Home Blog Page 224

ಶಾಸಕ ಭರತ್ ರೆಡ್ಡಿ ಮೇಲೆ ಇನ್ನೂ ಏಕೆ ಕ್ರಮ ಕೈಗೊಳ್ಳಲಾಗಿಲ್ಲ?: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ

0

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಪವನ್ ನೆಜ್ಜೂರು ಡೆತ್ ನೋಟ್ ಬರೆದಿದ್ದಾರೆ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಬಿಡ್ಡಿಂಗ್ ಕಾರಣದಿಂದ ಪವನ್ ಅಮಾನತುಗೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

 ಶಾಸಕ ಭರತ್ ರೆಡ್ಡಿ ಮೇಲೆ ಇನ್ನೂ ಏಕೆ ಕ್ರಮ ಕೈಗೊಳ್ಳಲಾಗಿಲ್ಲ? ನಿನ್ನೆ ಮುಖ್ಯಮಂತ್ರಿ ಅವರನ್ನು ಭರತ್ ರೆಡ್ಡಿ ಭೇಟಿ ಮಾಡಿದ್ದಾರೆ, ಮತ್ತು ಎಫ್‌ಐಆರ್ ದಾಖಲಾಗಿರುವ ಭರತ್ ರೆಡ್ಡಿಯೊಂದಿಗೆ ಸಿಎಂ ಯಾಕೆ ಕುಳಿತು ಮಾತಾಡಿದರು? ಈ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆಯೇ ಎಂಬುದು ಸ್ಪಷ್ಟವಲ್ಲ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ..

 “ಎಸ್‌ಪಿ ಯಾಕೆ ಆತ್ಮಹತ್ಯೆಗೆ ಯತ್ನಿಸಿದರು? ಯಾಕೆ ಅಮಾನತು ಮಾಡಲಾಯಿತು? ಜಮೀರ್ ಅವರು ಬಳ್ಳಾರಿ ಎಸ್‌ಪಿ ಹುದ್ದೆಗೆ ಎಷ್ಟು ಬಿಡ್ ಮಾಡಿದ್ದಾರೆ? ಡೆತ್ ನೋಟ್‌ನಲ್ಲಿ ಹಿರಿಯ ಅಧಿಕಾರಿಗಳ ಹೆಸರುಗಳಿವೆ ಎಂದು ಮಾಹಿತಿ ಲಭ್ಯವಿದೆ. ಆ ಡೆತ್ ನೋಟ್ ಯಾಕೆ ಮುಚ್ಚಿಡಲಾಗಿದೆ? ಎಂದರು.

ಡೆತ್ ನೋಟ್‌ನಲ್ಲಿ ಏನಿದೆ, ಹಿರಿಯ ಅಧಿಕಾರಿಗಳು ತುಮಕೂರಿಗೆ ಹೋಗಿದ್ದೇಕೆ, ಫಾರ್ಮ್ ಹೌಸ್‌ನಲ್ಲಿ ಏನಾಗುತ್ತಿದೆ, ಪವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಾಕೆ ಪಡೆದರು ಮತ್ತು ಅವರ ತಂದೆಯಿಂದ ಪ್ರೆಸ್ ರಿಲೀಸ್ ಯಾಕೆ ಹೊರಬಂದಿದೆ ಎಂಬ ಪ್ರಶ್ನೆಗಳನ್ನೂ ಅವರು ಒತ್ತಿಹೇಳಿದರು. “ನಿಮ್ಮ ಗೂಂಡಾ ಶಾಸಕರನ್ನು ರಕ್ಷಿಸಲು ಹೊರಟಿದ್ದೀರಾ? ಪವನ್ ನೆಜ್ಜೂರಿಗೆ ನ್ಯಾಯ ಬೇಕಾಗಿದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ನೈತಿಕತೆ ಕುಗ್ಗುತ್ತಿದೆ. ಬೆಂಗಳೂರಿನಲ್ಲಿ ಮನೆ ಕೊಡಲು ಬಿಡ್ಡಿಂಗ್ ನಡೆಯುತ್ತಿದೆ. ಪವನ್ ಅಮಾನತು ಮತ್ತು ಆತ್ಮಹತ್ಯೆ ಯತ್ನಕ್ಕೆ ಸರ್ಕಾರ ಉತ್ತರ ನೀಡಬೇಕು” ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವುದಿಲ್ಲ: ಸಚಿವ ಧರ್ಮೇಂದ್ರ ಪ್ರಧಾನ್

0

ಬೆಂಗಳೂರು: ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ವಿಬಿ ಜಿ ರಾಮ್ ಜಿ ಕಾಯ್ದೆಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಕೇವಲ ರಾಜಕೀಯ ಕಾರಣಕ್ಕಾಗಿ ಈ ಕಾಯ್ದೆಗೆ ವಿರೋಧ ಮಾಡುತ್ತಿದೆ ಎಂದು ಆರೋಪಿಸಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಮತ್ತಷ್ಟು ವಿಸ್ತಾರಗೊಳಿಸಿ ಜಾರಿಗೆ ತಂದಿದ್ದು, ಇದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ನಿಲುವಿನ ಬಗ್ಗೆ ಕಿಡಿಕಾರಿದ ಧರ್ಮೇಂದ್ರ ಪ್ರಧಾನ್, ಕಾಂಗ್ರೆಸ್ ಸರ್ಕಾರ ಮೊದಲು ನರೇಗಾ ಯೋಜನೆ ಜಾರಿಗೆ ತಂದಾಗ ಮಹಾತ್ಮ ಗಾಂಧೀಜಿ ಹೆಸರನ್ನು ಇಟ್ಟಿರಲಿಲ್ಲ. ಈಗ ಕಾಂಗ್ರೆಸ್ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಹೋರಾಟಗಳ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಏನು ಬೇಕೋ ಹಾಗೆ ಹೋರಾಟ ಮಾಡಿಕೊಳ್ಳಲಿ. ಆದರೆ ಕೇಂದ್ರ ಸರ್ಕಾರ ಬಡ ಜನರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ತಂದಿದ್ದು, ಯಾವುದೇ ಕಾರಣಕ್ಕೂ ಕಾಯ್ದೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ತ್ರಿಶೂರ್ ರೈಲು ನಿಲ್ದಾಣದಲ್ಲಿ ಭಾರಿ ಅಗ್ನಿ ಅವಘಡ: 200 ವಾಹನಗಳು ಭಸ್ಮ

0

ತಿರುವನಂತಪುರಂ: ಕೇರಳದ ತ್ರಿಶೂರ್ ರೈಲು ನಿಲ್ದಾಣದಲ್ಲಿ ಇಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ, ನಿಲ್ದಾಣದ ಪಕ್ಕದಲ್ಲಿರುವ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ 200ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿವೆ.

ಪ್ಲಾಟ್‌ಫಾರ್ಮ್ ಸಂಖ್ಯೆ 2ರ ಸಮೀಪದ ದ್ವಿಚಕ್ರ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಬೆಳಿಗ್ಗೆ ಸುಮಾರು 6:45ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಪ್ರತಿದಿನ 500ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಈ ಅವಘಡ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡ ಕ್ಷಣಗಳಲ್ಲಿ ಪ್ರಯಾಣಿಕರು ಹಾಗೂ ಹತ್ತಿರದ ನಿವಾಸಿಗಳಲ್ಲಿ ಕೆಲಕಾಲ ಆತಂಕ ಉಂಟಾಯಿತು.

ಪಾರ್ಕಿಂಗ್ ಮಾಡಿದ್ದ ಬಹುತೇಕ ವಾಹನಗಳಲ್ಲಿ ಇಂಧನ ಇದ್ದ ಕಾರಣ ಬೆಂಕಿ ವೇಗವಾಗಿ ಹಬ್ಬಿ ಅವಘಡದ ತೀವ್ರತೆ ಹೆಚ್ಚಾಗಿದೆ. ಹಲವಾರು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಕೆಲವು ವಾಹನಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಾನಿಗೊಳಗಾದ ವಾಹನಗಳ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಶಾರ್ಟ್ ಸರ್ಕ್ಯೂಟ್, ಇಂಧನ ಸೋರಿಕೆ ಅಥವಾ ಬೇರೆ ಕಾರಣಗಳಿಂದ ಬೆಂಕಿ ಹೊತ್ತಿಕೊಂಡಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ರೈಲು ನಿಲ್ದಾಣದ ಆವರಣದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.

ಪಾರ್ಕಿಂಗ್ ಪ್ರದೇಶವು ಗುರುವಾಯೂರು ಮಾರ್ಗದ ರೈಲುಗಳು ಸಂಚರಿಸುವ ಹಳಿಯ ಸಮೀಪದಲ್ಲಿದ್ದರೂ, ಅಗ್ನಿಶಾಮಕ ಸಿಬ್ಬಂದಿಯ ತಕ್ಷಣದ ಕಾರ್ಯಾಚರಣೆಯಿಂದ ರೈಲು ನಿಲ್ದಾಣದ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಈ ಘಟನೆ ರೈಲು ಸಂಚಾರ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ವಿರುದ್ಧ ಶತಕ ಸಿಡಿಸಿ ಅಶ್ಲೀಲವಾಗಿ ಸಂಭ್ರಮಿಸಿದ RCB ಆಟಗಾರ!

0

ವಿಜಯ ಹಝಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಶತಕ ಸಿಡಿಸಿದ ತ್ರಿಪುರ ಆಟಗಾರ ಸ್ವಪ್ನಿಲ್ ಸಿಂಗ್ ಅಶ್ಲೀಲವಾಗಿ ಸಂಭ್ರಮಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವಪ್ನಿಲ್ ಸಂಭ್ರಮದ ರೀತಿಗೆ ಕ್ರಿಕೆಟ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಪರ ದೇವದತ್ ಪಡಿಕ್ಕಲ್ 108 ರನ್‌ಗಳ ಶತಕ ಬಾರಿಸಿದರು. ಪಡಿಕ್ಕಲ್ ಶತಕದ ನೆರವಿನಿಂದ ಕರ್ನಾಟಕ ತಂಡವು 50 ಓವರ್‌ಗಳಲ್ಲಿ 332 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು.

333 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ತ್ರಿಪುರ ತಂಡದ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ವಪ್ನಿಲ್ ಸಿಂಗ್ 93 ಎಸೆತಗಳಲ್ಲಿ 2 ಸಿಕ್ಸ್ ಮತ್ತು 7 ಫೋರ್‌ಗಳೊಂದಿಗೆ ಶತಕ ಸಿಡಿಸಿದರು. ಶತಕ ಪೂರೈಸಿದ ಬಳಿಕ ಸ್ವಪ್ನಿಲ್ ಬ್ಯಾಟ್ ಮೂಲಕ ಅಶ್ಲೀಲ ಸನ್ನೆ ಮಾಡಿ ವಿಚಿತ್ರವಾಗಿ ಸಂಭ್ರಮಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದು ಇದೀಗ ವೈರಲ್ ಆಗಿದೆ.

ಆದರೆ ಸ್ವಪ್ನಿಲ್ ಅವರ ಶತಕದ ಹೊರತಾಗಿಯೂ ತ್ರಿಪುರ ತಂಡ 49 ಓವರ್‌ಗಳಲ್ಲಿ 252 ರನ್‌ಗಳಿಗೆ ಸೀಮಿತವಾಯಿತು. ಇದರೊಂದಿಗೆ ಕರ್ನಾಟಕ ತಂಡ 80 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಇನ್ನು ಸ್ವಪ್ನಿಲ್ ಸಿಂಗ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಎರಡು ಸೀಸನ್‌ಗಳಿಂದ ಆರ್‌ಸಿಬಿ ತಂಡದ ಭಾಗವಾಗಿರುವ ಸ್ವಪ್ನಿಲ್, ಮುಂದಿನ ಐಪಿಎಲ್‌ನಲ್ಲಿ ತಂಡದ ಪ್ರಮುಖ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ ಇದ್ದಂತೆ .ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆಯನ್ನು ಕಲ್ಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಇವರ ವತಿಯಿಂದ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಆಯೋಜಿಸಲಾಗಿದ್ದ 23 ನೇ ಚಿತ್ರ ಸಂತೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿಯಾಗಿ 8ನೇ ಬಾರಿ ಚಿತ್ರ ಸಂತೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ಕಲಾವಿದರನ್ನು ಪ್ರೋತ್ಸಾಹಿಸುವುದು, ಅವರ ಚಿತ್ರಗಳ ಪ್ರದರ್ಶನ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಸೃಷ್ಟಿ ಮಾಡುವ ಕೆಲಸವನ್ನು ಚಿತ್ರಕಲಾ ಪರಿಷತ್ತು ಅರವತ್ತು ವರ್ಷಗಳಿಂದ ಮಾಡುತ್ತಾ ಬಂದಿದೆ. ಚಿತ್ರಸಂತೆ ತನ್ನ 23 ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು 22 ರಾಜ್ಯಗಳು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದರು.

ಪರಿಸರದ ರಕ್ಷಣೆ ಇಂದಿನ ಅಗತ್ಯ

ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ ಎಂದರು. ಈ ಬಾರಿಯ ಚಿತ್ರ ಸಂತೆಯ ಧ್ಯೇಯ ವಾಕ್ಯ ಪರಿಸರಕ್ಕೆ ಸಮರ್ಪಿಸಲಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.

ಅದಕ್ಕಾಗಿ ಪರಿಸರದ ಬಗ್ಗೆ ಜ್ಞಾನ ಅಗತ್ಯ. ಈ ಕುರಿತು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶದ ಅನೇಕ ರಾಜಧಾನಿಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಸರದ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು.

ಅರಣ್ಯೀಕರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು

ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ಶೇ. 30ರಷ್ಟು ಕಾಡು ಇರಬೇಕು. ನಮ್ಮಲ್ಲಿ ಶೇಕಡ 20ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಸಾಲು ಮರದ ತಿಮ್ಮಕ್ಕ ನವರಂತೆ ಸಾರ್ವಜನಿಕರು ಗಿಡಗಳನ್ನು ನೆಡಬೇಕು. ಮಕ್ಕಳನ್ನು ಸಾಕಿದಂತೆ ಗಿಡಮರಗಳನ್ನು ಅವರು ಸಾಕಿದ್ದ ಕಾರಣ ಪ್ರಶಸ್ತಿಗಳು ದೊರೆಯಿತು. ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ನಾವೆಲ್ಲರೂ ಗಿಡ ಬೆಳೆಸುವ ಪ್ರಯತ್ನವನ್ನು ಮಾಡಬೇಕು ಎಂದರು.

ಗಿಡ ನಿಡಲು ಮನಸ್ಸು ಮಾಡಬೇಕು
ಪರಿಸರ ರಕ್ಷಣೆಗಾಗಿ ಹೋರಾಟವನ್ನೇ ಕೈಗೊಂಡ ಅನೇಕರು ನಮ್ಮ ನಡುವೆಯೇ ಇದ್ದಾರೆ. ಗಿಡ ನೆಡಲು ಬಹಳ ಖರ್ಚು ಆಗುವುದಿಲ್ಲ. ಮನಸ್ಸು ಮಾಡಬೇಕಷ್ಟೆ. ಸರ್ಕಾರ ಕೂಡ ಈ ದಿಕ್ಕಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದೆ ಎಂದರು. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

ನನ್ನನ್ನೂ ಕುಟುಂಬವನ್ನೂ ಕೊಲ್ಲಲು ಯತ್ನ: ಬಳ್ಳಾರಿ ಹಿಂಸಾಚಾರದ ಬೆನ್ನಲ್ಲೇ ಝಡ್ ಸೆಕ್ಯೂರಿಟಿಗೆ ಜನಾರ್ದನ ರೆಡ್ಡಿ ಪತ್ರ

0

ಬಳ್ಳಾರಿ: ಬ್ಯಾನರ್ ವಿವಾದದಿಂದ ಆರಂಭವಾದ ಗಲಾಟೆ ಇದೀಗ ಜೀವ ಬೆದರಿಕೆ ಆರೋಪಗಳೊಂದಿಗೆ ರಾಜಕೀಯ ಸ್ಫೋಟಕ್ಕೆ ಕಾರಣವಾಗಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ತಮ್ಮ ಹಾಗೂ ಕುಟುಂಬದ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿ, ಝಡ್ ಶ್ರೇಣಿಯ ಭದ್ರತೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಮತ್ತು ಡಿಜಿ & ಐಜಿ ಸಲೀಂ ಅವರಿಗೆ ಬರೆದ ಪತ್ರದಲ್ಲಿ, ಜನವರಿ 1ರಂದು ನಡೆದ ಘಟನೆಗಳನ್ನು ಉಲ್ಲೇಖಿಸಿರುವ ರೆಡ್ಡಿ, “ನನ್ನ ಮತ್ತು ನನ್ನ ಕುಟುಂಬದ ಮೇಲೆ ಸಂಘಟಿತ ದಾಳಿ ನಡೆಸಲಾಗಿದೆ” ಎಂದು ಆರೋಪಿಸಿದ್ದಾರೆ.

“ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಅವರ ಬೆಂಬಲಿಗರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದು, ಬಂದೂಕಿನಿಂದ ಗುಂಡು ಹಾರಿಸಲು ಯತ್ನಿಸಿದ್ದಾರೆ” ಎಂದು ರೆಡ್ಡಿ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ಸಂಪೂರ್ಣವಾಗಿ ಅಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.

ನಾರಾ ಭರತ್ ರೆಡ್ಡಿ ಅವರಿಂದಲೇ ನನಗೆ ನಿರಂತರ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ಜನಾರ್ದನ ರೆಡ್ಡಿ, ಯಾವುದೇ ಅನಾಹುತ ಸಂಭವಿಸುವ ಮೊದಲು ಝಡ್ ಕ್ಯಾಟಗರಿ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಜನಾರ್ದನ ರೆಡ್ಡಿ ಮನೆ ಬಳಿ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಫೈರಿಂಗ್ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟ ಘಟನೆ ಈಗಾಗಲೇ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಯುದ್ಧಕ್ಕೆ ತಿರುಗಿದೆ.

ಜಾಗ ಒತ್ತುವರಿ ಮಾಡಿಲ್ಲ, ಕಾನೂನು ಪ್ರಕಾರವೇ ಪಡೆದಿದ್ದೇವೆ: ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್

ಹಾಸನದ ವಿದ್ಯಾನಗರದಲ್ಲಿ ನಟ ಯಶ್ ಅವರ ಕುಟುಂಬಕ್ಕೆ ಸೇರಿದ ನಿವೇಶನದ ಕಾಂಪೌಂಡ್ ಧ್ವಂಸ ಪ್ರಕರಣ ಇದೀಗ ಆಡಳಿತಾತ್ಮಕ ದೌರ್ಜನ್ಯ ಆರೋಪಗಳೊಂದಿಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಪುಷ್ಪಾ, “ನಾವು ಜಾಗಕ್ಕೆ ನಿಯಮಿತವಾಗಿ ಟ್ಯಾಕ್ಸ್ ಕಟ್ಟಿದ್ದೇವೆ. ಎಲ್ಲ ಕಾನೂನು ದಾಖಲೆಗಳು ನನ್ನ ಬಳಿ ಇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕೋರ್ಟ್ ಆದೇಶದ ನೆಪವೊಡ್ಡಿ ಕಾಂಪೌಂಡ್ ಧ್ವಂಸ ಮಾಡಿರುವುದು ಸಂಪೂರ್ಣ ಸುಳ್ಳು ಎಂದು ಆರೋಪಿಸಿದ್ದಾರೆ.

“ಕೋರ್ಟ್ ಆರ್ಡರ್ ಇದೆ ಅಂತಾ ಹೇಳ್ತಿದ್ದಾರೆ. ಆದರೆ ನಮಗೆ ಯಾರೂ ತೋರಿಸಿಲ್ಲ. ನಾವು ಊರಲ್ಲಿ ಇಲ್ಲದ ಸಮಯ ನೋಡಿ ಈ ಕೆಲಸ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಣದ ಬೇಡಿಕೆ ಇಟ್ಟುಕೊಂಡು ಒತ್ತಡ ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಪಿಡಿಓ ನಟರಾಜ್ ಅವರ ನೇರ ಕುಮ್ಮಕ್ಕಿನಿಂದಲೇ ಈ ಬೆಳವಣಿಗೆ ನಡೆದಿದೆ ಎಂದು ಪುಷ್ಪಾ ಆರೋಪಿಸಿದ್ದು, “ಯಶ್ ಸೈಟ್ ಒಡೆದಿದ್ದೀನಿ ಅಂತಾ ಹೀರೋ ಆಗೋಕೆ ನೋಡ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

ಪಕ್ಕದ ಸೈಟ್ ಮಾಲೀಕರು ಪೊಲೀಸರಾದರೂ ಅವರಿಗೆ ಕೂಡ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿರುವ ಅವರು, ಈ ಪ್ರಕರಣದಲ್ಲಿ ಅಧಿಕಾರ ದುರುಪಯೋಗ ನಡೆದಿದೆ ಎಂದು ಹೇಳಿದ್ದಾರೆ. “ನಾನು ಕಾನೂನು ಹೋರಾಟ ಮಾಡ್ತೀನಿ. ಇವರ ವಿರುದ್ಧ ಮಾನಹಾನಿ ಮೊಕದ್ದಮೆ ಹಾಕ್ತೀನಿ. ಎಲ್ಲಕ್ಕೂ ಉತ್ತರ ಕೊಡ್ಬೇಕು” ಎಂದು ಪುಷ್ಪಾ ಅರುಣ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ ಫೈರಿಂಗ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಸಾವು: ಸತೀಶ್ ರೆಡ್ಡಿಯ ಮೂವರು ಗನ್‌ಮ್ಯಾನ್‌ಗಳು ವಶಕ್ಕೆ

0

ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆ ವಿಚಾರ ರಾಜಕೀಯ ಹಿಂಸೆಗೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸತೀಶ್ ರೆಡ್ಡಿ ಅವರ ಮೂವರು ಗನ್‌ಮ್ಯಾನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ವಶಕ್ಕೆ ಸಿಕ್ಕಿರುವ ಮಹೇಂದ್ರ ಸಿಂಗ್, ಬಲಜಿತ್ ಸಿಂಗ್ ಮತ್ತು ಗುರುಚರಣ್ ಸಿಂಗ್ ಪಂಜಾಬ್ ಮೂಲದವರಾಗಿದ್ದು, ಈ ಮೂವರು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

ಜನವರಿ 1ರಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ಕಾರ್ಯಕ್ರಮವೊಂದರ ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ತೀವ್ರ ಸ್ವರೂಪ ಪಡೆದು ಫೈರಿಂಗ್ ನಡೆದಿದ್ದು, ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಹಾಗೂ ಮೊಬೈಲ್ ವೀಡಿಯೋ ದೃಶ್ಯಾವಳಿಗಳ ಆಧಾರದಲ್ಲಿ 10ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಬಳಿಕ ನಾಪತ್ತೆಯಾಗಿದ್ದ ಸತೀಶ್ ರೆಡ್ಡಿ ಅವರ ಗನ್‌ಮ್ಯಾನ್‌ಗಳನ್ನು ಇದೀಗ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಪ್ರಕರಣವು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಫೈರಿಂಗ್‌ಗೆ ಕಾರಣವಾದ ಹಿನ್ನೆಲೆ, ಹೊಣೆಗಾರಿಕೆ ಹಾಗೂ ಭದ್ರತಾ ಲೋಪದ ಕುರಿತಂತೆ ತನಿಖೆ ಮುಂದುವರಿದಿದೆ.

ಬೈಕ್ʼ​ಗೆ ಹಿಂಬದಿಯಿಂದ ಲಾರಿ ಡಿಕ್ಕಿ: ಬೈಕ್‌ ಸವಾರ ಸ್ಥಳದಲ್ಲೇ ಸಾವು..!

0

ಬೆಂಗಳೂರು: ನಗರದ ನಾಗರಭಾವಿ ವ್ಯಾಪ್ತಿಯಲ್ಲಿ ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ನಿನ್ನೆ ರಾತ್ರಿ ಸುಮಾರು 10:30ರ ವೇಳೆಗೆ ನಾಗರಭಾವಿಯ ನಮ್ಮೂರ ತಿಂಡಿ ಸಮೀಪದ ಮಲೆ ಮಹದೇಶ್ವರ ದೇವಸ್ಥಾನದ ಬಳಿ ಅಪಘಾತ ಸಂಭವಿಸಿದೆ. ಮೃತ ಯುವಕನನ್ನು ಪ್ರಕಾಶ್ ಎಂ.ಡಿ (29) ಎಂದು ಗುರುತಿಸಲಾಗಿದೆ. ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಮದ ಮೂಲದವರಾಗಿದ್ದಾರೆ.

ಪರಿಚಿತನ ಮಗುವಿನ ಹುಟ್ಟುಹಬ್ಬ ಸಮಾರಂಭಕ್ಕೆ ಪ್ರಕಾಶ್ ತಮ್ಮ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ಸು ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಬೈಕ್‌ನಲ್ಲಿದ್ದ ಪ್ರಕಾಶ್ ಅವರ ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೃತ ಪ್ರಕಾಶ್ ಖಾಸಗಿ ಗೋಲ್ಡ್ ಲೋನ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಘಟನೆ ತಿಳಿಯುತ್ತಿದ್ದಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಮೃತನ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಕುರಿತು ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾನೂನು ನೆಪದಲ್ಲಿ ಸಂಪ್ರದಾಯಕ್ಕೆ ತಡೆ? ಕಂಕನಾಡಿ ಗರೋಡಿ ಕೋಳಿ ಅಂಕ ನಿರ್ಬಂಧಕ್ಕೆ ಭಕ್ತರ ಆಕ್ರೋಶ

ಮಂಗಳೂರು: ತುಳುನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಮೇಲೆ ಪೊಲೀಸರು ಕಾನೂನು ನೆಪವೊಡ್ಡಿ ತಡೆಯೊಡ್ಡುತ್ತಿರುವ ಆರೋಪಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಮಂಗಳೂರು ನಗರದ ಕಂಕನಾಡಿಯ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಕೋಳಿ ಅಂಕಕ್ಕೆ ಈ ಬಾರಿ ಪೊಲೀಸರು ಅನುಮತಿ ನಿರಾಕರಿಸಿದ್ದು, ಜಾತ್ರಾ ವಾತಾವರಣವೇ ಮಂಕಾಗಿದೆ.

ಕಂಕನಾಡಿ ಗರೋಡಿ ಜಾತ್ರೆಯ ಕೋಳಿ ಅಂಕವು ಕರಾವಳಿ ಭಾಗದಲ್ಲಿ ಅತ್ಯಂತ ಪವಿತ್ರ ಹಾಗೂ ನಂಬಿಕೆಯ ಸಂಪ್ರದಾಯವಾಗಿದೆ. ಇಲ್ಲಿ ಕೋಳಿ ಅಂಕದಲ್ಲಿ ಪಾಲ್ಗೊಳ್ಳಲು ಭಕ್ತರು ಹರಕೆ ಹೊತ್ತು ಬರುತ್ತಾರೆ. ತಮ್ಮ ಸಾಕಿದ ಕೋಳಿಯ ರಕ್ತದ ಒಂದು ಹನಿ ಭೂಮಿಗೆ ಬಿದ್ದರೆ ಕಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಇಂತಹ ಆಚರಣೆ ಕಳೆದ 154 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿತ್ತು.

ಆದರೆ ಈ ಬಾರಿ ಕಾನೂನು ಅಡ್ಡಿ ಉಂಟುಮಾಡಿರುವ ಪೊಲೀಸ್ ಇಲಾಖೆ, ಕೋಳಿ ಅಂಕ ನಡೆಯದಂತೆ ಗರೋಡಿ ಸುತ್ತ ಪಹರೆಯನ್ನು ಹೆಚ್ಚಿಸಿದೆ. ಧ್ವಜಾರೋಹಣದಿಂದ ಐದು ದಿನಗಳವರೆಗೆ ನಡೆಯುವ ಸಂಪ್ರದಾಯ ಪಾಲಿಸಲು ಅವಕಾಶ ನೀಡುವಂತೆ ದೈವಸ್ಥಾನದ ಆಡಳಿತ ಸಮಿತಿ ಮನವಿ ಮಾಡಿದರೂ ಅನುಮತಿ ಲಭಿಸಿಲ್ಲ.

ಇತ್ತೀಚೆಗೆ ವಿಟ್ಲದ ಕಜಂಬುಶ್ರೀ ಉಳ್ಲಾಲ್ತಿ ದೇವಸ್ಥಾನ ಜಾತ್ರೆಯ ಕೋಳಿ ಅಂಕ ಪ್ರಕರಣ ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಶಾಸಕ ಅಶೋಕ್ ರೈ, ಬಿಜೆಪಿ ಮುಖಂಡರ ಹಸ್ತಕ್ಷೇಪದಿಂದ ಭಾರೀ ವಿವಾದ ಉಂಟಾಗಿತ್ತು. ಆ ಪ್ರಕರಣದಲ್ಲಿ ಹಲವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದೀಗ ಅದೇ ಮಾದರಿಯ ಕಾನೂನು ಸಂಕಷ್ಟ ಕಂಕನಾಡಿ ಗರೋಡಿಗೂ ಎದುರಾಗಿದೆ.

ಅಯೋಧ್ಯೆ ಗಲಾಟೆ, ಕೋಮು ಉದ್ರೇಕ, ಕೋವಿಡ್‌ ಸಂಕಷ್ಟದ ಕಾಲದಲ್ಲೂ ಒಂದು ದಿನದ ಕೋಳಿ ಅಂಕ ನಡೆದಿದ್ದರೂ, ಈ ಬಾರಿ ಸಂಪೂರ್ಣ ನಿರ್ಬಂಧ ಹೇರಿರುವುದು ಭಕ್ತರಲ್ಲಿ ತೀವ್ರ ಬೇಸರ ಮೂಡಿಸಿದೆ. ಧ್ವಜಾರೋಹಣದ ದಿನ ದೈವ ದರ್ಶನದ ವೇಳೆ ಈ ವಿಚಾರವನ್ನು ದೈವದ ಮುಂದೆ ಇಡಲಾಗಿದ್ದು, ದೈವವೂ ಸಮಸ್ಯೆ ಬಗೆಹರಿಸುವ ಅಭಯ ನೀಡಿದೆ ಎಂದು ದೈವಸ್ಥಾನದವರು ತಿಳಿಸಿದ್ದಾರೆ.

error: Content is protected !!