Home Blog Page 238

ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಮಹಿಳೆಯರ ದುರ್ಮರಣ! 

0

ರಾಯಚೂರು: ಕೈಕಾಲು ತೊಳೆದುಕೊಳ್ಳಲು ಹೋಗಿ ಕಾಲುವೆಯಲ್ಲಿ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆ ಹೊಸೂರು ಬಳಿ ನಡೆದಿದೆ.

ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಈರಮ್ಮ (35) ಹಾಗೂ ದೇವಮ್ಮ (30) ಮೃತರು. ನಾರಾಯಣಪುರ ಬಲದಂಡೆ ಕಾಲುವೆ ಬಳಿ ಕೈಕಾಲು ತೊಳೆದುಕೊಳ್ಳುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ.

ಗದ್ದೆಯಲ್ಲಿ ಭತ್ತ ನಾಟಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೂಲಿ ಕೆಲಸ ಮುಗಿಸಿ ಕೈಕಾಲು ತೊಳೆದುಕೊಂಡು ಮನೆಗೆ ತೆರಳಲು ಕಾಲುವೆ ಬಳಿ ಬಂದಿದ್ದರು ಎನ್ನಲಾಗಿದೆ.

ಸುದ್ದಿ ತಿಳಿದ ತಕ್ಷಣ ಲಿಂಗಸುಗೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಮಹಿಳೆಯರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಇಬ್ಬರ ಶವಗಳನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಒಂದು ಕಪ್ ಕಾಫಿ ಮಕ್ಕಳಲ್ಲಿ ಏನೆಲ್ಲಾ ಬದಲಾವಣೆ ಮಾಡುತ್ತೆ ನೋಡಿ!

0

ಬೆಳಿಗ್ಗೆ ಎದ್ದ ಕೂಡಲೇ ಅಥವಾ ಸಂಜೆ ಸಮಯದಲ್ಲಿ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಹಲವರಲ್ಲಿ ಸಾಮಾನ್ಯವಾಗಿದೆ. ಆರೋಗ್ಯಕ್ಕೆ ಹಿತಕರವಲ್ಲ ಎಂಬುದು ತಿಳಿದಿದ್ದರೂ ಈ ಅಭ್ಯಾಸವನ್ನು ಬಿಡುವುದು ಕಷ್ಟ. ಕೆಲ ಮನೆಗಳಲ್ಲಿ ದೊಡ್ಡವರಷ್ಟೇ ಅಲ್ಲ, ಮಕ್ಕಳಿಗೂ ಚಹಾ ಅಥವಾ ಕಾಫಿ ನೀಡಲಾಗುತ್ತಿದೆ. ಆದರೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ಗಂಭೀರ ಅಪಾಯಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವಿಶೇಷವಾಗಿ ಕಾಫಿಯಲ್ಲಿ ಇರುವ ಕೆಫೀನ್ ಮಕ್ಕಳ ದೇಹ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಒಂದು ಕಪ್ ಕಾಫಿಯೇ ಮಕ್ಕಳಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಕಬ್ಬಿಣದ ಕೊರತೆ ಸಮಸ್ಯೆ

ಬೆಳವಣಿಗೆಯ ಹಂತದಲ್ಲಿರುವ ಮಕ್ಕಳಿಗೆ ಕಬ್ಬಿಣ ಸಮೃದ್ಧ ಆಹಾರ ಅತ್ಯಗತ್ಯ. ಆದರೆ ಚಹಾ–ಕಾಫಿಯಲ್ಲಿ ಇರುವ ಕೆಲವು ರಾಸಾಯನಿಕ ಅಂಶಗಳು ಆಹಾರದಲ್ಲಿನ ಕಬ್ಬಿಣವನ್ನು ದೇಹ ಹೀರಿಕೊಳ್ಳುವುದನ್ನು ತಡೆಯುತ್ತವೆ. ಇದರಿಂದ ಮಕ್ಕಳು ತೆಳ್ಳಗಾಗುವುದು, ರಕ್ತಹೀನತೆ (ಅನೀಮಿಯಾ) ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಮೆದುಳಿನ ಮೇಲೆ ಕೆಫೀನ್ ಪರಿಣಾಮ

ವಯಸ್ಕರಲ್ಲಿ ನಿದ್ರೆ ತಡೆಯಲು ಬಳಸುವ ಕೆಫೀನ್ ಮಕ್ಕಳಲ್ಲಿ ನರಮಂಡಲವನ್ನು ಅತಿಯಾಗಿ ಪ್ರಚೋದಿಸುತ್ತದೆ. ಇದರಿಂದ ಆತಂಕ, ಚಂಚಲತೆ, ಕೋಪ, ಗಮನ ಕೇಂದ್ರೀಕರಣದ ಕೊರತೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ನಿದ್ರೆಯ ಮೇಲೂ ಕೆಫೀನ್ ಕೆಟ್ಟ ಪರಿಣಾಮ ಬೀರುತ್ತದೆ.

ಹಸಿವು ಕಡಿಮೆಯಾಗುವ ಅಪಾಯ

ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದರಿಂದ ಮಕ್ಕಳ ಹಸಿವು ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ದುಷ್ಪರಿಣಾಮ ಬೀರಿಸಿ ಎದೆಯುರಿ, ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆಗಳಿಗೆ ಕಾರಣವಾಗಬಹುದು. ಹಸಿವು ಇಲ್ಲದಿದ್ದರೆ ಆಹಾರ ಸೇವನೆ ಕಡಿಮೆಯಾಗುತ್ತಿದ್ದು, ಇದು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಸಕ್ಕರೆ ಹೆಚ್ಚಿದ ಅಪಾಯ

ಮಕ್ಕಳು ಇಷ್ಟಪಟ್ಟು ಕುಡಿಯುವ ಚಹಾ–ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಇದು ಹಲ್ಲು ಹುಳುಕು, ಬೊಜ್ಜು ಮತ್ತು ಹೈಪರ್ ಆಕ್ಟಿವಿಟಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ.

ಹತ್ತು ವರ್ಷದೊಳಗಿನ ಮಕ್ಕಳಿಗೆ ಚಹಾ ಅಥವಾ ಕಾಫಿ ನೀಡುವ ಬದಲು ಹಾಲು, ಗಂಜಿ ಅಥವಾ ಹಣ್ಣಿನ ರಸ ನೀಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಪೋಷಕರು ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ.

ಸಂಸ್ಥೆಗಳ ಭವಿಷ್ಯ ಆಡಳಿತ ಮಂಡಳಿಯ ಮೇಲಿದೆ: ಹೆಚ್. ಮಂಜಪ್ಪ

0

ವಿಜಯಸಾಕ್ಷಿ ಸುದ್ದಿ, ಗದ: ಗಸಹಕಾರ ಸಂಘ-ಸಂಸ್ಥೆಗಳ ಭವಿಷ್ಯ ಆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಅಧಿಕಾರ ವರ್ಗದ ಮೇಲೆ ನಿಂತಿರುತ್ತದೆ. ಸಹಕಾರ ಸಂಸ್ಥೆಗಳ ವ್ಯವಸ್ಥೆಯಲ್ಲಿ ಆಡಳಿತ ಮಂಡಳಿ ಸಂಘದ ಭವಿಷ್ಯವನ್ನು ರೂಪಿಸುವಲ್ಲಿ ವಾಸ್ತವಿಕವಾಗಿ ತೀರ್ಮಾನಗಳನ್ನು ತೆಗೆದುಕೊಂಡರೆ, ಅದನ್ನು ಸಾಧಿಸುವ ಜವಾಬ್ದಾರಿ ಸಂಘದ ಅಧಿಕಾರಿ-ಸಿಬ್ಬಂದಿಯ ಹೊಣೆಯಾಗಿರುತ್ತದೆ. ಸಹಕಾರ ಸಂಘಗಳು ಆಡಳಿತ ಸಂಘದ ವ್ಯವಹಾರದ ಗುರಿಯನ್ನು ಗುರುತಿಸಿ ಲಾಭ-ನಷ್ಟಗಳಿಗೆ ಅನುಗುಣವಾಗಿ ಸಂಘದ ಯಶಸ್ಸನ್ನು ಖಾತರಿಪಡಿಸುವ ರೀತಿಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಹೆಚ್. ಮಂಜಪ್ಪ ಹೇಳಿದರು.

ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಸಿ.ಸಿ ಬ್ಯಾಂಕ್ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಹಾಗೂ ನರಗುಂದ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆ.ಸಿ.ಸಿ. ಬ್ಯಾಂಕ್ ನಿರೀಕ್ಷಕರಾದ ಸುನೀಲಕುಮಾರ ಚಳಗೇರಿ ಮಾತನಾಡಿ, ಪ್ಯಾಕ್ಸ್ಗಳಲ್ಲಿ 2022ರಲ್ಲಿ ಜೂನ್ ಮಾಹೆಯಲ್ಲಿ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯು ನ್ಯಾಷನಲ್ ಲೆವೆಲ್ ಪಿಎಸಿಎಸ್ ಸಾಫ್ಟ್‌ವೇರ್ ಜಾರಿಗೆ ತರುವ ಹೊಣೆಯನ್ನು ನಬಾರ್ಡ್ ಸಂಸ್ಥೆ ವಹಿಸಿಕೊಂಡಿದೆ. ಇದಕ್ಕೆ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರದ ಸಹಕಾರ ಇಲಾಖೆ ನೀಡುತ್ತದೆ. ಸಂಘದಿಂದ ಸಾಲಗಳ ಗುಣಮಟ್ಟವನ್ನು ಪರಿಶೀಲಿಸುವುದು, ಅದರಲ್ಲಿ ಕೃಷಿಗೆ ಅಲ್ಪಾವಧಿ ಬೆಳೆಸಾಲ, ಪಶುಸಂಗೋಪನೆ ಸಾಲ ಮತ್ತು ಕೃಷಿ ಮಧ್ಯಮಾವಧಿ ಸಾಲ ಈ ಎಲ್ಲ ಅಂಶಗಳನ್ನು ಉತ್ತಮವಾಗಿ ನಿರ್ವಹಿಸುವುದರಿಂದ ಸಂಘದ ಮೇಲೆ ಹೆಚ್ಚು ವಿಶ್ವಾಸ ಮೂಡುತ್ತದೆ ಎಂದರು.

ತರಬೇತಿ ಕಾರ್ಯಾಗಾರದಲ್ಲಿ ವ್ಹಿ.ಜಿ. ಕುಲಕರ್ಣಿ, ಅರವಿಂದ ಎನ್. ನಾಗಜ್ಜನವರ, ಪ್ರಶಾಂತ ಮುಧೋಳ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಪ್ರಕಾಶ ನವಲಗುಂದ, ಎಸ್.ಎಂ. ಚಿಕ್ಕಮಠ, ಸುರೇಶಕುಮಾರ ಎಸ್., ಎಚ್.ಎಂ. ಮಳ್ಳಣ್ಣವರ ಉಪಸ್ಥಿತರಿದ್ದರು.

ಲಕ್ಕುಂಡಿ ನಂ.1 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಶರಣಪ್ಪ ಗರ್ಜಪ್ಪನವರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿದರು. ಯೂನಿಯನ್‌ನ ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ. ಯಲಿಗಾರ ನಿರೂಪಿಸಿದರು. ಪ್ರಭಾರ ವ್ಯವಸ್ಥಾಪಕ ಆರ್.ಎಸ್. ಕಲ್ಲನಗೌಡರ ವಂದಿಸಿದರು.

ಗದಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವಾಯ್.ಎಫ್. ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದಲ್ಲಿ ಸಹಕಾರ ಸಚಿವಾಲಯ ಆರಂಭಗೊಂಡ ಮೇಲೆ ಭಾರತದ ಸಹಕಾರ ಚಳುವಳಿಯ ಸಬಲೀಕರಣಕ್ಕೆ ವಿಶೇಷ ಪ್ರಯತ್ನಗಳು ನಡೆಯುತ್ತಿವೆ. ಭಾರತದ ಅರ್ಥ ವ್ಯವಸ್ಥೆಯ ಪ್ರೇರಣೆಯಾಗಿರುವ ಸಹಕಾರಿ ವ್ಯವಸ್ಥೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಬಡವರ ಹಸಿವು ನೀಗಿಸುವ ಪ್ರಯತ್ನ ಮಾಡಿ: ಅಶೋಕ ಮಂದಾಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸೆಪ್ಟೆಂಬರ್ 2025ರ ಮಾಹೆಯವರೆಗೆ ತಲಾ 2 ಸಾವಿರ ರೂ.ಗಳಂತೆ ಗದಗ ತಾಲೂಕಿನ 79125 ಫಲಾನುಭವಿಗಳಿಗೆ 15.82 ಕೋಟಿ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು ಗದಗ ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಸಭೆಯ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.

ಗದಗ ಜಿಲ್ಲಾ ಪಂಚಾಯಿತಿ ವಿ.ಸಿ ಹಾಲ್‌ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು, ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ನಿಗದಿತ ಸಮಯದಲ್ಲೇ ದೊರಕುವಂತಾಗಬೇಕು. ಪಂಚ ಗ್ಯಾರಂಟಿ ಯೋಜನೆಗಳ ಗುರಿ ಸಾಧನೆ ಶೇ. 100ರಷ್ಟಾಗಲು ಸಂಬಂಧಿತ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.

ಗದಗ ಮತಕ್ಷೇತ್ರದಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರ ಪಟ್ಟಿಯನ್ನು ಗ್ಯಾರಂಟಿ ಸಮಿತಿಗೆ ಸಲ್ಲಿಸಬೇಕು. ಯಾವುದೇ ಅಮಿಷಕ್ಕೊಳಗಾಗದೇ ಬಡಜನರಿಗೆ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆ ಸೌಲಭ್ಯವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಗದಗ ಮತಕ್ಷೇತ್ರದಲ್ಲಿನ ಬಸ್ ನಿಲ್ದಾಣಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ, ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲು ಶ್ರಮಿಸಬೇಕು ಎಂದು ಸೂಚನೆ ನೀಡಿದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಎಮ್.ಎಸ್. ರಮೇಶ ಮಾತನಾಡಿ, ನವೆಂಬರ್-2025ರ ಮಾಹೆಯಲ್ಲಿ ಗದಗ ಶಹರದಲ್ಲಿ ರಾಜ್ಯ ಸರ್ಕಾರ ಅನ್ನಭಾಗ್ಯ ಅಕ್ಕಿ ಹಂಚಿಕೆಯಡಿ ಒಟ್ಟು 31759 ಕಾರ್ಡ್‌ದಾರರಿಗೆ 5201.65 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ. ಎನ್‌ಎಫ್‌ಎಸ್‌ಎ ಅಕ್ಕಿ ಹಂಚಿಕೆಯಡಿ (ಕೇಂದ್ರ ಸರ್ಕಾರ) 31759 ಕಾರ್ಡ್‌ದಾರರಿಗೆ 5466.35 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ ಎಂದು ಸಭೆಗೆ ವಿವರಿಸಿದರು.

ಗೃಹಜ್ಯೋತಿ ಯೋಜನೆಯಡಿ 30-11-2025ರವರೆಗೆ ಗದಗ ಶಹರ ವಿಭಾಗದಲ್ಲಿ 48708 ಸ್ಥಾವರಗಳು ಅರ್ಹವಾಗಿದ್ದು, 48481 ಸ್ಥಾವರಗಳ ನೋಂದಣಿಯಾಗಿವೆ. ಶೇ. 99.53ರಷ್ಟು ಸಾಧನೆಯಾಗಿದೆ. ಗದಗ ಗ್ರಾಮೀಣ ಉಪವಿಭಾಗದಲ್ಲಿ 53110 ಸ್ಥಾವರಗಳು ಅರ್ಹವಾಗಿದ್ದು, ಆ ಪೈಕಿ 52909 ಸ್ಥಾವರಗಳ ನೋಂದಣಿಯಾಗಿ, ಶೇ. 99.62ರಷ್ಟು ಸಾಧನೆಯಾಗಿದೆ ಎಂದು ಹೆಸ್ಕಾಂ ಅಧಿಕಾರಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಶಂಭು ಕಾಳೆ, ಮೀನಾಕ್ಷಿ ಬೆನಕಣ್ಣವರ, ಸಾವಿತ್ರಿ ಹೂಗಾರ, ದಯಾನಂದ ಪವಾರ, ಸಂಗು ಕರೆಕಲಮಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಎಂ.ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪುರ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಎಚ್‌ಬಾರಕೇರ, ಭಾಷಾ ಮಲ್ಲಸಮುದ್ರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಲ್ಲಯ್ಯ ಕೊರವನವರ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ ಸೇರಿದಂತೆ ಗ್ಯಾರಂಟಿ ಯೋಜನೆಯ ಅಧಿಕಾರಿಗಳು ಹಾಜರಿದ್ದರು.

ಗದಗ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರಾದ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳ ಸೌಲಭ್ಯಗಳ ಪಾವತಿಯಲ್ಲಿ ವಿಳಂಬವಾದರೂ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ಬದ್ಧತೆ ಸರ್ಕಾರದ್ದಾಗಿದೆ. ಗ್ಯಾರಂಟಿಗಳ ಮೂಲಕ ರಾಜ್ಯದ ಬಡವರ ಆರ್ಥಿಕಾಭಿವೃದ್ಧಿಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸದಾ ಸನ್ನದ್ಧ ಎನ್ನುವುದನ್ನು ಈಗಾಗಲೇ ಸಾಬೀತುಪಡಿಸಿದೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.

ಧನುರ್ಮಾಸದ ಆಚರಣೆ, ಅದರ ಮಹತ್ವ

ವರ್ಷದ ಕೊನೆಯ ತಿಂಗಳು ಕೊರೆಯುವ ಚಳಿಯಲ್ಲಿಯೇ ಧನುರ್ಮಾಸದ ಆರಂಭವಾಗಿದೆ. ಈ ವರ್ಷ ಧನುರ್ಮಾಸವು ಡಿಸೆಂಬರ್ 16ರಿಂದ ಪ್ರಾರಂಭವಾಗಿದ್ದು, 2026ರ ಜನವರಿ 14ರಂದು ಪೂರ್ಣಗೊಳ್ಳುತ್ತದೆ. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ನಸುಕಿನ 4.30ಕ್ಕೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ ಸೂರ್ಯೋದಯಕ್ಕಿಂತ ಮೊದಲು ದೇವರನ್ನು ಪೂಜೆ ಮಾಡುವುದೇ ಧನುರ್ಮಾಸದ ಆಚರಣೆಯಾಗಿದೆ. ಆಕಾಶದಲ್ಲಿ ನಕ್ಷತ್ರಗಳು ಕಾಣುತ್ತಿರುವಾಗಲೇ ದೇವಾಲಯಗಳು ಬಾಗಿಲು ತೆರೆದು ಸೂರ್ಯೋದಯಕ್ಕೂ ಮೊದಲೇ ಪೂಜೆಯಾಗಿ ಸಂಪನ್ನಗೊಳ್ಳುತ್ತದೆ. ಇದನ್ನೇ ಧನುರ್ಮಾಸ ಆಚರಣೆ ಎನ್ನಲಾಗುತ್ತದೆ.

ಧನುರ್ಮಾಸ ಎಂದರೆ, ಭಗವಾನ್ ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಮಾಸಾನಾಂ ಮಾರ್ಗಶಿರಃ ಎಂದು ತಿಳಿಸಿದ್ದಾರೆ. ಅಂದರೆ ಸನ್ನಿಧಾನ ಫಲ ಧನುರ್ಮಾಸದಲ್ಲಿ ಬಹಳಿರುತ್ತದೆ ಎಂದಿರುತ್ತಾರೆ. ಆದ್ದರಿಂದ ಮಾರ್ಗಶಿರ ಮಾಸದಲ್ಲಿಯೇ ಈ ಧನುರ್ಮಾಸವು ಬಂದು ಬಹಳ ಪವಿತ್ರವಾದದ್ದಾಗಿದೆ. ಮಾರ್ಗಶಿರ ಮಾಸದ ಮಧ್ಯಂತರದಲ್ಲಿ ಆರಂಭವಾಗಿ ಪುಷ್ಯ ಮಾಸದ ಮಧ್ಯಂತರದಲ್ಲಿ ಮುಕ್ತಾಯಗೊಳ್ಳುತ್ತದೆ. ಅಂದರೆ ಧನುರ್ಮಾಸ ಬೇರೆ ಮಾಸಗಳಂತೆ ಪ್ರತ್ಯೇಕ ಮಾಸವಲ್ಲ.

ಸೌರಮಂಡಲದ ರಾಜನಾದ ಸೂರ್ಯದೇವನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಿರುತ್ತಾರೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿಯೇ ಒಂದು ತಿಂಗಳು. ಸೂರ್ಯನು ಧನುರಾಶಿಗೆ ಪ್ರವೇಶಿಸುವ ದಿನದಿಂದ ಆರಂಭಿಸಿ ಮಕರ ರಾಶಿಗೆ ಪ್ರವೇಶಿಸುವ ದಿನದವರೆಗಿನ ಒಂದು ತಿಂಗಳ ಕಾಲವೇ ಈ ಧನುರ್ಮಾಸ.

ಈ ಮಾಸದಲ್ಲಿ ಸೂರ್ಯನು ಒಂದು ತಿಂಗಳು ಧನುರಾಶಿಯಲ್ಲಿಯೇ ಇರುತ್ತಾನೆ. ಆದ್ದರಿಂದ ಈ ಮಾಸಕ್ಕೆ ಧನುರ್ಮಾಸ ಎನ್ನಲಾಗುತ್ತಿದೆ. ಸೂರ್ಯನು ಧನು ರಾಶಿಯನ್ನು ಪ್ರವೇಶಿಸುವ ಕಾಲವನ್ನು ಧನುರ್ ಸಂಕ್ರಮಣ ಎನ್ನಲಾಗುತ್ತದೆ. ಸೂರ್ಯ ಸಂಕ್ರಮಣ ಪ್ರವೇಶ ಮಾಡುತ್ತಿದ್ದಂತೆ ಧನುರ್ ಸಂಕ್ರಮಣ ಕಾಲ ಮುಗಿಯುತ್ತದೆ.

ಧನುರ್ಮಾಸ ದೇವತಾ ಕಾರ್ಯಗಳಿಗೆ ಏಕೆ ಶ್ರೇಷ್ಠವೆಂದರೆ, ನಮ್ಮ ಒಂದು ವರ್ಷ ದೇವಾನುದೇವತೆಗಳಿಗೆ ಒಂದು ದಿನದ ಕಾಲವಾಗಿರುತ್ತದೆ. ಇದನ್ನು ಉತ್ತರಾಯಣ ಕಾಲ ಎಂದು ಕರೆಯಲಾಗುತ್ತದೆ. ಈ ಧನುರ್ಮಾಸವು ದಕ್ಷಿಣಾಯಣದ ಕೊನೆಗೆಯಲ್ಲಿ ಬರುತ್ತದೆ. ಅಂದರೆ ಇದು ದೇವತೆಗಳಿಗೆ ಬ್ರಾಹ್ಮೀ ಮುಹೂರ್ತವಾಗಿರುತ್ತದೆ. ಅಂದರೆ ಎಲ್ಲಾ ದೇವತೆಗಳು ಜಾಗೃತಗೊಳ್ಳುವಂತಹ ಸಮಯ. ದೇವಾನುದೇವತೆಗಳಿಗೆ ಬ್ರಾಹ್ಮೀ ಮುಹೂರ್ತವಾದಂತಹ ಈ ಶ್ರೇಷ್ಠ ಧನುರ್ಮಾಸದಲ್ಲಿ ದೇವತಾರಾಧನೆ ಮಾಡಿದರೆ ಅಕ್ಷಯ ಫಲ ಪ್ರಾಪ್ತಿಯಾಗುತ್ತದೆ.

ಇದರ ಆಚರಣೆಯನ್ನು ಋಷಿಮುನಿಗಳೂ ಅರುಣೋದಯ ಕಾಲದಲ್ಲಿ ಎದ್ದು ಪೂಜಿಸಿದರೆ ಸಾವಿರ ದಿನ ಪೂಜೆ ಮಾಡಿದಷ್ಟೇ ಫಲ ಸಿಗುತ್ತದೆ ಎಂದು ಹೇಳಿದ್ದಾರೆ. ಈ ಪೂಜೆ ಹೇಗೆ ಪ್ರಾರಂಭವಾಯಿತೆಂದರೆ, ಸೂರ್ಯದೇವನೇ ಮೊದಲು ಪ್ರಾರಂಭಿಸುತ್ತಾನೆ. ಇದರ ಆಚರಣೆಯನ್ನು ಋಷಿಮುನಿಗಳು ಅರುಣೋದಯ ಕಾಲದಲ್ಲಿ ದೇವಪೂಜೆ, ಎರಡನೆಯದು ಮಧ್ಯಾಹ್ನ ಅಥವಾ ಹುಗ್ಗಿ ನೈವೇದ್ಯ. ಈ ವೇಳೆಯು ಶ್ರೀಹರಿಯ ಪೂಜೆಗೆ ವಿಶೇಷ ಕಾಲವಾಗಿದೆ.

ಉತ್ಥಾನ ದ್ವಾದಶಿಯಿಂದ ಯೋಗ ನಿದ್ರೆಯಿಂದ ಜಾಗೃತಗೊಳ್ಳುವಂತಹ ವಿಷ್ಣು ದೇವರಿಗೆ ಅರುಣೋದಯ ಕಾಲವಾಗಿದೆ. ಹೀಗಾಗಿ ಧನುರ್ಮಾಸ ಶ್ರೇಷ್ಠವಾಗಿದೆ. ವೈಷ್ಣವ ಸಂಪ್ರದಾಯದಲ್ಲಿ ಈ ಮಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಮಾಸದಲ್ಲಿ ದೇವಾನುದೇವತೆಗಳು ಮಹಾವಿಷ್ಣುವನ್ನು ನೆನೆಯುತ್ತಾರೆ ಎಂಬ ಪ್ರತೀತಿ ಇದೆ. ಈ ಸಮಯದಲ್ಲಿ ವಿಷ್ಣು ಸಹಸ್ರನಾಮ, ನಾರಾಯಣ ಉಪನಿಷತ್ತುಗಳನ್ನು ಪಠಣ ಮಾಡಬೇಕು.

ವೀರಶೈವರು ಪುರುಷಸೂಕ್ತ ಹಾಗೂ ಶ್ರೀ ಸೂಕ್ತವನ್ನು ಪಠಣ ಮಾಡಬೇಕು. ಈ ಸಮಯದಲ್ಲಿ ವಿಷ್ಣುವಿನೊಂದಿಗೆ ಲಕ್ಷ್ಮೀದೇವಿಯನ್ನು ಪೂಜಿಸಿದರೆ ಧನಸಂಪತ್ತು ಪ್ರಾಪ್ತಿಯಾಗುತ್ತದೆ. ಈ ಧನುರ್ಮಾಸದಲ್ಲಿಯೇ ತಿರುಪತಿ ವೆಂಕಟೇಶನ ದರ್ಶನ ಮಾಡಿ, ನಂತರ ಕೊಲ್ಲಾಪೂರ ಮಹಾ ಲಕ್ಷ್ಮಿಯನ್ನು ಆರಾಧಿಸಿ, ಮಧ್ಯಾಹ್ನ ಹೆಸರುಬೇಳೆ ಪಾಯಸವನ್ನು ನೈವೇದ್ಯ ಮಾಡಬೇಕು.

ಮೈ ಕೊರೆಯುವ ಚಳಿಯಲ್ಲಿ ಮೈ ಕುಗ್ಗುವುದರಿಂದ ಈ ಪಾಯಸವನ್ನು ಸೇವಿಸಿದರೆ, ನಮ್ಮಲ್ಲಿ ಕೊಬ್ಬಿನಾಂಶವನ್ನು ಹೆಚ್ಚಿಸಲು ಇದು ಸಾತ್ವಿಕ ಆಹಾರವಾಗಿದೆ.

ಈ ಧನುರ್ಮಾಸದಲ್ಲಿ ತೀರ್ಥಕ್ಷೇತ್ರಗಳಲ್ಲಿ ಹರಿಯುವ ನದಿಯಲ್ಲಿ ಪುಣ್ಯಸ್ನಾನವನ್ನು ಮಾಡಿ, ಅಗಲಿದ ಪಿತೃಗಳಿಗೆ ತರ್ಪಣ ಬಿಡುವುದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದಾಗಿದೆ. ಈ ವೇಳೆ ಬೆಳಗಿನ ಜಾವ ಬೇಗನೆ ಎದ್ದು ದೇಹವನ್ನು ದಂಡಿಸಿ, ಸ್ನಾನಮಾಡಿ ದೇವರನ್ನು ಪೂಜಿಸಿದರೆ, ನಮ್ಮ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ.

ಇದನ್ನು ಕೆಲವರು ಶೂನ್ಯ ಮಾಸ ಹಾಗೂ ಪುಷ್ಯಮಾಸ ಎಂದು ಕರೆಯುತ್ತಾರೆ. ಈ ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಈ ಧನುರ್ಮಾಸವು ಕೇವಲ ದೇವತಾರಾಧನೆಗೆ ಸಂಬಂಧಿಸಿದ ಹೋಮ, ಹವನ, ರುದ್ರಾಭಿಷೇಕ, ಪೂಜಾದಿಗಳಿಗೆ ಪವಿತ್ರವಾಗಿರುತ್ತದೆ. ಈ ಮಾಸದಲ್ಲಿ ಇವುಗಳನ್ನು ಮಾಡುವುದರಿಂದ ಹಾಗೂ ಪುರೋಹಿತರಿಂದ ಮಾಡಿಸುವುದರಿಂದ ಪುಣ್ಯಫಲ ಪ್ರಾಪ್ತಿಯಾಗುತ್ತದೆ.

ಎಲ್ಲರೂ ಈ ಸಮಯದಲ್ಲಿ ದಾನ-ಧರ್ಮಗಳಲ್ಲಿ, ಜಪ-ತಪಗಳಲ್ಲಿ ಭಾಗಿಯಾಗಿ ಪುಣ್ಯಾತ್ಮರಾಗಿರಿ ಎಂಬುದು ನನ್ನ ಭಾವನೆ.

ಈ ಧನುರ್ಮಾಸವು ವ್ಯರ್ಥವಾಗದಿರಲಿ ಎಂದು ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಈ ಮಾಸದಲ್ಲಿ ದೇವರನ್ನು ಪೂಜಿಸಿದರೆ ಜ್ಞಾನ ಸಂಪತ್ತು, ಆಯುಷ್ಯ ಅಭಿವೃದ್ಧಿಯಾಗುತ್ತದೆ. ಸಂತಾನವಿಲ್ಲದವರು ಬೇಗನೆ ಎದ್ದು ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ. ವಿವಾಹ ಬೇಗನೇ ಕೂಡಿಬರದಿರುವ ವರ ಹಾಗೂ ಕನ್ಯೆಯರು ಪೂಜಿಸಿದರೆ ಕಂಕಣಭಾಗ್ಯ ಕೂಡಿಬರುತ್ತದೆ. ಅದರೊಂದಿಗೆ ದೇಶಕ್ಕೇ ಮೊದಲಾಗುವ ಮಕ್ಕಳು ಹುಟ್ಟುತ್ತಾರೆ ಎಂಬ ನಂಬಿಕೆ ಪ್ರತೀತಿಯಲ್ಲಿದೆ. ತಮ್ಮೆಲ್ಲರ ಮೇಲೆ ಆ ಭಗವಂತನ ಕೃಪೆ ಇರಲಿ ಎಂದು ಆಶಿಸುತ್ತೇವೆ.

— ವೇ.ಮೂ. ಶರಣಯ್ಯ ಶಾಸ್ತ್ರಿಗಳು
ಶಿವಪ್ಪಯ್ಯನಮಠ, ಗದಗ

ಜನವರಿ 1ರಿಂದ 31ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ: ಶಶಿಧರ್ ಶೆಟ್ಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ಅಪಘಾತವಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ತಿಳಿಸಿದರು.

ಅವರು ಬುಧವಾರ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

2026ರ ಜನವರಿ 1ರಿಂದ 31ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಸ್ಥಳೀಯ ವಕೀಲರ ಸಂಘ, ವಿಮಾ ಕಂಪನಿ ಪ್ರತಿನಿಧಿಗಳ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ ಕುರಿತು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕೆಂದು ಸಲಹೆ ನೀಡಿದರು.

ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ, ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದಂತೆ ಯೋಜನೆ ಜಾರಿ ಹಾಗೂ ಅನುಷ್ಠಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ವಾಹನ ಅಪಘಾತವಾದ ಸಂದರ್ಭಗಳಲ್ಲಿ ನಗದು ರಹಿತ ಚಿಕಿತ್ಸೆ, ವಿಮಾ ಮೊತ್ತ ಪಾವತಿಗೆ ಸಂಬಂಧಿಸಿದಂತೆ ನಮೂನೆಗಳ ಭರ್ತಿ ಇನ್ನಿತರೆ ಅಂಶಗಳ ಕುರಿತು ತರಬೇತಿ ಕಾರ್ಯಾಗಾರ, ಸೆಮಿನಾರ್, ಪ್ಯಾನಲ್ ಚರ್ಚೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಅರಿವು ಮತ್ತು ಮಾಸ್ಟರ್ ಟ್ರೈನರ್‌ಗಳಿಗೆ ಉನ್ನತ ಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಪಾಲುದಾರ ಇಲಾಖೆಗಳಾದ ಸಾರಿಗೆ, ಪೊಲೀಸ್, ಸಿಬ್ಬಂದಿಯವರಿಗೆ ನೀಡಲಾಗುತ್ತದೆ ಎಂದರು.

ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‌ಗಳ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಬಸ್ ಚಾಲನೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಪರಿಣಾಮಕಾರಿಯಾದ ರಸ್ತೆ ಸುರಕ್ಷತೆ ಮಾಸಾಚರಣೆ ಅವಧಿಯಲ್ಲಿ ಹೆಚ್ಚಿನ ಹಾಗೂ ಪರಿಣಾಮಕಾರಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದರು.

ವಾಕಥಾನ್, ಮ್ಯಾರಾಥಾನ್, ವಿಂಟೇಜ್ ಕಾರ್ ರ‍್ಯಾಲಿ, ಸೈಕಲ್ ಜಾಥಾ, ಮಾನವ ಸರಪಳಿ ನಿರ್ಮಾಣದ ಮೂಲಕ ಜಾಗೃತಿ, ಸಂಚಾರ ಲೈವ್ ಪ್ರಾತ್ಯಕ್ಷಿಕೆ, ಪ್ಯಾನಲ್ ಚರ್ಚೆ, ವಾಣಿಜ್ಯ ವಾಹನ ಮಾಲೀಕರು, ವಾಹನ ಚಾಲಕರ ವಿವಿಧ ಸಂಘಟನೆಗಳ ಸದಸ್ಯರಿಗೆ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ರಚನೆ, ಕಿರು ನಾಟಕ, ಚಿತ್ರಕಲಾ ಸ್ಪರ್ಧೆ, ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಸುರಕ್ಷತೆಯ ಸ್ಲೋಗನ್ ಪ್ರದರ್ಶನ, ಪತ್ರಿಕಾ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಚಾರ, ರೇಡಿಯೋ ಜಿಂಗಲ್ಸ್ ಮತ್ತು ಸಿನಿಮಾ ಮಂದಿರಗಳಲ್ಲಿ ಜಾಹೀರಾತು ಪ್ರದರ್ಶನ ಇತ್ಯಾದಿಗಳ ಮೂಲಕ ಪರಿಣಾಮಕಾರಿಯಾಗಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸಾರಿಗೆ ಇಲಾಖೆಯ ಆಯುಕ್ತರಾದ ಯೋಗೇಶ್ ಗೌಡ, ಹೆಚ್ಚುವರಿ ಆಯುಕ್ತರಾದ ಮಲ್ಲಿಕಾರ್ಜುನ್, ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾ ರೆಡ್ಡಿ ವಿಸಿಯಲ್ಲಿ ಇದ್ದರು. ಗದಗ ಜಿಲ್ಲೆಯಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಎಸ್. ಶಿವನಗೌಡರ ಹಾಜರಿದ್ದರು.

ದೇಶದಲ್ಲಿ 2019ರಿಂದ 2025ರವರೆಗೆ ಒಟ್ಟು 60 ಸಾವಿರ ರಸ್ತೆ ಅಪಘಾತದಲ್ಲಿ ಜೀವ ಹಾನಿಯಾಗಿದೆ. ಕಳೆದ ಆರು ತಿಂಗಳಲ್ಲಿ 21932 ಅಪಘಾತಗಳು ನಡೆದಿದ್ದು, 5 ಸಾವಿರಕ್ಕೂ ಅಧಿಕ ಜೀವಗಳನ್ನು ಅಪಘಾತದಲ್ಲಿ ಕಳೆದುಕೊಂಡಿದ್ದೇವೆ. ತುಮಕೂರು ಜಿಲ್ಲೆಯಲ್ಲಿ ಅಧಿಕ ರಸ್ತೆ ಅಪಘಾತಗಳು ನಡೆಯುತ್ತಿವೆ. ದಾರಿಹೋಕರ ಮೇಲೆ ವಾಹನ ಅಪಘಾತಗಳು ಶೇ. 28ರಷ್ಟಿವೆ. ಕಳೆದ ಒಂದು ವರ್ಷದಲ್ಲಿ 33 ಸಾವಿರ ಅಪಘಾತಗಳು ಜರುಗಿದ್ದು, 12 ಸಾವಿರ ಜನರು ಮರಣ ಹೊಂದಿದ್ದಾರೆ. 50 ಸಾವಿರ ಜನರು ತೀವ್ರತರದ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಪ್ರತಿ ತಾಸಿಗೆ 15-20 ಜೀವಗಳು ಅಪಘಾತದಲ್ಲಿ ಹೋಗುತ್ತಿವೆ ಎಂದು ಶಶಿಧರ ಶೆಟ್ಟಿ ಮಾಹಿತಿ ನೀಡಿದರು.

ಬೆಳೆಹಾನಿ ಪರಿಹಾರ ವಿತರಣೆಯಲ್ಲೂ ಗೋಲ್‌ಮಾಲ್?!

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಪ್ರಸಕ್ತ ವರ್ಷದ ಮುಂಗಾರಿನ ಆಶ್ಲೆಷಾ, ಮಘಾ ಮಳೆಗಳ ಅವಕೃಪೆಯಿಂದಾಗಿ ಕೈಗೆ ಬಂದಿದ್ದ ಮುಂಗಾರಿನ ಬೆಳೆಗಳು ನೀರು ಪಾಲಾಗಿದ್ದವು. ನರೇಗಲ್ಲ ಹೊಬಳಿ ಸೇರಿದಂತೆ ಗಜೇಂದ್ರಗಡ ತಾಲೂಕಿನಾದ್ಯಂತ ಬಹುತೇಕ ರೈತರ ಮುಂಗಾರಿ ಬೆಳೆಗಳು ಹಾಳಾಗಿ ಹೋಗಿದ್ದವು. ಬೆಳೆ ಹಾನಿಯ ಸಮೀಕ್ಷೆ ಕೈಗೊಂಡು ಪರಿಹಾರ ವಿತರಿಸುವ ಭರವಸೆಯನ್ನು ನೀಡಲಾಗಿತ್ತು. ಅದರಂತೆ ಜಿಲ್ಲೆಗೆ 135 ಕೋಟಿ ರೂ ಪರಿಹಾರ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಗಜೇಂದ್ರಗಡ ತಾಲೂಕಿನ ಬಹಳಷ್ಟು ರೈತರಿಗೆ ಬೆಳೆ ಹಾನಿ ಜಮೆಯಾಗದೇ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ವಿಪತ್ತು ನಿರ್ವಹಣಾ ಮಾರ್ಗಸೂಚಿಯಂತೆ ಪ್ರಸ್ತುತ ಗರಿಷ್ಠ 2 ಹೆಕ್ಟೇರ್ ಪ್ರದೇಶದ ಮಿತಿಗೊಳಪಟ್ಟು ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಮಳೆಯಾಶ್ರಿತ ಬೆಳೆಗೆ 8500 ರೂ, ನೀರಾವರಿ ಪ್ರದೇಶದ ಬೆಳೆಗೆ 17 ಸಾವಿರ ರೂ. ದೀರ್ಘಾವಧಿ (ತೋಟಗಾರಿಕೆ) ಬೆಳೆಗೆ 22,500 ರೂ ಪರಿಹಾರ ಘೋಷಿಸಲಾಗಿತ್ತು.

ರಾಜ್ಯ ಸರ್ಕಾರವು ಮುಂಗಾರಿನ ಅತಿವೃಷ್ಟಿ ಪರಿಹಾರ ವಿತರಣೆಗಾಗಿ ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆಯನ್ನು ನಡೆಸಿ ವರದಿಯನ್ನು ಸಲ್ಲಿಸಿತ್ತು. ಅದರಂತೆ ಗದಗ ಜಿಲ್ಲೆಗೆ 135 ಕೋಟಿ ರೂ ಬೆಳೆಹಾನಿ ಪರಿಹಾರ ಜಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಹಂತ ಹಂತವಾಗಿ ಎಲ್ಲ ರೈತರಿಗೂ ಬೆಳೆ ಹಾನಿ ಪರಿಹಾರ ಜಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೆಲ ರೈತರಿಗೆ ಎರಡು ಕಂತುಗಳಲ್ಲಿ ಹಣ ಜಮೆಯಾಗಿವೆ. ಇನ್ನೊಂದೆಡೆ ಕೆಲ ರೈತರಿಗೆ ಬಿಡಿಗಾಸೂ ಜಮೆಯಾಗಿಲ್ಲ. ಬೆಳೆ ಹಾನಿ ವಿತರಣೆಯಲ್ಲಿ ಸಾಕಷ್ಟು ಗೋಲ್‌ಮಾಲ್ ಆಗಿದೆ ಎಂದು ಎಲ್ಲೆಡೆ ರೈತರು ಪ್ರತಿಭಟನೆ ಮಾಡಿದ್ದರೂ ಸಹ ಜಿಲ್ಲಾಡಳಿತ ಮಾತ್ರ ಎಲ್ಲ ರೈತರಿಗೆ ಬೆಳೆ ಹಾನಿ ಜಮೆಯಾಗಿದೆ ಎಂದು ಹೇಳಿತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದ (ಪ್ರಕೃತಿ ವಿಕೋಪ ಶಾಖೆ) ಪ್ರಕಾರ 2025-26ನೇ ಸಾಲಿನಲ್ಲಿ ಗಜೇಂದ್ರಗಡ ತಾಲೂಕಿನ 7605 ರೈತರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ವಯ ರೂ. 7,20,97,827 ಪರಿಹಾರ ಮತ್ತು ರಾಜ್ಯ ಸರ್ಕಾರದ ಹೆಚ್ಚುವರಿ ರೂ. 7,20,97,357 ಪರಿಹಾರ ಸೇರಿದಂತೆ ಒಟ್ಟು 14,41,95,184 ರೂ ಪರಿಹಾರ ವಿತರಿಸಲಾಗಿದೆ. ಆದರೆ, ತಾಲೂಕಿನ ಬಹಳಷ್ಟು ರೈತರಿಗೆ ಬೆಳೆಹಾನಿ ಪರಿಹಾರ ವಿತರಣೆಯೇ ಆಗಿಲ್ಲ. ಹಾಗಿದ್ದರೆ, 14 ಕೋಟಿಗೂ ಅಧಿಕ ಹಣ ಎಲ್ಲಿ ಹೋಗಿದೆ ಎಂಬ ಪ್ರಶ್ನೆ ರೈತರದ್ದಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದ ಸಂಶಯವಿದೆ. ಗಜೇಂದ್ರಗಡ ತಾಲೂಕಿನ 7605 ರೈತರಿಗೆ ಬೆಳೆ ಹಾನಿ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದು, ಯಾವ ರೈತರ ಖಾತೆಗೆ ಎಷ್ಟು ಪರಿಹಾರ ವಿತರಣೆಯಾಗಿದೆ ಎಂಬ ವಿವರವನ್ನು ಕೇಳಲಾಗಿದೆ. ಅದರ ವಿವರ ಬಂದಲ್ಲಿ ಸತ್ಯ ಹೊರ ಬರಲಿದೆ.

  • ಶರಣಪ್ಪ ಧರ್ಮಾಯತ
    ಅಧ್ಯಕ್ಷರು, ರೈತರ ಸೇನಾ ನರೇಗಲ್ಲ

ಬೆಳೆಹಾನಿ ವಿತರಣೆಯು ಸಂಪೂರ್ಣ ಡಿಬಿಟಿ ಮುಖಾಂತರ ನಡೆದಿದ್ದು, ಯಾವುದೇ ಅವ್ಯವಹಾರಕ್ಕೆ ಆಸ್ಪದವಿಲ್ಲ. ರೈತರ ಎಫ್‌ಐಡಿಯಲ್ಲಿನ ವ್ಯತ್ಯಾಸ ಸೇರಿದಂತೆ ಇತರೆ ತಾಂತ್ರಿಕ ಕಾರಣಗಳಿಂದ ಪರಿಹಾರ ವಿತರಣೆಯಲ್ಲಿ ತೊಡಕಾಗಿದೆ. ಅದಕ್ಕಾಗಿ ಎಲ್ಲ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸುವಂತೆ ತಿಳಿಸಲಾಗಿದೆ.
— ಕಿರಣಕುಮಾರ ಕುಲಕರ್ಣಿ, ಗಜೇಂದ್ರಗಡ ತಹಸೀಲ್ದಾರ

ಕುವೆಂಪು ಕೃತಿಗಳಲ್ಲಿ ವಿಶ್ವಮಾನವ ದರ್ಶನ: ಎಸ್.ಎಂ. ಕಾತರಕಿ

0

ವಿಜಯಸಾಕ್ಷಿ ಸುದ್ದಿ, ಗದಗ: 20ನೇ ಶತಮಾನದ ಶ್ರೇಷ್ಠ ಸಾಹಿತಿ ಕುವೆಂಪು. ಯುಗದ ಕವಿಯಾಗಿ, ಜಗದ ಕವಿಯಾಗಿ ವಿಶ್ವಮಾನವ ದರ್ಶನವನ್ನು ತಮ್ಮ ಕೃತಿಗಳ ಮೂಲಕ ಮಾಡಿಸಿದ್ದಾರೆ. ಮನುಷ್ಯ ಜಾತಿ, ಧರ್ಮ, ಭಾಷೆ ಮತ್ತು ಗಡಿಗಳನ್ನು ಮೀರಿ ಬೆಳೆಯಬೇಕು. ಸಂಕುಚಿತ ಮನಸ್ಥಿತಿ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಕುವೆಂಪು ಪ್ರತಿಪಾದಿಸಿರುವುದಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಎಸ್.ಎಂ. ಕಾತರಕಿ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುವೆಂಪು ಜನ್ಮದಿನದ ನಿಮಿತ್ತ ಜರುಗಿದ ವಿಶ್ವಮಾನವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ, ಕುವೆಂಪು ಅವರ ಚಿಂತನೆಗಳು ವಿಶ್ವಮಾನವತ್ವ, ಸಮಾನತೆ ಮತ್ತು ಸಾಮಾಜಿಕ ಕ್ರಾಂತಿಯ ಮೇಲೆ ಕೇಂದ್ರೀಕೃತವಾಗಿವೆ. ಕರ್ನಾಟಕದ ಸಮಗ್ರತೆ, ಸರ್ವೋದಯದ ಕನಸನ್ನು ಕಂಡರು. ವೈಚಾರಿಕ ಕ್ರಾಂತಿಯ ಮೂಲಕ ಸಮಾಜವನ್ನು ಎಚ್ಚರಗೊಳಿಸುವುದು ತಮ್ಮ ಧರ್ಮವೆಂದು ನಂಬಿದ್ದರು. ನಕಾರಾತ್ಮಕವಾಗಿ ಬಿಂಬಿತವಾದ ಪಾತ್ರಗಳಲ್ಲಿಯ ಒಳ್ಳೆತನವನ್ನು ಎತ್ತಿ ತೋರಿ ಓದುಗನಲ್ಲಿ ಚಿಂತನೆಗಳನ್ನು ಬದಲಿಸಿದರು ಎಂದು ತಿಳಿಸಿದರು.

ನೀಲಮ್ಮ ಅಂಗಡಿ ಕುವೆಂಪು ವಿರಚಿತ ಗೀತೆಯನ್ನು ಹಾಡಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರು, ರತ್ನಕ್ಕ ಪಾಟೀಲ, ಜೆ.ಎ. ಪಾಟೀಲ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ವಿ.ಎಂ. ವೇರ್ಣೇಕರ, ಚಂದ್ರಕಲಾ ಇಟಗಿಮಠ, ರಾಜಶೇಖರ ದಾನರಡ್ಡಿ, ಅಮರೇಶ ರಾಂಪೂರ, ಡಿ.ಎಸ್. ಬಾಪುರಿ, ಎಸ್.ಯು. ಸಜ್ಜನಶೆಟ್ಟರ, ಕೆ.ಎಸ್. ಬಾಳಿಕಾಯಿ, ಎ.ಎಸ್. ಮಕಾನದಾರ, ಬಸವರಾಜ ಗಣಪ್ಪನವರ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಚನವೀರಪ್ಪ ದುಂದೂರ, ಎಸ್.ವಿ. ಯಂಡಿಗೇರಿ, ಬಿ.ಬಿ. ಹೊಳಗುಂದಿ, ಶಿಲ್ಪಾ ಮ್ಯಾಗೇರಿ, ಸತೀಶ ಕುಲಕರ್ಣಿ, ಜಯದೇವ ಮೆಣಸಗಿ, ಎ.ಸಿ. ಹಿರೇಮಠ, ಬಸವರಾಜ ನೆಲಜೇರಿ, ಮಂಜುಳಾ ವೆಂಕಟೇಶಯ್ಯ, ಎ.ಎಂ. ಅಂಗಡಿ, ವಿ. ಹರಿನಾಥಬಾಬು, ಅಕ್ಕಮ್ಮ ಪಾರ್ವತಿಮಠ, ಉಮಾ ಪಾರ್ವತಿಮಠ, ಸುಧಾ ಬಳ್ಳಿ, ಎಂ.ಎಫ್. ಡೋಣಿ, ಪ್ರ.ತೋ. ನಾರಾಯಣಪೂರ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮನುಜಮತವನ್ನು ಉತ್ತೇಜಿಸಿ, ಮೌಢ್ಯದಿಂದ ಮುಕ್ತವಾದ ಆಧ್ಯಾತ್ಮಿಕತೆಯನ್ನು ಪ್ರಚಾರ ಮಾಡಿದರು. ಭಾಷಾ ಸಾಂಸ್ಕೃತಿಕ ಐಕ್ಯತೆಯನ್ನು ಬೆಳೆಸಿ, ವಿಶ್ವಪಥದತ್ತ ಹೆಜ್ಜೆ ಹಾಕುವಂತೆ ಪ್ರೇರೇಪಿಸಿದರು. ಸಾಹಿತ್ಯವನ್ನು ಸಾಮಾಜಿಕ ಕ್ರಾಂತಿಯ ಸಾಧನವನ್ನಾಗಿ ಮಾಡಿದರು ಎಂದು ತಿಳಿಸಿದರು.

2025-26ನೇ ಸಾಲಿನ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಹಬ್ಬ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಗದಗ ಇವರ ಸಹಯೋಗದಲ್ಲಿ 2025-26ನೇ ಸಾಲಿನ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಹಬ್ಬದ ಉದ್ಘಾಟನಾ ಸಮಾರಂಭವನ್ನು ಜನವರಿ 3ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು. ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್. ಪಾಟೀಲ, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ. ಗದ್ದಿಗೌಡರ, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಆಗಮಿಸುವರು.

ಜಿಲ್ಲಾಧಿಕಾರಿ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಡಾ. ಬಸವರಾಜ ವೆಂ. ಬಳ್ಳಾರಿ ಸರ್ವರಿಗೂ ಸ್ವಾಗತ ಕೋರಿದ್ದಾರೆ.

ವಿಶೇಷ ಆಹ್ವಾನಿತರಾಗಿ ಕರ್ನಾಟಕ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ್ ಚೌಧರಿ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಆಗಮಿಸಲಿದ್ದಾರೆ.

ವಿದ್ಯಾ ಸಂಪತ್ತು ಬಹುದೊಡ್ಡ ಆಸ್ತಿ: ಎಫ್.ಎನ್. ಹುಡೆದ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಭೌತಿಕ ಸಂಪತ್ತಿಗಿಂತ ವಿದ್ಯಾ ಸಂಪತ್ತು ಬಹು ದೊಡ್ಡ ಆಸ್ತಿ ಎಂದು ನರೇಗಲ್ಲ ಎಸ್.ಎ. ಪಿಯು ಕಾಲೇಜಿನ ಉಪನ್ಯಾಸಕ ಎಫ್.ಎನ್. ಹುಡೆದ ಹೇಳಿದರು.

ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಕಲಾಭವನದಲ್ಲಿ ಜರುಗಿದ ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 2025/26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮುಳಗುಂದ ಪಟ್ಟಣ ಸಂತರು, ಶರಣರ ಪಾವನ ಕ್ಷೇತ್ರವಾಗಿದ್ದು, ಈ ಮಣ್ಣಿನಲ್ಲಿ ಶರಣ ಪರಂಪರೆಯಿದೆ. ಇಲ್ಲಿ ಶಿಕ್ಷಣಕ್ಕೆ ಹೆಸರುವಾಸಿಯಾದ ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನುರಿತ ಶಿಕ್ಷರನ್ನು ಒಳಗೊಂಡಿದ್ದು, ಲಿಲ್ಲಿ ಕಲಿತ ವಿದ್ಯಾರ್ಥಿಗಳು ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಪೋಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಲ್ಲಿ ನಾಡಿನ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

ಶಿವಾನಂದ ದಳವೆ ಮಾತನಾಡಿ, ಹೆತ್ತ ತಂದೆ-ತಾಯಿಗಳನ್ನು, ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು. ಗುರುಗಳು ಹೇಳುವ ಪಾಠಗಳನ್ನು ನಿತ್ಯ ಮನನ ಮಾಡಿಕೊಂಡಲ್ಲಿ ವಿದ್ಯಾ ಪ್ರಾಪ್ತಿಯಾಗುತ್ತದೆ ಎಂದರು.

ಎನ್.ಡಿ. ಬಟ್ಟೂರ ಮಾತನಾಡಿ, ನಮ್ಮ ಸಂಸ್ಥೆಗೆ 84 ವರ್ಷ ತುಂಬಿದ್ದು, ಇಲ್ಲಿ ಕಲಿತ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯ, ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಎಲ್ಲಾ ಮಕ್ಕಳು ಓದಿನ ಕಡೆ ಗಮನ ಹರಿಸಬೇಕು ಎಂದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಕ್ರೀಡಾಕೂಟದಲ್ಲಿ ಸಾಧನೆಗೈದ ಮಕ್ಕಳಿಗೆ ರವಿ ಚನ್ನಣ್ಣವರ ಹಾಗೂ ಮಾಹಾಂತೇಶ ನಪೂರಿಮಠ ಸ್ನೇಹ ಬಳಗ ನೀಡಿದ ದತ್ತಿ ಹಣವನ್ನು ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಎಂ.ಡಿ. ಬಟ್ಟೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರೇಗಲ್ಲ ಎಸ್.ಎ. ಪಿ.ಯು ಕಾಲೇಜಿನ ಉಪನ್ಯಾಸಕ ಎಫ್.ಎನ್. ಹುಡೆದ ಪಾಲ್ಗೊಂಡಿದ್ದರು. ವಿ.ಎಸ್. ಕಲ್ಯಾಣಮಠ, ಎಚ್.ಎಂ. ಮಜ್ಜಿಗುಡ್ಡ, ಎ.ಎಂ. ಅಂಗಡಿ, ಇ.ಎಂ. ಗುಳೇದಗುಡ್ಡ, ಎಸ್.ಸಿ. ಕುರ್ತಕೋಟಿ, ಎಂ.ಎನ್. ಅದರಗುಂಚಿ, ಎಫ್.ಎಸ್. ಅಮೋಘಿಮಠ, ವಿದ್ಯಾರ್ಥಿ ಪ್ರತಿನಿಧಿಗಳಾದ ಜಿ.ಎಸ್. ಗೌಳಿ, ಟಿ.ಎಂ. ಮಂಟೂರಮುಲ್ಲಾ, ಎನ್.ಎಂ. ನಾದಿಗಟ್ಟಿ, ಮಂಜುಳಾ ಬಳ್ಳಾರಿ ಮುಂತಾದವರಿದ್ದರು.

error: Content is protected !!