Home Blog Page 269

ಉತ್ತಮ ಸೇವೆಗೆ ಆಝಾದ್ ಬ್ಯಾಂಕ್ ಬದ್ಧ: ಸರಫ್‌ರಾಜ್ ಅಹ್ಮದ್ ಎಸ್. ಉಮಚಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ದಿ. ಆಝಾದ್ ಕೋ-ಆಪ್ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ, ಸೌಲಭ್ಯ ಒದಗಿಸಲು ಬದ್ಧತೆಯಿಂದ ಕಾರ್ಯ ಮಾಡುತ್ತಿದೆ ಎಂದು ಬ್ಯಾಂಕ್‌ನ ಚೇರಮನ್ ಸರಫ್‌ರಾಜ್ ಅಹ್ಮದ್ ಎಸ್. ಉಮಚಗಿ ಹೇಳಿದರು.

ಅವರು ಬ್ಯಾಂಕ್‌ನ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಂಪರ್ಕ ಸಭೆ ಹಾಗೂ 2026ರ ದಿನದರ್ಶಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಹಕರು ಈ ಬ್ಯಾಂಕ್‌ನ ಮೇಲೆ ಇಟ್ಟಿರುವ ವಿಶ್ವಾಸದಿಂದಾಗಿ ಹಾಗೂ ಅವರ ಠೇವಣಿ, ಭದ್ರತಾ ಠೇವಣಿಯಿಂದಾಗಿ ಬ್ಯಾಂಕ್ ಲಾಭದೆಡೆಗೆ ಮುನ್ನಡೆದಿದೆ. ಬಡ ಮತ್ತು ಮಧ್ಯಮ ವರ್ಗದ ಸಣ್ಣ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರನ್ನಾಗಿಸಲು ಬ್ಯಾಂಕ್ ಸಹಕರಿಸುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದಗ ಹೆಸ್ಕಾಂನ ಅಧೀಕ್ಷಕ ಅಭಿಯಂತರರಾದ ನಜ್ಮುನ್ನಿಸಾ ಕೆ. ಅಲ್ಲಾವಲಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ, ಆಝಾದ್ ಬ್ಯಾಂಕ್ ಪ್ರಗತಿಪಥದಲ್ಲಿ ಸಾಗಿ ಬಂದಿರುವುದು ಹೆಮ್ಮೆಯ ವಿಚಾರ. ಬರಲಿರುವ ದಿನಗಳಲ್ಲಿ ಬ್ಯಾಂಕ್ ಗ್ರಾಹಕರಿಗೆ ಇನ್ನೂ ಹೆಚ್ಚಿನ ರೀತಿಯ ಸೌಲಭ್ಯಗಳನ್ನು ನೀಡಲಿ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶ ಮುಹಮ್ಮದ್ ಖಾನ್ ಪಠಾಣ, ಎಂ.ಎನ್. ಕುಕನೂರ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್‌ನ ಗ್ರಾಹಕರಾದ ನಿವೃತ್ತ ಪ್ರಾಚಾರ್ಯ ಎಂ.ಎಲ್. ಗುಳೇದಗುಡ್ಡ, ಡಾ. ಪ್ಯಾರ ಅಲಿ ನೂರಾನಿ ಮಾತನಾಡಿದರು.

ಬಿಲಾಲವಲಿದ್ ಖಾಲಿದ್ ಕುರಾನ್ ಪಠಿಸಿದರು, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎ.ಜಿ. ಯರಗುಡಿ ಸ್ವಾಗತಿಸಿದರು. ಪ್ರಾ. ಮುಸ್ತಾನ ಅಲಿ ಶಿರಹಟ್ಟಿ ಪರಿಚಯಿಸಿ ನಿರೂಪಿಸಿದರು. ಟಿಕಣದಾರ ಹೊಸ ವರ್ಷದ ಗೀತೆ ಹಾಡಿದರು. ಶಾಖಾ ವ್ಯವಸ್ಥಾಪಕ ಆರ್.ಎಂ. ನದಾಫ್ ವಂದಿಸಿದರು.

ಬೀದರ್| ಪಿಡಿಓ ಕುರ್ಚಿ ಮೇಲೆ ಮಲಗಿದ ಶ್ವಾನ! Video Viral!

0

ಬೀದರ್: ಜಿಲ್ಲೆಯ ಔರಾದ್ ತಾಲ್ಲೂಕಿನ ‌ಏಕಂಬ ಗ್ರಾಮ ಪಂಚಾಯಿತಿ ಬೀದಿ ನಾಯಿಗಳ ತಾಣವಾಗಿದೆ ಮರ್ರೆ.

ಹೌದು, ಗ್ರಾಮ ಪಂಚಾಯತಿ ಸಿಬ್ಬಂದಿ ಎಂದಿನಂತೆ ಬೆಳಗ್ಗೆ ಪಂಚಾಯಿತಿ ಕಚೇರಿ ಬಾಗಿಲು ಓಪನ್ ಮಾಡಿ ಹೋಗಿದ್ದಾರೆ. ಈ ವೇಳೆ ಶ್ವಾನ, ಯಾರ ಭಯವೂ ಇಲ್ಲದೇ ನೇರವಾಗಿ ಪಂಚಾಯ್ತಿ ಕಚೇರಿಯೊಳಗೆ ನುಗ್ಗಿ ಪಿಡಿಓ ಕುರ್ಚಿ ಏರಿ ಆಯಾಗಿ ಮಲಗಿಕೊಂಡಿದೆ. ಈ ವಿಚಿತ್ರ ಘಟನೆ ಸ್ಥಳೀಯರ ಗಮನ ಸೆಳೆದಿದ್ದು, ವಿಡಿಯೋ ವೈರಲ್ ಆಗಿದೆ.

ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಚೇರಿಯ ನಿರ್ವಹಣೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ನಿರ್ಧಾರ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಿಲ್ಲಿ ಗದಗ ತಾಲೂಕಿನ 36 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.

ಇಲ್ಲಿಯ ಸರಕಾರಿ ಮಾದರಿ ದ್ವಿಭಾಷಾ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಗದಗ ಗ್ರಾಮೀಣ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಲಕ್ಕುಂಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಲಕ್ಕುಂಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ದಿಸೆಯಲ್ಲಿ ಬೇಗನೆ ಪೂರ್ವ ಪ್ರಾಥಮಿಕ ಸರಕಾರಿ ಶಾಲೆ ಆರಂಭವಾದರೆ 1ನೇ ತರಗತಿಗೆ ಅದೇ ಮಕ್ಕಳು ಪ್ರವೇಶ ಪಡೆಯುತ್ತಾರೆ ಎಂಬ ಉದ್ದೇಶದಿಂದ 36 ಕಡೆ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುತ್ತಿದ್ದೇವೆ. ಇದಕ್ಕೆ ಗ್ರಾಮ ಪಂಚಾಯಿತಿ, ಎಸ್‌ಡಿಎಂಸಿ, ಗ್ರಾಮಸ್ಥರ ಸಹಕಾರ ಬೇಕು ಎಂದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಎಸ್.ಎಚ್. ಶೆಟ್ಟಿನಾಯ್ಕರ, ಪಿಡಿಓ ಅಮೀರನಾಯಕ ಮಾತನಾಡಿದರು. ಸಿಆರ್‌ಪಿ ಕೆ.ಟಿ. ಮೀರಾನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಗವಿಶಿದ್ದಪ್ಪ ಯಲಿಶಿರುಂಜ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹದ ನಿರ್ದೇಶಕ ಶಂಕರ ಹಡಗಲಿ, ಗ್ರಾ.ಪಂ ಸದಸ್ಯರಾದ ಅನಸಮ್ಮ ಅಂಬಕ್ಕಿ, ಕುಬೇರಪ್ಪ ಬೆಂತೂರು, ಅಶೋಕ ಬೂದಿಹಾಳ, ಎನ್.ಎಚ್. ಪಾಟೀಲ, ಎಸ್.ಬಿ. ಹೊರಕೇರಿ, ಪಿ.ಎಂ. ಅಯ್ಯನಗೌಡರ, ರಮಜಾನಸಾಬ ತಹಸೀಲ್ದಾರ, ಪವಿತ್ರಾ ಬಣವಿ, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

ಪಿ.ಎನ್. ಶಿರೋಳ ಸ್ವಾಗತಿಸಿದರು. ಅಂಜನಾ ಕರಿಯಲ್ಲಪ್ಪನವರ ನಿರೂಪಿಸಿ ವಂದಿಸಿದರು.

ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲೆ ಮರೆಯ ಕಾಯಿಯಂತೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಈ ವೇದಿಕೆಯು ಸಹಕಾರಿಯಾಗಿದೆ. ಶಿಕ್ಷಕರು ಮಕ್ಕಳಲ್ಲಿಯ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ತಮ್ಮಲ್ಲಿಯ ಎಲ್ಲ ಶಿಕ್ಷಣವನ್ನು ಧಾರೆ ಎರೆದು ಅವರ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮ ವಹಿಸಬೇಕು. ಈ ದಿಸೆಯಲ್ಲಿ ಗ್ರಾಮ ಪಂಚಾಯಿತಿಯು ಶಿಕ್ಷಣ ಅಭಿವೃದ್ಧಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ ಎಂದರು.

ಸಾರ್ವಜನಿಕರು ನಿರ್ಭಯವಾಗಿ ದೂರು ಸಲ್ಲಿಸಿ: ಸಚಿವ ಎಚ್.ಕೆ. ಪಾಟೀಲ್

0

ವಿಜಯಸಾಕ್ಷಿ ಸುದ್ದಿ, ಗದಗ: `ಪ್ರಭುವಿನೆಡೆಗೆ ಪ್ರಭುತ್ವ’ ಎಂಬ ವಿನೂತನ ಕಾರ್ಯಕ್ರಮವನ್ನು ಗದಗ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದ್ದು, ಪ್ರಜಾಪ್ರಭುತ್ವದ ಆಡಳಿತದಲ್ಲಿ ಪ್ರಜೆಗಳಿಗೆ ತೀವ್ರವಾಗಿ ಸ್ಪಂದಿಸಿ, ಪಾರದರ್ಶಕತೆ ಮೆರೆಯಲು ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಇಂದು ಪ್ರ.ಪ್ರ ಕಾರ್ಯಕ್ರಮದ 6ನೇ ಎಸ್‌ಒಎಸ್ ಲೋಕಾರ್ಪಣೆಗೊಳಿಸಲಾಗಿದೆ ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಅವರು ಗುರುವಾರ ಗದಗ ನಗರದ ಮುಳಗುಂದ ನಾಕಾದಲ್ಲಿ ಪ್ರ.ಪ್ರ ಕಾರ್ಯಕ್ರಮದ 6ನೇ ಎಸ್‌ಒಎಸ್ ಲೋಕಾರ್ಪಣೆಗೊಳಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಗದಗ ನಗರದಲ್ಲಿ ಈ ಕಲ್ಪನೆ ದೇಶದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿದೆ. ಹಿಂದಿನ ಅರಸರ ಕಾಲದಲ್ಲಿ ನಾಗರಿಕರಿಗೆ ತೊಂದರೆ ಆದಾಗ ನ್ಯಾಯದ ಘಂಟೆಯನ್ನು ಬಾರಿಸಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದ್ದು, ತಂತ್ರಜ್ಞಾನಕ್ಕೆ ತಕ್ಕಂತೆ ಬಟನ್ ಒತ್ತುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಬಟನ್ ಒತ್ತಿದಾಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ನವರು ಮಾಹಿತಿ ಪಡೆಯುತ್ತಾರೆ. ಜನರ ದೂರು ಆಲಿಸಿ ತಕ್ಷಣ ಸಂಬಂಧಿಸಿದವರಿಗೆ ಕಳುಹಿಸಿಕೊಡುತ್ತಾರೆ. ಇದರಿಂದ ಕೆಲವೇ ಗಂಟೆಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಗರದ 16ನೇ ವಾರ್ಡ್ ಪೌರ ಕಾರ್ಮಿಕರಾದ ಮಂಜುಳಾ ದುರಗಪ್ಪ ಬಂಗಿ ಅವರು ಪ್ರ.ಪ್ರ ಮೂಲಕ ತಮಗೆ ಮನೆ ಮಂಜೂರು ಮಾಡಿಕೊಡುವಂತೆ ಅಹವಾಲನ್ನು ನಿವೇದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಪ್ರಭು ಬುರಬುರೆ, ಸಿದ್ದು ಪಾಟೀಲ, ಅಶೋಕ ಮಂದಾಲಿ, ಎಸ್.ಎನ್ ಬಳ್ಳಾರಿ, ಗಂಗಪ್ಪ ಎಂ, ಎ.ಎ. ಕಂಬಾಳಿಮಠ, ರಾಜಾರಾಮ್ ಪವಾರ, ವಸಂತ ಮಡ್ಲೂರ, ಕೊಟ್ರೇಶ್ ವಿಭೂತಿ ಮುಂತಾದವರು ಉಪಸ್ಥಿತರಿದ್ದರು.

ಸಾಮಾನ್ಯರು ಅಂಜಿಕೆ, ಭಯ ಇಲ್ಲದೆ ನಿರ್ಭಯವಾಗಿ, ನಿಸ್ಸಂದೇಹದಿಂದ ದೂರು ನೀಡುವ ವಿನೂತನ ವ್ಯವಸ್ಥೆ ಇದಾಗಿದ್ದು, ಇದರಿಂದ ಆಡಳಿತ ವ್ಯವಸ್ಥೆ ಚುರುಕುಗೊಳ್ಳುತ್ತದೆ, ದೂರು ನೀಡಿದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಸಾರ್ವಜನಿಕರು ಯಾವುದೇ ಭಯವಿಲ್ಲದೆ ಡಿಸಿ, ಎಸ್ಪಿ, ಸಿಇಓ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು.

  • ಎಚ್.ಕೆ. ಪಾಟೀಲ.
    ಜಿಲ್ಲಾ ಉಸ್ತುವಾರಿ ಸಚಿವರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಹಿರಿಯ ನಾಗರಿಕರ ರಕ್ಷಣೆ, ಅಕ್ರಮ ಮದ್ಯ ಮಾರಾಟ, ರಸ್ತೆ ಸುರಕ್ಷತಾ ಕ್ರಮ, ಸಮಾಜ ದ್ರೋಹಿ ಚಟುವಟಿಕೆ, ಅನುಮಾನಾಸ್ಪದ ವಸ್ತುಗಳು, ಜಮೀನು ಹಕ್ಕುಗಳ ಪ್ರಕರಣ, ಪಿಂಚಣಿ ಸಂಬಂಧಿಸಿದ ಪ್ರಕರಣ, ಪಂಚಾಯ್ತಿ ಸೇವೆಗೆ ಸಂಬಂಧಿಸಿ ಸಾರ್ವಜನಿಕರು ಪ್ರ.ಪ್ರ ಮೂಲಕ ದೂರು ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳಿಗೆ ಸುವರ್ಣಸೌಧ ದರ್ಶನ ಭಾಗ್ಯ!

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ವಿವಿಧ ಪ್ರೇಕ್ಷಣೀಯ ಹಾಗೂ ಶಾಸನಬದ್ಧ ಸಂಸ್ಥೆಗಳನ್ನು ನೋಡಲು ಅವಕಾಶ ಕಲ್ಪಿಸುವ ಮೂಲಕ ಅವರಲ್ಲಿ ಕನಸು ಬಿತ್ತುವ ಕೆಲಸಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಮುಂದಾದರು.

ಶಿರಹಟ್ಟಿ ತಾಲೂಕಿನ ವಿದ್ಯಾರ್ಥಿಗಳಿಗೆ ಅಂತಹ ಅವಕಾಶ ಕಲ್ಪಿಸಿ ಮಾದರಿಯಾಗಿದ್ದಾರೆ. ಕಳೆದ ವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನವನ್ನು ವೀಕ್ಷಿಸುವ ಅವಕಾಶವನ್ನು ಶಿರಹಟ್ಟಿ ತಾಲೂಕಿನ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಲ್ಪಿಸಿ ಖುದ್ದಾಗಿ ಎಲ್ಲಾ ವಿದ್ಯಾರ್ಥಿ/ಸಿಬ್ಬಂದಿಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಬರಮಾಡಿಕೊಂಡು ವಿಶೇಷ ಕಾಳಜಿ ಹಾಗೂ ಮುತುವರ್ಜಿ ವಹಿಸಿ ಅಧಿವೇಶನ ನಡೆಯುವ ಸ್ಥಳ, ಕಲಾಪಗಳ ವೀಕ್ಷಣೆ, ವಿವಿಧ ಮಹತ್ವದ ಜಾಗಗಳನ್ನು ವಿದ್ಯಾರ್ಥಿಗಳಿಗೆ ಸ್ವತಃ ತೋರಿಸಿ ಅವುಗಳ ಮಹತ್ವದ ಕುರಿತು ವಿವರಿಸಿದರು.

ಇಂದಿಗೂ ಶಾಸಕ ಡಾ. ಚಂದ್ರು ಲಮಾಣಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದಾಗ ಸ್ವತಃ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಓದಿನತ್ತ ಆಸಕ್ತಿ ಹೆಚ್ಚಿಸಿ ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲಕು ಹಾಕಿ, ಅವರಲ್ಲಿ ಸುಂದರ ಕನಸು ಕಟ್ಟುವ ಕೆಲಸವನ್ನು ಮಾಡುತ್ತಿರುವುದನ್ನು ಶಿಕ್ಷಕ ಸಮೂಹ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ.

ಈ ಸಂದರ್ಭದಲ್ಲಿ ಡಾ. ಬಸವರಾಜ ಧಾರವಾಡ, ಡಾ. ಬಿ.ಜಿ. ಜವಳಿ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ. ಅಗಡಿ, ಎಂ.ಎಸ್. ಶಿವಶೆಟ್ಟಿ, ಅವಿನಾಶ ಸಾಲಮನಿ ಸೇರಿದಂತೆ ಶಾಲಾ-ಕಾಲೇಜುಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಟಲ್ ಬಿಹಾರಿ ವಾಜಪೇಯಿ ಬದಲಾವಣೆಯ ಹರಿಕಾರ: ಬಿಜೆಪಿ ಹಿರಿಯ ನಾಯಕ ಸೋಮಣ್ಣ ಡಾಣಗಲ್ಲ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಅಂಗವಾಗಿ ಗ್ರಾಮದ ಶಂಕರಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.

ನಂತರ ಅಟಲ್‌ಜೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಡ ಮಕ್ಕಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸೋಮಣ್ಣ ಡಾಣಗಲ್ಲ, ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಬದಲಾವಣೆಗೆ ಕಾರಣರಾಗಿದ್ದಾರೆ. ಅವರು ಸಾಹಿತಿಗಳೂ ಆಗಿದ್ದರು. ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಅವರು ಪ್ರಧಾನಮಂತ್ರಿ ಸಡಕ್ ಯೋಜನೆ, ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಹೀಗೆ ಹತ್ತಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ದೇಶವನ್ನು ಅಭಿವೃದ್ಧಿಗೊಳಿಸಿದ್ದನ್ನು ಭಾರತೀಯರು ಎಂದೂ ಮರೆಯುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ವೈ. ಹುನಗುಂದ, ಕೃಷ್ಣ ಬಿದರಳ್ಳಿ, ಆನಂದ ತವರಿ, ನಿಂಗಪ್ಪ ದಾನಪ್ಪನವರ, ವೀರಣ್ಣ ಅಕ್ಕೂರ, ಶಂಭು ಹುನಗುಂದ, ಶಿವಾನಂದ ತಳವಾರ, ಗಿಡ್ಡಯ್ಯ ನಾವಿ, ಕೃಷ್ಣ ದಾಮೋದರ, ಶಂಕರ ಮಾಳಗಿ, ಸಿದ್ಧು ಪೂಜಾರ, ಮಂಜು ಬದಿ, ಸುನೀಲ್ ತೋಟದ, ಮಂಜುನಾಥ ದೇಸಾಯಿ, ಈರಣ್ಣ ಪುಟ್ಟಪ್ಪನವರ, ಎಂ.ಟಿ. ಬಡಿಗೇರ, ಮುನ್ನಾ ಶಿರಬಡಗಿ ಇದ್ದರು.

ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ಕಳ್ಳತನ: ಕಳ್ಳಿಯರ ಗ್ಯಾಂಗ್ ಹೆಡೆಮುರಿ ಕಟ್ಟಿದ ಖಾಕಿ!

0

ಕಲಬುರಗಿ: ರಾಜ್ಯದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್​​ ಪ್ರಯಾಣ ವ್ಯವಸ್ಥೆ ನೀಡಲಾಗಿದ್ದರೂ, ಇದನ್ನೇ ದುರುಪಯೋಗ ಮಾಡಿಕೊಂಡು ಮಹಿಳಾ ಪ್ರಯಾಣಿಕರ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಲೇಡಿ​​ ಗ್ಯಾಂಗ್​​ ಇದೀಗ ಬಂಧನವಾಗಿದೆ.

ಕಲಬುರಗಿ ನಗರದಲ್ಲಿ ಮಾಂಗರವಾಡಿ ಬಡಾವಣೆಯ ಚಿಮನ್ ಕಾಂಬಳೆ, ಶಕೀಲಾಬಾಯಿ ಉಪಾಧ್ಯಾ ಮತ್ತು ಮಾಧುರಿ ಬಂಧಿತರು. ಕಳ್ಳತನವನ್ನೇ ಇವರು ವೃತ್ತಿ ಮಾಡಿಕೊಂಡಿದ್ದು, ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನ ಇದಕ್ಕಾಗಿ ಇವರು ಬಂಡವಾಳ ಮಾಡಿಕೊಂಡಿದ್ದರು. ಕಲಬುರಗಿ ನಗರದಿಂದ ಜಿಲ್ಲೆಯ ಸೇಡಂ, ಶಹಾಬಾದ್ ಸೇರಿ ಹಲವೆಡೆ ಉಚಿತ ಪ್ರಯಾಣ ಮಾಡಿ ಕಳ್ಳತನ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಬಸ್ ನಿಲ್ದಾಣಗಳಲ್ಲಿ ಓಡಾಡಿಕೊಂಡು ಚಿನ್ನಾಭರಣ ಧರಿಸಿದ್ದ ಮಹಿಳಾ ಪ್ರಯಾಣಿಕರನ್ನ ಮೊದಲು ಈ ಗ್ಯಾಂಗ್​​ ಗಮನಿಸುತ್ತಿತ್ತು. ಆ ಬಳಿಕ ಮಹಿಳಾ ಪ್ರಯಾಣಿಕರು ಬಸ್ ಹತ್ತುವ ವೇಳೆ ಎಂಟ್ರಿ ಕೊಡ್ತಿದ್ದ ಇವರು, ಅವರನ್ನು ಸುತ್ತುವರಿಯುತ್ತಿದ್ದರು. ಗಮನ ಬೇರೆಡೆ ಸೆಳೆದು ಚಿನ್ನದ ನೆಕ್ಲೇಸ್​​, ಪದಕ, ಉಂಗುರ, ಕಿವಿ ಓಲೆ, ಮಾಂಗಲ್ಯ ಸರಗಳನ್ನು ಕ್ಷಣಾರ್ಧದಲ್ಲಿ ಕಟ್ ಮಾಡಿ ಯಾರಿಗೂ ಅನುಮಾನ ಬಾರದಂತೆ ಕದ್ದು ಎಸ್ಕೇಪ್​​ ಆಗುತ್ತಿದ್ದರು ಎನ್ನಲಾಗಿದೆ. ಹಲವು ತಿಂಗಳಿಂದ ಮಹಿಳಾ ಪ್ರಯಾಣಿಕರ ನಿದ್ದೆಗೆಡಿಸಿದ್ದ ಈ ಮೂವರು ಸರಗಳ್ಳಿಯರನ್ನು ಕೊನೆಗೂ ಖಾಕಿ ಹೆಡೆಮುರಿ ಕಟ್ಟಿದೆ.

ದಾವಣಗೆರೆಯಲ್ಲಿ ಅಗ್ನಿ ದುರಂತ; ಬೆಳೆ ರಕ್ಷಿಸಿಕೊಳ್ಳಲು ಹೋಗಿ ರೈತ ಸಜೀವದಹನ!

0

ದಾವಣಗೆರೆ:- ಜಿಲ್ಲೆ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ತಾನು ಬೆಳೆದಿದ್ದ ತಾಳೆ ಬೆಳೆಯನ್ನು ರಕ್ಷಣೆ ಮಾಡಲು ಹೋಗಿ ರೈತ ಸಜೀವ ದಹನವಾಗಿರುವ ಘಟನೆ ಜರುಗಿದೆ.

ಈಶ್ವರಪ್ಪ (75) ಮೃತ ರೈತ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಈಶ್ವರಪ್ಪ ತನ್ನ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತಾಳೆ ಮರ ಬೆಳೆದಿದ್ದ. ಆದರೆ ಏಕಾಏಕಿ ತಾಳಿ ಮರಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಇದರಿಂದ ಗಾಬರಿಗೊಂಡ ರೈತ ಈಶ್ವರಪ್ಪ ತಾನು ಹಾಕಿದ್ದ ತಾಳೆ ಉಳಿಸಲುಕೊಳ್ಳಲು ಮುಂದಾಗಿದ್ದಾನೆ. ಆದ್ರೆ, ದುರ್ವೈವ ಬೆಂಕಿಯಲ್ಲಿ ತಾಳೆ ಜೊತೆ ರೈತ ಈಶ್ವರಪ್ಪ ಸಹ ಸಜೀವ ದಹನವಾಗಿದ್ದಾರೆ ಎಂದು ತಿಳಿದು ಬಂದಿದೆ.

ಫ್ಯಾನ್ಸ್ ವಾರ್ ಬೇಡ, ಅನ್ಯೋನ್ಯತೆ ಬೇಕು: ನಟ ಶಿವರಾಜ್‌ಕುಮಾರ್ ಖಡಕ್ ಸಂದೇಶ

0

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಸ್ಟಾರ್ ವಾರ್, ಫ್ಯಾನ್ಸ್ ವಾರ್ ವಿಚಾರ ಜೋರಾಗಿ ಕೇಳಿಬರುತ್ತಿರುವ ನಡುವೆಯೇ, ನಟ ಶಿವರಾಜ್‌ಕುಮಾರ್ ಅಭಿನಯದ ‘45’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, ಅಭಿಮಾನಿಗಳ ನಡುವಿನ ಗೊಂದಲಗಳಿಗೆ ಸ್ಪಷ್ಟ ಹಾಗೂ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾರ ಮನೆಯನ್ನೂ ಒಡೆಯಲು ಹೋಗಬಾರದು. ಯಾರ ಭಾವನೆಗಳ ಜೊತೆಗೆ ಆಟ ಆಡಬಾರದು. ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಬದುಕೋಣ, ಬದುಕಲು ಬಿಡೋಣ ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ನಾವು ಇರುವಷ್ಟು ದಿನ ಅನ್ಯೋನ್ಯವಾಗಿ ಹೊಂದಿಕೊಂಡು ಇರಬೇಕು,” ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

ಒಂದೇ ಸಿನಿಮಾದಲ್ಲಿ ಮೂವರು ಪ್ರಮುಖ ನಟರು ಅಭಿನಯಿಸಿರುವ ‘45’ ಚಿತ್ರದ ಬಿಡುಗಡೆಯ ಸಂದರ್ಭದಲ್ಲೇ ಈ ಸಂದೇಶ ರವಾನಿಸಿರುವ ಶಿವಣ್ಣ, ಫ್ಯಾನ್ಸ್ ವಾರ್‌ಗೆ ಅಂತ್ಯವಾಗಬೇಕೆಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಈ ಮೂಲಕ ತಮ್ಮ ಅಭಿಮಾನಿಗಳಿಗೂ ಸಮಾಜಕ್ಕೂ ಒಂದು ಸಕಾರಾತ್ಮಕ ಸಂದೇಶವನ್ನು ಪಾಸ್ ಮಾಡಿದ್ದಾರೆ. ಇನ್ನು ಮುಂದಾದರೂ ಫ್ಯಾನ್ಸ್ ವಾರ್‌ಗೆ ತೆರೆ ಬೀಳುತ್ತದೆಯೇ ಎಂಬುದು ಕಾದು ನೋಡಬೇಕಿದೆ.

ಸಹಕಾರಿ ಸಂಘಗಳು ರಾಜಕೀಯ ಬದಿಗಿಟ್ಟು ಬೆಳೆಯುವಂತಾಗಲಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುವ ಮೂಲಕ ಕೃಷಿ ಹಾಗೂ ಕೃಷಿ ಉಪ ಕಸಬುಗಳಿಗೆ ಸಹಕಾರಿ ಸಂಘಗಳ ಮೂಲಕ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ವಿತರಿಸುತ್ತಿದ್ದು, ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಗ್ರಾಮದಲ್ಲಿ ಸಹಕಾರಿ ಸಂಘಗಳ ಬೆಳವಣಿಗೆಯಿಂದ ಗ್ರಾಮೀಣ ಜನರ ಜೀವನ ಹಸನಾಗುವುದು ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಗದಗ ತಾಲೂಕಿನ ಮುಳಗುಂದ ಸಮೀಪದ ಸೊರಟೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡಾನ್ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸಚಿವರು ಮಾತನಾಡಿದರು.

ಗ್ರಾಮದಲ್ಲಿನ ಸಹಕಾರಿ ಸಂಘಗಳು ರಾಜಕೀಯ ಹೊರತುಪಡಿಸಿ ಸ್ಪರ್ಧಾತ್ಮಕ ಮನೋಭಾವದಿಂದ ಬೆಳೆಯುವಂತಾಗಬೇಕು. ಅಂದಾಗ ಮಾತ್ರ ಸಹಕಾರಿ ಚಳುವಳಿಗೆ ಬಲ ಬಂದಂತಾಗುತ್ತದೆ ಎಂದರು.

ರೈತರು ಹಾಗೂ ಬಡ ಕೃಷಿಕರು ಹೆಚ್ಚಿನ ಬಡ್ಡಿಯಲ್ಲಿ ಸಾಲವನ್ನು ಪಡೆದು ಕೃಷಿ ಮಾಡುವುದು ಇಂದಿನ ದಿನಮಾನಗಳಲ್ಲಿ ಲಾಭದಾಯಕವಲ್ಲ. ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಬಡವರ ಪರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಆ ಎಲ್ಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಸೊರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ನಾಲ್ಕು ಸಹಕಾರಿ ಸಂಘಗಳಿಗೆ ಸೌಲಭ್ಯ ಕಲ್ಪಿಸಲಾಗುವುದು. ಶತಮಾನ ಪೂರೈಸಿರುವ ಸೊರಟೂರು ಸಹಕಾರಿ ಸಂಘ ಮಲ್ಲಪ್ಪ ಕಲ್ಲಗುಡಿ ಅವರ ನೇತೃತ್ವದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನಷ್ಟು ಬೆಳವಣಿಗೆ ಹೊಂದಬೇಕು ಎಂದರು.

ಮುಖಂಡರಾದ ಭದ್ರೇಶ ಕುಸುಲಾಪೂರ ಮಾತನಾಡಿ, ಗ್ರಾಮೀಣ ಸಹಕಾರಿ ಸಂಘಗಳ ಬೆಳವಣಿಗೆಗೆ ಸಚಿವ ಎಚ್.ಕೆ. ಪಾಟೀಲರ ಸಹಾಯದಿಂದ ಎಲ್ಲ ಸಂಘಗಳು ವಿವಿಧ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದ್ದು, ಸೊರಟೂರಿನ ಒಟ್ಟು ನಾಲ್ಕು ಸಹಕಾರಿ ಸಂಘಗಳು ಸ್ಥಾಪನೆಯಾಗಿವೆ. ಆ ಸಂಘಗಳು ಬೆಳವಣಿಗೆ ಹೊಂದಲು ಅನುದಾನವನ್ನು ಒದಗಿಸಬೇಕು ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸೊರಟೂರು ಸಹಕಾರಿ ಸಂಘದ ಅಧ್ಯಕ್ಷ ಮಲ್ಲಪ್ಪ ಕಲ್ಲಗುಡಿ ಮಾತನಾಡಿ, ಸದ್ಯ 47 ಲಕ್ಷ ರೂ ವಿಶೇಷ ಅನುದಾನದಡಿಯಲ್ಲಿ 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡಾನ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಮುಂದಿನ ದಿನಗಳಲ್ಲಿ 1 ಕೋಟಿ ರೂಪಾಯಿ ನೆಪೆಡ್ ಸಂಸ್ಥೆಯ ವಿಶೇಷ ಅನುದಾನದಡಿಯಲ್ಲಿ ದೊಡ್ಡ ಪ್ರಮಾಣದ ಗೋಡಾನ್ ನಿರ್ಮಾಣದ ಗುರಿ ಹೊಂದಲಾಗಿದೆ. ಗದಗ ತಾಲೂಕಿನ ಎಲ್ಲ ಸಹಕಾರಿ ಸಂಘಗಳು ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಚಿವ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘಗಳು ಜನೋಪಯೋಗಿ ಕೆಲಸ ಮಾಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಸಿದ್ದು ಪಾಟೀಲ, ಪ್ರಮೋದ ಇನಾಮದಾರ, ಸಹಕಾರಿ ಸಂಘದ ಉಪಾಧ್ಯಕ್ಷರಾದ ಪರಸಪ್ಪ ಮಲ್ಲಾರಿ, ಫಕೀರಪ್ಪ ಮಟ್ಟಿ, ಪರಶುರಾಮ ಹೂಗಾರ, ರಾಮಣ್ಣ ತಳವಾರ, ಮಹಾಂತೇಶ್ ಹಳ್ಳಿ, ಮುರುಗೇಶ್ ಕುಸುಲಾಪೂರ, ಚನ್ನಪ್ಪ ಕುಸುಲಾಪೂರ, ಮೆಹಬೂಬಸಾಬ ಬಾಬುಖಾನವರ, ನೀಲವ್ವ ಪಾಟೀಲ, ಚೆನ್ನವ್ವ ತಳವಾರ, ಬಸವರಾಜ ಗಾಣಿಗೇರ, ಶರೀಫಸಾಬ ಅತ್ತಿಕಟ್ಟಿ, ವೀರೇಶ ಬೋಳ್ನವರ, ಮಂಜು ಗದುಗಿನ, ತಿರಕಪ್ಪ ಬೋಳ್ನವರ, ವೆಂಕನಗೌಡ ಪಾಟೀಲ, ಮಾನಪ್ಪ ಲಮಾಣಿ, ಮೇಲಗಿರಿಗೌಡ ಪಾಟೀಲ, ಜಯಶ್ರೀ ಬಂಕಾಪುರ, ಮೆಹಬೂಬಸಾಬ ಯಕಲಾಸಪೂರ, ಶಿವಮೂರ್ತಿ ಕರಿಗೌಡ್ರ, ರಾಮಣ್ಣ ಶಲಿಯಪ್ಪನವರ, ಅಡಿವೆಪ್ಪ ಕನ್ನೂರ, ಮಹದೇವಪ್ಪ ಹಡಪದ ಮುಂತಾದವರು ಇದ್ದರು.

ಕೆಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಕಲ್ಲಗುಡಿ ಮಾತನಾಡಿ, ಧಾರವಾಡದ ಕೆಸಿಸಿ ಬ್ಯಾಂಕ್ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲರ ವಿಶೇಷ ಕಾಳಜಿಯಿಂದ ಪಟ್ಟಣದ ಅರ್ಬನ್ ಬ್ಯಾಂಕ್ ಫೆಡರೇಷನ್ ವತಿಯಿಂದ 48 ಕೋಟಿ ರೂಗಳ ಠೇವಣಿಯನ್ನು ಇಡುವ ಮೂಲಕ ಧಾರವಾಡ ಕೆಸಿಸಿ ಬ್ಯಾಂಕ್ ಪುನಶ್ಚೇತನಗೊಳಿಸುವಲ್ಲಿ ಸಹಾಯ ಮಾಡಿದ್ದರು. ಇಂದು ಧಾರವಾಡ ಕೆಸಿಸಿ ಬ್ಯಾಂಕ್ ಇಷ್ಟು ಎತ್ತರದಲ್ಲಿ ಬೆಳೆಯಲು ಹಾಗೂ ಏಷ್ಯಾ ಖಂಡದಲ್ಲಿ ಮೊದಲು ಸ್ಥಾಪನೆಯಾದ ಕಣಗಿನಹಾಳ ಸಹಕಾರಿ ಸಂಘ ಪುನಶ್ಚೇತನಗೊಳ್ಳಲು ಎಚ್.ಕೆ. ಪಾಟೀಲರು ಮಾಡಿದ ಸಹಾಯ ಮರೆಯಲು ಸಾಧ್ಯವಿಲ್ಲ ಎಂದರು.

ರಾಜ್ಯದ ತಲಾ ಆದಾಯದಲ್ಲಿ ದಕ್ಷಿಣ ಕರ್ನಾಟಕ ಮುಂದಿದ್ದು, ಉತ್ತರ ಕರ್ನಾಟಕ ಅತ್ಯಂತ ಹಿಂದಿದೆ. ಗದಗ ಜಿಲ್ಲೆಯಲ್ಲಿ ಪ್ರತಿ ವ್ಯಕ್ತಿಯ ತಲಾ ಆದಾಯ 1 ಲಕ್ಷ 94 ಸಾವಿರ ರೂ ಇದೆ. ನಾವು ಅವರಂತೆ ತಲಾ ಆದಾಯ ಹೆಚ್ಚಿಸಲು ಗ್ರಾಮೀಣ ಭಾಗದಲ್ಲಿ ರೈತರು ಹೆಚ್ಚು ಹೈನೋದ್ಯಮವನ್ನು ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಸೊರಟೂರಿನ 4 ಸಹಕಾರಿ ಸಂಘಗಳು ಎರಡು ವರ್ಷದಲ್ಲಿ 500 ಜನರಿಗೆ ಹೈನುಗಾರಿಕೆ ಕೈಗೊಳ್ಳಲು ಸಾಲ ಸೌಲಭ್ಯ ನೀಡಿದೆ. ಸುಧಾರಿತ ಹೈನುಗಾರಿಕೆ ಕೈಗೊಳ್ಳಲು ಸಹಕಾರಿ ಸಂಘಗಳು ರಚನಾತ್ಮಕ ಕೆಲಸ ಮಾಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

error: Content is protected !!