Home Blog Page 222

ಪವಿತ್ರಾ ಗೌಡಗೆ ಜೈಲಿನಲ್ಲಿ ಮನೆಯೂಟಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್: ದರ್ಶನ್ ಮುಂದಿನ ನಡೆ ಬಗ್ಗೆ ಚರ್ಚೆ

ಹೊಸ ವರ್ಷ ದರ್ಶನ್ ಮತ್ತು ಪವಿತ್ರಾ ಗೌಡ ಪಾಲಿಗೆ ಕಹಿ ನೆನಪುಗಳನ್ನು ಮರೆಸುತ್ತೋ ಇಲ್ಲವೋ ಅನ್ನೋ ಪ್ರಶ್ನೆ ಇದ್ದರೂ, ಪವಿತ್ರಾ ಗೌಡಗೆ ಮಾತ್ರ ಜೈಲಿನೊಳಗಿಂದಲೇ ಒಂದು ಪಾಸಿಟಿವ್ ಸುದ್ದಿ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ಪವಿತ್ರಾ ಗೌಡಗೆ ಮನೆಯೂಟ ನೀಡಲು ಕೋರ್ಟ್ ಆದೇಶ ಹೊರಡಿಸಿದೆ.

ಒಂದೆಡೆ ದರ್ಶನ್ ಜೊತೆಗಿನ ಸಂಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದ ಪವಿತ್ರಾ ಗೌಡ, ಮತ್ತೊಂದೆಡೆ ಅದೇ ವಿಚಾರವೇ ತಮಗೆ ಸಂಕಷ್ಟದ ದಾರಿ ತೆರೆದಿದೆ ಎಂಬ ಚರ್ಚೆ ಇದೆ. ಕಳೆದ ವರ್ಷ ಹೊಸ ವರ್ಷದ ಹೊತ್ತಿಗೆ ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದ್ದ ಪವಿತ್ರಾ, ಈ ವರ್ಷ ಜೈಲಿನ ಕತ್ತಲ ಕೋಣೆಯಲ್ಲಿ ದಿನ ಎಣಿಸುವ ಸ್ಥಿತಿಗೆ ತಲುಪಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಆರಂಭವಾಗಿದ್ದು, ಮುಂದೇನು ಆಗಲಿದೆ ಎಂಬ ಭಯದ ನಡುವೆಯೇ ಪವಿತ್ರಾ ದಿನ ಕಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲೇ ಮನೆಯೂಟಕ್ಕಾಗಿ ಸಲ್ಲಿಸಿದ್ದ ಅರ್ಜಿಗೆ ಸೆಷನ್ಸ್ ಕೋರ್ಟ್ ಅಸ್ತು ಎಂದಿದೆ. ಆದರೆ ಆದೇಶ ಪ್ರತಿ ತಲುಪಿದರೂ, ಜೈಲಿನ ಆಡಳಿತಾತ್ಮಕ ಪ್ರಕ್ರಿಯೆಗಳ ಕಾರಣದಿಂದ ಇನ್ನೂ ಮನೆಯೂಟ ಪವಿತ್ರಾ ಪಾಲಿಗೆ ಲಭ್ಯವಾಗಿಲ್ಲ.

ಜೈಲು ನಿಯಮಗಳ ಪ್ರಕಾರ ಮನೆಯೂಟ ತರಿಸುವ ವ್ಯಕ್ತಿ ಯಾರು, ಅವರ ಹಾಗೂ ಆರೋಪಿಯ ನಡುವಿನ ಸಂಬಂಧ ಏನು, ಅಗತ್ಯ ದಾಖಲೆಗಳು ಯಾವುವು ಎಂಬ ಮಾಹಿತಿಯನ್ನು ನೀಡಬೇಕಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮನೆಯೂಟ ಆರಂಭವಾಗಲಿದೆ ಎನ್ನಲಾಗಿದೆ.

ಪವಿತ್ರಾ ಗೌಡ ಜೊತೆ ಲಕ್ಷ್ಮಣ್ ಹಾಗೂ ನಾಗರಾಜ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಮನೆಯೂಟಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ದರ್ಶನ್‌ಗೆ ಮಾತ್ರ ಈ ಸೌಲಭ್ಯ ಯಾಕೆ ದೊರೆತಿಲ್ಲ ಎಂಬ ಗೊಂದಲ ಹುಟ್ಟಿಕೊಂಡಿದೆ. ಮುಂದಿನ ದಿನಗಳಲ್ಲಿ ದರ್ಶನ್ ಕೂಡ ಮನೆಯೂಟಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂಬ ಮಾತು ಕೇಳಿಬರುತ್ತಿದೆ.

ಇದರ ನಡುವೆ, ಆರೋಪಿಗಳಿಗೆ ಮನೆಯೂಟ ನೀಡುವ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಒಟ್ಟಿನಲ್ಲಿ ಪವಿತ್ರಾ ಗೌಡ ಪಾಲಿಗೆ ಮನೆಯೂಟ ಸಿಕ್ಕಿರುವುದು ಮುಂದಿನ ದಿನಗಳಲ್ಲಿ ಜಾಮೀನು ಅರ್ಜಿಗೂ ದಾರಿ ತೆರೆದೀತಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ರಾಜ್ಯದ ದೀರ್ಘಾವಧಿ ಸಿಎಂ ಆಗಲಿದ್ದಾರೆ ಸಿದ್ದರಾಮಯ್ಯ: ನಾಳೆ ಹೊಸ ದಾಖಲೆ

0

ಬೆಂಗಳೂರು: ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಸಿಎಂ ಸಿದ್ದರಾಮಯ್ಯ ಇನ್ನೇನು ಒಂದು ದಿನ ದೂರದಲ್ಲಿದ್ದಾರೆ. 7 ವರ್ಷ 239 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ನಾಳೆ ಮುರಿಯಲಿದ್ದಾರೆ.

ಇಂದಿನವರೆಗೆ ಸಿದ್ದರಾಮಯ್ಯ ಕೂಡ 7 ವರ್ಷ 239 ದಿನಗಳ ಆಡಳಿತಾವಧಿ ಪೂರ್ಣಗೊಳಿಸಿದ್ದು, ಮೂರನೇ ಸ್ಥಾನದಲ್ಲಿರುವ ಎಸ್. ನಿಜಲಿಂಗಪ್ಪ (7 ವರ್ಷ 175 ದಿನ), ನಾಲ್ಕನೇ ಸ್ಥಾನದಲ್ಲಿರುವ ರಾಮಕೃಷ್ಣ ಹೆಗಡೆ ಹಾಗೂ ಐದನೇ ಸ್ಥಾನದಲ್ಲಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಹಿಂದಿಕ್ಕಿದ್ದಾರೆ.

ಸಿದ್ದರಾಮಯ್ಯ ಅವರ ಮೊದಲ ಅವಧಿಯ ನಂತರ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗದ ಕಾರಣ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚಿಸಲಾಗಿತ್ತು. ಆದರೆ 14 ತಿಂಗಳಲ್ಲಿ ಸರ್ಕಾರ ಪತನಗೊಂಡಿತು. ಬಳಿಕ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು. 2023ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದ ನಂತರ ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದರು.

ಲೋಕದಳ ಮತ್ತು ಜನತಾ ದಳದಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಸಿದ್ದರಾಮಯ್ಯ, 2006ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ವಿಪಕ್ಷ ನಾಯಕನಾಗಿ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಜೆಟ್ ಮಂಡನೆಯಲ್ಲಿ ಸಹ ಅವರು ದಾಖಲೆ ಬರೆದಿದ್ದು, ಇದುವರೆಗೆ 16 ಬಜೆಟ್ ಮಂಡಿಸಿದ್ದಾರೆ.

ಸಿದ್ದರಾಮಯ್ಯ ಹೊಸ ದಾಖಲೆ ಬರೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆಗೆ ಸಜ್ಜಾಗಿದ್ದು, ‘ದೀರ್ಘಾವಧಿ ಸಿಎಂ ಸಿದ್ದರಾಮಯ್ಯ’ ಎಂಬ ಶುಭಾಶಯಗಳ ಬ್ಯಾನರ್‌ಗಳು ಮುಖ್ಯಮಂತ್ರಿಗಳ ಕಾವೇರಿ ನಿವಾಸದ ಬಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.

Gold Rate Today: ಮತ್ತೆ ಚಿನ್ನದ ಬೆಲೆ ಏರಿಕೆ; ಇಂದಿನ ದರ ಪಟ್ಟಿ ಇಂತಿದೆ

0

ಚಿನ್ನ ಕೇವಲ ಸ್ಥಿರ ಸಂಪತ್ತಾಗಿ ಉಳಿದಿಲ್ಲ, ಬದಲಾಗಿ ಕಾಲ ಉರುಳಿದಂತೆ ಹೆಚ್ಚು ಲಾಭ ನೀಡುವ ಕಮೊಡಿಟಿಯಾಗಿಯೂ ಪ್ರಸಿದ್ಧವಾಗುತ್ತಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚಿನ್ನಕ್ಕೆ ಸಾಕಷ್ಟು ಮಹತ್ವ ನೀಡಲಾಗಿದೆ. ಬಹುತೇಕ ಭಾರತೀಯ ಕುಟುಂಬಗಳು ಚಿನ್ನವನ್ನು ಹೊಂದಿವೆ ಕಾರಣ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕವೆಂದೂ ನಂಬಲಾಗಿದೆ.

ಹಾಗಾಗಿ, ಚಿನ್ನಕ್ಕೆ ಭಾರತದಂತಹ ದೇಶದಲ್ಲಿ ಬೇಡಿಕೆ ಇದ್ದೆ ಇರುತ್ತದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಸಂಪತ್ತಿನ ಪ್ರತೀಕವೆಂದೇ ಭಾವಿಸಲಾಗಿದೆ. ಹಾಗಾಗಿ, ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತವೆ. ಸದ್ಯ ಜನವರಿ 5, 2026, ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,740 ರೂಪಾಯಿ ಇದ್ದು,

ಇಂದು 158 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,37,400 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 1580 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 12,595 ರೂಪಾಯಿ ಇದ್ದು, ಇಂದು 145 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,25,950 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 1450 ರೂ ಹೆಚ್ಚಳ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13,740 ರೂಪಾಯಿ ಇದ್ದು,

10 ಗ್ರಾಂ ಶುದ್ಧ ಚಿನ್ನಕ್ಕೆ 1,37,400 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.ಬೆಳ್ಳಿ ಬೆಲೆ ಇಂದು 6 ರೂಪಾಯಿ ಏರಿಕೆಯಾಗಿದ್ದು, 247 ರೂ ಆಗಿದ್ದು, ಕೆಜಿಗೆ 2,47,000 ರೂ ಇದೆ. ಈ ತಿಂಗಳ, ಹಾಗೂ ಚಿನ್ನದ ಗರಿಷ್ಠ ದರ ಜನವರಿ 5 ಇಂದು 13740 ರೂಪಾಯಿ ದಾಖಲಾಗಿದೆ. ಕನಿಷ್ಠ ದರವು ಜ.1 ರಂದು 13506 ರೂ ಇತ್ತು, ಸದ್ಯ ಬೆಲೆ ಏರಿಕೆಯ ಟ್ರೆಂಡ್‌ನಲ್ಲಿದ್ದು 1,74 % ರಷ್ಟು ಹೆಚ್ಚಳ ಆಗಿದೆ.

ಟಿಕೆಟ್ ಮರು ಬಳಕೆ ಪ್ರಕರಣ: ಬಿಎಂಟಿಸಿ ನಿರ್ವಾಹಕನಿಗೆ ವಿಧಿಸಿದ ಶಿಕ್ಷೆ ಮಾನ್ಯ– ಹೈಕೋರ್ಟ್

0

ಬೆಂಗಳೂರು: ಮೊದಲೇ ಒಬ್ಬ ಪ್ರಯಾಣಿಕನಿಗೆ ವಿತರಿಸಿದ್ದ ಟಿಕೆಟ್ ಅನ್ನು ವಾಪಸ್ ಪಡೆದು ಮತ್ತೊಬ್ಬ ಪ್ರಯಾಣಿಕನಿಗೆ ಮರು ವಿತರಿಸಿ ಹಣ ಪಡೆಯುವ ನಿರ್ವಾಹಕನ ಕೃತ್ಯವು ಕಳ್ಳತನಕ್ಕೆ ಸಮಾನವಾಗಿದ್ದು, ಇದನ್ನು ದುರ್ನಡತೆಯೆಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಮೊದಲು ವಿತರಿಸಿದ್ದ ಟಿಕೆಟ್‌ಗಳನ್ನು ಮರು ಪಡೆದು ಐವರು ಪ್ರಯಾಣಿಕರಿಗೆ ಮತ್ತೆ ವಿತರಿಸಿ 18 ರೂ. ಹಣವನ್ನು ಜೇಬಿಗಿಳಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ನಿರ್ವಾಹಕ ನಾರಾಯಣನಿಗೆ ಬಿಎಂಟಿಸಿ ವಿಧಿಸಿದ್ದ ಎರಡು ವೇತನ ಹೆಚ್ಚಳ ತಡೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಈ ಸಂಬಂಧ ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕರು, ನಾರಾಯಣನಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿದ್ದ ಕೈಗಾರಿಕಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಎಂ. ಜೋತಿ ಅವರ ಪೀಠ ಈ ಆದೇಶ ನೀಡಿದೆ.

ಕಳ್ಳತನದ ದುಷ್ಕೃತ್ಯ ಸಾಬೀತಾಗಿದ್ದರೂ ಕೈಗಾರಿಕಾ ನ್ಯಾಯಾಲಯವು ಕೈಗಾರಿಕಾ ವ್ಯಾಜ್ಯ ಕಾಯ್ದೆ–1947ರ ಸೆಕ್ಷನ್ 11-ಎ ಅಡಿಯಲ್ಲಿ ವಿವೇಚನಾ ಅಧಿಕಾರ ಬಳಸಿಕೊಂಡು ಶಿಕ್ಷೆ ರದ್ದುಪಡಿಸಿರುವುದು ಕಾನೂನುಬದ್ಧವಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಕಳ್ಳತನದಂತಹ ಗಂಭೀರ ಆರೋಪಕ್ಕೆ ವಿಧಿಸಲಾದ ಶಿಕ್ಷೆ ಅತಿಯಾದದ್ದಲ್ಲ ಎಂದು ಹೇಳಿದ ನ್ಯಾಯಾಲಯ, ಇಂತಹ ದುಷ್ಕೃತ್ಯವು ನೌಕರನ ವಜಾಗೆ ಕಾರಣವಾಗುವಷ್ಟು ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

2013ರ ಜುಲೈ 2ರಂದು ಕೈಗಾರಿಕಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿ, ಬಿಎಂಟಿಸಿ ಶಿಸ್ತು ಪ್ರಾಧಿಕಾರ ವಿಧಿಸಿದ್ದ ಶಿಕ್ಷೆಯನ್ನು ಕಾಯಂಗೊಳಿಸಲಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಭಾರತದ ತೈಲ ಖರೀದಿ ನೀತಿ ಬಗ್ಗೆ ಟ್ರಂಪ್ ಅಸಮಾಧಾನ; ಸುಂಕ ಹೆಚ್ಚಿಸುವ ಎಚ್ಚರಿಕೆ

0

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಭಾರತ ತನ್ನ ನಿಲುವು ಮುಂದುವರೆಸಿದರೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಟ್ರಂಪ್ ನೀಡಿರುವ ಹೇಳಿಕೆಯ ಆಡಿಯೋವನ್ನು ಶ್ವೇತಭವನ ಬಿಡುಗಡೆ ಮಾಡಿದೆ.

ವೆನುಜುವೆಲಾದ ಪದಚ್ಯುತ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದ್ದು, ವೆನುಜುವೆಲಾದ ತೈಲ ಪ್ರದೇಶವನ್ನು ಅಮೆರಿಕ ವಶಕ್ಕೆ ತೆಗೆದುಕೊಂಡು ತಾವೇ ನಿರ್ವಹಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಈ ಬೆಳವಣಿಗೆಯ ನಡುವೆಯೇ ಭಾರತದ ರಷ್ಯಾ ತೈಲ ಖರೀದಿ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಆಡಿಯೋದಲ್ಲಿ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುತ್ತಲೇ, ಭಾರತದ ತೈಲ ಖರೀದಿ ನೀತಿಯ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮುಂದುವರೆದರೆ ಅದರ ಪರಿಣಾಮಗಳನ್ನು ಭಾರತ ಎದುರಿಸಬೇಕಾಗಬಹುದು ಎಂಬ ಸಂದೇಶವನ್ನು ಅವರು ಪರೋಕ್ಷವಾಗಿ ನೀಡಿದ್ದಾರೆ.

“ನನ್ನನ್ನು ಸಂತೋಷಪಡಿಸಬೇಕು ಎಂದು ಪ್ರಧಾನಿ ಮೋದಿ ಬಯಸುತ್ತಾರೆ. ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ತಿಳಿದಿತ್ತು. ನನ್ನನ್ನು ಸಂತೋಷಪಡಿಸುವುದು ಮುಖ್ಯ ಎಂದು ಅವರು ಅರಿತಿದ್ದರು” ಎಂದು ಟ್ರಂಪ್ ಹೇಳಿದ್ದಾರೆ.

ಇಂದಿನಿಂದ SSLC ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ಆರಂಭ: 3 ಹಂತದ ವೇಳಾಪಟ್ಟಿ ಪ್ರಕಟ

0

ಬೆಂಗಳೂರು: 2025–26ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ಮೊದಲ ಹಂತದ ಪೂರ್ವ ಸಿದ್ಧತಾ ಪರೀಕ್ಷೆ ಆರಂಭವಾಗಿದೆ. ಮುಖ್ಯ ಪರೀಕ್ಷೆಗೆ ಮುನ್ನ ಮೂರು ಹಂತಗಳಲ್ಲಿ ಈ ಪ್ರಿಪರೇಟರಿ ಪರೀಕ್ಷೆ ನಡೆಸಲಾಗುತ್ತಿದ್ದು, ಫೆಬ್ರುವರಿಯಲ್ಲಿ ಕೊನೆಯ ಹಂತದ ಪರೀಕ್ಷೆ ಮುಕ್ತಾಯಗೊಳ್ಳಲಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಈಗಾಗಲೇ ಮೂರು ಹಂತದ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಹಾಗೂ ಶಿಕ್ಷಕರಿಗೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಳೆಯಲು ಮಾರ್ಗದರ್ಶಿಯಾಗಲಿದೆ ಎಂದು ಮಂಡಳಿ ತಿಳಿಸಿದೆ.

ಮೊದಲ ಹಂತದ ಪರೀಕ್ಷೆ ಜನವರಿ 5ರಿಂದ ಆರಂಭಗೊಂಡು ಜನವರಿ 10ರಂದು ಮುಕ್ತಾಯಗೊಳ್ಳಲಿದೆ. ಎರಡನೇ ಹಂತದ ಪರೀಕ್ಷೆ ಜನವರಿ 27ರಿಂದ ಫೆಬ್ರುವರಿ 2ರವರೆಗೆ ನಡೆಯಲಿದೆ. ಮೂರನೇ ಹಾಗೂ ಕೊನೆಯ ಹಂತದ ಪರೀಕ್ಷೆ ಫೆಬ್ರುವರಿ 23ರಂದು ಆರಂಭವಾಗಿ ಫೆಬ್ರುವರಿ 28ಕ್ಕೆ ಮುಕ್ತಾಯವಾಗಲಿದೆ.

ವೇಳಾಪಟ್ಟಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಶಾಲೆಗಳ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಪರೀಕ್ಷೆ ಕುರಿತ ಮಾಹಿತಿಯು ಎಲ್ಲ ವಿದ್ಯಾರ್ಥಿಗಳಿಗೆ ತಲುಪುವಂತೆ ಕ್ರಮ ವಹಿಸಲು ಜಿಲ್ಲಾ ಉಪನಿರ್ದೇಶಕರಿಗೂ ಸೂಚಿಸಲಾಗಿದೆ.

ಪರೀಕ್ಷೆಯ ದಿನದ ಪ್ರಶ್ನೆ ಪತ್ರಿಕೆಗಳನ್ನು ಮುಖ್ಯಶಿಕ್ಷಕರ ಲಾಗಿನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳನ್ನು ಡೌನ್‌ಲೋಡ್ ಮಾಡಿ ಮುದ್ರಿಸಿ ಪರೀಕ್ಷೆ ನಡೆಸಬೇಕು ಎಂದು ತಿಳಿಸಲಾಗಿದೆ. ಪರೀಕ್ಷೆ ಮುಕ್ತಾಯವಾದ ಮರುದಿನವೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು. ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆ ಮಾರ್ಚ್ 18ರಿಂದ ಆರಂಭವಾಗಲಿದೆ.

ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ಆರೋಪ: ಶಾಸಕ ಲಕ್ಷ್ಮಣ್ ಸವದಿ ಸೇರಿ 8 ಜನರ ಮೇಲೆ ಪ್ರಕರಣ

0

ಚಿಕ್ಕೋಡಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗರಾಜ ಕರೆಣ್ಣವರ್ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ವಿರುದ್ಧ ಅಧಿಕೃತವಾಗಿ ಎಫ್ಐಆರ್ ದಾಖಲಾಗಿದೆ.

ಹಲ್ಲೆಯಿಂದ ಗಾಯಗೊಂಡ ನಿಂಗರಾಜ ಕರೆಣ್ಣವರ್ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲೇ ಅಥಣಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶಾಸಕ ಲಕ್ಷ್ಮಣ್ ಸವದಿ, ಪುತ್ರ ಚಿದಾನಂದ ಸವದಿ ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ನಿಂಗರಾಜ ಕರೆಣ್ಣವರ್ ನೀಡಿರುವ ದೂರಿನ ಪ್ರಕಾರ, “ಶಾಸಕ ಲಕ್ಷ್ಮಣ್ ಸವದಿ ಅವರು ಮನೆಗೆ ಕರೆಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಬಳಿಕ ಅವರೇ ಕಪಾಳಕ್ಕೆ ಹೊಡೆದರು. ಪುತ್ರ ಚಿದಾನಂದ ಸವದಿ ಸೊಂಟಕ್ಕೆ ಬಲವಾಗಿ ಒದ್ದರು. ನೆಲಕ್ಕೆ ಬಿದ್ದ ನನ್ನ ಮೇಲೆ 7 ರಿಂದ 8 ಜನರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದರು” ಎಂದು ಗಂಭೀರ ಆರೋಪ ಮಾಡಲಾಗಿದೆ.

ಈ ಸಂಬಂಧ ಅಕ್ರಮ ಗುಂಪು ಸೇರಿ ಹಲ್ಲೆ, ಜೀವ ಬೆದರಿಕೆ, ಮಾರಣಾಂತಿಕ ಹಲ್ಲೆ ಹಾಗೂ ನಿಂದನೆ ಆರೋಪಗಳಡಿ ಬಿಎನ್ಎಸ್ ಕಾಯ್ದೆಯ 189(2), 191(2), 115(2), 351(2), 352(2) ಮತ್ತು 190 ಕಲಂಗಳನ್ನು ಅಳವಡಿಸಲಾಗಿದೆ.

ಪ್ರಕರಣದ ಬೆನ್ನಲ್ಲೇ ಶಾಸಕ ಲಕ್ಷ್ಮಣ್ ಸವದಿ ವಿರುದ್ಧ ದೊಡ್ಡ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಅವರ ಬೆಂಬಲಿಗರು ಇಂದು ಅಥಣಿ ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಮನೆಯಲ್ಲಿ ಮಲಗಿದ್ದ ತಾಯಿ ಮಗು ನಾಪತ್ತೆ; ಬೆಳಿಗ್ಗೆ ಕೆರೆಯಲ್ಲಿ ಶವ ಪತ್ತೆ

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ತಾಯಿ ಮತ್ತು ಮೂರು ವರ್ಷದ ಮಗು ಮನೆ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಕೊಡಿಯಾಲ ಗ್ರಾಮದ ಆರ್ವಾರ ನಿವಾಸಿ ಹರೀಶ್ ಅವರ ಪತ್ನಿ ಮಧುಶ್ರೀ (34) ಮತ್ತು ಪುತ್ರ ಧನ್ವಿ (3) ಮೃತಪಟ್ಟವರು. ಶನಿವಾರ ರಾತ್ರಿ ಮನೆಯಲ್ಲೇ ಇದ್ದ ಮಧುಶ್ರೀ, ಭಾನುವಾರ ಬೆಳಗ್ಗೆ ಮಗುವಿನೊಂದಿಗೆ ಕಾಣೆಯಾಗಿದ್ದರು. ಬೆಳಗ್ಗೆಯಿಂದಲೇ ಮನೆಯವರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದಾಗ, ಮನೆ ಸಮೀಪದ ಕೆರೆಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಮಧುಶ್ರೀ ಅವರು ಮಗುವಿನೊಂದಿಗೆ ಸಾಯಲು ನಿರ್ಧರಿಸಿ, ಮಗುವನ್ನು ತನ್ನ ಸೊಂಟಕ್ಕೆ ಬಟ್ಟೆಯಿಂದ ಕಟ್ಟಿಕೊಂಡು ಕೆರೆಗೆ ಹಾರಿರುವ ಸಾಧ್ಯತೆ ವ್ಯಕ್ತವಾಗಿದೆ. ಕೆರೆಯಲ್ಲಿ ಮೃತದೇಹ ಪತ್ತೆಯಾದಾಗ ಮಗು ತಾಯಿಯನ್ನು ಅಪ್ಪಿಕೊಂಡ ಸ್ಥಿತಿಯಲ್ಲೇ ಕಂಡುಬಂದಿದ್ದು, ಸ್ಥಳದಲ್ಲಿ ನೆರೆದಿದ್ದವರ ಮನಸ್ಸು ಕರಗುವಂತೆ ಮಾಡಿದೆ.

ಮಧುಶ್ರೀ ಮೂಲತಃ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದವರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಹರೀಶ್ ಅವರನ್ನು ವಿವಾಹವಾಗಿದ್ದರು. ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಇತ್ತೇ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಈ ನಡುವೆ, ಮಧುಶ್ರೀ ಅವರ ತಾಯಿ ರತ್ನಾವತಿ ಅವರು ಮಗಳ ಸಾವಿನಲ್ಲಿ ಅನುಮಾನವಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಜ.10ರವರೆಗೆ ವಿದ್ಯುತ್‌ ವ್ಯತ್ಯಯ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಜ.10ರವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆ.ವಿ ಹೆಣ್ಣೂರು ರೋಡ್‌ ಉಪ-ಕೇಂದ್ರ ವ್ಯಾಪ್ತಿಯ ಹಲವೆಡೆ ಇಂದಿನಿಂದ ಜ.10ರವರೆಗೆ ಬೆಳಗ್ಗೆ 9ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ಟ್ ಜಯಂತಿ ಕಾಲೇಜು, ಕೆ. ನಾರಾಯಣಪುರ, ಬಿಳಿ ಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ.ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್ಐ ಗೇಟ್, ಬೈರತಿ ಕ್ರಾಸ್, ಬೈರತಿ ಗ್ರಾಮ, ಎವರ್‌ಗ್ರೀನ್ ಲೇಔಟ್, ಕನಕಶ್ರೀ ಲೇಔಟ್, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ್ ಲೇಔಟ್, ಟ್ರಿನಿಟಿ ಫಾರ್ಚ್ಯೂನ್, ಮೈಕಲ್ ಸ್ಕೂಲ್, ಬಿಎಚ್ಕೆ ಇಂಡಸ್ಟ್ರೀಸ್, ಜಾನಕಿರಾಮ್ ಲೇಔಟ್, ವಡ್ಡರಪಾಳ್ಯ,

ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಆತ್ಮ ವಿದ್ಯಾನಗರ (ಬೈರತಿ ಗ್ರಾಮ), ಕೆಆರ್‌ಸಿ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್‌ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೋನಿ, ಮಂಜುನಾಥ ನಗರ, ಹೊರಮಾವು ಬಿಬಿಎಂಪಿ, ಅಗರ ಗ್ರಾಮ, ಪಾತಾಳಮ್ಮ ದೇವಸ್ಥಾನ, ಎಕೆಆರ್ ಸ್ಕೂಲ್, ನ್ಯೂ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್, ಕ್ರಿಶ್ಚಿಯನ್ ಕಾಲೇಜು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಆಯಾಸವನ್ನು ಕಡಿಮೆ ಮಾಡಲು ನೀವು ಸೇವಿಸಬೇಕಾದ ಆಹಾರಗಳಿವು!

0

ಆಧುನಿಕ ಜೀವನಶೈಲಿ ಮತ್ತು ಜಂಕ್ ಫುಡ್ ಸೇವನೆಯಿಂದ ದೇಹದ ಶಕ್ತಿ ಕಡಿಮೆಯಾಗುವುದರಿಂದ ಅನೇಕರು ಆಯಾಸವನ್ನು ಅನುಭವಿಸುತ್ತಾರೆ. ಆಯಾಸವನ್ನು ಕಡಿಮೆ ಮಾಡಿ ದೇಹವನ್ನು ಪುನರುಜ್ಜೀವನಗೊಳಿಸಲು ಪ್ರತಿದಿನ ಕೆಲವು ಪೋಷಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡುವುದು ಅತ್ಯಂತ ಸಹಾಯಕ.

ಚಿಯಾ ಬೀಜಗಳು: ಒಮೆಗಾ-3, ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಚಿಯಾ ಬೀಜಗಳು ದೀರ್ಘಕಾಲೀನ ಶಕ್ತಿ ಒದಗಿಸುತ್ತವೆ. ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್ ಸಹಿತವು ದೌರ್ಬಲ್ಯ ಮತ್ತು ಆಲಸ್ಯವನ್ನು ಕಡಿಮೆ ಮಾಡುತ್ತದೆ.

ಬಾಳೆಹಣ್ಣು: ನೈಸರ್ಗಿಕ ಶಕ್ತಿದಾಯಕ ಗ್ಲೂಕೋಸ್, ಫ್ರಕ್ಟೋಸ್, ಸುಕ್ರೋಸ್ ಅಂಶದಿಂದ ದೇಹಕ್ಕೆ ತ್ವರಿತ ಶಕ್ತಿ ನೀಡುತ್ತದೆ. ಪೊಟ್ಯಾಸಿಯಮ್ ಮತ್ತು ವಿಟಮಿನ್ B6 ದೌರ್ಬಲ್ಯವನ್ನು ಕಡಿಮೆ ಮಾಡುತ್ತವೆ.

ಬಾದಾಮಿ: ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್ ದೀರ್ಘಕಾಲ ಶಕ್ತಿ ನೀಡುತ್ತವೆ. ಮೆಗ್ನೀಸಿಯಮ್ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ವಿಟಮಿನ್ E ಮತ್ತು B-ಕಾಂಪ್ಲೆಕ್ಸ್ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಾಲ್ನಟ್ಸ್: ಒಮೆಗಾ-3, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಶಕ್ತಿಯನ್ನು ಹೆಚ್ಚಿಸುತ್ತವೆ, ಮೆಗ್ನೀಸಿಯಮ್ ಮತ್ತು ಕಬ್ಬಿಣ ಸ್ನಾಯು ದೌರ್ಬಲ್ಯವನ್ನು ಕಡಿಮೆ ಮಾಡುತ್ತವೆ.

ಓಟ್ಸ್: ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲ. ದೀರ್ಘಕಾಲ ಶಕ್ತಿಯನ್ನು ಒದಗಿಸಿ ಸ್ನಾಯು ಮತ್ತು ನರಮಂಡಲವನ್ನು ಬಲಪಡಿಸುತ್ತದೆ.

ಗ್ರೀನ್ ಟೀ: ಒತ್ತಡ ಮತ್ತು ಆಯಾಸ ಕಡಿಮೆ ಮಾಡುವಲ್ಲಿ ಸಹಾಯಕ, ಏಕಾಗ್ರತೆಯನ್ನು ಸುಧಾರಿಸುತ್ತದೆ.

ಪ್ರತಿನಿತ್ಯ ಈ ಆಹಾರಗಳನ್ನು ಸಮತೋಲನವಾಗಿ ಸೇವಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆಯಾಸವನ್ನು ಕಡಿಮೆ ಮಾಡಬಹುದು ಮತ್ತು ದೇಹವನ್ನು ಸಕ್ರಿಯವಾಗಿರಿಸಬಹುದು.

error: Content is protected !!