Home Blog Page 237

‘ಜನ ನಾಯಗನ್’ ಆಡಿಯೋ ಲಾಂಚ್ ಯೂಟ್ಯೂಬ್ ಅಲ್ಲ, ಒಟಿಟಿಯಲ್ಲಿ ಸ್ಟ್ರೀಮ್! ಎಲ್ಲಿ? ಯಾವಾಗ?

ತಮಿಳು ಚಿತ್ರರಂಗದ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ ಪ್ರಚಾರದ ಭಾಗವಾಗಿ ಆಯೋಜಿಸಲಾದ ಆಡಿಯೋ ಲಾಂಚ್ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ವಿದೇಶದಲ್ಲಿ ನಡೆದಿದೆ. ಮಲೇಷಿಯಾನಲ್ಲಿ ಬಲು ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ ಭಾರಿ ಅಭಿಮಾನಿ ಬೆಂಬಲ ದೊರೆತಿದೆ.

ಸಾಮಾನ್ಯವಾಗಿ ವಿಜಯ್ ತಮ್ಮ ಸಿನಿಮಾಗಳ ಆಡಿಯೋ ಲಾಂಚ್ ಕಾರ್ಯಕ್ರಮಗಳನ್ನು ಯೂಟ್ಯೂಬ್‌ನಲ್ಲಿ ಲೈವ್ ಮಾಡುವ ಅಥವಾ ಬಳಿಕ ಬಿಡುಗಡೆ ಮಾಡುವ ಪರಿಪಾಟಿ ಹೊಂದಿದ್ದಾರೆ. ಆದರೆ ಈ ಬಾರಿ ಚಿತ್ರತಂಡ ಸಂಪೂರ್ಣವಾಗಿ ವಿಭಿನ್ನ ನಿರ್ಧಾರ ಕೈಗೊಂಡಿದೆ. ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡದೇ, ಒಟಿಟಿಗೆ ಮಾರಾಟ ಮಾಡಲಾಗಿದೆ.

ನಿರ್ಮಾಣ ಸಂಸ್ಥೆ ಕೆವಿಎನ್, ಕಾರ್ಯಕ್ರಮದ ಡಿಜಿಟಲ್ ಹಕ್ಕುಗಳನ್ನು ಜೀ5 ಒಟಿಟಿಗೆ ಒಪ್ಪಿಸಿದ್ದು, ಜನವರಿ 4ರಂದು ಕಾರ್ಯಕ್ರಮ ಸ್ಟ್ರೀಮ್ ಆಗಲಿದೆ. ದೊಡ್ಡ ಮೊತ್ತಕ್ಕೆ ಈ ಡೀಲ್ ಆಗಿದೆ ಎನ್ನಲಾಗುತ್ತಿದ್ದು, ವಿಜಯ್ ಸಿನಿಮಾಗಳಲ್ಲಿ ಇದು ಹೊಸ ಪ್ರಯೋಗ ಎನ್ನಬಹುದು.

ಮಲೇಷಿಯಾನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿಜಯ್ ತಮ್ಮ ಅಭಿಮಾನಿಗಳ ಬಗ್ಗೆ ಭಾವುಕವಾಗಿ ಮಾತನಾಡಿದರು.
“ನಾನು ಮರಳಿನಲ್ಲಿ ಮನೆ ಕಟ್ಟಲು ಬಂದೆ. ಆದರೆ ಅಭಿಮಾನಿಗಳು ನನಗೆ ಕೋಟೆಯನ್ನೇ ಕಟ್ಟಿದ್ದಾರೆ. ಅವರಿಗಾಗಿ ನಾನು ಏನನ್ನೂ ಕೊಟ್ಟಿಲ್ಲ ಅನ್ನೋ ಬೇಸರ ಇದೆ. ಹಾಗಾಗಿ ಮುಂದಿನ ಮೂವತ್ತು ವರ್ಷ ನಾನು ನನ್ನ ಅಭಿಮಾನಿಗಳಿಗಾಗಿ ದುಡಿಯುತ್ತೇನೆ. ಅವರು ತಮ್ಮ ಎಲ್ಲವನ್ನೂ ನನಗೆ ಕೊಟ್ಟಿದ್ದಾರೆ, ಅದಕ್ಕಾಗಿ ನಾನು ಸಿನಿಮಾವನ್ನೇ ಬಿಟ್ಟುಕೊಟ್ಟಿದ್ದೇನೆ” ಎಂದು ವಿಜಯ್ ಹೇಳಿದ್ದಾರೆ.

ಇದೇ ವೇದಿಕೆಯಲ್ಲಿ ವಿಜಯ್ ಹಾಡು ಹಾಡಿ, ಡ್ಯಾನ್ಸ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು. ಕಾರ್ಯಕ್ರಮದ ಈ ಕ್ಷಣಗಳನ್ನು ಈಗ ಜೀ5 ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದಾಗಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ!

0

ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ಸೇವೆ ಸುಗಮವಾಗಿ ಮುಂದುವರಿಯುವ ಉದ್ದೇಶದಿಂದ, ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದೆ. 2026ರ ಜನವರಿ 1ರಿಂದ ಮುಂದಿನ ಆರು ತಿಂಗಳವರೆಗೆ ಮುಷ್ಕರ ನಡೆಸದಂತೆ ಸರ್ಕಾರ ಅಧಿಸೂಚನೆ ಜಾರಿ ಮಾಡಿದೆ.

2025ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಂಡಿದ್ದ ಹಿಂದಿನ ಅಧಿಸೂಚನೆಯ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ, ಇದೀಗ ಹೊಸ ಆದೇಶ ಜಾರಿಗೊಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಮುಷ್ಕರ ನಡೆಸುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿದರೆ ಎಸ್ಮಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಆದೇಶದ ಮಾಹಿತಿ ಸಾರಿಗೆ ಇಲಾಖೆಯ ಎಲ್ಲಾ ಘಟಕಗಳು ಮತ್ತು ನೌಕರರಿಗೆ ತಲುಪಿಸುವಂತೆ ಸರ್ಕಾರ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದೆ.

ಯುವತಿಗೆ ಇನ್​ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿ ಕಿರುಕುಳ: ಯುವಕನ ಕೊಲೆ

0

ಚಿಕ್ಕಮಗಳೂರು: ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ನಿರಂತರವಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಮಂಜುನಾಥ್ (21) ಎಂದು ಗುರುತಿಸಲಾಗಿದೆ.

ಮಂಜುನಾಥ್ ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿಯಾಗಿದ್ದು, ಅತ್ತಿಗನಾಳು ಗ್ರಾಮದ ಸಮೀಪ ಈ ಘಟನೆ ನಡೆದಿದೆ. ಪರಿಚಯವಿದ್ದ ಯುವತಿಗೆ ಮಂಜುನಾಥ್ ಪದೇಪದೇ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸುತ್ತಿದ್ದ ಎಂದು ತಿಳಿದುಬಂದಿದೆ. ಯುವತಿಗೆ ಈಗಾಗಲೇ ವೇಣು ಎಂಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿದ್ದು, ಈ ವಿಚಾರವನ್ನು ತಿಳಿಸಿ ಮೆಸೇಜ್ ಮಾಡಬೇಡಿ ಎಂದು ಹೇಳಿದ್ದರೂ ಮಂಜುನಾಥ್ ಮುಂದುವರಿಸಿದ್ದಾನೆ ಎನ್ನಲಾಗಿದೆ.

ಈ ವಿಷಯವನ್ನು ಯುವತಿ ತನ್ನ ನಿಶ್ಚಿತಾರ್ಥಗೊಂಡ ಯುವಕ ವೇಣುಗೆ ತಿಳಿಸಿದ್ದಾಳೆ. ಬಳಿಕ ಮಾತನಾಡಬೇಕೆಂದು ಮಂಜುನಾಥ್‌ನನ್ನು ಕರೆಸಿಕೊಂಡ ವೇಣು, ತನ್ನ ಸ್ನೇಹಿತರಾದ ಕಿರಣ್, ಅಪ್ಪು ಹಾಗೂ ಮಂಜು ಜೊತೆಗೂಡಿ ಜಗಳವಾಡಿದ್ದಾನೆ. ಗಲಾಟೆ ವೇಳೆ ಮಂಜುನಾಥ್‌ಗೆ ಚಾಕುವಿನಿಂದ ಇರಿದು ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಮಂಜುನಾಥ್‌ನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರಕರಣ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

LPG Price Hike: ವರ್ಷದ ಮೊದಲ ದಿನವೇ ಭಾರೀ ಏರಿಕೆ ಕಂಡ ಸಿಲಿಂಡರ್‌ ಬೆಲೆ!

0

ನವದೆಹಲಿ: 2026ರ ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರಗಳಲ್ಲಿ 111 ರೂ.ರಷ್ಟು ಏರಿಕೆ ನಡೆದಿದೆ. 19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೋಟೆಲ್ ಮತ್ತು ರೆಸ್ಟೋರೆಂಟ್ ವ್ಯಾಪಾರಿಗಳಿಗೆ ಪ್ರಭಾವ ಬೀರಲಿದೆ. ದೆಹಲಿಯಲ್ಲಿ 19 ಕೆ.ಜಿ ಸಿಲಿಂಡರ್ ಈಗ 1,691.50 ರೂ.ಕ್ಕೆ ಲಭ್ಯವಿದೆ, ಹಿಂದಿನ 1,580.50 ರೂ.ಗೆ ಹೋಲಿಸಿದರೆ 111 ರೂ.ರಷ್ಟು ಹೆಚ್ಚು.

ಪ್ರಮುಖ ನಗರಗಳಲ್ಲಿ ಹೊಸ 19 ಕೆ.ಜಿ ದರಗಳು:

  • ಮುಂಬೈ: 1,642.50 ರೂ. (ಹಿಂದೆ 1,531.50 ರೂ.)

  • ಕೋಲ್ಕತಾ: 1,795 ರೂ. (ಹಿಂದೆ 1,684 ರೂ.)

  • ಚೆನ್ನೈ: 1,849.50 ರೂ.

ನಗರಗಳಲ್ಲಿ ಗೃಹ ಬಳಕೆಯ 14.2 ಕೆ.ಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯಲ್ಲಿ ಗೃಹ ಬಳಕೆಯ ಪೈಪ್ಡ್ ನೈಸರ್ಗಿಕ ಅನಿಲ ದರವು 0.70 ರೂ. ಕಡಿಮೆಯಾಗಿದೆ.

ಈ ಹೊಸ ದರಗಳು ಆಹಾರ ಸೇವಾ ಉದ್ಯಮದ ವೆಚ್ಚವನ್ನು ಹೆಚ್ಚಿಸಬಹುದು, ಪರಿಣಾಮವಾಗಿ ಗ್ರಾಹಕರ ಮೇಲೆ ತಡೆಯದ ಪ್ರಭಾವ ಬೀರುವ ಸಾಧ್ಯತೆ ಇದೆ.

ಗುರುವಾರವೇ ಹೊಸ ವರ್ಷ: ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಭಕ್ತರ ಮಹಾಪೂರ

0

ರಾಯಚೂರು: ಹೊಸ ವರ್ಷದ ಮೊದಲ ದಿನವೇ ಗುರುವಾರ ಬಂದಿರುವ ಹಿನ್ನೆಲೆಯಲ್ಲಿ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರ ಮಹಾಪೂರವೇ ಹರಿದು ಬಂದಿದೆ.

ಗುರುರಾಘವೇಂದ್ರ ಸ್ವಾಮಿಗಳ ವಾರದ ದಿನವೇ ವರ್ಷದ ಆರಂಭವಾಗಿರುವುದರಿಂದ, ಪ್ರತಿವರ್ಷಕ್ಕಿಂತಲೂ ಎರಡುಪಟ್ಟು ಹೆಚ್ಚು ಭಕ್ತರು ರಾಯರ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದಲೇ ವೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಠದ ಎಲ್ಲಾ ಪ್ರವೇಶ ದ್ವಾರಗಳನ್ನು ತೆರೆಯಲಾಗಿದೆ.

ಲಕ್ಷಾಂತರ ಭಕ್ತರು ಹೊಸ ವರ್ಷದಲ್ಲಿ ಸುಖ, ಶಾಂತಿ, ಸಮೃದ್ಧಿ ದೊರಕಲಿ ಎಂಬ ನಂಬಿಕೆಯಲ್ಲಿ ರಾಯರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ದೇಶ-ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿರುವುದರಿಂದ ಮಂತ್ರಾಲಯ ತುಂಬಿ ತುಳುಕುತ್ತಿದೆ.

ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ಮಠದ ವಸತಿ ಕೊಠಡಿ ಹಾಗೂ ಪ್ರಸಾದ ವ್ಯವಸ್ಥೆಯಲ್ಲಿ ಅಸ್ತವ್ಯಸ್ತತೆ ಕಂಡುಬಂದಿದೆ. ರಾಯರ ಅನುಗ್ರಹದಿಂದ ಇಡೀ ವರ್ಷ ಒಳಿತಾಗುತ್ತದೆ ಎಂಬ ಭಕ್ತರ ನಂಬಿಕೆಯೇ ಈ ಅಪಾರ ಜನಸಾಗರಕ್ಕೆ ಕಾರಣವಾಗಿದೆ.

ಹೊಸ ವರ್ಷಕ್ಕೆ ಸನ್ನಿ ಲಿಯೋನಿ ಲೈವ್‌ ಶೋ ವಿವಾದ: ಕೊನೆಗೂ ರದ್ದಾದ ಕಾರ್ಯಕ್ರಮ

ಹೊಸ ವರ್ಷಾಚರಣೆಗೆಂದು ಆಯೋಜಿಸಲಾಗಿದ್ದ ನಟಿ ಸನ್ನಿ ಲಿಯೋನಿ ಅವರ ಲೈವ್ ಶೋ ಇದೀಗ ವಿವಾದದ ಕಾರಣಕ್ಕೆ ರದ್ದಾಗಿದೆ. ನೀಲಿ ಚಿತ್ರರಂಗದಿಂದ ಹೊರಬಂದಿದ್ದರೂ, ಸನ್ನಿ ಲಿಯೋನಿ ಇನ್ನೂ ಸಹ ತಮ್ಮ ಹಳೆಯ ಇಮೇಜ್‌ನಿಂದಾಗಿ ಟೀಕೆ ಮತ್ತು ವಿರೋಧಗಳನ್ನು ಎದುರಿಸುತ್ತಿದ್ದಾರೆ.

ಮಥುರಾದ ಖಾಸಗಿ ಐಷಾರಾಮಿ ಹೋಟೆಲ್‌ನಲ್ಲಿ ಡಿಜಿ ಪಾರ್ಟಿಯೊಂದಿಗೆ ಹೊಸ ವರ್ಷಾಚರಣೆ ಆಯೋಜಿಸಲಾಗಿದ್ದು, ಸನ್ನಿ ಲಿಯೋನಿ ವಿಶೇಷ ಅತಿಥಿಯಾಗಿ ಭಾಗವಹಿಸಬೇಕಿತ್ತು. ಜೊತೆಗೆ ಗ್ಲಾಮರಸ್ ನೃತ್ಯ ಪ್ರದರ್ಶನವೂ ನಡೆಯಬೇಕಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಹೋಟೆಲ್ ಆಡಳಿತವು ಪೊಲೀಸರ ಹಾಗೂ ಸ್ಥಳೀಯ ಆಡಳಿತದ ಅನುಮತಿಯನ್ನು ಪಡೆದುಕೊಂಡಿತ್ತು.

ಆದರೆ ಸನ್ನಿ ಲಿಯೋನಿ ಆಗಮಿಸುವ ಸುದ್ದಿ ಹೊರಬಂದ ಬೆನ್ನಲ್ಲೇ ಸಂಪ್ರದಾಯವಾದಿ ಮತ್ತು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. ಕೃಷ್ಣನ ಜನ್ಮಭೂಮಿ ಮಥುರಾದಲ್ಲಿ ಇಂತಹ ಕಾರ್ಯಕ್ರಮ ಸರಿಯಲ್ಲ ಎಂದು ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುವ ಹಾಗೂ ಹೋಟೆಲ್‌ಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ನೀಡಿದವು.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಹೋಟೆಲ್ ಆಡಳಿತವು ಕಾರ್ಯಕ್ರಮವನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿತು.
“ಕಾರ್ಯಕ್ರಮವನ್ನು ಕಾನೂನುಬದ್ಧವಾಗಿ ನಡೆಸಲು ಎಲ್ಲಾ ಅನುಮತಿಗಳನ್ನು ಪಡೆದಿದ್ದರೂ, ಸಾಮಾಜಿಕ ಹಾಗೂ ಧಾರ್ಮಿಕ ಭಾವನೆಗಳನ್ನು ಗೌರವಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಹೋಟೆಲ್ ಆಡಳಿತ ತಿಳಿಸಿದೆ.

ಸನ್ನಿ ಲಿಯೋನಿ, ನೀಲಿ ಚಿತ್ರರಂಗಕ್ಕೆ ವಿದಾಯ ಹೇಳಿದ ಬಳಿಕವೂ ಗ್ಲಾಮರ್ ಕ್ವೀನ್, ಪಾರ್ಟಿ ಗರ್ಲ್ ಎಂಬ ಇಮೇಜ್‌ನಿಂದಾಗಿ ಇಂತಹ ಕಾರ್ಯಕ್ರಮಗಳಿಗೆ ಆಹ್ವಾನ ಪಡೆಯುತ್ತಲೇ ಇದ್ದಾರೆ. ಆದರೆ ಇದೇ ಕಾರಣಕ್ಕೆ ಹಲವಾರು ಬಾರಿ ಅವರ ಕಾರ್ಯಕ್ರಮಗಳು ವಿರೋಧ, ಪ್ರತಿಭಟನೆ ಹಾಗೂ ಒತ್ತಡದಿಂದ ರದ್ದಾಗುತ್ತಿರುವುದು ಇದು ಮೊದಲಲ್ಲ.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 23 IPS ಅಧಿಕಾರಿಗಳಿಗೆ ಡಿಐಜಿಪಿ ಬಡ್ತಿ, 20 ಮಂದಿಗೆ ವರ್ಗಾವಣೆ

0

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರ ಮೇಜರ್ ಸರ್ಜರಿ ನಡೆಸಿದೆ. 23 ಮಂದಿ ಐಪಿಎಸ್ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದ್ದು, 20 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಡಿಐಜಿಪಿಯಾಗಿ ಬಡ್ತಿ ಪಡೆದ ಅಧಿಕಾರಿಗಳು:

ಭೀಮಾಶಂಕರ್ ಗುಳೇದ್ (ಸಿಐಡಿ – ಆರ್ಥಿಕ ಅಪರಾಧ), ಇಲಕ್ಕಿಯ ಕರುಣಾಕರನ್ (ವೈರ್‌ಲೆಸ್), ವೇದಮೂರ್ತಿ (ರಾಜ್ಯ ಗುಪ್ತಚರ), ಕೆ.ಎಂ. ಶಾಂತರಾಜು (ಐಎಸ್‌ಡಿ), ಹನುಮಂತರಾಯ (ಎಸ್‌ಎಚ್‌ಆರ್‌ಸಿ), ಡಿ. ದೇವರಾಜು (ಪೊಲೀಸ್ ತರಬೇತಿ), ಡಾ. ಸಿರಿ ಗೌರಿ (ಕರ್ನಾಟಕ ಲೋಕಾಯುಕ್ತ), ಡಾ. ಕೆ. ಧರಣಿದೇವಿ (ಗುಪ್ತಚರ), ಎಸ್. ಸವಿತಾ (ಗೃಹರಕ್ಷಕ ದಳ), ಸಿ.ಕೆ. ಬಾಬಾ (ಕೆಎಸ್‌ಆರ್‌ಪಿ), ಅಬ್ದುಲ್ ಅಹದ್ (ನಿರ್ದೇಶಕರು, ಬಿಎಂಟಿಸಿ),

ಎಸ್. ಗಿರೀಶ್ (ಎಎನ್‌ಟಿಎಫ್), ಎಂ. ಪುಟ್ಟಮಾದಯ್ಯ (ಪ್ರಾಂಶುಪಾಲ, ಪಿಟಿಸಿ ಕಲಬುರಗಿ), ಟಿ. ಶ್ರೀಧರ್ (ಪೊಲೀಸ್ ಮುಖ್ಯ ಕಚೇರಿ), ಎ.ಎನ್. ಪ್ರಕಾಶ್ ಗೌಡ (ಎಸ್‌ಎಎಫ್), ಜಿನೇಂದ್ರ ಖನಗಾವಿ (ಕಾರಾಗೃಹ), ಜೆ.ಕೆ. ರಶ್ಮಿ (ರೈಲ್ವೆ), ಟಿ.ಪಿ. ಶಿವಕುಮಾರ್ (ಎಸ್‌ಸಿಆರ್‌ಬಿ), ವಿಷ್ಣುವರ್ಧನ್ (ನಿರ್ದೇಶಕ, ಕೆಪಿಎ), ಡಾ. ಸಂಜೀವ್ ಎಂ. ಪಾಟೀಲ್ (ಡಿಐಜಿಪಿ – ಜನರಲ್ ಅಪ್‌ಗ್ರೇಡ್), ಕೆ. ಪರಶುರಾಮ (ಸಿಟಿಆರ್‌ಎಸ್), ಹೆಚ್.ಡಿ. ಆನಂದ್ ಕುಮಾರ್ (ಸೈಬರ್ ಕಮಾಂಡ್), ಕಲಾ ಕೃಷ್ಣಸ್ವಾಮಿ (ಅಪರಾಧ – ಅಪ್‌ಗ್ರೇಡ್).

ಐಜಿಪಿಯಾಗಿ ಬಡ್ತಿ:

ಡಾ. ಎಂ.ಬಿ. ಬೋರಲಿಂಗಯ್ಯ (ದಕ್ಷಿಣ ವಲಯ), ಅಜಯ್ ಹಿಲೋರಿ (ಹೆಚ್ಚುವರಿ ಪೊಲೀಸ್ ಆಯುಕ್ತ – ಅಪರಾಧ ವಿಭಾಗ, ಬೆಂಗಳೂರು) ತಮ್ಮ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ.

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು:

ಚಂದ್ರಕಾಂತ್ ಎಂ.ವಿ (ಬೆಂಗಳೂರು ಗ್ರಾಮಾಂತರ), ಸೈದುಲು ಅಡಾವತ್ (ವೈಟ್‌ಫೀಲ್ಡ್ ಡಿಸಿಪಿ), ಯತೀಶ್ ಎನ್ (ಪಶ್ಚಿಮ ವಿಭಾಗ ಡಿಸಿಪಿ), ಕೆ. ರಾಮರಾಜನ್ (ಬೆಳಗಾವಿ), ಬಿ. ನಿಖಿಲ್ (ಶಿವಮೊಗ್ಗ), ಅರುಣಾಂಗ್ಶು ಗಿರಿ (ರಾಯಚೂರು), ಶುಭನ್ವಿತಾ (ಹಾಸನ), ಮಿಥುನ್ ಕುಮಾರ್ (ಈಶಾನ್ಯ ವಿಭಾಗ ಡಿಸಿಪಿ), ವಿಕ್ರಮ್ ಆಮ್ಟೆ (ಪೂರ್ವ ವಿಭಾಗ ಡಿಸಿಪಿ), ಜಿತೇಂದ್ರ ಕುಮಾರ್ ದಯಾಮ್ (ಚಿಕ್ಕಮಗಳೂರು), ಕನ್ನಿಕಾ ಸುಕ್ರಿವಾಲ್ (ಕೋಲಾರ),

ಬಿಂದು ಮಣಿ (ಕೊಡಗು), ಮೊಹಮ್ಮದ್ ಸುಜೀತಾ ಎಂ.ಎಸ್ (ಆಗ್ನೇಯ ವಿಭಾಗ ಡಿಸಿಪಿ), ಶೋಭಾರಾಣಿ (ಮಂಡ್ಯ), ಸಾರಾ ಫಾತಿಮಾ (ರೈಲ್ವೆ), ಮುತ್ತುರಾಜು ಎಂ (ಚಾಮರಾಜನಗರ), ಡಾ. ಕವಿತಾ ಬಿ.ಟಿ (ಸಿಐಡಿ), ಸಜೀತ್ (ಸಿಐಡಿ), ಪವನ್ ನೆಜ್ಜೂರ್ (ಬಳ್ಳಾರಿ). ಮೈಸೂರು ಎಸ್‌ಪಿ ಆಗಿ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.

“ನನಗೆ ಪ್ರೀತಿ ಸಿಗುತ್ತಿಲ್ಲ”: ಡೆತ್ ನೋಟ್ ಬರೆದು ಬಾಲಕಿ ಆತ್ಮಹತ್ಯೆ!

0

ಬೆಂಗಳೂರು: ತಂದೆತಾಯಿ ದೂರವಾದ ಬಳಿಕ ತಾನು ಒಂಟಿಯಾಗಿದ್ದೇನೆ ಎಂಬ ನೋವಿನಿಂದ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಲೇಖನಾ (17) ಎಂದು ಗುರುತಿಸಲಾಗಿದೆ. 10ನೇ ತರಗತಿಯಲ್ಲಿ ಅನುತ್ತೀರ್ಣಳಾಗಿದ್ದ ಲೇಖನಾ ಮನೆಯಲ್ಲೇ ಇದ್ದಳು. ಕೌಟುಂಬಿಕ ಕಲಹದಿಂದ ಇತ್ತೀಚೆಗೆ ತಂದೆತಾಯಿ ಬೇರೆಯಾಗಿದ್ದು, ತಂದೆ ಬೇರೆಡೆ ವಾಸವಾಗಿದ್ದರೆ, ಲೇಖನಾ ತಾಯಿ ಜೊತೆಗೆ ವಾಸವಾಗಿದ್ದಳು.

ನನಗೆ ತಂದೆತಾಯಿ ಪ್ರೀತಿ ಸಿಗುತ್ತಿಲ್ಲ. ನಾನು ಒಂಟಿಯಾಗಿದ್ದೇನೆ. ನನ್ನ ಸಾವಿಗೆ ನಾನೇ ಕಾರಣಎಂದು ಡೆತ್ ನೋಟ್ ಬರೆದಿರುವ ಲೇಖನಾ, ಬುಧವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಘಟನೆ ಸಂಬಂಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಫೆಬ್ರವರಿ 1 ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಮೇಲೆ ಶೇ.40 ರಷ್ಟು GST!

0

ನವದೆಹಲಿ: ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಈ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಿರಲಿದ್ದು, ಪ್ರಸ್ತುತ ಈ ಪಾಪ ಸರಕುಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್‌ಟಿ ಪರಿಹಾರ ಸೆಸ್‌ಗೆ ಬದಲಿಯಾಗಲಿವೆ.

ಫೆಬ್ರವರಿ 1ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಸಮಾನ ಉತ್ಪನ್ನಗಳಿಗೆ ಶೇ.40ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ ಬೀಡಿಗಳ ಮೇಲೆ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗಲಿದೆ ಎಂದು ಸರ್ಕಾರಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದರೊಂದಿಗೆ, ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗಲಿದ್ದು, ತಂಬಾಕು ಹಾಗೂ ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಜಾರಿಯಾಗಲಿದೆ.

ಹಣಕಾಸು ಸಚಿವಾಲಯವು ಚೂಯಿಂಗ್ ತಂಬಾಕು, ಜರ್ದಾ, ಪರಿಮಳಯುಕ್ತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳು (ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ) ನಿಯಮಗಳು–2026 ಅನ್ನು ಕೂಡ ಅಧಿಸೂಚನೆಯ ಮೂಲಕ ಪ್ರಕಟಿಸಿದೆ.

ಡಿಸೆಂಬರ್‌ನಲ್ಲಿ ಸಂಸತ್ತು ಪಾನ್ ಮಸಾಲಾ ತಯಾರಿಕೆ ಹಾಗೂ ತಂಬಾಕಿನ ಮೇಲಿನ ಅಬಕಾರಿ ಸುಂಕಕ್ಕೆ ಸಂಬಂಧಿಸಿದಂತೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಅಂಗೀಕರಿಸಿತ್ತು. ಈ ಸುಂಕಗಳ ಅನುಷ್ಠಾನ ದಿನಾಂಕವಾಗಿ ಫೆಬ್ರವರಿ 1ನ್ನು ಸರ್ಕಾರ ಪ್ರಕಟಿಸಿದ್ದು, ಪ್ರಸ್ತುತ ಜಾರಿಯಲ್ಲಿರುವ ಜಿಎಸ್‌ಟಿ ಪರಿಹಾರ ಸೆಸ್ ಫೆಬ್ರವರಿ 1ರಿಂದ ಅಸ್ತಿತ್ವದಲ್ಲಿರುವುದಿಲ್ಲ.

ಹೊಸ ವರ್ಷದ ಮೊದಲ ದಿನವೇ ವಾತಾವರಣದಲ್ಲಿ ಬದಲಾವಣೆ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ

0

ಬೆಂಗಳೂರು: ಹೊಸ ವರ್ಷದ ಆರಂಭದೊಂದಿಗೆ ರಾಜ್ಯದ ವಾತಾವರಣದಲ್ಲೂ ಬದಲಾವಣೆಗಳು ಕಂಡುಬಂದಿವೆ. ಜನವರಿ 1ರಂದು ರಾಜ್ಯದ ಕೆಲವು ಭಾಗಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಕಂಡುಬಂದಿದೆ. ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಕನಿಷ್ಠ ತಾಪಮಾನ 13°C ರಿಂದ 19°C ನಡುವಿದ್ದು, ಗರಿಷ್ಠ ತಾಪಮಾನ 27°C–28°C ಇರಲಿದೆ.

ಬೀದರ್, ವಿಜಯಪುರ, ಕಲಬುರಗಿ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೀತ ಅಲೆ ಪರಿಸ್ಥಿತಿ ಮುಂದುವರಿದಿದ್ದು, ಹವಾಮಾನ ಇಲಾಖೆ ಈಗಾಗಲೇ ಅಲರ್ಟ್ ನೀಡಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಗಮನಾರ್ಹವಾಗಿ ಕುಸಿತಗೊಂಡಿದ್ದು, ಬೀದರ್‌ನಲ್ಲಿ 6.4°C, ವಿಜಯಪುರದಲ್ಲಿ 9.9°C ಹಾಗೂ ಬೆಳಗಾವಿಯಲ್ಲಿ 8.7°C ದಾಖಲಾಗಿದೆ.

ಕರಾವಳಿ ಕರ್ನಾಟಕದಲ್ಲಿ ಬೆಚ್ಚಗಿನ ಮತ್ತು ಆರ್ದ್ರ ವಾತಾವರಣವಿದ್ದು, ಕನಿಷ್ಠ ತಾಪಮಾನ 19°C–20°C ಇರಲಿದೆ. ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಬೆಳಿಗ್ಗೆ ತಂಪಾದ ವಾತಾವರಣ ಕಂಡುಬರಲಿದೆ. ಮಂಗಳೂರು ಭಾಗದಲ್ಲಿ ಗರಿಷ್ಠ ತಾಪಮಾನ 28°C–30°C ಮತ್ತು ಕನಿಷ್ಠ ತಾಪಮಾನ 20°C–21°C ಇರಲಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಭಾಗಶಃ ಮೋಡ ಕವಿದ ಒಣ ಹವಾಮಾನ ಮುಂದುವರಿಯಲಿದ್ದು, ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

error: Content is protected !!