Home Blog Page 27

ಸರ್ವಧರ್ಮ ಸಾಧು-ಸಂತರಿಗೆ ಒಂದೇ ವೇದಿಕೆ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಧಾರ್ಮಿಕ ಸಾಮರಸ್ಯ, ಸಾಮಾಜಿಕ ಜಾಗೃತಿ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಸರ್ವಧರ್ಮ ಸಾಧು, ಸಂತ, ಶರಣರ ರಾಜ್ಯ ಒಕ್ಕೂಟವನ್ನು ಅಬ್ಬಿಗೇರಿಯಲ್ಲಿ ಅಧಿಕೃತವಾಗಿ ರಚಿಸಿ, ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಮೀಪದ ಅಬ್ಬಿಗೇರಿಯ ಸದ್ಗುರು ಯಲ್ಲಾಲಿಂಗೇಶ್ವರ ಮಠದಲ್ಲಿ ಭಾನುವಾರ ವಿವಿಧ ಧರ್ಮಗಳ ಪೂಜ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಜ್ಯಮಟ್ಟದ ಸಂಘಟನೆಯ ಅಗತ್ಯತೆ ಕುರಿತು ಸುದೀರ್ಘ ಚರ್ಚೆ ನಡೆಸಿ, ಧಾರ್ಮಿಕ ಸಾಮರಸ್ಯ, ಆಧ್ಯಾತ್ಮಿಕ ಮೌಲ್ಯಗಳ ಪ್ರಸಾರ ಹಾಗೂ ಸಮಾಜದಲ್ಲಿ ಶಾಂತಿ-ಸಹಬಾಳ್ವೆ ವಾತಾವರಣ ನಿರ್ಮಾಣಕ್ಕೆ ಒಕ್ಕೂಟವನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು.

ಒಕ್ಕೂಟದ ಗೌರವಾಧ್ಯಕ್ಷರಾಗಿ ಮುಗುಳಖೊಡ ಜಿಡಗಾಮಠದ ಡಾ. ಷಡಕ್ಷರಿ ಮುರುಘರಾಜೇಂದ್ರ ಮಹಾಸ್ವಾಮಿಗಳು, ರಾಜ್ಯಾಧ್ಯಕ್ಷರಾಗಿ ಅಬ್ಬಿಗೇರಿಯ ಸದ್ಗುರು ಯಲ್ಲಾಲಿಂಗೇಶ್ವರ ಮಠದ ಬಸವರಾಜ ಶರಣರು ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಕೊಪ್ಪಳ ಜಿಲ್ಲೆಯ ಇಟಗಿಯ ಮರುಳಸಿದ್ದೇಶ್ವರ ಪುಣ್ಯಾಶ್ರಮದ ಶಿವಶರಣ ಗದಿಗೆಪ್ಪಜ್ಜನವರು ಸರ್ವಾನುಮತದಿಂದ ಆಯ್ಕೆಯಾದರು.

ಸಭೆಯಲ್ಲಿ ಮಾತನಾಡಿದ ಧಾರ್ಮಿಕ ಮುಖಂಡರು, ಧರ್ಮಗಳ ನಡುವೆ ಪರಸ್ಪರ ಗೌರವ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯ ಇಂದು ಹೆಚ್ಚಾಗಿದ್ದು, ಈ ಒಕ್ಕೂಟವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮೌಲ್ಯಾಧಾರಿತ ಬದುಕಿನ ಸಂದೇಶವನ್ನು ರಾಜ್ಯಾದ್ಯಂತ ಸಾರಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಾದ್ಯಂತ ಧಾರ್ಮಿಕ ಸಾಮರಸ್ಯ, ನೈತಿಕ ಶಿಕ್ಷಣ, ಯುವಜನರಲ್ಲಿ ಮೌಲ್ಯಾಧಾರಿತ ಬದುಕಿನ ಅರಿವು, ಸಮಾಜಮುಖಿ ಸೇವಾ ಚಟುವಟಿಕೆಗಳು ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಕೇಶವಾನಂದ ಮಹಾಸ್ವಾಮಿಗಳು, ಮರುಳಸಿದ್ದೇಶ್ವರ ಮಹಾಸ್ವಾಮಿಗಳು, ಮಳಿಯಯ್ಯ ಸ್ವಾಮಿಗಳು, ಮರುಳಸಿದ್ದಯ್ಯ ಸ್ವಾಮಿಗಳು, ಋಷಿಕುಮಾರ ಸ್ವಾಮಿಗಳು, ನಾಗರಾಜ ಸ್ವಾಮಿಗಳು, ಹುಚ್ಚಯ್ಯ ಸ್ವಾಮಿಗಳು, ಆನಂದಯ್ಯ ಸ್ವಾಮಿಗಳು, ಚಂದ್ರಶೇಖರಯ್ಯ ಹಿರೇಮಠ ಶ್ರೀಗಳು, ಶಿವಮುನಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಪೂಜ್ಯರು, ಧಾರ್ಮಿಕ ಮುಖಂಡರು, ಭಕ್ತರು ಹಾಗೂ ಗಣ್ಯರು ಭಾಗವಹಿಸಿದ್ದರು.

ಏನಿದು ಒಕ್ಕೂಟದ ಧ್ಯೇಯ?

“ಧರ್ಮಗಳ ನಡುವೆ ಸಾಮರಸ್ಯ ಬೆಳೆಸಿ, ಸಮಾಜದಲ್ಲಿ ಶಾಂತಿ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವುದೇ ಸರ್ವಧರ್ಮ ಸಾಧು, ಸಂತ, ಶರಣರ ರಾಜ್ಯ ಒಕ್ಕೂಟದ ಮುಖ್ಯ ಉದ್ದೇಶ.”

ಬಿಎಲ್‌ಒ ಕಾರ್ಯದ ಒತ್ತಡ ಕಡಿಮೆ ಮಾಡಿ: ಶಿಕ್ಷಕರಿಗೆ ಸಹಕಾರ ನೀಡುವಂತೆ ಮನವಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಿಎಲ್‌ಒ (ಬೂತ್ ಮಟ್ಟದ ಅಧಿಕಾರಿ) ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮೇಲೆ ಅನಗತ್ಯ ಒತ್ತಡ ಹೇರದೆ, ಅಗತ್ಯ ಸಹಕಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಲಕ್ಷ್ಮೇಶ್ವರ ಘಟಕದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷರಾದ ಗುರುರಾಜ ಹವಳದ, ಮಹದೇವಪ್ಪ ಭರಮಗೌಡರ ಹಾಗೂ ಕಾರ್ಯದರ್ಶಿಗಳಾದ ಎಂ.ಎ. ನದಾಫ್ ಮತ್ತು ಶ್ರೀಕಾಂತ ನಂದೆಣ್ಣವರ ಮಾತನಾಡಿ, ಚುನಾವಣೆ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಜವಾಬ್ದಾರಿಗಳನ್ನು ಶಿಕ್ಷಕರು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಜುಲೈ 29ರವರೆಗೆ ನಡೆಯುತ್ತಿದ್ದು, ಇದರ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ತಿಳಿಸಿದರು.

ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬೋಧನೆಗೆ ಹೆಚ್ಚಿನ ಸಮಯ ಮೀಸಲಿಡಬೇಕಿದೆ. ಆದರೆ ವಿವಿಧ ಇಲಾಖೆಗಳ ಹೆಚ್ಚುವರಿ ಕರ್ತವ್ಯಗಳಿಂದ ಬೋಧನಾ ಕಾರ್ಯಕ್ಕೆ ಅಡಚಣೆಯಾಗುತ್ತಿದೆ. ಈಗಾಗಲೇ ಲಕ್ಷ್ಮೇಶ್ವರ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಮಕ್ಕಳ ಶಿಕ್ಷಣದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹೀಗಾಗಿ ಬಿಎಲ್‌ಒ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನಗತ್ಯ ಒತ್ತಡ ಹೇರದೆ ಅಗತ್ಯ ಸಹಕಾರ ನೀಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಎಂ.ಡಿ. ವಾರದ, ರಾಜ್ಯ ಪರಿಷತ್ ಸದಸ್ಯ ಎ.ಬಿ. ಗೌಡರ, ನಿರ್ದೇಶಕರಾದ ಬಸವರಾಜ ಯರಗುಪ್ಪಿ, ಹನೀಫ್ ಶಿರಹಟ್ಟಿ, ಪ್ರಶಾಂತ ಸನದಿ, ಜಿಲ್ಲಾ ನಾಮನಿರ್ದೇಶಿತ ಸದಸ್ಯರಾದ ಎಂ.ಎಸ್. ಹಿರೇಮಠ ಹಾಗೂ ಎಂ.ಎಸ್. ಚಾಕಲಬ್ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಚುನಾವಣೆ ಸೇರಿದಂತೆ ಎಲ್ಲ ಸರ್ಕಾರಿ ಜವಾಬ್ದಾರಿಗಳನ್ನು ಶಿಕ್ಷಕರು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಶಿಕ್ಷಣಕ್ಕೂ ಧಕ್ಕೆಯಾಗದಂತೆ ಬಿಎಲ್‌ಒ ಕಾರ್ಯದಲ್ಲಿ ಸಹಕಾರ ನೀಡಬೇಕು.”

— ಕರ್ನಾಟಕ ರಾಜ್ಯ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಶಿಗ್ಲಿಯಲ್ಲಿ ರಸಗೊಬ್ಬರ ವಿತರಣೆಗೆ ಚಾಲನೆ ನೀಡಿದ ಶಾಸಕ ಡಾ. ಚಂದ್ರು ಲಮಾಣಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ರೈತರಿಗೆ ರಸಗೊಬ್ಬರ ವಿತರಣಾ ಕಾರ್ಯಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಭಾನುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಶಿಗ್ಲಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಕೃಷಿಯನ್ನು ಅವಲಂಬಿಸಿದ್ದು, ಅವರಿಗೆ ಸಕಾಲದಲ್ಲಿ ರಸಗೊಬ್ಬರ ದೊರೆಯುವ ಉದ್ದೇಶದಿಂದ ವಿತರಣಾ ವ್ಯವಸ್ಥೆ ಆರಂಭಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಸಹಕಾರ ಸಂಘಗಳು ರೈತರ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ರೈತರಿಗೆ ಅಗತ್ಯ ಸೌಲಭ್ಯಗಳನ್ನು ಸಮಯಕ್ಕೆ ಒದಗಿಸುವುದೇ ಸಂಘದ ಮುಖ್ಯ ಧ್ಯೇಯವಾಗಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಯಲ್ಲಪ್ಪ ತಳವಾರ ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ರಸಗೊಬ್ಬರ ವಿತರಣೆಗೆ ನಿರ್ಧರಿಸಿದ್ದು, ಎಫ್‌ಐಡಿ (FID) ವ್ಯವಸ್ಥೆಯ ಮೂಲಕ ಗೊಬ್ಬರ ವಿತರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾಗಪ್ಪ ತೋಟದ, ರಾಮಣ್ಣ ಲಮಾಣಿ, ಡಿ.ವೈ. ಹುನಗುಂದ, ಶಿವಣ್ಣ ಕುರಿ, ಅಶೋಕ ಶಿರಹಟ್ಟಿ, ಬಸಣ್ಣ ರ್ಜಗಿ, ಸಿದ್ದ ಪೂಜಾರ, ಬಸವರಾಜ ತೋಟದ, ಶಿವಾನಂದ ಅಡರಕಟ್ಟಿ, ದಾನಪ್ಪನವರ, ಸಂಜೀವ ದೇಸಾಯಿ, ಸುರೇಶ ಗೋದಿ, ಶಿವು ವಾರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ರೈತರಿಗೆ ಸಕಾಲದಲ್ಲಿ ರಸಗೊಬ್ಬರ ದೊರೆಯುವುದು ಅತ್ಯಗತ್ಯ. ರೈತರ ಹಿತ ಕಾಯುವುದೇ ಸಹಕಾರ ಸಂಘಗಳ ಮೊದಲ ಆದ್ಯತೆಯಾಗಬೇಕು.”

ಡಾ. ಚಂದ್ರು ಲಮಾಣಿ, ಶಾಸಕ

₹7 ಕೋಟಿ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತ: ಮೂರು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿರುವ ಗ್ರಾಮಸ್ಥರು

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ/ಗದಗ: ಅಭಿವೃದ್ಧಿಯ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾದರೂ, ಜನರಿಗೆ ಅದರ ಪ್ರಯೋಜನ ಸಿಗದ ಮತ್ತೊಂದು ಪ್ರಕರಣ ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ–ಬಾಳೆಹೊಸೂರು ಸಂಪರ್ಕ ರಸ್ತೆ ಅಭಿವೃದ್ಧಿಗೆ ಸುಮಾರು ₹7 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ, ಕಾಮಗಾರಿ ಆರಂಭಿಸಿ ಮೂರು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಜಲ್ಲಿಕಲ್ಲು ಹಾಕಿ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ನಾಪತ್ತೆಯಾಗಿದ್ದು, ನಿತ್ಯ ಸಾವಿರಾರು ಜನರು, ರೈತರು ಹಾಗೂ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆ ಕೊಕ್ಕರಗುಂದಿ ಗ್ರಾಮವನ್ನು ಬಾಳೆಹೊಸೂರಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಗ್ರಾಮಸ್ಥರು ಬ್ಯಾಂಕ್, ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲೆ-ಕಾಲೇಜು, ಕೃಷಿ ಮಾರುಕಟ್ಟೆ ಸೇರಿದಂತೆ ಬಹುತೇಕ ದೈನಂದಿನ ಅಗತ್ಯಗಳಿಗಾಗಿ ಬಾಳೆಹೊಸೂರನ್ನೇ ಅವಲಂಬಿಸಿದ್ದಾರೆ. ಆದರೆ ಅಪೂರ್ಣ ಕಾಮಗಾರಿಯಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ.

ಗ್ರಾಮಸ್ಥರ ಮಾಹಿತಿ ಪ್ರಕಾರ, ಹಿಂದಿನ ಶಾಸಕ ರಾಮಣ್ಣ ಲಮಾಣಿ ಅವರ ಅವಧಿಯಲ್ಲಿ ಗ್ರಾಮಸ್ಥರ ನಿರಂತರ ಹೋರಾಟದ ಫಲವಾಗಿ ಪಂಚಾಯತ್ ರಾಜ್ ಇಲಾಖೆಯಿಂದ ಸುಮಾರು ₹7 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಗುತ್ತಿಗೆದಾರರು ಸುಮಾರು ಐದು ಕಿಲೋಮೀಟರ್‌ವರೆಗೆ ಜಲ್ಲಿಕಲ್ಲು ಹಾಕಿದ ಬಳಿಕ ಕಾಮಗಾರಿ ಸ್ಥಗಿತಗೊಳಿಸಿದ್ದು, ಕಳೆದ ಮೂರು ವರ್ಷಗಳಿಂದ ಯಾವುದೇ ಕೆಲಸ ನಡೆದಿಲ್ಲ. ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳಿನ ಕಾಟದಿಂದ ಜನರ ಸಂಚಾರ ದುಸ್ತರವಾಗಿದೆ.

ರಸ್ತೆಯ ದುಸ್ಥಿತಿಯಿಂದ ರೈತರು ಕೃಷಿ ಉತ್ಪನ್ನಗಳನ್ನು ಸಾಗಿಸಲು ಪರದಾಡುತ್ತಿದ್ದಾರೆ. ಆಂಬುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ವಾಹನಗಳಿಗೂ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಶಾಲಾ ಮಕ್ಕಳು ಹಾಗೂ ದ್ವಿಚಕ್ರ ವಾಹನ ಸವಾರರು ಅಪಘಾತದ ಭೀತಿಯಲ್ಲೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರು ಈಗಿನ ಶಾಸಕ ಡಾ. ಚಂದ್ರು ಲಮಾಣಿ ಅವರ ಗಮನಕ್ಕೂ ಸಮಸ್ಯೆ ತಂದಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಅಭಿವೃದ್ಧಿ ಕಾಮಗಾರಿ ಅಪೂರ್ಣವಾಗಿದ್ದು, ಸಾರ್ವಜನಿಕ ಹಣ ವ್ಯರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ಕಾಮಗಾರಿ ವಿಳಂಬದ ಕುರಿತು ಸಮಗ್ರ ತನಿಖೆ ನಡೆಸಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಆರಂಭಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚವಾಗಿದ್ದರೂ ರಸ್ತೆ ಜನರ ಬಳಕೆಗೆ ಬರದಿರುವುದು ಆಡಳಿತದ ಕಾರ್ಯವೈಖರಿಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ. ಗ್ರಾಮಸ್ಥರ ಆಕ್ರೋಶಕ್ಕೆ ಜಿಲ್ಲಾಡಳಿತ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದು ಕಾದು ನೋಡಬೇಕಾಗಿದೆ.

“ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಡಾ. ಚಂದ್ರು ಲಮಾಣಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾರೂ ಸ್ಪಂದಿಸುತ್ತಿಲ್ಲ. ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಿ, ಕಾಮಗಾರಿ ತಕ್ಷಣ ಪೂರ್ಣಗೊಳಿಸಬೇಕು. ಈ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆಯೇ ಎಂಬುದನ್ನು ಸರ್ಕಾರ ತನಿಖೆ ನಡೆಸಬೇಕು.”

ಫಕೀರೇಶ, ವಸಂತಗೌಡ ಪಾಟೀಲ ಹಾಗೂ ಗ್ರಾಮಸ್ಥರು

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ–ಯುಕೆಜಿ ಆರಂಭಕ್ಕೆ ಚಾಲನೆ

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಗದಗ ಜಿಲ್ಲಾ ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಳಗುಂದದ ಸರ್ಕಾರಿ ಶಾಲೆಗಳು ದಾಖಲಾತಿ ಹೆಚ್ಚಿಸುವಲ್ಲಿ ಪರಸ್ಪರ ಪೈಪೋಟಿಯಿಂದ ಉತ್ತಮ ಸಾಧನೆ ಮಾಡುತ್ತಿವೆ. ಇಂತಹ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಇಲಾಖೆ ಸದಾ ಸಿದ್ಧವಿದ್ದು, ಅತಿಥಿ ಶಿಕ್ಷಕರನ್ನೂ ಶೀಘ್ರವೇ ನೇಮಕ ಮಾಡಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯುತ್ತಿವೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.

ಎಂ.ಎಚ್. ಕಂಬಳಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣವೂ ಲಭ್ಯವಿದ್ದು, ಅನುಭವಿ ಶಿಕ್ಷಕರಿಂದ ಗುಣಮಟ್ಟದ ಬೋಧನೆ ನಡೆಯುತ್ತಿದೆ. ಪಾಲಕರು ಸರ್ಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಹೊಂದಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷರು ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸುತ್ತಿದ್ದು, ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದಿಂದ ಇನ್ನಷ್ಟು ಉತ್ತಮವಾಗಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿ.ಡಿ. ಕಣವಿ, ಮಹಾಂತೇಶ ಕಣವಿ, ಮುಖ್ಯ ಶಿಕ್ಷಕಿ ಗುಂಜಳ, ಶೋಭಾ ಪಾಟೀಲ, ಕಾಂತಪ್ಪ ಕಾಗಿ, ಚಂದ್ರು ಭಜಂತ್ರಿ, ಬಿ.ಎಲ್. ಜಾಧವ, ಮಹೇಶ ನೀಲಗುಂದ ಸೇರಿದಂತೆ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರವೀಣ ವಾರಕರ ಹಾಗೂ ಕಾರ್ಯದರ್ಶಿಯಾಗಿ ಲಿಂಗರಾಜ ತೋಟದ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಡಾ. ನವೀನ ಹಿರೇಗೌಡರ ಮತ್ತು ರಾಜಣ್ಣ ಮಲ್ಲಾಡದ, ಸಹ ಕಾರ್ಯದರ್ಶಿಯಾಗಿ ರೇಣುಕಪ್ರಸಾದ ಹಿರೇಮಠ, ಖಜಾಂಚಿಯಾಗಿ ರೇಣುಕಪ್ರಸಾದ ಶಿಗ್ಲಿಮಠ ಆಯ್ಕೆಯಾಗಿದ್ದಾರೆ.

ಲಯನ್ಸ್ ಕ್ಲಬ್‌ನ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅಮೃತಾ ವಾರಕರ, ಕಾರ್ಯದರ್ಶಿಯಾಗಿ ಅಪರ್ಣಾ ತೋಟದ ಹಾಗೂ ಖಜಾಂಚಿಯಾಗಿ ಪ್ರಿಯಾ ಶಿಗ್ಲಿಮಠ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 9ರಂದು ಗುರುವಾರ ಸಂಜೆ 7 ಗಂಟೆಗೆ ಮುಂಡರಗಿ ರಸ್ತೆಯ ಲಯನ್ಸ್ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಲಯನ್ಸ್ ಕ್ಲಬ್‌ನ ದ್ವಿತೀಯ ಉಪ ಜಿಲ್ಲಾ ಗವರ್ನರ್ ಗವಿಸಿದ್ದಪ್ಪ ಮುದ್ಗಲ್ ಪದಗ್ರಹಣ ನೆರವೇರಿಸಲಿದ್ದು, ನಿಕಟಪೂರ್ವ ಜಿಲ್ಲಾ ಗವರ್ನರ್ ಅನಂತ ಪೋತ್ನೀಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ತಾಂತ್ರಿಕ ಜ್ಞಾನದ ಜೊತೆಗೆ ಕೌಶಲ್ಯ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಟಿಸಿಎಸ್‌ ಕಿವಿಮಾತು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಉದ್ಯೋಗ ಕ್ಷೇತ್ರದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನದ ಜೊತೆಗೆ ಸಂವಹನ ಕೌಶಲ್ಯ, ಸಮಸ್ಯೆ ಪರಿಹಾರ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸಂಸ್ಥೆಯ ಪ್ರಾದೇಶಿಕ ಪ್ರತಿಭಾ ನೇಮಕಾತಿ ವಿಭಾಗದ ಮುಖ್ಯಸ್ಥ ಕಿರಣ್ ಕುಮಾರ್ ಹೇಳಿದರು.

ಪಟ್ಟಣದ ಶ್ರೀ ವೆಂಕಪ್ಪ ಎಂ. ಅಗಡಿ ಮತ್ತು ಶ್ರೀಮತಿ ಕಮಲಾ ವೆಂ. ಅಗಡಿ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ನಿಯೋಜನಾ ವಿಭಾಗ ಆಯೋಜಿಸಿದ್ದ ‘ಟೆಕ್-ಟು-ಕಾರ್ಪೊರೇಟ್–2026’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನೇಮಕಾತಿ ಪ್ರಕ್ರಿಯೆಯಲ್ಲಿ ಯಶಸ್ಸು ಸಾಧಿಸಲು ವಿದ್ಯಾರ್ಥಿಗಳು ಸಂದರ್ಶನಕ್ಕೆ ಸಮರ್ಪಕ ಸಿದ್ಧತೆ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಕಲಿಕೆ ಮತ್ತು ಕೌಶಲ್ಯ ವೃದ್ಧಿಯೇ ಯಶಸ್ಸಿನ ಮಂತ್ರ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪರಶುರಾಮ ಬಾರ್ಕಿ ವಹಿಸಿದ್ದರು. ಡೀನ್‌ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ತರಬೇತಿ ಮತ್ತು ಉದ್ಯೋಗ ನಿಯೋಜನಾ ವಿಭಾಗದ ಸಂಯೋಜಕರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಹಾವಿದ್ಯಾಲಯದ ವಿವಿಧ ವಿಭಾಗಗಳಿಂದ 28 ತಂಡಗಳು ಭಾಗವಹಿಸಿ, ಕೈಗಾರಿಕಾ ಕ್ಷೇತ್ರದ ಸಮಸ್ಯೆಗಳಿಗೆ ನವೀನ ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಪ್ರಸ್ತುತಪಡಿಸಿದವು. ವಿದ್ಯಾರ್ಥಿಗಳ ಸೃಜನಶೀಲತೆ, ತಂಡದ ಕಾರ್ಯಪದ್ಧತಿ, ಸಂವಹನ ಕೌಶಲ್ಯ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಯಿತು.

“ತಾಂತ್ರಿಕ ಜ್ಞಾನದ ಜೊತೆಗೆ ಕೌಶಲ್ಯ, ಆತ್ಮವಿಶ್ವಾಸ ಮತ್ತು ಉತ್ತಮ ಸಂವಹನ ಸಾಮರ್ಥ್ಯ ಹೊಂದಿದ ವಿದ್ಯಾರ್ಥಿಗಳೇ ಕಾರ್ಪೊರೇಟ್ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಲ್ಲರು.”

ಕಿರಣ್ ಕುಮಾರ್, ಟಿಸಿಎಸ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹2 ಲಕ್ಷ ನೆರವು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗೊಜನೂರು ವಲಯದ ಅಕ್ಕಿಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ₹2 ಲಕ್ಷ ಅನುದಾನ ಮಂಜೂರಾಗಿದ್ದು, ಚೆಕ್ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಗದಗ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ದೇವಸ್ಥಾನ ಸಮಿತಿಗೆ ಚೆಕ್ ಹಸ್ತಾಂತರಿಸಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆ ಹೂಳೆತ್ತುವಿಕೆ, ಶುದ್ಧ ಕುಡಿಯುವ ನೀರಿನ ಯೋಜನೆ, ನಿರ್ಗತಿಕರಿಗೆ ಮನೆ ನಿರ್ಮಾಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಅಕ್ಕಿಗುಂದದ ದೇವಸ್ಥಾನ ಜೀರ್ಣೋದ್ಧಾರಕ್ಕೂ ನೀಡಿರುವ ಈ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಸುಂದರ ದೇವಾಲಯ ನಿರ್ಮಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಣ್ಣದಯ್ಯ ಶಂಕಿನಮಠ, ಉಪಾಧ್ಯಕ್ಷ ನೀಲಪ್ಪ ಪಣಿ, ತಾಲೂಕು ಯೋಜನಾಧಿಕಾರಿ ಪುನೀತ್ ಓಲೇಕಾರ್, ಸಮಿತಿ ಸದಸ್ಯರಾದ ಬಸಯ್ಯ ಮಲಿಮಠ, ಬಸವಣ್ಣೆಪ್ಪ ತೋಟದ, ಶಂಕ್ರಪ್ಪ ಬೆಂತೂರು, ವೀರಭದ್ರಯ್ಯ ಪೂಜಾರ, ಶೇಖಪ್ಪ ಬಟ್ಟೂರು, ವೆಂಕಪ್ಪ ಲಮಾಣಿ, ಶರಣಯ್ಯ ಹಿರೇಮಠ, ವಲಯದ ಮೇಲ್ವಿಚಾರಕಿ ಗಂಗೋತ್ರಿ ಗೌಡ, ಸೇವಾ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

“ದೇವಸ್ಥಾನಗಳ ಜೀರ್ಣೋದ್ಧಾರವೂ ಸಮಾಜಮುಖಿ ಸೇವೆಯ ಒಂದು ಭಾಗವಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಕಾರ್ಯಕ್ಕೆ ನಿರಂತರ ಬೆಂಬಲ ನೀಡುತ್ತಿದೆ.”

ಕೇಶವ ದೇವಾಂಗ, ಜಿಲ್ಲಾ ನಿರ್ದೇಶಕರು

ಲಕ್ಷ್ಮೇಶ್ವರವನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ; ಸರ್ಕಾರಕ್ಕೆ ಕರವೇ ಆಗ್ರಹ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ವೈಫಲ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ಆಗ್ರಹಿಸಿದೆ.

ಜಿಲ್ಲಾಧ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಮನವಿ ಸಲ್ಲಿಸಿ, ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಶರಣು ಗೋಡಿ, 2026-27ರ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಹೆಸರು, ಜೋಳ, ಮೆಣಸಿನಕಾಯಿ, ಬೆಳ್ಳುಳ್ಳಿ, ಮೆಕ್ಕೆಜೋಳ, ಹತ್ತಿ, ತೊಗರಿ ಹಾಗೂ ಶೇಂಗಾ ಸೇರಿದಂತೆ ಬಹುತೇಕ ಬೆಳೆಗಳು ಒಣಗುತ್ತಿವೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆಯೂ ಗಂಭೀರವಾಗಿದ್ದು, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ರೈತರಿಂದ ಬೆಳೆ ವಿಮೆ ಪರಿಹಾರದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಏಜೆಂಟರ ಹಸ್ತಕ್ಷೇಪವನ್ನು ತಡೆಗಟ್ಟಬೇಕು. 2025-26ರ ಹಿಂಗಾರು ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಬೇಕು. ರಾಷ್ಟ್ರ ಹಾಗೂ ರಾಜ್ಯ ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ಶೀಘ್ರ ಪರಿಹಾರ ನೀಡಬೇಕು. ಏಜೆಂಟರ ಮೂಲಕವಲ್ಲದೆ ನೇರವಾಗಿ ವಿಮೆ ಮಾಡಿಸಿರುವ ರೈತರಿಗೆ ಬಾಕಿ ಇರುವ ವಿಮೆ ಮೊತ್ತವನ್ನು ಕೂಡಲೇ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಹಾಂತೇಶ ಮಣಕವಾಡ, ಮಲ್ಲಿಕಾರ್ಜುನ ನಿರಾಲೋಟಿ, ವಿನಯ ಪಾಟೀಲ, ಆನಂದ ಅಮರಶೆಟ್ಟಿ, ಸಿರಾಜ್ ಡಾಲಾಯತ, ಪ್ರವೀಣ ಆಚಾರಿ, ಲುಕಮಾನ ಬೆಟಗೇರಿ, ಕೈಸರ ಮಹಮ್ಮದ್ ಅಲಿ, ಮಹಾಂತೇಶ ಇಟಗಿ, ನಾಗರಾಜ ಸಾಲಾವಳಿಮಠ, ಕಿರಣ ಬಡಿಗೇರ, ಅಷ್ಪಾಕ್ ಬಾಗೋಡಿ, ಮಲ್ಲೇಶ ಬನ್ನಿ, ದುದ್ದು ಅಕ್ಕಿ, ಆಕಾಶ ಭಜಂತ್ರಿ, ಬಸವರಾಜ ಬೂದಿಹಾಳ, ಮಲ್ಲಿಕಜಾನ್ ಗದವಾಲ್, ನವಾಜ್ ಅತ್ತಾರ ಹಾಗೂ ಧರ್ಮಸಿಂಗ್ ಕಿಲ್ಲೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಬೆಳೆ ವಿಮೆ ಹಾಗೂ ಪರಿಹಾರವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು.”

ಶರಣು ಗೋಡಿ, ಕರವೇ (ಸ್ವಾಭಿಮಾನಿ ಸೇನೆ) ಜಿಲ್ಲಾಧ್ಯಕ್ಷ

ಗೂಗಲ್‌ನಲ್ಲಿ ಈ 7 ವಿಷಯಗಳನ್ನು ಎಂದಿಗೂ ಸರ್ಚ್ ಮಾಡಬೇಡಿ; ಅಪಾಯಕ್ಕೆ ಸಿಲುಕಬಹುದು!

ಗೂಗಲ್‌ ಇಂದು ವಿಶ್ವದ ಅತ್ಯಂತ ಜನಪ್ರಿಯ ಸರ್ಚ್ ಎಂಜಿನ್‌ಗಳಲ್ಲಿ ಒಂದಾಗಿದೆ.

ಯಾವುದೇ ಮಾಹಿತಿ ಬೇಕಾದರೂ ಕ್ಷಣಾರ್ಧದಲ್ಲಿ ಹುಡುಕಿ ತಿಳಿದುಕೊಳ್ಳಲು ಜನರು ಇದನ್ನು ಬಳಸುತ್ತಾರೆ. ರೆಸಿಪಿ, ಪ್ರಯಾಣ, ಕಾನೂನು ಮಾಹಿತಿ ಸೇರಿದಂತೆ ಹಲವು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಲಾಗುತ್ತದೆ.

ಆದರೆ ಕೆಲವು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕುವುದು ಅಪಾಯಕಾರಿಯಾಗಬಹುದು. ಇಂತಹ ಹುಡುಕಾಟಗಳು ನಿಮ್ಮ ಖಾಸಗಿ ಮಾಹಿತಿಗೆ ಧಕ್ಕೆ ತರಬಹುದು ಅಥವಾ ಕಾನೂನು ಸಮಸ್ಯೆಗೂ ಕಾರಣವಾಗಬಹುದು.

ಕಾನೂನುಬಾಹಿರ ಹಾಗೂ ಹಿಂಸಾತ್ಮಕ ವಿಷಯಗಳು:

ಬಾಂಬ್, ಸ್ಫೋಟಕ, ಶಸ್ತ್ರಾಸ್ತ್ರಗಳ ತಯಾರಿಕೆ ಅಥವಾ ಅಕ್ರಮ ವಸ್ತುಗಳ ತಯಾರಿಕೆ ಕುರಿತು ಮಾಹಿತಿ ಹುಡುಕುವುದನ್ನು ತಪ್ಪಿಸಬೇಕು. ಇಂತಹ ಹುಡುಕಾಟಗಳು ಭದ್ರತಾ ಸಂಸ್ಥೆಗಳ ಗಮನಕ್ಕೆ ಬರಬಹುದಾಗಿದ್ದು, ಕಾನೂನು ತೊಂದರೆ ಎದುರಾಗುವ ಸಾಧ್ಯತೆ ಇದೆ.

ಮಕ್ಕಳಿಗೆ ಸಂಬಂಧಿಸಿದ ಆಕ್ಷೇಪಾರ್ಹ ವಿಷಯಗಳು

ಮಕ್ಕಳ ಶೋಷಣೆ ಅಥವಾ ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ಆಕ್ಷೇಪಾರ್ಹ ವಿಷಯಗಳನ್ನು ಹುಡುಕುವುದು ಗಂಭೀರ ಅಪರಾಧವಾಗಿದೆ. ಇಂತಹ ಚಟುವಟಿಕೆಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಗಳಿವೆ.

ಹ್ಯಾಕಿಂಗ್ ಮತ್ತು ಸೈಬರ್ ಅಪರಾಧದ ಮಾಹಿತಿ

ಯಾರದ್ದಾದರೂ ಫೋನ್, ಬ್ಯಾಂಕ್ ಖಾತೆ, ವೈ-ಫೈ ಅಥವಾ ಪಾಸ್‌ವರ್ಡ್ ಹ್ಯಾಕ್ ಮಾಡುವುದು ಹೇಗೆ ಎಂಬಂತಹ ಮಾಹಿತಿಗಳನ್ನು ಹುಡುಕುವುದರಿಂದ ದೂರವಿರಿ. ಇಂತಹ ಹುಡುಕಾಟಗಳು ಸೈಬರ್ ಅಪರಾಧದ ಉದ್ದೇಶ ಎಂದು ಪರಿಗಣಿಸಲ್ಪಡುವ ಸಾಧ್ಯತೆ ಇದೆ.

ಅಪರಿಚಿತ ಆ್ಯಪ್‌ಗಳು ಮತ್ತು ಸಾಫ್ಟ್‌ವೇರ್‌ಗಳು

ಗೂಗಲ್‌ನಲ್ಲಿ ಸಿಕ್ಕ ಯಾವುದೇ ಅಪರಿಚಿತ ಅಪ್ಲಿಕೇಶನ್ ಅಥವಾ ಸಾಫ್ಟ್‌ವೇರ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ನಕಲಿ ಆ್ಯಪ್‌ಗಳ ಮೂಲಕ ಸೈಬರ್ ಅಪರಾಧಿಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆ ಇದೆ.

ತ್ವರಿತ ಹಣದ ಭರವಸೆ ನೀಡುವ ಹೂಡಿಕೆ ಯೋಜನೆಗಳು

ಕಡಿಮೆ ಸಮಯದಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ಹೇಳುವ ಹೂಡಿಕೆ ಯೋಜನೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಇಂತಹ ಹಲವು ಲಿಂಕ್‌ಗಳು ವಂಚನೆಯ ಜಾಲವಾಗಿರಬಹುದು. ಹೂಡಿಕೆ ಮಾಡುವ ಮೊದಲು ಅಧಿಕೃತ ಸಂಸ್ಥೆಗಳ ಸಲಹೆ ಪಡೆಯುವುದು ಉತ್ತಮ.

ಕಸ್ಟಮರ್ ಕೇರ್ ಸಂಖ್ಯೆಗಳ ಹುಡುಕಾಟ

ಬ್ಯಾಂಕ್, ಕಂಪನಿ ಅಥವಾ ಸೇವೆಗಳ ಕಸ್ಟಮರ್ ಕೇರ್ ಸಂಖ್ಯೆಯನ್ನು ಗೂಗಲ್‌ನಲ್ಲಿ ಹುಡುಕುವಾಗ ಎಚ್ಚರಿಕೆ ಅಗತ್ಯ. ನಕಲಿ ಸಂಖ್ಯೆಗಳ ಮೂಲಕ ವಂಚಕರು ನಿಮ್ಮ ಬ್ಯಾಂಕ್ ಮಾಹಿತಿ ಅಥವಾ ವೈಯಕ್ತಿಕ ವಿವರಗಳನ್ನು ಪಡೆದುಕೊಳ್ಳಬಹುದು. ಯಾವಾಗಲೂ ಅಧಿಕೃತ ವೆಬ್‌ಸೈಟ್‌ನಿಂದಲೇ ಸಂಖ್ಯೆ ಪಡೆಯಿರಿ.

ವೈದ್ಯಕೀಯ ಸಮಸ್ಯೆಗಳಿಗೆ ಸ್ವಯಂ ಚಿಕಿತ್ಸೆ ಬೇಡ

ಆರೋಗ್ಯ ಸಮಸ್ಯೆಗಳಿಗೆ ಯಾವ ಔಷಧಿ ತೆಗೆದುಕೊಳ್ಳಬೇಕು ಎಂಬುದನ್ನು ಗೂಗಲ್‌ನಲ್ಲಿ ಹುಡುಕಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು ಅಪಾಯಕಾರಿ. ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ತಂತ್ರಜ್ಞಾನ ಬಳಸುವಾಗ ಎಚ್ಚರಿಕೆ ವಹಿಸುವುದು ಮುಖ್ಯ. ಯಾವುದೇ ಮಾಹಿತಿಯನ್ನು ಹುಡುಕುವ ಮೊದಲು ಅದರ ಮೂಲ ವಿಶ್ವಾಸಾರ್ಹವೇ ಎಂಬುದನ್ನು ಪರಿಶೀಲಿಸಿ.