Home Blog Page 23

ಸೆ. 14ಕ್ಕೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಚ್. ಪಾಟೀಲ ವೃತ್ತದಲ್ಲಿ ಸುದರ್ಶನ ಯುವ ಮಂಡಳ ವತಿಯಿಂದ ಸೆ. 14ರಂದು ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗುವುದು. ಸೆ. 16ರಂದು ನಡೆಯುವ ರಸಮಂಜರಿ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ಮಂಡಳದ ಗೌರವಾಧ್ಯಕ್ಷ ವಿನಾಯಕ ಮಾನ್ವಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ರೈತರ ಕಲ್ಯಾಣಕ್ಕಾಗಿ ಸಂಕಲ್ಪದೊಂದಿಗೆ ಗಣಪತಿ ಆರಾಧನೆ ಆಯೋಜಿಸಲಾಗಿದೆ. ಸೆ. 14ರಂದು ಸಂಜೆ 6ಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಸೆ. 16ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಡಿಜೆ ಇರಲಿದೆ ಎಂದರು.

ಗಣೇಶೋತ್ಸವದ ಅಂಗವಾಗಿ ಸೆ. 19ರಂದು ಗಣಹೋಮ, ಸೆ. 20ರಂದು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ, ಸೆ. 21ರಂದು ರುದ್ರಪಠಣ, ಸೆ. 22ರಂದು ಮಕ್ಕಳಿಗಾಗಿ ವಿವಿಧ ಆಟ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸೆ. 23ರಂದು ಧರ್ಮಸಭೆ ನಡೆಯಲಿದ್ದು, ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ. ಸೆ. 24ರಂದು ಲಲಿತಾ ಸಹಸ್ರನಾಮ ಪಠಣ, ಸೆ. 25ರಂದು ರಂಗೋಲಿ ಸ್ಪರ್ಧೆ ಹಾಗೂ ಸೆ. 26ರಂದು ವಿಶೇಷ ರಂಗೋಲಿ ಕಾರ್ಯಕ್ರಮ ನಡೆಯಲಿದೆ.

ಸೆ. 30ರಂದು ಅನ್ನಸಂತರ್ಪಣೆ, ರಕ್ತದಾನ ಶಿಬಿರ, ಲಕ್ಷದೀಪೋತ್ಸವ ಹಾಗೂ ಕುಂಕುಮಾರ್ಚನೆ ನಡೆಯಲಿವೆ. ಅ. 2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಅ. 3ರಂದು ವಿಶೇಷ ಕಾರ್ಯಕ್ರಮದ ಬಳಿಕ ಅ. 4ರಂದು ಗಣೇಶ ಮೂರ್ತಿ ವಿಸರ್ಜನೆ ನೆರವೇರಲಿದೆ.

ಮಂಡಳದ ಸದಸ್ಯ ರಾಘವೇಂದ್ರ ಹಬೀಬ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಗಣೇಶೋತ್ಸವದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಬಡ ಕುಟುಂಬಗಳ ಮಕ್ಕಳಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಕಾರ್ಯಕ್ಕೆ ಈ ಬಾರಿಯೂ ಆದ್ಯತೆ ನೀಡಲಾಗಿದೆ. ಅಗತ್ಯವಿರುವ ಮಕ್ಕಳನ್ನು ಗುರುತಿಸಿ ಚಿಕಿತ್ಸೆ, ಊಟ, ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಸಮಿತಿ ವತಿಯಿಂದ ಕಲ್ಪಿಸಲಾಗುವುದು ಎಂದರು.

ಸೆ. 23ರಂದು ನಡೆಯುವ ಧರ್ಮಸಭೆಯಲ್ಲಿ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಕಾನೂನು ಪಾಲನೆ, ಶಾಂತಿ ಹಾಗೂ ಸೌಹಾರ್ದ ಕಾಪಾಡುವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಆಯೋಜಕರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಮಲೇಶ ಜೈನ್, ಶಿವು ಪೂಜಾರ, ವಿಜಯಕುಮಾರ ಹಿರೇಮಠ, ಶಂಕರ ದಹಿಂಡೆ, ಬಸವರಾಜ ಅಳಗವಾಡಿ, ಮಾರುತಿ, ಅಶ್ವಿನಿ ಸೇರಿದಂತೆ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೆ. 15ಕ್ಕೆ ಅಭಿಯಂತರರ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ಸೆ. 15ರಂದು ಅಭಿಯಂತರರ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿದೆ ಎಂದು ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನಿಯೋಜಿತ ಜಿಲ್ಲಾಧ್ಯಕ್ಷ ಮಹಮ್ಮದರಫಿ ನದಾಫ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 15ರಂದು ಬೆಳಗ್ಗೆ 10.30ಕ್ಕೆ ಕಳಸಾಪುರ ರಿಂಗ್‌ರೋಡ್ ಬಳಿಯ ಸರ್ ಎಂ. ವಿಶ್ವೇಶ್ವರಯ್ಯ ಟೆಕ್ನಿಕಲ್ ಸೆಂಟರ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಅಭಿನವ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಎ.ಐ. ನಾಯ್ಕ್, ಅಶೋಕ ರೆಡ್ಡಿ ಕೊಲ್ಲೂರ, ಸುಭಾಷ್ ವಿ. ಗುಗ್ಗರಿ ಅತಿಥಿಗಳಾಗಿ ಭಾಗವಹಿಸಲಿದ್ದು, ಬಸವರಾಜ ಮಲ್ಲಣ್ಣನವರ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಘದ ಸದಸ್ಯ ಮಲ್ಲಿಕಾರ್ಜುನ ಐಲಿ ಮಾತನಾಡಿ, ಹೊಸ ವಿಚಾರಗಳು ಹಾಗೂ ತಾಂತ್ರಿಕ ಜ್ಞಾನ ಹಂಚಿಕೊಳ್ಳುವ ಉದ್ದೇಶದಿಂದ ತಾಂತ್ರಿಕ ಕೇಂದ್ರ ನಿರ್ಮಿಸಲಾಗಿದೆ. ಕಟ್ಟಡಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದ್ದು, ನಿರ್ಮಾಣಕ್ಕೆ ಶ್ರಮಿಸಿದವರು ಹಾಗೂ ದಾನಿಗಳನ್ನು ಸನ್ಮಾನಿಸಲಾಗುವುದು. ದೇಣಿಗೆ ನೀಡಿದವರ ಭಾವಚಿತ್ರ ಅನಾವರಣಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜು ಗುಡಸಾಲಿ, ಲೋಹಿತ್ ಶಾವಿ, ಬಸವರಾಜ ಮಲ್ಲಣ್ಣನವರ, ಎಸ್.ಎಸ್. ಚವಡಿ, ಝಡ್.ಎಂ. ಗುಲಗುಂದಿ, ಅಕ್ಷಯ್ ಗಾಳಪ್ಪನವರ, ರವಿ ಗಂಜಿ, ಪ್ರಕಾಶ್ ಆಸಂಗಿ, ನರೇಂದ್ರ ಚಿಕ್ಕನಗೌಡ್ರ, ಆರ್.ಎಫ್. ಡಾಲಾಯತ್ ಉಪಸ್ಥಿತರಿದ್ದರು.

ಪ್ರತಿಮೆ ಅನಾವರಣ

ಅಭಿಯಂತರರ ದಿನಾಚರಣೆ ಅಂಗವಾಗಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಅನಾವರಣಗೊಳ್ಳಲಿದೆ. ಪ್ರತಿಮೆ ನಿರ್ಮಾಣಕ್ಕೆ ರಾಜು ಕೆ. ಗುಡಸಾಲಿ, ಜಿಶಾನ್ ಎಂ. ಗುಳಗುಂದಿ ಹಾಗೂ ಸುಧಾಕರ ಎನ್. ಮಾದಗುಂಡಿ ಶ್ರಮಿಸಿದ್ದಾರೆ.

ಬರ ಘೋಷಣೆಗೆ ನರಗುಂದ ಸ್ತಬ್ಧ

0

ವಿಜಯಸಾಕ್ಷಿ ಸುದ್ದಿ, ನರಗುಂದ: ಬರಪೀಡಿತ ತಾಲೂಕುಗಳ ಪಟ್ಟಿಯಿಂದ ನರಗುಂದವನ್ನು ಕೈಬಿಟ್ಟ ಸರ್ಕಾರದ ವಿರುದ್ಧ ಅನ್ನದಾತರು ರೊಚ್ಚಿಗೆದ್ದಿದ್ದು, ಬರ ಘೋಷಣೆಗೆ ಆಗ್ರಹಿಸಿ ಶನಿವಾರ ಕರೆ ನೀಡಿದ್ದ ಬಂದ್‌ಗೆ ಪಟ್ಟಣ ಸಂಪೂರ್ಣ ಸ್ತಬ್ಧವಾಯಿತು.

ಮಹಾದಾಯಿಗಾಗಿ ಮಹಾವೇದಿಕೆ ಹಾಗೂ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಬೆಂಬಲ ನೀಡಿದರು.

ಪ್ರಮುಖ ಮಾರುಕಟ್ಟೆಗಳು ಸೇರಿದಂತೆ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ರೈತರು ಬೃಹತ್ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಂದ್‌ನ ಬಿಸಿ ಸಾರಿಗೆ ವ್ಯವಸ್ಥೆಗೂ ತಟ್ಟಿದ್ದು, ಸರ್ಕಾರಿ ಬಸ್‌ಗಳು ರಸ್ತೆಗಿಳಿಯದ ಕಾರಣ ಬಸ್ ನಿಲ್ದಾಣ ಭಣಗುಡುತ್ತಿತ್ತು. ದೂರದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು.

ಗದಗ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಗಜೇಂದ್ರಗಡವನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದ್ದು, ನರಗುಂದ, ಗದಗ, ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ರೋಣ ತಾಲೂಕುಗಳನ್ನು ಕೈಬಿಡಲಾಗಿದೆ. ಮಳೆ ಮಾಪನ ಕೇಂದ್ರಗಳ ವರದಿ ಆಧರಿಸಿ ನರಗುಂದವನ್ನು ಬರಪಟ್ಟಿಯಿಂದ ಹೊರಗಿಡಲಾಗಿದೆ ಎಂದು ರೈತರು ಆರೋಪಿಸಿದರು.

ಮಳೆ ಇಲ್ಲದಿದ್ದರೂ ತಪ್ಪು ಮಳೆ ವರದಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತಕ್ಷಣ ನರಗುಂದವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಗದಗ, ಧಾರವಾಡ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೂ ಪರಿಹಾರ ನೀಡುವಂತೆ ಒತ್ತಾಯಿಸಿದರು.

ನರಗುಂದದ ರೈತರು ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ವಾಸ್ತವ ಸ್ಥಿತಿಯನ್ನು ಅರಿತು ಸರ್ಕಾರ ಕೂಡಲೇ ಬರ ಘೋಷಿಸಿ ಪರಿಹಾರ ನೀಡಬೇಕು. ಇಲ್ಲವಾದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು.

— ಶಂಕರಣ್ಣ ಅಂಬಲಿ, ರೈತ ಮುಖಂಡ

ಮೂರು ದಿನದಲ್ಲಿ ಮನೆ ಹಕ್ಕುಪತ್ರ ನೀಡಿ: ಶಾಸಕ ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಜನತಾ ದರ್ಶನದ ಮಾದರಿಯಲ್ಲಿ ಪ್ರಜಾ ಸೇವಾ ಅಭಿಯಾನವನ್ನೂ ಯಶಸ್ವಿಗೊಳಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗದಗ-ಬೆಟಗೇರಿ ಪಾಲಾ-ಬಾದಾಮಿ ರಸ್ತೆಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ತಾರಾಲಯದ ಆವರಣದಲ್ಲಿ ಶನಿವಾರ ಪ್ರಜಾ ಸೇವಾ ಇಲಾಖೆಯಿಂದ ‘ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿ ಸಹಕಾರ’ ಆಶಯದಡಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾ ಸೇವಾ ಅಭಿಯಾನ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಬಳಿಗೆ ತೆರಳಿ ಸಮಸ್ಯೆ ಆಲಿಸುವುದು, ಅರ್ಜಿ ಸ್ವೀಕರಿಸಿ ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರ ಕಲ್ಪಿಸುವುದು ಅಭಿಯಾನದ ಉದ್ದೇಶ. ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸ್ವೀಕರಿಸಿದ ಅರ್ಜಿಗಳ ವಾಸ್ತವಾಂಶ ಪರಿಶೀಲಿಸಿ ನಿಯಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದರು.

ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಮಧ್ಯಾಹ್ನ 12 ಗಂಟೆಯೊಳಗೆ 205 ಹಾಗೂ ನಂತರ ಸೇರಿದಂತೆ ಒಟ್ಟು 445 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 380 ಅರ್ಜಿಗಳು ಮನೆಗಾಗಿ ಸಲ್ಲಿಕೆಯಾಗಿರುವುದು ಗಮನಾರ್ಹ. ಅರ್ಹ ಕುಟುಂಬಗಳಿಗೆ ವಿವಿಧ ವಸತಿ ಯೋಜನೆಗಳಡಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಮನೆಗಾಗಿ ಬಂದ 380 ಅರ್ಜಿಗಳನ್ನು ವಿಳಂಬವಿಲ್ಲದೆ ಪರಿಶೀಲಿಸಿ, ಅರ್ಜಿದಾರರ ಅರ್ಹತೆ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ಮೂರು ದಿನಗಳೊಳಗಾಗಿ ಕಾನೂನುಬದ್ಧವಾಗಿ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದರು.

ಗದಗ ಜಿಲ್ಲೆಯಲ್ಲಿ ಮನೆ ಹಾಗೂ ಹಕ್ಕುಪತ್ರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು. ಮುಂದಿನ ಕ್ರಮಗಳ ಕುರಿತು ಸಾರ್ವಜನಿಕರಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾ ಸೇವಾ ಅಭಿಯಾನ ಕೇವಲ ಅರ್ಜಿ ಸ್ವೀಕರಿಸುವ ಕಾರ್ಯಕ್ರಮವಾಗಬಾರದು. ಅರ್ಹರಿಗೆ ಸರ್ಕಾರದ ಸೇವೆ ತಲುಪುವವರೆಗೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜನರು ಮತ್ತು ಅಧಿಕಾರಿಗಳ ಸಹಕಾರದಿಂದಲೇ ಅಭಿಯಾನ ಯಶಸ್ವಿಯಾಗಲಿದೆ.

— ಡಾ. ಎಚ್.ಕೆ. ಪಾಟೀಲ, ಶಾಸಕ

ಜನತಾ ದರ್ಶನ ಮಾದರಿಯಲ್ಲಿ ಕಾರ್ಯ

ಜಿಲ್ಲೆಯಲ್ಲಿ ನಾಲ್ಕು ಬಾರಿ ನಡೆದ ಜನತಾ ದರ್ಶನಗಳಲ್ಲಿ 2,987ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, ಬಹುತೇಕ ಅರ್ಜಿಗಳು ವಿಲೇವಾರಿಯಾಗಿವೆ. ಸದ್ಯ 147 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ ಎಂದು ಶಾಸಕ ಎಚ್.ಕೆ. ಪಾಟೀಲ ತಿಳಿಸಿದರು. ಇದೇ ಮಾದರಿಯಲ್ಲಿ ಪ್ರಜಾ ಸೇವಾ ಅಭಿಯಾನದಲ್ಲೂ ಅರ್ಜಿಗಳ ವಿಲೇವಾರಿ ಮಾತ್ರವಲ್ಲದೆ, ಅರ್ಜಿದಾರರಿಗೆ ಮಾಹಿತಿ ನೀಡುವ ಹಾಗೂ ಸೇವೆ ದೊರೆಯುವವರೆಗೆ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದರು.

ಬಿಸಿಎನ್ ಶಾಲೆಗೆ ಕ್ರೀಡಾಕೂಟದ ಚಾಂಪಿಯನ್‌ಶಿಪ್

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ಸ್ಪೆಕ್ಟ್ರಂ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಗ್ರೂಪ್ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಎರಡನೇ ಬಾರಿಗೆ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದಾರೆ.

ಸೆ. 10ರಂದು ನಡೆದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದರು. ಶಶಿಧರ ನಂದೆಣ್ಣವರ 100 ಮೀ. ಓಟ, 80 ಮೀ. ಹರ್ಡಲ್ಸ್ ಹಾಗೂ ಉದ್ದ ಜಿಗಿತದಲ್ಲಿ, ವರ್ಷಿತಾ ವಾಲ್ಮೀಕಿ ಎತ್ತರ ಜಿಗಿತ, 80 ಮೀ. ಹರ್ಡಲ್ಸ್ ಹಾಗೂ 200 ಮೀ. ಓಟದಲ್ಲಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದರು.

ಪವಿತ್ರ ಓಂಕಾರಿ 400 ಮೀ. ಓಟ ಹಾಗೂ ಎತ್ತರ ಜಿಗಿತ, ಫಿಜಾ ಕೌಸರ್ ಕಣವಿ 400 ಮೀ. ಓಟ, ಮಣಿಕಂಠ ಬನ್ನಿ ಚಕ್ರ ಎಸೆತ ಹಾಗೂ ಸೈಯದ್ ಮುಸ್ತಾಕೀನ್ 100 ಮೀ. ಓಟದಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಬಾಲಕರ ವಾಲಿಬಾಲ್, ಥ್ರೋಬಾಲ್, ಬಾಲಕಿಯರ ಕಬಡ್ಡಿ ಹಾಗೂ ರಿಲೇ ಸ್ಪರ್ಧೆಗಳಲ್ಲೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಒಟ್ಟಾರೆ 91 ಅಂಕ ಗಳಿಸಿದ ಶಾಲಾ ತಂಡ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದೆ.

ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡೆಯ ಮೂಲಕ ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯ, ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ನಿರ್ದೇಶಕ ಲೋಹಿತ ನೆಲವಗಿ ತಿಳಿಸಿದ್ದಾರೆ.

ಜ್ಞಾನೇಶ್ವರಿ ಪಾರಾಯಣಕ್ಕೆ ರಜತ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಶ್ರಾವಣ ಮಾಸದ ಶ್ರೀ ಜ್ಞಾನೇಶ್ವರಿ ಪಾರಾಯಣದ 25ನೇ ವರ್ಷದ ರಜತ ಮಹೋತ್ಸವ ಶನಿವಾರ ಭಕ್ತಿಭಾವದಿಂದ ನೆರವೇರಿತು.

ಬೆಳಗ್ಗೆ ಕಾಕಡಾ ಆರತಿ, ಜ್ಞಾನೇಶ್ವರಿ ಪಾರಾಯಣ, ಪ್ರವಚನ, ನಾಮಜಪ, ಕೀರ್ತನೆ ಹಾಗೂ ವಿಶೇಷ ಪೂಜೆಗಳು ನಡೆದವು. ಬಳಿಕ ಪಾಂಡುರಂಗನ ಉತ್ಸವ ಮೂರ್ತಿ ಹಾಗೂ ಜ್ಞಾನೇಶ್ವರಿ ಗ್ರಂಥದ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಪಾಂಡುರಂಗನ ಭಜನೆಗೆ ಹೆಜ್ಜೆ ಹಾಕಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪಾಂಡುರಂಗ-ರುಕ್ಮಾಯಿ ವೇಷ ಧರಿಸಿದ್ದ ಮಕ್ಕಳು ಥೇಟ್ ದೇವರನ್ನೇ ಹೋಲುವಂತೆ ಕಂಗೊಳಿಸಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು.

ಪುಂಡಲೀಕರಾವ್ ಮಾತಾಡೆ, ಸರೋಜಮ್ಮ ನವಲೆ, ಕಿರಣ ನವಲೆ, ನಾಗೇಶ ಮಾಳದಕರ, ವಾಸು ಬೋಮಲೆ, ಪ್ರಭು ಬೋಮಲೆ, ರಮೇಶ ನವಲೆ, ಅರುಣ ನವಲೆ, ಸಂತೋಷ ಸರ್ವದೆ, ಸತೀಶ ಮಾಂಡ್ರೆ, ಪ್ರಭಾಕರ ಮಾಂಡ್ರೆ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ, ಭಜನಾ ಮಂಡಳಿಗಳ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಮಕ್ಕಳ ಕಲಿಕೆಗೆ ಪಾಲಕರ ನಿಗಾ ಅಗತ್ಯ: ಕೆ.ಪಿ. ಸಾಲಿಮಠ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಗುವಿನ ಕೈ ಹಿಡಿದು ಶಾಲೆಗೆ ಕಳುಹಿಸುವುದಷ್ಟೇ ಪಾಲಕರ ಜವಾಬ್ದಾರಿಯಲ್ಲ. ಮಕ್ಕಳ ಕನಸುಗಳಿಗೆ ದಾರಿ ತೋರಿಸುವುದು, ನಡವಳಿಕೆ ಮತ್ತು ಅಭ್ಯಾಸ ಗಮನಿಸುವುದು ಹಾಗೂ ಕಲಿಕೆಯ ಹಾದಿಯಲ್ಲಿ ಶಿಕ್ಷಕರೊಂದಿಗೆ ಹೆಜ್ಜೆ ಹಾಕುವುದು ಕೂಡ ಪಾಲಕರ ಕರ್ತವ್ಯ ಎಂದು ಡಯಟ್‌ನ ನಿವೃತ್ತ ಉಪನ್ಯಾಸಕ ಕೆ.ಪಿ. ಸಾಲಿಮಠ ಹೇಳಿದರು.

ಪಟ್ಟಣದ ಶ್ರೀ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾಲಕರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ಕಲಿಕಾ ಪ್ರಗತಿ ಶಾಲೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗುವುದಿಲ್ಲ. ಮನೆಯಲ್ಲಿ ಪಾಲಕರು ನೀಡುವ ಸಮಯ, ಪ್ರೋತ್ಸಾಹ ಹಾಗೂ ಕಲಿಕೆಗೆ ಕಲ್ಪಿಸುವ ವಾತಾವರಣವೂ ಮಹತ್ವದ್ದು. ಪಾಲಕರು ಮಕ್ಕಳ ಗೃಹಪಾಠ, ಗೈರುಹಾಜರಿ, ನಡವಳಿಕೆ ಹಾಗೂ ಕಲಿಕೆಯಲ್ಲಿನ ಏರುಪೇರುಗಳನ್ನು ಗಮನಿಸಿ, ಸಮಸ್ಯೆ ಕಂಡುಬಂದಾಗ ಶಿಕ್ಷಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ನೀಡುತ್ತಿರುವ ಸಹಕಾರ ಶಿಕ್ಷಣದ ಮೇಲಿನ ಸಮಾಜದ ಕಾಳಜಿಗೆ ಸಾಕ್ಷಿಯಾಗಿದೆ. ಶ್ರಾವಣ ಮಾಸದಲ್ಲಿ ದಾನಿಗಳ ಸಹಕಾರದಿಂದ ನಡೆದ ಒಂದು ತಿಂಗಳ ‘ಅಮೃತ ಭೋಜನ’ ಕಾರ್ಯಕ್ರಮವೂ ಇದಕ್ಕೆ ಉದಾಹರಣೆ. ಸಮಾಜದ ಸೌಲಭ್ಯ ಮತ್ತು ಸಹಕಾರವನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ನಿಡಗುಂದಿ, ನರೇಗಲ್ಲ ಹಾಗೂ ಅಬ್ಬಿಗೇರಿ ಕ್ಲಸ್ಟರ್‌ನ 15 ಶಾಲೆಗಳ ಪೈಕಿ ತಮ್ಮ ಶಾಲೆ ಶೇ.100ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ದಾಖಲಿಸಿದ ಏಕೈಕ ಶಾಲೆಯಾಗಿದೆ. ಈ ಸಾಧನೆಯನ್ನು ಮುಂದುವರಿಸಿ ಪ್ರಸಕ್ತ ಸಾಲಿನಲ್ಲೂ ಶೇ.100ರಷ್ಟು ಫಲಿತಾಂಶ ಸಾಧಿಸುವ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಹಾಗೂ ನಿರಂತರ ಪರಿಶ್ರಮದಿಂದ ಅಭ್ಯಾಸ ಮಾಡಿ ಶಾಲೆ ಮತ್ತು ಪಾಲಕರಿಗೆ ಕೀರ್ತಿ ತರಬೇಕು ಎಂದರು.

ಸಭೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಕೆ.ಪಿ. ಸಾಲಿಮಠ ಸಂವಾದ ನಡೆಸಿ, ಮಕ್ಕಳ ಕಲಿಕಾ ಪ್ರಗತಿ, ಗೃಹಪಾಠ, ಗೈರುಹಾಜರಿ ಮತ್ತು ನಡವಳಿಕೆ ಕುರಿತು ಚರ್ಚಿಸಿದರು. 50ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲೆ ಮತ್ತು ಮನೆ ಪರಸ್ಪರ ಕೈಜೋಡಿಸಬೇಕು. ಪಾಲಕರು ಮಕ್ಕಳಿಗೆ ಸಮಯ ನೀಡಿ, ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾಗ ಅವರ ಕಲಿಕೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಪರಿಹರಿಸಲು ಸಾಧ್ಯ.

— ಕೆ.ಪಿ. ಸಾಲಿಮಠ, ನಿವೃತ್ತ ಉಪನ್ಯಾಸಕ, ಡಯಟ್

ಧಾರ್ಮಿಕ ಆಚರಣೆ, ಸತ್ಸಂಗದಿಂದ ಬದುಕಿನಲ್ಲಿ ಸಂಸ್ಕಾರ ಬೆಳೆಸಿ : ಶ್ರೀ ಮುಕ್ತಿಮುನಿ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಸ್ಲಿಮರಿಗೆ ರಂಜಾನ್ ಪವಿತ್ರ ಮಾಸವಾಗಿರುವಂತೆ ಹಿಂದೂಗಳಿಗೂ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದೆ. ಶ್ರಾವಣದಲ್ಲಿ ಧಾರ್ಮಿಕ ಆಚರಣೆ, ಪುರಾಣ ಪ್ರವಚನ ಹಾಗೂ ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದರಿಂದ ಧಾರ್ಮಿಕ ಪ್ರಜ್ಞೆ ಮತ್ತು ಸಂಸ್ಕಾರ ವೃದ್ಧಿಯಾಗುತ್ತದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಆಯೋಜಿಸಿದ್ದ ಪುಟ್ಟರಾಜ ಗವಾಯಿಗಳಿಂದ ರಚಿತ ಶ್ರೀ ವೀರಭದ್ರೇಶ್ವರ ಪುರಾಣದ ಮಂಗಲೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪುರಾಣ ಪ್ರವಚನದ ಉದ್ದೇಶದಿಂದ ಆರಂಭವಾದ ತಾಯಿ ಪಾರ್ವತಿ ಮಕ್ಕಳ ಬಳಗ ಇಂದು ಹೆಮ್ಮರವಾಗಿ ಬೆಳೆದಿದೆ. ಸಂಘ-ಸಂಸ್ಥೆ ಸ್ಥಾಪಿಸುವುದು ಸುಲಭವಾದರೂ ಅವುಗಳನ್ನು ನಿರಂತರವಾಗಿ ಮುನ್ನಡೆಸುವುದು ಕಷ್ಟ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಬಳಗದ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಕ್ತಿಮಂದಿರ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ. ಗುರುಭಕ್ತರಾಗಿರುವ ಅವರು ತಮ್ಮ ಕಚೇರಿಯಲ್ಲಿ ಲಿಂ. ಜಗದ್ಗುರು ಗಂಗಾಧರ ಸ್ವಾಮಿಗಳ ಭಾವಚಿತ್ರ ಇರಿಸಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಮುಕ್ತಿಮಂದಿರ ಸಭಾಭವನ ಉದ್ಘಾಟನೆಗೆ ಅವರು ಆಗಮಿಸುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ ಪ್ರತಿಷ್ಠಿತ ವೀರಗಂಗಾಧರ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರ ದೇಸಾಯಿ ವಹಿಸಿದ್ದರು. ಉಪಾಧ್ಯಕ್ಷೆ ಜಯಲಕ್ಷ್ಮಿ ಗಡ್ಡದೇವರಮಠ, ಕಾರ್ಯದರ್ಶಿ ಜಯಲಕ್ಷ್ಮಿ ಗಡ್ಡದೇವರಮಠ, ರೋಹಿಣಿಬಾಯಿ ಬಹದ್ದೂರ ದೇಸಾಯಿ, ಶಾರಕ್ಕ ಮಹಾಂತಶೆಟ್ಟರ ಹಾಗೂ ಪುರಾಣ ಪ್ರವಚನಕಾರ ಪ್ರಭುಗೌಡ ಯಕ್ಕಿಕೊಪ್ಪ ವೇದಿಕೆಯಲ್ಲಿದ್ದರು.

ಜೆ.ಡಿ. ಲಮಾಣಿ, ರೂಪಾ ನವಲೆ, ಸೋಮಯ್ಯ ವಿರಕ್ತಮಠ, ಜಗದೀಶ ಶಿರಹಟ್ಟಿ, ರಮೇಶ ನವಲೆ, ಪರಮೇಶ ತಡಹಾಳ, ಎಸ್.ಎನ್. ಮಳಲಿ, ಹನುಮಂತಪ್ಪ ಭಜಂತ್ರಿ, ಎ.ಎನ್. ನಾವಿ ಸೇರಿದಂತೆ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ವೈಷ್ಣವಿ ಕ್ಷತ್ರಿ ಪ್ರಾರ್ಥಿಸಿದರು. ಸುಚಿತ್ರ ಜಗದಮನಿ ಹಾಗೂ ಶೀಲಾ ತಳವಾರ ಸ್ವಾಗತಿಸಿದರು. ಎಂ.ಸಿ. ಹಿರೇಮಠ ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಮಗಳು ಕೇವಲ ಆಚರಣೆಗೆ ಸೀಮಿತವಾಗದೆ, ನಮ್ಮ ಬದುಕಿನಲ್ಲಿ ಸದಾಚಾರ, ಶಿಸ್ತು ಮತ್ತು ಸಂಸ್ಕಾರ ಬೆಳೆಸುವಂತಿರಬೇಕು. ಪುರಾಣ ಮತ್ತು ಸತ್ಸಂಗದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಅದರ ನಿಜವಾದ ಫಲ ದೊರೆಯುತ್ತದೆ.

— ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು

ನಾಟ್ಯ ಅಕಾಡೆಮಿಗೆ ದಶಕದ ಸಂಭ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿ ಹತ್ತು ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ. ಇದರ ಹಿಂದೆ ನಿರಂತರ ಪರಿಶ್ರಮ ಮತ್ತು ಸಾಧನೆಯಿದೆ ಎಂದು ಲೇಖಕಿ ಹಾಗೂ ಮುಂಡರಗಿಯ ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ಹೇಳಿದರು.

ನಗರದ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಅಕಾಡೆಮಿಯ ದಶಕದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿರುವ ಆಸಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಿ ಪಾಲಕರು ಪ್ರೋತ್ಸಾಹಿಸಬೇಕು. ಚಿಕ್ಕ ವಯಸ್ಸಿನಲ್ಲಿ ಕಲಿಸುವ ವಿಷಯಗಳನ್ನು ಮಕ್ಕಳು ಸುಲಭವಾಗಿ ಗ್ರಹಿಸುತ್ತಾರೆ. ಅವರ ಆಸಕ್ತಿಗೆ ಅನುಗುಣವಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಪಾಲಕರು ಸಹಕಾರ ನೀಡಬೇಕು ಎಂದರು.

ಸ್ಪರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಪ್ರಭಾ ದೇಸಾಯಿ ಮಾತನಾಡಿ, ಒಂದು ವಿದ್ಯಾರ್ಥಿಯಿಂದ ಆರಂಭವಾದ ಅಕಾಡೆಮಿಯಲ್ಲಿ ಇಂದು 150ಕ್ಕೂ ಹೆಚ್ಚು ಮಕ್ಕಳು ನೃತ್ಯ ಕಲಿಯುತ್ತಿರುವುದು ಗಮನಾರ್ಹ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು ಎಂದರು.

ಮುಳಗುಂದದ ವೈದ್ಯ ಡಾ. ಎಸ್.ಸಿ. ಚವಡಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ಉಳಿಸುವ ಜವಾಬ್ದಾರಿ ಮಕ್ಕಳ ಮೇಲಿದೆ. ಜಿಲ್ಲೆಯ ವಿವಿಧೆಡೆ ಶಾಖೆಗಳನ್ನು ತೆರೆದು ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿಬಿಐ ನ್ಯೂಸ್ ಸಂಪಾದಕ ವೆಂಕಟೇಶ ಇಮರಾಪುರ ಮಾತನಾಡಿ, ವಿದುಷಿ ರಾಘವಿ ಜ್ಯೋತಿಶ್ರೀ ಅವರು ಹತ್ತು ವರ್ಷಗಳ ಹಿಂದೆ ಒಬ್ಬ ವಿದ್ಯಾರ್ಥಿಯಿಂದ ಆರಂಭಿಸಿದ ಅಕಾಡೆಮಿ ಇಂದು ಗದಗ, ಮುಂಡರಗಿ, ಅಣ್ಣಿಗೇರಿ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ಏಳು ಶಾಖೆಗಳನ್ನು ಹೊಂದಿದೆ ಎಂದು ಹೇಳಿದರು.

ಕಾರ್ಯಾಧ್ಯಕ್ಷ ಫಕೀರಪ್ಪ ಹೆಬಸೂರ ಸೇರಿದಂತೆ ಗಣ್ಯರು ಮಾತನಾಡಿದರು. ಅಕಾಡೆಮಿ ನಿರ್ದೇಶಕಿ ವಿದುಷಿ ರಾಘವಿ ಜ್ಯೋತಿಶ್ರೀ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ನಾಗರತ್ನಾ ಕುಂಬಾರ ನಿರೂಪಿಸಿದರು. ಬಳಿಕ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.

ಮಕ್ಕಳ ಪ್ರತಿಭೆ ಮತ್ತು ಆಸಕ್ತಿಯನ್ನು ಗುರುತಿಸಿ ಸರಿಯಾದ ಪ್ರೋತ್ಸಾಹ ನೀಡಿದರೆ ಅವರು ಕಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ಪಾಲಕರ ಬೆಂಬಲವೇ ಮಕ್ಕಳ ಆತ್ಮವಿಶ್ವಾಸಕ್ಕೆ ದೊಡ್ಡ ಶಕ್ತಿ.

— ವೀಣಾ ಪಾಟೀಲ

ಗಡಿಗೆ ಒಡೆಯಲು ಗೋವಿಂದರ ರೋಚಕ ಸಾಹಸ

0

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಒಕ್ಕಲಗೇರಿ ಓಣಿಯ ಶ್ರೀ ರಾಚೋಟೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಮೊಸರು ಗಡಿಗೆ ಒಡೆಯುವ ರೋಚಕ ಸ್ಪರ್ಧೆ ನೂರಾರು ಜನರ ಗಮನ ಸೆಳೆಯಿತು. ಯುವಕರ ಸಾಹಸ, ತಂಡಸ್ಫೂರ್ತಿ ಹಾಗೂ ಭಕ್ತರ ಹರ್ಷೋದ್ಗಾರದ ನಡುವೆ ನಡೆದ ಸ್ಪರ್ಧೆಯಲ್ಲಿ ಆರ್.ವಾಯ್.ಎಸ್. ಸಂಘ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿತು.

ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದ ಸಾಹಸಮಯ ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಂಡಿದ್ದವು. ಪ್ರತಿ ತಂಡದಲ್ಲಿ 13 ಆಟಗಾರರಿದ್ದು, ಒಬ್ಬರ ಮೇಲೊಬ್ಬರು ನಿಂತು ಮಾನವ ಗೋಪುರ ನಿರ್ಮಿಸಿ, ಮೇಲಿದ್ದ ಆಟಗಾರ ಗಡಿಗೆ ಒಡೆಯುವ ದೃಶ್ಯ ರೋಮಾಂಚನ ಮೂಡಿಸಿತು. ಗಂಗಿಮಡಿ ಯುವಕರ ತಂಡ ದ್ವಿತೀಯ ಹಾಗೂ ಖಾನತೋಟದ ಯುವಕರ ತಂಡ ತೃತೀಯ ಸ್ಥಾನ ಗಳಿಸಿತು.

ಶ್ರೀಕೃಷ್ಣನ ಬಾಲಲೀಲೆಯನ್ನು ಸ್ಮರಿಸುವ ಈ ಆಚರಣೆಯು ಧಾರ್ಮಿಕ ಹಾಗೂ ಸಾಮಾಜಿಕ ಮಹತ್ವ ಹೊಂದಿದೆ. ಬಾಲಕೃಷ್ಣನು ಗೆಳೆಯರೊಂದಿಗೆ ಸೇರಿ ಗೋಪಿಕೆಯರ ಮನೆಯಲ್ಲಿ ಎತ್ತರದಲ್ಲಿ ಕಟ್ಟಿದ್ದ ಮೊಸರು, ಬೆಣ್ಣೆ ಮತ್ತು ಹಾಲಿನ ಗಡಿಗೆಗಳನ್ನು ಕದ್ದು ತಿನ್ನುತ್ತಿದ್ದ ಪ್ರಸಂಗವನ್ನು ನೆನಪಿಸುವ ಉದ್ದೇಶದಿಂದ ಯುವಕರು ಮಾನವ ಗೋಪುರ ನಿರ್ಮಿಸಿ ಗಡಿಗೆ ಒಡೆಯುತ್ತಾರೆ.

ನವೀನ ನಾಲ್ವಾಡ ಮಾತನಾಡಿ, ಗಡಿಗೆ ಒಡೆಯುವ ಯುವಕರನ್ನು ‘ಗೋವಿಂದರು’ ಎಂದು ಕರೆಯಲಾಗುತ್ತದೆ. ಒಬ್ಬರ ಮೇಲೊಬ್ಬರು ನಿಂತು ಮಾನವ ಗೋಪುರ ನಿರ್ಮಿಸಿ ಗಡಿಗೆ ಒಡೆಯುವ ಮೂಲಕ ಕೃಷ್ಣನ ಬಾಲಲೀಲೆಯನ್ನು ಸ್ಮರಿಸಲಾಗುತ್ತದೆ. ಆರು ತಂಡಗಳ ಆಟಗಾರರು ಉತ್ಸಾಹದಿಂದ ಪಾಲ್ಗೊಂಡು ಭಕ್ತರನ್ನು ರಂಜಿಸಿದರು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜು ಖಾನಪ್ಪನವರ, ಸಿದ್ದು ಸಂಗನಾಳ, ವೀರಣ್ಣ ಮೇಟಿ, ಮಂಜು ಅಂತರಗೊಂಡ, ಚೇತನ್ ಅಬ್ಬಿಗೇರಿ, ಮಲ್ಲು ಮಹಾಂತಶೆಟ್ಟರ, ಮಂಜುನಾಥ ಕುರ್ತಕೋಟಿ, ಈಶ್ವರ ಹಳ್ಳಿ, ಕಿರಣ್ ಕಮತರ, ಪರಶುರಾಮ ಹಳ್ಳದ, ನರಸಪ್ಪ ತುಕ್ಕಪ್ಪನವರ, ಬಸವರಾಜ ಹುಬ್ಬಳ್ಳಿ, ನಾಗರಾಜ ಮೇಣಸಗಿ, ವೀರೂಪಾಕ್ಷಪ್ಪ ಹೆಬ್ಬಳ್ಳಿ, ಮಹೇಶ ರೋಖಡೆ, ಸುರೇಶ ಹೆಬಸೂರ, ಹೇಮಂತ್ ಗಿಡ್ಡಹನಮಣ್ಣವರ, ಆನಂದ ಗವಲಿ, ಪಂಚಾಕ್ಷರಿ ಅಂಗಡಿ, ಸೋಮು ಮುಳಗುಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಟ್ರೋಪಿ ಜತೆಗೆ ನಗದು ಬಹುಮಾನ

ಪ್ರಥಮ ಸ್ಥಾನ ಪಡೆದ ಆರ್.ವಾಯ್.ಎಸ್. ಸಂಘಕ್ಕೆ ₹10,000 ನಗದು ಹಾಗೂ ಟ್ರೋಪಿ, ದ್ವಿತೀಯ ಸ್ಥಾನ ಪಡೆದ ಗಂಗಿಮಡಿ ಯುವಕರ ತಂಡಕ್ಕೆ ₹5,000 ನಗದು ಹಾಗೂ ಟ್ರೋಪಿ, ತೃತೀಯ ಸ್ಥಾನ ಪಡೆದ ಖಾನತೋಟದ ಯುವಕರ ತಂಡಕ್ಕೆ ₹2,500 ನಗದು ಹಾಗೂ ಟ್ರೋಪಿ ನೀಡಿ ಗೌರವಿಸಲಾಯಿತು.

ಗಡಿಗೆ ಒಡೆಯುವ ಕಾರ್ಯಕ್ರಮ ಶ್ರೀಕೃಷ್ಣನ ಬಾಲಲೀಲೆಯನ್ನು ಸ್ಮರಿಸುವ ಜತೆಗೆ ಯುವಕರಲ್ಲಿನ ಸಾಹಸ, ಒಗ್ಗಟ್ಟು ಮತ್ತು ತಂಡಸ್ಫೂರ್ತಿಯನ್ನು ಅನಾವರಣಗೊಳಿಸುತ್ತದೆ. ಇಂತಹ ಸಾಂಪ್ರದಾಯಿಕ ಆಚರಣೆಗಳು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತವೆ.

— ಶ್ರೀಧರ್ ವಜ್ರಬಂಡಿ