Home Blog Page 25

ಜೈಲಿಗೆ ಕರೆದೊಯ್ಯುವಾಗಲೇ ಆರೋಪಿ ಎಸ್ಕೇಪ್! ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಖೈದಿ

0

ಶಿವಮೊಗ್ಗ: ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಯೊಬ್ಬ ಜೈಲಿಗೆ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಹಲ್ಲೆ ಮಾಡಿ ಪರಾರಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಕಲಬುರಗಿ ಕೇಂದ್ರ ಕಾರಾಗೃಹದಿಂದ ಖೈದಿಗಳ ಪರಾರಿಯ ಪ್ರಕರಣದ ಬೆನ್ನಲ್ಲೇ ಈ ಘಟನೆ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆ ಎಬ್ಬಿಸಿದೆ.

ಪರಾರಿಯಾದ ಆರೋಪಿಯನ್ನು ಹೊಸನಗರ ತಾಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ್ (36) ಎಂದು ಗುರುತಿಸಲಾಗಿದೆ. 2019-20ರಲ್ಲಿ ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಚಕ್ರಪಾಣಿ ಅವರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಹೊಸನಗರದ ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ತಲುಪಿದಾಗ ಹಸಿವಾಗಿದೆ ಎಂದು ಊಟ ಕೇಳಿದ ಆರೋಪಿ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದಿದ್ದಾನೆ.

ಡಿಆರ್‌ಎಫ್‌ಒ ಸುನೀಲ್ ಡಿ. ಕುಂಬಾರ್ ಹಾಗೂ ಸಿಬ್ಬಂದಿ ಇಬ್ರಾಹಿಂ ಊಟ ತರಲು ತೆರಳಿದ ವೇಳೆ, ಜೀಪ್‌ನಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ವೆಂಕಟೇಶ್ ಪರಾರಿಯಾಗಿದ್ದಾನೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಬಟ್ಟೆಮಲ್ಲಪ್ಪ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.

AI ಎಡಿಟ್‌ನಿಂದ ದೀಪಿಕಾ ಹೆಸರಲ್ಲಿ ಫೇಕ್ ಪೋಸ್ಟ್ ವೈರಲ್! ಸೋನಂ ವಾಂಗ್‌ಚುಕ್ ಬೆಂಬಲದ ಸುದ್ದಿ ಸಂಪೂರ್ಣ ಸುಳ್ಳು

ನವದೆಹಲಿ: ನಟಿ ದೀಪಿಕಾ ಪಡುಕೋಣೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಸಂಪೂರ್ಣ ನಕಲಿಯಾಗಿದೆ. ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರಿಗೆ ದೀಪಿಕಾ ಬೆಂಬಲ ಸೂಚಿಸಿದ್ದಾರೆ, ಬಳಿಕ ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂಬ ಹೇಳಿಕೆಗೆ ಯಾವುದೇ ಅಧಿಕೃತ ಆಧಾರ ಇಲ್ಲ ಎಂದು ಸ್ಪಷ್ಟವಾಗಿದೆ.

ವೈರಲ್ ಆಗಿರುವ ಸ್ಕ್ರೀನ್‌ಶಾಟ್‌ನಲ್ಲಿ, “ಅವರು ಉಪವಾಸ ಮಾಡುತ್ತಿದ್ದಾರೆ, ನಾವು ಸ್ಕ್ರಾಲ್ ಮಾಡುತ್ತಿದ್ದೇವೆ” ಎಂಬ ಸಂದೇಶದೊಂದಿಗೆ, “ಪ್ರಜಾಪ್ರಭುತ್ವದ ಕರಾಳ ದಿನಗಳಲ್ಲಿ ನಾವಿದ್ದೇವೆ. ಸೋತ ನಾಯಕನನ್ನು ವೈಭವೀಕರಿಸಲು ಎಷ್ಟು ಸಿನಿಮಾಗಳನ್ನು ಮಾಡಿದರೂ ಸತ್ಯ ಬದಲಾಗುವುದಿಲ್ಲ” ಎಂಬ ಹೇಳಿಕೆಯನ್ನು ದೀಪಿಕಾ ಹೆಸರಲ್ಲಿ ಹರಡಲಾಗಿದೆ. ಆದರೆ, ಈ ಪೋಸ್ಟ್ ಅವರ ಅಧಿಕೃತ ಖಾತೆಯಲ್ಲಿ ಎಂದಿಗೂ ಪ್ರಕಟವಾಗಿಲ್ಲ.

ಫ್ಯಾಕ್ಟ್ ಚೆಕ್ ವರದಿಗಳ ಪ್ರಕಾರ, ವೈರಲ್ ಸ್ಕ್ರೀನ್‌ಶಾಟ್ ಎಐ ಆಧಾರಿತ ಡಿಜಿಟಲ್ ಎಡಿಟಿಂಗ್ ಮೂಲಕ ಸೃಷ್ಟಿಸಲಾದ ನಕಲಿ ಚಿತ್ರವಾಗಿದೆ. ದೀಪಿಕಾ ಅವರ ಯಾವುದೇ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಇಂತಹ ಪೋಸ್ಟ್ ದಾಖಲಾಗಿಲ್ಲ.

ಇದು ಕಳೆದ ಆರು ತಿಂಗಳಲ್ಲಿ ದೀಪಿಕಾ ಹೆಸರಿನಲ್ಲಿ ವೈರಲ್ ಆಗಿರುವ ಎರಡನೇ ಫೇಕ್ ಸ್ಕ್ರೀನ್‌ಶಾಟ್. ಈ ಹಿಂದೆ ಮಾರ್ಚ್‌ನಲ್ಲಿ ರಣವೀರ್ ಸಿಂಗ್ ಅಭಿನಯದ ಧುರಂಧರ್ ಚಿತ್ರದ ವಿರುದ್ಧ ದೀಪಿಕಾ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸುಳ್ಳು ಪೋಸ್ಟ್ ವೈರಲ್ ಆಗಿತ್ತು.

ಗಮನಾರ್ಹ ಸಂಗತಿಯೆಂದರೆ, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಆಮಿರ್ ಖಾನ್ ಹಾಗೂ ಶಾರುಖ್ ಖಾನ್ ಸೇರಿದಂತೆ ಯಾವುದೇ ಪ್ರಮುಖ ಬಾಲಿವುಡ್ ನಟ-ನಟಿಯರು ಇದುವರೆಗೆ ಸೋನಂ ವಾಂಗ್‌ಚುಕ್ ಅವರ ಹೋರಾಟದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಪೋಸ್ಟ್‌ಗಳು, ಮಾರ್ಫ್ ಮಾಡಿದ ಚಿತ್ರಗಳು ಮತ್ತು ಸುಳ್ಳು ಹೇಳಿಕೆಗಳನ್ನು ಹರಡುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬೆಳವಣಿಗೆ ಡಿಜಿಟಲ್ ವೇದಿಕೆಗಳಲ್ಲಿ ಮಾಹಿತಿ ಪರಿಶೀಲನೆಯ ಅಗತ್ಯವನ್ನು ಮತ್ತಷ್ಟು ಒತ್ತಿಹೇಳುತ್ತಿದೆ.

ಇನ್ಮುಂದೆ ಪಿಯುಸಿ ಉಪನ್ಯಾಸಕರಿಗೆ 9 ಮತ್ತು 10ನೇ ತರಗತಿಗೂ ಪಾಠ ಕಡ್ಡಾಯ: ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ರಾಜ್ಯದ ಪಿಯುಸಿ ಉಪನ್ಯಾಸಕರ ಕರ್ತವ್ಯ ವ್ಯಾಪ್ತಿಗೆ ಮಹತ್ವದ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಪಾಠ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ 2013ರ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.

ಹೊಸ ನಿಯಮದ ಪ್ರಕಾರ, ನೇರ ನೇಮಕಾತಿ ಹಾಗೂ ಬಡ್ತಿಯ ಮೂಲಕ ನೇಮಕಗೊಂಡಿರುವ ಎಲ್ಲಾ ಪಿಯುಸಿ ಉಪನ್ಯಾಸಕರು ಪ್ರೌಢಶಾಲೆಯ 9 ಮತ್ತು 10ನೇ ತರಗತಿಗಳಿಗೂ ಬೋಧನೆ ಮಾಡುವುದು ಕಡ್ಡಾಯವಾಗಲಿದೆ. ಈ ತಿದ್ದುಪಡಿ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದರ ಜೊತೆಗೆ ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಿದೆ. ಒಟ್ಟು 15 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರಡು ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 6,905 ಹುದ್ದೆಗಳು ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ 8,095 ಹುದ್ದೆಗಳು ಮೀಸಲಿರಿಸಲ್ಪಟ್ಟಿವೆ. ಆಕ್ಷೇಪಣೆಗಳ ಪರಿಶೀಲನೆಯ ಬಳಿಕ ಅಂತಿಮ ಅಧಿಸೂಚನೆ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.

ನಿರೂಪ್ ಭಂಡಾರಿಗೆ ಜೋಡಿಯಾದ ಸ್ವಾತಿಷ್ಟ ಕೃಷ್ಣನ್: ‘ಅತಿಕಾಯ’ದಲ್ಲಿ ಮಾಸ್ ಅವತಾರಕ್ಕೆ ಭರ್ಜರಿ ಸಾಥ್

ಬೆಂಗಳೂರು: ‘ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ಅಭಿನಯದ ಬಹುನಿರೀಕ್ಷಿತ ‘ಅತಿಕಾಯ’ ಚಿತ್ರಕ್ಕೆ ಬಹುಭಾಷಾ ನಟಿ ಸ್ವಾತಿಷ್ಟ ಕೃಷ್ಣನ್ ನಾಯಕಿಯಾಗಿ ಸೇರ್ಪಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ವಾತಿಷ್ಟ, ಈ ಚಿತ್ರದಲ್ಲಿ ಕೇವಲ ನಾಯಕಿಯಾಗಿ ಮಾತ್ರವಲ್ಲದೆ ಕಥೆಯ ಬೆಳವಣಿಗೆಯ ಪ್ರಮುಖ ಕೊಂಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮೂಲತಃ ಧಾರವಾಡದವರಾದ ಸ್ವಾತಿಷ್ಟ ಕೃಷ್ಣನ್, ತಮಿಳಿನ ಸವರಕತ್ತಿ, ವಿಕ್ರಮ್, ತೆಲುಗಿನ ಗುಂಡೇ ಕಥಾ ವಿಂಟಾರ ಹಾಗೂ ಕನ್ನಡದ ಒಂದು ಸರಳ ಪ್ರೇಮಕಥೆ, ರಕ್ಕಸಪುರದೋಳ್ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಇದೀಗ ‘ಅತಿಕಾಯ’ ಮೂಲಕ ಮತ್ತೊಮ್ಮೆ ಕನ್ನಡ ಪ್ರೇಕ್ಷಕರ ಮುಂದೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈವರೆಗೆ ಚಾಕೊಲೇಟ್ ಬಾಯ್ ಮತ್ತು ಲವರ್ ಬಾಯ್ ಇಮೇಜ್‌ನಲ್ಲಿ ಗುರುತಿಸಿಕೊಂಡಿದ್ದ ನಿರೂಪ್ ಭಂಡಾರಿ, ‘ಅತಿಕಾಯ’ದಲ್ಲಿ ಸಂಪೂರ್ಣ ವಿಭಿನ್ನವಾದ ರಗಡ್, ರಕ್ತಸಿಕ್ತ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ವಿಶೇಷ ವರ್ಕೌಟ್ ಮಾಡಿ ದೇಹದಾರ್ಢ್ಯ ಬೆಳೆಸಿಕೊಂಡಿರುವ ಅವರು, ಗೆಟಪ್ ಹಾಗೂ ಡೈಲಾಗ್ ಡೆಲಿವರಿಯಲ್ಲೂ ಹೊಸ ಪ್ರಯೋಗ ಮಾಡಿದ್ದಾರೆ.

ಪದೇ ಪದೇ ಹಾಗೂ ನಮಕ್ಹರಾಮ್ ಚಿತ್ರದ ನಿರ್ದೇಶಕ ನಾಗರಾಜ್ ಪೀಣ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ರಿಯಲಿಸ್ಟಿಕ್ ಮಾಸ್ ಆಕ್ಷನ್ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲಿ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ಅಂತಿಮ ಹಂತದ ಶೂಟಿಂಗ್‌ಗೆ ಸಜ್ಜಾಗಿದೆ.

ಎ.ಎನ್. ಮೂವಿ ಮೇಕರ್ಸ್ ಹಾಗೂ ನಿಹಾಲ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಜೆ. ಮಹೇಶ್ ಕುಮಾರ್ ಅರ್ಪಿಸುತ್ತಿದ್ದಾರೆ. ಹರೀಶ್ ರಾಯ್, ದಿನೇಶ್ ಮಂಗಳೂರು, ಬಿ. ಸುರೇಶ್, ಕಾಕ್ರೋಚ್ ಸುಧೀ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ, ಮಹಾಂತೇಶ್ ಹಾಗೂ ಜಾಕ್ ಜಾಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉದಯಲೀಲ ಛಾಯಾಗ್ರಹಣ, ಶ್ರೀನಿವಾಸ್ ಪಿ. ಬಾಬು ಸಂಕಲನ ಮತ್ತು ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ.

ದೆಹಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು: ವರಿಷ್ಠರೊಂದಿಗೆ ಸಿಎಂ ಡಿಕೆಶಿ ಮಹತ್ವದ ಸಭೆ

ನವದೆಹಲಿ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ದೆಹಲಿಯಲ್ಲಿ ತೀವ್ರಗೊಂಡಿವೆ. ಸಚಿವ ಸ್ಥಾನ ಹಂಚಿಕೆ, ಪಕ್ಷದ ಸಂಘಟನೆ ಹಾಗೂ ಪ್ರಮುಖ ಹುದ್ದೆಗಳ ನೇಮಕ ಕುರಿತು ಕಾಂಗ್ರೆಸ್ ವರಿಷ್ಠರೊಂದಿಗೆ ರಾಜ್ಯ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ನಿವಾಸದಲ್ಲಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಅಂತಿಮ ರೂಪುರೇಷೆ ಕುರಿತು ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ 20 ಸ್ಥಾನಗಳಿಗೆ ಸುಮಾರು 50ಕ್ಕೂ ಹೆಚ್ಚು ಶಾಸಕರು ಮತ್ತು ನಾಯಕರು ತೀವ್ರ ಲಾಬಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಯಾವ ಸಮೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂಬುದರತ್ತ ಕಾಂಗ್ರೆಸ್ ವಲಯದ ಗಮನ ನೆಟ್ಟಿದೆ.

ಸಚಿವ ಸಂಪುಟ ವಿಸ್ತರಣೆಯ ಜೊತೆಗೆ ಪಕ್ಷ ಸಂಘಟನೆ ಬಲಪಡಿಸುವ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿದೆ. ಕೆಪಿಸಿಸಿ ಪದಾಧಿಕಾರಿಗಳ ನೇಮಕ, ಪ್ರಚಾರ ಸಮಿತಿ ಅಧ್ಯಕ್ಷರ ಆಯ್ಕೆ, ಕೆಪಿಸಿಸಿ ಮಹಿಳಾ ಕಾರ್ಯಾಧ್ಯಕ್ಷೆಯ ನೇಮಕ ಹಾಗೂ ನೂತನ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷರ ನೇಮಕ ಕುರಿತೂ ವರಿಷ್ಠರು ಹಾಗೂ ರಾಜ್ಯ ನಾಯಕರು ಸಮಾಲೋಚನೆ ನಡೆಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರು ಹೈಕಮಾಂಡ್ ಜತೆ ಸರಣಿ ಸಭೆಗಳಲ್ಲಿ ಭಾಗವಹಿಸಿದ್ದು, ಸಚಿವ ಸಂಪುಟ ವಿಸ್ತರಣೆ ಮತ್ತು ಪಕ್ಷದ ಸಂಘಟನೆ ಕುರಿತ ಅಂತಿಮ ನಿರ್ಧಾರ ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಡಿಕೆ ಶಿವಕುಮಾರ್ ಅವರನ್ನು ಯಾರೂ ಜೈಲಿಗೆ ಕಳುಹಿಸುವುದಿಲ್ಲ: ಸಿಎಂ ಹೇಳಿಕೆಗೆ ಪ್ರಹ್ಲಾದ್ ಜೋಶಿ ತಿರುಗೇಟು

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ವಿವಾದದ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ “ಜೈಲು ನನಗೆ ಹೊಸದೇನಲ್ಲ” ಎಂಬ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಯಾರೂ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವುದಿಲ್ಲ. ಆದರೆ ಅವರು ತಪ್ಪು ಮಾಡಿದ್ದು ಸಾಬೀತಾದರೆ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಜೋಶಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾರೇ ತಪ್ಪು ಮಾಡಿದರೂ ಜೈಲಿಗೆ ಹೋಗುತ್ತಾರೆ. ಇದರ ಅರ್ಥ ನಾವು ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎನ್ನುವುದಲ್ಲ. ಜೈಲಿನ ಬಗ್ಗೆ ಈಗಲೇ ಯಾಕೆ ಮಾತನಾಡುತ್ತಿದ್ದಾರೆ? ಏನಾದರೂ ತಪ್ಪು ಮಾಡಿದ್ದೀರಾ? ಇದು ಜನರ ಅನುಕಂಪ ಪಡೆಯುವ ಪ್ರಯತ್ನ” ಎಂದು ಆರೋಪಿಸಿದರು.

ಮುಖ್ಯಮಂತ್ರಿ ಎಂದರೆ ಸರ್ವಾಧಿಕಾರಿಯಲ್ಲ ಅಥವಾ ರಾಜ್ಯದ ಮಹಾರಾಜರಲ್ಲ. ಆ ಸ್ಥಾನಕ್ಕೆ ತಕ್ಕ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದ ಜೋಶಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಬಿಡದಿಯಲ್ಲಿ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ನಿರ್ಮಿಸುವ ವಿಚಾರವಾಗಿ ಮಾತನಾಡಿದ ಜೋಶಿ, ರೈತರ ಒಪ್ಪಿಗೆ ಇಲ್ಲದೆ ಯೋಜನೆ ಜಾರಿಗೊಳಿಸುವುದು ಸರಿಯಲ್ಲ ಎಂದರು.

“ಬಲವಂತವಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಬದಲು ರೈತರ ಮನವೊಲಿಸಬೇಕಿತ್ತು. ರೈತರು ಪ್ರತಿಭಟನೆ ಆರಂಭಿಸಿದ ನಂತರ ಒತ್ತಾಯ ಮಾಡಿಲ್ಲ ಎಂದು ಹೇಳುವುದರಿಂದ ಪ್ರಯೋಜನವಿಲ್ಲ. ಮೊದಲಿನಿಂದಲೇ ರೈತರೊಂದಿಗೆ ಸಂವಾದ ನಡೆಸದಿರುವುದು ಏಕೆ?” ಎಂದು ಪ್ರಶ್ನಿಸಿದರು.

ಮೂರು ವರ್ಷಗಳ ಕಾಲ ಈ ಯೋಜನೆಗೆ ಆಸಕ್ತಿ ತೋರದ ಸರ್ಕಾರ ಈಗ ಏಕಾಏಕಿ ಮುಂದಾಗಿರುವುದರ ಹಿಂದಿನ ಕಾರಣವೇನು? ಇದರಲ್ಲಿ ಯಾವುದಾದರೂ ‘ಡೀಲ್’ ನಡೆದಿದೆಯೇ ಎಂಬ ಅನುಮಾನಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾಡಿರುವ ಆರೋಪಗಳಿಗೆ ಉತ್ತರ ನೀಡುವ ಬದಲು ಡಿ.ಕೆ. ಶಿವಕುಮಾರ್ ಅವರ ಮೇಲೆಯೇ ಕಿಡಿಕಾರುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು. “ಒಬ್ಬ ವ್ಯಕ್ತಿ ತಪ್ಪು ಮಾಡಿ ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದಾಗ ಈ ರೀತಿಯ ಪ್ರತಿಕ್ರಿಯೆ ನೀಡುತ್ತಾನೆ” ಎಂದು ಅವರು ಹೇಳಿದರು.

ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ 25 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ವಿಚಾರವನ್ನೂ ಪ್ರಸ್ತಾಪಿಸಿದ ಜೋಶಿ, ದೇಶದ ವಿಪಕ್ಷ ನಾಯಕ ಎಲ್ಲಿದ್ದಾರೆ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

“ನಾವು ವಿದೇಶಕ್ಕೆ ಹೋದರೆ ಅದರ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡುತ್ತೇವೆ. ನಾನು ದಾವೋಸ್‌ಗೆ ಹೋಗಿದ್ದೆ, ಕಿರಣ್ ರಿಜಿಜು ಕತಾರ್‌ಗೆ ಹೋಗಿದ್ದರು. ಆದರೆ ರಾಹುಲ್ ಗಾಂಧಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಕಾಂಗ್ರೆಸ್ ಯಾಕೆ ಹೇಳುತ್ತಿಲ್ಲ?” ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಬರ ಅಧ್ಯಯನಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಮೊದಲು ಬರಪೀಡಿತ ಪ್ರದೇಶಗಳ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

“ಕಾಂಗ್ರೆಸ್‌ನ ಧೋರಣೆ ಏನೆಂದರೆ ಮಳೆ ಹೆಚ್ಚಾದರೂ ಮೋದಿ ಕಾರಣ, ಮಳೆ ಕಡಿಮೆಯಾದರೂ ಮೋದಿ ಕಾರಣ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರವನ್ನೇ ದೂರುವುದು ಸರಿಯಲ್ಲ. ಈ ರೀತಿಯ ರಾಜಕೀಯವನ್ನು ಕಾಂಗ್ರೆಸ್ ಬಿಡಬೇಕು” ಎಂದು ವಾಗ್ದಾಳಿ ನಡೆಸಿದರು.

KPSC ಅಧ್ಯಕ್ಷರ ಅಮಾನತು ವಿವಾದ: ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಯತ್ನಾಳ್ ಆಗ್ರಹ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಕೇಳಿಬಂದಿರುವ ನಕಲಿ ಆದಾಯ ಪ್ರಮಾಣ ಪತ್ರ ಹಾಗೂ ನೇಮಕಾತಿ ಅಕ್ರಮ ಆರೋಪಗಳ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಈ ಸಂಬಂಧ ರಾಜ್ಯಪಾಲರು ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿರುವ ಕ್ರಮದ ವಿರುದ್ಧ ಅವರು ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರಿಸಿರುವ ಬೆನ್ನಲ್ಲೇ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, ರಾಜ್ಯದ ಅತ್ಯುನ್ನತ ನೇಮಕಾತಿ ಸಂಸ್ಥೆಯ ಮುಖ್ಯಸ್ಥರ ಮೇಲೆಯೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಆತಂಕಕಾರಿ ಎಂದು ಹೇಳಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ಅವರು ರಾಜ್ಯಪಾಲರ ಅಮಾನತು ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಕರಣದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ತಮ್ಮ ಪೋಸ್ಟ್‌ನಲ್ಲಿ ಯತ್ನಾಳ್, ಕೆಪಿಎಸ್‌ಸಿ ಅಧ್ಯಕ್ಷರಿಗೆ ವೇತನ, ಭತ್ಯೆ ಹಾಗೂ ಇತರ ಸೌಲಭ್ಯಗಳನ್ನು ಸೇರಿಸಿ ತಿಂಗಳಿಗೆ ಸುಮಾರು 2.25 ಲಕ್ಷ ರೂಪಾಯಿ, ವಾರ್ಷಿಕವಾಗಿ ಸುಮಾರು 27 ಲಕ್ಷ ರೂಪಾಯಿ ಆದಾಯ ದೊರೆಯುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಇಷ್ಟೊಂದು ಆದಾಯ ಹೊಂದಿದ್ದರೂ, ತಮ್ಮ ಪುತ್ರಿಗೆ ಹಿಂದುಳಿದ ವರ್ಗಗಳ ಮೀಸಲಾತಿ ಅಥವಾ ಸೌಲಭ್ಯ ದೊರೆಯುವ ಉದ್ದೇಶದಿಂದ ವಾರ್ಷಿಕ ಆದಾಯವನ್ನು ಕೇವಲ 40 ಸಾವಿರ ರೂಪಾಯಿ ಎಂದು ನಮೂದಿಸಿದ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂಬ ಆರೋಪ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಇದು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಸ್ವಜನಪಕ್ಷಪಾತದ ಸ್ಪಷ್ಟ ಉದಾಹರಣೆ ಎಂದು ಆರೋಪಿಸಿರುವ ಅವರು, ಸರ್ಕಾರಿ ಉದ್ಯೋಗಕ್ಕಾಗಿ ಲಕ್ಷಾಂತರ ಯುವಕರು ಹಗಲು-ರಾತ್ರಿ ಶ್ರಮಿಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಅಂತಹ ಸಂದರ್ಭದಲ್ಲಿ ನೇಮಕಾತಿ ಸಂಸ್ಥೆಯ ಮುಖ್ಯಸ್ಥರ ಮೇಲೆಯೇ ಇಂತಹ ಆರೋಪಗಳು ಕೇಳಿಬಂದರೆ ಅರ್ಹ ಅಭ್ಯರ್ಥಿಗಳ ವಿಶ್ವಾಸಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಶ್ನೆಪತ್ರ ಸೋರಿಕೆ, ನೇಮಕಾತಿ ಅಕ್ರಮ ಹಾಗೂ ಸ್ವಜನಪಕ್ಷಪಾತದಂತಹ ಪ್ರಕರಣಗಳಿಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತಿದೆ ಎಂದು ಯತ್ನಾಳ್ ಕಳವಳ ವ್ಯಕ್ತಪಡಿಸಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ವಿರುದ್ಧದ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದ ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಈ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ) ಗೆ ವಹಿಸಬೇಕು. ನೇಮಕಾತಿ ಅಕ್ರಮಗಳ ವಿಚಾರದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಲಿಫ್ಟ್ ಬಾಗಿಲಿನಲ್ಲಿ ತಲೆ ಸಿಲುಕಿ 22 ವರ್ಷದ ಯುವಕ ದಾರುಣ ಸಾವು!

0

ಬೆಂಗಳೂರು: ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್‌ವೊಂದರಲ್ಲಿ ಸರಕು ಸಾಗಿಸುವ ಲಿಫ್ಟ್‌ನ ಬಾಗಿಲಿನಲ್ಲಿ ತಲೆ ಸಿಲುಕಿ 22 ವರ್ಷದ ಯುವಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತನನ್ನು ಧಾರವಾಡ ಮೂಲದ ರಾಜೇಶ್ (22) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ದಕ್ಷಿಣ ಉಪಹಾರ ಹೋಟೆಲ್‌ನಲ್ಲಿ ಈ ಅವಘಡ ಸಂಭವಿಸಿದೆ.

ರಾಜೇಶ್ ಹೋಟೆಲ್ ಮಾಲೀಕ ಅವಿನಾಶ್ ಅವರ ಸ್ನೇಹಿತನಾಗಿದ್ದು, ಸ್ವತಃ ಹೊಸ ಹೋಟೆಲ್ ಆರಂಭಿಸುವ ಉದ್ದೇಶದಿಂದ ಹೋಟೆಲ್ ನಿರ್ವಹಣೆ ಹಾಗೂ ಕೆಲಸದ ಅನುಭವ ಪಡೆಯಲು ಅಲ್ಲಿಗೆ ಬಂದಿದ್ದನು.

ಈ ವೇಳೆ ಸರಕು ಸಾಗಿಸುವ ಲಿಫ್ಟ್ ಬಳಸುತ್ತಿದ್ದಾಗ, ಲಿಫ್ಟ್ ಬಾಗಿಲಿನ ಹೊರಭಾಗಕ್ಕೆ ತಲೆ ಹಾಕಿದ್ದ ಸಂದರ್ಭದಲ್ಲಿ ಬಾಗಿಲಿನಲ್ಲಿ ತಲೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆಯ ಬಳಿಕ ಹೋಟೆಲ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಮಾಹಿತಿ ತಿಳಿದು ಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಿಫ್ಟ್ ಸುರಕ್ಷತಾ ಕ್ರಮಗಳು ಹಾಗೂ ಅವಘಡಕ್ಕೆ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಮೆರಿಕ ಮಹಿಳೆ ಅತ್ಯಾಚಾರ ಪ್ರಕರಣ: ಅಕ್ರಮ ಬಂಧನಕ್ಕೆ ಮಾಲೀಕರಿಗೆ ₹5 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: ಕೊಡಗಿನ ಹೋಂಸ್ಟೇಯೊಂದರಲ್ಲಿ ಅಮೆರಿಕದ ಮಹಿಳಾ ಪ್ರವಾಸಿಯ ಮೇಲೆ ನಡೆದಿರುವುದಾಗಿ ಆರೋಪಿಸಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕರನ್ನು ಅಕ್ರಮವಾಗಿ ಬಂಧಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಅವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಹೋಂಸ್ಟೇ ಮಾಲೀಕ ಪಿ. ಪೊನ್ನಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಆದರೆ, ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿರುವ ಕಾರಣ ಈ ಹಂತದಲ್ಲಿ ಎಫ್‌ಐಆರ್ ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ.

ಪ್ರಕರಣದ ತನಿಖೆಯಲ್ಲಿ ಈಗಲೇ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ತನಿಖೆ ಮುಂದುವರಿಯಬೇಕೆಂದು ಸ್ಪಷ್ಟಪಡಿಸಿದೆ. ಆದರೆ, ಅರ್ಜಿದಾರರ ಬಂಧನ ಕಾನೂನುಬಾಹಿರವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಅವರು ಪರಿಹಾರ ಪಡೆಯಲು ಅರ್ಹರು ಎಂದು ಹೇಳಿದೆ.

ನ್ಯಾಯಾಲಯದ ಆದೇಶದಂತೆ, ಅಕ್ರಮ ಬಂಧನಕ್ಕೆ ಪರಿಹಾರವಾಗಿ 5 ಲಕ್ಷ ರೂಪಾಯಿಯನ್ನು ನಾಲ್ಕು ವಾರಗಳೊಳಗೆ ಪಿ. ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರ ಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರು ಯಾವುದೇ ಅತ್ಯಾಚಾರ ಎಸಗಿಲ್ಲ. ಎಫ್‌ಐಆರ್‌ನಲ್ಲಿ ಅವರ ವಿರುದ್ಧ ಅಂತಹ ಆರೋಪವಿಲ್ಲದಿದ್ದರೂ, ನಂತರದ ಹಂತದಲ್ಲಿ ‘ಸಾಮಾನ್ಯ ಉದ್ದೇಶ’ ಎಂಬ ಅಂಶವನ್ನು ಸೇರಿಸಿ ಬಂಧಿಸಲಾಗಿದೆ ಎಂದು ವಾದಿಸಿದರು. ಅಲ್ಲದೆ, ಘಟನೆ ನಡೆದ ವೇಳೆ ಪೊನ್ನಪ್ಪ ಹೋಂಸ್ಟೇಯಲ್ಲೇ ಇರಲಿಲ್ಲ ಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸಾಕ್ಷ್ಯಗಳನ್ನು ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಹೋಂಸ್ಟೇ ಮಾಲೀಕರು ಸಂತ್ರಸ್ತ ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ದಿನ ಅಲ್ಲೇ ಉಳಿಯುವಂತೆ ಒತ್ತಾಯಿಸಿದ್ದು, ಹೊರಗಿನವರೊಂದಿಗೆ ಸಂಪರ್ಕ ಸಾಧಿಸದಂತೆ ನಿರ್ಬಂಧಿಸಿದ್ದರೆಂಬ ಆರೋಪಗಳಿವೆ ಎಂದು ಪೀಠದ ಗಮನಕ್ಕೆ ತಂದರು.

ಪ್ರಕರಣದ ಹಿನ್ನೆಲೆ

ಏಪ್ರಿಲ್ 12ರಂದು ಅಮೆರಿಕದ ಮಹಿಳಾ ಪ್ರವಾಸಿ ಕೊಡಗಿನ ಹೋಂಸ್ಟೇಗೆ ಬಂದಿದ್ದ ವೇಳೆ, ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಹೋಂಸ್ಟೇ ಸಿಬ್ಬಂದಿಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬಳಿಕ ಹೋಂಸ್ಟೇ ಮಾಲೀಕನ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 64(1) (ಅತ್ಯಾಚಾರ), 351(2) (ಕ್ರಿಮಿನಲ್ ಬೆದರಿಕೆ), 238 ಹಾಗೂ 239 (ಅಪರಾಧಕ್ಕೆ ಸಂಬಂಧಿಸಿದ ಮಾಹಿತಿ ಮರೆಮಾಚುವುದು ಮತ್ತು ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ಏಪ್ರಿಲ್ 19ರಂದು ಪಿ. ಪೊನ್ನಪ್ಪ ಅವರನ್ನು ಬಂಧಿಸಲಾಗಿತ್ತು. ತಮ್ಮ ಬಂಧನ ಅಕ್ರಮವಾಗಿದ್ದು, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ ಅವರು, ಎಫ್‌ಐಆರ್ ರದ್ದುಪಡಿಸುವುದರ ಜೊತೆಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಅವರ ಬಂಧನವನ್ನು ಅಕ್ರಮ ಎಂದು ಘೋಷಿಸಿ, 5 ಲಕ್ಷ ರೂಪಾಯಿ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಅಪ್ಪನ ನೆನಪಿನೊಂದಿಗೆ ಹೊಸ ಪಯಣ: ಪುನೀತ್ ಪುತ್ರಿ ವಂದಿತಾ ಹೊಸ ಬ್ಯುಸಿನೆಸ್‌ ಆರಂಭ

ಬೆಂಗಳೂರು: ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ವಂದಿತಾ ರಾಜ್‌ಕುಮಾರ್ ಇದೀಗ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಗುರುತು ಮೂಡಿಸಲು ಮುಂದಾಗಿದ್ದಾರೆ. ಬೇಕಿಂಗ್ ಮೇಲಿನ ತಮ್ಮ ಆಸಕ್ತಿಯನ್ನು ಬ್ಯುಸಿನೆಸ್ ಆಗಿ ಪರಿವರ್ತಿಸಿರುವ ಅವರು, ತಂದೆ ಪ್ರೀತಿಯಿಂದ ಕರೆಯುತ್ತಿದ್ದ ‘ನುಕಾ’ ಹೆಸರಿನಲ್ಲೇ ‘ನುಕಾಸ್ ಕೆಫೆ’ ಆರಂಭಿಸಿದ್ದಾರೆ.

ವಂದಿತಾ ಅವರಿಗೆ ಬೇಕಿಂಗ್ ಒಂದು ಹವ್ಯಾಸವಾಗಿತ್ತು. ಕುಟುಂಬದ ಕಾರ್ಯಕ್ರಮಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಕೇಕ್‌ಗಳನ್ನು ತಯಾರಿಸುತ್ತಿದ್ದ ಅವರು, ಇದೀಗ ಅದನ್ನೇ ವೃತ್ತಿಪರವಾಗಿ ಆರಂಭಿಸಿದ್ದಾರೆ.

ಇತ್ತೀಚೆಗೆ ಸಹೋದರ ವಿನಯ್ ರಾಜ್‌ಕುಮಾರ್ ಅವರ ‘ಗ್ರಾಮಾಯಣ’ ಸಿನಿಮಾದ ಸಂದರ್ಭದಲ್ಲಿ ವಂದಿತಾ ವಿಶೇಷ ಕೇಕ್ ತಯಾರಿಸಿ ಗಮನ ಸೆಳೆದಿದ್ದರು. ಅದರ ಮೇಲೂ ‘ಗ್ರಾಮಾಯಣ’ ಎಂದು ಬರೆದು ಸಹೋದರನಿಗೆ ಶುಭ ಹಾರೈಸಿದ್ದರು.

ಈಗ ತಮ್ಮ ಪ್ರತಿಭೆ ಮತ್ತು ಆಸಕ್ತಿಗೆ ಹೊಸ ರೂಪ ನೀಡಿರುವ ವಂದಿತಾ, ಮನೆಯಲ್ಲಿ ತಯಾರಿಸಿದ ವಿವಿಧ ಬೇಕರಿ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುತ್ತಿದ್ದಾರೆ.

ತಿರಮಿಸು, ವಿವಿಧ ಬಗೆಯ ಕೇಕ್‌ಗಳು, ಕುಕೀಸ್, ಬ್ರೆಡ್, ಬ್ರೌನಿ, ಚೀಸ್ ಕೇಕ್ ಹಾಗೂ ಕಪ್ ಕೇಕ್‌ಗಳು ‘ನುಕಾಸ್ ಕೆಫೆ’ಯ ಪ್ರಮುಖ ಉತ್ಪನ್ನಗಳಾಗಿವೆ.

ಅಪ್ಪು ಅವರ ನೆನಪನ್ನು ಜೊತೆಯಲ್ಲಿಟ್ಟುಕೊಂಡು ಆರಂಭಿಸಿರುವ ಈ ಹೊಸ ಉದ್ಯಮಕ್ಕೆ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.