Home Blog Page 27

ರಾಜಕೀಯದಿಂದ ನಾಪತ್ತೆಯಾಗಿಲ್ಲ, ಶೀಘ್ರವೇ ಸಕ್ರಿಯ ರಾಜಕೀಯಕ್ಕೆ ಮರಳುತ್ತೇನೆ: ರೋಷನ್ ಬೇಗ್

0

ನವದೆಹಲಿ: ನಾನು ರಾಜಕೀಯದಿಂದ ನಾಪತ್ತೆಯಾಗಿಲ್ಲ. ಎಲ್ಲರೂ ಸೇರಿ ನನ್ನನ್ನು ಕೋರ್ಟ್ ಕೇಸ್‌ಗಳಲ್ಲಿ ಸಿಲುಕಿಸಿದ್ದರು. ಈಗ ನಿಧಾನವಾಗಿ ಅವುಗಳಿಂದ ಹೊರಬರುತ್ತಿದ್ದೇನೆ. ರಾಜಕೀಯ ನನ್ನ ರಕ್ತದಲ್ಲಿದೆ. ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಸಕ್ರಿಯ ರಾಜಕೀಯಕ್ಕೆ ಮರಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ.

ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಾನು ಚಿಕ್ಕಪ್ಪ–ದೊಡ್ಡಪ್ಪರ ಮೂಲಕ ರಾಜಕೀಯಕ್ಕೆ ಬಂದವನಲ್ಲ.

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಈಗಾಗಲೇ ರಾಜಕೀಯವಾಗಿ ಮತ್ತೆ ಸಕ್ರಿಯವಾಗುತ್ತಿದ್ದೇನೆ. ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಸೂಕ್ತ ಸಮಯದಲ್ಲಿ ಹೇಳುತ್ತೇನೆ. ನಾನು ಮನೆಯಲ್ಲಿ ಮಲಗಿರುವವನಲ್ಲ, ರಾಜಕೀಯಕ್ಕೆ ಮರಳುವುದು ಖಚಿತ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ದೇಶದಾದ್ಯಂತ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ‘ಇಂಡಿಯನ್ ಮುಸ್ಲಿಂ ಫಾರ್ ಪ್ರೋಗ್ರೆಸ್ ಅಂಡ್ ರಿಫಾರ್ಮ್ಸ್’ ಸಂಘಟನೆಯ ವತಿಯಿಂದ ದೇಶದ ಪ್ರಮುಖ ಮುಸ್ಲಿಂ ನಾಯಕರ ನಿಯೋಗವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ಉತ್ತರಾಖಂಡ, ಅಸ್ಸಾಂ ಹಾಗೂ ಉತ್ತರ ಪ್ರದೇಶಗಳಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಸ್ಸಾಂ ಮುಖ್ಯಮಂತ್ರಿ ಮುಸ್ಲಿಮರತ್ತ ಗನ್ ತೋರಿಸುವ ಹೇಳಿಕೆ ನೀಡುತ್ತಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕು ಹಾಗೂ ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಇನ್‌ಸ್ಟಾಗ್ರಾಂ ಫೇಮಸ್ ಚಿನ್ನು ಪಾಪು ಕಾಸರಗೋಡಿನಲ್ಲಿ ನಿಗೂಢವಾಗಿ ಸಾವು

0

ಮಂಗಳೂರು: ಕಾಸರಗೋಡಿನ ಯುವ ಸೋಶಿಯಲ್ ಮೀಡಿಯಾ ಸಮುದಾಯಕ್ಕೆ ಚಿನ್ನು ಪಾಪು ರೇಷ್ಮಾ ಸಾವು ದೊಡ್ಡ ಆಘಾತವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಹೀಗೊಂದು ಪ್ರಖ್ಯಾತಿ ಹೊಂದಿದ್ದ ಯುವಕ/ಯುವತಿ ಸಾವು ಕೇವಲ ಸಾಮಾಜಿಕ ಪ್ರಭಾವದ ನಷ್ಟವಲ್ಲ, ಯುವಕರ ಮನೋವಿಜ್ಞಾನ ಮತ್ತು ಕುಟುಂಬ ಪ್ರಭಾವಗಳ ಬಗ್ಗೆ ಚಿಂತನೆ ಹುಟ್ಟಿಸುತ್ತದೆ.

ರೇಷ್ಮಾ, ತಮ್ಮ 4 ವರ್ಷದ ಮಗುವಿನೊಂದಿಗೆ ಬೇರೆ ವಾಸಿಸುತ್ತಿದ್ದರೂ, ಕಂಟೆಂಟ್ ಕ್ರಿಯೇಶನ್ ಮೂಲಕ ಯುವಕರಿಗೆ ಪ್ರೇರಣೆ ನೀಡುತ್ತಿದ್ದರು. ಆದರೆ, ಅಕಸ್ಮಾತ್ ಸಾವಿನಿಂದ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಭಾರೀ ಶೋಕದಲ್ಲಿದ್ದಾರೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಮೊಬೈಲ್ ಡೇಟಾ, ಸಮುದಾಯ ಚಟುವಟಿಕೆಗಳು, ಮತ್ತು ಮನೆಯ ಇತರೆ ಸುತ್ತಲೂ ಎಲ್ಲಾ ಆಯಾಮಗಳನ್ನು ಗಮನಿಸಿ ಶೀಘ್ರದಲ್ಲಿ ಸ್ಪಷ್ಟನೆ ನೀಡಲಿದ್ದಾರೆ. ಈ ಘಟನೆ ಯುವಕರಲ್ಲಿ ಸಾಮಾಜಿಕ ಒತ್ತಡ ಮತ್ತು ಮನೋವೈಕಲ್ಯಗಳ ಬಗ್ಗೆ ಅರಿವು ಮೂಡಿಸಲು ಸಹ ಕಾರಣವಾಗಲಿದೆ.

ಫೆ.11 ಮತ್ತು 12ರಂದು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ ಮಾಹಿತಿ

0

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣೆ ಹಾಗೂ ತ್ರೈಮಾಸಿಕ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಫೆಬ್ರವರಿ 11 ಮತ್ತು 12ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಮೂಲಕ ತಿಳಿಸಿದೆ.

ಚಿತ್ರದುರ್ಗ ಜಿಲ್ಲೆಯ ತಳಕು ಬೆಸ್ಕಾಂ ಉಪವಿಭಾಗದ ‘ತಳಕು 66/11 ಕೆವಿ’ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆಬ್ರವರಿ 11ರಂದು (ಬುಧವಾರ) ಕೆಪಿಟಿಸಿಎಲ್ ವತಿಯಿಂದ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೇಡರಡ್ಡಿಹಳ್ಳಿ, ತಿಮ್ಮಪ್ಪಯನಹಳ್ಳಿ,

ಎನ್.ದೇವರಹಳ್ಳಿ, ತಳಕು, ಮೊನ್ನೆಕೋಟೆ, ದೇವರೆಡ್ಡಿಹಳ್ಳಿ ಮತ್ತು ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನಿರಂತರ ಜ್ಯೋತಿ ಹಾಗೂ ಕೃಷಿ ಬಳಕೆಯ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ರೈತರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಎಇಇ ಎನ್.ಜಿ. ಮಮತಾ ಮತ್ತು ಎಂಜಿನಿಯರ್ ವೆಂಕಟೇಶ್ ಮನವಿ ಮಾಡಿದ್ದಾರೆ.

ಕೆಪಿಟಿಸಿಎಲ್ ವತಿಯಿಂದ ಜಾಲಹಳ್ಳಿ ವಿಭಾಗದ 66/11 ಕೆವಿ ಎಂಇಐ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಕಾರಣ, ಈ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಎಜಿಬಿಜಿ ಲೇಔಟ್, ಭೈರವೇಶ್ವರ ಹೋಟೆಲ್ ಸುತ್ತಮುತ್ತ, ಕಾವೇರಿ ಲೇಔಟ್, ಬೋನ್‌ವಿಲ್ ಏರಿಯಾ, ಚಿಕ್ಕಸಂದ್ರ ಐಆರ್ ಲೇಔಟ್, ಗಣೇಶ ಸಾ ಮಿಲ್ ಪ್ರದೇಶ, ಕೆಂಪೇಗೌಡ ನಗರ, ಬೃಂದಾವನ ಲೇಔಟ್, ಕಲ್ಯಾಣನಗರ, ಬಾಗಲಗುಂಟೆ, ಸೌರ ಲೇಔಟ್, ಮೀನಾಕ್ಷಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಉಂಟಾಗಿದೆ.

ವಿಜಯಲಕ್ಷ್ಮಿ ವಿರುದ್ಧ ಅವಾಚ್ಯ ಕಾಮೆಂಟ್ ಪ್ರಕರಣ: ಒಂದು ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಸಾಧ್ಯತೆ

0

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಮತ್ತು ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಂ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಆರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮುಂದಿನ ಒಂದು ವಾರದೊಳಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಜಯಲಕ್ಷ್ಮಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿಕೊಂಡು ಮಾನಹಾನಿ ಮಾಡುವ ಉದ್ದೇಶದಿಂದ ಕಾಮೆಂಟ್‌ಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ತ್ವರಿತ ತನಿಖೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ.

ತನಿಖೆಯ ಭಾಗವಾಗಿ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ಹಾಕಿದ್ದ ಪೋಸ್ಟ್‌ಗಳು, ಕಾಮೆಂಟ್‌ಗಳು ಹಾಗೂ ಇತರೆ ಡಿಜಿಟಲ್ ದಾಖಲೆಗಳನ್ನು ಪ್ರಮುಖ ಸಾಕ್ಷಿಗಳಾಗಿ ಸಂಗ್ರಹಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಸುಮಾರು 50 ಪುಟಗಳ ಚಾರ್ಜ್‌ಶೀಟ್ ತಯಾರಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಕೇಂದ್ರ ಕಚೇರಿಗಳಿಗೆ ಪೊಲೀಸರು ಪತ್ರ ಬರೆದಿದ್ದು, ಕೆಲವು ಖಾತೆಗಳ (ಐಡಿ) ವಿವರಗಳು ಮತ್ತು ತಾಂತ್ರಿಕ ಮಾಹಿತಿಗಾಗಿ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಇನ್ನೂ ಕೆಲವು ಸಾಮಾಜಿಕ ಜಾಲತಾಣ ಖಾತೆಗಳ ಸಂಪೂರ್ಣ ಮಾಹಿತಿಗಳು ಲಭ್ಯವಾಗಿಲ್ಲದಿರುವುದು ತನಿಖೆಗೆ ಅಡ್ಡಿಯಾಗಿರುವ ಅಂಶವಾಗಿದೆ.

80 ಶಾಸಕರ ಬೆಂಬಲ ಪ್ರಶ್ನೆಯಲ್ಲ, ಸಮರ್ಥರಿಗೆ ಅವಕಾಶ ಸಿಗುತ್ತದೆ: ಸತೀಶ್ ಜಾರಕಿಹೊಳಿ

0

ದಾವಣಗೆರೆ: ಮುಖ್ಯಮಂತ್ರಿ ಸ್ಥಾನಕ್ಕೆ 80–90 ಶಾಸಕರ ಬೆಂಬಲವಿದೆ ಎನ್ನುವ ವಿಚಾರವೇ ಪ್ರಶ್ನೆಯಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಸಮರ್ಥರಿಗೆ ಅವಕಾಶ ಸಿಗುವುದು ಸಹಜ, ಆದರೆ ಅಂತಹ ಸಂದರ್ಭ ಇನ್ನೂ ಬಂದಿಲ್ಲ. ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅಧಿಕಾರ ಹಂಚಿಕೆ ವಿಚಾರವಾಗಿ ನಿರ್ಮಾಣವಾಗಿರುವ ಗೊಂದಲ ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆ ಇತ್ತು. ಆದರೆ ಈ ವಿಚಾರದಲ್ಲಿ ಏಕೆ ವಿಳಂಬವಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ.

ಈ ಸಂಬಂಧ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕಿದ್ದು, ಅಲ್ಲಿಯವರೆಗೆ ಕಾಯುವುದು ಅನಿವಾರ್ಯವಾಗಿದೆ. ಗೊಂದಲ ಬೇಗ ಬಗೆಹರಿಯಲಿದೆ ಎಂಬ ಆಶಾವಾದ ನಮ್ಮದು ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ 80–90 ಶಾಸಕರ ಬೆಂಬಲವಿದ್ದು, ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂಬ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕರ ಸಂಖ್ಯೆಯ ಆಧಾರದ ಮೇಲೆ ಚರ್ಚೆ ನಡೆಯುವುದಿಲ್ಲ ಎಂದು ಹೇಳಿದರು.

ದಿ.ಕೆಂಗಲ್ ಹನುಮಂತಯ್ಯ ರಾಜ್ಯ ಕಂಡ ಪ್ರಾಮಾಣಿಕ, ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯನವರು, ರಾಜ್ಯ ಕಂಡ ಪ್ರಾಮಾಣಿಕ ಹಾಗೂ ಧೀಮಂತ ರಾಜಕಾರಣಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಇಂದು ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ರವರ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ರವರು ಒಬ್ಬ ಪ್ರಾಮಾಣಿಕ ಹಾಗೂ ಧೀಮಂತ ರಾಜಕಾರಣಿ. ಸುಂದರವಾದ ಭವ್ಯವಾದ ವಿಧಾನಸೌಧ ನಿರ್ಮಿಸಿದ ಕೀರ್ತಿ ಅವರಿ ಗೆ ಸಲ್ಲುತ್ತದೆ. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ನಾಯಕರಾಗಿ, ಕೇಂದ್ರದ ರೈಲ್ವೆ ಮಂತ್ರಿಯಾಗಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಸಂವಿಧಾನ ರಚನಾ ಸಮಿತಿಗೆ ಅಮೂಲ್ಯ ಸಲಹೆಗಳನ್ನು ನೀಡಿ, ರಾಷ್ಟ್ರ ನಿರ್ಮಾಣದಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದಂತಹ ಧೀಮಂತ ರಾಜಕಾರಣಿಯೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿಯಾಗಿದ್ದರು.

ಹನುಮಂತಯ್ಯನವರು ವಿಧಾನಸೌಧಕ್ಕೆ ಬುನಾದಿ ಹಾಕಿದರಾದರೂ, ಉದ್ಘಾಟನೆಯ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿಯಾಗಿರಲಿಲ್ಲವೆಂಬುದು ನೋವಿನ ಸಂಗತಿ. ಅವರ ಆದರ್ಶ ಮತ್ತು ಸಿದ್ದಾಂತಗಳು ಎಲ್ಲರಿಗೂ ಮಾರ್ಗದರ್ಶನ ನೀಡುತ್ತವೆ ಎಂದರು.

ಮುಡಾ ಹಗರಣ: ಲೋಕಾಯುಕ್ತ ತನಿಖಾಧಿಕಾರಿಗಳ ಮೇಲೆಯೇ 4.35 ಕೋಟಿ ಲಂಚ ಆರೋಪ

0

ಮೈಸೂರು: ಮುಡಾ ಹಗರಣ ಇದೀಗ ಭೂ ಹಂಚಿಕೆ ಆರೋಪದ ಮಟ್ಟವನ್ನು ಮೀರಿ, ತನಿಖಾ ಸಂಸ್ಥೆಯ ನೈಜತೆ ಮತ್ತು ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಸ್ನೇಹಮಯಿ ಕೃಷ್ಣ ತಮ್ಮ ಬಳಿ ಸ್ಪಷ್ಟ ದಾಖಲೆಗಳಿವೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಅವರ ಕೈಗೆ ಸಿಕ್ಕ ದಾಖಲೆಗಳಲ್ಲಿ “DCM” ಎಂಬ ಉಲ್ಲೇಖದ ಮುಂದೆ 12 ಕೋಟಿ 50 ಲಕ್ಷ ರೂಪಾಯಿ ಹಣ ನೀಡಿರುವ ಮಾಹಿತಿ ಇರುವುದಾಗಿ ತಿಳಿಸಿದ್ದಾರೆ. “DCM” ಎಂದರೆ ಕಂಪನಿಯ ಹೆಸರೋ? ಅಥವಾ ವ್ಯಕ್ತಿಯೋ? ಯಾರ ಸೂಚನೆಯಂತೆ ಈ ಹಣ ನೀಡಲಾಗಿದೆ? ಯಾರಿಗೆ ಹಣ ತಲುಪಿದೆ? ಎಂಬ ಹಲವು ಗಂಭೀರ ಪ್ರಶ್ನೆಗಳು ಉದ್ಭವವಾಗಿವೆ.

ಈ ಎಲ್ಲಾ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ನ್ಯಾಯಾಲಯ ಈ ಅರ್ಜಿಯನ್ನು ಸ್ವೀಕರಿಸಿದೆ. ಈ ಪ್ರಕರಣದ ವಿಚಾರಣೆ ಫೆಬ್ರವರಿ 20ರಂದು ನಡೆಯಲಿದೆ.

ಮುಡಾ ಹಗರಣ ಈಗ ಕೇವಲ ಭ್ರಷ್ಟಾಚಾರ ತನಿಖೆಯಲ್ಲ, ತನಿಖೆ ನಡೆಸಿದ ಸಂಸ್ಥೆಯ ಮೇಲೆಯೇ ಸಂಶಯದ ನೆರಳು ಬೀಳುವಂತಹ ಪರಿಸ್ಥಿತಿಗೆ ತಲುಪಿದೆ. ಫೆಬ್ರವರಿ 20ರ ನ್ಯಾಯಾಲಯದ ವಿಚಾರಣೆ ಈ ಆರೋಪಗಳಿಗೆ ಸ್ಪಷ್ಟ ಉತ್ತರ ನೀಡುತ್ತದೆಯೇ? ಅಥವಾ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬೀಳುತ್ತವೆಯೇ? ಎಂಬುದರ ಮೇಲೆ ಇಡೀ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.

 

ಶಬರಿಮಲೆ ಚಿನ್ನ ಕಳವು ಪ್ರಕರಣ: ನಟ ಜಯರಾಮ್ʼಗೆ ಇ.ಡಿ ನೋಟಿಸ್

0

ಕೇರಳ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಿಶೇಷ ತನಿಖಾ ದಳ (ಎಸ್ಐಟಿ) ವಿಚಾರಣೆಗೆ ಒಳಗಾಗಿರುವ ಹಿರಿಯ ನಟ ಹಾಗೂ ‘ಕಾಂತಾರ’ ಸಿನಿಮಾದಲ್ಲಿ ನಟಿಸಿರುವ ಜಯರಾಮ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ಜಾರಿ ಮಾಡಿದೆ. ಮುಂದಿನ ಮಂಗಳವಾರ ಕೊಚ್ಚಿಯಲ್ಲಿರುವ ಇ.ಡಿ ವಲಯ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಜತೆ ಜಯರಾಮ್ ಅವರ ಸಂಬಂಧದ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಇ.ಡಿ ಈ ನೋಟಿಸ್ ಜಾರಿ ಮಾಡಿದೆ. ಈಗಾಗಲೇ ಉನ್ನಿಕೃಷ್ಣನ್ ಪೊಟ್ಟಿಯನ್ನು ವಿಚಾರಣೆ ನಡೆಸುತ್ತಿರುವ ತನಿಖಾ ಸಂಸ್ಥೆ, ಈ ಹಿನ್ನೆಲೆಯಲ್ಲಿ ಜಯರಾಮ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮುಂದಾಗಿದೆ.

ಈ ಹಿಂದೆ ಎಸ್ಐಟಿ ನಡೆಸಿದ ವಿಚಾರಣೆಯಲ್ಲಿ, ಉನ್ನಿಕೃಷ್ಣನ್ ಪೊಟ್ಟಿ ಜತೆ ಯಾವುದೇ ಹಣಕಾಸಿನ ವ್ಯವಹಾರ ಹೊಂದಿಲ್ಲ ಎಂದು ಜಯರಾಮ್ ಸ್ಪಷ್ಟಪಡಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿ ಜಯರಾಮ್ ಅವರನ್ನು ಅವರ ಚೆನ್ನೈ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆಯ ವೇಳೆ, ಉನ್ನಿಕೃಷ್ಣನ್ ಪೊಟ್ಟಿ ಅವರೊಂದಿಗೆ ಶಬರಿಮಲೆ ದೇಗುಲದಲ್ಲಿ ಹಾಗೂ ಅವರ ಮನೆಯಲ್ಲಿ ನಡೆದ ಹಲವು ಪೂಜಾಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಕುರಿತು ಪ್ರಶ್ನಿಸಲಾಗಿತ್ತು. ಜೊತೆಗೆ, ಕೊಟ್ಟಾಯಂ ಜಿಲ್ಲೆಯ ಎಳಂಪಲ್ಲಿ ದೇವಸ್ಥಾನದಲ್ಲಿ ಬಾಗಿಲಿನ ಚೌಕಟ್ಟು (ಕಟ್ಟಿಲಪ್ಪಲಿ) ಪ್ರತಿಷ್ಠಾಪನೆ ಹಾಗೂ ಬಾಗಿಲಿನ ಫಲಕಗಳ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಿ ಜಯರಾಮ್ ತಿಳಿಸಿದ್ದರು.

ಆದರೆ, ಪೊಟ್ಟಿ ಜತೆ ಯಾವುದೇ ರೀತಿಯ ಹಣಕಾಸು ವ್ಯವಹಾರ ನಡೆಸಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಆಧಾರದ ಮೇಲೆ ಎಸ್ಐಟಿ ತನಿಖಾ ತಂಡ ಜಯರಾಮ್ ಅವರನ್ನು ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿತ್ತು.

ಸಿದ್ದರಾಮಯ್ಯರೊಂದಿಗೆ ನಡೆದ ಮಾತುಕತೆ ಬಗ್ಗೆ ನನಗೆ ಸ್ಪಷ್ಟತೆ ಇದೆ: ಡಿಸಿಎಂ ಡಿಕೆ ಶಿವಕುಮಾರ್

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಾವು ಏನು ಮಾತನಾಡಿದ್ದೇವೆ ಎಂಬುದು ನನಗೆ ಸ್ಪಷ್ಟವಾಗಿದೆ. ನಾವು ಯಾವ ಮಾತನ್ನೂ ಕದ್ದುಮುಚ್ಚಿ ಮಾತನಾಡಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೊಂದಲ ಬೇರೆಯವರಿಗೆ ಇರಬಹುದು, ಆದರೆ ನನಗೆ ಯಾವುದೇ ಗೊಂದಲ ಇಲ್ಲ. ನಾವು ನಮ್ಮ ವರಿಷ್ಠರೊಂದಿಗೆ ಚರ್ಚೆ ಮಾಡಿಕೊಂಡಿದ್ದೇವೆ. ಅನಾವಶ್ಯಕವಾಗಿ ಟೆನ್ಶನ್ ತೆಗೆದುಕೊಳ್ಳುವುದರಿಂದಾಗಲಿ, ಹೇಳಿಕೆ ನೀಡುವುದರಿಂದಾಗಲಿ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದರು.

ನನ್ನ ಪರ ಅಥವಾ ವಿರುದ್ಧವಾಗಿ ಶಾಸಕರು ಹಾಗೂ ಸಚಿವರು ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಮೌನ ಪಾಲಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ. ಅದನ್ನು ಪಾಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಡಿಕೆಶಿ ಹೇಳಿದರು.

ಇನ್ನು ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಇಂದು ಸಂಜೆ ಎಐಸಿಸಿ ನಾಯಕರು ನನ್ನನ್ನು ಚರ್ಚೆಗೆ ಕರೆದಿದ್ದಾರೆ. ಕೇರಳ ಪ್ರವಾಸ ಮುಗಿಸಿಕೊಂಡು ಇದೀಗ ಅಸ್ಸಾಂಗೆ ತೆರಳಲಿದ್ದೇನೆ ಎಂದು ತಿಳಿಸಿದರು.

ಗಂಡು ಮಗು ಬೇಕು ಎಂದು ಜಾತ್ರೆಯಲ್ಲಿ ಬಾಲಕನ ಕಿಡ್ಯ್ನಾಪ್:‌ ಇಬ್ಬರ ಬಂಧನ

0

ತುಮಕೂರು: ಜಾತ್ರೆಯ ಸಂಭ್ರಮದ ನಡುವೆ ನಡೆದಿದ್ದ ಮಗು ಅಪಹರಣ ಪ್ರಕರಣದಲ್ಲಿ ಶಿರಾ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದಲ್ಲಿ ನಡೆದ ಶ್ರೀರಂಗ ಜಾತ್ರಾ ಮಹೋತ್ಸವದ ವೇಳೆ ಅಪಹರಣಗೊಂಡಿದ್ದ ಎರಡುವರೆ ವರ್ಷದ ಗಂಡು ಮಗು, ಬೆಂಗಳೂರಿನ ಕೊರಮಂಗಲದಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್ ಸಿಕ್ಕಿದೆ.

ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಶಾಂತಮೇರಿ ಎಂಬ ಮಹಿಳೆಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಇದ್ದರೂ, ಗಂಡು ಮಗು ಬೇಕೆಂಬ ದುರಾಸೆಯಿಂದ ಸಂಬಂಧಿ ನರಸಯ್ಯನೊಂದಿಗೆ ಸೇರಿ ಈ ಅಪಹರಣಕ್ಕೆ ಸಂಚು ರೂಪಿಸಿದ್ದಾಳೆ. ಜಾತ್ರೆಗೆ ಎರಡು ದಿನಗಳ ಮುಂಚಿತವಾಗಿಯೇ ತುಮಕೂರಿಗೆ ಬಂದಿದ್ದ ಆರೋಪಿಗಳು, ಪೂರ್ವ ಯೋಜನೆಯೊಂದಿಗೆ ಜಾತ್ರೆಯಲ್ಲಿ ಮಗುವನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

ಜಾತ್ರಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಚಲನವಲನ ಪತ್ತೆ ಹಚ್ಚಿದ ಪೊಲೀಸರು, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆ ಶೋಧ ನಡೆಸಿದರು. ಕೊನೆಗೆ ಬೆಂಗಳೂರು ಕೊರಮಂಗಲದಲ್ಲಿರುವ ಶಾಂತಮೇರಿ ನಿವಾಸದಲ್ಲಿ ಮಗುವನ್ನು ಪತ್ತೆ ಮಾಡಿ ರಕ್ಷಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಈ ಘಟನೆ 21ನೇ ಶತಮಾನದಲ್ಲೂ ಸಮಾಜದಲ್ಲಿ ಜೀವಂತವಾಗಿರುವ ಲಿಂಗಭೇದ ಮನೋಭಾವದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

error: Content is protected !!