Home Blog Page 26

ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ

0

ಬೆಂಗಳೂರು: ತನ್ನ ದೊಡ್ಡಮ್ಮ ಮನೆಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಯಾರಿಗೂ ತಿಳಿಯದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪದಡಿ ಸಹೋದರಿ ಮಗನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿ ನಿವಾಸಿ ಶರತ್ (31) ಬಂಧಿತ ಆರೋಪಿ. ಈತನಿಂದ ₹36 ಲಕ್ಷ ಮೌಲ್ಯದ 241 ಗ್ರಾಂ ಚಿನ್ನಾಭರಣ, 2.8 ಕೆ.ಜಿ ಬೆಳ್ಳಿ ಹಾಗೂ ₹1.30 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತ್ಯಾಗರಾಜನಗರದ ಮನೆಯೊಂದರಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಈ ಕೃತ್ಯ ನಡೆದಿತ್ತು. ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಮಾಲಕಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಅವರ ಮಗಳು ಹೈದರಾಬಾದ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ 25 ವರ್ಷಗಳಿಂದ ದೂರುದಾರರ ಮನೆಯಲ್ಲಿ ಆರೋಪಿ ದೊಡ್ಡಮ್ಮ ಮನೆಕೆಲಸ ಮಾಡುತ್ತಿದ್ದರು. ನಂಬಿಕೆಯ ಮೇರೆಗೆ ಮನೆಯ ಮತ್ತೊಂದು ಬೀಗದ ಕೀಯನ್ನು ಮನೆಕೆಲಸದಾಕೆಗೆ ನೀಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೊಡ್ಡಮ್ಮಗೆ ಊಟ ನೀಡಲು ಶರತ್ ಆಗಾಗ ಮಾಲೀಕರ ಮನೆಗೆ ಬರುತ್ತಿದ್ದ. ಈ ವೇಳೆ ಮನೆ ಮಾಲೀಕರು ಇಲ್ಲದಿರುವುದನ್ನು ಗಮನಿಸಿದ ಆತ, ಕಳವು ಮಾಡಲು ಸಂಚು ರೂಪಿಸಿದ್ದ. ದೊಡ್ಡಮ್ಮಗೆ ತಿಳಿಯದಂತೆ ಆಕೆ ಬಳಿಯಿದ್ದ ಬೀಗದ ಕೀ ಪಡೆದು ಕಳೆದ ವರ್ಷ ಅಕ್ಟೋಬರ್ 22ರಂದು ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನುಮಾನದ ಮೇರೆಗೆ ಮನೆಕೆಲಸದಾಕೆಯನ್ನು ವಿಚಾರಣೆ ನಡೆಸಿದಾಗ, ಕೃತ್ಯದ ಬಗ್ಗೆ ತಾನು ಏನೂ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ತಾಂತ್ರಿಕ ತನಿಖೆ ನಡೆಸಿದರೂ ಆರಂಭದಲ್ಲಿ ಆರೋಪಿಯ ಪತ್ತೆಯಾಗಿರಲಿಲ್ಲ. ನಂತರ ಮತ್ತೊಮ್ಮೆ ವಿಚಾರಣೆ ವೇಳೆ ಮನೆಕೆಲಸದಾಕೆಯ ಮನೆಯಲ್ಲಿದ್ದ ಶರತ್‌ನನ್ನು ತೀವ್ರವಾಗಿ ಪ್ರಶ್ನಿಸಿದಾಗ, ಕೃತ್ಯವೆಸಗಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸಾಲಬಾಧೆ, ಹಳೆಯ ಕೊಲೆ ಪ್ರಕರಣ, ಮಾನಸಿಕ ಒತ್ತಡ: ರಾಜಗೀರ್‌ನಲ್ಲಿ ನಾಲ್ವರು ಆತ್ಮಹತ್ಯೆ ಪ್ರಕರಣದ ಬೆಚ್ಚಿಬೀಳಿಸುವ ಸತ್ಯ ಬಯಲು

0

ಬೆಂಗಳೂರು/ನಳಂದ: ಬಿಹಾರದ ರಾಜಗೀರ್‌ನ ಜೈನ ಧರ್ಮಶಾಲೆಯಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವು ಹಲವು ಭಯಾನಕ ಸಂಗತಿಗಳನ್ನು ಬಹಿರಂಗಪಡಿಸಿದೆ. ಕುಟುಂಬ ಕಲಹ, ಸಾಲಬಾಧೆ, ನಿರುದ್ಯೋಗ ಮತ್ತು ಹಳೆಯ ಕೊಲೆ ಪ್ರಕರಣದ ಮಾನಸಿಕ ಒತ್ತಡ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ನಳಂದ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜಿ.ಆರ್.ಸುಮಂಗಲಾ (78), ಅವರ ಮಗ ಜಿ.ಆರ್.ನಾಗಪ್ರಸಾದ್ (50), ಪುತ್ರಿಯರಾದ ಜಿ.ಆರ್.ಶಿಲ್ಪಾ (48) ಹಾಗೂ ಆರ್.ಶ್ರುತಾ (43) ಫೆಬ್ರವರಿ 6ರಂದು ರಾಜಗೀರ್‌ನ ದಿಗಂಬರ ಜೈನ ಧರ್ಮಶಾಲೆಯ ಕೊಠಡಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತನಿಖೆಯ ಬಳಿಕ ನಾಲ್ವರೂ ಆತ್ಮಹತ್ಯೆಗೆ ಶರಣಾಗಿರುವುದು ದೃಢಪಟ್ಟಿದೆ.

ಈ ಪ್ರಕರಣದ ತನಿಖೆಗಾಗಿ ನಳಂದ ಪೊಲೀಸರು ಈಗ ಕರ್ನಾಟಕಕ್ಕೆ ಭೇಟಿ ನೀಡಲು ತೀರ್ಮಾನಿಸಿದ್ದು, ಮೃತರ ಕುಟುಂಬ ಹಿನ್ನೆಲೆ, ಆರ್ಥಿಕ ಸ್ಥಿತಿ ಮತ್ತು ಮಾನಸಿಕ ಒತ್ತಡದ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. ಸಂಬಂಧಿಕರು ಈಗಾಗಲೇ ಬಿಹಾರಕ್ಕೆ ಬಂದು ಪೊಲೀಸರಿಗೆ ಮಹತ್ವದ ವಿವರಗಳನ್ನು ನೀಡಿದ್ದಾರೆ ಎಂದು ರಾಜಗೀರ್ ಪೊಲೀಸ್ ಠಾಣಾಧಿಕಾರಿ ರಮಣ್ ಕುಮಾರ್ ತಿಳಿಸಿದ್ದಾರೆ.

ತನಿಖೆಯ ವೇಳೆ, ಕುಟುಂಬವು ಕೊಠಡಿಯಿಂದ ವಶಪಡಿಸಿಕೊಂಡ 1.18 ಲಕ್ಷ ರೂ. ನಗದು ಹಾಗೂ ಆಭರಣಗಳನ್ನು ಜೈನ ಧರ್ಮಶಾಲೆಗೆ ದಾನ ಮಾಡಿರುವುದು ತಿಳಿದುಬಂದಿದೆ. ಮೃತ ನಾಗಪ್ರಸಾದ್ ಅವರು ಆನ್‌ಲೈನ್ ಗೇಮ್ ಗೀಳಿಗೆ ಬಿದ್ದ ಅಳಿಯನನ್ನು ಆಗಸ್ಟ್ ತಿಂಗಳಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲಿಗೆ ಹೋಗಿ, ಐದು ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.

ಎಂಜಿನಿಯರಿಂಗ್ ಪದವೀಧರರಾಗಿದ್ದ ನಾಗಪ್ರಸಾದ್ ನಿರುದ್ಯೋಗಿಯಾಗಿದ್ದು, ಕುಟುಂಬದ ಸಂಪೂರ್ಣ ಜವಾಬ್ದಾರಿ ಅವರ ಮೇಲೇ ಇದ್ದ ಕಾರಣ ತೀವ್ರ ಒತ್ತಡದಲ್ಲಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಕುಟುಂಬ ಜನವರಿ 31ರಂದು ನೇಪಾಳ ಮೂಲಕ ತೀರ್ಥಯಾತ್ರೆ ಕೈಗೊಂಡು ರಾಜಗೀರ್‌ಗೆ ಆಗಮಿಸಿತ್ತು.

ಸಾಲಬಾಧೆ, ಸಾಮಾಜಿಕ ಸಂಪರ್ಕದ ಕೊರತೆ ಹಾಗೂ ಮಾನಸಿಕ ಆತಂಕ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಅನುಮಾನವನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಎಫ್‌ಎಸ್‌ಎಲ್ ವರದಿ ಬಂದ ನಂತರ ಪ್ರಕರಣದ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ. ಮೃತರ ಬಟ್ಟೆಗಳನ್ನು ನಾಶಮಾಡಲು ಕುಟುಂಬವು ಒಪ್ಪಿಗೆ ನೀಡಿದ್ದು, ಒಂದು ಎಕರೆ ಭೂಮಿಯನ್ನು ಜೈನ ಧರ್ಮಶಾಲೆಗೆ ದಾನ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ನಳಂದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ

0

ಚಾಮರಾಜನಗರ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ನಡೆಯುತ್ತಿರುವ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಪಾದಯಾತ್ರೆಯ ವೇಳೆ ಚಿರತೆ ದಾಳಿ ನಡೆದಿದ್ದು, 8 ವರ್ಷದ ಬಾಲಕ ಗಾಯಗೊಂಡಿರುವ ಘಟನೆ ಭಕ್ತಾದಿಗಳಲ್ಲಿ ಭಯ ಹುಟ್ಟಿಸಿದೆ.

ಚನ್ನಪಟ್ಟಣ ತಾಲೂಕಿನ ಭುವಳ್ಳಿ ಗ್ರಾಮದ ಶ್ರೇಯಸ್ ಎಂಬ ಬಾಲಕ, ಪೊನ್ನಾಚಿ ಕ್ರಾಸ್‌ನಿಂದ ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟದತ್ತ ತೆರಳುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಗೆ ಒಳಗಾಗಿದ್ದಾನೆ. ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ತೆರಳುತ್ತಿರುವ ಹಿನ್ನೆಲೆ ಈ ಘಟನೆ ಗಂಭೀರವಾಗಿ ಪರಿಗಣಿಸಲಾಗಿದೆ.

ಅರಣ್ಯ ಮಾರ್ಗದಲ್ಲಿ ಸಾಗುತ್ತಿದ್ದ ಪಾದಯಾತ್ರಿಕರ ಗುಂಪಿನ ನಡುವೆ ಚಿರತೆ ಕಾಣಿಸಿಕೊಂಡಿದ್ದು, ಬಾಲಕನ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಭಕ್ತಾದಿಗಳ ಚೀರಾಟಕ್ಕೆ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಗಾಯಗೊಂಡ ಬಾಲಕನನ್ನು ತಕ್ಷಣವೇ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಗದೀಶ್ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪಾದಯಾತ್ರಿಕರು ಒಂದು ದೊಡ್ಡ ಚಿರತೆ ಹಾಗೂ ಒಂದು ಚಿಕ್ಕ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಘಟನೆಯ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ಪ್ರಕಟಿಸಿದ್ದು, ಭಕ್ತಾದಿಗಳು ಅರಣ್ಯ ಮಾರ್ಗದ ಮೂಲಕ ಪಾದಯಾತ್ರೆ ನಡೆಸದೇ ಮುಖ್ಯ ರಸ್ತೆಯ ಮೂಲಕ ಸಾಗಬೇಕು ಎಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಭದ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ರೈತರಿಗೆ ಕನ್ಯಾ ಕೊಡುವವರಿಗೆ ₹2 ಲಕ್ಷ ಸಹಾಯಧನ ನೀಡಿ: ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಮನವಿ

0

ಗದಗ: ರೈತ ಕುಟುಂಬಗಳಿಗೆ ಕನ್ಯಾ ಕೊಡುವವರಿಗೆ ಸರ್ಕಾರ ₹2 ಲಕ್ಷ ಸಹಾಯಧನ ನೀಡಬೇಕು ಎಂದು ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಮಾನಗಳಲ್ಲಿ ರೈತರಿಗೆ ಕನ್ಯಾ ಕೊಡುವ ಕುಟುಂಬಗಳಿಗೆ ಸರ್ಕಾರದಿಂದ ಸಹಾಯಧನ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿದರು.

ಈ ಹಿಂದೆಯೂ ಇದೇ ವಿಚಾರವನ್ನು ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದಾಗಿ ತಿಳಿಸಿದ ಸ್ವಾಮೀಜಿ, ಇತ್ತೀಚಿನ ದಿನಗಳಲ್ಲಿ ರೈತರಿಗೆ ಕನ್ಯಾ ಕೊಡುವುದು ಕಡಿಮೆಯಾಗುತ್ತಿದೆ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರೈತ ಕುಟುಂಬಗಳು ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವುದರಿಂದ ವಿವಾಹ ಸಂಬಂಧಗಳಲ್ಲೂ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಹೇಳಿದರು.

ನಗೆ ಚಟಾಕಿಯ ಜೊತೆಗೆ ಮಾತನಾಡಿದ ಸ್ವಾಮೀಜಿ, ವರ–ಕನ್ಯಾ ಸಮಸ್ಯೆಯ ಗಂಭೀರತೆಯನ್ನು ಉಲ್ಲೇಖಿಸಿ, ರೈತ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು ಎಂದು ಹೇಳಿದರು.

ಮಂಗಳೂರು ಆಸ್ಪತ್ರೆಗೆ ಹೊರಟಿದ್ದ ಯಾತ್ರಾರ್ಥಿ ಉಡುಪಿಯಲ್ಲಿ ನಿಗೂಢ ಸಾವು

0

ಉಡುಪಿ: ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಯಾತ್ರಾರ್ಥಿಯೊಬ್ಬರು ಉಡುಪಿಯ ವಸತಿಗೃಹದಲ್ಲಿ ನಿಗೂಢವಾಗಿ ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಹಳೆ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಲಾಡ್ಜ್‌ನ ಕೊಠಡಿಯಲ್ಲಿ ಕುಳಿತ ಕುರ್ಚಿಯಲ್ಲೇ ವ್ಯಕ್ತಿ ಮೃತಪಟ್ಟಿರುವುದು ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ದಾವಣಗೆರೆ ಮೂಲದ ಮಹಾಂತೇಶ ಎಂ.ಜಿ ಎಂದು ಗುರುತಿಸಲಾಗಿದೆ. ಕೊಠಡಿಯಿಂದ ಅವರು ದೀರ್ಘ ಕಾಲ ಹೊರಬಾರದಿದ್ದರಿಂದ ಲಾಡ್ಜ್ ಸಿಬ್ಬಂದಿಗೆ ಅನುಮಾನ ಉಂಟಾಗಿ, ಬಾಗಿಲು ತೆರೆದು ನೋಡಿದಾಗ ವ್ಯಕ್ತಿ ಪ್ರಾಣ ಕಳೆದುಕೊಂಡಿರುವುದು ಗೊತ್ತಾಗಿದೆ.

ಮೃತ ಮಹಾಂತೇಶ ಅವರು ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ತೆರಳುತ್ತಿರುವುದಾಗಿ ಕುಟುಂಬದವರಿಗೆ ತಿಳಿಸಿ ಮನೆಯಿಂದ ಹೊರಟಿದ್ದರೆಂದು ಹೇಳಲಾಗಿದೆ. ಆದರೆ ಮಧ್ಯದಲ್ಲಿ ಉಡುಪಿಯಲ್ಲಿ ತಂಗಿದ್ದ ಸಂದರ್ಭದಲ್ಲೇ ಈ ಅಕಾಲಿಕ ಸಾವು ಸಂಭವಿಸಿದೆ.

ಸುದ್ದಿ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆಯ ಎಸ್‌ಐ ನಾರಾಯಣ, ಎಎಸ್‌ಐ ಹರೀಶ್ ಹಾಗೂ ಹೆಡ್ ಕಾನ್‌ಸ್ಟೇಬಲ್ ಆಶಾಲತಾ ಸ್ಥಳಕ್ಕೆ ಆಗಮಿಸಿ, ಮೃತನ ಪತ್ನಿ ಮತ್ತು ಅಣ್ಣನ ಎದುರಲ್ಲೇ ಮಹಜರ್ ಸೇರಿದಂತೆ ಕಾನೂನು ಪ್ರಕ್ರಿಯೆಗಳನ್ನು ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಈ ಕಾರ್ಯದಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕಾರ ನೀಡಿದ್ದಾರೆ. ಸಾವಿಗೆ ಸ್ಪಷ್ಟ ಕಾರಣ ಇನ್ನೂ ದೃಢಪಟ್ಟಿಲ್ಲ. ಅನಾರೋಗ್ಯವೇ ಸಾವಿಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ರಣಜಿ ಕ್ವಾರ್ಟರ್ ಫೈನಲ್: ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ ಮೊಹಮ್ಮದ್ ಶಮಿ

0

ಬೆಂಗಾಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆಂಧ್ರ ಪ್ರದೇಶ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಾಲ್ ತಂಡದ ನಾಯಕ ಅಭಿಮನ್ಯು ಈಶ್ವರನ್ ಮೊದಲು ಬೌಲಿಂಗ್ ಆಯ್ದುಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಆಂಧ್ರ ಪ್ರದೇಶ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 295 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಬೆಂಗಾಲ್ ತಂಡ ಭರ್ಜರಿ ಪ್ರದರ್ಶನ ತೋರಿತು. ತಂಡದ ಪರ ಸುದೀಪ್ ಕುಮಾರ್ ದ್ವಿಶತಕ ಸಿಡಿಸಿ ಇನಿಂಗ್ಸ್‌ಗೆ ಆಧಾರ ನೀಡಿದರು. ಸುಮಂತ ಗುಪ್ತಾ 81 ರನ್‌ಗಳ ಸಹಾಯಕ ಇನಿಂಗ್ಸ್ ಆಡಿದರೆ, ಶಕೀರ್ ಹಬೀಬಿ 95 ರನ್‌ಗಳೊಂದಿಗೆ ಶತಕದಂಚಿಗೆ ತಲುಪಿದರು.

ಕೆಳ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದ ಮೊಹಮ್ಮದ್ ಶಮಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಕೇವಲ 33 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 7 ಫೋರ್‌ಗಳ ನೆರವಿನಿಂದ 53 ರನ್ ಚಚ್ಚಿ ಅರ್ಧಶತಕ ಪೂರೈಸಿದರು. ಶಮಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೆಂಗಾಲ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 629 ರನ್ ಕಲೆಹಾಕಿತು.

ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಂಧ್ರ ಪ್ರದೇಶ ತಂಡವು 30 ಓವರ್‌ಗಳ ಅಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ಐದನೇ ದಿನದಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯ ಡ್ರಾಗೊಳ್ಳುವ ಅಥವಾ ಬೆಂಗಾಲ್ ತಂಡ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ.

ಈ ಪರಿಸ್ಥಿತಿಯಲ್ಲಿ ಮೂರನೇ ಕ್ವಾರ್ಟರ್ ಫೈನಲ್ ಮೂಲಕ ಬೆಂಗಾಲ್ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ನಿರೀಕ್ಷೆ ಮೂಡಿದೆ.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ NCP ನಾಯಕ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ

0

ಪುಣೆ: ಎನ್‌ಸಿಪಿಯ ಹಿರಿಯ ನಾಯಕಿ ಸುನೇತ್ರಾ ಪವಾರ್ ಇಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಚಿವಾಲಯಕ್ಕೆ ಆಗಮಿಸಿ ಅವರು ತಮ್ಮ ಕರ್ತವ್ಯಗಳನ್ನು ಆರಂಭಿಸಿದ್ದಾರೆ. ರಾಜ್ಯದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿರುವುದರಿಂದ ಸುನೇತ್ರಾ ಪವಾರ್ ಅವರ ಅಧಿಕಾರ ಸ್ವೀಕಾರ ಮಹಾರಾಷ್ಟ್ರ ರಾಜಕೀಯದಲ್ಲಿ ಐತಿಹಾಸಿಕ ಕ್ಷಣವಾಗಿದೆ.

ಸುನೇತ್ರಾ ಪವಾರ್ ಅವರ ಪತಿ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಹಠಾತ್ ನಿಧನದ ಬಳಿಕ, ಈ ಮಹತ್ವದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸುವ ಮೊದಲು ಅವರು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ದಾದರ್‌ನ ಚೈತ್ಯಭೂಮಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪನಮನ ಸಲ್ಲಿಸಿದರು.

ಅನಂತರ ಸುನೇತ್ರಾ ಪವಾರ್ ತಮ್ಮ ಹಿರಿಯ ಪುತ್ರ ಪಾರ್ಥ್ ಪವಾರ್ ಹಾಗೂ ಎನ್‌ಸಿಪಿಯ ಹಿರಿಯ ನಾಯಕರೊಂದಿಗೆ ಸಚಿವಾಲಯಕ್ಕೆ ತೆರಳಿ ಅಧಿಕಾರ ಸ್ವೀಕರಿಸಿದರು. ಅವರಿಗೆ ಈ ಹಿಂದೆ ಅಜಿತ್ ಪವಾರ್ ವಹಿಸಿಕೊಂಡಿದ್ದ ಅದೇ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಜನವರಿ 31ರಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಪವಾರ್ ಅವರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದ್ದರು.

ಬಿಕ್ಲು ಶಿವ ಕೊಲೆ ಪ್ರಕರಣ: ಜಾಮೀನು ಅರ್ಜಿ ವಜಾ – ಬೈರತಿ ಬಸವರಾಜ್ʼಗೆ ಬಂಧನದ ಭೀತಿ

0

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇಂದು (ಫೆಬ್ರವರಿ 10) ವಜಾಗೊಳಿಸಿದೆ. ಈ ಮೂಲಕ ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಶಾಸಕರಿಗೆ ಬಂಧನದ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲೂ ಬೈರತಿ ಬಸವರಾಜ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ವಿದೇಶಕ್ಕೆ ಪರಾರಿಯಾಗುವ ಶಂಕೆಯ ಹಿನ್ನೆಲೆಯಲ್ಲಿ ಅವರ ವಿರುದ್ಧ ಈಗಾಗಲೇ ‘ಲುಕ್‌ಔಟ್‌ ನೋಟಿಸ್’ ಜಾರಿಯಲ್ಲಿದೆ. ಈ ನಡುವೆ ಸಿಐಡಿ ಪೊಲೀಸರು ಹೊರರಾಜ್ಯಗಳ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ, ಶಾಸಕರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಳೆದ ವರ್ಷದ ಜುಲೈ 15ರಂದು ಬೆಂಗಳೂರಿನ ಹಲಸೂರು ಪ್ರದೇಶದಲ್ಲಿ ನಡೆದ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ, ಪ್ರಮುಖ ಆರೋಪಿ ರೌಡಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಬೈರತಿ ಬಸವರಾಜ್ ಅವರಿಗೆ ನೇರ ಸಂಪರ್ಕವಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹತ್ಯೆಗೆ ಮುನ್ನ ಶಾಸಕರು ಹತ್ತಾರು ಬಾರಿ ಜಗ್ಗನನ್ನು ಭೇಟಿ ಮಾಡಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.

ಶಾಸಕರ ವಿರುದ್ಧ ಕೆಲ ಪ್ರಮುಖ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಅವರನ್ನು ಬಂಧಿಸುವ ಅಗತ್ಯವಿದೆ ಎಂದು ಸಿಐಡಿ ಮೂಲಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಶಾಸಕರ ಬಂಧನ ಸಂಭವಿಸಬಹುದಾಗಿದೆ.

ರಾಜಕೀಯದಿಂದ ನಾಪತ್ತೆಯಾಗಿಲ್ಲ, ಶೀಘ್ರವೇ ಸಕ್ರಿಯ ರಾಜಕೀಯಕ್ಕೆ ಮರಳುತ್ತೇನೆ: ರೋಷನ್ ಬೇಗ್

0

ನವದೆಹಲಿ: ನಾನು ರಾಜಕೀಯದಿಂದ ನಾಪತ್ತೆಯಾಗಿಲ್ಲ. ಎಲ್ಲರೂ ಸೇರಿ ನನ್ನನ್ನು ಕೋರ್ಟ್ ಕೇಸ್‌ಗಳಲ್ಲಿ ಸಿಲುಕಿಸಿದ್ದರು. ಈಗ ನಿಧಾನವಾಗಿ ಅವುಗಳಿಂದ ಹೊರಬರುತ್ತಿದ್ದೇನೆ. ರಾಜಕೀಯ ನನ್ನ ರಕ್ತದಲ್ಲಿದೆ. ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಸಕ್ರಿಯ ರಾಜಕೀಯಕ್ಕೆ ಮರಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ.

ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಾನು ಚಿಕ್ಕಪ್ಪ–ದೊಡ್ಡಪ್ಪರ ಮೂಲಕ ರಾಜಕೀಯಕ್ಕೆ ಬಂದವನಲ್ಲ.

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಈಗಾಗಲೇ ರಾಜಕೀಯವಾಗಿ ಮತ್ತೆ ಸಕ್ರಿಯವಾಗುತ್ತಿದ್ದೇನೆ. ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಸೂಕ್ತ ಸಮಯದಲ್ಲಿ ಹೇಳುತ್ತೇನೆ. ನಾನು ಮನೆಯಲ್ಲಿ ಮಲಗಿರುವವನಲ್ಲ, ರಾಜಕೀಯಕ್ಕೆ ಮರಳುವುದು ಖಚಿತ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ದೇಶದಾದ್ಯಂತ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ‘ಇಂಡಿಯನ್ ಮುಸ್ಲಿಂ ಫಾರ್ ಪ್ರೋಗ್ರೆಸ್ ಅಂಡ್ ರಿಫಾರ್ಮ್ಸ್’ ಸಂಘಟನೆಯ ವತಿಯಿಂದ ದೇಶದ ಪ್ರಮುಖ ಮುಸ್ಲಿಂ ನಾಯಕರ ನಿಯೋಗವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ಉತ್ತರಾಖಂಡ, ಅಸ್ಸಾಂ ಹಾಗೂ ಉತ್ತರ ಪ್ರದೇಶಗಳಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಸ್ಸಾಂ ಮುಖ್ಯಮಂತ್ರಿ ಮುಸ್ಲಿಮರತ್ತ ಗನ್ ತೋರಿಸುವ ಹೇಳಿಕೆ ನೀಡುತ್ತಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು ಹಾಗೂ ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಇನ್‌ಸ್ಟಾಗ್ರಾಂ ಫೇಮಸ್ ಚಿನ್ನು ಪಾಪು ಕಾಸರಗೋಡಿನಲ್ಲಿ ನಿಗೂಢವಾಗಿ ಸಾವು

0

ಮಂಗಳೂರು: ಕಾಸರಗೋಡಿನ ಯುವ ಸೋಶಿಯಲ್ ಮೀಡಿಯಾ ಸಮುದಾಯಕ್ಕೆ ಚಿನ್ನು ಪಾಪು ರೇಷ್ಮಾ ಸಾವು ದೊಡ್ಡ ಆಘಾತವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಹೀಗೊಂದು ಪ್ರಖ್ಯಾತಿ ಹೊಂದಿದ್ದ ಯುವಕ/ಯುವತಿ ಸಾವು ಕೇವಲ ಸಾಮಾಜಿಕ ಪ್ರಭಾವದ ನಷ್ಟವಲ್ಲ, ಯುವಕರ ಮನೋವಿಜ್ಞಾನ ಮತ್ತು ಕುಟುಂಬ ಪ್ರಭಾವಗಳ ಬಗ್ಗೆ ಚಿಂತನೆ ಹುಟ್ಟಿಸುತ್ತದೆ.

ರೇಷ್ಮಾ, ತಮ್ಮ 4 ವರ್ಷದ ಮಗುವಿನೊಂದಿಗೆ ಬೇರೆ ವಾಸಿಸುತ್ತಿದ್ದರೂ, ಕಂಟೆಂಟ್ ಕ್ರಿಯೇಶನ್ ಮೂಲಕ ಯುವಕರಿಗೆ ಪ್ರೇರಣೆ ನೀಡುತ್ತಿದ್ದರು. ಆದರೆ, ಅಕಸ್ಮಾತ್ ಸಾವಿನಿಂದ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಭಾರೀ ಶೋಕದಲ್ಲಿದ್ದಾರೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಮೊಬೈಲ್ ಡೇಟಾ, ಸಮುದಾಯ ಚಟುವಟಿಕೆಗಳು, ಮತ್ತು ಮನೆಯ ಇತರೆ ಸುತ್ತಲೂ ಎಲ್ಲಾ ಆಯಾಮಗಳನ್ನು ಗಮನಿಸಿ ಶೀಘ್ರದಲ್ಲಿ ಸ್ಪಷ್ಟನೆ ನೀಡಲಿದ್ದಾರೆ. ಈ ಘಟನೆ ಯುವಕರಲ್ಲಿ ಸಾಮಾಜಿಕ ಒತ್ತಡ ಮತ್ತು ಮನೋವೈಕಲ್ಯಗಳ ಬಗ್ಗೆ ಅರಿವು ಮೂಡಿಸಲು ಸಹ ಕಾರಣವಾಗಲಿದೆ.

error: Content is protected !!