Home Blog Page 23

ಮದ್ಯಪಾನ ಮಧ್ಯೆ ಉತ್ತರ ಪತ್ರಿಕೆ ಮೌಲ್ಯಮಾಪನ: ಲಾತೂರ್ ಶಿಕ್ಷಕನ ವಿರುದ್ಧ ಆಕ್ರೋಶ!

0

ನವದೆಹಲಿ: ಮಹಾರಾಷ್ಟ್ರದ ಲಾತೂರ್‌ನಲ್ಲಿ ಶಿಕ್ಷಣ ಕ್ಷೇತ್ರದ ನೈತಿಕತೆಗೆ ಗಂಭೀರ ಪ್ರಶ್ನೆ ಎಬ್ಬಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕ ಅಜಯ್ ಕೊಕನೆ ಅವರು ಮದ್ಯಪಾನ ಮಾಡುತ್ತಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ದೃಶ್ಯಗಳಲ್ಲಿ, ಶಿಕ್ಷಕನು ಸ್ನೇಹಿತರೊಂದಿಗೆ ಕುಳಿತು ಸಿಗರೇಟ್ ಸೇದುತ್ತಾ, ಪಕ್ಕದಲ್ಲೇ ಮದ್ಯದ ಬಾಟಲಿ ಇಟ್ಟುಕೊಂಡು ಪರೀಕ್ಷಾ ಪತ್ರಿಕೆಗಳನ್ನು ಪರಿಶೀಲಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಶಿಕ್ಷಣದಂತಹ ಜವಾಬ್ದಾರಿಯುತ ಕ್ಷೇತ್ರದಲ್ಲಿ ಇಂತಹ ವರ್ತನೆ ತೀವ್ರ ಟೀಕೆಗೆ ಗುರಿಯಾಗಿದೆ.

ಈ ಘಟನೆ ಪೋಷಕರು ಮತ್ತು ಶಿಕ್ಷಣ ತಜ್ಞರಲ್ಲಿ ಆತಂಕ ಹುಟ್ಟುಹಾಕಿದ್ದು, ವಿದ್ಯಾರ್ಥಿಗಳ ಭವಿಷ್ಯ ಮತ್ತು ಮೌಲ್ಯಮಾಪನ ಪ್ರಕ್ರಿಯೆಯ ನಿಷ್ಠೆ ಬಗ್ಗೆ ಪ್ರಶ್ನೆಗಳು ಮೂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ರಾಮಾಯಣ ಕಥೆಗೆ ಹೊಸ ತಿರುವು: ಪ್ರಕಾಶ್ ರಾಜ್ ಹೇಳಿಕೆ ತೀವ್ರ ಆಕ್ರೋಶ, ಕಾನೂನು ಸಂಕಷ್ಟ!

ಪ್ರಚೋದನಾತ್ಮಕ ಹೇಳಿಕೆಗಳ ಮೂಲಕ ನಿರಂತರವಾಗಿ ಸುದ್ದಿಯಲ್ಲಿರುವ ಪ್ರಕಾಶ್‌ ರಾಜ್‌ ಇದೀಗ ಮತ್ತೊಮ್ಮೆ ಕಾನೂನು ವಿವಾದಕ್ಕೆ ಸಿಲುಕಿರುವಂತೆ ಕಾಣುತ್ತಿದೆ. ರಾಮಾಯಣದ ಕಥನವನ್ನು ವಿಭಿನ್ನ ದೃಷ್ಟಿಕೋನದಿಂದ ವಿವರಿಸಿದ ಅವರ ಮಾತುಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕಿವೆ.

ವೇದಿಕೆ ಮೇಲಿನ ಭಾಷಣದಲ್ಲಿ, ಅವರು ರಾಮ ಮತ್ತು ರಾವಣರನ್ನು ಪ್ರಾದೇಶಿಕವಾಗಿ ವಿಭಜಿಸಿ ಹೇಳಿಕೆ ನೀಡಿರುವುದು ವಿವಾದದ ಮೂಲವಾಗಿದೆ. ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಭಾಷಾ ವಿಚಾರವನ್ನು ಉಲ್ಲೇಖಿಸಿ, ಉತ್ತರ ಭಾರತದ ಪ್ರಭಾವದ ವಿರುದ್ಧ ತಮ್ಮ ಅಭಿಪ್ರಾಯವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರಾಜ್ ಹೇಳಿದ್ದೇನು?

ರಾಮ, ಲಕ್ಷ್ಮಣ ಹಾಗೂ ಸೀತೆ ದಕ್ಷಿಣ ಭಾರತಕ್ಕೆ ಬರುತ್ತಾರೆ. ಬಂದಾಗ ಲಕ್ಷ್ಮಣನಿಗೆ ಹಸಿವಾಗಿರುತ್ತದೆ. ಅಲ್ಲಿ ಹಣ್ಣಿನ ತೋಟ ಒಂದಿರುತ್ತದೆ. ಹೋಗಿ ಹಣ್ಣನ್ನು ತಿನ್ನೋಣ ಎಂದು ಲಕ್ಷ್ಮಣ ಹೇಳುತ್ತಾನೆ. ಎಲ್ಲರೂ ಹಣ್ಣು ತಿನ್ನುತ್ತಾರೆ. ಅಲ್ಲಿಗೆ ಬರುವ ಶೂರ್ಪನಖ, ಅಣ್ಣ ರಾವಣ ಯಾರೋ ಹಣ್ಣನ್ನು ತಿನ್ನುತ್ತಿದ್ದಾರೆ ಎನ್ನುತ್ತಾಳೆ. ಆಗ ರಾವಣ, ಅವರಿಗೆ ಹಸಿವಾಗಿದೆ ತಿನ್ನಲಿ ಎನ್ನುತ್ತಾನೆ’ ಎಂದು ಕಥೆ ಆರಂಭಿಸಿದ್ದಾರೆ ಪ್ರಕಾಶ್ ರಾಜ್.

 ‘ಆ ಬಳಿಕ ರಾವಣ ಹಣ ಕೇಳುತ್ತಾನೆ. ರಾಮ ಇಲ್ಲ ಎನ್ನುತ್ತಾನೆ. 20 ಪರ್ಸೆಂಟ್ ಡಿಸ್ಕೌಂಟ್ ಕೊಡ್ತೀನಿ ಎಂದು ರಾವಣ ಹೇಳುತ್ತಾನೆ. ಹಣವೇ ಇಲ್ಲ ಎಂದಮೇಲೆ ಡಿಸ್ಕೌಂಟ್ ಕೊಟ್ಟು ಏನು ಪ್ರಯೋಜನ? ಅದೇ ರೀತಿ, ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆ’ ಎಂದಿದ್ದಾರೆ ಪ್ರಕಾಶ್ ರಾಜ್. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ ಎಂದು ಹೇಳಲಾಗಿದೆ.

ಆಹಾರ ನೀಡುತ್ತಿದ್ದ ಕಾವಾಡಿಗನ ಮೇಲೆ ಕುಮ್ಕಿ ಆನೆ ದಾಳಿ; ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ!

ಹಾಸನ:– ಕಾಡಾನೆ ಸೆರೆ ಕಾರ್ಯಾಚರಣೆಗೆ ದುಬಾರೆ ಸಾಕಾನೆ ಶಿಬಿರದಿಂದ ಬಂದಿದ್ದ ಕುಮ್ಕಿ ಆನೆ ಸುಗ್ರೀವ ಆಹಾರ ನೀಡುತ್ತಿದ್ದ ಕಾವಾಡಿಗನ ಮೇಲೆ ದಾಳಿ ನಡೆಸಿದ ಘಟನೆ ತಾತ್ಕಾಲಿಕ ಸಾಕಾನೆ ಕ್ಯಾಂಪ್‌ನಲ್ಲಿ ನಡೆದಿದೆ.

ಆಹಾರ ನೀಡುತ್ತಿದ್ದ ವೇಳೆ ಆನೆ ಏಕಾಏಕಿ ಕಾವಾಡಿಗ ರಾಜು ಮೇಲೆ ದಾಳಿ ಮಾಡಿ ದಂತದಿಂದ ತಿವಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ರಾಜು ಅವರನ್ನು ತಕ್ಷಣ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಬುಧವಾರ ಕಾಡಾನೆ ಸೆರೆ ಕಾರ್ಯಾಚರಣೆಗೆ ಆರು ಸಾಕಾನೆಗಳನ್ನು ನಿಯೋಜಿಸಲಾಗಿತ್ತು. ಸಂಜೆ ವೇಳೆಗೆ ನರಹಂತಕ ಒಂಟಿಕೋರೆ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆ ಕಾರ್ಯಾಚರಣೆಯಲ್ಲಿ ಸುಗ್ರೀವ ಪ್ರಮುಖ ಪಾತ್ರವಹಿಸಿತ್ತು. ಆದರೆ ನಂತರ ಆ ಕಾಡಾನೆ ತಪ್ಪಿಸಿಕೊಂಡಿದ್ದು, ಇಂದು ಬೆಳಿಗ್ಗೆ ಮತ್ತೆ ಸೆರೆ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ಘಟನೆಯ ನಂತರ ಡಿಸಿಎಫ್ ಸೌರಭ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ್ದಾರೆ.

ಘಟನೆ ಬಳಿಕ ಕುಮ್ಕಿ ಆನೆಗಳಾದ ಸುಗ್ರೀವ ಹಾಗೂ ಲಕ್ಷ್ಮಣರನ್ನು ದುಬಾರೆ ಶಿಬಿರಕ್ಕೆ ವಾಪಸ್ ಕಳುಹಿಸಲಾಗಿದೆ. ಅವುಗಳ ಬದಲಿಗೆ ಬೇರೆ ಎರಡು ಕುಮ್ಕಿ ಆನೆಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದ್ದು, ಇಂದಿನ ಕಾಡಾನೆ ಸೆರೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ನೆಲಮಂಗಲದಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ: ಕೊಲೆಯೋ, ಅಸಹಜ ಸಾವೋ? ಪೊಲೀಸರಿಂದ ತನಿಖೆ ಚುರುಕು!

0

ನೆಲಮಂಗಲ: ತಾಲೂಕಿನ ಗಡಿ ಗ್ರಾಮ ಹಳೇ ನಿಜಗಲ್‌ನಲ್ಲಿರುವ ಅಡಿಕೆ ತೋಟದ ಪಕ್ಕದಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು ತುಮಕೂರು ಮೂಲದ ಯಮುನಾ (35) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಅವರು ಈಗ ಅಸ್ಥಿಪಂಜರ ರೂಪದಲ್ಲಿ ಪತ್ತೆಯಾಗಿದ್ದಾರೆ. ತಲೆಬುರುಡೆ ಹಾಗೂ ಕೈ-ಕಾಲುಗಳ ಕೆಲವು ಮೂಳೆಗಳು ಸ್ಥಳದಲ್ಲಿ ಸಿಕ್ಕಿದ್ದು, ಜೊತೆಗೆ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಕೂಡ ದೊರೆತಿರುವುದರಿಂದ ಗುರುತು ಪತ್ತೆ ಸಾಧ್ಯವಾಗಿದೆ.

ಯಮುನಾ 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಬಳಿಕ ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಅವರು, ಪತಿಯನ್ನು ಬಿಟ್ಟು ಕೆಲ ವರ್ಷ ದೊಡ್ಡಬಳ್ಳಾಪುರದಲ್ಲಿ ಆತನೊಂದಿಗೆ ವಾಸವಿದ್ದರು. ನಂತರ ಎರಡು ವರ್ಷಗಳ ಹಿಂದೆ ಮತ್ತೆ ಪತಿಯ ಮನೆಗೆ ಮರಳಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಮಾರ್ಚ್ 21ರಂದು ಯಮುನಾ ಅವರ ಹುಟ್ಟುಹಬ್ಬ ಇದ್ದು, ಆ ದಿನ ರಾಘವೇಂದ್ರ ಭೇಟಿ ಮಾಡುವಂತೆ ಒತ್ತಾಯಿಸಿದ್ದನೆಂದು ಮಾಹಿತಿ ಲಭ್ಯವಾಗಿದೆ. ಕೆಲಸ ಮುಗಿಸಿ ಆತನನ್ನು ಭೇಟಿಯಾಗಲು ತೆರಳಿದ ನಂತರ ಯಮುನಾ ನಾಪತ್ತೆಯಾಗಿದ್ದರು. ಈ ಕುರಿತು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಅಡಿಕೆ ತೋಟದ ಬಳಿ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಘವೇಂದ್ರನೇ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಶವವನ್ನು ಅಡಿಕೆ ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಾಜಿ ಸಂಸದ ಅನಂತ್ ಕುಮಾರ್ ಹೆಗ್ಡೆ ಪುತ್ರನಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್!

ಬೆಂಗಳೂರು:- ದಾಬಸ್‌ಪೇಟೆ ಬಳಿ ಕಾರು ಓವರ್‌ಟೇಕಿಂಗ್ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣದಲ್ಲಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಪುತ್ರ ಅಶುತೋಷ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಅಶುತೋಷ್ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸದಿದ್ದರೂ ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬುದನ್ನು ಪ್ರಶ್ನಿಸಿ, ಅವರ ಪರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಪಡೆಯಲು ತೊಂದರೆ ಉಂಟಾಗುತ್ತಿದೆ ಎಂದು ವಕೀಲರು ವಾದ ಮಂಡಿಸಿದ್ದರು.

ಈ ವಾದವನ್ನು ಆಲಿಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ, ಅಶುತೋಷ್ ವಿರುದ್ಧದ ಪ್ರಕರಣದ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿದೆ.

ಘಟನೆಯ ದಿನ ಅಶುತೋಷ್ ಹಿಂಬದಿ ಸೀಟಿನಲ್ಲಿ ಇದ್ದರು, ನೇರವಾಗಿ ಘಟನೆಯಲ್ಲಿ ಪಾತ್ರವಿಲ್ಲ ಎಂದು ವಾದಿಸಲಾಗಿದ್ದು, ತನಿಖೆಯಲ್ಲೂ ಅವರ ನೇರ ಭಾಗವಹಿಸುವಿಕೆ ಉಲ್ಲೇಖವಿಲ್ಲ ಎಂದು ನ್ಯಾಯಾಲಯದ ಮುಂದೆ ತಿಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರತಿಕ್ರಿಯೆಯೂ ಗಮನ ಸೆಳೆದಿದೆ.

ಜಿಮ್‌ನಲ್ಲಿ ಧರಿಸುವ ಟೈಟ್ ಬಟ್ಟೆಗಳು ಆರೋಗ್ಯಕ್ಕೆ ಹಾನಿಕಾರ! ತಜ್ಞರು ಹೇಳುವುದೇನು ಗೊತ್ತಾ?

0

ಇಂದಿನ ಫಿಟ್ನೆಸ್ ಟ್ರೆಂಡ್‌ನಲ್ಲಿ ಜಿಮ್‌ಗೆ ಹೋಗುವವರು ಟೈಟ್ ಬಟ್ಟೆಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಆದರೆ ಇವು ಆರೋಗ್ಯಕ್ಕೆ ಹಾನಿಕಾರಕವಾಗಬಹುದೇ ಎಂಬ ಪ್ರಶ್ನೆ ಈಗ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಅಮೆರಿಕದಲ್ಲಿ ನಡೆದ ಅಧ್ಯಯನದ ಬಳಿಕ ಈ ವಿಷಯ ಹೆಚ್ಚು ಗಮನ ಸೆಳೆದಿದೆ.

ತಜ್ಞರ ಪ್ರಕಾರ, ಬಹುತೇಕ ಜಿಮ್ ಬಟ್ಟೆಗಳು ಕೃತಕ ತಂತುಗಳಿಂದ ತಯಾರಾಗಿರುತ್ತವೆ. ಇವುಗಳಲ್ಲಿ ‘ಫಥಾಲೇಟ್ಸ್’ ಎಂಬ ರಾಸಾಯನಿಕಗಳ ಬಳಕೆ ಇರುವ ಸಾಧ್ಯತೆ ಇದೆ. ಈ ರಾಸಾಯನಿಕಗಳು ದೇಹದ ಹಾರ್ಮೋನ್ ವ್ಯವಸ್ಥೆಗೆ ಹಾನಿ ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

ವೈದ್ಯರು ತಿಳಿಸುವಂತೆ, ತುಂಬಾ ಬಿಗಿಯಾದ ಮತ್ತು ಕೃತಕ ತಂತುಗಳಿಂದ ಮಾಡಿದ ಬಟ್ಟೆಗಳನ್ನು ಹೆಚ್ಚು ಸಮಯ ಧರಿಸುವುದರಿಂದ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವ್ಯಾಯಾಮದ ವೇಳೆ ಬೆವರು ಹೆಚ್ಚಾಗಿ ಬರುತ್ತದೆ. ಟೈಟ್ ಬಟ್ಟೆಗಳು ಬೆವರನ್ನು ಒಳಗೇ ಹಿಡಿದುಕೊಳ್ಳುತ್ತವೆ. ಇದರಿಂದ ಫಂಗಸ್ ಸೋಂಕು, ಚರ್ಮದ ಉರಿ, ಕೆಂಪು ದಪ್ಪಗಳು (ರಾಶ್‌) ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೇಸಿಗೆ ಕಾಲದಲ್ಲಿ ಈ ಸಮಸ್ಯೆಗಳು ಇನ್ನಷ್ಟು ತೀವ್ರವಾಗಬಹುದು.

ಇನ್ನೊಂದು ಮುಖ್ಯ ವಿಷಯವೆಂದರೆ, ಬಿಗಿಯಾದ ಬಟ್ಟೆಗಳು ದೇಹಕ್ಕೆ ಸರಿಯಾದ ಗಾಳಿಯ ಹರಿವನ್ನು ತಡೆಯುತ್ತವೆ. ಇದರಿಂದ ಚರ್ಮದ ಮೇಲೆ ಒತ್ತಡ ಹೆಚ್ಚಾಗಿ ಅಸ್ವಸ್ಥತೆ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ದೀರ್ಘಕಾಲ ಬಳಕೆಯಿಂದ ಹಾರ್ಮೋನಲ್ ಸಮಸ್ಯೆಗಳಿಗೂ ಕಾರಣವಾಗಬಹುದು ಎಂಬ ಆತಂಕ ತಜ್ಞರು ವ್ಯಕ್ತಪಡಿಸಿದ್ದಾರೆ.

ತಡೆಗಟ್ಟುವ ಕ್ರಮಗಳು:

  • ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ
  • ವ್ಯಾಯಾಮದ ನಂತರ ತಕ್ಷಣ ಬಟ್ಟೆ ಬದಲಾಯಿಸಿ
  • ಹತ್ತಿ ಅಥವಾ ಹಗುರವಾದ ಬಟ್ಟೆಗಳಿಗೆ ಆದ್ಯತೆ ನೀಡಿ
  • ಚರ್ಮದಲ್ಲಿ ಉರಿ ಅಥವಾ ಸೋಂಕು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ

ಸರಿಯಾದ ಬಟ್ಟೆ ಆಯ್ಕೆ ಮತ್ತು ಸ್ವಚ್ಛತೆ ಪಾಲಿಸುವುದರಿಂದ ಈ ರೀತಿಯ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಿಕೊಳ್ಳಬಹುದು.

ಬೆಂಗಳೂರು| ದ್ವಿತೀಯ ಪಿಯುಸಿ ಪರೀಕ್ಷೆ-2 ಅರ್ಜಿ ಅವಧಿ ವಿಸ್ತರಣೆ

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶುಭ ಸುದ್ದಿ ನೀಡಿದೆ.

ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಏಪ್ರಿಲ್ 18ರವರೆಗೆ ವಿಸ್ತರಿಸಿ ಮಂಡಳಿ ಆದೇಶ ಹೊರಡಿಸಿದೆ. ಮೊದಲು ಏಪ್ರಿಲ್ 17 ಕೊನೆಯ ದಿನವಾಗಿದ್ದರೂ, ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಅರ್ಜಿ ಪ್ರಕ್ರಿಯೆಯಲ್ಲಿ ಉಂಟಾದ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಒಂದು ದಿನದ ಮಟ್ಟಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಇನ್ನೂ ಅರ್ಜಿ ಸಲ್ಲಿಸದವರು ತಕ್ಷಣವೇ ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

ಸುತ್ತೋಲೆಯಲ್ಲಿ ಏನಿದೆ?

2026ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪುನರಾವರ್ತಿತ ಹಾಗೂ ಫಲಿತಾಂಶ ಸುಧಾರಿಸಿಕೊಳ್ಳುವ ಅಭ್ಯರ್ಥಿಗಳಿಗೆ ಏಪ್ರಿಲ್ 9ರಿಂದ 17ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆನ್‌ಲೈನ್ ಹಾಗೂ ಕಾಲೇಜುಗಳ ಮೂಲಕ ಭೌತಿಕವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇತ್ತು.

ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸಿ ಇದೀಗ ಅಂತಿಮ ದಿನಾಂಕವನ್ನು ಏಪ್ರಿಲ್ 18ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಕ್ಷಣಾರ್ಧದಲ್ಲೇ ಹೊತ್ತಿ ಉರಿದ ಹೋಟೆಲ್!

ಬೆಂಗಳೂರು: ನಗರದಲ್ಲಿ ಮತ್ತೊಂದು ದೊಡ್ಡ ಅಗ್ನಿ ಅವಘಡ ಸಂಭವಿಸಿದೆ.

ನೈಸ್ ರಸ್ತೆಯ ಸೋಂಪುರ ಸರ್ಕಲ್‌ನಲ್ಲಿರುವ ಶುದ್ಧ ತಿಂಡಿ ಹೋಟೆಲ್‌ಗೆ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲೇ ಧಗಧಗನೆ ಹೊತ್ತಿ ಉರಿದ ಪರಿಣಾಮ ಸಂಪೂರ್ಣ ಹೋಟೆಲ್ ಸುಟ್ಟು ಕರಕಲಾಗಿದೆ.

ಇತ್ತೀಚಿಗಷ್ಟೇ, ಮಾರ್ಚ್ ತಿಂಗಳಲ್ಲಿ ಉದ್ಘಾಟನೆಯಾಗಿದ್ದ ಈ ಬೃಹತ್ ಹೋಟೆಲ್‌ನಲ್ಲಿ ಇಡ್ಲಿ ಸ್ಟೀಮರ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಬೆಂಕಿ ತಗುಲುತ್ತಿದ್ದಂತೆಯೇ ಒಳಗಿದ್ದ ಸಿಬ್ಬಂದಿಗಳು ತಕ್ಷಣ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ, ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.

ನಿಮಗೂ ಮೈಗ್ರೇನ್ ಬಿಟ್ಟು ಬಿಡದೇ ಕಾಡ್ತಿದ್ಯಾ!? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ!

0

ಮೈಗ್ರೇನ್ ಎಂದರೆ ಸಾಮಾನ್ಯ ತಲೆನೋವಿಗಿಂತ ಭಿನ್ನವಾದ, ಹೆಚ್ಚು ತೀವ್ರವಾದ ನರ ಸಂಬಂಧಿತ ಸಮಸ್ಯೆ.

ತಲೆಯ ಒಂದು ಭಾಗದಲ್ಲಿ ಸೂಜಿ ಚುಚ್ಚುವಂತೆ ನೋವು ಕಾಣಿಸಿಕೊಳ್ಳುವುದು ಇದರ ಪ್ರಮುಖ ಲಕ್ಷಣ. ಈ ನೋವು ಕೆಲವೊಮ್ಮೆ ಗಂಟೆಗಳವರೆಗೆ ಅಥವಾ ದಿನಗಳವರೆಗೆ ಮುಂದುವರಿಯಬಹುದು. ಜೊತೆಗೆ ವಾಂತಿ, ವಾಕರಿಕೆ, ಬೆಳಕು ಮತ್ತು ಶಬ್ದದ ಅತಿಸಂವೇದನೆ ಕಾಣಿಸಿಕೊಳ್ಳುತ್ತದೆ.

ಮೈಗ್ರೇನ್ ಏಕೆ ಉಂಟಾಗುತ್ತದೆ?

ತಜ್ಞರ ಪ್ರಕಾರ, ಮೆದುಳಿನಲ್ಲಿ ನಡೆಯುವ ರಾಸಾಯನಿಕ ಬದಲಾವಣೆಗಳು—ವಿಶೇಷವಾಗಿ ಸೆರೋಟೋನಿನ್ ಮಟ್ಟ ಕಡಿಮೆಯಾಗುವುದು—ನರ ವ್ಯವಸ್ಥೆಯನ್ನು ಹೆಚ್ಚು ಸಂವೇದನಾಶೀಲವಾಗಿಸುತ್ತದೆ. ಇದರ ಪರಿಣಾಮವಾಗಿ ತಲೆನೋವು ಉಂಟಾಗುತ್ತದೆ.

ಒತ್ತಡ, ನಿದ್ರೆಯ ಕೊರತೆ, ಹಾರ್ಮೋನಲ್ ಬದಲಾವಣೆಗಳು, ಹೆಚ್ಚು ಬೆಳಕು, ಜೋರಾದ ಶಬ್ದ ಮತ್ತು ಕೆಲವು ಆಹಾರ ಪದಾರ್ಥಗಳು (ಚಾಕೊಲೇಟ್, ಕ್ಯಾಫೀನ್) ಸಮಸ್ಯೆಯನ್ನು ಹೆಚ್ಚಿಸಬಹುದು.

ಈ ಅಭ್ಯಾಸಗಳು ನೋವನ್ನು ಹೆಚ್ಚಿಸಬಹುದು:

ನಿದ್ರೆಯ ಕೊರತೆ: ಸರಿಯಾಗಿ ನಿದ್ರೆ ಮಾಡದಿದ್ದರೆ ಮೆದುಳಿಗೆ ವಿಶ್ರಾಂತಿ ಸಿಗುವುದಿಲ್ಲ. ಪ್ರತಿದಿನ 7–8 ಗಂಟೆಗಳ ನಿದ್ರೆ ಅತ್ಯಗತ್ಯ.

ಜೋರಾದ ಶಬ್ದ ಮತ್ತು ತೀವ್ರ ಬೆಳಕು: ಇಂತಹ ಪರಿಸರದಲ್ಲಿ ಇರುವುದರಿಂದ ತಲೆನೋವು ಹೆಚ್ಚಾಗಬಹುದು. ಶಾಂತ ವಾತಾವರಣದಲ್ಲಿ ಸಮಯ ಕಳೆಯುವುದು ಉತ್ತಮ.

ಒತ್ತಡ: ಹೆಚ್ಚು ಮಾನಸಿಕ ಒತ್ತಡ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. ಯೋಗ, ಧ್ಯಾನ ಉಪಯುಕ್ತ.

ಅಸಮಯದ ಆಹಾರ ಪದ್ಧತಿ: ಹೊತ್ತಿಗೆ ಊಟ ಮಾಡದಿರುವುದು ಅಥವಾ ಹೆಚ್ಚು ಕ್ಯಾಫೀನ್ ಸೇವನೆ ನೋವನ್ನು ಹೆಚ್ಚಿಸಬಹುದು.

ಸರಿಯಾದ ಜೀವನಶೈಲಿ ಪಾಲಿಸಿಕೊಂಡರೆ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಕಾರವಾರ| ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಏಕಾಏಕಿ ಬೆಂಕಿ, ಅರಣ್ಯಕ್ಕೂ ವ್ಯಾಪಿಸಿದ ಜ್ವಾಲೆ!

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಾಬಾಗಿಲು ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಭಾರೀ ಅವಘಡ ಸಂಭವಿಸಿದೆ.

ಮಂಗಳೂರಿನಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಟ್ಯಾಂಕರ್‌ನಲ್ಲಿ ಪೆಟ್ರೋಲ್ ತುಂಬಿದ್ದರಿಂದ ಬೆಂಕಿ ಕಾಣಿಸಿಕೊಂಡ ತಕ್ಷಣವೇ ವಾಹನ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಕ್ಷಣಾರ್ಧದಲ್ಲೇ ಜ್ವಾಲೆಗಳು ಭಾರಿಯಾಗಿ ವ್ಯಾಪಿಸಿದ್ದು, ಪರಿಸ್ಥಿತಿ ಆತಂಕಕಾರಿ ರೂಪ ಪಡೆದಿದೆ.

ಇದೇ ವೇಳೆ ಬೆಂಕಿಯ ತೀವ್ರತೆ ರಸ್ತೆ ಪಕ್ಕದ ಅರಣ್ಯ ಪ್ರದೇಶಕ್ಕೂ ಹರಡಿದ್ದು, ಪರಿಸರ ಹಾನಿಯ ಭೀತಿ ಉಂಟಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.

ಘಟನೆಯಿಂದಾಗಿ ಕೆಲಕಾಲ ಸಂಚಾರಕ್ಕೂ ವ್ಯತ್ಯಯ ಉಂಟಾಗಿದ್ದು, ಹೆಚ್ಚಿನ ಅನಾಹುತ ತಪ್ಪಿಸಲು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

error: Content is protected !!