್‌ಗೆ ಏರಿದ್ದ ಸಂದರ್ಭದಲ್ಲಿ, ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ಸುಮಾರು 125 ರೂಪಾಯಿ ತಲುಪುವ ಸಾಧ್ಯತೆ ಇತ್ತು ಎಂದು ಸಚಿವಾಲಯ ಹೇಳಿದೆ.

ಸರ್ಕಾರದ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ಸಚಿವಾಲಯ, ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ (E20) ಮಾಡಿರುವುದರಿಂದ ಗ್ರಾಹಕರಿಗೆ ಪ್ರತಿ ಲೀಟರ್ ಪೆಟ್ರೋಲ್ ಅನ್ನು 94.77 ರೂಪಾಯಿ ದರದಲ್ಲಿ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದೆ.

ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದ ಗ್ರಾಹಕರ ಮೇಲೆ ಬೀಳಬಹುದಾದ ಹೆಚ್ಚುವರಿ ಹೊರೆ ತಗ್ಗಿಸುವಲ್ಲಿ E20 ಪೆಟ್ರೋಲ್ ಪ್ರಮುಖ ಪಾತ್ರ ವಹಿಸಿದೆ. ಇದರಿಂದ ಸಂಕಷ್ಟದ ಸಂದರ್ಭದಲ್ಲಿ ಪ್ರತಿ ಲೀಟರ್‌ಗೆ ಸುಮಾರು 30 ರೂಪಾಯಿವರೆಗೆ ಉಳಿತಾಯವಾಗಿದೆ ಎಂದು ಸಚಿವಾಲಯ ಹೇಳಿದೆ.

ಇದೇ ವೇಳೆ, ಎಥೆನಾಲ್ ಉತ್ಪಾದನೆಗೆ ಬಡವರಿಗಾಗಿ ಮೀಸಲಿಟ್ಟ ಆಹಾರ ಧಾನ್ಯಗಳನ್ನು ಬಳಸಲಾಗುತ್ತಿದೆ ಅಥವಾ ಭಾರತೀಯ ಆಹಾರ ನಿಗಮದ (FCI) ಸಬ್ಸಿಡಿ ಅಕ್ಕಿಯನ್ನು ಈ ಯೋಜನೆಗೆ ತಿರುಗಿಸಲಾಗುತ್ತಿದೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.

ಪಶ್ಚಿಮ ಏಷ್ಯಾದ ಸಂಘರ್ಷದ ಬಳಿಕ ಸುಮಾರು 75 ದಿನಗಳ ಕಾಲ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಏರಿಳಿತ ಕಂಡುಬಂದರೂ, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳನ್ನು ಸ್ಥಿರವಾಗಿಟ್ಟಿತ್ತು. ಬಳಿಕ ಮೇ ತಿಂಗಳಲ್ಲಿ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 7.50 ರೂಪಾಯಿ ಏರಿಕೆ ಮಾಡಲಾಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.

ಪ್ರಸ್ತುತ ದೆಹಲಿಯಲ್ಲಿ E20 (91 ಆಕ್ಟೇನ್) ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.12 ರೂಪಾಯಿ ಇದ್ದರೆ, 100 ಆಕ್ಟೇನ್ ಪೆಟ್ರೋಲ್ ದರ 169 ರೂಪಾಯಿ ಇದೆ.

ಮೈಸೂರು ನನ್ನ ಮನೆ, ನಾನು ಇಲ್ಲಿನ ಅಳಿಯ: 2028ರಲ್ಲೂ ಕಾಂಗ್ರೆಸ್ ಸರ್ಕಾರದ ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ

0

ಮೈಸೂರು: ಮೈಸೂರು ಪ್ರವಾಸದ ವೇಳೆ ಭರ್ಜರಿ ರೋಡ್‌ ಶೋ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಾನು ಮೈಸೂರಿನ ಅಳಿಯ. ಮುಖ್ಯಮಂತ್ರಿ ಆದರೂ ಈ ನಂಟು ಬದಲಾಗುವುದಿಲ್ಲ” ಎಂದು ಹೇಳುವ ಮೂಲಕ ಮೈಸೂರು ಜನರೊಂದಿಗೆ ತಮ್ಮ ಭಾವನಾತ್ಮಕ ಸಂಬಂಧವನ್ನು ವ್ಯಕ್ತಪಡಿಸಿದರು.

ಕಾರಂಜಿ ಕೆರೆ ವೃತ್ತದಿಂದ ಕುರುಬಾರಹಳ್ಳಿ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ಸಿಎಂ ಡಿಕೆ ಶಿವಕುಮಾರ್, ಕಾರ್ಯಕರ್ತರು ಹಾಗೂ ಸಾರ್ವಜನಿಕರ ಪ್ರೀತಿಗೆ ಧನ್ಯವಾದ ಅರ್ಪಿಸಿದರು.

“ರಾಜ್ಯದಲ್ಲಿ ಮತ್ತೊಮ್ಮೆ ಬಲಿಷ್ಠ ಸರ್ಕಾರ ರಚಿಸಲು ಜನರು ಅವಕಾಶ ಮಾಡಿಕೊಡಬೇಕು. ನನಗೆ ಕನಕಪುರವೂ ಒಂದೇ, ಮೈಸೂರೂ ಒಂದೇ. ನಾನು ನಿಮ್ಮೂರಿನ ಅಳಿಯ” ಎಂದು ಹೇಳಿದರು.

ಸಿದ್ದರಾಮಯ್ಯ ಅವರೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿ 136 ಸ್ಥಾನಗಳನ್ನು ಗೆದ್ದಿದ್ದೇವೆ. ಚುನಾವಣೆಗೆ ಮುನ್ನ ಚಾಮುಂಡೇಶ್ವರಿ ತಾಯಿಯ ಬಳಿ ದೊಡ್ಡ ಜವಾಬ್ದಾರಿ ನೀಡುವಂತೆ ಪ್ರಾರ್ಥಿಸಿದ್ದೆವು. ಜನರ ಆಶೀರ್ವಾದದಿಂದ ಸರ್ಕಾರ ರಚಿಸಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು.

ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, “ಜನರ ಆದಾಯ ಕುಸಿದಿದ್ದ ಸಮಯದಲ್ಲಿ ಜಾರಿಗೆ ತಂದ ಯೋಜನೆಗಳು ಇಂದು ದೇಶದ ಗಮನ ಸೆಳೆದಿವೆ” ಎಂದರು.

2028ರ ವಿಧಾನಸಭಾ ಚುನಾವಣೆಯಲ್ಲೂ ಇದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಬರದ ಪರಿಸ್ಥಿತಿ ಇದ್ದರೂ ಮಳೆಯ ನೆರವಿನಿಂದ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದರು.

ಕಾವೇರಿ ನೀರು ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ತಮಿಳುನಾಡಿಗೆ ನೀರು ಬಿಡುವ ಕುರಿತು ಪ್ರತಿಪಕ್ಷಗಳ ಸಲಹೆ ಪಡೆದು ತೀರ್ಮಾನಿಸಲು ಉದ್ದೇಶಿಸಲಾಗಿತ್ತು. ಆದರೆ ಚಾಮುಂಡೇಶ್ವರಿ ತಾಯಿಯ ಕೃಪೆಯಿಂದ ಸಂಕಷ್ಟದ ಪರಿಸ್ಥಿತಿ ದೂರವಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಕಾಂಗ್ರೆಸ್ ಕಾರ್ಯಕರ್ತರ ಸಭೆ ರದ್ದಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಮಾಲತಿ ಹೊಳೆ ಆರ್ಭಟಕ್ಕೆ ಸೇತುವೆ ಮೇಲೆ ಸಿಲುಕಿದ ಕಾರು: ಜೀವದ ಹಂಗು ತೊರೆದು ಕುಟುಂಬ ರಕ್ಷಿಸಿದ ಸ್ಥಳೀಯರು

0

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಮಾಲತಿ ಹೊಳೆ ಭಾರಿ ಮಳೆಯಿಂದ ಉಕ್ಕಿ ಹರಿದ ಪರಿಣಾಮ, ಹೊನ್ನಾವರ ಮೂಲದ ಕುಟುಂಬವೊಂದು ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ನೀರಿನ ರಭಸಕ್ಕೆ ಸೇತುವೆ ಮೇಲೆ ಕಾರು ಸಿಲುಕಿಕೊಂಡಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಕುಟುಂಬ ಸುರಕ್ಷಿತವಾಗಿ ಪಾರಾಗಿದೆ.

ಭಾರಿ ಮಳೆಯಿಂದ ಮಾಲತಿ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನಾಬಳ ಸೇತುವೆ ಮೇಲೆ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ಮಾರ್ಗದಲ್ಲಿ ಹೊನ್ನಾವರ ಮೂಲದ ಕುಟುಂಬವೊಂದು ಶೃಂಗೇರಿಗೆ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ ಏಕಾಏಕಿ ಸೇತುವೆ ಮೇಲೆ ನೀರು ತುಂಬಿ ಕಾರಿನೊಳಗೆ ನೀರು ನುಗ್ಗಿದೆ.

ಅಪಾಯ ಅರಿತ ಕುಟುಂಬಸ್ಥರು ಕಾರಿನ ಮೇಲೇರಿ ಸಹಾಯಕ್ಕಾಗಿ ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರಾದ ಪ್ರವೀಣ್, ಮಂಜುನಾಥ್ ಸೇರಿದಂತೆ ಕೆಲವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಕಾರಿಗೆ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಕ್ಕೆ ಎಳೆದು ತಂದಿದ್ದಾರೆ.

ಕಾರಿನಲ್ಲಿದ್ದ ಬಾಲಕನೊಬ್ಬನನ್ನು ಸ್ಥಳೀಯರು ಹೊತ್ತು ತಂದು ರಕ್ಷಿಸಿದ್ದು, ಸ್ಥಳೀಯರ ಸಾಹಸ ಹಾಗೂ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಾವೇರಿ ವಿವಾದದ ನಡುವೆಯೇ ಕರ್ನಾಟಕಕ್ಕೆ ಜಲ ಭಾಗ್ಯ; ಭರ್ತಿಯಾಗುವ ಹಂತದಲ್ಲಿ ಕಬಿನಿ, ಹಾರಂಗಿಯಿಂದಲೂ ಭಾರಿ ನೀರು ಬಿಡುಗಡೆ

0

ಮೈಸೂರು: ರಾಜ್ಯದಲ್ಲಿ ಬರದ ಆತಂಕದ ನಡುವೆಯೇ ಜನರಿಗೆ ಕೊಂಚ ನೆಮ್ಮದಿ ನೀಡುವ ಬೆಳವಣಿಗೆ ನಡೆದಿದೆ. ನೆರೆಯ ಕೇರಳದ ವಯನಾಡು ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮೈಸೂರು ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ ಕಬಿನಿ ಡ್ಯಾಂ ಭರ್ತಿಯಾಗುವ ಹಂತ ತಲುಪಿದೆ.

ಮೈಸೂರು ಜಿಲ್ಲೆಯ ಹೆಚ್‌.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರಿನ ಒಳಹರಿವು ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಿದೆ.

ಸದ್ಯ ಕಬಿನಿ ಜಲಾಶಯಕ್ಕೆ 15,500 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, ಗರಿಷ್ಠ 2,284 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗಾಗಲೇ 2,280 ಅಡಿ ನೀರು ಸಂಗ್ರಹವಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ.

ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಸುಮಾರು 8 ಸಾವಿರದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡುವ ಸಾಧ್ಯತೆ ಇದ್ದು, ಕಬಿನಿ ನದಿ ಪಾತ್ರದ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಸದ್ಯ ಸುಮಾರು 18 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ಕೊಡಗು ಭಾಗದ ಹಾರಂಗಿ ಜಲಾಶಯಕ್ಕೂ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ 11,800ಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಸುರಕ್ಷತಾ ಕ್ರಮವಾಗಿ ಹಾರಂಗಿ ಜಲಾಶಯದಿಂದ 13,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ನಾಲ್ಕು ಕ್ರಸ್ಟ್ ಗೇಟ್‌ಗಳು ಹಾಗೂ ವಿದ್ಯುತ್ ಘಟಕದ ಮೂಲಕ ನೀರು ಹೊರಬಿಡಲಾಗುತ್ತಿದ್ದು, ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಕೇರಳದಲ್ಲಿ ಭಾರೀ ಮಳೆ ಆರ್ಭಟ; ಭೂಕುಸಿತಕ್ಕೆ ಮೂವರು ಬಲಿ, ಹಲವೆಡೆ ರಕ್ಷಣಾ ಕಾರ್ಯಾಚರಣೆ

0

ಕೇರಳ: ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಕೇರಳದಲ್ಲಿ ಭೂಕುಸಿತ ಪ್ರಕರಣಗಳು ಹೆಚ್ಚುತ್ತಿದ್ದು, ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಹಲವೆಡೆ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಇಡುಕ್ಕಿ ಜಿಲ್ಲೆಯ ಕುದಯತ್ತೂರು ಸಮೀಪದ ಅಡೂರ್ಮಾಲ ಪ್ರದೇಶದಲ್ಲಿ ಶನಿವಾರ ಮುಂಜಾನೆ ಭೂಕುಸಿತ ಸಂಭವಿಸಿ ಮನೆ ಕುಸಿದ ಪರಿಣಾಮ ಸುಮತಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಘಟನೆಯ ವೇಳೆ ನೆರೆಹೊರೆಯವರು ಸುಮತಿ ಅವರ ಪತಿ ಮತ್ತು ಮಗನನ್ನು ರಕ್ಷಿಸಿದ್ದು, ಗಾಯಗೊಂಡ ಇಬ್ಬರನ್ನೂ ತೋಡುಪುಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕುಸಿತದಿಂದ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ಮತ್ತು ರಕ್ಷಣಾ ದಳ, ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಳಿಕ ಅವಶೇಷಗಳಡಿಯಿಂದ ಸುಮತಿ ಅವರ ಮೃತದೇಹವನ್ನು ಹೊರತೆಗೆದರು.

ಇನ್ನೊಂದೆಡೆ, ಕೊಟ್ಟಾಯಂ ಜಿಲ್ಲೆಯ ಪೂಂಜಾರ್‌ನ ಪಯ್ಯನಿತೋಟಂ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೋಸೆಫ್ ಎಂಬ ಯುವಕ ಮೃತಪಟ್ಟಿದ್ದಾರೆ. ಅವರ ತಾಯಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಮತ್ತೊಂದು ದುರ್ಘಟನೆಯಲ್ಲಿ ಇಡುಕ್ಕಿ ಜಿಲ್ಲೆಯ ವಾಗಮನ್ ಪ್ರದೇಶದಲ್ಲಿ ಮನೆಯ ಮೇಲೆ ಭೂಕುಸಿತ ಸಂಭವಿಸಿ ಪ್ರಭಾಕರನ್ ನಾಯರ್ ಮೃತಪಟ್ಟಿದ್ದಾರೆ. ಕೊಟ್ಟಾಯಂನ ವೈಕೋಮ್ ಮೂಲದವರಾದ ನಾಯರ್ ಅವರ ಮೃತದೇಹವನ್ನು ಹಲವು ಗಂಟೆಗಳ ಶೋಧ ಕಾರ್ಯದ ಬಳಿಕ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಕೇರಳದ ಹಲವು ಜಿಲ್ಲೆಗಳಲ್ಲಿ ಆಡಳಿತ ಎಚ್ಚರಿಕೆ ವಹಿಸಿದ್ದು, ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ಮೈಸೂರಿಗೆ ಡಿಕೆಶಿ: ಕಾಂಗ್ರೆಸ್‌ನಿಂದ ಭರ್ಜರಿ ಸ್ವಾಗತ

0

ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮೈಸೂರು ಪ್ರವಾಸ ಕೈಗೊಂಡಿರುವ ಡಿ.ಕೆ. ಶಿವಕುಮಾರ್ ಅವರ ಆಗಮನವನ್ನು ಕಾಂಗ್ರೆಸ್ ಐತಿಹಾಸಿಕ ಕಾರ್ಯಕ್ರಮವನ್ನಾಗಿ ರೂಪಿಸಿದೆ. ಕಾರಂಜಿ ಕೆರೆ ವೃತ್ತದಿಂದ ಕುರುಬಾರಹಳ್ಳಿ ವೃತ್ತದವರೆಗೆ ನಡೆಯಲಿರುವ ಭವ್ಯ ಮೆರವಣಿಗೆಯ ಮೂಲಕ ಪಕ್ಷದ ಸಂಘಟನಾ ಬಲ ಪ್ರದರ್ಶಿಸಲು ನಾಯಕರು ಮುಂದಾಗಿದ್ದಾರೆ.

ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿದ್ದು, ರಸ್ತೆ ಬದಿಯಲ್ಲಿ ಮರದ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ನಗರದ ಪ್ರಮುಖ ಭಾಗಗಳಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದ್ದು, ಕಾರ್ಯಕರ್ತರು ಸಂಭ್ರಮದ ವಾತಾವರಣ ನಿರ್ಮಿಸಿದ್ದಾರೆ.

ಮುಖ್ಯಮಂತ್ರಿಗೆ ಕ್ರೇನ್ ಮೂಲಕ ವಿಶೇಷ ಹಾರ ಹಾಕಿ ಸ್ವಾಗತಿಸುವ ಕಾರ್ಯಕ್ರಮ ರೂಪಿಸಲಾಗಿದೆ. ವೀಳ್ಯದ ಎಲೆ, ಮಲ್ಲಿಗೆ ಹಾಗೂ ತಾವರೆ ಹೂಗಳಿಂದ ತಯಾರಿಸಲಾದ ಬೃಹತ್ ಹಾರ ಈ ಸ್ವಾಗತದ ಪ್ರಮುಖ ಆಕರ್ಷಣೆಯಾಗಲಿದೆ.

ಮೆರವಣಿಗೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಆಗಸ್ಟ್ 2ಕ್ಕೆ ಪೊಲೀಸ್ ಕಾನ್ಸ್ʼಟೇಬಲ್ ಪರೀಕ್ಷೆ: ಹಿಜಾಬ್ ಸೇರಿ ಧಾರ್ಮಿಕ ಉಡುಪುಗಳಿಗೆ ಅವಕಾಶವಿಲ್ಲ – ಖರ್ಗೆ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ಲಿಖಿತ ಪರೀಕ್ಷೆ ಆಗಸ್ಟ್ 2ರಂದು ನಡೆಯಲಿದ್ದು, ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಕ್ರಮಮುಕ್ತವಾಗಿ ನಡೆಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷೆಗೆ ಸಂಬಂಧಿಸಿದ ಉಡುಪು ನಿಯಮಗಳು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಅಭ್ಯರ್ಥಿಗಳಿಗೆ ಪ್ರಕಟಿಸಲಾಗಿದೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪರೀಕ್ಷೆಯ ವೇಳೆ ಹಿಜಾಬ್ ಸೇರಿದಂತೆ ಮುಖ, ತಲೆ ಅಥವಾ ಕಿವಿಯನ್ನು ಮುಚ್ಚುವ ಯಾವುದೇ ರೀತಿಯ ಉಡುಪುಗಳಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಧಾರ್ಮಿಕ ಉಡುಪುಗಳ ಬಗ್ಗೆ ಯಾವುದೇ ಗೊಂದಲ ಉಂಟಾಗದಂತೆ ಎಲ್ಲಾ ನಿಯಮಗಳನ್ನು ಪ್ರವೇಶ ಪತ್ರದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತದೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ 24 ಗಂಟೆಗಳ ಮುಂಚಿತವಾಗಿ ಸ್ಯಾನಿಟೈಸೇಶನ್ ಕಾರ್ಯ ನಡೆಯಲಿದ್ದು, ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೂ ಮೊಬೈಲ್ ಫೋನ್ ಬಳಕೆಗೆ ಅವಕಾಶ ಇರುವುದಿಲ್ಲ. ಪರೀಕ್ಷೆಗೆ ಸಂಬಂಧಿಸಿದಂತೆ ಖಾಸಗಿ ತರಬೇತಿ ಕೇಂದ್ರಗಳ ಮೇಲೂ ವಿಶೇಷ ನಿಗಾ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಜನಿವಾರ, ಶಿವದಾರ, ಉಡದಾರ, ಮಾಂಗಲ್ಯ ಸರ, ಮುಗುತಿ, ಕುಂಕುಮ, ಉಂಗುರ, ತಾಯತ ಸೇರಿದಂತೆ ಧರಿಸಬಹುದಾದ ವಸ್ತುಗಳ ಕುರಿತು ಅಭ್ಯರ್ಥಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ಸುಮಾರು ಎರಡೂವರೆ ಗಂಟೆ ಮುಂಚಿತವಾಗಿ ಆಗಮಿಸಿ ಪರಿಶೀಲನೆಗೆ ಒಳಗಾಗುವಂತೆ ಸೂಚಿಸಲಾಗಿದೆ.

ಇದೇ ವೇಳೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಎಚ್. ಅವರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಪರೀಕ್ಷೆಯ ಪ್ರಮುಖ ನಿಯಮಗಳು:

  • ಹಿಜಾಬ್ ಸೇರಿದಂತೆ ತಲೆ, ಕಿವಿ ಅಥವಾ ಮುಖ ಮುಚ್ಚುವ ಉಡುಪುಗಳಿಗೆ ಅವಕಾಶವಿಲ್ಲ.
  • ಶೂ, ಟೋಪಿ ಹಾಗೂ ಹೆಚ್ಚಿನ ಜೇಬುಗಳಿರುವ ಜೀನ್ಸ್ ಧರಿಸುವಂತಿಲ್ಲ.
  • ಪರೀಕ್ಷಾ ಕೊಠಡಿಗೆ ಮೊಬೈಲ್, ನೀರಿನ ಬಾಟಲಿ, ಆಹಾರ ಪದಾರ್ಥ, ಪುಸ್ತಕ, ಚೀಟಿ, ನೋಟ್‌ಪ್ಯಾಡ್, ಪ್ಲಾಸ್ಟಿಕ್ ಪೌಚ್, ಸ್ಕೆಲ್, ರಬ್ಬರ್, ಪೆನ್ಸಿಲ್ ಬಾಕ್ಸ್ ಸೇರಿದಂತೆ ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.
  • ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು.

ಪರೀಕ್ಷೆಯನ್ನು ಅಕ್ರಮರಹಿತವಾಗಿ ನಡೆಸುವ ಉದ್ದೇಶದಿಂದ ಈ ಎಲ್ಲಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಾನುಕುಂಟೆ ಕೆಎಂಎಫ್ ಘಟಕದಲ್ಲಿ ಕಳಪೆ ಪಶು ಆಹಾರ ತಯಾರಿಸಿ ಭಾರೀ ಗೋಲ್ಮಾಲ್!?

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (KMF) ತಯಾರಿಸುತ್ತಿರುವ ನಂದಿನಿ ಪಶು ಆಹಾರದ ಗುಣಮಟ್ಟದ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ರಾಜಾನುಕುಂಟೆಯ ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕಳಪೆ ಕಚ್ಚಾ ವಸ್ತುಗಳನ್ನು ಬಳಸಿ ಆಹಾರ ಉತ್ಪಾದನೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಈ ಸಂಬಂಧ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪವೂ ಕೇಳಿಬಂದಿದ್ದು, ಕಳೆದ ಎರಡು ತಿಂಗಳಲ್ಲಿ ಕಳಪೆ ಪಶು ಆಹಾರ ಸೇವನೆಯಿಂದ ಸುಮಾರು 1,600 ಹಸುಗಳು ಸಾವನ್ನಪ್ಪಿವೆ ಹಾಗೂ ಸಾವಿರಾರು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಿವೆ ಎಂದು ರೈತರು ಆರೋಪಿಸಿದ್ದಾರೆ.

ಆರೋಪಗಳ ಪ್ರಕಾರ, ಪಶು ಆಹಾರ ತಯಾರಿಕೆಗೆ ಅಗತ್ಯವಿರುವ ಕಾಕಂಬಿ (Molasses) ಖರೀದಿಯಲ್ಲಿ ಗುಣಮಟ್ಟದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕಡಿಮೆ ಗುಣಮಟ್ಟದ TRS ಹೊಂದಿದ್ದ ಕಚ್ಚಾ ವಸ್ತುಗಳನ್ನು ಖರೀದಿಸಿ, ಲ್ಯಾಬ್ ಪರೀಕ್ಷೆಯಲ್ಲಿ ಗುಣಮಟ್ಟ ದೃಢಪಡಿಸದೇ ಸುಮಾರು 86,000 ಮೆಟ್ರಿಕ್ ಟನ್ ಪಶು ಆಹಾರವನ್ನು ಉತ್ಪಾದಿಸಲಾಗಿದೆ ಎನ್ನಲಾಗಿದೆ.

ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಹಸುಗಳ ಆರೋಗ್ಯ ಹದಗೆಟ್ಟಿದ್ದು, ಹಾಲಿನ ಉತ್ಪಾದನೆ ಕುಸಿದಿದೆ ಎಂದು ರೈತರು ದೂರಿದ್ದಾರೆ. ಕೆಟ್ಟ ವಾಸನೆ ಹಾಗೂ ಕಳಪೆ ಗುಣಮಟ್ಟದಿಂದ ಹಸುಗಳು ಆಹಾರ ಸೇವಿಸಲು ನಿರಾಕರಿಸುತ್ತಿದ್ದು, ಹಲವು ಜಾನುವಾರುಗಳು ಗರ್ಭಧಾರಣೆಯ ಸಮಸ್ಯೆ, ಅನಾರೋಗ್ಯ ಹಾಗೂ ಸಾವಿಗೆ ಒಳಗಾಗಿವೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಆನೇಕಲ್, ನೆಲಮಂಗಲ, ರಾಮನಗರ ಹಾಗೂ ಚನ್ನಪಟ್ಟಣ ಭಾಗದ ಹೈನುಗಾರರು ಈ ಬೆಳವಣಿಗೆಯಿಂದ ಆತಂಕಗೊಂಡಿದ್ದಾರೆ. ಹಾಲು ಸಂಗ್ರಹ ಕೇಂದ್ರಗಳಲ್ಲಿ ರೈತರಿಗೆ ನಂದಿನಿ ಪಶು ಆಹಾರವನ್ನೇ ಖರೀದಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಬಮೂಲ್ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸುಮಾರು 14,500 ಮೆಟ್ರಿಕ್ ಟನ್ ಪಶು ಆಹಾರ ಮಾರಾಟವಾಗುತ್ತಿದ್ದು, ಕಳಪೆ ಆಹಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು ಟನ್‌ಗಟ್ಟಲೆ ಪಶು ಆಹಾರವನ್ನು ರಾಜಾನುಕುಂಟೆ ಘಟಕಕ್ಕೆ ಹಿಂತಿರುಗಿಸುತ್ತಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾವೇರಿ ವಿವಾದ: ನೀರನ್ನ ಇನ್ನೂ ಬಿಟ್ಟಿಲ್ಲ, ನಾಳೆ ಸಭೆಯ ಬಳಿಕ ತೀರ್ಮಾನ – ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಡ್ಯಾಂ ತುಂಬಿದರೆ ನೀರನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜಲಾಶಯಗಳ ಪರಿಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇನ್ನೂ ನಾವು ತಮಿಳುನಾಡಿಗೆ ನೀರು ಬಿಟ್ಟಿಲ್ಲ. ಆದರೆ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಸಂಜೆ ವೇಳೆಗೆ ಮತ್ತೊಂದು ಜಲಾಶಯ ತುಂಬುವ ಸ್ಥಿತಿಯಲ್ಲಿದೆ. ಡ್ಯಾಂ ತುಂಬಿದರೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು.

ಸರ್ವಪಕ್ಷ ಸಭೆ ಕರೆಯುವ ವಿಚಾರಕ್ಕೆ ಬಿಜೆಪಿ ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, “ಸರ್ವಪಕ್ಷ ಸಭೆ ಕರೆಯುವಂತೆ ಸಲಹೆ ನೀಡಿದ್ದು ಬಿಜೆಪಿಯವರೇ. ಈಗ ಅದನ್ನೇ ಟೀಕಿಸುತ್ತಿದ್ದಾರೆ. ಅವರು ಆರೋಪ ಮಾಡಲಿ. ನಾವು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುತ್ತೇವೆ” ಎಂದರು.

ಆಗಸ್ಟ್ 2ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಕಾವೇರಿ ನೀರು ಹಂಚಿಕೆ, ಜಲಾಶಯಗಳ ನೀರಿನ ಮಟ್ಟ ಹಾಗೂ ಮುಂದಿನ ಕ್ರಮಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

“ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಇಂದು ಸಂಜೆ ಮತ್ತೊಂದು ಡ್ಯಾಂ ತುಂಬುವ ಹಂತಕ್ಕೆ ಬರಬಹುದು. ಅಂತಹ ಪರಿಸ್ಥಿತಿಯಲ್ಲಿ ನೀರನ್ನು ತಡೆಹಿಡಿಯುವುದು ಸಾಧ್ಯವಿಲ್ಲ. ನಾಳಿನ ಸರ್ವಪಕ್ಷ ಸಭೆಯ ಬಳಿಕ ಸರ್ಕಾರ ಮುಂದಿನ ತೀರ್ಮಾನ ಪ್ರಕಟಿಸುತ್ತದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.