Home Blog Page 223

ಆಯಾಸವನ್ನು ಕಡಿಮೆ ಮಾಡಲು ನೀವು ಸೇವಿಸಬೇಕಾದ ಆಹಾರಗಳಿವು!

0

ಆಧುನಿಕ ಜೀವನಶೈಲಿ ಮತ್ತು ಜಂಕ್ ಫುಡ್ ಸೇವನೆಯಿಂದ ದೇಹದ ಶಕ್ತಿ ಕಡಿಮೆಯಾಗುವುದರಿಂದ ಅನೇಕರು ಆಯಾಸವನ್ನು ಅನುಭವಿಸುತ್ತಾರೆ. ಆಯಾಸವನ್ನು ಕಡಿಮೆ ಮಾಡಿ ದೇಹವನ್ನು ಪುನರುಜ್ಜೀವನಗೊಳಿಸಲು ಪ್ರತಿದಿನ ಕೆಲವು ಪೋಷಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡುವುದು ಅತ್ಯಂತ ಸಹಾಯಕ.

ಚಿಯಾ ಬೀಜಗಳು: ಒಮೆಗಾ-3, ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಚಿಯಾ ಬೀಜಗಳು ದೀರ್ಘಕಾಲೀನ ಶಕ್ತಿ ಒದಗಿಸುತ್ತವೆ. ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್ ಸಹಿತವು ದೌರ್ಬಲ್ಯ ಮತ್ತು ಆಲಸ್ಯವನ್ನು ಕಡಿಮೆ ಮಾಡುತ್ತದೆ.

ಬಾಳೆಹಣ್ಣು: ನೈಸರ್ಗಿಕ ಶಕ್ತಿದಾಯಕ ಗ್ಲೂಕೋಸ್, ಫ್ರಕ್ಟೋಸ್, ಸುಕ್ರೋಸ್ ಅಂಶದಿಂದ ದೇಹಕ್ಕೆ ತ್ವರಿತ ಶಕ್ತಿ ನೀಡುತ್ತದೆ. ಪೊಟ್ಯಾಸಿಯಮ್ ಮತ್ತು ವಿಟಮಿನ್ B6 ದೌರ್ಬಲ್ಯವನ್ನು ಕಡಿಮೆ ಮಾಡುತ್ತವೆ.

ಬಾದಾಮಿ: ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್ ದೀರ್ಘಕಾಲ ಶಕ್ತಿ ನೀಡುತ್ತವೆ. ಮೆಗ್ನೀಸಿಯಮ್ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ವಿಟಮಿನ್ E ಮತ್ತು B-ಕಾಂಪ್ಲೆಕ್ಸ್ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಾಲ್ನಟ್ಸ್: ಒಮೆಗಾ-3, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಶಕ್ತಿಯನ್ನು ಹೆಚ್ಚಿಸುತ್ತವೆ, ಮೆಗ್ನೀಸಿಯಮ್ ಮತ್ತು ಕಬ್ಬಿಣ ಸ್ನಾಯು ದೌರ್ಬಲ್ಯವನ್ನು ಕಡಿಮೆ ಮಾಡುತ್ತವೆ.

ಓಟ್ಸ್: ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲ. ದೀರ್ಘಕಾಲ ಶಕ್ತಿಯನ್ನು ಒದಗಿಸಿ ಸ್ನಾಯು ಮತ್ತು ನರಮಂಡಲವನ್ನು ಬಲಪಡಿಸುತ್ತದೆ.

ಗ್ರೀನ್ ಟೀ: ಒತ್ತಡ ಮತ್ತು ಆಯಾಸ ಕಡಿಮೆ ಮಾಡುವಲ್ಲಿ ಸಹಾಯಕ, ಏಕಾಗ್ರತೆಯನ್ನು ಸುಧಾರಿಸುತ್ತದೆ.

ಪ್ರತಿನಿತ್ಯ ಈ ಆಹಾರಗಳನ್ನು ಸಮತೋಲನವಾಗಿ ಸೇವಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆಯಾಸವನ್ನು ಕಡಿಮೆ ಮಾಡಬಹುದು ಮತ್ತು ದೇಹವನ್ನು ಸಕ್ರಿಯವಾಗಿರಿಸಬಹುದು.

ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಔಟ್! ಈ ವಾರ ಸೇವ್ ಆಗಿದ್ದು ಯಾರ್‌ ಗೊತ್ತಾ?

ಬಿಗ್‌ಬಾಸ್ ಕನ್ನಡ ಸೀಸನ್ 12 ಈಗ ಫಿನಾಲೆಯತ್ತ ದೌಡಾಯಿಸುತ್ತಿದ್ದು, ಆಟ ದಿನದಿಂದ ದಿನಕ್ಕೆ ಕ್ರಿಟಿಕಲ್ ಹಂತ ತಲುಪುತ್ತಿದೆ. 100 ದಿನಗಳ ಸನಿಹದಲ್ಲಿರುವ ಶೋದಲ್ಲಿ ಇದೀಗ ಸ್ಪರ್ಧಿಗಳಿಗೆ ಸೆಫ್ಟಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ವಾರ ಡಬಲ್ ಎಲಿಮಿನೇಷನ್ ಮೂಲಕ ಮಾಳು ಮತ್ತು ಸೂರಜ್ ಹೊರಬಿದ್ದಿದ್ದರೆ, ಈ ವಾರ ಮತ್ತೊಂದು ಅಚ್ಚರಿಯ ಎಲಿಮಿನೇಷನ್ ನಡೆದಿದೆ. ನಿರಂತರವಾಗಿ ಕೂದಲೆಳೆಯಲ್ಲಿ ಪಾರಾಗುತ್ತಿದ್ದ ಸ್ಪಂದನಾ ಸೋಮಣ್ಣ ಈ ಬಾರಿ ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಪ್ರತಿ ವಾರ ಎಲಿಮಿನೇಷನ್‌ನ ಕೊನೆಯ ಹಂತದವರೆಗೂ ಹೋಗಿ ಸೇಫ್ ಆಗುತ್ತಿದ್ದ ಸ್ಪಂದನಾ, ಈ ಬಾರಿ ಮತಗಳ ಕೊರತೆಯಿಂದ ಹೊರಹೋಗಿದ್ದಾರೆ ಎನ್ನಲಾಗುತ್ತಿದೆ. ಹಲವು ವಾರಗಳಿಂದಲೇ ಮನೆ ಸದಸ್ಯರು ಸ್ಪಂದನಾರನ್ನು ವೀಕ್ ಸ್ಪರ್ಧಿ ಎಂದು ಪರಿಗಣಿಸಿದ್ದರು.

ಈ ವಾರ ಸ್ಪಂದನಾ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಹಾಗೂ ಧನುಶ್ ನಾಮಿನೇಷನ್ ಪಟ್ಟಿಯಲ್ಲಿದ್ದರು. ಸ್ಪಂದನಾ ಅಡುಗೆ ಮಾಡೋದಿಲ್ಲ, ಟಾಸ್ಕ್ ಆಡೋದಿಲ್ಲ, ತಂಡದ ಆಟದಲ್ಲಿ ಕಾಣಿಸಿಕೊಳ್ಳೋದಿಲ್ಲ ಎಂಬ ಆರೋಪಗಳು ಮನೆಯೊಳಗೇ ಕೇಳಿಬಂದಿದ್ದವು.

ಕಾವ್ಯ ಶೈವ ಮತ್ತು ಧನುಶ್ ಗೌಡ ಸ್ಪಂದನಾ ಉಳಿದುಕೊಂಡಿದ್ದ ವಿಚಾರವನ್ನು ಹಾಸ್ಯವಾಗಿ ಎತ್ತಿ ಹಿಡಿದಿದ್ದರು. ಅದನ್ನೇ ಕೇಳಿ ಸ್ಪಂದನಾ ಕೂಡ ನಗುವ ಮೂಲಕ ಪ್ರತಿಕ್ರಿಯಿಸಿದ್ದರು. ಆದರೆ, ಈ ವಾರ ಆ ನಗು ಉಳಿದಿಲ್ಲ.

ಮೈಸೂರಿನವರಾದ ಸ್ಪಂದನಾ ಸೋಮಣ್ಣ, ‘ದಿಲ್ ಖುಷ್’, ‘ಮರೀಚಿ’ ಸಿನಿಮಾಗಳು ಹಾಗೂ ‘ಕರಿಮಣಿ’ ಧಾರಾವಾಹಿಯ ಮೂಲಕ ಪರಿಚಿತರಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿನ ಅವರ ಪಯಣ ಹೆಚ್ಚು ಸದ್ದು ಮಾಡದೆ ಅಂತ್ಯಗೊಂಡಿದೆ.

ಇನ್ನೆರಡು ವಾರಗಳಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 12 ಫಿನಾಲೆ ತಲುಪಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಕಿಂಗ್ ಎಲಿಮಿನೇಷನ್‌ಗಳು ನಡೆಯುವ ಸಾಧ್ಯತೆ ಇದೆ.

ಕಾಂಪೌಂಡ್ ತೆರವು ಪ್ರಕರಣ: ಯಶ್ ತಾಯಿ ಪುಷ್ಪ ಲಾಯರ್ ಹೇಳಿದ್ದೇನು?

ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅರುಣ್ ವಿರುದ್ಧ ಕೇಳಿಬಂದ ಭೂಮಿ ಅಕ್ರಮ ಒತ್ತುವರಿ ಆರೋಪ ಇದೀಗ ತೀವ್ರ ತಿರುವು ಪಡೆದುಕೊಂಡಿದೆ. ಸೈಟ್‌ನಲ್ಲಿದ್ದ ಶೆಡ್ ಹಾಗೂ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿರುವುದನ್ನು ಪುಷ್ಪಾ ಅರುಣ್ ಹಾಗೂ ಅವರ ವಕೀಲರು ತೀವ್ರವಾಗಿ ಖಂಡಿಸಿದ್ದಾರೆ.

ಪುಷ್ಪಾ ಪರ ವಕೀಲ ಸಂಜಯ್ ಮಾತನಾಡಿ, “ಇವರು ಕಾನೂನುಬಾಹಿರವಾಗಿ ಬಂದು ಕಾಂಪೌಂಡ್ ಒಡೆದಿದ್ದಾರೆ. ಕೋರ್ಟ್‌ನಲ್ಲಿ ಇಂತಹ ಯಾವುದೇ ತೆರವು ಆದೇಶವೇ ಇಲ್ಲ. ನ್ಯಾಯಾಲಯಕ್ಕೆ ದಿಕ್ಕು ತಪ್ಪಿಸಿ ಆದೇಶ ಮಾಡಿಸಿಕೊಂಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಮ್ಮ ಕಕ್ಷಿದಾರರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಸೈಟ್ ಖರೀದಿಸಿದ್ದಾರೆ. ಆದರೆ ಸುಮ್ಮನೇ ಪುಷ್ಪಾ ಅರುಣ್ ಅವರನ್ನು ಪಾರ್ಟಿ ಮಾಡಿ ಕೇಸ್ ಹಾಕಲಾಗಿದೆ. ಈಗ ಶೆಡ್ ಹಾಗೂ ಕಾಂಪೌಂಡ್ ಒಡೆದಿರುವ ವಿಚಾರದಲ್ಲೂ ನಾವು ಪ್ರತ್ಯೇಕವಾಗಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಈ ನಡುವೆ ಸ್ವತಃ ಪುಷ್ಪಾ ಅರುಣ್ ಕೂಡ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುತ್ತೇನೆ. ಲಾಯರ್ ಆಫೀಸ್‌ನಲ್ಲೇ ನಮ್ಮ ಬಳಿ ಹಣ ಕೇಳಿದ್ದಾರೆ. ದೊಡ್ಡ ದೊಡ್ಡ ವ್ಯಕ್ತಿಗಳನ್ನು ಹೆದರಿಸಿ ದುಡ್ಡು ಕೀಳೋದೇ ಇವನ ದಂಧೆ” ಎಂದು ಆರೋಪಿಸಿದ್ದಾರೆ.

“ಕಾಂಪೌಂಡ್ ಒಡೆದಿರುವ ಜಾಗಕ್ಕೆ ದಾಖಲೆಗಳೇ ಇಲ್ಲ. ರೌಡಿಸಂ ಮಾಡ್ತಾ ಇದ್ದಾರೆ. ನಾವು ಸೆಲೆಬ್ರಿಟಿಗಳು, ಯಶ್ ನಟ ಅನ್ನೋ ಕಾರಣಕ್ಕೆ ನಮ್ಮನ್ನೇ ಟಾರ್ಗೆಟ್ ಮಾಡಿ ಹೆದರಿಸ್ತಿದ್ದಾರೆ” ಎಂದು ಪುಷ್ಪಾ ಅರುಣ್ ಕಿಡಿಕಾರಿದ್ದಾರೆ.

ಈ ಪ್ರಕರಣ ಇದೀಗ ಕಾನೂನು ಹೋರಾಟ, ಸೆಲೆಬ್ರಿಟಿ ಟಾರ್ಗೆಟಿಂಗ್ ಮತ್ತು ಭೂ ವಿವಾದದ ಭಾರೀ ರಾಜಕೀಯ–ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.

ತುಮಕೂರಿನಲ್ಲಿ ನಿಗೂಢವಾಗಿ 11 ಮಂಗಗಳು ಸಾವು! ವಿಷಪ್ರಾಶನದ ಶಂಕೆ?

0

ತುಮಕೂರು: ಒಂದು ತಿಂಗಳ ಹಿಂದಷ್ಟೇ ಬೆಳಗಾವಿಯಲ್ಲಿ 30 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣದ ಬಳಿಕ ಇದೀಗ ತುಮಕೂರಿನ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲೂ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ದೇವರಾಯನದುರ್ಗ ಮತ್ತು ದುರ್ಗದಹಳ್ಳಿ ನಡುವಿನ ಅರಣ್ಯ ಪ್ರದೇಶದಲ್ಲಿ ಕೇವಲ ಎರಡು ದಿನಗಳಲ್ಲಿ 11 ಮಂಗಗಳು ನಿಗೂಢವಾಗಿ ಮೃತಪಟ್ಟಿವೆ. ಈ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದೆಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯ ನಡೆಸಿದಾಗ, ಮೊದಲ ದಿನ ಏಳು ಹಾಗೂ ಎರಡನೇ ದಿನ ನಾಲ್ಕು ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಮೃತಪಟ್ಟ ಮಂಗಗಳಲ್ಲಿ ಒಂಬತ್ತು ಸಾಮಾನ್ಯ ಮಂಗಗಳು ಹಾಗೂ ಎರಡು ಲಂಗೂರಗಳು ಸೇರಿವೆ. ಪ್ರಾಥಮಿಕ ಪರಿಶೀಲನೆಯಲ್ಲಿ ಯಾವುದೇ ಸೋಂಕು ಅಥವಾ ಕಾಯಿಲೆಯಿಂದ ಮಂಗಗಳು ಸಾವನ್ನಪ್ಪಿರುವ ಲಕ್ಷಣಗಳು ಕಂಡುಬಂದಿಲ್ಲ.

ಸಾವಿನ ನಿಖರ ಕಾರಣ ಪತ್ತೆಹಚ್ಚಲು ಊರ್ಡಿಗೆರೆಯ ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಂಗಗಳ ಕರುಳಿನಲ್ಲಿ ಅನ್ನ ಪತ್ತೆಯಾಗಿದೆ. ಇದರಿಂದ ವಿಷಪ್ರಾಶನದಿಂದಲೇ ಮರಣ ಸಂಭವಿಸಿರಬಹುದೆಂಬ ಅನುಮಾನ ಬಲಗೊಂಡಿದೆ. ಪ್ರಕರಣವನ್ನು ದೃಢಪಡಿಸಲು ಮಾದರಿಗಳನ್ನು ಬೆಂಗಳೂರಿನ ಪಶುವೈದ್ಯಕೀಯ ವಿದ್ಯಾಲಯ (IAH, VB)ಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ತುಮಕೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಪ್ರಕರಣ ದಾಖಲಿಸಿಕೊಂಡು, ದುಷ್ಕೃತ್ಯವಿದೆಯೇ ಎಂಬುದರ ಕುರಿತು ಅರಣ್ಯಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಅಮೆರಿಕಾದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಭಾರತ ಮೂಲದ ಯುವತಿ ಶವ ಪತ್ತೆ!

0

ನ್ಯೂಯಾರ್ಕ್: ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಎಲ್ಲಿಕಾಟ್ ನಗರದಲ್ಲಿ ಭಾರತ ಮೂಲದ ಯುವತಿ ನಿಕಿತಾ ಗೋಡಿಶಾಲ (27) ಶವ ಪತ್ತೆಯಾಗಿದೆ.

ಆಕೆ ಡೇಟಾ ವಿಶ್ಲೇಷಕಿಯಾಗಿದ್ದು, ಶವವು ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾ (26) ಒಡೆತನದ ಅಪಾರ್ಟ್‌ಮೆಂಟ್‌ನಲ್ಲಿ ಕಂಡುಬಂದಿದೆ ಎಂದು ಹೊವಾರ್ಡ್ ಕೌಂಟಿ ಪೊಲೀಸರು ತಿಳಿಸಿದ್ದಾರೆ.
ನಿಕಿತಾ ಜನವರಿ 2ರಂದು ನಾಪತ್ತೆಯಾಗಿದ್ದಾಳೆ ಎಂದು ಅರ್ಜುನ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಡಿಸೆಂಬರ್ 31ರಂದು ಸಂಜೆ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಕೊನೆಯದಾಗಿ ಅವಳನ್ನು ನೋಡಿದ್ದೇನೆ ಎಂದು ಹೇಳಿದ್ದಾನೆ. ಮಾಹಿತಿ ಆಧರಿಸಿ ಪೊಲೀಸರು ಶೋಧ ನಡೆಸಿದಾಗ ಶವ ಪತ್ತೆಯಾಗಿದ್ದು, ದೇಹದ ಮೇಲೆ ಗಾಯಗಳಿರುವುದು ಕಂಡುಬಂದಿದೆ.

ನಿಕಿತಾ ನಾಪತ್ತೆ ಬಗ್ಗೆ ದೂರು ನೀಡಿದ ದಿನವೇ ಅರ್ಜುನ್ ಭಾರತಕ್ಕೆ ತೆರಳಿದ್ದಾನೆ. ಡಿಸೆಂಬರ್ 31ರ ಸಂಜೆ 7 ಗಂಟೆಯ ನಂತರ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆತನ ವಿರುದ್ಧ ಪ್ರಥಮ ಮತ್ತು ದ್ವಿತೀಯ ಹಂತದ ಕೊಲೆ ಆರೋಪದಡಿ ಬಂಧನ ವಾರಂಟ್ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಲು ಫೆಡರಲ್ ಸಂಸ್ಥೆಗಳ ಸಹಾಯ ಪಡೆಯಲಾಗಿದೆ. ಈ ಪ್ರಕರಣದಲ್ಲಿ ನಿಕಿತಾ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಸಹಾಯ ನೀಡಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ತಿಥಿ ಖ್ಯಾತಿಯ ಸೆಂಚುರಿ ಗೌಡ ನಿಧನ; ಸ್ವಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ!

0

ಮಂಡ್ಯ: ತಿಥಿ ಸಿನಿಮಾದಲ್ಲಿ ‘ಸೆಂಚುರಿ ಗೌಡ’ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದ ಸಿಂಗ್ರೆಗೌಡ ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ರಾತ್ರಿ ಕೊನೆಯುಸಿರೆಳೆದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿಂಗ್ರೆಗೌಡನಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಸಿಂಗ್ರೆಗೌಡ, 100 ವರ್ಷ ವಯಸ್ಸು ದಾಟಿದ್ದರೂ ತಿಥಿ ಸಿನಿಮಾದಲ್ಲಿ ಅಭಿನಯಿಸಿ ಕನ್ನಡ ಸಿನಿಪ್ರೇಮಿಗಳ ಮನಗೆದ್ದಿದ್ದರು.

2015ರಲ್ಲಿ ಬಿಡುಗಡೆಯಾದ ತಿಥಿ ಚಿತ್ರವು ರಾಷ್ಟ್ರೀಯ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ನಡೆಯಲಿದೆ.

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ಎಸೆತ; ಮೂವರಿಗೆ ಗಾಯ, ಅನ್ಯ ಕೋಮಿನವರಿಂದ ಕೃತ್ಯ?

0

ಬೆಂಗಳೂರು:- ದೇವಿಯ ತೇರು ಎಳೆಯುತ್ತಿದ್ದ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ಎಸೆದಿರುವ ಘಟನೆ ರಾಜಧಾನಿ ಬೆಂಗಳೂರಿನ ಜೆಜೆಆರ್ ನಗರದ ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಜರುಗಿದೆ.

ಘಟನೆಯಲ್ಲಿ ಮಗು, ಯುವತಿ, ವಯಸ್ಕ ಮಹಿಳೆ ಸೇರಿ ಮೂವರಿಗೆ ಕಲ್ಲು ಬಿದ್ದಿರುವ ಆರೋಪ ಕೇಳಿಬಂದಿದೆ. ಕಲ್ಲು ಎಸೆದು ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ.

ತೇರಿನ ಮೇಲೆ ಅನ್ಯ ಕೋಮಿನವರಿಂದ ಕಲ್ಲು ಎಸೆದ ಆರೋಪ ಹೊರಿಸಲಾಗಿದೆ. ಓಂ ಶಕ್ತಿ ಮಾಲೆ ಧರಿಸಿದ್ದ ಮಗುವಿಗೆ ಕಲ್ಲೇಟು ಬಿದ್ದಿದೆ. ಘಟನೆ ಬಳಿಕ ಓಂ ಶಕ್ತಿ ಮಾಲಾಧಾರಿಗಳು ಜೆಜೆಆರ್ ನಗರ ಠಾಣೆಯ ಮುಂದೆ ಜಮಾಯಿಸಿ ಕ್ರಮಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕಲ್ಲು ಎಸೆದ ಕಿಡಿಗೇಡಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಜನಾರ್ದನ ರೆಡ್ಡಿ ಇರಾನ್–ಅಮೆರಿಕದಿಂದಾದ್ರೂ ಭದ್ರತೆ ತರಿಸಿಕೊಳ್ಳಲಿ: ಡಿಕೆ ಶಿವಕುಮಾರ್ ಲೇವಡಿ

0

ಬೆಂಗಳೂರು: ಜನಾರ್ದನ ರೆಡ್ಡಿ ಅವರು ಝೆಡ್+ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,

“ಝೆಡ್ ಭದ್ರತೆ ಆದರೂ ಕೇಳಲಿ. ಇರಾನ್ನಿಂದ ಯಾವುದಾದರೂ ಭದ್ರತೆ ತರಿಸಿಕೊಳ್ಳಲಿ, ಅಮೆರಿಕದಿಂದ ಆದರೂ ತರಿಸಿಕೊಳ್ಳಲಿ. ಇಲ್ಲವಾದರೆ ಅವರೇ ಭದ್ರತೆ ಮಾಡಿಕೊಂಡುಕೊಳ್ಳಲಿ, ಯಾರು ಬೇಡ ಎಂದಿದ್ದಾರೆ?” ಎಂದು ಲೇವಡಿ ಮಾಡಿದರು.

“ಪತ್ರ ಬರೆದಿರುವುದು ಬಹಳ ಸಂತೋಷ. ಅವರ ಪಾರ್ಟಿ ಕೇಡರ್ಸ್‌ಗಳಿಂದಲೇ ನೂರು ಜನರನ್ನು ಭದ್ರತೆಗೆ ರೆಡಿ ಮಾಡಿಕೊಂಡುಕೊಳ್ಳಲಿ” ಎಂದು ಜನಾರ್ದನ ರೆಡ್ಡಿ ವಿರುದ್ಧ ಡಿಕೆ ಶಿವಕುಮಾರ್ ಟೀಕಿಸಿದರು. ಬಳ್ಳಾರಿ ಗಲಾಟೆಯಲ್ಲಿ ಫೈರ್ ಆದ ಬುಲೆಟ್ ಸತೀಶ್ ರೆಡ್ಡಿ ಅವರ ಗನ್‌ಮ್ಯಾನ್‌ನದ್ದು ಎಂಬ ವರದಿ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ,

“ಆ ವಿಚಾರದ ಬಗ್ಗೆ ನನಗೇನೂ ಮಾಹಿತಿ ಇಲ್ಲ. ಯಾರು ತಪ್ಪು ಮಾಡಿದ್ದರೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು” ಎಂದರು. ಇನ್ನು ವಾಲ್ಮೀಕಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, “ಎಲ್ಲಾ ಕಡೆ ವಿಗ್ರಹಗಳನ್ನು ಇಡುತ್ತಾರೆ, ಭಕ್ತಿ ಭಾವನೆ ತೋರಿಸುತ್ತಾರೆ. ಅದಕ್ಕೆ ಅಸೂಯೆ ಯಾಕೆ? ವಾಲ್ಮೀಕಿ ಯಾವುದೋ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅವರು ಎಲ್ಲರ ಆಸ್ತಿ. ರಾಮಾಯಣವನ್ನು ವಾಲ್ಮೀಕಿ ಬರೆದಿದ್ದಾರೆ. ನಾವೆಲ್ಲರೂ ರಾಮಾಯಣ ಓದೋದಿಲ್ವಾ?” ಎಂದು ಪ್ರಶ್ನಿಸಿದರು.

ಆನೇಕಲ್ ಬಳಿ ಭೀಕರ ರಸ್ತೆ ಅಪಘಾತ: ಸರ್ಕಾರಿ ಜೀಪ್–ಕಿಯಾ ಕಾರು ಡಿಕ್ಕಿ, ಕಾರಿಗೆ ಬೆಂಕಿ

0

ಆನೇಕಲ್: ಸರ್ಕಾರಿ ಜೀಪ್ ಹಾಗೂ ಕಿಯಾ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಕಾರಿಗೆ ಸ್ಥಳದಲ್ಲೇ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಯಡವನಹಳ್ಳಿ ಗೇಟ್ ಬಳಿ ನಡೆದಿದೆ.

ಇಂದು ಬೆಳಿಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸರ್ಕಾರಿ ಜೀಪ್ ಹಾಗೂ ಕಿಯಾ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಅಪಘಾತದ ಮಾಹಿತಿ ಪಡೆದ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಶಾಸಕ ಭರತ್ ರೆಡ್ಡಿ ಮೇಲೆ ಇನ್ನೂ ಏಕೆ ಕ್ರಮ ಕೈಗೊಳ್ಳಲಾಗಿಲ್ಲ?: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ

0

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಪವನ್ ನೆಜ್ಜೂರು ಡೆತ್ ನೋಟ್ ಬರೆದಿದ್ದಾರೆ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಬಿಡ್ಡಿಂಗ್ ಕಾರಣದಿಂದ ಪವನ್ ಅಮಾನತುಗೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

 ಶಾಸಕ ಭರತ್ ರೆಡ್ಡಿ ಮೇಲೆ ಇನ್ನೂ ಏಕೆ ಕ್ರಮ ಕೈಗೊಳ್ಳಲಾಗಿಲ್ಲ? ನಿನ್ನೆ ಮುಖ್ಯಮಂತ್ರಿ ಅವರನ್ನು ಭರತ್ ರೆಡ್ಡಿ ಭೇಟಿ ಮಾಡಿದ್ದಾರೆ, ಮತ್ತು ಎಫ್‌ಐಆರ್ ದಾಖಲಾಗಿರುವ ಭರತ್ ರೆಡ್ಡಿಯೊಂದಿಗೆ ಸಿಎಂ ಯಾಕೆ ಕುಳಿತು ಮಾತಾಡಿದರು? ಈ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆಯೇ ಎಂಬುದು ಸ್ಪಷ್ಟವಲ್ಲ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ..

 “ಎಸ್‌ಪಿ ಯಾಕೆ ಆತ್ಮಹತ್ಯೆಗೆ ಯತ್ನಿಸಿದರು? ಯಾಕೆ ಅಮಾನತು ಮಾಡಲಾಯಿತು? ಜಮೀರ್ ಅವರು ಬಳ್ಳಾರಿ ಎಸ್‌ಪಿ ಹುದ್ದೆಗೆ ಎಷ್ಟು ಬಿಡ್ ಮಾಡಿದ್ದಾರೆ? ಡೆತ್ ನೋಟ್‌ನಲ್ಲಿ ಹಿರಿಯ ಅಧಿಕಾರಿಗಳ ಹೆಸರುಗಳಿವೆ ಎಂದು ಮಾಹಿತಿ ಲಭ್ಯವಿದೆ. ಆ ಡೆತ್ ನೋಟ್ ಯಾಕೆ ಮುಚ್ಚಿಡಲಾಗಿದೆ? ಎಂದರು.

ಡೆತ್ ನೋಟ್‌ನಲ್ಲಿ ಏನಿದೆ, ಹಿರಿಯ ಅಧಿಕಾರಿಗಳು ತುಮಕೂರಿಗೆ ಹೋಗಿದ್ದೇಕೆ, ಫಾರ್ಮ್ ಹೌಸ್‌ನಲ್ಲಿ ಏನಾಗುತ್ತಿದೆ, ಪವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಾಕೆ ಪಡೆದರು ಮತ್ತು ಅವರ ತಂದೆಯಿಂದ ಪ್ರೆಸ್ ರಿಲೀಸ್ ಯಾಕೆ ಹೊರಬಂದಿದೆ ಎಂಬ ಪ್ರಶ್ನೆಗಳನ್ನೂ ಅವರು ಒತ್ತಿಹೇಳಿದರು. “ನಿಮ್ಮ ಗೂಂಡಾ ಶಾಸಕರನ್ನು ರಕ್ಷಿಸಲು ಹೊರಟಿದ್ದೀರಾ? ಪವನ್ ನೆಜ್ಜೂರಿಗೆ ನ್ಯಾಯ ಬೇಕಾಗಿದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ನೈತಿಕತೆ ಕುಗ್ಗುತ್ತಿದೆ. ಬೆಂಗಳೂರಿನಲ್ಲಿ ಮನೆ ಕೊಡಲು ಬಿಡ್ಡಿಂಗ್ ನಡೆಯುತ್ತಿದೆ. ಪವನ್ ಅಮಾನತು ಮತ್ತು ಆತ್ಮಹತ್ಯೆ ಯತ್ನಕ್ಕೆ ಸರ್ಕಾರ ಉತ್ತರ ನೀಡಬೇಕು” ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.

error: Content is protected !!