Home Blog Page 25

ರಿಲೀಸ್‌ಗೂ ಮುನ್ನವೇ ₹105 ಕೋಟಿ ಓವರ್ಸೀಸ್ ಡೀಲ್ ಮಾಡಿದ ಯಶ್‌ ನಟನೆಯ ‘ಟಾಕ್ಸಿಕ್’

‘ಕೆಜಿಎಫ್: ಚಾಪ್ಟರ್ 2’ ಮೂಲಕ ಜಾಗತಿಕ ಮಟ್ಟದಲ್ಲಿ ಅಬ್ಬರಿಸಿದ ರಾಕಿಂಗ್ ಸ್ಟಾರ್ ಯಶ್, ಇದೀಗ ‘ಟಾಕ್ಸಿಕ್’ ಚಿತ್ರದ ಮೂಲಕ ಮತ್ತೊಮ್ಮೆ ಭಾರತೀಯ ಸಿನೆಮಾ ಮಾರುಕಟ್ಟೆಯನ್ನು ನಡುಗಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಚಿತ್ರ ₹105 ಕೋಟಿ ಓವರ್ಸೀಸ್ ಅಡ್ವಾನ್ಸ್ ಡೀಲ್ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ಹಕ್ಕುಗಳು ಈಗಾಗಲೇ ₹120 ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದವು. ಇದೀಗ ಫಾರ್ಸ್ ಫಿಲ್ಮ್ ಸಂಸ್ಥೆ ವಿಶ್ವದಾದ್ಯಂತ ‘ಟಾಕ್ಸಿಕ್’ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಮಟ್ಟದ ವಿದೇಶಿ ವ್ಯವಹಾರಗಳಲ್ಲಿ ಒಂದಾಗಿ ದಾಖಲಾಗಿದೆ.

ಈ ಡೀಲ್ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಆವೃತ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇಂಗ್ಲಿಷ್ ಆವೃತ್ತಿಯ ಹಕ್ಕುಗಳು ಇನ್ನೂ ಬೇರೆ ಹಂತದಲ್ಲಿ ಇರುವುದರಿಂದ, ಮುಂದಿನ ದಿನಗಳಲ್ಲಿ ಮತ್ತೊಂದು ದೊಡ್ಡ ವ್ಯವಹಾರ ಸಾಧ್ಯತೆಗಳಿವೆ.

ಫಾರ್ಸ್ ಫಿಲ್ಮ್ಸ್ ಸಿಇಒ ಅಹಮದ್ ಗೋಲ್ಚಿನ್ ಹೇಳುವಂತೆ, “ಟಾಕ್ಸಿಕ್ ಕಥೆ ವಿಶ್ವದ ಪ್ರೇಕ್ಷಕರನ್ನು ತಲುಪಲಿದೆ. ಇದು ಗಡಿಗಳನ್ನು ಮೀರಿದ ಸಿನೆಮಾ ಅನುಭವ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಸಂಪೂರ್ಣ ಟೀಸರ್ ಅಥವಾ ಟ್ರೇಲರ್ ಬಿಡುಗಡೆಯಾಗಿಲ್ಲ. ಹೀರೋ ಇಂಟ್ರೋ ಟೀಸರ್ ಮಾತ್ರವೇ ಬಿಡುಗಡೆಯಾದರೂ ಚಿತ್ರಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಹವಾ ಸೃಷ್ಟಿಯಾಗಿದೆ. ಟ್ರೇಲರ್ ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ ಸಮೀಕರಣವೇ ಬದಲಾಗಬಹುದು ಎಂಬ ಮಾತು ಟ್ರೇಡ್ ವಲಯದಲ್ಲಿ ಕೇಳಿಬರುತ್ತಿದೆ.

ಮಾರ್ಚ್ 19ರಂದು ವಿಶ್ವದಾದ್ಯಂತ ‘ಟಾಕ್ಸಿಕ್’ ಬಿಡುಗಡೆಯಾಗಲಿದೆ. ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ನಟಿಸಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಿಸಿದೆ.

‘ಕೆಜಿಎಫ್ 2’ ಬಳಿಕ ಯಶ್ ಅಭಿನಯದ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ಮುಗಿಲೆತ್ತರದಲ್ಲಿದೆ. ಇದೇ ದಿನ ‘ಧುರಂಧರ್ 2’ ಕೂಡ ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್ ಕದನ ತೀವ್ರವಾಗಲಿದೆ.

‘ಧುರಂಧರ್’ ನಟ ರಣವೀರ್ ಸಿಂಗ್‌ಗೆ ಬೆದರಿಕೆ: ನಿವಾಸಕ್ಕೆ ಭದ್ರತೆ ಹೆಚ್ಚಿಸಿದ ಪೊಲೀಸರು

ಬಾಲಿವುಡ್‌ನಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ನಡೆದ ಕೆಲವೇ ದಿನಗಳಲ್ಲಿ ನಟ ರಣವೀರ್ ಸಿಂಗ್ ಅವರಿಗೆ ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ನಂತರ ಮುಂಬೈ ಪೊಲೀಸರು ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ನಿವಾಸದ ಬಳಿ ಕಠಿಣ ಭದ್ರತೆ ಒದಗಿಸಿದ್ದಾರೆ.

ಸೂತ್ರಗಳ ಪ್ರಕಾರ, ಕಿಡಿಗೇಡಿಗಳು ವಾಟ್ಸಪ್ ವಾಯ್ಸ್ ನೋಟ್ ಮೂಲಕ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ. ಈ ಹಿಂದೆ ಹಲವು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಪ್ರಕರಣದಲ್ಲೂ ಭಾಗಿಯಾಗಿರಬಹುದು ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.

ಬೆದರಿಕೆ ಬಂದ ಕೂಡಲೇ ರಣವೀರ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತಾಂತ್ರಿಕ ತಂಡಗಳು ವಾಯ್ಸ್ ನೋಟ್ ಮೂಲ ಪತ್ತೆ ಮಾಡಲು ಮುಂದಾಗಿವೆ.

ಭದ್ರತಾ ಕ್ರಮವಾಗಿ ನಟರ ನಿವಾಸದ ಸುತ್ತ ಶಸ್ತ್ರಾಸ್ತ್ರ ಹಿಡಿದ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, ದಂಪತಿಗಳೂ ಖಾಸಗಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಅಪಾರ್ಟ್‌ಮೆಂಟ್ ನಿವಾಸಿಗಳು ಈ ಬೆಳವಣಿಗೆಯಿಂದ ಆತಂಕಗೊಂಡಿದ್ದು, ಪೊಲೀಸರ ಬಳಿ ಭದ್ರತಾ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ.

‘ಧುರಂಧರ್’ ಚಿತ್ರದ ಭಾರೀ ಯಶಸ್ಸಿನ ನಂತರ ರಣವೀರ್ ಸಿಂಗ್ ಅವರ ಮಾರುಕಟ್ಟೆ ಮೌಲ್ಯ ಮತ್ತು ಸಂಭಾವನೆ ಏರಿಕೆಯಾಗಿದೆ. ಇದನ್ನೇ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಹಣದ ಬೇಡಿಕೆ ಇಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪ್ರಕರಣದ ಕುರಿತು ಮುಂಬೈ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸದಿದ್ದರೂ, ಬಾಲಿವುಡ್ ಸೆಲೆಬ್ರಿಟಿಗಳ ಭದ್ರತೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ನಿಸ್ವಾರ್ಥ ಕಾಯಕವೇ ಶರಣತ್ವದ ದಾರಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾಯಕ ಶರಣರಾದ ಶರಣ ಮಾದಾರ ಚೆನ್ನಯ್ಯ, ಶರಣ ಸಮಗಾರ ಹರಳಯ್ಯ ಹಾಗೂ ಶರಣ ಡೋಹರ ಕಕ್ಕಯ್ಯನವರ ಜಯಂತಿ ಕಾರ್ಯಕ್ರಮ ಮಂಗಳವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಗೌರವಪೂರ್ವಕವಾಗಿ ಜರುಗಿತು.

ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಚಾಲನೆ ನೀಡಿ ಮಾತನಾಡಿ, ನಿಸ್ವಾರ್ಥ ಕಾಯಕ ಮಾಡುವವರೇ ನಿಜವಾದ ಶರಣರು. ನಾನು-ನಾನು ಎಂಬ ಅಹಂಕಾರದಿಂದ ಹೊರಬಂದಾಗಲೇ ಶರಣತ್ವ ಸಾಧ್ಯ. ಶರಣರು ತೋರಿಸಿದ ಸಾಧನೆಯ ದಾರಿಯಲ್ಲಿ ಸಾಗುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ ಕಾಯಕ ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಜಯಂತಿಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್. ದುರಗೇಶ್, ಸಹಾಯಕ ಆಯುಕ್ತ ಗಂಗಪ್ಪ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ, ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣನವರ, ಎಸ್.ಎನ್. ಬಳ್ಳಾರಿ, ಶರೀಫ್ ಬಿಳಿಯಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶರಣತತ್ವ ಚಿಂತಕ ಅಶೋಕ ಬರಗುಂಡಿ ಉಪನ್ಯಾಸ ನೀಡಿ, ಕಾಯಕವನ್ನು ಕೇವಲ ದುಡಿಮೆಯ ಮಟ್ಟಕ್ಕೆ ಸೀಮಿತಗೊಳಿಸಬಾರದು, ಅದು ಆಧ್ಯಾತ್ಮಿಕ ಸಾಧನೆಯ ದಾರಿಯಾಗಿದೆ. 12ನೇ ಶತಮಾನದಲ್ಲೇ ಶರಣರು ವೃತ್ತಿಗೆ ಗೌರವ ನೀಡುವ ಮೂಲಕ ಶ್ರೇಣೀಕೃತ ವ್ಯವಸ್ಥೆಗೆ ಸವಾಲು ಹಾಕಿದರು. ದುಡಿಯುವವನೇ ದೇವರು ಎಂಬ ತತ್ವವನ್ನು ಅವರು ಜೀವನದ ಮೂಲಕ ಸಾರಿದರು. ಶರಣರು ಜಾತಿ, ಧರ್ಮಗಳ ಗಡಿಗಳನ್ನು ಮೀರಿ ಚೈತನ್ಯವೇ ಮೂಲಸ್ವರೂಪ ಎಂದು ಸಾರಿದ್ದು, ಅವರ ತತ್ವ ಇಂದಿಗೂ ಸಮಾಜಕ್ಕೆ ದಿಕ್ಕು ತೋರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಧ್ಯವರ್ತಿಗಳ ಕಿಸೆ ತುಂಬುತ್ತಿದೆ ಅನ್ನಭಾಗ್ಯ ಅಕ್ಕಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮೀಪದ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಗುಂದ ಗ್ರಾಮದಲ್ಲಿ ಅಕ್ರಮವಾಗಿ ಅಕ್ಕಿ ದಂಧೆ ರಾಜಾರೋಷವಾಗಿ ನಡೆದಿದ್ದು, ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಗ್ರಾಮೀಣ ಭಾಗದಲ್ಲಿ ದಂಧೆಕೋರರು ಪಡಿತರ ಅಕ್ಕಿಯನ್ನು ಅಕ್ರಮವಾಗಿ ತುಂಬಿಸಿಕೊಂಡು ನೀಲಗುಂದ, ಮಲ್ಲಿಗವಾಡ ರಸ್ತೆ ಮಾರ್ಗವಾಗಿ ಅಣ್ಣಿಗೇರಿ, ಹುಬ್ಬಳ್ಳಿಗೆ ರಾಜಾರೋಷವಾಗಿ ಕಳ್ಳ ಸಾಗಣೆ ಮಾಡುತ್ತಿರುವುದನ್ನು ಕಂಡು ಪ್ರಶ್ನಿಸಿದ ಸಾರ್ವಜನಿಕರಿಗೆ ದಂಧೆಕೋರರು ಬೆದರಿಕೆ ಹಾಕಿ ಮುಂದೆ ಸಾಗಿದ್ದಾರೆ. ಒಂದು ಹೊತ್ತಿನ ಊಟವಿಲ್ಲದೇ ಯಾರೂ ಇರಬಾರದು ಎಂಬ ದೃಷ್ಟಿಯಿಂದ ಸರ್ಕಾರ ಬಡ, ಮಧ್ಯಮ ವರ್ಗದವರಿಗೆ ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಅಕ್ಕಿಯೂ ದಂಧೆಕೋರರ, ಮಧ್ಯವರ್ತಿಗಳ ಪಾಲಾಗುತ್ತಿದ್ದು, ಅಧಿಕಾರಿಗಳು ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅಕ್ಕಿ ಅಕ್ರಮ ಸಾಗಾಟ ದಂಧೆ ಹೆಚ್ಚಾಗಿದ್ದು, ಮನೆ ಮನೆಗೆ ತೆರಳಿ ಕಡಿಮೆ ಬೆಲೆಗೆ ಅಕ್ಕಿಯನ್ನು ಖರೀದಿಸಿ, ಹೆಚ್ಚಿನ ಲಾಭಾಂಶಕ್ಕೆ ಮಾರಾಟ ಮಾಡುವ ದಂಧೆಕೋರರು ಯಾರ ಭಯವೂ ಇಲ್ಲದೇ ಪ್ಯಾಸೆಂಜರ್ ಆಟೋದಲ್ಲಿ 10-15 ಕ್ವಿಂಟಲ್ ಅಕ್ರಮ ಅಕ್ಕಿಯನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರಿಗೆ ಅಧಿಕಾರಿಗಳಿಗೆ ತಿಂಗಳ ಮಾಮೂಲಿ ಕೊಡುತ್ತೇವೆ. ನಾವೇಕೆ ಹೆದರಬೇಕೆಂದು ಸಾರ್ವಜನಿಕರ ಮೇಲೆಯೇ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳೇ ಇಂತಹ ದಂಧೆಕೋರರ ರಕ್ಷಣೆಗೆ ನಿಂತಾಗ ಸರ್ಕಾರದ ಯೋಜನೆಗಳ ಗುರಿ ತಪ್ಪುತ್ತಿದೆ, ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ಅಕ್ಕಿ ಮಾರಾಟ ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಈ ಅಕ್ರಮ ಪಡಿತರ ದಂಧೆ ಹಲವು ವರ್ಷಗಳಿಂದಲೂ ನಡೆದಿದ್ದು, ನಗರಗಳಿಂದ ಗ್ರಾಮೀಣ ಭಾಗಕ್ಕೆ ಬಂದು ಮನೆಗಳಿಗೆ ತೆರಳಿ ಕಡಿಮೆ ಬೆಲೆಗೆ ಅಕ್ಕಿ ಖರೀದಿಸುತ್ತಿದ್ದಾರೆ. ಆದರೆ ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಲ್ಲಿ ಸಣ್ಣ ಅಧಿಕಾರಿಗಳಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳೂ ಭಾಗಿಯಾಗಿರುವ ಅನುಮಾನವಿದ್ದು, ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.

  • ರವಿ ವಗ್ಗನವರ.
    ಸಾಮಾಜಿಕ ಕಾರ್ಯಕರ್ತ, ನೀಲಗುಂದ.

“ನಾನು ಕಳೆದ ವಾರ ಗದಗಿಗೆ ವರ್ಗಾವಣೆಯಾಗಿ ಬಂದಿದ್ದು, ಪಡಿತರ ಅಕ್ರಮ ಸಾಗಾಟದ ಬಗ್ಗೆ ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ಕೊಟ್ಟಿದ್ದೇನೆ. ಬೆಳದಡಿಯಲ್ಲಿ ನಿನ್ನೆ ಒಂದು ಪ್ರಕರಣ ದಾಖಲಾಗಿದೆ. ಸಾಗಾಟದ ಸಂದರ್ಭದಲ್ಲಿ ಯಾರಾದರೂ ಮಾಹಿತಿ ನೀಡಿದರೆ ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆ”

  • ಎಸ್.ಡಿ. ಪಾಟೀಲ.
    ಆಹಾರ ಇಲಾಖೆ ಉಪನಿರ್ದೇಶಕರು, ಗದಗ.

ಕುಮಾರ ಶಿವಯೋಗಿಗಳ ಸಮಾಜ ಸೇವೆ ಅನನ್ಯ: ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಿವಯೋಗ ಮಂದಿರದಲ್ಲಿ ಮಠಗಳನ್ನು ನಿರ್ವಹಿಸಲು ಸನ್ನದ್ಧರಾಗುವ ವಟುಗಳನ್ನು ತಯಾರಿಸುವ ಗುರುಕುಲವನ್ನು ಸ್ಥಾಪಿಸಿ ಈ ನಾಡಿಗೆ ಕಲ್ಯಾಣವನ್ನುಂಟುಮಾಡಿದವರು ಹಾನಗಲ್ಲ ಗುರುಕುಮಾರ ಶಿವಯೋಗಿಗಳು. ಅವರ ದೂರದೃಷ್ಟಿಯ ಫಲವಿಂದ ಬೆಳೆದು ಹೆಮ್ಮರವಾಗಿ ನಾಡಿನಾದ್ಯಂತ ಅನೇಕ ಹರ ಗುರು ಚರ ಮೂರ್ತಿಗಳನ್ನು ಕಾಣುವಲ್ಲಿ ಅವರ ಸೇವೆ ಅಪಾರವಾಗಿದೆ. ಕುಮಾರ ಶಿವಯೋಗಿಗಳು ಈ ನಾಡಿಗೆ, ಸಮಾಜಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದುದು ಎಂದು ಹಾಲಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಹೇಳಿದರು.

ಸಮೀಪದ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದಲ್ಲಿ ಸೋಮವಾರ ಜರುಗಿದ ಲಿಂ. ಶ್ರೀ ಕುಮಾರ ಮಹಾಶಿವಯೋಗಿಗಳವರ 95ನೇ ಪುಣ್ಯ ಸ್ಮರಣೋತ್ಸವ ಹಾಗೂ ರಥೋತ್ಸವದ ನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.

ಹಾನಗಲ್ಲ ಕುಮಾರ ಶಿವಯೋಗಿಗಳು, ಹಾವೇರಿಯ ಶಿವಬಸವ ಸ್ವಾಮೀಜಿಗಳವರು ಶಿವಯೋಗ ಮಂದಿರದ ಶಾಖಾ ಮಠವನ್ನು ನಿಡಗುಂದಿಕೊಪ್ಪದಲ್ಲಿ ಸ್ಥಾಪಿಸಿ ಈ ಭಾಗದ ಜನರಿಗೆ ಆರೋಗ್ಯ ದಾಸೋಹ ನೀಡುವ ಕಾರ್ಯಕ್ಕೆ ಇಲ್ಲಿನ ಸ್ವಾಮೀಜಿಗಳನ್ನು ಹಚ್ಚಿದರು. ಅವರ ಅಪೇಕ್ಷೆಯಂತೆ ಶ್ರೀಮಠದ ಚನ್ನಬಸವ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಆರೋಗ್ಯ ದಾಸೋಹದ ಕಾರ್ಯವನ್ನು ಅನವರತ ಮಾಡುತ್ತ ಬಂದರು.

ಕರ್ನಾಟಕದಲ್ಲಿನ ಬಹುತೇಕ ಮಠಗಳು ಅನ್ನ ದಾಸೋಹ, ಶೈಕ್ಷಣಿಕ ದಾಸೋಹ ಮುಂತಾದವುಗಳನ್ನು ಮಾಡುತ್ತ ಬಂದಿವೆ. ಆದರೆ ಭಕ್ತ ಜನತೆಗೆ ಅತಿ ಅವಶ್ಯಕವಾದ ಆರೋಗ್ಯ ದಾಸೋಹವನ್ನು ನೀಡುವ ಮಠವಿದ್ದರೆ ಅದು ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರವಾಗಿದೆ. ಈ ಹಿಂದಿನ ಶ್ರೀಗಳು ಕೈಗೊಂಡ ಆರೋಗ್ಯ ದಾಸೋಹವನ್ನು ಇಂದಿನ ಪೀಠಾಧಿಪತಿಗಳಾಗಿರುವ ಅಭಿನವ ಚನ್ನಬಸವ ಸ್ವಾಮೀಜಿ ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಈಗೀಗ ಆಯುರ್ವೇದಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀಮಠದಿಂದ ಆಯುರ್ವೇದ ಕುರಿತು ಒಂದು ಸಂಶೋಧನಾ ಕೇಂದ್ರ ಪ್ರಾರಂಭಗೊಂಡರೆ ಅದು ಬಹಳಷ್ಟು ಜನರಿಗೆ ಉಪಯೋಗವಾಗುತ್ತದೆ. ಈ ದಿಶೆಯಲ್ಲಿ ಶ್ರೀಮಠದ ಈಗಿನ ಸ್ವಾಮೀಜಿಗಳು ಕಾರ್ಯ ಪ್ರವೃತ್ತರಾಗಲಿ ಎಂದರು.

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಂಕಲಗಿಯ ಅಡವಿ ಸಿದ್ಧೇಶ್ವರ ಸ್ವಾಮೀಜಿ, ಗದಗ-ಹೊಸಪೇಟೆಯ ಚಂದ್ರಶೇಖರ ದೇವರು, ಲಿಂಗನಾಯಕನ ಹಳ್ಳಿಯ ನಿರಂಜನ ದೇವರು, ಹರ-ಗುರು-ಚರ ಮೂರ್ತಿಗಳು ಉಪಸ್ಥಿತರಿದ್ದರು. ಶಿಕ್ಷಕ ಆರ್.ವಿ. ಬೆಲ್ಲದ ನಿರ್ವಹಿಸಿದರು.

ಬೆಳಿಗ್ಗೆ ಬೈಲಹೊಂಗಲ ಮೂರುಸಾವಿರ ಶಾಖಾಮಠದ ಪ್ರಭು ನೀಲಕಂಠ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.

ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಮಠದಲ್ಲಿ ಹಿಂದಿನಿಂದಲೂ ನಡೆದು ಬಂದಿರುವ ಆರೋಗ್ಯ ದಾಸೋಹ ಎಂದಿಗೂ ಮುಂದುವರೆಯುತ್ತದೆ. ಈ ಮಠದ ಸದ್ಭಕ್ತರು ಮಠದ ಮೇಲೆ ಅಪಾರವಾದ ಶ್ರದ್ಧೆ ಭಕ್ತಿಯನ್ನಿರಿಸಿದ್ದಾರೆ. ಅವರೆಲ್ಲರ ಸಹಾಯ-ಸಹಕಾರಗಳಿಂದ ಶ್ರೀಮಠವು ಏಳಿಗೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಮಠದ ಜಾತ್ರಾ ಮಹೋತ್ಸವದ ನಿಮಿತ್ತ ಎರಡು ದಿನಗಳ ಕಾಲ ನಡೆದ ಎಲ್ಲ ಸಭೆ, ಸಮಾರಂಭ, ಪ್ರಸಾದ ಮತ್ತಿತರ ಕಾರ್ಯಗಳಿಗೆ ಭಕ್ತರು ನೀಡಿದ ಸಹಕಾರವನ್ನು ನಾವೆಂದಿಗೂ ಮರೆಯುವಂತಿಲ್ಲ. ಈ ಶ್ರದ್ಧೆ ಭಕ್ತರಲ್ಲಿ ಎಂದಿಗೂ ಹೀಗೇ ಇರಲಿ ಎಂದು ಪ್ರಾರ್ಥಿಸಿದರು.

ಕಾನೂನು ಸಮರದಲ್ಲಿ ಬಿಜೆಪಿ ಸದಸ್ಯರಿಗೆ ಹಿನ್ನೆಡೆ | ಸದಸ್ಯರ ಅಮಾನತು ಎತ್ತಿ ಹಿಡಿದ ಉಚ್ಚ ನ್ಯಾಯಾಲಯ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ನಕಲಿ ಠರಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ-ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಅಮಾನತು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ನಕಲಿ ಠರಾವು ಸೃಷ್ಟಿಸಿ ಸಾವಿರಾರು ಕೋಟಿ ರೂ ಬೆಲೆಬಾಳುವ 34 ಎಕರೆ ವಕಾರಸಾಲು ಲೀಸ್ ಅವಧಿ ವಿಸ್ತರಣೆ ವಿಷಯವಾಗಿ ಕೈಗೊಂಡ ಠರಾವು ನಕಲಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರು ಸದಸ್ಯರನ್ನು ಅಮಾನತು ಮಾಡಿ ಆದೇಶಿಸಿದ್ದರು.

ಅಮಾನತು ಆದೇಶ ಪ್ರಶ್ನಿಸಿ ಮೂವರು ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಧಾರವಾಡ ಪೀಠದಲ್ಲಿದ್ದ ಈ ಮಹತ್ವದ ಪ್ರಕರಣವನ್ನು ಮಂಗಳವಾರ ಬೆಂಗಳೂರಿನ ಹೈಕೋರ್ಟ್ ಪೀಠದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ಸಮಗ್ರ ವಿಚಾರಣೆ ನಡೆಸಿದ ಹೈಕೋರ್ಟ್, ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ನೀಡಿರುವ ಆದೇಶವನ್ನು ಎತ್ತಿ ಹಿಡಿಯಿತಲ್ಲದೆ, ಬಿಜೆಪಿಯ ಅಧಿಕಾರದ ಕನಸಿನ ಬಣ್ಣ ಅಳಿಸಿದೆ.

ಈ ನಕಲಿ ದಾಖಲೆಗಳಲ್ಲಿ ಪೌರಾಯುಕ್ತರ ಸಹಿಯನ್ನು ನಕಲು ಮಾಡಿ, ಆರೋಪಿತ ಸದಸ್ಯರು ಸಹಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಎಸ್.ಬಿ. ಶೆಟ್ಟೆಣ್ಣವರ, 2025 ಫೆಬ್ರವರಿ 13ರಂದು ನಗರಸಭೆ ಬಿಜೆಪಿ ಸದಸ್ಯರಾದ ಉಷಾ ದಾಸರ, ಅನಿಲ ಅಬ್ಬಿಗೇರಿ ಮತ್ತು ಗೂಳಪ್ಪ ಮುಷಿಗೇರಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶಿಸಿದ್ದರು.

ಗದಗ-ಬೆಟಗೇರಿ ನಗರಸಭೆಯ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ 2ನೇ ಅವಧಿ ಯಾವಾಗಲೂ ಮರೀಚಿಕೆಯಾಗಿಯೇ ಉಳಿದಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗದಗ-ಬೆಟಗೇರಿ ನಗರಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ 2008ರಲ್ಲಿ ಬಿಜೆಪಿ ಅಧಿಕಾರಕ್ಕೇರಿ 30 ತಿಂಗಳು ಆಡಳಿತ ನಡೆಸಿತ್ತು. ಆದರೆ 2ನೇ ಅವಧಿಯ ವೇಳೆ ಕಾಂಗ್ರೆಸ್‌ನ ಶಿವಣ್ಣ ಮುಳಗುಂದ ಅವರು 6 ಜನ ಬಿಜೆಪಿ ಸದಸ್ಯರನ್ನೇ ಸೆಳೆದುಕೊಂಡು ಅಧಿಕಾರ ಹೈಜಾಕ್ ಮಾಡಿದ್ದರು. ಸದ್ಯ 2022ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ ಮೊದಲ ಅವಧಿಯನ್ನು ಪೂರೈಸಿತು. ಆದರೆ 2ನೇ ಅವಧಿ ವೇಳೆಗೆ ಈ ನಕಲಿ ಠರಾವು ಪ್ರಕರಣದಿಂದಾಗಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತಾಯಿತು.

ಬಿಜೆಪಿಯ ಮೂವರು ಸದಸ್ಯರು ನಡೆಸುತ್ತಿರುವ ಕಾನೂನು ಹೋರಾಟದಲ್ಲಿ ಸತತವಾಗಿ ಹಿನ್ನೆಡೆ ಅನುಭವಿಸುತ್ತಲೇ ಬಂದಿದ್ದಾರೆ. ನಕಲಿ ಠರಾವು ವಿಷಯವಾಗಿ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಈಗ ಮತ್ತೊಮ್ಮೆ ಹೈಕೋರ್ಟ್ ಏಕಸದಸ್ಯ ಪೀಠದ ಈ ಆದೇಶವು ಬಿಜೆಪಿಗೆ ದೊಡ್ಡ ಹೊಡೆತ ನೀಡಿದ್ದರೂ, ಕಾನೂನು ಹೋರಾಟ ಇಲ್ಲಿಗೆ ಅಂತ್ಯಗೊಂಡಿಲ್ಲ. ಏಕಸದಸ್ಯ ಪೀಠದ ಈ ತೀರ್ಪನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಆ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರದಿದ್ದರೂ, ಇನ್ನುಳಿದ ಅವಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಏರದಂತೆ ಹೋರಾಟ ನಡೆಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.

ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರು ಸದಸ್ಯರನ್ನು ಅಮಾನತು ಮಾಡಿರುವ ಪ್ರಕರಣದ ಜೊತೆಗೆ, ನ್ಯಾಯಾಲಯದ ಆದೇಶವನ್ನು ಮೀರಿ ಚುನಾವಣಾ ಅಧಿಕಾರಿಗಳು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಿದ್ದಾರೆ ಎನ್ನಲಾದ ಪ್ರಕರಣದ ವಿಚಾರಣೆ ಬಾಕಿ ಇದೆ. ಹಿಂದಿನ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಅವರು ಠರಾವಿನಲ್ಲಿರುವ ತಮ್ಮ ಸಹಿ ನಕಲಿಯಾಗಿದೆ ಎಂದು ಆರೋಪಿಸಿ ದಾಖಲಿಸಿರುವ ಎಫ್‌ಐಆರ್ ಪ್ರಕರಣವೂ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ, ಹೈಕೋರ್ಟ್‌ನ ಸದರಿ ತೀರ್ಪಿನ ಹೊರತಾಗಿಯೂ ಗದಗ ನಗರಸಭೆಯ ಅಧಿಕಾರಕ್ಕಾಗಿ ನಡೆಯುತ್ತಿರುವ ಗುದ್ದಾಟ ಮುಂದುವರೆಯಲಿದೆ.

ಗಾಂಧೀಜಿಯವರ ಗ್ರಾಮಸ್ವರಾಜ್ಯ ಕನಸು ನನಸಾಗಬೇಕು: ಮಾಜಿ ಶಾಸಕ ಡಿ.ಆರ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗ್ರಾಮ ಪಂಚಾಯತ್ ಆಡಳಿತ, ಆರ್ಥಿಕ ಪಾರದರ್ಶಕತೆ, ವಿಕೇಂದ್ರೀಕೃತ ಯೋಜನೆ ಮತ್ತು ಜನರ ಸಹಭಾಗಿತ್ವದೊಂದಿಗೆ ಗಾಂಧಿ ಕಂಡ ಗ್ರಾಮ ಸ್ವರಾಜ್ ಕನಸು ನನಸಾಗಬೇಕಿದೆ ಎಂದು ಮಾಜಿ ಶಾಸಕರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ ಆಶಿಸಿದರು.

ಸಮೀಪದ ಅಬ್ಬಿಗೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಅಡಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಸಮಾಜದಲ್ಲಿನ ಯುವಕರು ಮತ್ತು ಗುರು-ಹಿರಿಯರಲ್ಲಿ ತಪ್ಪುಗಳನ್ನು ಖಂಡಿಸುವ ಗುಣ ಕಡಿಮೆಯಾಗುತ್ತಿದೆ. ಇದರಿಂದ, ಗ್ರಾಮದಲ್ಲಿನ ಸ್ವರಾಜ್ಯ ಕಲ್ಪನೆ ನನಸಾಗುತ್ತಿಲ್ಲ. ಜನರು ಜಾಗೃತರಾದಾಗ ಪಂಚಾಯತ್ ರಾಜ್ ಆಡಳಿತ ಸನ್ಮಾರ್ಗದಲ್ಲಿರುತ್ತದೆ. ವಾರ್ಡ್ ಸಭೆ, ಜನವಸತಿ ಸಭೆ ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳಬೇಕು ಮತ್ತು ಇವುಗಳ ಮಹತ್ವ ತಿಳಿಯಬೇಕು. ಗ್ರಾಮ ಸಭೆಗಳ ನಿರ್ಣಯಗಳನ್ನು ತಿರಸ್ಕರಿಸುವ ಅಧಿಕಾರ ಯಾರಿಗೂ ಇಲ್ಲ. ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಮುಂದಿನ ಐದು ವರ್ಷಗಳ ಆದ್ಯತೆ ಮತ್ತು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಯೋಗ್ಯರಿಗೆ ಸರಕಾರಿ ಲಾಭ ತಲುಪುವಂತೆ ಜನಸಾಮಾನ್ಯರು ಪ್ರಯತ್ನಿಸಬೇಕು. ಗ್ರಾಮ ನೈರ್ಮಲ್ಯಗಳಲ್ಲಿ ಪಾಲ್ಗೊಂಡು ಗಾಂಧಿ ಕನಸಿನಂತೆ ಗ್ರಾಮ ಸ್ವರಾಜ್ಯವನ್ನು ರಾಮರಾಜ್ಯ ಮಾಡಬೇಕಿದೆ ಎಂದು ಕರೆ ನೀಡಿದರು.

ರೋಣ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ಗ್ರಾಮಾಡಳಿತ ಎಂದರೆ ಸ್ಥಳೀಯ ಸರ್ಕಾರ. ಈ ಸ್ಥಳೀಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವಿದೆ. ಪಂಚಾಯತ್‌ಗಳ ಕ್ರಿಯಾ ಯೋಜನೆ ಮತ್ತು ಪ್ರಗತಿಗಳಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ, ಗ್ರಾಮದ ಸ್ವಚ್ಛತೆಗೆ ಜಾಗೃತಿ ಮೂಡಿಸಬೇಕು. ಪ್ರತಿ ಮಾಸದಲ್ಲಿ ಒಂದು ದಿನ ಗ್ರಾಮದಲ್ಲಿ ಶ್ರಮದಾನದ ಮೂಲಕ ಜನರಲ್ಲಿ ಅರಿವು ಮೂಡಿಸಿ ಗಾಂಧಿಯವರ ಗ್ರಾಮ ಸ್ವರಾಜ್ ಮತ್ತು ಸ್ವಚ್ಛ ಭಾರತ ನಿರ್ಮಿಸಲು ಪ್ರಜ್ಞಾವಂತರು ಶ್ರಮಿಸಬೇಕು. ಸದ್ವಿಚಾರ, ಸದ್ಬೋಧನೆಗಳ ಮೂಲಕ ಗಾಂಧಿ ಕನಸನ್ನು ನನಸಾಗಿಸೋಣ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಮೂಲಕ ವಿಕೇಂದ್ರೀಕೃತ ಯೋಜನೆ, ನೈಜ ಪ್ರಗತಿ ಮತ್ತು ಕೆಲಸ ಆಧಾರಿತ ಲೆಕ್ಕಪತ್ರ ನಿರ್ವಹಣೆಯನ್ನು ಬೆಂಬಲಿಸೋಣ ಎಂದು ಕರೆ ನೀಡಿದರು.

ರಾಮಣ್ಣ ಬಸವರಡ್ಡೇರ, ಸುರೇಶ ಬಸವರಡ್ಡೇರ, ಬಸವರಾಜ ವೀರಾಪೂರ, ವಿ.ಬಿ. ಸೋಮನಕಟ್ಟಿಮಠ, ಸಿ.ಕೆ. ಮಾಳಶೆಟ್ಟಿ, ಬಸವರಾಜ ತಳವಾರ, ಪಿ.ಡಿ.ಓ ಲೋಹಿತ್ ಎಂ, ಲಲಿತಾ ರಾಥೋಡ, ಗುರಣ್ಣ ಅವರಡ್ಡಿ, ಎಚ್.ಡಿ. ದ್ವಾಸಲ, ಎಂ.ಕೆ. ಅಂಗಡಿ, ಶರಣಪ್ಪ ಮಾದಿನೂರ, ಮುತ್ತಪ್ಪ ಕುಕನೂರ, ಶಿವಪುತ್ರ ಕೆಂಗಾರ, ಸಿದ್ದು ಹನುಮನಾಳ, ಭರಮಪ್ಪ ಹನುಮನಾಳ, ರಾಮನಗೌಡ ಹಲಕುರ್ಕಿ, ಸುರೇಶ ಶಿರೋಳ ಮುಂತಾದವರು ಹಾಜರಿದ್ದರು.

ರೋಣ ತಾ.ಪಂ ಇ.ಓ ಚಂದ್ರಶೇಕರ ಕಂದಕೂರ ಮಾತನಾಡಿ, ಗ್ರಾಮ ಪಂಚಾಯತ್‌ಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಜನರಿಗೆ ಅಧಿಕಾರವಿರುತ್ತದೆ. ಆಡಳಿತ ಸರಿಯಾಗಿ ನಡೆಸಿಕೊಂಡು ಹೋಗಲಾಗುತ್ತಿದೆಯೆ ಎಂದು ವೀಕ್ಷಿಸುವುದು ಮತ್ತು ಪ್ರಶ್ನಿಸುವ ಹಕ್ಕು ನಾಗರಿಕರಿಗೆ ಇದೆ. ಸ್ಥಳೀಯ ಆಡಳಿತ ಚಟುವಟಿಕೆಗಳಲ್ಲಿ ಭಾಗವಹಿಸುವ ಜವಾಬ್ದಾರಿ ಗ್ರಾಮಸ್ಥರಿಗಿದೆ. ಗ್ರಾಮದ ಸ್ವಚ್ಛತೆ ಬಗ್ಗೆ ಕಾಳಜಿವಹಿಸುವುದು ಮತ್ತು ರಚನಾತ್ಮಕ ಸಲಹೆ ನೀಡುವುದು ಕೂಡಾ ಜನರ ಆದ್ಯತೆ ಆಗಬೇಕಾಗಿದೆ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿಗಳು ತಕ್ಷಣ ದೇಶದ, ಮೋದಿಜೀ ಅವರ ಕ್ಷಮೆ ಕೇಳಲಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

0

ಬೆಂಗಳೂರು: ಮುಖ್ಯಮಂತ್ರಿಗಳು ದೇಶದ ಪ್ರಧಾನಮಂತ್ರಿಗಳ ವಿರುದ್ಧ ಹೇಡಿ ಎಂಬ ಕೆಟ್ಟ ಪದ ಬಳಸಿದ್ದು ಸರಿಯೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಇದನ್ನು ಖಂಡತುಂಡವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ಪಶ್ಚಾತ್ತಾಪ ಆಗಿದ್ದರೆ ಅವರು ತಕ್ಷಣ ದೇಶದ ಕ್ಷಮೆ ಕೇಳಬೇಕು. ಮೋದಿಜೀ ಅವರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಯವರು ತಾಳ್ಮೆ ಕಳಕೊಂಡು ಹೀಗೆ ಮಾತನಾಡುತ್ತಿದ್ದಾರಾ? ರಾಹುಲ್ ಗಾಂಧಿಯವರ ಓಲೈಕೆಗಾಗಿ ಹೀಗೆ ಮಾತನಾಡುತ್ತಾರಾ? ಮುಖ್ಯಮಂತ್ರಿ ಪದವಿಯಲ್ಲಿ ಇನ್ನೊಂದಷ್ಟು ದಿನ ಉಳಕೊಳ್ಳಲು ಹೀಗೆ ಮಾತಾಡಿದ್ದಾರಾ? ಅಥವಾ ತಲೆಗಿಲೆ ಕೆಟ್ಟು ಇಂಥ ಪದ ಬಳಸುತ್ತಿದ್ದಾರಾ? ಎಂದು ಕೇಳಿದರು. ಅವರಿಗೆ ಪರೀಕ್ಷೆ ಮಾಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರಿಂದ ಈಚೆಗೆ ಅಮೃತವನ್ನು ಸವಿಯಬೇಕಾದ ನಾಲಿಗೆಯಲ್ಲಿ ಹೇಸಿಗೆಯ ಮಾತುಗಳು ಬರುತ್ತಿರುವುದು ವಿಪರ್ಯಾಸ. ನಾಲಿಗೆಗೆ ಒಂದು ಬೆಲೆ ಇದೆ. ಅದಕ್ಕೊಂದು ಗೌರವ ಇದೆ. ನಾಲಿಗೆ ಒಂದು ಜೀವನದ ಉತ್ತಮ ಮಟ್ಟ ಇಲ್ಲವೇ ಕೆಟ್ಟ ಪರಂಪರೆಯ ಸೃಷ್ಟಿಗೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.

ಪ್ರಿಯಾಂಕ್ ಖರ್ಗೆಯವರು ಇದಕ್ಕೂ ಮುಂಚೆ ಇದೇರೀತಿಯ ಪದ ಬಳಸಿದ್ದರು. ಸರಿಸಮಾನ ಪದವಿಯಲ್ಲಿ ಇರುವವರು ಕೆಲವು ಸಂದರ್ಭದಲ್ಲಿ ಟೀಕೆ ಮಾಡುವಾಗ ಲಘುವಾಗಿ ಮಾತನಾಡಿದರೂ ಅವರವರ ಎತ್ತರಕ್ಕೆ ಸರಿ ಹೋಗಬಹುದು. ಆದರೆ, ಒಬ್ಬ ಯುವಕ, ಸಣ್ಣ ವ್ಯಕ್ತಿ ದೇಶದ ಪ್ರಧಾನಿಯನ್ನು ಇಷ್ಟೊಂದು ಕಠಿಣ ಪದಗಳಿಂದ ನಿಂದಿಸಿದರೆ ಪ್ರಧಾನಿಯನ್ನು ಗೌರವಿಸುವ ಈ ದೇಶವಾಸಿಗಳು ಅವರನ್ನು ಬಹುಶಃ ಕುನ್ನಿಗೆ ಹೋಲಿಸುತ್ತಾರೆ. ನಾನು ಆ ಥರ ಹೋಲಿಸುವುದಿಲ್ಲ ಎಂದು ನುಡಿದರು.

ಮದುವೆಗೆ ಒಪ್ಪಿಸೋಕೆ ತಾಯಿ–ದೊಡ್ಡಮ್ಮನ ಖಾಸಗಿ ಫೋಟೋ ಬಳಕೆ: ಬೆಂಗಳೂರು ಕುಟುಂಬವನ್ನು ಬೆಚ್ಚಿಬೀಳಿಸಿದ ಲವ್ ಕ್ರೈಂ

0

ಬೆಂಗಳೂರು: ಪ್ರೀತಿಯ ಹೆಸರಿನಲ್ಲಿ ನಡೆದ ಭೀಕರ ಅಪರಾಧವೊಂದು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಬೆಳಕಿಗೆ ಬಂದಿದೆ. ಕುಟುಂಬದವರು ಮದುವೆಗೆ ಒಪ್ಪದಿದ್ದರೆ ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಯುವಕನೊಬ್ಬ ತನ್ನ ಪ್ರಿಯತಮೆಯ ಮೂಲಕ ಆಕೆಯ ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಫೋಟೋಗಳನ್ನು ಸಂಗ್ರಹಿಸಿಕೊಂಡಿದ್ದಾನೆ ಎಂಬುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.

ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ತಾಯಿಯೊಬ್ಬರು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, 23 ವರ್ಷದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ವಿಚಾರಣೆಗೆ ಒಳಪಡಿಸಿದ್ದರು. ಆರಂಭದಲ್ಲಿ ಯುವತಿಯೇ ಖಾಸಗಿ ಫೋಟೋಗಳನ್ನು ತೆಗೆದು ಕಳುಹಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದರೂ, ವಿಚಾರಣೆ ವೇಳೆ ಈ ಕೃತ್ಯದ ಹಿಂದೆ ಪ್ರಿಯಕರನ ಮಾಸ್ಟರ್ ಪ್ಲ್ಯಾನ್ ಇರುವುದು ಬಯಲಾಗಿದೆ.

ಯುವತಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ, ಕುಟುಂಬದವರ ಮೇಲೆ ಒತ್ತಡ ಹೇರುವ ತಂತ್ರ ರೂಪಿಸಲಾಗಿತ್ತು. “ಖಾಸಗಿ ಫೋಟೋ ಇಟ್ಟುಕೊಂಡರೆ ಮದುವೆಗೆ ಒಪ್ಪುತ್ತಾರೆ” ಎಂದು ಯುವಕ ಯುವತಿಗೆ ಪ್ರಚೋದನೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ವೇಳೆ ಕುಟುಂಬದ ಹಿನ್ನೆಲೆ, ಮೊಬೈಲ್ ಚಾಟ್‌ಗಳು ಹಾಗೂ ಗ್ಯಾಲರಿ ಪರಿಶೀಲನೆಯಾಗಿದ್ದು, ತಾಯಿ ಮಲಗಿದ್ದಾಗ ಹಾಗೂ ದೊಡ್ಡಮ್ಮ ಸ್ನಾನ ಮಾಡುತ್ತಿದ್ದಾಗ ಸೆರೆಹಿಡಿದ ಚಿತ್ರಗಳು ಪತ್ತೆಯಾಗಿವೆ. ಈ ಚಿತ್ರಗಳನ್ನು ವರುಣ್ ಎಂಬ ಯುವಕನಿಗೆ ಕಳುಹಿಸಲಾಗಿತ್ತು. ಚಾಟ್‌ಗಳಲ್ಲಿ ವರುಣ್ ಸ್ವತಃ ಖಾಸಗಿ ಫೋಟೋಗಳನ್ನು ಕೇಳಿರುವುದು ಕಂಡುಬಂದಿದೆ.

ಪೋಷಕರು ಎಚ್ಚರಿಕೆ ನೀಡಿದರೂ ಯುವತಿ ಪ್ರಿಯಕರನ ವಿಚಾರದಲ್ಲಿ ಪ್ರತಿದಿನ ಜಗಳ ಮಾಡುತ್ತಿದ್ದಳು. ಬಳಿಕ ಒಂದು ವಾರದ ಹಿಂದೆ ಮನೆ ಬಿಟ್ಟು ಹೋಗಿದ್ದು, ವರುಣ್‌ನ ಮಾಹಿತಿ ಸ್ಪಷ್ಟವಾಗಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ.

ಸದ್ಯ ಪ್ರಕರಣ ಸಂಬಂಧ ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಅನ್ವಯವಾಗಿದ್ದು, ಯುವಕ ವರುಣ್ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಘಟನೆ ಕುಟುಂಬ ಸಂಬಂಧಗಳ ಪವಿತ್ರತೆಯನ್ನೇ ಪ್ರಶ್ನಿಸುವ ಮಟ್ಟಿಗೆ ಸಮಾಜವನ್ನು ಬೆಚ್ಚಿಬೀಳಿಸಿದೆ.

T20 World Cup: ನಮೀಬಿಯಾ ವಿರುದ್ಧ ನೆದರ್ಲ್ಯಾಂಡ್ʼಗೆ 7 ವಿಕೆಟ್ ಗಳ ಗೆಲುವು

0

ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡ ನಮೀಬಿಯಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ನೆದರ್ಲ್ಯಾಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ ತಂಡ 18 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

ನೆದರ್ಲ್ಯಾಂಡ್ ಪರ ಚೇಸಿಂಗ್ ವೇಳೆ ಬಾಸ್ ಡಿ ಲೀಡೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 48 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 72 ರನ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಅವರಿಗೆ ಮೈಕೆಲ್ ಲೆವಿಟ್ (28) ಮತ್ತು ಕಾಲಿನ್ ಅಕರ್ಮನ್ (32) ಉತ್ತಮ ಬೆಂಬಲ ನೀಡಿದರು.

ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿದ ಬಾಸ್ ಡಿ ಲೀಡೆ 2 ವಿಕೆಟ್ ಪಡೆದು ಆಲ್‌ರೌಂಡ್ ಪ್ರದರ್ಶನ ನೀಡಿದರು. ಲೋಗನ್ ವ್ಯಾನ್ ಬೀಕ್ ಕೂಡ 2 ವಿಕೆಟ್ ಕಿತ್ತರು. ಈ ಶ್ರೇಷ್ಠ ಪ್ರದರ್ಶನಕ್ಕಾಗಿ ಬಾಸ್ ಡಿ ಲೀಡೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಇತ್ತ ನಮೀಬಿಯಾ ತಂಡದ ಪರ ಜಾನ್ ನಿಕೋಲ್ ಲಾಫ್ಟಿ 42 ರನ್ ಹಾಗೂ ಜಾನ್ ಫ್ರೈಲಿಂಕ್ 30 ರನ್ ಗಳಿಸಿ ಸ್ವಲ್ಪ ಪ್ರತಿರೋಧ ತೋರಿಸಿದರು. ಜೆಜೆ ಸ್ಮಿತ್ 22 ರನ್ ಕೊಡುಗೆ ನೀಡಿದರು. ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡಕ್ಕೆ ಹಿನ್ನಡೆಯಾಯಿತು. ಬೌಲಿಂಗ್‌ನಲ್ಲಿ ಬರ್ನಾರ್ಡ್ ಸ್ಕೋಲ್ಟ್ಜ್, ರೂಬೆನ್ ಟ್ರಂಪೆಲ್ಮನ್ ಮತ್ತು ಜಾನ್ ನಿಕೋಲ್ ಲಾಫ್ಟಿ ತಲಾ ಒಂದೊಂದು ವಿಕೆಟ್ ಪಡೆದರು.

ಈ ಪಂದ್ಯ ನೆದರ್ಲ್ಯಾಂಡ್ ತಂಡದ ಟೂರ್ನಿಯ ಎರಡನೇ ಪಂದ್ಯವಾಗಿದ್ದು, ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು. ಈ ಗೆಲುವಿನೊಂದಿಗೆ ನೆದರ್ಲ್ಯಾಂಡ್ ತಂಡ ಟಿ20 ವಿಶ್ವಕಪ್‌ನಲ್ಲಿ ತನ್ನ ಸ್ಥಿತಿಯನ್ನು ಬಲಪಡಿಸಿದೆ.

error: Content is protected !!